ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಒಳಗು, ಹೊರಗನ್ನು ನಿಯಂತ್ರಿಸಲಿ

ಸ್ವಸ್ಥ ಬದುಕು
Last Updated 31 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಯಾವುದೇ ಸಂಗತಿ, ವಿದ್ಯಮಾನಗಳ ಕುರಿತು ಮನದಲ್ಲಿ ಗಟ್ಟಿ ನಿಲುವಿಗೆ ಬರಬೇಡಿ. ನನ್ನ ದಿನವನ್ನು, ಮನಸ್ಸಿನ ಶಾಂತಿಯನ್ನು ಹಾಳುಗೆಡಹುವ ಯಾವ ಶಕ್ತಿಯೂ ಜಗತ್ತಿನಲ್ಲಿ ಇಲ್ಲ ಎಂದುಕೊಳ್ಳಿ. ವಿಮಾನವೊಂದು ಅಪಘಾತಕ್ಕೀಡಾಗಿ ಸಮುದ್ರದಲ್ಲಿ ಬಿದ್ದಿತು. ಬದುಕುಳಿದ ಏಕೈಕ ವ್ಯಕ್ತಿಯನ್ನು ಅಲೆಗಳು ನಿರ್ಜನ ದ್ವೀಪವೊಂದಕ್ಕೆ ಹೊತ್ತೊಯ್ದವು.

‘ದೇವರೆ, ನನ್ನನ್ನು ರಕ್ಷಿಸು’ ಎಂದು ಆತ ಮೊರೆಯಿಟ್ಟ. ಅಲ್ಲಿದ್ದ ಮರಮಟ್ಟುಗಳನ್ನು ಸಂಗ್ರಹಿಸಿ ಗುಡಿಸಲೊಂದನ್ನು ಕಟ್ಟಿಕೊಂಡ.  ಹಗಲಿನಲ್ಲಿ ಆಹಾರ ಅರಸಿ ದ್ವೀಪದೊಳಗೆ ಅಡ್ಡಾಡುತ್ತಿದ್ದ. ಒಂದು ದಿನ ವಾಪಸು ಬರುತ್ತಿರುವಾಗ ತನ್ನ ಗುಡಿಸಲು ಹೊತ್ತಿ ಉರಿಯುತ್ತಿರುವುದನ್ನು ನೋಡಿದ. ಆ ರಾತ್ರಿ ಆತ ನಿದ್ರಿಸಲಿಲ್ಲ. ಓ ದೇವರೆ, ಇದೇನು ಮಾಡಿದೆ ಎಂದು ಗೋಳಿಟ್ಟ.

ನಸುಕಿನಲ್ಲಿ ಹಡಗೊಂದು ಇತ್ತ ಬರುವುದನ್ನು ನೋಡಿದ. ಹಡಗಿನ ಸಿಬ್ಬಂದಿ ಆತನಿಗೆ ಆಹಾರ ನೀಡಿ ಉಪಚರಿಸಿದರು. ನಾನು ಇಲ್ಲಿರುವುದು ನಿಮಗೆ ಹೇಗೆ ಗೊತ್ತಾಯಿತು ಎಂದು ಆತ ಪ್ರಶ್ನಿಸಿದ. ಇಲ್ಲಿಂದ ಹೊಗೆ ಬರುತ್ತಿರುವುದನ್ನು ನೋಡಿದೆವು ಎಂದು ಹಡಗಿನ ಸಿಬ್ಬಂದಿ ಉತ್ತರಿಸಿದರು. ನಾವಿರುವ ಸನ್ನಿವೇಶ ಕಷ್ಟಕರವಾದುದ್ದು ಎಂದು ನಾವು ಎಷ್ಟೇ ಅಂದುಕೊಂಡರೂ ಬೃಹತ್ತಾದ ದೈವಿಕ ಶಕ್ತಿಯೊಂದು ಯಾವಾಗಲೂ ನಮ್ಮ ಪರ ಕೆಲಸ ಮಾಡುತ್ತಿರುತ್ತದೆ.

ನಾವು ಎಲ್ಲಿರಬೇಕೋ ಅಲ್ಲೇ ಇರಬೇಕಾಗಿರುವುದು ಅನಿರ್ವಾಯವಾಗಿದ್ದರಿಂದ ನಮಗೆ ಬಡ್ತಿ ಸಿಗುವುದಿಲ್ಲ. ಈ ನಿರ್ದಿಷ್ಟ ಪದವಿ, ಡಿಪ್ಲೊಮಾ ಅಥವಾ ಡಾಕ್ಟರೇಟ್‌ಗಿಂತ ದೊಡ್ಡ ಮಟ್ಟವನ್ನು ನಾವು ತಲುಪಬೇಕಿರುವುದರಿಂದ ಪ್ರವೇಶ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುತ್ತೇವೆ. ಹಾಗಾಗಿಯೇ ನಾವು ಇಷ್ಟಪಡದೇ ಇರುವಂತಹ ಸನ್ನಿವೇಶಗಳು ನಮ್ಮ ಜೀವನದಲ್ಲಿ ಎದುರಾಗುತ್ತವೆ.
ಈ ವಿಚಾರ ನಿಮಗೆ ಮನದಟ್ಟಾದಾಗ ನೀವು ಪೂರ್ವಗ್ರಹದಿಂದ ಮುಕ್ತರಾಗುತ್ತೀರಿ. ನಿಮ್ಮ ಮನಸ್ಸು ನಿರಾಳವಾಗುತ್ತದೆ. ಮಗುವಿನ ಸರಳ ದೃಷ್ಟಿಕೋನದಿಂದ ನೀವು ಎಲ್ಲವನ್ನೂ ಅವಲೋಕಿಸತೊಡಗುತ್ತೀರಿ.

ನೀವು ಏನನ್ನೂ ನಿರೀಕ್ಷಿಸದೇ ಇದ್ದಾಗ, ಯಾವುದರ ಕುರಿತೂ ಒತ್ತಾಯಿಸದೇ ಇದ್ದಾಗ ನಿಮ್ಮೊಳಗೆ ಶಾಂತಿ ಮೂಡುತ್ತದೆ. ಬಲ, ಜ್ಞಾನ ಎಲ್ಲವೂ ನಿಮ್ಮದಾಗುತ್ತದೆ. ‘ನಿಮ್ಮ ಮನಸ್ಸಿನಲ್ಲಿ ಏನಿದೆ ಎಂದು ಹೇಳಿ’ ಎಂದು ನಾವು ಆಗಾಗ ಹೇಳುತ್ತೇವೆ. ಆದರೆ, ನಿಮ್ಮ ಮನಸ್ಸಿನೊಂದಿಗೆ ಮಾತನಾಡಿ ಎಂದು ಯಾವತ್ತೂ ಹೇಳುವುದಿಲ್ಲ.

ಈಗ ನಾನು ಹೇಳುತ್ತಿರುವೆ. ನಿಮ್ಮ ಮನಸ್ಸಿನೊಂದಿಗೆ ಮಾತನಾಡಿ. ಎಲ್ಲವೂ ಸರಿಯಾಗಿಯೇ ಆಗುತ್ತದೆ. ಹೀಗೆ ಆಗಬೇಕಾದರೆ ದೊಡ್ಡ ಕಾರಣವೊಂದು ಅದರ ಹಿಂದಿದೆ ಎಂದು ನಿಮ್ಮ ಮನಸ್ಸಿಗೆ ಶಾಂತವಾಗಿ ಹೇಳಿಕೊಳ್ಳಿ. ಸನ್ನಿವೇಶ, ಸಂಗತಿಗಳಿಗೆ ನಿಮ್ಮ ಮನಸ್ಸು ಒಡ್ಡುವ ಎಲ್ಲ ಪ್ರತಿರೋಧಗಳು ಕರಗಿಹೋಗುತ್ತವೆ. ಎಲ್ಲ ವಿದ್ಯಮಾನಗಳನ್ನು ನೀವು ಸಹಜವಾಗಿ ನೋಡುತ್ತೀರಿ.

ಸಿರಿವಂತರಾಗಿರಿ ಅಥವಾ ಬಡವರಾಗಿರಿ, ಒಬ್ಬಂಟಿಯಾಗಿರಿ ಅಥವಾ ಸಂಗಾತಿಯೊಂದಿಗೆ ಇರಿ, ಉದ್ಯೋಗಿಯಾಗಿರಿ ಅಥವಾ ನಿರುದ್ಯೋಗಿಯಾಗಿರಿ ದೈವಿಕ ಶಾಂತಿ ಸಾಧ್ಯವಿದೆ. ಇದನ್ನು ನಿಮ್ಮ ಜೀವನದ ತತ್ವವಾಗಿಸಿಕೊಳ್ಳಿ. ಜೀವನದ ಪೆಂಡ್ಯುಲಮ್‌ ಕತ್ತಲೆಯಿಂದ ಬೆಳಕಿನತ್ತ, ಅನಾರೋಗ್ಯದಿಂದ ಆರೋಗ್ಯದತ್ತ, ದುಷ್ಟತನದಿಂದ ಒಳ್ಳೆತನದತ್ತ ತೂಗಾಡುತ್ತದೆ. ಹಾಗೆಯೇ ಮತ್ತೆ ಅದೇ ಪಥದಲ್ಲಿ ಹಿಂದಿರುಗುತ್ತದೆ. ಸಂತರು ಅದರ ಕೇಂದ್ರದಲ್ಲಿರುವ ತಟಸ್ಥ ಬಿಂದುವನ್ನು ಕಂಡುಕೊಳ್ಳುತ್ತಾರೆ.

ಈ ತಟಸ್ಥ ಬಿಂದುವನ್ನು ಕಂಡುಕೊಳ್ಳುವುದು ಹೇಗೆ? ಯಾವುದೇ ಸಂಗತಿ, ವಿದ್ಯಮಾನಗಳ ಕುರಿತು ಮನದಲ್ಲಿ ಗಟ್ಟಿ ನಿಲುವಿಗೆ ಬರಬೇಡಿ. ನನ್ನ ದಿನವನ್ನು, ಮನಸ್ಸಿನ ಶಾಂತಿಯನ್ನು ಹಾಳುಗೆಡವುಹ ಯಾವ ಶಕ್ತಿಯೂ ಜಗತ್ತಿನಲ್ಲಿ ಇಲ್ಲ ಎಂದುಕೊಳ್ಳಿ.
ಯಾವುದರ ಕುರಿತೂ ದೂರಬೇಡಿ. ನಿಮ್ಮನ್ನು ಬಲಿಪಶು ಮಾಡಲಾಯಿತು ಎಂದು ಕಣ್ಣೀರು ಸುರಿಸಬೇಡಿ. ಅನಗತ್ಯವಾಗಿ ವೀರಾವೇಶದಿಂದ ವರ್ತಿಸಬೇಡಿ. ಶಾಂತಿಯಿಂದ ಕೆಲಸ ಮಾಡುತ್ತ ಹೋಗಿ.

ಬಾಹ್ಯದ ಲೌಕಿಕ ಗುರಿಗಳು, ಸಿರಿವಂತಿಕೆ, ಕಾರುಗಳು ಎಲ್ಲದರ ಬೆನ್ನಟ್ಟಿ ನಿಮ್ಮೊಳಗಿನ ಪೂರ್ಣತ್ವವನ್ನು ಮರೆಯಬೇಡಿ. ನಿಮ್ಮೊಳಗಿನ ಪೂರ್ಣತ್ವವನ್ನು ಹೇಗೆ ಗ್ರಹಿಸುತ್ತೀರಿ. ನಿಮ್ಮ ಬಾಹ್ಯ ಜಗತ್ತಿನ ಕುರಿತಾಗಿ ಇರುವ ಮೋಹವನ್ನು ತ್ಯಜಿಸಿದಾಗ ನಿಮ್ಮೊಳಗಿನ ಪೂರ್ಣತ್ವದ ಅರಿವಾಗುತ್ತದೆ.

ಕಣ್ಣುಮುಚ್ಚಿ ಕುಳಿತುಕೊಳ್ಳಿ. ತಲೆಯ ಮೇಲಿಂದ ಚಿನ್ನದ ಬೆಳಕು ನಿಮ್ಮೊಳಗೆ ಪ್ರವೇಶಿಸುತ್ತದೆ. ನಿಮ್ಮೊಳಗಿನ ಶಕ್ತಿಕೇಂದ್ರಗಳನ್ನೆಲ್ಲ ಚುರುಕುಗೊಳಿಸುತ್ತದೆ. ಆಗ ನಿಮ್ಮ ಪೂರ್ಣತ್ವದ ಅರಿವಾಗುತ್ತದೆ.

ನಿತ್ಯವೂ ಮಂತ್ರವೊಂದನ್ನು ಪಠಿಸಿ. ನಿಮ್ಮೊಳಗಿನ ಕಿರಿಕಿರಿ, ಅಭದ್ರತಾ ಭಾವನೆ ಮಾಯವಾಗುತ್ತದೆ. ಹೊಸ ಶಾಂತಿ ನಿಮ್ಮನ್ನು ಆವರಿಸುತ್ತದೆ. ಸಂತಸ ನಿಮ್ಮೊಳಗಿನಿಂದ ಹರಿಯುತ್ತದೆ. ರಾತ್ರಿ ಮಲಗುವಾಗ ಯಾವ ಚಿಂತೆಯನ್ನೂ ಮಾಡದೇ ನೆಮ್ಮದಿಯಿಂದ ನಿದ್ರಿಸಿ. ಬೃಹತ್‌ ಶಕ್ತಿಯೊಂದು ನಿಮಗಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ನೆನಪಿಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT