ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಇ-ಪುಸ್ತಕ ನೀವೇ ಪ್ರಕಟಿಸಿ!

ತಂತ್ರೋಪನಿಷತ್ತು
Last Updated 30 ಜೂನ್ 2016, 3:53 IST
ಅಕ್ಷರ ಗಾತ್ರ

ಬರೆದ ಪುಸ್ತಕಕ್ಕೆ ಪ್ರಕಾಶಕರು ಸಿಗುತ್ತಿಲ್ಲ ಎಂಬುದು ಬರಹಗಾರರ ಸಾಮಾನ್ಯ ಕೊರಗು. ಹಸ್ತಪ್ರತಿ ಹಿಡಿದು ಹಲವು ಪ್ರಕಾಶಕರ ಕಚೇರಿ/ಮನೆಗಳಿಗೆ ಅಲೆದರೂ, ಹಲವರಿಗೆ ಇ-ಮೇಲ್‌ ಮಾಡಿ ಕಾದರೂ ಪುಸ್ತಕಕ್ಕೆ ಪ್ರಕಟಣೆಯ ಭಾಗ್ಯ ಸಿಗುವುದು ಸುಲಭದ ಮಾತಂತೂ ಅಲ್ಲ. ಹೊಸ ಬರಹಗಾರರ ಮಾತು ಒತ್ತಟ್ಟಿಗಿರಲಿ ಹೆಸರು ಮಾಡಿದ ಬರಹಗಾರರೂ ತಮ್ಮ ಪುಸ್ತಕ ಪ್ರಕಟವಾಗಲು ಸರದಿ ಕಾಯಬೇಕಾದ ಸ್ಥಿತಿ ಇದೆ.

ಬರೆದ ಪುಸ್ತಕ ಹಳೆಯದಾಗುತ್ತಾ ಕೊಳೆಯುವ ಬದಲು ಪುಸ್ತಕ ‘ಇ-ಬುಕ್‌’ನ ಅವತಾರದಲ್ಲಿ ಅಂತರ್ಜಾಲದಲ್ಲಿ ಲಭ್ಯವಾಗುವಂತೆ ಮಾಡಲು ಸಾಧ್ಯವಿದೆ. ಹಸ್ತಪ್ರತಿಯ ಪಿಡಿಎಫ್‌ ಫೈಲ್‌ ನಿಮ್ಮ ಬಳಿ ಇದ್ದರೆ ಸಾಕು, ನಿಮಿಷದಲ್ಲೇ ನೀವು ಇ-ಬುಕ್‌ ಪ್ರಕಟಿಸಬಹುದು. ಪ್ರಕಟಿಸಿದ ಇ-ಪುಸ್ತಕವನ್ನು ಕ್ಷಣದಲ್ಲೇ ಗೆಳೆಯರೊಂದಿಗೆ ಹಂಚಿಕೊಳ್ಳಲೂಬಹುದು.

ಇ-ಪುಸ್ತಕ ಪ್ರಕಟಣೆಗೆ ಹಲವು ಸಾಫ್ಟ್‌ವೇರ್‌ಗಳು ಲಭ್ಯವಿವೆ. ಆದರೆ ಆನ್‌ಲೈನ್‌ನಲ್ಲಿ ಸುಲಭವಾಗಿ ಇ-ಪುಸ್ತಕ ಪ್ರಕಟಿಸಲು issuu.com ಬಳಕೆದಾರ ಸ್ನೇಹಿಯಾದ ಉಚಿತ ಅಂತರ್ಜಾಲ ವೇದಿಕೆ.

ನಿಮ್ಮ ಹಸ್ತಪ್ರತಿಯ ಪಿಡಿಎಫ್‌ ಫೈಲ್‌ ಕೆಲವೇ ಹಂತಗಳನ್ನು ಪೂರೈಸಿ ಇ-ಪುಸ್ತಕದ ರೂಪ ಪಡೆಯಲು ಈ ಜಾಲತಾಣ ಸಹಕಾರಿ. ಸರಳ ಹಂತಗಳಲ್ಲಿ ಇ-ಪುಸ್ತಕ ಪ್ರಕಟಿಸಲು ಸಾಧ್ಯವಿರುವ ಈ ಜಾಲತಾಣದ ಮೂಲಕ ಈವರೆಗೆ ಲಕ್ಷಾಂತರ ಪುಸ್ತಕಗಳು ‘ಇ’ ಸ್ವರೂಪ ಪಡೆದುಕೊಂಡಿವೆ.

issuu.comಗೆ ಹೋಗಿ ನಿಮ್ಮ ಹೆಸರು, ಇ-ಮೇಲ್‌ ವಿಳಾಸ ನಮೂದಿಸಿ, ನಿಮಗೆ ಬೇಕಾದ ಪಾಸ್‌ವರ್ಡ್‌ ನೀಡಿ ಸೈನ್‌ಇನ್‌ ಆದರೆ ಸಾಕು, ಇ-ಪ್ರಕಟಣೆಯ ಅಸ್ತ್ರ ನಿಮ್ಮ ಕೈಯಲ್ಲಿದ್ದಂತೆಯೆ. ನಿಮ್ಮ ಹಸ್ತಪ್ರತಿಯ ಪಿಡಿಎಫ್‌ ಫೈಲ್‌ ಸೆಲೆಕ್ಟ್‌ ಮಾಡಿ, ಅಪ್‌ಲೋಡ್‌ ಮಾಡಿ, ಪಬ್ಲಿಷ್‌ ಕ್ಲಿಕ್ಕಿಸಿದರೆ ಮುಗಿಯಿತು, ನಿಮ್ಮ ಹಸ್ತಪ್ರತಿ ಇ-ಪುಸ್ತಕವಾಗಿ ನಿಮ್ಮೆದುರು ತೆರೆದುಕೊಳ್ಳುತ್ತದೆ.

ಪುಸ್ತಕ ಮಾತ್ರವಲ್ಲ, ನಿಮ್ಮ ರಚನೆಯ ಚಿತ್ರಗಳ ಸಂಕಲನ, ಗ್ರಾಫ್‌ಗಳ ಪಿಡಿಎಫ್‌ ಫೈಲ್‌ಗಳಿಗೂ ನೀವು ಇ-ಪುಸ್ತಕದ ರೂಪ ನೀಡಬಹುದು. ಖಾಸಗಿ ಪ್ರಕಟಣೆಯ ನಿಯತಕಾಲಿಕೆಗಳು, ಕಾಲೇಜಿನ ವಾರ್ಷಿಕ ಸಂಚಿಕೆ, ಕಿರುಪತ್ರಿಕೆಗಳಿಗೆ ಹಾಗೂ ಮುದ್ರಣವಾಗುವ ಪುಸ್ತಕಕ್ಕೂ ‘ಇ’ರೂಪ ನೀಡುವುದು issuu.com ಮೂಲಕ ಸುಲಭ.

ಪ್ರಕಟಿಸಿದ ಇ-ಪುಸ್ತಕವನ್ನು ಮತ್ತೆ ಎಡಿಟ್‌ ಕೂಡ ಮಾಡಬಹುದು. ಅಪ್‌ಲೋಡ್‌ ಆದ ಪುಸ್ತಕವನ್ನು ಫೇಸ್‌ಬುಕ್‌, ಟ್ವಿಟರ್‌ ಖಾತೆಗಳಲ್ಲಿ ಹಂಚಿಕೊಳ್ಳಬಹುದು. ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲೂ ನಿಮ್ಮಇ-ಪುಸ್ತಕ ಹರಿದಾಡುವಂತೆ ಮಾಡಲು ಸಾಧ್ಯವಿದೆ.

ಉಚಿತವಾಗಿ ಬೇಸಿಕ್‌ ಟೂಲ್‌ಗಳಷ್ಟೇ ಲಭ್ಯವಿರುವ issuu.comನ ಪ್ರೀಮಿಯಂದಾರರು ನೀವಾದರೆ ಇ-ಪುಸ್ತಕದ ಅಂದ ಹೆಚ್ಚಿಸುವ ಇನ್ನಷ್ಟು ಪಬ್ಲಿಷಿಂಗ್‌ ಟೂಲ್‌ಗಳು ನಿಮ್ಮದಾಗುತ್ತವೆ.

ಅದಕ್ಕಾಗಿ ನೀವು ತಿಂಗಳಿಗಿಷ್ಟು ಎಂದು ಪ್ರೀಮಿಯಂ ಪಾವತಿ ಮಾಡಬೇಕಾಗುತ್ತದೆ. ಪ್ರೀಮಿಯಂ ಗೊಡವೆ ಬೇಡವೆಂದರೆ ಉಚಿತವಾಗಿಯೇ ಇ-ಪುಸ್ತಕ ಪ್ರಕಟಿಸುವ ಅವಕಾಶವಂತೂ ಇದೆ.

ಇನ್ನೇಕೆ ತಡ, ಪುಸ್ತಕ ಪ್ರಕಟವಾಗಲಿಲ್ಲ ಎಂದು ಬೇಸರಿಸಿಕೊಳ್ಳುವ ಬದಲು ನೀವೇ ನಿಮ್ಮ ಪುಸ್ತಕ ಪ್ರಕಟಣೆಗೆ ಸಿದ್ಧರಾಗಿ. ಅಂದಹಾಗೆ ನಿಮ್ಮ ಪುಸ್ತಕ ‘ಇ’ಸ್ವರೂಪ ಪಡೆಯಲು ಯೋಗ್ಯವಾಗಿದೆಯೇ ಎಂಬುದನ್ನು ನಾಲ್ಕಾರು ಬಾರಿ ಯೋಚಿಸಿ ಪ್ರಕಟಣೆ ನಿರ್ಧಾರಕ್ಕೆ ಮುಂದಾಗಿ. ಇಲ್ಲವಾದರೆ ‘ಇ’ ವೇದಿಕೆಯಲ್ಲೂ ಜೊಳ್ಳು ಹೆಚ್ಚಾಗುವ ಅಪಾಯವಂತೂ ಇದ್ದೇಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT