ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿನಗೆ ನೀನೇ ಗೆಳೆಯಾ

Last Updated 29 ಜುಲೈ 2016, 19:30 IST
ಅಕ್ಷರ ಗಾತ್ರ

ನಿನಗೆ ನೀನೆ ಗೆಳೆಯಾ, ನಿನಗೆ ನೀನೆ......
ಅವರಿವರ ನಂಬುಗೆಯ ಮಳಲ ರಾಶಿಯ ಮೇಲೆ
ಬಾಳಮನೆಯನು ಮುಗಿಲಿಗೆತ್ತರಿಸಲಿಹೆಯಾ....

ಆಗೊಮ್ಮೆ ಈಗೊಮ್ಮೆ ಫೋನ್ ಮಾಡಿ ಮಾತಾಡುವ ಮುಗ್ಧ ಮನಸ್ಸಿನ ಹುಡುಗನವನು. ಆವತ್ತೂ ಫೋನ್ ಮಾಡಿ ‘ಅಕ್ಕಾ, ಏನೋ ಹೇಳ್ಕೊಬೇಕು’ ಅಂದ. ಮಾತಿನಲ್ಲಿ ಆದಷ್ಟೂ ಬೇಗ ಹೇಳೊದನ್ನು ಹೇಳಿ ಖಾಲಿಯಾಗುವ ಧಾವಂತವಿತ್ತು. ‘ಅದು, ಅದೂ, ಯಾಕೋ ಡಿಸ್ಟರ್ಬ್ ಆಗಿದೀನಿ ಅಕ್ಕಾ. ಬದುಕಲ್ಲಿ ಏನೇನೂ ಆಸೆಯಿಲ್ಲ. ಎಲ್ಲಾ ಶೂನ್ಯ ಅಂತ ಅನ್ನಿಸುತ್ತಿದೆ’ ಎಂದ ರೀತಿಗೆ ಪಾಪವೆನಿಸಿತ್ತು.

ಪೂರ್ತಿ ಕತೆ ಕೇಳಿ ಅವನಿಗೊಂದಿಷ್ಟು ಸಾಂತ್ವನ ಹೇಳಿ ಮುಗಿಸೋ ಹೊತ್ತಿಗೆ ಅವನು ಹೇಳಿದ ‘ನಾನು ಈ ಸಂಬಂಧದಲ್ಲಿ ಯೂಸ್ ಆದೆ ಅನ್ನಿಸ್ತಿದೆ’. ವಾಕ್ಯ ಮನದಲ್ಲಿ ಕೊರೆಯಲಾರಂಭಿಸಿತು. ಮೊನ್ನೆಯಷ್ಟೇ ಇದೇ ವಾಕ್ಯವನ್ನು ಇನ್ನೊಬ್ಬರೂ  ಹೇಳಿದಂತಿದೆ ಅಲ್ವೇ? ಎನ್ನುವುದೂ ನೆನಪಿಗೆ ಬಂತು. ಸಂಬಂಧಗಳಲ್ಲಿ ನಾವು ಪರಸ್ಪರ ಒಬ್ಬರಿಗೊಬ್ಬರು ಒದಗಲೇಬೇಕು. ಈ ಸ್ನೇಹಸಂಬಂಧಗಳು ಇರೋದೇ ಹೀಗೆ ಒಬ್ಬರಿಗೊಬ್ಬರು ದಕ್ಕಲಿ ಅಂತಾನೇ ತಾನೇ? ಅಂಥದ್ದರಲ್ಲಿ ನಾನು ಯೂಸ್ ಆದೆ ಎನ್ನುವುದು ಯಾಕೆ ಮನಸ್ಸಿಗೆ ಬಂತು ಅನ್ನೋದನ್ನೇ ಯೋಚಿಸುವಂತಾಯಿತು. ಇದು ಈ ಕಾಲದ ಹಳೆ ಸಮಸ್ಯೆಯ ಹೊಸ ವ್ಯಾಖ್ಯಾನವೇ ಹಾಗಾದರೆ!

ಇದು ಹೊಸ ಸಂಬಂಧಗಳು ಬಲಗಾಲಿಟ್ಟು ಮನಸ್ಸಿನ ಮನೆಯೊಳಗೆ ತೂರಿ ಬರುವ ಪರ್ವಕಾಲ. ಕೈಬೆರಳಿನ ತುದಿಯಿಂದಲೇ ಸ್ನೇಹದ ಸೌಧ ಕಟ್ಟುವ ವಸಂತಕಾಲ. ಫೇಸ್‌ಬುಕ್, ವಾಟ್ಸ್ಆ್ಯಪ್, ಟ್ವಿಟರ್‌ಗಳ ಮೂಲಕ ನಿಜಕ್ಕೂ ‘ವಸುದೈವ ಕುಟುಂಬಕಂ’ ಎಂದು ಹಾಡಬಹುದಾದ ಕಾಲ. ಹಾಗಾಗಿ ಇದು ಸ್ನೇಹದಿಂದ ಆರಂಭವಾಗಿ ಬದುಕಿನ ಅತ್ಯಂತ ಅಮೂಲ್ಯವೆನ್ನಿಸುವ ಒಂದಷ್ಟು ಖುಷಿಗಳನ್ನು ಸುಲಭವಾಗಿ ನೀಡುತ್ತಿದೆ.

ಚೆಂದನೆಯ ಕವನ ಕಟ್ಟುವ ಈ ಹುಡುಗನಿಗೆ ಹೀಗೆಯೇ ಪರಿಚಯವಾಗಿದ್ದು ಒಬ್ಬ ಅಕ್ಕನಂತಹ ಹೆಣ್ಣುಮಗಳು. ಹುಡುಗನ ಭಾವುಕ ಮನಸ್ಸು ಈ ಅಕ್ಕನಿಗೆ ತನ್ನ ತಮ್ಮನನ್ನೇ ನೆನಪಿಸುತ್ತಿತ್ತು. ಹಿಡಿ ಪ್ರೀತಿಗೇ ಹಾತೊರೆಯುತ್ತಿದ್ದ ಹುಡುಗನೂ ಈ ಅಕ್ಕ ನೀಡುತ್ತಿದ್ದ ನಿಃಸ್ವಾರ್ಥ ಪ್ರೀತಿಯನ್ನು ಮೊಗೆಮೊಗೆದು ಮನ ತುಂಬಿಕೊಳ್ಳುತ್ತಿದ್ದ. ಒಡಹುಟ್ಟಿದ ಅಕ್ಕನಿಲ್ಲದಿದ್ದರೂ ಇಷ್ಟು ವಾತ್ಸಲ್ಯ ತೋರುವ ಈ ಅಕ್ಕನಲ್ಲಿ ದಿನಕ್ಕೊಮ್ಮೆಯಾದರೂ ಮಾತಾಡಿದರಷ್ಟೇ ಹೊಟ್ಟೆ ತುಂಬುತ್ತಿತ್ತು.

ತುಂಬಿದ ಸಂಸಾರ, ಗಂಡ–ಮಕ್ಕಳು, ವೃತ್ತಿ – ಎಲ್ಲದರ ಜೊತೆಗೂ ಏಗುತ್ತಾ ನಾಜೂಕಿನಿಂದ ಬದುಕು ನಡೆಸುತ್ತಿದ್ದ ಆ ಅಕ್ಕನಿಗೆ ಒಂದೊಂದು ಸಾರಿ ಮಾತಾಡಲೂ ಆಗದಷ್ಟು ಬಿಝಿಯಾಗುತ್ತಿದ್ದಳು. ಆದರೂ ಸಿಗುತ್ತಿದ್ದ ಸಣ್ಣ ಕ್ಷಣವನ್ನೂ ಕಡೆಗಣಿಸದೇ ಈ ತಮ್ಮನಿಗೊಂದು ಮೇಸೆಜ್ ಆದರೂ ಹಾಕಿಬಿಡುತ್ತಿದ್ದಳು.

ಬದುಕೆಷ್ಟು ಸುಂದರ ಎಂದುಕೊಳ್ಳುತ್ತಿದ್ದ ಈ ಹುಡುಗ, ನಿಧಾನಕ್ಕೆ ಈ ಅಕ್ಕನ ಕುರಿತೂ ಪೊಸೆಸಿವ್ ಆಗತೊಡಗಿದ. ಅಕ್ಕ ತನ್ನನ್ನು ಕಡೆಗಣಿಸುತ್ತಿದ್ದಾಳೆಂದು ಪರಿಭಾವಿಸಲಾರಂಭಿಸಿದ. ಆಗಲೇ ಅವನಿಗೆ ಅನ್ನಿಸಲಾರಂಭಿಸಿದ್ದು ‘ನಾನು ಯೂಸ್ ಆದೆ’ ಅಂತ. ಈ ಬೇಡದ ಭಾವ ಬಲಿತು, ಅಕ್ಕನ ಮೇಲೆ ಸಿಟ್ಟು ಮಾಡಿಕೊಳ್ಳಲಾರಂಭಿಸಿದ. ತಮ್ಮನಂತೇ ಪ್ರೀತಿಸುತ್ತಿದ್ದ ಅಕ್ಕನಿಗೆ ಉಸಿರು ಕಟ್ಟುವಂತಾಯಿತು. ಹೇಳುವಂತಿಲ್ಲ, ಬಿಡುವಂತಿಲ್ಲ. ಇಬ್ಬರೂ ನೊಂದುಕೊಂಡರು. ಮನದ ತುಂಬ ಗಾಯಗಳು.

ಇಂಥ ಕತೆಗಳು ಫೇಸ್‌ಬುಕ್ ವಾಟ್ಸಾಪ್ ಸ್ನೇಹಗಳಲ್ಲಿ ಸಾವಿರಾರು. ಪ್ರತಿಯೊಬ್ಬರಿಗೂ ‘ನಾನು ಬಳಕೆಯಾದೆ ಅನ್ನಿಸುವಂತೆ ಮಾಡುವ ಸಂದರ್ಭಗಳು. ಖುಷಿಯನ್ನು ಹಂಚುವ ಈ ಸಂಪರ್ಕ ಮಾಧ್ಯಮಗಳು ಜೊತೆಯಲ್ಲೇ ಮನಸ್ಸೂ ಮುರಿಯುವ ಕೆಲಸವನ್ನೂ ಅಷ್ಟೇ ಸುಲಭದಲ್ಲಿ ಮಾಡುತ್ತಿವೆಯೇ? ಅಮ್ಮಂದಿರು ಪದೇ ಪದೇ ಹೇಳುವ ‘ನಿಮಗೆಲ್ಲಾ ಸ್ವಾತಂತ್ರ ಜಾಸ್ತಿಯಾಯ್ತು’ ಎನ್ನುವ ಮಾತು ಸತ್ಯವೇ! ಹಾಗಾದರೆ ಮನುಷ್ಯ, ಮನುಷ್ಯನ ನಡುವಿನ ಈ ಈಝಿ–ಆಕ್ಸೆಸ್ ನಿಜಕ್ಕೂ ಮಾರಕವೇ?

ಫೇಸ್‌ಬುಕ್ಕಿನಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ಈಗ ಅಮ್ಮಂದಿರ ಜಮಾನಾದವರೂ ಚಟುವಟಿಕೆಯಲ್ಲಿದ್ದಾರೆ. ಹಾಡು, ಕವನ, ಫೋಟೊಗ್ರಫಿಯ ಪ್ರತಿಭಾಪ್ರದರ್ಶನವೂ ಅಲ್ಲಿ ಚೆನ್ನಾಗಿಯೇ ನಡೆಯುತ್ತಿದೆ. ಹೊಸ ಪರಿಚಯವೂ ನಿರಾತಂಕವಾಗಿ ನಡೆಯುತ್ತದೆ. ಏಕಾಂತದ ಸುಖ ಈಗ ಲೋಕಾಂತವಾಗಿದೆ. ಎಲ್ಲರಲ್ಲೂ ಏನನ್ನೋ ಪಡೆಯುವ ಹೊಸ ಹುಮ್ಮಸ್ಸು.

ಸ್ನೇಹಿತರ ಗುಂಪಿನ ಸ್ವರೂಪ ಬದಲಾಗಿದೆ. ಗಂಡಸಾದರೆ ವಿಕೇಂಡ್‌ಗಳಲ್ಲಿ ಸೇರುತ್ತ ಲೋಕದ ಸುದ್ದಿ ಹಂಚಿಕೊಳ್ಳುತ್ತಿದ್ದವರು ವಾಟ್ಸ್‌ಆ್ಯಪ್‌ನಿಂದ ಹತ್ತಿರವಾದರೆ ಹೆಣ್ಣುಮಕ್ಕಳಿಗೆ ದೂರದ ಎಲ್ಲೆಲ್ಲೋ ಇರುವ ಸ್ನೇಹಿತರೂ ಈ ಜಾಲತಾಣಗಳಿಂದ ಸಿಕ್ಕಿ ಸ್ನೇಹ ಮತ್ತೆ ಮುಂದುವರೆದಿದೆ. ಇಷ್ಟೆಲ್ಲ ಉಪಯೋಗವಿರುವ ಈ ಹೊಸಯುಗದ ಸಂಪರ್ಕಸಾಧನ ಹಾಗೂ ಅವಕಾಶಗಳಿಂದ ನಾವು ಹೆಚ್ಚು ನೆಮ್ಮದಿಯಾಗಿರಬೇಕಿತ್ತು ಅಲ್ಲವೇ? ಆದರೆ ಹಾಗಾಗುತ್ತಿಲ್ಲ.

ಹಾಗಾದರೆ ಈ ಎಲ್ಲದರ ನಡುವೆ ನಾವು ಎಡವುತ್ತಿರುವುದೆಲ್ಲಿ? ಅಷ್ಟೇ ಅಲ್ಲದೆ ಈ ರೀತಿಯಾದರೆ ಅದನ್ನು ಎಡವುದು ಎನ್ನುವುದೂ ಸರಿಯೇ? ಸ್ನೇಹದ ಹರಿವಿನಲ್ಲಿ ಅದೊಂದು ಸಣ್ಣ, ತಾತ್ಕಾಲಿಕ ಸ್ಥಗಿತವಷ್ಟೇ ಅಲ್ಲವೇ? ಒಮ್ಮೆ ಕೂತು ಸಮಾಧಾನದಲ್ಲಿ ಯೋಚಿಸೋಣ. ಏಕೆಂದರೆ ಮನುಷ್ಯ ಸಂಘಜೀವಿ. ಅಂದರೆ ಪ್ರತಿಯೊಬ್ಬನಿಗೂ ಬೇಕಾಗಿರುವುದು ‘ಗಮನ’, ‘ಅಟೆಶ್ಷನ್’. ಇದನ್ನು ಬಯಸುವುದು ಖಂಡಿತ ತಪ್ಪಲ್ಲ. ಈ ಗಮನ ಪಡೆದುಕೊಳ್ಳುವ ಅಭ್ಯಾಸ ನಮಗೆಲ್ಲ ತೊಟ್ಟಿಲಲ್ಲೇ ಆರಂಭವಾಗಿರುತ್ತದೆ.

ಅಮ್ಮ ಅರೆಗಳಿಗೆ ಆ ಕಡೆ ಹೋದ ತಕ್ಷಣ ತೊಟ್ಟಿಲ ಮಗು ಅಳಲಾರಂಭಿಸುತ್ತದೆ. ಈ ಅಭ್ಯಾಸ ಬೆಳೆಯುತ್ತಾ ‘ಗುಣವಾಗಿ ಬಿಡುತ್ತದೆ. ಗಂಡಿನಲ್ಲಿ ಸಹಜವಾಗಿಯೇ ಒಂದು ಮುಷ್ಟಿ ಹೆಚ್ಚೇ ಈ ‘ಗುಣ’ವಿದ್ದು, ಇಂತಹ ತೊಂದರೆಗಳಾದ ಸಂದರ್ಭಗಳಲ್ಲಿ ಅದು ‘ಅವಗುಣ’ವಾಗಿ ಬಿಡುತ್ತದೆ.

ಈ ಗುಣವೇ ‘ಈಗೋ’. ಅಷ್ಟೆಲ್ಲ ಮಾತಾಡಿದ ಮೇಲೆ ಈ ಹುಡುಗನೂ ಅಂದಿದ್ದು ಅದೇ ‘ಅಕ್ಕಾ ನನ್ನ ಈಗೋ ಹರ್ಟ್ ಆಯ್ತು ಅಷ್ಟೇ, ಮುಂದೆ ಜಾಗ್ರತೆಯಿರುವೆ.’ ಜಾಣ ಹುಡುಗ, ಬೇಗನೇ ಎಚ್ಚೆತ್ತ. ಇಬ್ಬರೂ ಖುಷಿಯಾಗಿ ಮಾತಾಡುತ್ತಿದ್ದಾಗ ಕಾಡದೇ ಇರುವ ಈ ‘ಯೂಸ್ ಆದೆ’ ಭಾವ ಸಲಿಗೆ ಹೆಚ್ಚಾಗಿ ಏಕತಾನತೆ ಮೂಡಿದಾಗ, ಯಾವುದೊ ಹಂತದಲ್ಲಿ ಅರಿವಿಲ್ಲದೇ ತೋರಿದ ನಿರಾಕರಣೆಯ ಭಾವ ಸೂಕ್ಷ್ಮವಿರುವ ವ್ಯಕ್ತಿಗೆ ಯಾವಾಗ ತಟ್ಟುತ್ತದೋ ಆಗ ಕಾಡಲಾರಂಭಿಸುತ್ತದೆ.

ತನ್ನಷ್ಟಕ್ಕೇ ಅವಮಾನಿತನಾಗುತ್ತಾನೆ. ಇಂಥವಾದಾಗ, ಕುಳಿತು ಮಾತಾಡಿಯೂ ಪ್ರಯೋಜನವಿಲ್ಲವೆಂದ ಮೇಲೆ ‘ಲೆಟ್ ಇಟ್ ಗೋ’ ಎಂದು ಬಿಡುವುದೇ ವಾಸಿಯಲ್ಲವೇ? ಏಕೆಂದರೆ ಆರಂಭವಾದ ಎಲ್ಲವೂ ಅಂತ್ಯವಾಗಲೇಬೇಕು. ಅಂತ್ಯವಾಗದಿರುವ ಸಂಬಂಧಗಳು ಮಾತ್ರವೇ ದೈವಿಕವೆನ್ನಿಸುವುದು. ಆದ್ದರಿಂದ ಒಂದರ ಅಂತ್ಯ ಇನ್ನೊಂದರ ಆರಂಭವೇ ಅನ್ನುವುದನ್ನೂ ನೆನಪಿಟ್ಟುಕೊಂಡರೆ ಸಾಕು.

ಮೊನ್ನೆಯಷ್ಟೇ ಒಂದು ಚಾನೆಲ್ಲಿನಲ್ಲಿ ದೂರದರ್ಶನದ ಮೊದಲ ಮಹಿಳಾ ವಾರ್ತಾವಾಚಕಿ ಪ್ರತಿಮಾ ಪುರಿಯ ಕುರಿತು ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಮಹಿಳೆ ಹೊರಗೆ ಬಂದು ವೃತ್ತಿನಿರತಳಾಗುವ ಯೋಚನೆಯೇ ಅತ್ಯಂತ ಕ್ರಾಂತಿಕಾರಿಯಾಗಿದ್ದ ಹೊತ್ತಲ್ಲಿ ಎಲ್ಲ ಸಂಕಷ್ಟಗಳನ್ನೂ ಬದಿಗೊತ್ತಿ ಮೊದಲ ವಾರ್ತಾವಾಚಕಿಯಾಗಿದ್ದು ಪ್ರತಿಮಾ ಪುರಿಯವರ ಆತ್ಮವಿಶ್ವಾಸಕ್ಕೆ ಸಾಕ್ಷಿ.

ಚಲನಚಿತ್ರಗಳಲ್ಲಿ ಹೆಣ್ಣುಮಕ್ಕಳು ನಾಯಕಿಯರಾಗಿ ಬಣ್ಣ ಹಚ್ಚುತ್ತಿದ್ದರೂ ನೃತ್ಯ, ನಟನೆ ಎಲ್ಲವೂ ಆ ಹೊತ್ತಿಗೆ ಹೆಣ್ಣುಮಕ್ಕಳಿಗೆ ನಿಷಿದ್ಧವೆಂದೇ ಇದ್ದ ಕಾಲವದು. ಸ್ಟುಡಿಯೋದ ತುಂಬ ಗಂಡಸರೇ ಇರುತ್ತಿದ್ದ ಆ ಕಾಲದಲ್ಲಿ ಹೆಣ್ಣೊಬ್ಬಳು ಕ್ಯಾಮೆರಾದ ಮುಂದೆ ಬರುವ ಕಲ್ಪನೆಯೇ ಅಮ್ಮಂದಿರ ಕಾಲಕ್ಕೆ ಮೂಗಿನ ಮೇಲೆ ಬೆರಳಿಡುವ ಸಾಧನೆ.

ವಿವಾಹದ ನಂತರವೇ ಗಂಡನ ಮುಖ ನೋಡಿದ ಹೆಣ್ಣುಮಕ್ಕಳೆಷ್ಟೋ ಜನ. ಮನೆಯ ಗಂಡಸರು ಅಂದರೆ ಅಪ್ಪ, ಚಿಕ್ಕಪ್ಪ, ಮಾವ, ಮೈದುನಂದಿರ ಹೊರತು  ಉಳಿದ ಸಂಬಂಧಿ ಗಂಡಸರೊಂದಿಗೂ ಎಷ್ಟು ಬೇಕೋ ಅಷ್ಟೇ ಮಾತನ್ನು ಆಡಿ ಅಡುಗೆಮನೆ ಸೇರುವ ಸಂಪ್ರದಾಯವಿತ್ತು. ತುಂಬ ಮಾತಾಡುತ್ತಿದ್ದ ಎಲ್ಲರನ್ನೂ ಕರೆದು ಹರಟೆ ಹೊಡೆಯುತ್ತಿದ್ದ ಅಪ್ಪನ ದೂರದ ಸಂಬಂಧಿ ಮಹಿಳೆಯೊಬ್ಬರು ಸಾಯೋವರೆಗೂ ‘ಭಯಂಕರ ಅಧಿಕಪ್ರಸಂಗಿಯೆಂದೇ ಹೆಸರಾದವರು.

ಹೆಣ್ಣಿಗೆ ಗಂಡು ಇಷ್ಟು ಸಲೀಸಾಗಿ ಸಂಪರ್ಕವೇ ಅಸಾಧ್ಯವಿದ್ದ ಕಾಲದಲ್ಲೇ ಸಾವಿರಾರು ಕತೆಗಳು ಹುಟ್ಟಿದ್ದು ನೋಡಿದಾಗ, ಗಂಡು–ಹೆಣ್ಣೆಂಬ ಭೇದವಿಲ್ಲದೇ ಇಪ್ಪತ್ನಾಲ್ಕು ಗಂಟೆಯೂ ಜೊತೆಯಲ್ಲೇ ದುಡಿಯುವ, ಹೆಣ್ಣುಮಕ್ಕಳು ಫೈಟರ್ ಪೈಲೆಟ್‌ಗಳಾಗುತ್ತಿರುವ, ಗಂಡಿಗೆ ಸರಿಸಮನಾಗಿ ಪ್ರಪಂಚವನ್ನು ನೋಡುತ್ತಿರುವ ಈ ಹೊತ್ತಲ್ಲಿ ಮನಸ್ಸಿಗಾಗುವ ಇಂಥ ಆಘಾತಗಳು ಸರ್ವೇಸಾಮಾನ್ಯವಲ್ಲವೇ? ಇಬ್ಬರು ಹೆಣ್ಣುಮಕ್ಕಳ ನಡುವೆಯೂ ಅಥವಾ ಗಂಡಸರ ನಡುವೆಯೂ ಇಂಥವಾದಾಗ ಹೆಚ್ಚು ಗಮನ ಕೊಡದ ನಾವು ಗಂಡು ಮತ್ತು ಹೆಣ್ಣಿನ ನಡುವೆ ಆದಾಗ ಮಾತ್ರ ಸ್ವಲ್ಪ ಕುತೂಹಲದಿಂದ ಪ್ರತಿಕ್ರಿಯಿಸುತ್ತೇವೆ.

ಯಾಕೆ? ಹೆಸರಿರುವ ಸಂಬಂಧಗಳು ಮಾತ್ರವೇ ಇರಬೇಕೆ ಗಂಡುಹೆಣ್ಣಿನ ನಡುವೆ!  ದ್ರೌಪದಿ ಮತ್ತು ಕೃಷ್ಣನ ನಡುವಿದ್ದ ಸಖ್ಯವೂ ಇದೇ ರಾಗದ ಲಹರಿಯಲ್ಲವೇ? ಹಾಗಾಗಿ, ಈ ರೀತಿಯ ಸ್ನೇಹಸಂಪರ್ಕವನ್ನು ತಪ್ಪೆಂದು ಹೇಳುವುದೇ ಅತ್ಯಂತ ಸಣ್ಣತನದ ಮಾತು. ಆದರೆ ನೆನಪಿಡಬೇಕಾದ ಒಂದು ಮಾತೂ ಇದರೊಂದಿಗಿದೆ, ಸ್ನೇಹ ಮತ್ತು ಪ್ರೀತಿಯ ನಡುವೆ ಇರೋದು ಅತ್ಯಂತ ತೆಳುವಾದ ಗೆರೆ ಎಂದು.

ಪ್ರತಿ ಸಂಬಂಧವನ್ನೂ ನಾವು ನಮ್ಮದೇ ಆದ ನಿರೀಕ್ಷೆಗಳೊಂದಿಗೇ ವ್ಯವಹರಿಸಲು ನೋಡುತ್ತೇವೆ. ಸಾಧ್ಯವಾದಷ್ಟೂ ಒಳ್ಳೆಯ ಅಭಿಪ್ರಾಯವೇ ಮೂಡುವಂತೆ ವರ್ತಿಸುತ್ತಿರುತ್ತೇವೆ. ಆದರೆ ಕೆಲವೊಂದು ಸಾರಿ ಹೇಗೆ ಪುಟ್ಟ ಮಗು ಹೊಸ ಆಟಿಕೆಗಾಗಿ ಕಾತರಿಸುತ್ತದೋ ಹಾಗೆ ಕೆಲವರು ಮತ್ತೊಂದು ಹೊಸ ಸ್ನೇಹಕ್ಕಾಗಿ ಹಂಬಲಿಸುತ್ತಾರೆ.

ದುಪ್ಪಟ್ಟು ಮಾಡುವ ಆಸೆಯಿಂದ ಭಾವನೆಗಳನ್ನು ಹೂಡಿಕೆ ಮಾಡಿದ್ದ ಈ ಪಾಪದ ಜೀವ ಆಗ ವಿಲವಿಲ ಒದ್ದಾಡಲು ಆರಂಭಿಸುತ್ತದೆ. ಆಗ, ‘ನಾನು ಯೂಸ್ ಆದೆ’ ಎಂಬ ಭಾವ ಮೂಡುವುದು. ಆದರೆ ಮನಸ್ಸಿಗೆ ಒಂದಷ್ಟು ಸಾಂತ್ವನ ಹೇಳುವ ಸಂಪರ್ಕಗಳಿದ್ದರೆ ಇದೇನೂ ದಾಟಲು ಅಸಾಧ್ಯವಾದ ಬೆಟ್ಟವಲ್ಲ. ನಾವು ಪ್ರಕೃತಿಯ ಅಂಶವಿಟ್ಟುಕೊಂಡೇ ಹುಟ್ಟಿ ಬೆಳೆದವರು.

ಪ್ರಕೃತಿ ವರ್ಷಕ್ಕೊಮ್ಮೆ ಹಳೆಯುಡುಗೆ ಬಿಸಾಕಿ ಮತ್ತೆ ಹೊಸ ಹಸಿರುಡುಗೆ ಉಟ್ಟುಕೊಂಡು ಮತ್ತೆ ಮದುಮಗಳಾಗುವ ದೃಶ್ಯ ನಮ್ಮ ಕಣ್ಣ ಮುಂದೇ ನಡೆಯುವಾಗ ಮಾನವನಿಗೆ ದೇಹ ಹೊಸತಾಗುವ ಅವಕಾಶವಿಲ್ಲದಿದ್ದರೂ ಮನಸ್ಸನ್ನು ಮತ್ತೆ ಚಿಗುರಿಸಿಕೊಂಡು ಹಸಿರಾಗುವ ಅವಕಾಶವಿದ್ದೇ ಇದೆ. ಮತ್ತೆ ಮನಸ್ಸು ಮಿಡಿಯಲೇಬೇಕು.

ಮನಸ್ಸು, ಹೃದಯಗಳು ಇರುವುದೇ ಮಿಡಿಯಲು. ಹಾಗಾಗಿ ಹೃದಯ ಸಾಂಗವಾಗಿ ಮಿಡಿಯಲಿ. ಅಡಿಗರ ಕವನದ ಸಾಲುಗಳು ಮತ್ತೆ ಮನದಲ್ಲಿ ತಂಬೂರಿಯ ದನಿಯಂತೆ ಗುಂಯ್ ಗುಟ್ಟುತಿದೆ: ‘ನಿನ್ನ ಮರುಕದ ಅಗ್ನಿದಿವ್ಯದಲಿ ಗೆದ್ದು....ಮೇಲೆ ಬಾ.. ಹೂವಾಗಿ ಜೇನಾಗಿ ಪುಟಿದು..ಅದೆ ಬಾಳಿನೊಸಗೆ.....ನಿನಗೆ ನೀನೆ....’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT