ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತ್ಯ ದೂಳಿನ ಸ್ನಾನ, ವಾಹನದಟ್ಟಣೆ ಬಿಸಿ

ಜಯನಗರದಲ್ಲಿ ಕುಂಟುತ್ತಾ ಸಾಗಿದ ಜಲಮಂಡಲಿ ಕಾಮಗಾರಿ, ತಪ್ಪದ ಸಾರ್ವಜನಿಕರ ಬವಣೆ
Last Updated 28 ಆಗಸ್ಟ್ 2015, 19:31 IST
ಅಕ್ಷರ ಗಾತ್ರ

ಬೆಂಗಳೂರು:  ನಗರದ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ನಿಂದ ಬಿಟಿಎಂ ಲೇಔಟ್‌ ಮಾರ್ಗವಾಗಿ ಬನಶಂಕರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ ಕಾಮಗಾರಿ ನಿಧಾನ ಗತಿ ಯಿಂದ ಸಾಗಿರುವುದರಿಂದ ಜನ ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಕಾಮಗಾರಿ ಕೈಗೆತ್ತಿಕೊಂಡು ಎಂಟು ತಿಂಗಳಾದರೂ ಇಲ್ಲಿಯವರೆಗೆ ಪೂರ್ಣ ಗೊಂಡಿಲ್ಲ. ಒಂದು ಕಡೆ ಕಾಮಗಾರಿ ನಿಧಾನವಾಗಿ ನಡೆಯುತ್ತಿದ್ದರೆ, ಮತ್ತೊಂ ದೆಡೆ ಕಾಮಗಾರಿ ಮುಗಿದ ಕಡೆಗಳಲ್ಲಿ ರಸ್ತೆ ದುರಸ್ತಿಗೊಳಿಸಿಲ್ಲ.  ಇದು ವಾಹನ ದಟ್ಟಣೆಗೆ ಕಾರಣವಾಗಿದೆ.

ಜೊತೆಗೆ ರಸ್ತೆ ಮೇಲೆಲ್ಲಾ ಮಣ್ಣು ಆವರಿಸಿಕೊಂಡಿದೆ. ವಾಹನಗಳು ಹಾದು ಹೋದರೆ ಎಲ್ಲೆಡೆ ದೂಳು ಆವರಿಸಿಕೊಳ್ಳುತ್ತದೆ. ಇದರಿಂದ ದಾರಿಹೋಕರು ಹಾಗೂ ದ್ವಿಚಕ್ರ ವಾಹನ ಸವಾರರು ನಿತ್ಯ ದೂಳಿನ ಸ್ನಾನ ಮಾಡುವಂತಾಗಿದೆ.

ಮಳೆ ಬಂದರಂತೂ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ. ರಸ್ತೆ ಹೊಂಡಗಳಲ್ಲಿ ನೀರು ತುಂಬಿಕೊಳ್ಳು ವುದರಿಂದ ವಾಹನ ಸವಾರರಿಗೆ ಹೊಂಡಗಳು ಗೊತ್ತಾಗುವುದೇ ಇಲ್ಲ. ಇದರಿಂದಾಗಿಯೇ ಅನೇಕ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯ ಗೊಂಡಿದ್ದಾರೆ.

ಕೆಲಸ ಪೂರ್ಣಗೊಂಡ ಭಾಗಗಳಲ್ಲಿ ರಸ್ತೆ ಡಾಂಬರೀಕರಣ ಮಾಡಿಲ್ಲ.  ಇದ ರಿಂದ ರಸ್ತೆಗಳಲ್ಲಿ ಗುಂಡಿ ಸೃಷ್ಟಿಯಾಗಿವೆ. ಜೊತೆಗೆ ರಸ್ತೆಯ ಅರ್ಧ ಭಾಗ ಬೇಕಾ ಬಿಟ್ಟಿಯಾಗಿ ಮಣ್ಣು ಹರಡಿಕೊಂಡಿರುವು ದರಿಂದ ಹೆಚ್ಚಿನ ವಾಹನಗಳು ಅದರ ಮೇಲೆ ಚಲಿಸುತ್ತಿಲ್ಲ. ಆದ್ದರಿಂದ ಅಲ್ಲಿ ಜನ ತಮ್ಮ ವಾಹನಗಳನ್ನು ನಿಲ್ಲಿಸುತ್ತಿದ್ದು,  ಅದು ವಾಹನಗಳಿಗೆ ಪಾರ್ಕಿಂಗ್‌ ಮಾಡುವ ಸ್ಥಳವಾಗಿ ಮಾರ್ಪಟ್ಟಿದೆ.

ಕಾಮಗಾರಿಯಿಂದ ಸುಮಾರು 2.5 ಕಿ.ಮೀ ವರೆಗೆ ರಸ್ತೆ ಹಾಳಾಗಿದ್ದು, ಜಯ ನಗರದ 46ನೇ ಅಡ್ಡರಸ್ತೆ, ಸೆಂಟ್ರಲ್‌ ಮಾಲ್‌ ಬಳಿ ಸೇರಿದಂತೆ ಅನೇಕ ಭಾಗಗಳಲ್ಲಿ ನಿತ್ಯ ವಾಹನದಟ್ಟಣೆ ಸಾಮಾನ್ಯ ವಿಷಯವಾಗಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ‘ಎಲ್‌ ಅಂಡ್‌ ಟಿ’ ಕಂಪೆನಿಗೆ  ಈ ಕಾಮಗಾರಿ ವಹಿಸಲಾ
ಗಿದೆ. ಆದರೂ ನಿಧಾನಗತಿಯಲ್ಲಿ ಸಾಗಿದೆ.

ಕಾಮಗಾರಿ ಕೈಗೆತ್ತಿಕೊಂಡಿರುವ ಕೆಲವೆಡೆ ಬಂಡೆ ಕಾಣಿಸಿಕೊಂಡಿದೆ. ಇಂತಹ ಸ್ಥಳಗಳಲ್ಲಿ ಯಂತ್ರಗಳನ್ನು ಬಳಸಿ ಕೊಳ್ಳುವುದರ ಬದಲಾಗಿ ಕಾರ್ಮಿಕರಿಗೆ ಕೆಲಸ ವಹಿಸಲಾಗಿದೆ. ಇದು ಕೂಡ ವಿಳಂಬಕ್ಕೆ ಕಾರಣವಾಗಿದೆ. ಕಾರ್ಮಿಕರು ಸಾಂಪ್ರದಾಯಿಕ ಸಾಧನಗಳನ್ನು ಬಳಸಿ ಬಂಡೆ ಒಡೆಯುತ್ತಿರುವ ದೃಶ್ಯ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ ‘ಪ್ರಜಾವಾಣಿ’ಗೆ ಕಂಡು ಬಂತು.

ಇದು ಮುಖ್ಯರಸ್ತೆಯ ಮಾತಾದರೆ ಜಯನಗರದ ಐದನೇ ಬ್ಲಾಕ್‌ನ 42,43 ಮತ್ತು 44ನೇ ಅಡ್ಡರಸ್ತೆಗಳಲ್ಲೂ ಇದೇ ಸ್ಥಿತಿ ಇದೇ. ಒಳಚರಂಡಿ ಕಾಮಗಾರಿ ಪೂರ್ಣಗೊಂಡ ನಂತರವೂ ಇಲ್ಲಿನ ರಸ್ತೆಗಳನ್ನು ದುರಸ್ತಿ ಮಾಡಿಲ್ಲ. ಇದರಿಂದ ಇಲ್ಲಿನ ರಸ್ತೆಗಳಲ್ಲಿ ಗುಂಡಿಗಳು ಬಿದ್ದು ವಾಹನ ಸಂಚಾರಕ್ಕೆ ತೊಂದರೆ ಯಾಗುತ್ತಿದೆ. ವಿಪರ್‍ಯಾಸವೆಂದರೆ, ಈ ಕಾಮಗಾರಿ ಕೂಡ ಎಲ್‌ ಅಂಡ್‌ ಟಿ ಕಂಪೆನಿಯೇ ಮುಗಿಸಿರುವುದು.

ನಿಧಾನಗತಿಯ ಕಾಮಗಾರಿಯಿಂದ ಜನಸಾಮಾನ್ಯರಿಗೆ ಆಗುತ್ತಿರುವ ತೊಂದ ರೆಯನ್ನು ಮನಗಂಡು ಜಯನಗರ ಕ್ಷೇತ್ರದ ಶಾಸಕ ಬಿ.ಎನ್‌. ವಿಜಯ ಕುಮಾರ್‌ ಅವರು  ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ), ಎಲ್‌ ಅಂಡ್‌ ಟಿ ಕಂಪೆನಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ.

‘ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಕಂಪೆನಿಗೆ ಕಾಮಗಾರಿ ವಹಿಸಲಾಗಿದೆ. ಆದರೆ ಅದರ ಪ್ರತಿಷ್ಠೆಗೆ ತಕ್ಕಂತೆ ಯಾವುದೇ ಕೆಲಸಗಳು ಆಗುತ್ತಿಲ್ಲ. ಕೆಲಸ ನಿಧಾನ ಗತಿಯಲ್ಲಿ ಸಾಗಿದೆ’ ಎಂದು ಶಾಸಕ ಬಿ.ಎನ್‌. ವಿಜಯಕುಮಾರ್‌ ಶುಕ್ರವಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಸ್ತೆಯನ್ನು ಕ್ರಮಬದ್ಧವಾಗಿ ಅಗೆ ದಿಲ್ಲ. ಜೊತೆಗೆ ಅದನ್ನು ಸಮರ್ಪಕವಾಗಿ ಮುಚ್ಚಿಲ್ಲ. ಮನೆಗಳಿಗೆ ಸಂಪರ್ಕ ಕೊಡು ವಾಗ ಮೋರಿಗಳ ಮೇಲಿಂದ ತೆಗೆದ ಚಪ್ಪಡಿಗಳನ್ನು ಮೊದಲಿನಂತೆ ಮುಚ್ಚು ತ್ತಿಲ್ಲ, ಹೊಸದಾಗಿ ಅಳವಡಿಸಿರುವ ಪೈಪ್‌ಲೈನ್‌ಗಳಿಂದ ನಿಗದಿತ ಅವಧಿಯಲ್ಲಿ ಮನೆಗಳಿಗೆ ಮೀಟರ್‌ ಅಳವಡಿಸಿ ಸಂಪರ್ಕ ಕಲ್ಪಿಸುತ್ತಿಲ್ಲ, ಕೆಲಸ ಮುಗಿದ ಮೇಲೆ ಉಳಿಯುವ ಕಲ್ಲು, ಮಣ್ಣು ಹಾಗೂ ಹಳೆ ಪೈಪು ಸೇರಿದಂತೆ ಇತರ ವಸ್ತುಗಳನ್ನು ಬೇರೆಡೆ ಸಾಗಿಸುತ್ತಿಲ್ಲ’ ಎಂದು ಕಂಪೆನಿ ಮಾಡುತ್ತಿರುವ ಎಡ ವಟ್ಟುಗಳ ದೊಡ್ಡ ಪಟ್ಟಿಯನ್ನೇ ಕೊಟ್ಟರು.

‘ಕಂಪೆನಿಗೆ ಕೊಟ್ಟ ಗುತ್ತಿಗೆ ಅವಧಿ ಪೂರ್ಣಗೊಳ್ಳಲು ಬಂದಿದೆ. ಆದರೆ ಇನ್ನೂ ಸಾಕಷ್ಟು ಕೆಲಸ ಬಾಕಿ ಉಳಿದಿದೆ’ ಎಂದೂ ತಿಳಿಸಿದರು.
‘ಈ ಸಂಬಂಧ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಆಡಳಿತಾಧಿಕಾರಿಗೂ ವಿಷಯ ತಿಳಿಸ ಲಾಗಿತ್ತು. ಅವರು ಸ್ಥಳಕ್ಕೆ ಭೇಟಿ ನೀಡಿದರೂ ಯಾವುದೇ ಬದಲಾವಣೆ ಕಂಡು ಬಂದಿಲ್ಲ’ ಎಂದರು.

* ನಿಧಾನಗತಿಯ ಕಾಮಗಾರಿಯಿಂದ ಜನರಿಗೆ ತೀವ್ರ ತೊಂದರೆ ಆಗುತ್ತಿದೆ. ವಿಳಂಬಕ್ಕೆ ಕಾರಣ ಕೇಳಿ ಕಂಪೆನಿಗೆಪತ್ರ ಬರೆದರೆ ಉತ್ತರಬಂದಿಲ್ಲ.

-ಬಿ.ಎನ್‌. ವಿಜಯಕುಮಾರ್‌
ಜಯನಗರ ಶಾಸಕ

***
ರಸ್ತೆ ಗುಂಡಿಗಳ ಚಿತ್ರ ಕಳುಹಿಸಿ
ರಾಜಧಾನಿಯ ರಸ್ತೆಗಳಲ್ಲಿ  ಬಾಯಿ ಬಿಟ್ಟಿರುವ ಗುಂಡಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.  ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾದ ಪರಿಸ್ಥಿತಿ ಇದೆ. ನಾಗರಿಕರು ರಸ್ತೆ ಗುಂಡಿಗಳ ಚಿತ್ರಗಳನ್ನು ಕಳುಹಿಸಿಕೊಟ್ಟರೆ ಅವುಗಳನ್ನು ‘ಪ್ರಜಾವಾಣಿ’ಯಲ್ಲಿ ಪ್ರಕಟಿಸಲಾಗುವುದು.  ಚಿತ್ರಗಳನ್ನು ಕಳುಹಿಸಬೇಕಾದ ಇಮೇಲ್‌ ವಿಳಾಸ:

bangalore@ prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT