ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿದ್ರೆ ಎಂಬ ಘನಘೋರ ಪಿಡಿದು ಪೀಡಿಸೆ...

Last Updated 28 ಮಾರ್ಚ್ 2015, 5:26 IST
ಅಕ್ಷರ ಗಾತ್ರ

ಬಸ್, ಆಟೊ, ಕಾರು, ರೈಲು, ಕೊನೆಗೆ ವಿಮಾನದ ಪ್ರಯಾಣದಲ್ಲೂ ತೂಕಡಿಸಿ, ಆಕಳಿಸದವರು ವಿರಳ. ಬಸ್ ನಿಲ್ದಾಣದಲ್ಲೊಂದಷ್ಟು ನಿಮಿಷ ಸಮಯ ಸಿಕ್ಕರೆ ನಿದಿರಾದೇವಿ ಅಲ್ಲೇ  ಆಲಂಗಿಸುತ್ತಾಳೆ. ಬಸ್‌ನಲ್ಲಿ ಸೀಟು ಸಿಕ್ಕರಂತೂ ಅವಳಿಗೆ ಇನ್ನೂ ಖುಷಿ; ಬಿಗಿದಪ್ಪಿ ಸೆಳೆದು ಕೆಲವೊಮ್ಮೆ ಇಳಿಯಬೇಕಾದ ನಿಲ್ದಾಣದಿಂದ ಎಷ್ಟೋ ಕಿ.ಮೀ ದೂರಕ್ಕೂ ಹೋಗುವಂತೆ ಮಾಡುತ್ತಾಳೆ ಅವಳು.

‘ದಿನಕ್ಕೆ ಎಂಟು ಗಂಟೆ ನಿದ್ದೆಮಾಡಬೇಕು. ಇಲ್ಲವಾದರೆ ಕನಿಷ್ಠ ಆರು ಗಂಟೆಯಾದರೂ ನಿದ್ದೆಮಾಡಲೇಬೇಕು’ ಎನ್ನುತ್ತಾರೆ ವೈದ್ಯರು. ಆದರೆ, ‘ದಿನದಲ್ಲೇ ಎಂಟು ಗಂಟೆ ನಿದ್ದೆಮಾಡಿದರೆ ರಾತ್ರಿ ಎಷ್ಟು ಗಂಟೆ ನಿದ್ದೆಮಾಡಬೇಕು?’ ಎಂದೂ ಕೆಲವರು ತಲೆಕೆಡಿಸಿಕೊಂಡು ತೂಕಡಿಕೆಗೆ ಜಾರುತ್ತಾರೆ! ನಿದ್ರೆಯ ಶಕ್ತಿಯೇ ಅಂಥದ್ದು. ನೀವು ವೇದಿಕೆಯಲ್ಲೇ ಕುಳಿತಿರಿ, ಬಸ್‌ನ ತಳ್ಳಾಟದಲ್ಲಿ ನಲುಗುತ್ತಾ ನಿಂತಿರಿ, ತರಗತಿಯಲ್ಲಿ ಡೆಸ್ಕಿನ ಮೇಲೆ ಕೈಯೂರಿ ಕುಳಿತಿರಿ; ಒಂದರೆ ಕ್ಷಣ ನಿಮ್ಮ ಕಣ್ಣು ರೆಪ್ಪೆಗಳೆರಡು ಕೂಡಿದರೆ ಸಾಕು, ನಿದ್ದೆಬಂದು ಅವುಚಿಕೊಳ್ಳುತ್ತದೆ.

ಮಹಾನ್ ಸಾಧಕರು, ಮೇಧಾವಿಗಳು, ಸಾಮ್ರಾಟರು ನಿದ್ದೆಮಾಡುತ್ತಿದ್ದ ಅವಧಿ ಕಡಿಮೆ ಎನ್ನುತ್ತದೆ ಇತಿಹಾಸ. ಸಾಧಕರ ಮಾತು ಒತ್ತಟ್ಟಿಗಿರಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತಲೆಕೆಡಿಸಿಕೊಂಡು ಓದಲು ಕುಳಿತ ಅದೆಷ್ಟೋ ಹುಡುಗ - ಹುಡುಗಿಯರಿಗೆ ನಿದ್ದೆಹತ್ತಿರವೂ ಸುಳಿಯುವುದಿಲ್ಲ. ಆದರೆ, ಕೆಲವೊಂದಷ್ಟು ಚತುರ - ಚತುರೆಯರು 9- 10 ಗಂಟೆ ನಿದ್ದೆಮಾಡಿಯೂ ತಣ್ಣಗೆ ಪರೀಕ್ಷೆ ಬರೆದು ನಿದ್ದೆಇಲ್ಲದೆ ಓದಿದವರಿಗಿಂತ ಹೆಚ್ಚಿನ ಅಂಕ ಗಳಿಸಿದ ಉದಾಹರಣೆಗಳೂ ಇಲ್ಲದೇ ಇಲ್ಲ.

ಪರೀಕ್ಷೆಗೆ ಓದುವ ವಿದ್ಯಾರ್ಥಿಗಳು ನಿದ್ರೆಗೆಟ್ಟು ಓದುವುದಕ್ಕಿಂತ, ಓದಿನ ನಂತರ ಸಾಕಷ್ಟು ನಿದ್ದೆಮಾಡುವುದು ಕೂಡ ಅಗತ್ಯ. ಇಲ್ಲದೆ ಹೋದರೆ ವಿಶ್ರಾಂತಿ ಇಲ್ಲದ ಓದಿನಿಂದ ಮರೆವು ಹೆಚ್ಚಾಗಿ ಪರೀಕ್ಷಾ ಕೊಠಡಿಯಲ್ಲಿ ಓದಿದ್ದೂ ನೆನಪಿಗೆ ಬಾರದೆ ಕೈಕೊಡುವುದೂ ಉಂಟು. ಅಥವಾ ಅದು ತಾನಪ್ಪಲು ಬಂದಾಗ ಟೀ, ನೀರು ಕುಡಿದು ತನ್ನನ್ನು ದೂರ ಓಡಿಸಿದ ಕಾರಣಕ್ಕೆ ನಿದ್ರಾದೇವಿ ಕೊಟ್ಟ ಶಾಪವೂ ಆಗಿರಬಹುದು!

ಕಾಲೇಜಿನ ತರಗತಿಗಳಲ್ಲಿ ಪಾಠ ಬೋರಾದರೆ ತೂಕಡಿಕೆ ಸಾಮಾನ್ಯ. ಕೆಲ ಉಪನ್ಯಾಸಕರು ಕೈಯಲ್ಲಿರುವ ಸೀಮೆಸುಣ್ಣವನ್ನು ಇಷ್ಟಿಷ್ಟೇ ಮುರಿದು ತೂಕಡಿಸುವವರ ಮೇಲೆ ತೂರುವುದು; ಆ ತೂಕಡಿಸುವ ವಿದ್ಯಾರ್ಥಿ ಗಾಬರಿಯಲ್ಲಿ ಎದ್ದರೆ ಬಬ್ರುವಾಹನ ಅರ್ಜುನನಿಗೆ ಬಾಣ ಬಿಟ್ಟು ಅವನ ತಲೆ ಉರುಳಿಸಿದಂತೆ ಬೀಗುವುದು ಹಿಂದಿನಂತೆ ಈಗಲೂ ಮುಂದುವರಿದ ಪರಾಕ್ರಮವೇ. ಆದರೆ, ತರಗತಿಯಲ್ಲಿ ಕಣ್ಣು ಬಿಟ್ಟುಕೊಂಡೇ ನಿದ್ರಾಂಗನೆಯನ್ನು ಅಪ್ಪಿಕೊಳ್ಳುವ ಚತುರರಿಗೆ ಇಂಥ ಉಪನ್ಯಾಸಕರ ಸೀಮೆಸುಣ್ಣದ ಪಾಶುಪತಾಸ್ತ್ರ ಕೆಲಸಕ್ಕೆ ಬರುವುದಿಲ್ಲ.

ವೇಗದ ಜೀವನದಲ್ಲಿ, ಒತ್ತಡದ ಕೆಲಸದಲ್ಲಿ ನಿದ್ರೆಗೆ ಬರಬಂದಿರುವುದು ನಿಜ. ಬೆಳಿಗ್ಗೆ ಬೇಗ ಮನೆ ಬಿಟ್ಟು ಸಂಜೆ ತಡವಾಗಿ ಮನೆ ಸೇರುವವರಿಗೆ ಸಿಕ್ಕಸಿಕ್ಕಲ್ಲಿ ಸಣ್ಣ ನಿದ್ದೆಮಾಡುವುದು ಅನಿವಾರ್ಯ. ಪ್ರಯಾಣದಲ್ಲಿ ಕೋಳಿನಿದ್ದೆಮಾಡಿ ತಮ್ಮ ನಿಲ್ದಾಣದಲ್ಲಿ ಇಳಿಯುವ ಹೊತ್ತಿಗೆ ಮೊಬೈಲ್, ಪರ್ಸ್, ಬ್ಯಾಗ್ ಎಲ್ಲಾ ಜೋಪಾನವಾಗಿದೆಯೇ ಎಂದು ಪರೀಕ್ಷಿಸಿಕೊಳ್ಳುವವರಿಗೆ ರಾತ್ರಿಯ ನಿದ್ರೆಯಲ್ಲೂ ಜೇಬು ತಡಕುವುದು ಅಭ್ಯಾಸವಾಗಿ ಬಿಟ್ಟಿರುತ್ತದೆ.

ಇನ್ನು ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡುವವರ ಕಷ್ಟ ಹೇಳತೀರದು. ಜಗವೆಲ್ಲ ಮಲಗಿರಲು ಇವರು ಎದ್ದು ಲೋಕೋದ್ಧಾರಕ್ಕಾಗಿ ಕೆಲಸ ಮಾಡುವುದು, ಜಗವೆಲ್ಲಾ ಏಳುವ ಹೊತ್ತಿಗೆ ಮನೆಗೆ ಬಂದು ಹಾಸಿಗೆಗೆ ಬೀಳುವುದು, ತಿಂಡಿಗೆಂದು ಎದ್ದರೆ ಮತ್ತೆ ನಿದ್ದೆಹತ್ತದ ಸಂಕಟದಲ್ಲಿ ಬೇಯುವುದು, ನಿಂತಲ್ಲೇ ನಿದ್ದೆಹತ್ತಿ ಕಾಲು ಕುಸಿಯುವುದು ರಾತ್ರಿ ಪಾಳಿ ಕೆಲಸದವರ ಪಾಡು. ಹೆಚ್ಚು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಹೃದಯಾಘಾತ ಹತ್ತಿರವಾಗುತ್ತದೆ ಎನ್ನುವುದು ವೈದ್ಯರ ಎಚ್ಚರಿಕೆ. ಆದರೆ, ಕೆಲಸ ಕೊಟ್ಟವರಿಗೆ ಕೆಲಸದವನ ಹೃದಯದ ಕಾಳಜಿ ಏಕೆ?!

ರಾಜಕಾರಣಿಗಳು ನಿಜದ ಅರ್ಥದಲ್ಲಿ ನಿದ್ರೆಯನ್ನು ದ್ವೇಷಿಸುತ್ತಾರೆ. ಆದರೆ, ಅವರ ಬಗ್ಗೆಯೇ ನಿದ್ರಾದೇವಿಗೆ ಹೆಚ್ಚು ಒಲವು! ಹೋದಲ್ಲಿ ಬಂದಲ್ಲಿ ಬರಸೆಳೆದಪ್ಪಿ ರಾಜಕಾರಣಿಗಳನ್ನು ತೂಕಡಿಕೆಗೆ ತಳ್ಳುವುದು ನಿದ್ರಾದೇವಿಗೆ ಇಷ್ಟದ ಕೆಲಸ. ವೇದಿಕೆಯಲ್ಲಿ ತೂಕಡಿಸುವುದು, ಸದನದಲ್ಲಿ ಗೊರಕೆ ಹೊಡೆದು ಮಾಧ್ಯಮಗಳ ಲೇವಡಿಗೆ ತುತ್ತಾಗುವುದು ರಾಜಕಾರಣಿಗಳಿಗೆ ತಪ್ಪಿದ್ದಲ್ಲ. ಹೆಚ್ಚು ತೂಕಡಿಸುವ ರಾಜಕಾರಣಿಗಳು ಆಡಳಿತ ಪಕ್ಷದಲ್ಲಿದ್ದರಂತೂ ವಿರೋಧ ಪಕ್ಷದವರಿಗೆ ಅದೇ ಆಹಾರ!

ಮೈಮುರಿದು ಕೆಲಸ ಮಾಡುವ ಕೂಲಿಗೆ, ನೇಗಿಲು ಹಿಡಿದು ಉತ್ತು ಬಿತ್ತು ದಣಿವ ರೈತನಿಗೆ, ರಚ್ಚೆ ಹಿಡಿದು ಅತ್ತು ಅಮ್ಮನ ಮಡಿಲಲ್ಲಿ ಮುದುರಿಕೊಳ್ಳುವ ಕಂದನಿಗೆ, ಬೆಳಿಗ್ಗೆ ಬೇಗನೆ ಎದ್ದು ಗೃಹಕೃತ್ಯ ಮುಗಿಸಿ ದಣಿದು ಮಧ್ಯಾಹ್ನ ಒಂದಿಷ್ಟು ವಿರಮಿಸುವ ಗೃಹಿಣಿಯರಿಗೆ ಸಮತೂಕದ ನಿದ್ದೆವರವೇ ಹೌದು. ಇನ್ನು ಹೊಂಗೆಮರದ  ನೆಳಲ ನಿದ್ರೆಗೆ ಬೆಲೆ ಕಟ್ಟಲಾದೀತೇ?

ವಿಶ್ರಾಂತಿಗಾಗಿ ನಿದ್ದೆ ಬೇಕೇಬೇಕು. ಆದರೆ, ಸಮರ್ಪಕವಾದ ನಿದ್ರೆಯ ಅಭ್ಯಾಸ ಇಲ್ಲದೆ ಹೋದರೆ ನಿದ್ದೆ ಎಂಬುದು ಘನಘೋರವಾಗಿ ಪೀಡಿಸದೆ ಇರದು. ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುವವರ ನಡುವೆಯೇ ಚಿಂತೆ ಇಲ್ಲದೆ ಸಂತೆಯಲ್ಲೂ ನಿದ್ದೆಮಾಡುವ ಮಂದಿಯೂ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT