ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂತರ ಕಲಿಕೆ–ಬೋಧನೆಯ‘ಅನುಭವ ಮಂಟಪ’ದಲ್ಲಿ...

ನೆನಪಿನ ಗಣಿ | ಚಿತ್ರ ಕಲಾವಿದ ಪ್ರೊ. ವಿ.ಜಿ. ಅಂದಾನಿ
Last Updated 16 ಜುಲೈ 2016, 19:30 IST
ಅಕ್ಷರ ಗಾತ್ರ

ನಾನು ಕಲಬುರ್ಗಿಯ ಶರಣಬಸವೇಶ್ವರ ಪ್ರೌಢಶಾಲೆ ವಿದ್ಯಾರ್ಥಿಯಾಗಿದ್ದ ದಿನಗಳವು (1963–64). ‘ಇಲ್ಯೂಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ’ ಪತ್ರಿಕೆಯವರು ಚಿತ್ರಕಲಾ ಸ್ಪರ್ಧೆ ಏರ್ಪಡಿಸಿದ್ದರು. ನಮ್ಮ ಶಾಲೆಯಿಂದ ಆರು ಕಲಾಕೃತಿಗಳನ್ನು ಸ್ಪರ್ಧೆಗೆ ಕಳುಹಿಸಲಾಗಿತ್ತು. ಸ್ಪರ್ಧೆಯಲ್ಲಿ ನನ್ನ ಚಿತ್ರಕಲೆಗೆ 100 ರೂಪಾಯಿ ಬಹುಮಾನ ಬಂದಿತು. ಇಡೀ ಕಾಲೇಜಿಗೆ ನಾನು ಹೀರೊ ಆಗಿದ್ದೆ.

1969ರಲ್ಲಿ ಚಿತ್ರಕಲಾ ವಿಷಯದಲ್ಲಿ ಡಿಪ್ಲೊಮಾ ಪದವಿ ಪಡೆದೆ. ರಾಜ್ಯಕ್ಕೆ ಮೊದಲ ರ್‍ಯಾಂಕ್‌ ಬಂದಿದ್ದೆ. ನನ್ನೊಳಗಿನ ಕಲಾಸಕ್ತಿ ಗುರುತಿಸಿ ಕರ್ನಾಟಕ ಸರ್ಕಾರ ರಾಜಾಸ್ತಾನದ ‘ಬನಸ್ಥಳ ವಿದ್ಯಾಪೀಠ’ದ ಕಾರ್ಯಾಗಾರಕ್ಕೆ ಆಯ್ಕೆ ಮಾಡಿತು. ರಾಜ್ಯದಿಂದ ಏಳು ವಿದ್ಯಾರ್ಥಿಗಳು ಅಲ್ಲಿಗೆ ಹೋಗಿದ್ದೆವು. ಅಜಂತಾ, ಎಲ್ಲೋರದ ಭಿತ್ತಿಚಿತ್ರಗಳನ್ನು ರಚಿಸುವುದು ಅದರ ಉದ್ದೇಶ. ಆಗಷ್ಟೇ ಡಿಪ್ಲೊಮಾ ಪೂರ್ಣಗೊಳಿಸಿ ಹೊರಬಂದಿದ್ದ ನನ್ನ ಗ್ರಹಿಕೆಗಳನ್ನು ಬನಸ್ಥಳ ವಿಸ್ತರಿಸಿತು.

ಹೊನ್ನಕಿರಣಗಿಯ ಬೆಳಕು
ಕಲಬುರ್ಗಿಯಿಂದ 25 ಕಿಲೋಮೀಟರ್‌ ದೂರದ ಹೊನ್ನಕಿರಣಗಿ ನನ್ನೂರು. ಭಾರತ–ಚೀನಾ ಯುದ್ಧದ ವೇಳೆ ನಮ್ಮೂರಿನ ಜನರು ಹಣದ ಬದಲು ಬಂಗಾರ ದಾನ ಮಾಡಿದ್ದರು. ಆ ಸಂದರ್ಭದಲ್ಲಿ, ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರು ಕಿರಣಗಿಯನ್ನು ‘ಹೊನ್ನಕಿರಣಗಿ’ ಎಂದು ಬಣ್ಣಿಸಿದ್ದರು. ಅಲ್ಲಿನ ಜನರ ಮನಸ್ಸು ಹಾಗೂ ಹೃದಯಶ್ರೀಮಂತಿಕೆ ಮೆಚ್ಚಿಕೊಂಡಿದ್ದರು.

ಹೊನ್ನಕಿರಣಗಿ ಫಲವತ್ತಾದ ಮಣ್ಣು ಹೊಂದಿದೆ. ಶೇಂಗಾ, ಜೋಳ, ತೊಗರಿ, ಕುಸುಬಿ, ಸೂರ್ಯಕಾಂತಿ ಕೃಷಿ ಇಲ್ಲಿ ಹೆಚ್ಚು. ಊರಿನ ಪರಿಸರ ಅದ್ಭುತವಾದುದು. ಬುದ್ಧಿವಂತಿಕೆ, ವಿಚಾರವಂತಿಕೆ, ಪ್ರಗತಿಪರ ಅನುಭವ, ಹೋರಾಟದ ಬದುಕು, ದುಡಿಮೆ, ಸಾಗುವಳಿಗಳ ಬಗ್ಗೆ ಚಿಂತಿಸುವ ಮನಸುಗಳು ಅಲ್ಲಿವೆ.

ನಮಗೆ ಸಮೀಪದ ಪಟ್ಟಣವೆಂದರೆ ಏಳು ಕಿಲೋಮೀಟರ್‌ ಅಂತರದ ಶಹಾಬಾದ್. ಆಗ ಶಹಾಬಾದ್‌ನಲ್ಲಿ ಎಸಿಸಿ ಸಿಮೆಂಟ್ ಕಾರ್ಖಾನೆ ಪ್ರಾರಂಭವಾಗಿ ಹಣದ ಚಲಾವಣೆ ಜೋರಾಗಿತ್ತು. ಊರಿನ ಗೆಳೆಯರೊಂದಿಗೆ ಹೊಲಗಳಿಗೆ ಹೋಗುವುದು. ಊರಿನ ನೆಲ–ಜಲ–ಕಲ್ಲು ಎಲ್ಲವುಗಳೊಂದಿಗೆ ಆತ್ಮೀಯತೆ ಬೆಸೆದುಕೊಂಡಿತ್ತು.

ನಮ್ಮೂರಲ್ಲಿ 5ನೇ ತರಗತಿವರೆಗೆ ಮಾತ್ರ ಇತ್ತು. 6ನೇ ತರಗತಿಗಾಗಿ ಕಲಬುರ್ಗಿಯ ಶರಣಬಸವೇಶ್ವರ ಪ್ರೌಢಶಾಲೆ ಸೇರಿದೆ. ಕಲಬುರ್ಗಿಯ ಗಾಜಿಪುರದ ಬಾಡಿಗೆ ಮನೆಯಲ್ಲಿ ವಾಸ. ಹೈದರಾಬಾದ್ ಕರ್ನಾಟಕ ವಿಮೋಚನೆ ಘಟನೆಗಳು ಆಗಿನ್ನೂ ಹಸಿಯಾಗಿದ್ದವು. ಪ್ರತಿದಿನ ಶಾಲೆಯಿಂದ ಬರುವಾಗ ತುಂಬಿದ ಕೆರೆ, ಕಪ್ಪು ಕಲ್ಲಿನ ಕೋಟೆ, ತಂಪು ನೀಡುವ ಮನೆಗಳು, ಗಿಡಮರ ನೋಡುತ್ತಾ ರೂಮು ಸೇರಿಕೊಳ್ಳುತ್ತಿದ್ದೆ. ರಸ್ತೆಯಲ್ಲಿ ಟಾಂಗಾ, ಸೈಕಲ್ ಬಿಟ್ಟರೆ ಬೇರೆ ವಾಹನಗಳ ಓಡಾಟ ಇರಲಿಲ್ಲ. ‘ಎಂಎಸ್‌ಕೆ ಮಿಲ್’ ಕಾರ್ಮಿಕರು ಸೈಕಲ್‌ನಲ್ಲಿ ಹೋಗುವ ದೃಶ್ಯ ಚೆಂದವಾಗಿತ್ತು.

ಶಾಲೆಯಲ್ಲಿ ಚಿತ್ರಕಲೆಯ ತರಗತಿ ಇದ್ದಾಗ ಸಂತೋಷವಾಗುತ್ತಿತ್ತು. ಚಿತ್ರಕಲಾ ಶಿಕ್ಷಕ ವಿ.ಎಸ್. ಭಂಕೂರಕರ ಆತ್ಮೀಯವಾಗಿ ಪಾಠ ಮಾಡುತ್ತಿದ್ದರು. ವೇಳೆ ಸಿಕ್ಕಾಗಲೆಲ್ಲ ಅವರ ಡ್ರಾಯಿಂಗ್ ರೂಮಿಗೆ ಹೋಗುತ್ತಿದ್ದೆ. ಒಮ್ಮೆ ಪತ್ರಿಕೆಯಲ್ಲಿ ಬಂದಿದ್ದ ‘ಮೊಘಲ್ ಎ ಆಜಮ್’ ಚಲನಚಿತ್ರದ ಪೋಸ್ಟರ್ ಅನ್ನು ಕಪ್ಪುಬಿಳುಪಿನಲ್ಲಿ ಚಿತ್ರಿಸಿ ಶಿಕ್ಷಕರಿಗೆ ತೋರಿಸಿದಾಗ ಅವರು ಖುಷಿಪಟ್ಟಿದ್ದರು. ಅದನ್ನು ಕಾಲೇಜಿನ ಸೂಚನಾ ಫಲಕದಲ್ಲಿ ಕೆಲ ದಿನಗಳವರೆಗೆ ಅಂಟಿಸಲಾಗಿತ್ತು.

ನಪಾಸು ಮತ್ತು ಹೊಸ ಕನಸುಗಳು
ನಾನು ಚಿತ್ರಕಲೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳುವುದು ಮನೆಯಲ್ಲಿ ಇಷ್ಟವಿರಲಿಲ್ಲ. ನೌಕರಿ ಮಾಡಬೇಕು ಎಂಬುದು ತಂದೆಯ ಆಸೆಯಾಗಿತ್ತು. ಇದಕ್ಕಾಗಿ ಹುಬ್ಬಳ್ಳಿಯ ಪಿ.ಸಿ. ಜಾಬಿನ್ ಕಾಲೇಜಿಗೆ ಸೇರಿಸಿದರು. ಆದರೆ, ವಿಜ್ಞಾನ ವಿಷಯ ಒಗ್ಗಲಿಲ್ಲ. ಪ್ರಥಮ ಪಿಯುಸಿಯಲ್ಲೇ ಫೇಲಾದೆ. ಹುಬ್ಬಳ್ಳಿ ತೊರೆದು ಮತ್ತೆ ಕಲಬುರ್ಗಿ ಶರಣಬಸವೇಶ್ವರ ಕಲಾಶಾಲೆ ಸೇರಿಕೊಂಡೆ. ಡಿಪ್ಲೊಮಾದಲ್ಲಿ ರ್‍ಯಾಂಕ್‌ ಬಂದದ್ದು ಬದುಕಿಗೆ ತಿರುವು ನೀಡಿತು. ಈ ಸಾಧನೆ ಬನಸ್ಥಳದ ವಿದ್ಯಾಪೀಠಕ್ಕೆ ಕರೆದೊಯ್ಯಿತು. ಈ ವಿದ್ಯಾಪೀಠದ ಪ್ರಭಾವ ಕಲಾ ಶಿಕ್ಷಣದಲ್ಲಿ ಆಸಕ್ತಿ ಹೆಚ್ಚಿಸಿತು.

ಬನಸ್ಥಳದಿಂದ ಮರಳಿದ ಮೇಲೆ ಕಲಬುರ್ಗಿಯ ಗ್ರೀನೋಬಲ್ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡತೊಡಗಿದೆ. ಈ ಕೆಲಸದೊಂದಿಗೆ ಸರ್ಕಾರಿ ಕಾಲೇಜಿನ ಸಮೀಪ ಕಲಾಶಾಲೆ ಪ್ರಾರಂಭಿಸಿದೆ. ಅಲ್ಲಿ ಚಿತ್ರಕಲೆ, ರಂಗಚಟುವಟಿಕೆಗಳು ನಡೆಯುತ್ತಿದ್ದವು. ಸಂಜೆ 5ರ ನಂತರ ರಂಗಾಸಕ್ತರ ದೊಡ್ಡಪಡೆಯೇ ಸೇರುತ್ತಿತ್ತು. ನಾಟಕ ಅಭ್ಯಾಸ, ಚಿತ್ರಕಲೆ ಬಿಡಿಸುವ ಸೃಜನಶೀಲ ಚಟುವಟಿಕೆಗಳಿಗೆ ಆ ಪುಟ್ಟ ಶಾಲೆ ವೇದಿಕೆಯಾಯಿತು. ಶಾಲೆಗೆ ಸರಿಯಾದ ಸೂರು ಸಹ ಇರಲಿಲ್ಲ. ತಗಡಿನ ಶೀಟ್‌ಗಳು ನೆರಳು ನೀಡುತ್ತಿದ್ದವು.

ಒಮ್ಮೆ ನಮ್ಮ ಶಾಲೆಯಿಂದ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿದ್ದೆವು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲು ಪಾಲಿಕೆ ಆಯುಕ್ತರನ್ನು ಕರೆಯಿಸಿದ್ದೆವು. ನಾವು ಆಯ್ಕೆ ಮಾಡಿದ ವಿದ್ಯಾರ್ಥಗಳಲ್ಲಿ ಅಂದಿನ ಪ್ರಾದೇಶಿಕ ಆಯುಕ್ತರ ಮಗನೂ ಸೇರಿದ್ದ. ಮಗನೊಂದಿಗೆ ಅವರೂ ಬಂದಿದ್ದರು. ಈ ವಿಷಯ ಗೊತ್ತಾಗಿ ಅವರನ್ನು ವೇದಿಕೆ ಮೇಲೆ ಕರೆದವು. ನಮ್ಮ ಶಾಲೆಯ ಸ್ಥಿತಿಯನ್ನು ಕಣ್ಣಾರೆ ಕಂಡ ಅವರು ಶಾಲೆಗಾಗಿ ಜಾಗ ನೀಡುವ ಅಭಯ ನೀಡಿದರು. ಕೆಲವೇ ದಿನಗಳಲ್ಲಿ ಈಗಿನ ಸಾರ್ವಜನಿಕರ ಉದ್ಯಾನ ಸಮೀಪದ ಒಂದು ಎಕರೆ ಜಾಗ ಕಲಾಶಾಲೆಗಾಗಿ ಮಂಜೂರು ಮಾಡಿಸಿದರು.

‘ಇಲ್ಯೂಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ’ ಹಾಗೂ ‘ಧರ್ಮಯುಗ’ ಪತ್ರಿಕೆಗಳು ಕಲಾಲೋಕದ ಪರಿಚಯ ಮಾಡಿಸಿದವು. ಹುಸೇನ್, ತಯ್ಯಬ್ ಮೆಹತಾ, ಅಕಬರ, ಪಿ.ಟಿ. ರೆಡ್ಡಿ, ಕೆ.ಕೆ. ಹೆಬ್ಬಾರರ ಚಿತ್ರಗಳನ್ನು ‘ವೀಕ್ಲಿ’ಯಲ್ಲಿ ನೋಡುತ್ತಿದ್ದೆವು. ಕಲಬುರ್ಗಿಯ ‘ಹಿಂದಿ ಪ್ರಚಾರಸಭಾ’ದ ಗ್ರಂಥಾಲಯ ಮತ್ತು ‘ಜಗತ್ ಕನ್ನಡ ಸಂಘ’ದ ಗ್ರಂಥಾಲಯಗಳಿಂದ ನಮಗೆ ಬಹಳಷ್ಟು ಪತ್ರಿಕೆಗಳ ಪರಿಚಯ ಆಯಿತು.

ದಿಗ್ಗಜರ ಒಡನಾಟ
1974ರಲ್ಲಿ ನಮ್ಮ ‘ಐಡಿಯಲ್ ಫೈನ್ ಆರ್ಟ್’ ಕಾಲೇಜಿಗೆ ಎನ್.ಎಸ್. ಬೇಂದ್ರೆ ಅವರನ್ನು ಆಹ್ವಾನಿಸಲಾಗಿತ್ತು. ಬೇಂದ್ರೆ ಅವರದು ಆಧುನಿಕ ದೃಶ್ಯಕಲಾ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು. ಕಲಬುರ್ಗಿಯಲ್ಲಿ ತೈಲವರ್ಣ ಹಾಗೂ ಕ್ಯಾನ್‍ವಾಸ್ ಸಿಗುತ್ತಿರಲಿಲ್ಲ. ಬೇಂದ್ರೆ ಅವರು ಚಿಕ್ಕ ಕ್ಯಾನ್‍ವಾಸ್ ಮೇಲೆಯೇ ಮೂರು ಎಮ್ಮೆಗಳನ್ನು ತೈಲವರ್ಣದಲ್ಲಿ ಸಂಯೋಜನೆ ಮಾಡಿ

ಪ್ರಾತ್ಯಕ್ಷಿಕೆ ನೀಡಿದರು. ಅವರೊಂದಿಗೆ ಮಾಡಿದ ಚರ್ಚೆ, ಆಡಿದ ಮಾತು ನಮಗೂ ವಿದ್ಯಾರ್ಥಿಗಳಿಗೂ ಅತ್ಯುತ್ತಮ ಪಾಠವಾಗಿತ್ತು. ವರ್ಣ ಬಳಸುವ ರೀತಿ, ಪ್ರಕೃತಿ ನೋಡುವ ಸೂಕ್ಷ್ಮ ಸಂಗತಿಗಳ ಮನವರಿಕೆ ಆಯಿತು.

ಸರಳ ವ್ಯಕ್ತಿತ್ವದ ಎ.ಎ. ಆಲಮೇಲಕರ ಅವರು ನಮ್ಮಲ್ಲಿಗೆ ಬಂದು ವಿದ್ಯಾರ್ಥಿಗಳ ಮಧ್ಯೆ ಕಲಾಕೃತಿಗಳ ಚರ್ಚೆ ಮಾಡಿದರು. ಅನೇಕ ಗಣ್ಯರು, ಅಧಿಕಾರಿಗಳು ನಮ್ಮ ಶಾಲೆಯಲ್ಲಿ ನಡೆಯುತ್ತಿದ್ದ ಚಿತ್ರ ಪ್ರದರ್ಶನ ವೀಕ್ಷಿಸುತ್ತಿದ್ದರು. ವಿನೂತನವಾದ ಪರಿಕಲ್ಪನೆಗಳಿಂದ ಕಲಾಶಾಲೆ ಬೆಳೆಯುತ್ತಾ ಸಾಗಿತು.
ನಾಡಿನ ಬರಹಗಾರರು, ನಾಟಕಕಾರರಿಂದ ಈ ಶಾಲೆ ಪ್ರೇರಣೆ ಪಡೆದುಕೊಂಡಿದೆ.

ಬಿ.ವಿ. ಕಾರಂತ, ತಿಪ್ಪೇಸ್ವಾಮಿ ಪಿ.ಆರ್., ಶಿವರಾಮ ಕಾರಂತ, ಚೆನ್ನವೀರ ಕಣವಿ, ಕೆ.ಎ. ಅಬ್ಬಾಸ್, ಚಂದ್ರಕಾಂತ ಕುಸನೂರು, ಗಿರಡ್ಡಿ ಗೋವಿಂದರಾಜು, ಪಾಟೀಲ ಪುಟ್ಟಪ್ಪ, ಖಾದ್ರಿ ಶಾಮಣ್ಣ, ನಟರಾದ ರಾಜಕುಮಾರ್, ಉದಯಕುಮಾರ್ ಅವರು ಶಾಲೆಗೆ ಭೇಟಿ ನೀಡಿ ಶ್ಲಾಘಿಸಿದ್ದಾರೆ. ಇವರೆಲ್ಲರ ಮೆಚ್ಚುಗೆಯ ಮಾತುಗಳಿಂದ ಶಾಲೆಯ ಕಲಾಪರಂಪರೆಗೆ ಗಟ್ಟಿತನ ಬಂದಿದೆ. ಕಲಬುರ್ಗಿಯ ಈ ಕೇಂದ್ರ ಮಹತ್ತರವಾದ ಕೊಡುಗೆ ನೀಡುತ್ತಿದೆ ಎಂದು ಎಸ್.ಎಂ. ಪಂಡಿತ್ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಶಾಲೆಯಲ್ಲಿ ತಿಂಗಳಿಗೊಮ್ಮೆ ವಿಚಾರಗೋಷ್ಠಿ, ಚರ್ಚೆ, ಕಮ್ಮಟಗಳು ನಡೆಯುತ್ತಿದ್ದವು. ಸಾಹಿತಿ–ಕಲಾವಿದರನ್ನು ಒಂದೆಡೆ ಸೇರಿಸಿ ಸಂವಾದ ಏರ್ಪಡಿಸುತ್ತಿದ್ದೆವು. ಒಮ್ಮೆ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಹಾ.ಮಾ.ನಾಯಕ ಅವರನ್ನು ಕರೆಸಿದೆವು. ನಾವು ಸೃಷ್ಟಿಸಿದ್ದ ಸಾಂಸ್ಕೃತಿಕ ಪರಿಸರ ಅವರಿಗೆ ಇಷ್ಟವಾಯಿತು. ನಮ್ಮ ಬೇಡಿಕೆಯಂತೆ ‘ಫೈನ್ ಆರ್ಟ್ ಪದವಿ ಕೋರ್ಸ್’ಗೆ ಗುಲಬರ್ಗಾ ವಿಶ್ವವಿದ್ಯಾಲಯದ ಮಾನ್ಯತೆ ನೀಡಿದರು. ಮುಂದೆ ಕಾಲೇಜಿನ ವಿಕಾಸದಲ್ಲಿ ಮ.ಗು. ಬಿರಾದಾರ ಅಪಾರ ಶ್ರಮ ವಹಿಸಿದರು.

ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ
ಇತಿಹಾಸಕಾರ ಗುರುರಾಜ ಭಟ್ಟರ ಜತೆ ತಿರುಗಾಡಿದ ಅನುಭವ ಅನನ್ಯವಾದುದು. ಹೈದರಾಬಾದ್ ಕರ್ನಾಟಕದ ಗತ ವೈಭವ ಹಳ್ಳಿಗಳಲ್ಲಿ ಕಾಣಸಿಕ್ಕಿತು. ಪ್ರತಿ ಹಳ್ಳಿಯಲ್ಲಿನ ಬಂಡೆಗಳಲ್ಲಿನ ಕುಸುರಿ ಕೆಲಸ, ಹಳೆಯಬಾವಿಗಳು, ಹಳೆಯ ಮನೆಗಳು, ಬಾವಿಯ ಗಿರಕಿ, ವೀರಗಲ್ಲು, ಬಂಗಲೆಗಳ ಕಿಟಕಿ, ಬಾಗಿಲ ವಿನ್ಯಾಸ, ರಸ್ತೆ ಪಕ್ಕದಲ್ಲಿ ಸಿಕ್ಕ ವಿಗ್ರಹಗಳು, ಗುಡಿಗಳ ಗೋಳು, ಊರ ಅಗಸಿ, ಒಣಗಿನಿಂತ ಮರ ಎಲ್ಲವೂ ನನ್ನೊಳಗೆ ಗಾಢವಾಗಿ ಇಳಿದವು.

ಪ್ರತಿಯೊಂದು ಸ್ಮಾರಕದ ಛಾಯಾಚಿತ್ರವನ್ನು ಗುರುರಾಜ ಭಟ್ಟರ ಮಗ ತೆಗೆಯುತ್ತಿದ್ದರು. ಎಲ್ಲ ಊರಿನ ದೇಗುಲಗಳ ಸ್ಥಿತಿ ಒಂದೇ ರೀತಿ ಇತ್ತು. ಅವೆಲ್ಲ ನನ್ನ ಚಿತ್ರಗಳಿಗೆ ವಸ್ತುಗಳಾದವು. ಅವುಗಳನ್ನು ಕಪ್ಪುಬಿಳುಪಿನಲ್ಲಿ ಚಿತ್ರಿಸಲು ಪ್ರಾರಂಭಿಸಿದೆ. ಮೂರ್ತ–ಅಮೂರ್ತಗಳೆಲ್ಲ ಚಿತ್ರಗಳಲ್ಲಿ ಸೆರೆಯಾದವು.
ಚಿತ್ರ ಕಲಾವಿದನಿಗೆ ಮನ್ನಣೆ ಸಿಗುವುದೇ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಗಳಿಂದ. ದೇಶದ ಪ್ರಮುಖ ನಗರಗಳಲ್ಲಿ ನನ್ನ ಕಲಾಕೃತಿಗಳು ಪ್ರದರ್ಶನಗೊಂಡಿವೆ. ಒಂದೇ ವಿಷಯದ ಮೇಲಿನ ಸರಣಿ ಚಿತ್ರಗಳ ಪ್ರದರ್ಶನ ಹೆಸರು ತಂದುಕೊಟ್ಟಿತು. ಇಂಥ ಪ್ರದರ್ಶನಗಳೇ ಕಲಾವಿದರಿಗೆ ಸಿಗುವ ಬಹು ದೊಡ್ಡ ಮನ್ನಣೆ.

ದೆಹಲಿಯ ‘ಧರಣಿ ಗ್ಯಾಲರಿ’ಯಲ್ಲಿ 1981ರಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಕ್ಕೆ ನಿರ್ಧರಿಸಿದೆ. ಕರ್ನಾಟಕದಿಂದ ಹೊರಗೆ ಕಲಾಕೃತಿ ಪ್ರದರ್ಶನ ಹಮ್ಮಿಕೊಂಡದ್ದು ಅದೇ ಪ್ರಥಮ. ಕಲಬುರ್ಗಿಯಿಂದ ಪೇಟಿಂಗ್‌ಗಳನ್ನು ರೈಲಿನಲ್ಲಿ ತೆಗೆದುಕೊಂಡು ಹೋಗುವುದೇ ಸವಾಲಾಗಿತ್ತು. ರಾತ್ರಿಪೂರ್ತಿ ಪೇಟಿಂಗ್‌ಗಳ ಬಗ್ಗೆ ಕಾಳಜಿ ವಹಿಸಿದೆ. ಎರಡು ದಿನದ ಪ್ರವಾಸದ ನಂತರ ದೆಹಲಿ ತಲುಪಿದೆವು. ಆ ಪ್ರದರ್ಶನದ ಅನುಭವ ಉತ್ತೆಜನಕಾರಿಯಾಗಿತ್ತು. ಇಂಗ್ಲಿಷ್ ಪತ್ರಿಕೆಗಳಲ್ಲಿ ವಿಮರ್ಶಾ ಲೇಖನಗಳು ಬಂದವು. ಪ್ರಾದೇಶಿಕ ವಿಚಾರಗಳ ಆಧರಿಸಿದ ಕಲಾಕೃತಿಗಳ ಕುರಿತು ಹಿರಿಯ ಕಲಾವಿದರು ಮೆಚ್ಚುಗೆ ಮಾತುಗಳನ್ನಾಡಿದ್ದರು.

ನಂತರ ಮುಂಬೈನ ‘ಜಹಾಂಗೀರ್ ಕಲಾ ಗ್ಯಾಲರಿ’ಯಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ನಡೆಯಿತು. ಪ್ರದರ್ಶನ ವೀಕ್ಷಣೆಗೆ ಎಸ್.ಎಂ. ಪಂಡಿತರು ಗೆಳೆಯರೊಂದಿಗೆ ಬಂದಿದ್ದರು.ಹೆಬ್ಬಾರ, ಸೊಲ್ಲಾಪುರಕರ ಬಂದರು. ಎಲ್ಲ ಹಿರಿಯ ಕಲಾವಿದರನ್ನು ನೋಡಿ ನಾನು ದಿಗಿಲುಗೊಂಡಿದ್ದೆ. ಹಿರಿಯರ ಒಡನಾಟ ಲಭಿಸಿದ ಅಪರೂಪದ ಪ್ರದರ್ಶನ ಅದಾಗಿತ್ತು.

ಒಲಿದು ಬಂದ ಅವಕಾಶಗಳು
ಟಿ.ಪಿ. ಅಕ್ಕಿ ಅವರು ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಮ್ಮ ಕಲಾ ಶಾಲೆಯಲ್ಲಿ ಅಖಿಲ ಭಾರತ ಮಟ್ಟದ ಚಿತ್ರಕಲಾವಿದರ ಶಿಬಿರ ನಡೆಯಿತು. ಶಿಬಿರದಲ್ಲಿ ಮುಂಬೈನ ಜೆ.ಜೆ. ಕಲಾ ಶಾಲೆಯ ಡೀನ್ ಆಗಿದ್ದ ಶಂಕರ್ ಫಳಸೀಕರ ಬಂದಿದ್ದರು. ನಂತರ ಅಂತರರಾಷ್ಟ್ರೀಯ ಮಟ್ಟದ ಶಿಬಿರ ನಡೆಯಿತು. ಆಸ್ಟ್ರೇಲಿಯಾ, ಸಿಂಗಾಪುರ, ಜರ್ಮನಿಯ 20 ಕಲಾವಿದರು ಪಾಲ್ಗೊಂಡರು.

1993ರಲ್ಲಿ ಕೇಂದ್ರೀಯ ಲಲಿತಕಲಾ ಅಕಾಡೆಮಿಯ ಪ್ರಶಸ್ತಿ ಲಭಿಸಿತು. ಕಲಾ ಶಾಲೆಗಳಿಗಾಗಿ ಪಠ್ಯಕ್ರಮ ಸಿದ್ಧಪಡಿಸಿದೆ. ‘ಕರ್ನಾಟಕ ಲಲಿತಕಲಾ ಅಕಾಡೆಮಿ’ಗೆ ಐದು ಬಾರಿ ಸದಸ್ಯನಾಗಿ ನೇಮಕವಾದೆ. ಯಾರ ಬೆನ್ನುಹತ್ತದೆ ಅಕಾಡೆಮಿಯ ಅಧ್ಯಕ್ಷ ಸ್ಥಾನ ಒಲಿಯಿತು. ಆಗ ನಾಟಕ ಅಕಾಡೆಮಿಗೆ ಸಿಜಿಕೆ ಅಧ್ಯಕ್ಷರು, ಸಾಹಿತ್ಯ ಅಕಾಡೆಮಿಗೆ ಯು.ಆರ್. ಅನಂತಮೂರ್ತಿ ಅಧ್ಯಕ್ಷರಾಗಿದ್ದರು. ದಿಗ್ಗಜರ ಸನಿಹ ಮತ್ತಷ್ಟು ಉತ್ಸಾಹ ತುಂಬಿತು.

ಕಲಾಶಾಲೆಯ ಧ್ಯಾನ
ಕಲಬುರ್ಗಿಗೆ ಮಹಾನಗರ ಪಾಲಿಕೆಯ ಸ್ಥಾನ ಲಭಿಸಿದ ಮೇಲೆ ಉದ್ಘಾಟನೆಗಾಗಿ ಮುಖ್ಯಮಂತ್ರಿ ಆರ್‌. ಗುಂಡೂರಾವ್ ಬಂದಿದ್ದರು. ಕಾಲೇಜಿಗೆ ಬಂದು ಅಲ್ಲಿನ ಚಟುವಟಿಕೆ ಗಮನಿಸಿದರು. ಕಟ್ಟಡ ನಿರ್ಮಾಣಕ್ಕಾಗಿ ₹5 ಲಕ್ಷ ಅನುದಾನ ಬಿಡುಗಡೆ ಮಾಡಿದರು.

ಕಲಾಶಾಲೆಯ ದೃಷ್ಟಿಕೋನ ನನ್ನಲ್ಲಿ ಆಳವಾಗಿ ಬೇರೂರಿದೆ. ಹಂತಹಂತವಾಗಿ ಗ್ಯಾಲರಿ, ಸ್ಟುಡಿಯೊ, ಕಟ್ಟಡ ಅಭಿವೃದ್ಧಿಪಡಿಸಲಾಯಿತು. 12 ಸಾವಿರ ಪುಸ್ತಕಗಳು ಇಲ್ಲಿವೆ. ಅಂದಾಜು 3 ಸಾವಿರ ಸ್ಲೈಡ್‌ಗಳನ್ನು ಸಂಗ್ರಹಿಸಲಾಗಿದೆ. ಬಂದ ಗಣ್ಯರು ಪುಸ್ತಕ ನೀಡಿ ಹೋಗುತ್ತಾರೆ. ಇಲ್ಲಿನ ಪ್ರತಿಯೊಂದು ಕಲಾಕೃತಿಯ ಹಿಂದೆಯೂ ಮುದ ನೀಡುವ ನೆನಪುಗಳಿವೆ. ಕೆಲವರು ಈ ಶಾಲೆಯನ್ನು ಮುಂಬೈನ ಜೆ.ಜೆ. ಕಲಾಶಾಲೆಗೆ ಹೋಲಿಸಿದ್ದಾರೆ. ನಮ್ಮ ಈ ಶಾಲೆ ಇಂದು ರಾಜ್ಯದಲ್ಲಿಯೇ ಅತ್ಯುತ್ತಮ ಕಲಾಶಾಲೆಯಾಗಿ ರೂಪುಗೊಂಡಿದೆ.

ನಮ್ಮ ಕಾಲೇಜಿನಲ್ಲಿ ಕಲಿತವರು ಕಲಾಕ್ಷೇತ್ರದಲ್ಲಿ ಸತ್ವಪೂರ್ಣವಾಗಿ ಗುರುತಿಸಿಕೊಂಡಿದ್ದಾರೆ. ವಿಜಯ ಭಾಗೋಡಿ, ವಿಜಯ ಹಾಗರಗುಂಡಗಿ, ಜಿ.ಆರ್. ಈರಣ್ಣ, ಮಲ್ಲಿಕಾರ್ಜುನ ಶೆಟ್ಟಿ, ಪ್ರಭು ಹರಸೂರ, ಶೇಷರಾವ್ ಬಿರಾದಾರ್ ಮುಂತಾದವರು ಈ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ. 200ಕ್ಕೂ ಹೆಚ್ಚು ಮಂದಿ ಮುಂಬೈನಲ್ಲಿ, 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ವಿವಿಧ ಕಲಾ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಪುಣೆ, ಹೈದರಾಬಾದ್‌ಗಳಲ್ಲಿ ಸೃಜನಶೀಲ ಕಾರ್ಯದಲ್ಲಿ ತೊಡಗಿದವರು ಸಂಖ್ಯೆಯೂ ದೊಡ್ಡದಿದೆ. ಕೋಲ್ಕತ್ತದ ಶಾಂತಿನಿಕೇತನ, ಬರೋಡ, ಮುಂಬೈನ ಜೆ.ಜೆ. ಕಲಾ ಕಾಲೇಜು, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾಗಳಲ್ಲಿ ನನ್ನ ಶಿಷ್ಯರು ಕೆಲಸ ಮಾಡುತ್ತಿದ್ದಾರೆ. ಹಿಂದುಳಿದ ಭಾಗದಿಂದ ಬಂದರೂ ಅವರಲ್ಲಿನ ಅಪರಿಮಿತ ಕಲಿಕಾಸಕ್ತಿಯೇ ಸುಂದರ ಬದುಕು ನೀಡಿದೆ.

ಸ್ಟುಡಿಯೊಗಳ ಊರು ಕಲಬುರ್ಗಿ
ನಿಜಾಮರ ಕಾಲದಲ್ಲಿ ಕಲಬುರ್ಗಿ ಸ್ಟುಡಿಯೊಗಳಿಗೆ ಹೆಸರುವಾಸಿತ್ತು. 8–10 ದೊಡ್ಡ ಸ್ಟುಡಿಯೊಗಳು ಇಲ್ಲಿದ್ದವು. ದೀನದಯಾಳ ಶರ್ಮಾ ಎಂಬವರು ನಿಜಾಮನ ಛಾಯಾಗ್ರಾಹಕರಾಗಿದ್ದರು. ಇವರು ನಿಜಾಮನ ಕುರಿತ ಚಿತ್ರಗಳನ್ನೇ ತೆಗೆಯುತ್ತಿದ್ದರು. ಶಿರವಾಳಕರ ಸಹ ಅಂದಿನ ಪ್ರಮುಖ ಛಾಯಾಗ್ರಾಹಕರು. ಕಲಬುರ್ಗಿ ಕೋಟೆ ಸಮೀಪದ ‘ಮೊನೊ ಫೋಟೋ ಸ್ಟುಡಿಯೊ’ ಅಂದಿನ ‘ವಿಐಪಿ’ ಸ್ಟುಡಿಯೊ ಆಗಿತ್ತು.

ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಕಲಾ ವಿಷಯಗಳ ಮಾಹಿತಿ ಸಂಗ್ರಹಿಸಲು ಯೋಜನೆ ರೂಪಿಸಲಾಗಿತ್ತು. ಆ ತಂಡದಲ್ಲಿ ನಾನೂ ಇದ್ದೆ. ವಿಶಾಖಪಟ್ಟಣ, ಪಶ್ಚಿಮ ಬಂಗಾಳ, ಮಧ್ಯಪ್ರದೇಶದ ರಾಜ್ಯಗಳ ಪ್ರಮುಖ ಊರುಗಳಲ್ಲಿ ಸುತ್ತಾಡಿ ಮಾಹಿತಿ ಸಂಗ್ರಹಿಸಲಾಯಿತು. ಒಡಿಶಾದ ರಾಜಭವನದಲ್ಲಿ ಅನುಭವ ಹಂಚಿಕೊಳ್ಳಲು ಎಲ್ಲರೂ ಸೇರಿದ್ದೆವು. ಅಲ್ಲಿನ ಗವರ್ನರ್ ನಾನು ಕಲಬುರ್ಗಿಯಿಂದ ಬಂದವನು ಎಂದು ತುಂಬಾ ಪ್ರೀತಿಯಿಂದ ಕಂಡರು. ಅವರು ಕಲಬುರ್ಗಿಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡಿದ್ದವರು. ನನ್ನನ್ನು ಕಂಡ ಕೂಡಲೇ ‘ಮೊನೊ ಸ್ಟುಡಿಯೊ ಹೇಗಿದೆ? ಎಂದು ಪ್ರಶ್ನಿಸಿದರು. ಅವರ ನೆನಪುಗಳು ಅಚ್ಚರಿ ತರಿಸಿದವು. ಅವರ ಅವಧಿಯಲ್ಲಿನ ಕಲಬುರ್ಗಿಯ ಮಹನೀಯ ಬಗ್ಗೆ ಮಾಹಿತಿ ಪಡೆದರು. ನನಗಾಗಿ ಇಡ್ಲಿ, ದೋಸೆಯ ವ್ಯವಸ್ಥೆ ಮಾಡಿಸಿದ್ದರು.
- ನಿರೂಪಣೆ: ರವಿ ಎಸ್‌. ಬಳೂಟಗಿ, ಚಿತ್ರ: ಎಚ್‌.ಜಿ. ಪ್ರಶಾಂತ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT