ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರೀಕ್ಷೆಯ ಹೊರೆಯಲ್ಲಿ ಮುಫ್ತಿ ಮಹಮದ್‌ ಸಯೀದ್‌

ವ್ಯಕ್ತಿ
Last Updated 28 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಮುಫ್ತಿ ಮಹಮದ್‌ ಸಯೀದ್‌ ಹೆಸರು ಕಿವಿಗೆ ಬಿದ್ದ ತಕ್ಷಣ ನೆನಪಾಗುವುದು ರುಬಿಯಾ ಸಯೀದ್‌ ಅಪಹರಣ ಪ್ರಕರಣ. ಕೇಂದ್ರದಲ್ಲಿ ಆಗಷ್ಟೇ ವಿ.ಪಿ.ಸಿಂಗ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಮುಫ್ತಿ ಗೃಹ ಸಚಿವರಾಗಿ ನೇಮಕ ಆಗಿದ್ದರು. ದೇಶದ ಮೊದಲ ಮುಸ್ಲಿಂ ಗೃಹ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಅವರು ಸಂಭ್ರಮದಲ್ಲಿ ಮುಳುಗಿದ್ದಾಗಲೇ ರುಬಿಯಾ ಅಪಹರಣ ಪ್ರಕರಣ ನಡೆದಿತ್ತು. ಶ್ರೀನಗರ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದ ರುಬಿಯಾ, ಮುಫ್ತಿ ಅವರ ಮೂರನೇ ಮಗಳು. ಮಧ್ಯಾಹ್ನ ಕಾಲೇಜಿನಿಂದ ಹೊರಟಿದ್ದ ಅವರನ್ನು ಮೂವರು ಉಗ್ರರು ಅಪಹರಿಸಿದ್ದರು. ಜಮ್ಮು ಆ್ಯಂಡ್ ಕಾಶ್ಮೀರ್ ಲಿಬರೇಷನ್ ಫ್ರಂಟ್‌ನ (ಜೆಕೆಎಲ್‌ಎಫ್‌) ಐವರು ಬಂಧಿತ ಉಗ್ರರನ್ನು ಬಿಡುಗಡೆ ಮಾಡಬೇಕೆಂಬ ಬೇಡಿಕೆ ಇಟ್ಟಿದ್ದರು. ಉಗ್ರರನ್ನು ಬಿಡುಗಡೆ ಮಾಡದಿದ್ದರೆ ರುಬಿಯಾ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು.

ಅಲ್ಲಿವರೆಗೆ ಕಣಿವೆಯೊಳಗೆ ಯಾರೂ ಉಗ್ರರ ಚಟುವಟಿಕೆಗಳನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ಪ್ರಕರಣ ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು. ಹೊಸ ಸರ್ಕಾರ ರುಬಿಯಾ ಅವರನ್ನು ಬಿಡಿಸಿಕೊಳ್ಳಲು ಐವರು ಉಗ್ರರನ್ನು ಬಿಡುಗಡೆ ಮಾಡುವುದು ಅನಿವಾರ್ಯವಾಗಿತ್ತು. ಮುಫ್ತಿ ಮಹಮದ್‌ ಹೆಸರು ಎಲ್ಲರಿಗೂ ಪರಿಚಯವಾದದ್ದು ಈ ಪ್ರಕರಣದಿಂದ.

‘ಉಗ್ರರ ಬೆದರಿಕೆಗೆ ಗೃಹ ಸಚಿವರು ಮಣಿದರು’ ಎನ್ನುವ ಆರೋಪಕ್ಕೆ ಗುರಿಯಾದರು. ‘ದೇಶ ಮುಖ್ಯ, ಮಗಳಲ್ಲ ಎಂಬ ನಿಲುವನ್ನು ಮುಫ್ತಿ ತಳೆಯಬೇಕಿತ್ತು’ ಎಂದು ಅನೇಕರು ಟೀಕಿಸಿದ್ದರು. ಮಗಳನ್ನು ತ್ಯಾಗ ಮಾಡುವ ತಂದೆ ಯಾರಿದ್ದಾರೆ? ರುಬಿಯಾ ಅಪಹರಣ ಪ್ರಕರಣ ನೆನಪು ಮಾಡಿಕೊಳ್ಳುವುದಕ್ಕೆ ಕಾರಣವಿದೆ. ಅನೇಕ ವರ್ಷಗಳಿಂದ ಎಲೆಮರೆಯ ಕಾಯಿಯಂತಿದ್ದ ಮುಫ್ತಿ ಮತ್ತೆ ಮುಂಚೂಣಿಗೆ ಬಂದಿದ್ದಾರೆ.

ಇದುವರೆಗೆ ಎಲ್ಲ ಹೊಣೆಯನ್ನು ಮತ್ತೊಬ್ಬ ಮಗಳು, ಲೋಕಸಭಾ ಸದಸ್ಯೆ ಮೆಹಬೂಬ ಮುಫ್ತಿ ಅವರಿಗೆ ಬಿಟ್ಟು ಅವರಿಗೆ ಬೆಂಬಲವಾಗಿ ನಿಂತಿದ್ದ ಹಿರಿಯ ನಾಯಕ, ಈಗ ಜಮ್ಮು–ಕಾಶ್ಮೀರದ ಮುಖ್ಯಮಂತ್ರಿ ಆಗಿ ಎರಡನೇ ಇನಿಂಗ್ಸ್‌ ಆರಂಭಿಸುತ್ತಿದ್ದಾರೆ. ಅದರಲ್ಲೂ ಸೈದ್ಧಾಂತಿಕವಾಗಿ ವಿರುದ್ಧ ದಿಕ್ಕಿನಲ್ಲಿರುವ ಬಿಜೆಪಿ ಜತೆ ಕೈಜೋಡಿಸಿದ್ದಾರೆ.

‘ಬಿಜೆಪಿ ಜತೆ ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿಗೆ ಸಂಬಂಧವೇ?’ ಎಂದು ಅನೇಕರು ಹುಬ್ಬೇರಿಸಿದ್ದಾರೆ. ‘ಮೈತ್ರಿ ಎಷ್ಟು ದಿನ ಮುಂದುವರಿಯುತ್ತದೆ?’ ಎಂದು ಕೇಳುವವರಿದ್ದಾರೆ. ಮುಫ್ತಿ ಅವರ ಮುತ್ಸದ್ದಿತನದಿಂದ ಇದು ಸಾಧ್ಯವಾಗಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದೊಂದಿಗೆ ಅಧಿಕಾರ ಮಾಡಿದರೆ ರಾಜ್ಯಕ್ಕೆ ಹೆಚ್ಚು ಲಾಭವಾಗಲಿದೆ ಎಂಬ ಅರಿವು ಅವರಿಗಿದ್ದಂತಿದೆ. ಹೀಗಾಗಿ ಅವರಿಗೆ ದಾರಿಗಿಂತ ಗುರಿ ಮುಖ್ಯವಾಗಿದೆ.

ಮುಫ್ತಿ ಅವರು 1936ರ ಜನವರಿ 12ರಂದು ಅನಂತ ನಾಗ್‌ ಜಿಲ್ಲೆಯ ಬಿಜ್‌ಬಿಹಾರದಲ್ಲಿ ಹುಟ್ಟಿದರು. ವಿಧಾನಸಭೆ ಚುನಾವಣೆಯಲ್ಲಿ ಅವರು ಅನಂತನಾಗ್‌ ಕ್ಷೇತ್ರದಿಂದ ಆಯ್ಕೆ ಆಗಿದ್ದಾರೆ. 1987ರವರೆಗೂ ಕಾಂಗ್ರೆಸ್‌ ಪಕ್ಷದಲ್ಲಿದ್ದರು. ಅದೇ ವರ್ಷ ವಿ.ಪಿ. ಸಿಂಗ್‌ ನೇತೃತ್ವದ ಜನ ಮೋರ್ಚಾ ಸೇರಿದರು. ಎರಡು ವರ್ಷಗಳ ಬಳಿಕ ಅವರದೇ ಸಂಪುಟದಲ್ಲಿ ಗೃಹ ಖಾತೆಯನ್ನು ನಿರ್ವಹಿಸಿದರು. ಅದು ಜಮ್ಮು– ಕಾಶ್ಮೀರದಲ್ಲಿ ಕಾಂಗ್ರೆಸ್‌ ವಿರೋಧ ಪಕ್ಷವಾಗಿ ಬೆಳೆಯುತ್ತಿದ್ದ ಕಾಲ. ಒಂದನೇ ಸ್ಥಾನದಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ ಇತ್ತು.

ಎರಡನೇ ಸ್ಥಾನದಲ್ಲಿ ಕಾಂಗ್ರೆಸ್‌ ಪಕ್ಷವಿತ್ತು. ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರು ರಾಜಕೀಯವಾಗಿ ತಪ್ಪು ಹೆಜ್ಜೆ ಇಟ್ಟರು. ನ್ಯಾಷನಲ್‌ ಕಾನ್ಫರೆನ್ಸ್‌ ಜತೆ ಮೈತ್ರಿ ಮಾಡಿಕೊಂಡರು. ಅದನ್ನು ಮುಫ್ತಿ ಅವರು ವಿರೋಧಿಸಿ ಹೊರಬಂದರು. ಅನಂತರ ಎಚ್.ಡಿ. ದೇವೇಗೌಡರೂ ನ್ಯಾಷನಲ್‌ ಕಾನ್‌ಫರೆನ್ಸ್‌ ಜತೆ ಒಪ್ಪಂದ ಮಾಡಿಕೊಳ್ಳುವ ಮೂಲಕ ರಾಜೀವ್‌ ಹಾದಿಯನ್ನೇ ತುಳಿದರು. ಅದನ್ನು ಪ್ರತಿಭಟಿಸಿ ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟು, ಪುನಃ ಕಾಂಗ್ರೆಸ್‌ಗೆ ಮರಳಿದ್ದಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಆದರೆ, ಅವರು ಹೆಚ್ಚು ಕಾಲ ಕಾಂಗ್ರೆಸ್‌ ಪಕ್ಷದಲ್ಲಿ ಉಳಿಯಲಿಲ್ಲ.

ಕಾಂಗ್ರೆಸ್‌ ಪಕ್ಷವನ್ನು ಎರಡನೇ ಸಲ ತೊರೆದ  ಸಯೀದ್‌ 1999ರಲ್ಲಿ ತಮ್ಮದೇ ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ ಕಟ್ಟಿದರು. 2002ರ ವಿಧಾನಸಭೆ ಚುನಾವಣೆಯಲ್ಲಿ17 ಸ್ಥಾನಗಳನ್ನು ಪಡೆದು ಕಾಂಗ್ರೆಸ್‌ ಜತೆ ಸೇರಿ ಮೈತ್ರಿ ಸರ್ಕಾರ ರಚಿಸಿದರು. ಅದೇ ವರ್ಷ ನವೆಂಬರ್‌ 2ರಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾದರು. ಮೂರು ವರ್ಷದ ಬಳಿಕ 2005ರ ನವೆಂಬರ್‌ 2ರಂದು ಕಾಂಗ್ರೆಸ್‌ ನಾಯಕ ಗುಲಾಂನಬಿ ಆಜಾದ್‌ ಅವರಿಗೆ ಕುರ್ಚಿ ಬಿಟ್ಟುಕೊಟ್ಟರು. ಕಣಿವೆಯ ಜನ ಈಗಲೂ ಮುಫ್ತಿ ಆಡಳಿತವನ್ನು ನೆನಪು ಮಾಡಿಕೊಳ್ಳುತ್ತಾರೆ. ಪಿಡಿಪಿ– ಕಾಂಗ್ರೆಸ್‌ ಮೈತ್ರಿ ಸರ್ಕಾರ ಉತ್ತಮವಾಗಿ ಕೆಲಸ ಮಾಡಿರುವುದಾಗಿ ಹೇಳುತ್ತಾರೆ.

ಭಯೋತ್ಪಾದನೆಯಿಂದ ನಲುಗಿರುವ ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಯಾಗಬೇಕು. ಮದ್ದು– ಗುಂಡುಗಳಿಂದ ಶಾಂತಿ ಸ್ಥಾಪನೆ ಸಾಧ್ಯವಿಲ್ಲ. ಸರ್ಕಾರ ಪ್ರತ್ಯೇಕತಾವಾದಿಗಳ ಜತೆ ಮಾತುಕತೆ ನಡೆಸುವ ಮೂಲಕ ಅವರ ಹೃದಯಗಳನ್ನು ಗೆಲ್ಲಬೇಕು. ಪೂರ್ವ ಷರತ್ತುಗಳಿಲ್ಲದೆ ಸಂಧಾನಕ್ಕೆ ಮುಂದಾಗಬೇಕು. ನೆರೆಯ ಪಾಕಿಸ್ತಾನದ ಜತೆ ನಾವು ಮಾತುಕತೆ ನಡೆಸುವುದಾದರೆ ನಮ್ಮವರೇ ಆಗಿರುವ ಪ್ರತ್ಯೇಕತಾವಾದಿಗಳ ಜತೆ ಚರ್ಚೆ ಏಕೆ ಸಾಧ್ಯವಿಲ್ಲ ಎನ್ನುವುದು ಮುಫ್ತಿ ಅವರ ಖಚಿತವಾದ ನಿಲುವು.

ಈ ಹಿರಿಯ ನಾಯಕ 1999ರಲ್ಲೂ ಸರ್ಕಾರ ಹಾಗೂ ಪ್ರತ್ಯೇಕವಾದಿ ಸಂಘಟನೆಗಳನ್ನು ಮಾತುಕತೆ, ಚರ್ಚೆಗೆ ಕರೆತರುವ ಪ್ರಯತ್ನ ಮಾಡಿದ್ದರು. ಪ್ರತ್ಯೇಕತಾವಾದಿಗಳು ಅನೇಕ ಸಲ ಅವರ ಹತ್ಯೆಗೂ ಯತ್ನಿಸಿದ್ದಾರೆ. 2004ರಲ್ಲಿ ಅವರು ಮುಖ್ಯಮಂತ್ರಿ ಆಗಿದ್ದಾಗ ಹತ್ಯೆಯ ಯತ್ನ ನಡೆದಿತ್ತು. ಅದರಿಂದ ಪಾರಾದರು. ಇಷ್ಟಾದರೂ ಮುಫ್ತಿ ಅವರು ಪ್ರತ್ಯೇಕತಾವಾದಿಗಳ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ. ಹುರಿಯತ್‌ ಕಾನ್ಫರೆನ್ಸ್‌ ನಾಯಕರ ಜತೆಗಿನ ಅವರ ಬಾಂಧವ್ಯ 2014ರ ವಿಧಾನಸಭೆ ಚುನಾವಣೆಯಲ್ಲಿ ಫಲ ಕೊಟ್ಟಿದೆ.

ಕಣಿವೆಯ ಜನ ಸಾರಾಸಗಟಾಗಿ ಪಿಡಿಪಿ ಪರ ನಿಂತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆಲ್ಲಿಸಿದ್ದಾರೆ. 25 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿರುವ ಬಿಜೆಪಿ ಜತೆ ಸೇರಿ ಸರ್ಕಾರ ಮಾಡುತ್ತಿದ್ದಾರೆ. ಮುಫ್ತಿ ಅವರು ತಮ್ಮ ತೀರ್ಮಾನವನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಾರೆ. ಕಾಶ್ಮೀರದ ಜನ ಪಿಡಿಪಿ ಮತ್ತು ಜಮ್ಮು ಜನ ಬಿಜೆಪಿ ಬೆಂಬಲಿಸಿದ್ದಾರೆ. ಜನರ ತೀರ್ಮಾನವನ್ನು ಧಿಕ್ಕರಿಸುವುದಾದರೂ ಹೇಗೆ? ಬಹುಸಂಖ್ಯಾತ ಹಿಂದೂಗಳನ್ನು ಹೊರಗಿಟ್ಟು ಸರ್ಕಾರ ಮಾಡುವುದಾದರೂ ಹೇಗೆ? ಎರಡೂ ಪಕ್ಷಗಳು ಸೇರಿ ಸರ್ಕಾರ ಮಾಡಬೇಕು ಎನ್ನುವುದು ಜನರ ತೀರ್ಪು.

ಅದನ್ನು ಗೌರವಿಸುವುದು ನಮ್ಮ ಧರ್ಮ. ಹಾಗೆ ಮಾಡದಿದ್ದರೆ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬೆಲೆ ಇರುವುದಿಲ್ಲ ಎಂದಿದ್ದಾರೆ. ನಿಜಕ್ಕೂ ಇದು ಮುಖ್ಯವಾದ ಮಾತು. ಜಮ್ಮು– ಕಾಶ್ಮೀರದ ಮುಖ್ಯಮಂತ್ರಿ ಆಗಿ ಎರಡನೇ ಇನಿಂಗ್ಸ್‌ ಆರಂಭಿಸಲಿರುವ ಮುಫ್ತಿ ಮಹಮದ್‌ ಸಯೀದ್‌ ದಾರಿ ತಪ್ಪಿರುವ ಕಾಶ್ಮೀರದ ಯುವಕರನ್ನು ಮುಖ್ಯವಾಹಿನಿಗೆ ತರುವರೇ? ಕಣಿವೆಯಲ್ಲಿ ಅಭಿವೃದ್ಧಿಯ ಹಣತೆ ಹಚ್ಚುವರೇ? ವಿಕಾಸ ಪುರುಷ ಪ್ರಧಾನಿ ನರೇಂದ್ರ ಮೋದಿ, ಹೊಸ ಮುಖ್ಯಮಂತ್ರಿ ಜತೆ ಹೆಜ್ಜೆ ಹಾಕುವರೇ? ನಿರೀಕ್ಷೆಗಳಂತೂ ಬಲವಾಗಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT