ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿದ್ರಾದೇವಿಯ ಮಡಿಲಲ್ಲಿ...

Last Updated 19 ಜನವರಿ 2016, 19:32 IST
ಅಕ್ಷರ ಗಾತ್ರ

‘ನಮ್ಮ ಮಗನಿಗೆ ಓದೋದ್ರಲ್ಲಿ ತುಂಬಾ ಇಂಟರೆಸ್ಟ್. ರಾತ್ರಿಯೆಲ್ಲಾ ಓದ್ತಾನೆ. ಬೆಳಿಗ್ಗೆ 9 ಗಂಟೆಗೆ ಏಳೋದು. ಏನಾದ್ರೂ ಮಾಡಲಿ, ಮಾರ್ಕ್ಸ್ ತೆಗೆಯೋದು ಮುಖ್ಯ ತಾನೆ !’

‘ಈಗಿನ ಮಕ್ಕಳಿಗೆ 7 ಗಂಟೆಗೆ ಶಾಲೆ ಬಸ್ಸು ಬರುತ್ತೇಂದ್ರೆ ಇವರು ಎದ್ದು ರೆಡಿಯಾಗಬೇಕಾದ್ದು 6 ಗಂಟೆಗೆ. ಇನ್ನು ಶನಿವಾರ-ಭಾನುವಾರ. ಲೇಟಾಗಿ ಮಲಗುವ, ಸೋಮಾರಿ ನಿದ್ದೆ ಮಾಡಿ ಲೇಟಾಗಿ ಏಳುತ್ತಾರೆ. ಅದಕ್ಕೇ ಈ ಮಕ್ಕಳಿಗೆ ಒಂಥರಾ ಕಿರಿಕಿರಿ ಯಾವಾಗಲೂ !’.

“ನಾನು ದೊಡ್ಡ ಕಂಪೆನಿಯೊಂದರ ಸಿ.ಇ.ಒ. ನನ್ನ ಕೆಲಸ ಅಂದ್ರೆ ನನಗೆ ತುಂಬಾ ಪ್ರೀತಿ. ಅದಕ್ಕೇ ನಾನು ಇವತ್ತು ಈ ಉನ್ನತ ಸ್ಥಾನ ತಲುಪಿರೋದು. ದುಡ್ಡು-ಹೆಸರು-ಸೌಲಭ್ಯ-ನಾನು ಪ್ರೀತಿಸೋ ಜವಾಬ್ದಾರಿಗಳು ಎಲ್ಲವೂ ಇದೆ. ಕಣ್ಣು ತುಂಬಾ ನಿದ್ದೆ ಬಂದರೂ ಮಾಡಲು ಸಮಯವಿರದಷ್ಟು, ಡೆಡ್ ಲೈನ್‌ಗಳನ್ನು ನಾನು ಪೂರೈಸಲೇಬೇಕೆಂಬ ಹಂಬಲ. ಆರೋಗ್ಯದ ಬಗೆಗೆ ಓದಿದಾಗಲೆಲ್ಲ ನಾನು ಅಂದುಕೊಳ್ಳುವುದು ಈ ಮಹತ್ವಾಕಾಂಕ್ಷೆಯನ್ನು ಸ್ವಲ್ಪ ಕಡಿಮೆ ಮಾಡ್ಕೊಂಡು ಸರಿಯಾಗಿ 7-8 ಗಂಟೆಗಳ ನಿದ್ದೆ ಮಾಡಬೇಕು ಅಂತ!  ಆದರೆ ಏನಾದ್ರೂ ಕೆಲಸ ಬಂದು ಹಾಗೆ ಮಾಡೋಕೇ ಆಗಲ್ವೇ?!”

‘ನಿದ್ರೆ’ಯನ್ನು ನಿಯಂತ್ರಿಸುವ ಜೀನ್ (ವಂಶವಾಹಿ)ಯನ್ನು ಕಂಡುಹಿಡಿಯಲು ವಿಜ್ಞಾನಿಗಳು ಪ್ರಯತ್ನ ಮಾಡಿ, ಭಾಗಶಃ ಯಶಸ್ವಿಯೂ ಆಗಿದ್ದಾರೆ. ಆದರೆ ಮನುಷ್ಯನ ಮೂಲ ಅವಶ್ಯಕತೆಗಳಲ್ಲಿ ಒಂದಾದ ನಿದ್ರೆ. ನಮಗೆಲ್ಲರಿಗೂ ತುಂಬಾ ಪ್ರಿಯವಾದದ್ದು. ನಿದ್ರೆ ಬರದಿದ್ದಾಗ, ಕಳವಳಗೊಂಡು ಹೇಗಾದರೂ ನಿದ್ರೆಯನ್ನು ಮರಳಿ ಪಡೆಯುವ ಸಾಹಸಕ್ಕೆ ತೊಡಗುವವರು ಬಹಳಷ್ಟು.

ಬಹಳ ವರ್ಷಗಳ ಹಿಂದೆ ನಮ್ಮ ಮಿದುಳು ‘ನಿದ್ರೆ’ ಮಾಡುವುದರ ಮೂಲಕ ವಿಶ್ರಾಂತಿ ಪಡೆಯುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಮಿದುಳಿನ ಕೆಲವು ಭಾಗಗಳು ನಿದ್ರೆಯಲ್ಲಿಯೂ ಚಟುವಟಿಕೆಯಲ್ಲಿ ಇರುತ್ತವೆ ಎಂಬುದರಿಂದ ‘ನಿದ್ರೆ’ ಮಿದುಳಿನ ವಿಶ್ರಾಂತಿಯ ಬದಲು ‘ದೇಹ’ದ ವಿಶ್ರಾಂತಿ ಎಂದು ನಿರೂಪಿತವಾಯಿತು. ‘ನಿದ್ರೆ’ಯಿಲ್ಲದ ಪ್ರಾಣಿಗಳನ್ನು ಪರೀಕ್ಷಿಸಿದಾಗ ಕಂಡುಬಂದ ಅಂಶ ಉಷ್ಣತೆಯ ಏರುಪೇರು ಮತ್ತು ವಿವಿಧ ಅಂಗಾಂಗಗಳ ವೈಫಲ್ಯ.

ನಾವು ನಿದ್ದೆ ಮಾಡುವ ಸಮಯವನ್ನು ನಿರ್ಧರಿಸುವುದು ನಮ್ಮ ದೇಹದ ಗಡಿಯಾರ. ಇದನ್ನು ಸೆಟ್ ಮಾಡುವುದನ್ನು ‘ಸೂಪ್ರಾಕೈಯಾಸ್ಮಾಟಿಕ್ ನ್ಯೂಕ್ಲಿಯಸ್’ ಎನ್ನುವ ಒಂದು ಭಾಗ. ಇದು ನಮ್ಮ ದೇಹದ ಗಡಿಯಾರವನ್ನು ನಿಗದಿ ಮಾಡುವುದು ಸೂರ್ಯನ ಬೆಳಕಿನ ಮೇಲೆ. ಅದರ ಜೊತೆಗೆ ಸಾಮಾಜಿಕ ರೀತಿ-ನೀತಿ (ಊಟ, ತಿಂಡಿ, ಚಟುವಟಿಕೆಗಳು) ಇವು ಪ್ರಮುಖ ಪಾತ್ರ ವಹಿಸುತ್ತವೆ.

ಈ ಸೂಪ್ರಾಕೈಯಾಸ್ಮಾಟಿಕ್ ನ್ಯೂಕ್ಲಿಯಸ್ ‘ನಿದ್ರೆ’ ಯೊಂದಿಗೆ ದೇಹದ ಉಷ್ಣತೆ, ‘ಕಾರ್ಟಿಸಾಲ್’ ಮತ್ತು ಬೆಳವಣಿಗೆಯ ರಸದೂತಗಳು ಈ ಎಲ್ಲವನ್ನೂ ನಿಯಂತ್ರಿಸುತ್ತದೆ. ಈಗಷ್ಟೇ ಹುಟ್ಟಿದ ಶಿಶುಗಳು 18 ಗಂಟೆಗಳವರೆಗೆ ನಿದ್ರಿಸಿದರೆ, ಮಕ್ಕಳು ಹತ್ತು ಗಂಟೆ, ಹದಿಹರೆಯದ ಮಕ್ಕಳು 9ಗಂಟೆ, ಹಿರಿಯರಲ್ಲಿ 8 ಗಂಟೆ ಕಾಲ ನಿದ್ರೆಯ ಅಗತ್ಯವಿದೆ.

ವಿವಿಧ ಕಾಯಿಲೆಗಳ ಭಾಗವಾಗಿ ನಿದ್ರೆ ಕೆಡಬಹುದಾದರೂ, ನಮ್ಮ ಗಮನ ಮೊದಲು ಸಹಜವಾಗಿ  ನಿದ್ದೆ ಬಂದಾಗಲೂ ನಿದ್ದೆಗೆಡುವ ಇಂದಿನ ಆಧುನಿಕ  ಜೀವನದ ರೀತಿ-ನೀತಿಗಳ  ಬಗ್ಗೆ. ಈ ಲೇಖನದ ಮೊದಲಲ್ಲಿ ಬಂದ ಉದಾಹರಣೆಗಳು ‘ನಿದ್ರಾಹೀನತೆ’ ಎನ್ನುವುದಕ್ಕಿಂತ ನಿದ್ರೆ ಬರುತ್ತಿದ್ದರೂ, ಸಮಯವಿರದೆ ನಿದ್ರೆ ಮಾಡದಿರುವುದರ ಬಗ್ಗೆ ನಿರೂಪಿಸುತ್ತವೆ.

ನಾವು 90 ವರ್ಷಗಳ ಕಾಲ ಜೀವಿಸುತ್ತೇವೆ ಎಂದುಕೊಳ್ಳಿ. ನಮ್ಮ 32 ವರ್ಷ ನಿದ್ರೆಯಲ್ಲಿ ಕಳೆಯುತ್ತದೆ. ಈ ನಿದ್ರೆಯಲ್ಲಿ 6 ರಿಂದ 7 ವರ್ಷ ನಾವು ಕಳೆಯುವುದು  REM ನಿದ್ದೆಯಲ್ಲಿ. ಏನಿದು REM ನಿದ್ರೆ? ಶೀಘ್ರ ಕಣ್ಣಿನ  ಚಲನೆಗಳ ನಿದ್ರೆ -  Rapid eye movement sleep. ಇದರಲ್ಲಿ ನಮ್ಮ ಕೈಕಾಲು ಮಾತ್ರ ಚಲಿಸುತ್ತಿರುವುದಿಲ್ಲ. ಬಿಟ್ಟರೆ ಬೇರೆ ಎಲ್ಲವೂ ನಾವು ಮಾಡುತ್ತಿರುವಂತೆಯೇ ಭಾಸವಾಗುವ ಸ್ಥಿತಿ ಇದು.

ಈ ಸ್ಥಿತಿಯಲ್ಲಿ ಬೀಳುವ ಕನಸುಗಳ ಕೆಲಸ ಏನು? ‘ಸುಪ್ತ ಮನಸ್ಸಿನ ರಾಜಮಾರ್ಗ’ ಎಂಬಲ್ಲಿಂದ ಇಂದು ಕನಸುಗಳ ವಿಶ್ಲೇಷಣೆ ನರವಿಜ್ಞಾನದ ಬಾಗಿಲಿಗೆ ಬಂದು ನಿಂತಿದೆ. ಕನಸುಗಳ ಮುಖಾಂತರ ಮಿದುಳಿನಲ್ಲಿ ನಡೆಯುವ ಸಂಕೀರ್ಣ ನರವಾಹಕಗಳ ಬಿಡುಗಡೆ ನಮ್ಮ ಸೃಜನಶೀಲತೆಗೆ ಕಾರಣ.

ಅಂದರೆ ಕ್ರಿಯಾಶೀಲವಾಗಿ ನಾವು ದಿನನಿತ್ಯದ ಸಮಸ್ಯೆ ಬಿಡಿಸುವ ಅಥವಾ ಕಥೆ-ಕಾದಂಬರಿ ರಚಿಸುವಂಥ ಕೆಲಸಕ್ಕೆ ತೊಡಗಬೇಕೆಂದರೆ ಈ ನಿದ್ರೆ -ಕನಸು  ಎರಡೂ ಮುಖ್ಯ. ಹೊಸ ಹೊಸ ಯೋಚನೆಗಳು, ಹೊಸದಾರಿ, ಸಮಸ್ಯೆ ಬದಲಾದೊಡನೆ ಸಂದರ್ಭಕ್ಕೆ ತಕ್ಕಂತೆ ನಮ್ಮನ್ನು ಬದಲಿಸಿಕೊಳ್ಳುವ ಸಾಮರ್ಥ್ಯ ಇವುಗಳಿಗೆಲ್ಲ ಈ ನಿದ್ರೆ-ಕನಸು ಎರಡೂ ಕಾರಣವಾಗುತ್ತವೆ.

ಕೆಲವರು ಹೇಳುವಂತೆ ‘ಅಯ್ಯೋ!  ನಮಗೆ ನಿದ್ರೆಯಲ್ಲಿ ಬೀಳೋ ಕನಸು ನೆನಪಿರೋದೇ ಇಲ್ಲ’ ಎಂದು ಚಿಂತಿಸಬೇಕಿಲ್ಲ. ನೆನಪಿರದಿದ್ದರೂ ಕೆಟ್ಟ/ಒಳ್ಳೆಯ, ನೆನಪಿರದ /ಅರ್ಥವಾಗದ ಯಾವುದೇ ಕನಸು ಒಂದು ರೀತಿಯ ಶಕ್ತಿಯನ್ನು ನಮ್ಮ ಯೋಚನೆಗಳಿಗೆ ತುಂಬುತ್ತದೆ.

ವಿದ್ಯಾರ್ಥಿಗಳಂತೂ ನಿದ್ರೆ ಬಂದರೆ ನಾವು ಓದುವುದಾದರೂ ಹೇಗೆ? ಎಂದು ಪೇಚಾಡುವುದು ಸಾಮಾನ್ಯ. ‘ನಿದ್ರೆ’ ಬಂದರೆ ನಮ್ಮ ಶತ್ರುವಿನ ರೀತಿ ಒಂದು ಕಾಯಿಲೆಯ ತರಹ ನೋಡುವುದು ಇಂದು ಸಾಮಾನ್ಯ. ಹಿರಿಯರಾದರೂ ಅಷ್ಟೇ. ನಿದ್ದೆ ಮಾಡುವುದೆಂದರೆ ಸಮಯ ವ್ಯರ್ಥವಾದಂತೆಯೇ ಎಂದು ಭಾವಿಸುತ್ತಾರೆ. ತಮ್ಮ ಮಗ/ಮಗಳು ರಾತ್ರಿಯಿಡೀ ಓದಿದಷ್ಟೂ ಹಿಗ್ಗುತ್ತಾರೆ!

ಆದರೆ ನಿದ್ರೆಯ ಬಗೆಗಿನ ಅಧ್ಯಯನಗಳು ಮೂರು ಮುಖ್ಯ ಅಂಶಗಳನ್ನು ನಿರೂಪಿಸಿವೆ. ಮೊದಲನೆಯದು ನಮ್ಮ ವ್ಯಯವಾದ ಬೌದ್ಧಿಕ ಸಾಮರ್ಥ್ಯ-ಏಕಾಗ್ರತೆ-ದಣಿವು ಇವೆಲ್ಲವನ್ನೂ ನಿದ್ರೆ ಮತ್ತೆ ಸಹಜತೆಗೆ ಮರಳುವಂತೆ ಮಾಡುತ್ತದೆ. ಎರಡನೆಯದು ಸಂಗ್ರಹಿಸಿರುವ ಮಾಹಿತಿಯನ್ನೆಲ್ಲಾ ನೆನಪಿನ ಕೋಶಗಳಲ್ಲಿ ವ್ಯವಸ್ಥಿತವಾಗಿ ಕೂಡಿಡುವ -ಜೋಡಿಸುವ ಕಾರ್ಯವನ್ನು ನಿದ್ರೆಯ ಮೂಲಕ ಮಿದುಳು ಮಾಡುತ್ತದೆ.

ಅಂದರೆ ನೀವು ಎಷ್ಟೇ ಓದಿರಬಹುದು, ಅದನ್ನು ವ್ಯವಸ್ಥಿತವಾಗಿ ನೆನಪಿಡಬೇಕೆಂದರೆ, ಹೊಸ ಹೊಸ ರೀತಿಯಲ್ಲಿ ಅದನ್ನು ಉಪಯೋಗಿಸಬೇಕೆಂದರೆ ನಿದ್ರೆ ಮಾಡಲೇಬೇಕು!  ಅಷ್ಟೇ ಅಲ್ಲ, ಯಾವುದು ಮುಖ್ಯವಲ್ಲ ಅದನ್ನು ಮರೆಯುವ ಕೆಲಸವು ನಡೆಯುವುದೂ ನಿದ್ರೆಯಲ್ಲಿಯೇ. ಇವೆರಡೂ ನಡೆಯುವುದು ನರಕೋಶಗಳ ನಡುವಣ ಏರ್ಪಡುವ ಕೊಂಡಿಯಿಂದ. ಮೂರನೆಯದು ದೇಹದ ಚಟುವಟಿಕೆಗಳಿಗೆ ವ್ಯಯವಾಗುವ ಶಕ್ತಿ ಉಳಿಸುವುದು ನಿದ್ರೆಯಲ್ಲಿ ನಡೆಯುವ ಇನ್ನೊಂದು ಕೆಲಸ, ಸೆರೆಬ್ರೋಸ್ಪೈನಲ್ ಫ್ಲೂಯಿಡ್(CSF)  ಎಂಬ ದ್ರವ ಮಿದುಳಿನಲ್ಲಿ ಶೇಖರವಾಗುವ ತ್ಯಾಜ್ಯ ವಸ್ತುಗಳನ್ನು ಸ್ವಚ್ಛ ಮಾಡುವುದು.

ಅಂದರೆ ಈ ಸ್ವಚ್ಛತೆಯ ಕಾರ್ಯವಾಗದಿದ್ದರೆ, ನಮ್ಮ ಮಿದುಳಿನ ತುಂಬಾ ‘ಬೀಟಾ ಅಮೈಲಾಯಿಡ್’ ಎಂಬ ಕಸ.  ಈ ಕಸದ ಶೇಖರಣೆ ಹೆಚ್ಚಾದರೆ ಅದು ಮುಂದುವರಿಯುವುದು ಮರೆವಿನ ಮುಪ್ಪು ಕಾಯಿಲೆಗೆ. ಮಿದುಳಿನ ‘ಹೌಸ್ ಕೀಪಿಂಗ್’ ಕಾರ್ಯ ನಿದ್ರೆಯಲ್ಲಿ ಮಾತ್ರ ನಡೆಯುವುದರಿಂದ, ‘ನಿದ್ರಾಹೀನತೆ’ ಹಲವು ವಿಧದ ಮಿದುಳು - ಮನಸ್ಸುಗಳ ಕಾಯಿಲೆಗೂ ಕಾರಣವಾಗುತ್ತದೆ.

ಮಿದುಳು ‘ಕಿರುನಿದ್ರೆ’-Micro sleeps ಎಂಬ ನಿದ್ರೆಯನ್ನೂ ಮಾಡುತ್ತದೆ. ಇದರ ಮೇಲೆ ನಮ್ಮ ನಿಯಂತ್ರಣ ಕಡಿಮೆ. ವಾಹನ ಚಾಲಕರಲ್ಲಿ, ಬೇಸರದಿಂದ ಪಾಠ ಕೇಳುವವರಲ್ಲಿ ಕಂಡು ಬರುವ ನಿದ್ರೆ ಇದು. ಅಪಘಾತಗಳಿಗೆ ಕಾರಣವಾಗುವುದೂ ಇದೇ. ರಾತ್ರಿ ಸರಿಯಾಗಿ ನಿದ್ರೆ ಮಾಡುವವರಲ್ಲಿ ಇದರ ಪ್ರಮಾಣ ಕಡಿಮೆ. 

ಹಾಗೆಯೇ ಹೆಚ್ಚಿನ ವಿದ್ಯಾರ್ಥಿಗಳು-ಚಾಲಕರು ಉಪಯೋಗಿಸುವ ಟೀ-ಕಾಫಿ-ಸಿಗರೇಟು ಇತ್ಯಾದಿ ನಿದ್ದೆ ಕೆಡಿಸುವುದರೊಂದಿಗೇ, ನೆನಪು - ನಿರ್ಣಾಯಕ ಸಾಮರ್ಥ್ಯಗಳನ್ನು ಕೆಡಿಸುತ್ತವೆ.  ನಿದ್ರೆ ಬಾರದಿದ್ದರೆ ಮದ್ಯಪಾನದ ಮೊರೆ ಹೋಗುವವರಿಗೆ ಮದ್ಯ ನಿದ್ರೆಯ ಬದಲು ‘ಮತ್ತು’ ಬರಿಸುತ್ತದೆ.  ‘ನಿದ್ರೆ’ಯ ಬೇರೆಲ್ಲಾ ಉಪಯೋಗಗಳನ್ನೂ ಹಾಳು ಮಾಡುತ್ತದೆ.
*
ಮಲಗುವ ಕೋಣೆ ಪ್ರಶಾಂತವಾಗಿರಲಿ
ನಿದ್ರೆ ಮಾಡದಿರುವುದರಿಂದ ತೂಕ ಏರುತ್ತದೆ. ಹೇಗೆ? ನಿದ್ರಾಹೀನತೆ ‘ಗ್ರೆಲಿನ್’ ಅನ್ನುವ ಹಾರ್ಮೋನ್ ಸ್ರವಿಸಲು ಕಾರಣ.  ಈ ಗ್ರೆಲಿನ್’ ಮಿದುಳಿಗೆ ಸಕ್ಕರೆಯಿರುವ ಆಹಾರಕ್ಕೆ ಪ್ರಚೋದನೆ ನೀಡುತ್ತದೆ.  ನಿದ್ರಾಹೀನತೆ - ತಿನ್ನುವಿಕೆ ಹೆಚ್ಚೆವುದು - ಬೊಜ್ಜು- ಸಕ್ಕರೆ ಕಾಯಿಲೆ / ರಕ್ತದೊತ್ತಡ ಪಟ್ಟಿ ಮುಂದುವರಿಯುತ್ತಾ ಸಾಗುತ್ತದೆ. ಇವೆಲ್ಲವೂ ವೈಜ್ಞಾನಿಕವಾಗಿ ಬಲವಾಗಿಯೇ ಸಿದ್ಧವಾದ ಅಂಶಗಳು. 

ಹಾಗಿದ್ದರೆ ನಾವು ಮಾಡುತ್ತಿರುವ ನಿದ್ದೆಯ ಪ್ರಮಾಣ-ಗುಣಮಟ್ಟ ಸರಿಯಾಗಿದೆ ಎಂದು ಗೊತ್ತಾಗುವುದು ಹೇಗೆ? ಅದು ಕಷ್ಟವೇನಲ್ಲ. ಬೆಳಿಗ್ಗೆ ನಿದ್ರೆಯಿಂದ ಏಳಲು ಅಲಾರಾಂ ನಿಮಗೆ ಅಗತ್ಯವಿದ್ದರೆ, ಏಳಲು ತುಂಬಾ ಸಮಯ ತೆಗೆದುಕೊಂಡರೆ, ಎಚ್ಚರವಿರಲು ನಿಮಗೆ ಕಾಫಿ/ಟೀ ಬೇಕಾದರೆ, ಯಾವಾಗಲೂ ಕಿರಿಕಿರಿ ಹೊಂದುತ್ತಿದ್ದರೆ, ಬೇರೆಯವರೊಂದಿಗೆ ಸದಾ ಸಿಟ್ಟಾಗುತ್ತಿದ್ದರೆ ನಿಮ್ಮ ನಿದ್ರೆ ನಿಮಗೆ ಸಾಕಾಗುತ್ತಿಲ್ಲ ಎಂಬ ಸಾಧ್ಯತೆ ಹೆಚ್ಚು.

ಮೊದಲು ನಿಮ್ಮ ಮಲಗುವ ಕೋಣೆಯನ್ನು ಪ್ರಶಾಂತವಾಗಿರಿಸಿ, ಕತ್ತಲೆ ಮಾಡಿ, ಸ್ವಲ್ಪ ತಣ್ಣಗಿರಿಸಿ.  ಮೊಬೈಲ್ ಸ್ವಿಚ್ ಆಫ್ ಮಾಡಿ, ಕಂಪ್ಯೂಟರ್ ಆರಿಸಿ, ನಿಮ್ಮ ಮಿದುಳನ್ನು ಪ್ರಚೋದಿಸುವ ಎಲ್ಲವನ್ನೂ ದೂರವಿರಿಸಿ. ಬೆಳಕನ್ನು ನಿದ್ರೆ ಮಾಡುವಾಗ ದೂರವಿರಿಸಿದಂತೆಯೇ, ದೇಹದ ಗಡಿಯಾರಕ್ಕೆ ಎಚ್ಚರವಾಗಲೂ ಮುಂಜಾನೆಯ ಬೆಳಕು ಅಗತ್ಯ.  ದೇಹದ ಗಡಿಯಾರಕ್ಕೆ ಕಿವಿಗೊಟ್ಟು ಕೇಳಿ.

ಸಮಾಜ ತನ್ನ ಕನಸುಗಳನ್ನು ಕಳೆದುಕೊಳ್ಳುತ್ತಿರುವ ಸಮಯ ಇದು.  ಅಲಾರಾಂಗಳಿಂದ, ಅತೀ ಕೆಲಸದಿಂದ, ನಮ್ಮ ಕನಸುಗಳನ್ನು ಕಳೆದುಕೊಳ್ಳ ದಿರೋಣ.  ಪ್ರತಿ ಅಲಾರಾಂಗೆ ಗಡಬಡಿಸಿ ಏಳುವಾಗ ನಿದ್ರೆಯನ್ನು ಗಂಭೀರವಾಗಿ ಪರಿಗಣಿಸಿ, ಗೌರವ ನೀಡೋಣ. ಆರೋಗ್ಯಕ್ಕಾಗಿ, ಬೊಜ್ಜಿಲ್ಲದ ತೆಳು ಕಾಯಕ್ಕಾಗಿ, ಪ್ರಸನ್ನತೆಗಾಗಿ, ಬುದ್ಧಿವಂತಿಕೆಗಾಗಿ, ಜೀವನದಲ್ಲಿ ಎತ್ತರಕ್ಕೇರಲು.... ನಿದ್ರೆ ಮಾಡೋಣ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT