ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತ್ಯ ಮದುವಣಗಿತ್ತಿ ಪುನಾಖಾ

Last Updated 28 ನವೆಂಬರ್ 2015, 19:36 IST
ಅಕ್ಷರ ಗಾತ್ರ

ನಾಲ್ಕು ವರ್ಷಗಳ ಹಿಂದೆ ನಡೆದ ಭೂತಾನ್ ದೊರೆ ಜಿಗ್ಮೆ ಕೇಸರ್ ನಾಮ್‌ಗೈಲ್ ವಾಂಗ್‌ಚುಕ್ ಅವರ ಮದುವೆ ಅಂತರರಾಷ್ಟ್ರೀಯ ಮಟ್ಟದ ಸುದ್ದಿಯಾಗಿತ್ತು. ಅಕ್ಟೋಬರ್ 11, 2011ರಂದು ಜೆತ್ಸುನ್ ಪೇಮಾ ಅವರನ್ನು ದೊರೆ ಜಿಗ್ಮೆ ಕೇಸರ್ ನಾಮ್‌ಗೈಲ್ ವಾಂಗ್‌ಚುಕ್ ವಿವಾಹವಾದಾಗ ವಿಶ್ವದ ಅತ್ಯಂತ ಸುಂದರ ರಾಜ ದಂಪತಿಗಳೆಂಬ ವಿಶೇಷಣದೊಂದಿಗೆ ಅವರ ಮದುವೆ ವಿಶ್ವಖ್ಯಾತಿ ಪಡೆದಿತ್ತು. ಅವರ ವಿವಾಹ ಮಹೋತ್ಸವ ನಡೆದದ್ದು ಪುನಾಖಾ ಝೋಂಗ್‌ನಲ್ಲಿ. ನವದಂಪತಿಗಳ ಸೌಂದರ್ಯದೊಂದಿಗೆ ಝೋಂಗ್‌ನ ಅಂದವೂ ಸುದ್ದಿ ಮಾಡಿತ್ತು.

ಹದಿನೇಳನೇ ಶತಮಾನದ ತನಕ ಭೂತಾನ್‌ನಲ್ಲಿ ಸಣ್ಣ ಸಣ್ಣ ಸಾಮಂತ ಅರಸರು ಆಳ್ವಿಕೆ ನಡೆಸಿದರೂ ಅವರಲ್ಲಿ ಒಳಜಗಳಗಳಿದ್ದವು. ಆ ಸಮಯದಲ್ಲಿ ಟಿಬೇಟ್‌ನ ಲಾಮಾ ಮತ್ತು ಮಿಲಿಟರಿ ನಾಯಕ ಶಬ್‌ದ್ರುಂಗ್ ನಗವಾಂಗ್ ನಾಮ್‌ಗೈಲ್ ಅವರು ಭೂತಾನ್‌ಗೆ ಬಂದು ಸಣ್ಣಪುಟ್ಟ ರಾಜ್ಯಗಳನ್ನು ಒಗ್ಗೂಡಿಸಿದರು. ಕೋಟೆ (ಝೋಂಗ್)ಗಳನ್ನು ನಿರ್ಮಿಸಿದರು.

ಭೂತಾನ್ ದೇಶದಲ್ಲಿ ಹಿಂದೆ ರಕ್ಷಣಾ ಕೇಂದ್ರಗಳಾಗಿದ್ದ ಈ ಝೋಂಗ್‌ಗಳು ಈಗ ಆಡಳಿತ ಕೇಂದ್ರ ಮತ್ತು ಮೊನಾಸ್ಟ್ರಿ ಅಂದರೆ ಬೌದ್ಧ ವಿದ್ಯಾರ್ಥಿ ಭಿಕ್ಷುಗಳು ವಿದ್ಯಾಭ್ಯಾಸ ಮಾಡುವ ಸ್ಥಳವಾಗಿವೆ. ಶ್ವೇತ ವರ್ಣದ ಝೋಂಗ್‌ಗಳು ಇಪ್ಪತ್ತು ಜಿಲ್ಲೆಗಳಲ್ಲೂ ಇವೆ. ಕಲ್ಲು, ಮಣ್ಣು ಮತ್ತು ಮರದಿಂದ ಇವನ್ನು ನಿರ್ಮಿಸಲಾಗಿದೆ. ಅಷ್ಟೊಂದು ಮರವನ್ನು ಬಳಸಿದ್ದರೂ ಒಂದೇ ಒಂದು ಮೊಳೆಯನ್ನೂ ಬಳಸದೆ ನಿರ್ಮಿಸಿರುವುದು ಅವುಗಳ ವಿಶೇಷ. ಝೋಂಗ್‌ಗಳಲ್ಲಿ ದೇವಸ್ಥಾನ ಮತ್ತು ಬೌದ್ಧ ಭಿಕ್ಷುಗಳ ವಾಸಸ್ಥಳ ಒಂದೆಡೆಯಿದ್ದರೆ, ಆಡಳಿತ ಕಚೇರಿಗಳು ಮತ್ತೊಂದೆಡೆ ಇವೆ.

ಪುನಾಖಾ ಝೋಂಗ್
ಭೂತಾನ್‌ಗೆ ಭೇಟಿ ನೀಡುವ ಪ್ರವಾಸಿಗರಿಗೆ ಮೊಟ್ಟಮೊದಲು ಮನಸ್ಸಿಗೆ ತಟ್ಟುವುದು ಅವರ ಸಾಂಪ್ರದಾಯಿಕ ವಾಸ್ತುಶಿಲ್ಪ. ಸಾಮಾನ್ಯ ಮನೆ, ಅಂಗಡಿ, ದೇವಸ್ಥಾನ, ಆಡಳಿತ ಕೇಂದ್ರ ಝೋಂಗ್– ಎಲ್ಲವೂ ಸಮಾನ ಶೈಲಿಯನ್ನು ಹೊಂದಿದ್ದು ನಿಸರ್ಗದ ನಡುವೆ ಸುಂದರವಾಗಿ ಕಾಣುತ್ತವೆ. ಭೂತಾನ್‌ನ ಝೋಂಗ್‌ಗಳಲ್ಲಿ ಅತ್ಯಂತ ವೈಭವದ್ದು ಪುನಾಖಾ ಝೋಂಗ್. ಮೋಚು ಮತ್ತು ಪೋಚು ನದಿಗಳ ಸಂಗಮದ ಹತ್ತಿರ ಅದನ್ನು ಕಟ್ಟಿದ್ದಾರೆ.

1950ರಲ್ಲಿ ಥಿಂಪುವನ್ನು ರಾಜಧಾನಿ ಮಾಡುವವರೆಗೂ ಪುನಾಖಾ ಭೂತಾನ್‌ನ ರಾಜಧಾನಿಯಾಗಿತ್ತು. ದೇಶದ ಆಡಳಿತವೆಲ್ಲಾ ಈ ಝೋಂಗ್‌ನಲ್ಲಿ ನಡೆಯುತ್ತಿತ್ತು. ವಸಂತ ಋತುವಿನಲ್ಲಿ ಝೋಂಗ್‌ನಲ್ಲಿನ ಜಕರಂಡಾ ಮರಗಳು ನೇರಳೆ ಬಣ್ಣದ ಹೂಗಳನ್ನು ಅರಳಿಸಿ ನಿಂತಾಗ ಅದನ್ನು ನೋಡುವುದೇ ಒಂದು ಅದ್ಭುತ. ಝೋಂಗ್ ಒಳಗೆ ಬುದ್ಧ, ಗುರು ರಿಂಪೋಚೆ ಮತ್ತು ಶಬ್‌ದ್ರುಂಗ್ ಅವರ ಬಂಗಾರದ ಬಣ್ಣದ ದೊಡ್ಡ ದೊಡ್ಡ ಮೂರ್ತಿಗಳಿರುವ ನೂರು ಕಂಬಗಳ ಕೋಣೆಯಿದೆ.

ಶಬ್‌ದ್ರುಂಗ್ ನಗವಾಂಗ್ ನಾಮ್‌ಗೈಲ್ 1637ರಲ್ಲಿ ಈ ಝೋಂಗ್ ನಿರ್ಮಿಸಿದರು. ಮೂರ್‍ನಾಲ್ಕು ಬಾರಿ ಬೆಂಕಿ ಅನಾಹುತಕ್ಕೆ ತುತ್ತಾದರೂ ಅದನ್ನು ಪುನಾ ಕಟ್ಟಲಾಗಿದೆ. ಮರವನ್ನು ಬಳಸಿ ಕಟ್ಟಿರುವುದು ಮತ್ತು ತುಪ್ಪದ ದೀಪಗಳನ್ನು ಬೆಳಗುವುದು ಬೆಂಕಿ ಅನಾಹುತಕ್ಕೆ ಕಾರಣವಾಗಿದೆ. ಪುನಾಖಾ ಝೋಂಗ್ ನಿರ್ಮಿಸಿದ್ದ ಶಬ್‌ದ್ರುಂಗ್ ನಗವಾಂಗ್ ನಾಮ್‌ಗೈಲ್ 1651ರಲ್ಲಿ ಅಲ್ಲೇ ನಿಧನರಾದರು. ಶಬ್‌ದ್ರುಂಗ್ ನಗವಾಂಗ್ ತೀರಿಕೊಂಡ ನಂತರ ವಿವಿಧ ಪ್ರಾಂತ್ಯಗಳ ಅರಸರು ಅವರವರ ಭಾಗವನ್ನು ಆಳಿದರಾದರೂ 1870ರಲ್ಲಿ ತ್ರೋಂಗ್ಸಾ ದೊರೆ ಉಗೈನ್ ವಾಂಗ್‌ಚುಕ್ ಭೂತಾನ್ ಮಧ್ಯಭಾಗದಲ್ಲಿ ಅಧಿಕಾರ ಸ್ಥಾಪಿಸಿದರು. ಬ್ರಿಟೀಷರೊಂದಿಗೆ ಈ ಝೋಂಗ್‌ನಲ್ಲಿ ಒಪ್ಪಂದ ಮಾಡಿಕೊಂಡರು. ಭೂತಾನ್‌ನ ಮೊದಲ ದೊರೆ ಉಗೈನ್ ವಾಂಗ್‌ಚುಕ್ 1907ರಲ್ಲಿ ಪದಗ್ರಹಣ ಮಾಡಿದ್ದು ಕೂಡ ಪುನಾಖಾ ಝೋಂಗ್‌ನಲ್ಲಿಯೇ.

ಹರಿಯುವ ನದಿಯ ಮೇಲೆ ಮರದಲ್ಲಿ ಕಟ್ಟಿರುವ ವಿಶಿಷ್ಟ ಕ್ಯಾಂಟಿಲಿವರ್‌ ಸೇತುವೆಯನ್ನು ದಾಟಿ ಝೋಂಗ್ ಪ್ರವೇಶಿಸಬೇಕು. 17ನೇ ಶತಮಾನದ ಸೇತುವೆ ಒಮ್ಮೆ ಪ್ರವಾಹಕ್ಕೆ ತುತ್ತಾಗಿ ಕೊಚ್ಚಿಹೋಗಿತ್ತು. 2008ರಲ್ಲಿ ಅದೇ ಸಾಂಪ್ರದಾಯಿಕ ಶೈಲಿಯಿಂದ ವಾಂಗ್‌ಚುಕ್ ರಾಜಪ್ರಭುತ್ವದ 100ನೇ ಆಚರಣೆಯ ಪ್ರಯುಕ್ತ ಸೇತುವೆಯ ಪುನರ್‌ ನಿರ್ಮಾಣ ನಡೆಯಿತು. ಸಾಕಷ್ಟು ದೊಡ್ಡದಾದ ಝೋಂಗ್‌ನಲ್ಲಿ ವಿಶಾಲವಾದ ಆವರಣ, ದೊಡ್ಡ ಕಲಾತ್ಮಕ ಕಿಟಕಿಗಳು, ಪ್ರಾರ್ಥನಾ ಚಕ್ರಗಳು, ಮೂರು ನಾಲ್ಕು ಅಂತಸ್ತಿನ ಕಟ್ಟಡಗಳು, ದೊಡ್ಡ ದೊಡ್ಡ ಕೋಣೆಗಳು, ದೇವಸ್ಥಾನಗಳಿವೆ. ಅಲ್ಲಿ ಬೃಹತ್ ಕಟ್ಟಡಗಳ ಮುಂದೆ ಜನರು ಕುಬ್ಜರಂತಿರುತ್ತಾರೆ.

ಒಂದೇ ಒಂದು ಮೊಳೆಯನ್ನೂ ಬಳಸದೆ ಅವನ್ನು ಆ ಕಾಲದಲ್ಲಿ ಕಟ್ಟಿದ ಅವರ ನೈಪುಣ್ಯಕ್ಕೆ ಎಲ್ಲರೂ ಮಾರುಹೋಗುತ್ತಾರೆ. ಹಲವಾರು ಶತಮಾನಗಳ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾದ ಝೋಂಗ್‌ಗೆ ಮಾತು ಬಂದಿದ್ದರೆ ಏನೆಲ್ಲಾ ಹೇಳುತ್ತಿತ್ತೋ! ಪುರಾತನ ಪ್ರಾರ್ಥನಾ ಚಕ್ರಗಳು ತನ್ನನ್ನು ತಾಕಿದವರ ನೋವು ನಲಿವುಗಳ, ಸಂಕಟಗಳ, ದೂರು ದುಮ್ಮಾನಗಳ ಹೇಳುವಂತಿದ್ದರೆ ಇತಿಹಾಸದಲ್ಲಿ ಹುದುಗಿರುವ ನೋವು ನಲಿವುಗಳು ತಿಳಿದುಬರುತ್ತಿತ್ತು. 

ನದಿಯಲ್ಲಿ ರ‍್ಯಾಫ್ಟಿಂಗ್‌
ಮೋಚು ಮತ್ತು ಪೋಚು ನದಿಗಳ ಸಂಗಮದಲ್ಲಿ ಪ್ರವಾಸಿಗರಿಗಾಗಿ ರ್‍ಯಾಫ್ಟಿಂಗ್‌ ಮತ್ತು ಕಯಾಕಿಂಗ್ ಕೂಡ ಇದೆ. ಹಿಮಾಲಯದಿಂದ ಹರಿದು ಬರುವ ಈ ನದಿಗಳು ಹೊರಗೆ ಬಿಸಿಲಿದ್ದರೂ ನದಿಯ ನೀರು ತಣ್ಣಗೆ ಕೊರೆಯುತ್ತಿರುತ್ತವೆ. ಶುಭ್ರತೆಯಿಂದ ಪಾರದರ್ಶಕವಾಗಿ ಕಾಣುವ ನೀರು, ಅಲ್ಲಿನ ಸ್ವಚ್ಛ, ನಿರ್ಮಲ ಪರಿಸರವನ್ನು ಪ್ರತಿನಿಧಿಸುತ್ತದೆ.

ಚಿಮಿ ಲಾಖಾಂಗ್
ಭೂತಾನ್‌ನ ಪ್ರಮುಖ ಸಂತರಲ್ಲಿ ಒಬ್ಬನಾದ ಹದಿನೈದನೇ ಶತಮಾನದಲ್ಲಿದ್ದ ದ್ರುಕ್‌ಪಾ ಕುನ್ಲೆ ತನ್ನ ವಿಶೇಷ ಗುಣಗಳಿಂದಲೇ ಖ್ಯಾತಿ ಪಡೆದಿದ್ದಾನೆ. ಈತನ ತಾಂತ್ರಿಕ ಸಾಧನೆಗಳಿಗಿಂತ ಈತನ ಕುರಿತ ಅಸಂಖ್ಯ ಜನಪ್ರಿಯ ಕತೆಗಳು ಈತನನ್ನು ಅಜರಾಮರನನ್ನಾಗಿಸಿವೆ. ಪುನಾಖಾ ಬಳಿ ಇರುವ ಚಿಮಿ ಲಾಖಾಂಗ್ ಎಂಬ ದೇವಾಲಯ ಈತನಿಗಾಗಿ ನಿರ್ಮಿಸಲಾಗಿದೆ. ಅಲ್ಲಿಗೆ ತಲುಪಲು ಲೊಬೆಸ ಎಂಬ ಹಳ್ಳಿಯ ಮೂಲಕ ಹೋಗಬೇಕು.  ಚಿಮಿ ಲಾಖಾಂಗ್ ಮಂದಿರವನ್ನು ದ್ರುಕ್‌ಪಾ ಕುನ್ಲೆಯ ಸೋದರ ಸಂಬಂಧಿ 1499ರಲ್ಲಿ ಕಟ್ಟಿಸಿದನಂತೆ. ಒಳಗೆ ದ್ರುಕ್‌ಪಾ ಕುನ್ಲೆಯ ವಿಗ್ರಹ ಇದೆ. ಅಲ್ಲಿರುವ ದ್ರುಕ್‌ಪಾ ಕುನ್ಲೆಯ ವಿಗ್ರಹ ಸುಂದರವಾಗಿದೆ.

ಅವನು ಉಪಯೋಗಿಸುತ್ತಿದ್ದ ಎನ್ನುಲಾಗುವ ಬಿಲ್ಲು, ಮರದ ಶಿಶ್ನ, ಮದ್ಯ ತುಂಬಿಸುವ ಮರದ ದಾನಿಗಳೆಲ್ಲ ಮಂದಿರದಲ್ಲಿವೆ. ಇಲ್ಲಿಗೆ ಬಂದವರಿಗೆ ಮರದ ಶಿಶ್ನದಿಂದ ಆಶೀರ್ವಾದ ಮಾಡುತ್ತಾರೆ. ‘ಫಲವತ್ತತೆಯ ದೇವಾಲಯ’ ಎಂದೇ ಈ ಮಂದಿರ ಪ್ರಸಿದ್ಧ. ಮಕ್ಕಳಾಗದವರು ಅಲ್ಲಿ ಬಂದು ಆಶೀರ್ವಾದ ತೆಗೆದುಕೊಂಡರೆ ಮಕ್ಕಳಾಗುತ್ತವೆ ಎನ್ನುವುದು ಪ್ರತೀತಿ. ಬೂಟಾಟಿಕೆ, ಸ್ವಾರ್ಥ ಮತ್ತು ದುರಾಸೆಯಿಂದ ತುಂಬಿದ ಜಗತ್ತಿಗೆ ಬುದ್ಧಿ ಕಲಿಸಲು ಹಲವು ವಿಚಿತ್ರ ನಡವಳಿಕೆಗಳನ್ನು ರೂಢಿಸಿಕೊಂಡಿದ್ದ ದ್ರುಕ್‌ಪಾ ಕುನ್ಲೆ, ಅದ್ಭುತ ಕವಿ ಹಾಗು ಹಾಡುಗಾರನಾಗಿದ್ದ. ಈತನ ಹಾಡುಗಳು ಇಂದಿಗೂ ಭೂತಾನಿನಲ್ಲಿ ಪ್ರಚಲಿತವಿವೆ.

ಹಬ್ಬ–ಉತ್ಸವಗಳು
ಭೂತಾನ್‌ನಲ್ಲಿನ ಹಬ್ಬಗಳ ಆಚರಣೆಗಳು ಬಲು ಪ್ರಸಿದ್ಧ. ವಿದೇಶಿ ಪ್ರವಾಸಿಗರು ಹಬ್ಬಗಳ ದಿನಗಳಲ್ಲಿ ಇಲ್ಲಿಗೆ ಹೆಚ್ಚಾಗಿ ಬರುತ್ತಾರೆ. ಭೂತಾನಿಗರು ಹಬ್ಬಗಳನ್ನು ಸಂತೋಷ ಮತ್ತು ಸಂಭ್ರಮದಿಂದ ಆಚರಿಸುತ್ತಾರೆ. ಸುಗ್ಗಿ ಕಾಲದಲ್ಲಿ ವರ್ಣಮಯ ಉಡುಪು, ಮುಖವಾಡಗಳನ್ನು ಧರಿಸಿ ಹಾಡು ಕುಣಿತಗಳಿಂದ ದೇವರನ್ನು ಆರಾಧಿಸುತ್ತಾರೆ. ನಗರದ ವಿವಿದೆಡೆ ಸಾಂಸ್ಕೃತಿಕ ನೃತ್ಯಗಳನ್ನು ಪ್ರದರ್ಶಿಸುತ್ತಾರೆ. ಭೂತಾನ್‌ನಲ್ಲಿ ಇಪ್ಪತ್ತೆರಡಕ್ಕೂ ಹೆಚ್ಚು ಉತ್ಸವಗಳು ನಡೆಯುತ್ತವೆ. ಪುನಾಖಾ, ಥಿಂಪು, ತ್ರಶಿಗಂಗ್, ಪಾರೋ, ಭೂಮ್‌ತಾಂಗ್, ಮೊಂಗರ್, ತ್ರೋಂಗ್ಸಾ ಮುಂತಾದ ನಗರಗಳ ಝೋಂಗ್ (ಆಡಳಿತ ಕೇಂದ್ರ ಕಚೇರಿಯಿರುವ ಕಟ್ಟಡ)ಗಳಲ್ಲಿ ಉತ್ಸವಗಳನ್ನು ನಡೆಸುತ್ತಾರೆ.

ಆ ದಿನಗಳಲ್ಲಿ ಸರ್ಕಾರಿ ರಜೆಯನ್ನು ನೀಡಲಾಗುತ್ತದೆ. ಆಗೆಲ್ಲಾ ರಸ್ತೆಗಳು ಪ್ರವಾಸಿಗರಿಂದ ತುಂಬಿರುತ್ತದೆ. ಫೆಬ್ರುವರಿ ಅಥವಾ ಮಾರ್ಚ್‌ ತಿಂಗಳಿನಲ್ಲಿ ಸುಮಾರು ಐದು ದಿನಗಳ ಕಾಲ ನಡೆಯುವ ಪುನಾಖಾ ಹಬ್ಬದಲ್ಲಿ ಕೆಲವು ಪ್ರಭಾವಶಾಲಿಯಾದ ಪ್ರದರ್ಶನಗಳನ್ನು ನಡೆಸುತ್ತಾರೆ. 1639ರಲ್ಲಿ ಭೂತಾನ್‌ ಮೇಲೆ ಟಿಬೆಟಿಯನ್ನರು ಆಕ್ರಮಣ ಮಾಡಿದಾಗ ಚಾಕಚಕ್ಯತೆಯಿಂದ ಹಿಮ್ಮೆಟ್ಟಿಸಿದ ಹಾಗೂ ಸೋಲಿಸಿದ ರೀತಿಯನ್ನು ಪ್ರಮುಖ ಪ್ರದರ್ಶನವಾಗಿ ಪುನರ್ ಅಭಿನಯಿಸುತ್ತಾರೆ. ಧಾರ್ಮಿಕ ಮುಖವಾಡ ನೃತ್ಯ, ಧಾರ್ಮಿಕ ನೃತ್ಯ, ಮುಖವಾಡ ಹಾಕದ ನೃತ್ಯ ಮುಂತಾದ ಹಲವು ಜಾನಪದ ನೃತ್ಯ ಪ್ರಕಾರಗಳು ಆಕರ್ಷಕವಾಗಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT