ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತೀಶ್ ಹ್ಯಾಟ್ರಿಕ್‌ಗೆ ಲಾಲು ಆನೆಬಲ

ಫಲ ನೀಡಿದ ಮುಸ್ಲಿಮರು– ಯಾದವರು ಹಾಗೂ ಕುರ್ಮಿಗಳ ಹೊಸ ಸಮೀಕರಣ
Last Updated 8 ನವೆಂಬರ್ 2015, 19:42 IST
ಅಕ್ಷರ ಗಾತ್ರ

ನವದೆಹಲಿ: ‘ನಾವು ಕೆಲಸ ನೋಡಿ ಮಜೂರಿ ನಿಗದಿ ಮಾಡುತ್ತೇವೆ’ ಎಂದು ಬಿಹಾರ ಮತದಾರರೊಬ್ಬರು ಹೇಳಿದ ಮಾತು ವಿಧಾನಸಭೆಯ ಚುನಾವಣೆಯಲ್ಲಿ ಅಕ್ಷರಶಃ ನಿಜವಾಗಿದೆ. ಕೋಸಿ ನದಿಯ ತೀರದ ಸುಪೌಲ್‌ ಪಟ್ಟಣದಲ್ಲಿ ಅಕ್ಟೋಬರ್‌ 24ರಂದು ಚುನಾವಣೆ  ಸಮೀಕ್ಷೆಗಾಗಿ ಓಡಾಡುವಾಗ ವಿದೇಶಿ ಸದಾ ಮಾಂಝಿ ಎಂಬ ಮಧ್ಯ ವಯಸಿನ ಮತದಾರರೊಬ್ಬರು ಸಿಕ್ಕಿದ್ದರು. ಬೀದಿ ಬದಿಯ ಚಹಾ ಅಂಗಡಿಯೊಂದರಲ್ಲಿ ಹರಟೆ ಹೊಡೆಯುತ್ತಿದ್ದ ಅವರ ಜತೆ ಎಲ್ಲ ವಯೋಮಾನದವರು ಕುಳಿತಿದ್ದರು.

ಮಾಜಿ ಮುಖ್ಯಮಂತ್ರಿ ಜೀತನ್‌ರಾಂ ಮಾಂಝಿ ಅವರ ‘ಮುಸಾಹರ್‌’ ಜಾತಿಗೆ ಸೇರಿದ ವಿದೇಶಿ ಸದಾಮಾಂಝಿ ಚುನಾವಣೆ ಬಗ್ಗೆ ಚರ್ಚೆ ಮಾಡುತ್ತಿದ್ದರು. ಗುಂಪಿನಲ್ಲಿದ್ದ ಬಹುತೇಕರು ಜೆಡಿಯು ನೇತೃತ್ವದ ‘ಮಹಾ ಮೈತ್ರಿ’ ಪರವಾಗಿ ವಾದಿಸುತ್ತಿದ್ದರು. ಒಂದಿಬ್ಬರು ಎನ್‌ಡಿಎ ಪರ ವಕಾಲತ್ತು ವಹಿಸಿದ್ದರು. ಅನೇಕರು ಮಾಂಝಿ ಅವರನ್ನು ಕೆಣಕುತ್ತಿದ್ದರು. ‘ನಿಮ್ಮ ವೋಟು ಖಂಡಿತ ಎನ್‌ಡಿಎ’ಗೆ ಎಂದು ರೇಗಿಸುತ್ತಿದ್ದರು. ವಿದೇಶಿ ಸದಾಮಾಂಝಿ ಮಾತ್ರ ನಕಾರಾತ್ಮಕವಾಗಿ ಉತ್ತರಿಸುತ್ತಿದ್ದರು. ‘ನಾನು, ಕೆಲಸ ನೋಡಿಕೊಂಡು ಮಜೂರಿ ನಿಗದಿ ಮಾಡುತ್ತೇನೆ’ ಎಂದು ಹೇಳುತ್ತಿದ್ದರು.

ಹೌದು, ವಿದೇಶಿ ಸದಾ ಮಾಂಝಿ ಅವರ ಮಾತು ನಿಜವಾಗಿದೆ. ಬಿಹಾರದ ಮತದಾರರು ರಾಜಕೀಯ ಮುಖಂಡರ

ಕೆಲಸವನ್ನು ನೋಡಿ ಮಜೂರಿ ನಿಗದಿಪಡಿಸಿದ್ದಾರೆ. ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಹತ್ತು ವರ್ಷದ ಆಡಳಿತವನ್ನು ಮೆಚ್ಚಿ, ಇನ್ನೂ ಐದು ವರ್ಷ ಮುಂದುವರಿಯಲು ಹಸಿರು ನಿಶಾನೆ ತೋರಿದ್ದಾರೆ. ಕಳೆದ ಒಂದು ತಿಂಗಳಿಂದ ಇಡೀ ದೇಶದ ಜನರನ್ನು ತುದಿಗಾಲ ಮೇಲೆ ನಿಲ್ಲಿಸಿದ್ದ ಬಿಹಾರ ಚುನಾವಣೆಯಲ್ಲಿ ಜೆಡಿಯು, ಆರ್‌ಜೆಡಿ ಮತ್ತು ಕಾಂಗ್ರೆಸ್‌ ಪಕ್ಷಗಳನ್ನು ಒಳಗೊಂಡ ‘ಮಹಾ ಮೈತ್ರಿ’ಯ ಗೆಲುವು ಅನಿರೀಕ್ಷಿತವೇನೂ ಆಗಿರಲಿಲ್ಲ. ಆದರೆ, ಇಷ್ಟೊಂದು ಅಂತರದಲ್ಲಿ ಗೆಲ್ಲಬಹುದು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಹೀನಾಯವಾಗಿ ಸೋಲಬಹುದು ಎಂದು ಯಾರೂ ಭಾವಿಸಿರಲಿಲ್ಲ.

ನಿತೀಶ್‌ ಕುಮಾರ್ ಅವರ ಜನಪ್ರಿಯತೆಯನ್ನು ಈ `ಚುನಾವಣೆ ಸಾಬೀತುಪಡಿಸಿದೆ. ಸಡಕ್‌– ಪಾನಿ ಔರ್‌ ಬಿಜಲಿ (ರಸ್ತೆ, ನೀರು ಮತ್ತು ವಿದ್ಯುತ್‌) ವಿಷಯದಲ್ಲಿ ಬಿಹಾರ ಅನೇಕ ರಾಜ್ಯಗಳನ್ನು ಹಿಂದಿಕ್ಕಿದೆ. ಹಿಂದಿದ್ದ ‘ಜಂಗಲ್‌ ರಾಜ್‌’ ಹಣೆಪಟ್ಟಿ ಕಳಚಿಕೊಂಡು ಸಂಪೂರ್ಣ ಹೊರ ಬಂದಿದೆ. ಕಾನೂನು–ವ್ಯವಸ್ಥೆ ಸುಧಾರಣೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಹತ್ತು ವರ್ಷಗಳಿಂದ ರಾಜ್ಯದ ಅಭಿವೃದ್ಧಿ ಚಿತ್ರಣ ಬದಲಿಸಲು ಮುಖ್ಯಮಂತ್ರಿ ಶಕ್ತಿ ಮೀರಿ ದುಡಿದಿದ್ದಾರೆ. ಜೆಡಿಯು ಸರ್ಕಾರ ಮಾಡಿರುವ ಒಳ್ಳೆ ಕೆಲಸಗಳು ನಿತೀಶ್‌ ಅವರಿಗೆ ಅನಿರೀಕ್ಷಿತ ‘ಡಿವಿಡೆಂಡ್‌’ ತಂದುಕೊಟ್ಟಿದೆ.

ನರೇಂದ್ರ ಮೋದಿ ಅವರ ಬಡ್ತಿ ವಿರೋಧಿಸಿ ಎನ್‌ಡಿಎಯಿಂದ ಹೊರಬಂದ ನಿತೀಶ್‌ ಕುಮಾರ್‌ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿ ಸೋತ ಬಳಿಕ ಹಳೆಯ ಸಮಾಜವಾದಿ ಮಿತ್ರ ಲಾಲು ಪ್ರಸಾದ್ ಹಾಗೂ ಕಾಂಗ್ರೆಸ್‌ ಪಕ್ಷದ ಜತೆ ಮೈತ್ರಿ ಮಾಡಿಕೊಂಡಿದ್ದು ಫಲ ಕೊಟ್ಟಿದೆ. ಮಾಜಿ ಮುಖ್ಯಮಂತ್ರಿ ಅವರಿಂದಾಗಿ ಶೇ 14ರಷ್ಟಿರುವ ಯಾದವರು ಹಾಗೂ ಶೇ17ರಷ್ಟಿರುವ ಮುಸ್ಲಿಮರ ಮತಗಳು ಬಹುತೇಕ ಜೆಡಿಯುಗೆ ವರ್ಗಾವಣೆಯಾಗಿದೆ. ಲಾಲು ಅವರ ಜತೆ ನಿತೀಶ್‌ ಅವರು ಕೈ ಜೋಡಿಸದಿದ್ದರೆ ಇಷ್ಟೊಂದು ಸ್ಥಾನಗಳು ಸಿಗುತ್ತಿರಲಿಲ್ಲ. ಬಿಹಾರದಲ್ಲಿ ಲಾಲು ಶಕ್ತಿ ಏನೆಂಬುದನ್ನು ಲೋಕಸಭೆ ಚುನಾವಣೆ, ಅನಂತರ ನಡೆದಿರುವ ವಿಧಾನಸಭೆ ಉಪ ಚುನಾವಣೆಗಳು ನಿರೂಪಿಸಿವೆ. ಈ ಚುನಾವಣೆಯಲ್ಲೂ ಲಾಲು, ನಿತೀಶ್ ಅವರಿಗಿಂತ ಹೆಚ್ಚು ಸ್ಥಾನ ಹಾಗೂ ಮತಗಳನ್ನು ಪಡೆದಿದ್ದಾರೆ. ಈ ಕಾರಣಕ್ಕೆ ಅವರು ಕಿಂಗ್‌ ಮೇಕರ್‌!

ಆರ್‌ಜೆಡಿ ಮುಖ್ಯಸ್ಥ ‘ಕಿಂಗ್‌ ಮೇಕರ್‌’
ಪಟ್ನಾ (ಪಿಟಿಐ):
ಒಂದೂವರೆ ದಶಕದ ಕಾಲ ಬಿಹಾರದಲ್ಲಿ ರಾಜನಂತೆ ಮೆರೆದು ಚುನಾವಣಾ ಸೋಲಿನಿಂದ ರಾಜಕೀಯವಾಗಿ ಪ್ರಪಾತಕ್ಕೆ ಕುಸಿದಿದ್ದ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಈಗ ‘ಕಿಂಗ್‌ ಮೇಕರ್‌’!

ಮಹಾ ಮೈತ್ರಿಕೂಟದ ಭರ್ಜರಿ ಗೆಲುವಿನಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ವಹಿಸಿರುವ ಪಾತ್ರ ದೊಡ್ಡದು. 80 ಸ್ಥಾನಗಳಲ್ಲಿ ಜಯಭೇರಿ ಬಾರಿಸಿರುವ ಲಾಲು ಅವರ ಆರ್‌ಜೆಡಿ, ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಲಾಲು ಪ್ರಸಾದ್‌ ಅವರ ಕಳೆದ ಹತ್ತು ವರ್ಷಗಳ (2005–2015) ರಾಜಕೀಯ ಜೀವನ ಗಮನಿಸಿದರೆ, ಈ ಚುನಾವಣೆಯಲ್ಲಿ ಅವರು ಫೀನಿಕ್ಸ್‌ ಹಕ್ಕಿಯಂತೆ ಎದ್ದು ಬಂದಿದ್ದಾರೆ. ಈ ಫಲಿತಾಂಶವು ಸೋತು ಹೈರಾಣವಾಗಿದ್ದ ಅವರ ಪಕ್ಷದ ಅದೃಷ್ಟವನ್ನೂ ಬದಲಾಯಿಸಿದೆ.

2010ರಲ್ಲಿ ನಡೆದ ಚುನಾವಣೆಯಲ್ಲಿ ಆರ್‌ಜೆಡಿ ಅನುಭವಿಸಿದ್ದ ಹೀನಾಯ ಸೋಲಿನಿಂದಾಗಿ ಲಾಲು ಯುಗಾಂತ್ಯ ಆಯಿತು ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಆ ಚುನಾವಣೆಯಲ್ಲಿ 243 ಸದಸ್ಯ ಬಲದ ವಿಧಾನಸಭೆಯಲ್ಲಿ ಆರ್‌ಜೆಡಿಗೆ ದಕ್ಕಿದ್ದು 22 ಸ್ಥಾನಗಳು ಮಾತ್ರ.

15 ವರ್ಷಗಳ ಕಾಲ ಬಿಹಾರದ ಆಡಳಿತದ ಚುಕ್ಕಾಣಿ ಹಿಡಿದಿದ್ದ ಲಾಲು ಅವರನ್ನು 2005ರ ಚುನಾವಣೆಯಲ್ಲಿ ಬಿಹಾರದ ಜನ ಅಧಿಕಾರದಿಂದ ಕೆಳಗಿಳಿಸಿದ್ದರು. ಬಿಹಾರದ ಅಧಿಪತಿಯಂತೆ ಆಳ್ವಿಕೆ ನಡೆಸಿದ್ದ ಅವರನ್ನು 2010ರ ಚುನಾವಣೆ ಸೋಲು ರಾಜಕೀಯವಾಗಿ ಮೂಲೆಗುಂಪು ಮಾಡಿತ್ತು. ಸೋಲಿಲ್ಲದ ಸರದಾರನಂತಿದ್ದ ಲಾಲು ಅವರ ಆರ್‌ಜೆಡಿಗೆ ವಿರೋಧ ಪಕ್ಷ ನಾಯಕ ಸ್ಥಾನ ಪಡೆಯುವ ಅರ್ಹತೆಯೂ ಇರಲಿಲ್ಲ. ಈ ಚುನಾವಣೆ ಅವರಿಗೆ ಮರು ಹುಟ್ಟು ನೀಡಿದೆ.

ನಿತೀಶ್‌ ಅವರ ಕುರ್ಮಿ ಸಮುದಾಯವೂ ಹಳೇ ಮಿತ್ರರಿಬ್ಬರ ಮೈತ್ರಿಗೆ ಅಂಕಿತ ಹಾಕಿದೆ. ಬಿಹಾರದಲ್ಲಿ ಹೊಸದಾಗಿ ಹೆಣೆದ ಎಂ–ವೈ–ಕೆ (ಮುಸ್ಲಿಮರು– ಯಾದವರು ಹಾಗೂ ಕುರ್ಮಿಗಳು) ಹೊಸ ಜಾತಿ ಸಮೀಕರಣ ಸಫಲವಾಗಿದೆ. ಬಿಹಾರದಲ್ಲಿ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದ ಕಾಂಗ್ರೆಸ್‌ ಮತ್ತೆ ಮೈ ಕೊಡವಿ ಎದ್ದಿದೆ.2010ರ ಚುನಾವಣೆಯಲ್ಲಿ ಬರೀ ನಾಲ್ಕು ಸ್ಥಾನಗಳನ್ನು ಗೆದ್ದು ಮುಖಭಂಗ ಅನುಭವಿಸಿದ್ದ ಪಕ್ಷ  ಈಗ ಅದ್ಭುತ ಸಾಧನೆ ಮಾಡಿದೆ. ಸ್ಪರ್ಧಿಸಿದ್ದ 41 ಕ್ಷೇತ್ರಗಳಲ್ಲಿ 27ರಲ್ಲಿ ಗೆಲುವು ಪಡೆದಿದೆ. ಆರ್‌ಜೆಡಿ ಹಾಗೂ ಜೆಡಿಯು ಅಲೆಯಲ್ಲಿ ಕಾಂಗ್ರೆಸ್‌ ಪಕ್ಷವೂ ದಡ ಮುಟ್ಟಿದೆ.    

ಮತ್ತೊಂದೆಡೆ, ರಾಜ್ಯ ವಿಧಾನಸಭೆ ಚುನಾವಣೆಯನ್ನು ಯಶಸ್ವಿಯಾಗಿ ನಿಭಾಯಿಸದೆ ಬಿಜೆಪಿ ಎಡವಟ್ಟು ಮಾಡಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಸ್ವತಃ ಪ್ರಚಾರದ ನೇತೃತ್ವದ ವಹಿಸಿದರೂ ಮತದಾರರನ್ನು ಓಲೈಸಲು ವಿಫಲರಾಗಿದ್ದಾರೆ. ಒಂದೂವರೆ ವರ್ಷದ ಹಿಂದೆ ಸಾರ್ವತ್ರಿಕ ಚುನಾವಣೆಯಲ್ಲಿ ಎನ್‌ಡಿಎಗೆ ಅಭೂತಪೂರ್ವ ಬೆಂಬಲ ನೀಡಿದ್ದ ಮತದಾರರು, ವಿಧಾನಸಭೆ ಚುನಾವಣೆಯಲ್ಲಿ ಕೈಬಿಟ್ಟಿದ್ದಾರೆ. ಚುನಾವಣೆ ಪ್ರಕ್ರಿಯೆ ಆರಂಭದಿಂದ ಅಂತ್ಯದವರೆಗೆ ಒಂದರ ಮೇಲೊಂದರಂತೆ ವಿವಾದ ಸೃಷ್ಟಿಸಿದ ಬಿಜೆಪಿ, ತಾನೇ ಹೆಣೆದ ಬಲೆಯಲ್ಲಿ ಸಿಕ್ಕಿಕೊಂಡಿದೆ. ಬಿಜೆಪಿ ಅಧ್ಯಕ್ಷ ಅಮಿತ್‌ ಷಾ, ಕೇಂದ್ರ ಸಂಪುಟದ ಕೆಲವು ಹಿರಿಯ ಸಚಿವರು ಚುನಾವಣೆ ಉದ್ದಕ್ಕೂ ಬಿಹಾರದಲ್ಲೇ ಉಳಿದುಕೊಂಡರೂ ನಿತೀಶ್‌ ಅವರ ಅಶ್ವಮೇಧ ಯಾಗದ ಕುದುರೆ ಕಟ್ಟಿಹಾಕಲು ವಿಫಲವಾಗಿದ್ದಾರೆ.

ಅಭ್ಯರ್ಥಿಗಳ ಆಯ್ಕೆಯಲ್ಲೂ ಬಿಜೆಪಿ ನಾಯಕರು ಎಡವಿದರು. ಹಲವು ವರ್ಷ ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ, ಹೊಸಬರಿಗೆ ಮಣೆ ಹಾಕಿದರು. ಇದರಿಂದಾಗಿ ಹಲವೆಡೆ ಎದುರಾದ ಬಂಡಾಯವನ್ನು ಜೀರ್ಣಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಗಲಿಲ್ಲ. ಬಿಜೆಪಿ ನಾಯಕರು ಬಳಸಿದ ನಕಾರಾತ್ಮಕ ಪ್ರಚಾರ ತಂತ್ರ ಲಾಲು– ನಿರೀಶ್‌ ಅವರಿಗೆ ವರವಾಯಿತು. ಆರ್‌ಜೆಡಿ  ಜತೆ ಕೈಜೋಡಿಸಿ ನಿತೀಶ್‌ ತಪ್ಪು ಮಾಡಿದ್ದಾರೆ. ನಿತೀಶ್‌ ಅವರನ್ನು ಬೆಂಬಲಿಸಿದರೆ ರಾಜ್ಯದಲ್ಲಿ ಮತ್ತೆ ‘ಜಂಗಲ್‌ ರಾಜ್‌’ ಬರಲಿದೆ ಎಂದು ಅಪ ಪ್ರಚಾರ ಮಾಡಿದರು. ಈ ಅಪಪ್ರಚಾರಕ್ಕೆ ಮತದಾರರು ಕಿವಿಗೊಟ್ಟಿಲ್ಲ.

ಅಷ್ಟೇ ಸಾಲದೆಂಬಂತೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಮೋಹನ್‌ ಭಾಗವತ್‌, ಮೀಸಲಾತಿ ನೀತಿ ಪುನರ್‌ ಪರಿಶೀಲನೆ ಆಗಬೇಕು ಎಂದು ಕೊಟ್ಟ ವಿವಾದಾತ್ಮಕ ಹೇಳಿಕೆ ಬಿಜೆಪಿಗೆ ಚೇತರಿಸಿಕೊಳ್ಳಲಾಗದಂಥ ಹೊಡೆತ ಕೊಟ್ಟಿದೆ. ದಲಿತ ಹಾಗೂ ಹಿಂದುಳಿದ ವರ್ಗಗಳ ನಡುವೆ ಅಂತರ್ಗಾಮಿಯಾಗಿ ಹರಿದಾಡಿದ ಈ ವಿವಾದವನ್ನು ತಣ್ಣಗೆ ಮಾಡಲು ಪ್ರಧಾನಿ ಮೋದಿ ಮಾಡಿದ ಪ್ರಯತ್ನಗಳೆಲ್ಲವೂ ಕೈಕೊಟ್ಟಿವೆ. ಇದರೊಂದಿಗೆ ದಾದ್ರಿಯ ಘಟನೆ, ಫರೀದಾಬಾದ್‌ ದಲಿತರ ಸಜೀವ ದಹನ, ಗೋ ಮಾಂಸ ವಿವಾದಗಳಿಗೆ ಬಿಜೆಪಿ ಭಾರಿ ಬೆಲೆ ತೆತ್ತಿದೆ.

ಪ್ರಧಾನಿ ಮೋದಿ ಮೇಲಿಂದ ಮೇಲೆ ಪ್ರಚಾರಕ್ಕಾಗಿ ಬಿಹಾರಕ್ಕೆ ಬಂದಿದ್ದು ಮತದಾರರಿಗೆ ಅಪಥ್ಯವಾಯಿತು. ಮೋದಿ 30ಕ್ಕೂ ಹೆಚ್ಚು ಸಭೆಗಳಲ್ಲಿ ಭಾಗವಹಿಸಿದ್ದರು. ಅವರು ಸ್ಥಳೀಯ ನಾಯಕರೊಬ್ಬರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಬಿಂಬಿಸಿ ‘ಹರಕೆ ಕುರಿ’ ಮಾಡಬಹುದಿತ್ತು. ಹಾಗಾಗಿದ್ದರೆ ಪ್ರಧಾನಿ ಮೇಲೂ ಹೆಚ್ಚು ಟೀಕೆಗಳು ಕೇಳಿ ಬರುತ್ತಿರಲಿಲ್ಲ. ದೆಹಲಿ ಚುನಾವಣೆಯಲ್ಲಿ ಕೈಸುಟ್ಟುಕೊಂಡ ಬಳಿಕ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಹೆಸರಿಸಲು ಬಿಜೆಪಿ ಹಿಂದೇಟು ಹಾಕಿತು.

ರಾಜ್ಯ ವಿಧಾನಸಭೆ ಚುನಾವಣೆಗೆ ಪ್ರಧಾನಿ ಇಷ್ಟೊಂದು ಸಲ ಬರುವ ಅಗತ್ಯವಿದೆಯೇ ಎಂಬ ಪ್ರಶ್ನೆಗಳನ್ನು ಮತದಾರರು ಕೇಳಿದರು. ಅವರು ಬಿಹಾರ ಮುಖ್ಯಮಂತ್ರಿ ಆಗುವರೇ ಎಂದು ಬಹಳಷ್ಟು ಜನರು ಲೇವಡಿ ಮಾಡಿದರು. ಅಧಿಕಾರಕ್ಕೆ ಬಂದಿರುವ ಒಂದೂವರೆ ವರ್ಷದಲ್ಲಿ ಅವರೇನು ಮಾಡಿದ್ದಾರೆ ಎಂದು ಅನೇಕರು ಆಕ್ಷೇಪ ತೆಗೆದರು. ಪ್ರಚಾರ ಸಭೆಗಳಲ್ಲಿ ಮೋದಿ ಅವರು ಬಳಸಿದ ಭಾಷೆ, ಹಾವ– ಭಾವಗಳನ್ನು ಕುರಿತು ಅಸಮಾಧಾನ ವ್ಯಕ್ತವಾಗಿತ್ತು. ಮತದಾರರ ಆಕ್ಷೇಪ– ಅಪಸ್ವರಗಳು ಫಲಿತಾಂಶದಲ್ಲಿ ಪ್ರತಿಫಲಿಸಿವೆ.

ನಿತೀಶ್‌ ಅವರಿಗೆ ಸೆಡ್ಡು ಹೊಡೆದ ಜೀತನ್‌ರಾಂ ಮಾಂಝಿ, ದಲಿತ ನಾಯಕ ರಾಂವಿಲಾಸ್‌ ಪಾಸ್ವಾನ್‌, ಹಿಂದುಳಿದ ಕುಶ್ವಾಹ ಜಾತಿಯ ಉಪೇಂದ್ರ ಕುಶ್ವಾಹ ದಲಿತರು, ಮಹಾದಲಿತರು ಮತ್ತು ಹಿಂದುಳಿದ ಜಾತಿ ಮತಗಳನ್ನು ಬಿಜೆಪಿಗೆ ಎಳೆದು ತರಬಹುದು ಎಂಬ ಲೆಕ್ಕಾಚಾರವೂ ಕೈಕೊಟ್ಟಿದೆ. ಮೂವರು ನಾಯಕರ ಪಕ್ಷದೊಂದಿಗಿನ ಹೊಂದಾಣಿಕೆ ಬಿಜೆಪಿಗೆ ದುಬಾರಿಯಾಗಿದೆ. ಅತೀ, ಹಿಂದುಳಿದರು, ದಲಿತರು ಹಾಗೂ ಮಹಾದಲಿತರು, ಮಹಿಳೆಯರು ಹಾಗೂ ಹೊಸ ಪೀಳಿಗೆ ಮತದಾರರ ಮತಗಳೂ ಲಾಲು ಮತ್ತು ನಿತೀಶ್‌ ಅವರ ಪಾಲಾಗಿರುವಂತೆ ತೋರುತ್ತಿದೆ. ಮೇಲ್ವರ್ಗದ ಮತಗಳಲ್ಲೂ ಮಹಾಮೈತ್ರಿಗೆ ಸ್ವಲ್ಪ ಪಾಲು ಸಿಕ್ಕಿರುವಂತಿದೆ.

ಲಾಲು– ನಿತೀಶ್‌ ಅವರ ನಾಗಾಲೋಟಕ್ಕೆ ಪಪ್ಪೂ ಯಾದವ್‌, ಮುಲಾಯಂಸಿಂಗ್‌ ಯಾದವ್‌, ಒವೈಸಿ, ಬಿಎಸ್‌ಪಿ, ಎನ್‌ಸಿಪಿ ಹಾಗೂ ಎಡ ಪಕ್ಷಗಳೂ ಸೇರಿದಂತೆ ಹಲವು ಪಕ್ಷಗಳು ಅಡ್ಡಿಯಾಗಬಹುದು ಎಂದು ಬಿಜೆಪಿ ನಾಯಕರು ನಿರೀಕ್ಷಿಸಿದ್ದರು. ಅವರ ಊಹೆ ಹುಸಿ ಆಗಿದೆ.

ಬಿಹಾರ ಚುನಾವಣೆ ಫಲಿತಾಂಶ ಹೊರಬರುವುದರೊಂದಿಗೆ ಮೊದಲ ಅಧ್ಯಾಯ ಮುಗಿದಿದೆ. ಮತ್ತೊಂದು ಅಧ್ಯಾಯ ಆರಂಭ ಆಗಿದೆ. ನಿತೀಶ್‌ ಅವರಿಗಿಂತ ಹೆಚ್ಚು ಸೀಟುಗಳು ಹಾಗೂ ಮತಗಳನ್ನು ಪಡೆದಿರುವ ಲಾಲು ಸುಸೂತ್ರವಾಗಿ ಆಡಳಿತ ನಡೆಸಲು ಮುಖ್ಯಮಂತ್ರಿಗಳನ್ನು ಬಿಡುವರೇ ಎಂಬ ಸಂಶಯ ಮೂಡಿದೆ. ಆದರೆ, ಈ ಪ್ರಶ್ನೆಗೆ ಲಾಲು ಮೊದಲ ಪತ್ರಿಕಾಗೋಷ್ಠಿಯಲ್ಲಿ ಉತ್ತರ ಕೊಟ್ಟಿದ್ದಾರೆ. ನಮ್ಮ ನಡುವೆ ಯಾವುದೇ ಸಮಸ್ಯೆಗಳು ಉದ್ಭವಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ವಿಧಾನಸಭೆ ಚುನಾವಣೆ ಫಲಿತಾಂಶ ಹೊಸ ರಾಜಕೀಯ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. 2019ರಲ್ಲಿ ಮೋದಿ ಅವರಿಗೆ ನಿತೀಶ್‌ ಪರ್ಯಾಯ ನಾಯಕರಾಗಿ ಹೊರಹೊಮ್ಮುವರೇ ಎಂಬ ಕುತೂಹಲಕ್ಕೆ ಕಾರಣವಾಗಿದೆ. ಲಾಲು ಅವರಿಗೆ ಮಾಧ್ಯಮ ಪ್ರತಿನಿಧಿಗಳು ಈ ಪ್ರಶ್ನೆ ಹಾಕಿದಾಗ, ಅವರು ಸೂಕ್ತ ಉತ್ತರ ಕೊಡದೆ ನುಣುಚಿಕೊಂಡರು. ನಿತೀಶ್‌ ಅವರು ರಾಷ್ಟ್ರಮಟ್ಟದ ನಾಯಕರಾಗಿ ಹೊರ ಹೊಮ್ಮುವರೆ ಎಂದು ಇಷ್ಟು ಬೇಗ ಊಹಿಸುವುದು ಕಷ್ಟ. ಆದರೆ, ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ನಡೆದಿರುವ ಪ್ರಯೋಗ 2016 ಹಾಗೂ 2017ಕ್ಕೆ ಚುನಾವಣೆಗೆ ಹೋಗಲಿರುವ ರಾಜ್ಯಗಳಲ್ಲೂ ನಡೆಯಲಿದೆಯೇ ಎಂದು  ನೋಡಬೇಕು.

ಯಾರು ಏನೆಂದರು?
ಜನರಿಗೆ ಗೆಲುವು
​ಇದು ಬಿಹಾರದ ಜನರಿಗೆ ಒಲಿದ ಗೆಲುವು.  ಕೋಮು ಧ್ರುವೀಕರಣ ಕೆಲಸವನ್ನು ರಾಜ್ಯದ ಜನರು ವಿಫಲಗೊಳಿಸಿದ್ದಾರೆ–ನಿತೀಶ್ ಕುಮಾರ್, ಜೆಡಿಯು ನಾಯಕ

ದೀರ್ಘಾವಧಿ ಪರಿಣಾಮ
ಬಿಹಾರ ಚುನಾವಣಾ ಫಲಿತಾಂಶ ರಾಷ್ಟ್ರ ರಾಜಕಾರಣದ ಮೇಲೆ ದೀರ್ಘಾವಧಿಯ ಪರಿಣಾಮ ಬೀರಲಿದೆ–ಲಾಲುಪ್ರಸಾದ್

ಅಭಿನಂದನೆ
ಮಹಾಮೈತ್ರಿ ಗೆಲುವು ಸಾಧಿಸಿರುವುದಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್‌  ಕುಮಾರ್‌ ಅವರಿಗೆ ಅಭಿನಂದನೆಗಳು –ನರೇಂದ್ರ ಮೋದಿ, ಪ್ರಧಾನಿ

ತೀರ್ಪಿಗೆ ತಲೆಬಾಗುತ್ತೇವೆ
ಬಿಹಾರದ ಜನರ ತೀರ್ಪನ್ನು ಪಕ್ಷ ಗೌರವಿಸುತ್ತದೆ. ಹೊಸ ಸರ್ಕಾರಕ್ಕೆ ಅಭಿನಂದನೆಗಳು. –ಅಮಿತ್ ಷಾ, 
ಬಿಜೆಪಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT