ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರೀಕ್ಷೆಹುಸಿಯಾಯಿತು; ನಿರಾಸೆ ಕಾಡಿತು

ನವಲಗುಂದದಲ್ಲಿ ಸರ್ಕಾರಿ ಕಚೇರಿಗಳ ಗಾಜು ಪುಡಿ; ಮುಖ್ಯರಸ್ತೆಯಲ್ಲಿ ಲಾಠಿ ಪ್ರಹಾರ
Last Updated 28 ಜುಲೈ 2016, 7:27 IST
ಅಕ್ಷರ ಗಾತ್ರ

ನವಲಗುಂದ: ಪಟ್ಟಣದಲ್ಲಿ ಮಧ್ಯಾಹ್ನ ಸೇರಿದ್ದ ರೈತರಲ್ಲಿ ನಿರೀಕ್ಷೆಯ ಆಶಾಕಿರಣ ಹೊಳೆಯುತ್ತಿತ್ತು. ಆದರೆ ಕೆಲವೇ ನಿಮಿಷಗಳಲ್ಲಿ ಅದು ನಿರಾಸೆಯ ಕಾರ್ಮೋಡವಾಗಿ ಮಾರ್ಪಟ್ಟಿತು. ರೈತ ಭವನದಲ್ಲಿ ಬೆಳಿಗ್ಗೆ ಗಣಪತಿಯ ಪೂಜೆ ಮಾಡಿದ ರೈತರು ‘ಇಂದಿಗೆ ನಮ್ಮ ವಿಘ್ನ ನಿವಾರಣೆಯಾಯಿತು; ಮುಂದೆ ನೆಮ್ಮದಿಯ ದಿನಗಳು ಬರಲಿವೆ’ ಎಂದು ಹೇಳಿದ್ದರು. ಕಳಸಾ ಬಂಡೂರಿ ಯೋಜನೆಗೆ ಸಂಬಂಧಿಸಿ ರಾಜ್ಯದ ಮಧ್ಯಂತರ ಅರ್ಜಿ ವಜಾಗೊಂಡ ಮಾಹಿತಿ ಬರುತ್ತಿದ್ದಂತೆ ಅವರ ಭರವಸೆ ಹುಸಿಯಾಯಿತು. ಸಹನೆಯ ಕಟ್ಟೆಯೊಡೆದು ಬೀದಿಗಿಳಿದ ರೈತರು ವಿವಿಧ ಬಗೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಿ ಕಚೇರಿಗಳ ಗಾಜು ಪುಡಿ ಮಾಡಿದ ಪ್ರತಿಭಟನಾಕಾರರು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಘಟಕದಲ್ಲಿ ಕಲ್ಲು ತೂರಾಟ ಮಾಡಿ ಪೊಲೀಸರ ಲಾಠಿ ಏಟಿನ ರುಚಿ ಉಂಡರು.

ತೀರ್ಪಿನ ಮಾಹಿತಿ ಬರುತ್ತಿದ್ದಂತೆ ಬಸ್‌್ ನಿಲ್ದಾಣ ಸಮೀಪದ ರೈತ ಭವನದಲ್ಲಿ ಜಮಾಯಿಸಿದ ರೈತರು ಮೊದಲು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲು ನಿರ್ಧರಿಸಿದರು. ಅಂಗಡಿಯವರು ಅಷ್ಟರಲ್ಲಾಗಲೇ ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದ್ದರು. ನಂತರ ಬಸ್‌ ನಿಲ್ದಾಣದ ಗಾಜಿಗೆ ಕಲ್ಲೆಸೆದರು.

ಅಷ್ಟರಲ್ಲಿ ವಿವಿಧ ಕಡೆಯಿಂದ ರೈತರು ಬಂದು ಸೇರಿದರು. ಭಾರಿ ಸಂಖ್ಯೆಯಲ್ಲಿ  ವಿವಿಧ ಕಡೆಗಳಗೆ ತೆರಳಿ ಪ್ರತಿಭಟನೆ ತೀವ್ರಗೊಳಿಸಿದರು. ಹೊಸತಾಗಿ ನಿರ್ಮಿಸಿದ ಕೋರ್ಟ್ ಆವರಣಕ್ಕೆ ಹೋಗಿ ಕಿಟಕಿ–ಗಾಜು ಪುಡಿ ಮಾಡಿದರು. ಅಲ್ಲಿಂದ ಲೋಕೋಪಯೋಗಿ ಇಲಾಖೆಯ ಕಚೇರಿಗೆ ಹೋಗಿ ಬಾಗಿಲಿಗೆ ಅಳವಡಿಸಿದ್ದ ಬೃಹತ್‌ ಗಾಜನ್ನು ಒಡೆದು ಹಾಕಿದರು. ಸಮೀಪದಲ್ಲೇ ಇದ್ದ ಬಿಇಓ ಕಚೇರಿಗೂ ಕಲ್ಲೆಸೆದರು. ಪ್ರವಾಸಿ ಮಂದಿರ, ಹಳೇ ತಹಶೀಲ್ದಾರ ಕಚೇರಿ, ತಾಲ್ಲೂಕು ಪಂಚಾಯ್ತಿ ಕಚೇರಿ ಹಾಗೂ ಕೃಷಿ ಇಲಾಖೆಯ ಕಚೇರಿಗೂ ಕಲ್ಲು ತೂರಾಟ ಮಾಡಿದರು.

ಕಲ್ಲೆಸೆತ, ಲಾಠಿ ಪ್ರಹಾರ
ಪಟ್ಟಣದೊಳಗಿನ ಆಕ್ರೋಶ ಕೆಲವೇ ನಿಮಿಷಗಳಲ್ಲಿ ಹೊರವಲಯಕ್ಕೆ ವ್ಯಾಪಿಸಿತು. ಹುಬ್ಬಳ್ಳಿ ರಸ್ತೆಯಲ್ಲಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಡೆಗೆ ಐನೂರಕ್ಕೂ ಹೆಚ್ಚು ರೈತರು ಮೆರವಣಿಗೆ ನಡೆಸಿದರು. ಬಸ್ ಸಿಬ್ಬಂದಿ ಮುಷ್ಕರದ ಕಾರಣ ಅಲ್ಲಿ ಹತ್ತಕ್ಕೂ ಹೆಚ್ಚು ಬಸ್‌ಗಳು ನಿಂತಿದ್ದವು. ಅವುಗಳಿಗೆ ಧಕ್ಕೆಯಾಗದಂತೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ಗೇಟ್ ಬಳಿ ಜಮಾಯಿಸಿದ ರೈತರು ಒಳಗೆ ನುಗ್ಗಲು ಪ್ರಯತ್ನಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್‌ ಮೀನಾ ನೇತೃತ್ವದಲ್ಲಿ ಪೊಲೀಸರು ರೈತರನ್ನು ತಡೆದರು. ಕೆಲ ಹೊತ್ತು ವಾಗ್ವಾದ ನಡೆಸಿದ ರೈತರು ಏಕಾಏಕಿ ದೂರ ಸರಿದರು. ಅಲ್ಲಿಂದ ದಿಢೀರನೆ ಬಸ್‌ಗಳ ಮೇಲೆ ಕಲ್ಲೆಸೆದರು. ತಕ್ಷಣ ಪೊಲೀಸರು ಲಾಠಿ ಪ್ರಹಾರ ಮಾಡಿದರು. ಲಾಠಿ ಏಟು ತಿಂದ ರೈತ ರುದ್ರಪ್ಪ ಹಡಪದ ಮತ್ತು ಪತ್ರಕರ್ತ ಶಿವಮೂರ್ತಿ ಧಾರವಾಡ ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.

ಲಾಠಿ ಏಟಿಗೆ ಬೆದರಿ ಚದುರಿದ ರೈತರು ಕ್ಷಣಾರ್ಧದಲ್ಲಿ ವಾಪಸ್‌ ಬಂದು ಸೇರಿದರು. ನಂತರ ಲಾಠಿ ಪ್ರಹಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಸ್ವಲ್ಪ ಹೊತ್ತಿನಲ್ಲಿ ಉಪವಿಭಾಗಾಧಿಕಾರಿ ಚಂದ್ರಶೇಖರ ನಾಯ್ಕ ಸ್ಥಳಕ್ಕೆ ಬಂದರು. ಲಾಠಿ ಏಟು ನೀಡಲು ಆದೇಶ ನೀಡಿದ ಅಧಿಕಾರಿಯನ್ನು ತಕ್ಷಣ ವಜಾ ಮಾಡಬೇಕು ಎಂದು ಆಗ್ರಹಿಸಿ ಅವರ ಮುಂದೆ ಪ್ರತಿಭಟನೆ ನಡೆಸಲಾಯಿತು. ರೈತರೊಂದಿಗೆ ಅವರು ಮಾತುಕತೆ ನಡೆಸುತ್ತಿದ್ದಂತೆ ಜಿಲ್ಲಾಧಿಕಾರಿ ಎಸ್‌.ಬಿ.ಬೊಮ್ಮನಹಳ್ಳಿ ಸ್ಥಳಕ್ಕೆ ಬಂದರು. ರೈತರನ್ನು ಸಂತೈಸಲು ನಡೆಸಿದ ಪ್ರಯತ್ನ ವಿಫಲವಾದ ಕಾರಣ ಅವರು ಸ್ಥಳದಲ್ಲೇ ಅಧಿಕಾರಿಗಳ ಸಭೆ ನಡೆಸಿದರು. ಅಷ್ಟರಲ್ಲಿ ಸ್ಥಳಕ್ಕೆ ಬಂದ ಉತ್ತರ ವಲಯ ಐಜಿಪಿ ರಾಮಚಂದ್ರರಾವ್‌ ರೈತರ ಜೊತೆ ಮಾತುಕತೆ ನಡೆಸಿದರು. ಕತ್ತಲಾಗುತ್ತಿದ್ದಂತೆ ರೈತರು ಪಟ್ಟಣದ ಕಡೆಗೆ ತೆರಳಿದರು.

‘ಪ್ರಜಾವಾಣಿ’ ಜೊತೆ ಮಾತನಾಡಿದ ಪಕ್ಷಾತೀತ ರೈತ ಹೋರಾಟ ಸಮಿತಿ ಅಧ್ಯಕ್ಷ ಲೋಕನಾಥ ಹೆಬಸೂರು ‘ಲಾಠಿ ಪ್ರಹಾರಕ್ಕೆ ಆದೇಶ ಮಾಡಿದ ಅಧಿಕಾರಿ ಮೇಲೆ ಕ್ರಮಕ್ಕೆ 24 ತಾಸು ಸಮಯ ನೀಡಲಾಗಿದೆ. ಗುರುವಾರದಿಂದ ಪೊಲೀಸರ ವಿರುದ್ಧವೇ ಹೋರಾಟ ನಡೆಸಲು ನಿರ್ಧರಿಸಲಾಗಿದೆ’ ಎಂದರು.

ಹೊಡೀರಿ ಗುಂಡು... ಎಂದ ರೈತರು
ಬಸ್‌ ಡಿಪೊದ ಒಳಗೆ ಬಿಡಲು ನಿರಾಕರಿಸಿದ ಪೊಲೀಸರ ಜೊತೆ ವಾಗ್ವಾದ ಮಾಡಿದ ರೈತರು ಕೊನೆಗೆ ಅವರ ಕಾಲಿಗೆ ಬಿದ್ದರು. ಆದರೂ ಲಾಠಿ, ಬಂದೂಕು ಮತ್ತು ಅಶ್ರುವಾಯು ಗನ್‌ ಹಿಡಿದುಕೊಂಡು ನಿಂತ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮುಖಂಡರು ಮುಂದೆ ನುಗ್ಗಿ ‘ಹೊಡೀರಿ ಗುಂಡು’ ಎಂದು ಎದೆಯೊಡ್ಡಿ ನಿಂತರು. ಪೊಲೀಸ್ ವ್ಯಾನ್‌ ಮೇಲೆ ಬಂದೂಕು ಹಿಡಿದು ನಿಂತಿದ್ದ ಪೊಲೀಸರು ಅಷ್ಟರಲ್ಲಿ ಕೆಳಗಿಳಿದು ಬಂದರು.

ಎಂಟು ಜನರಿಗೆ ಕಿಮ್ಸ್‌ನಲ್ಲಿ ಚಿಕಿತ್ಸೆ
ಪೊಲೀಸರ ಲಾಠಿ ಪ್ರಹಾರದಲ್ಲಿ ಗಾಯಗೊಂಡ ಎಂಟು ರೈತರಿಗೆ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗಿದೆ. ‘ಎಂಟು ಮಂದಿ ಪೈಕಿ ನಾಲ್ವರಿಗೆ ಪ್ರಥಮ ಚಿಕಿತ್ಸೆ ನೀಡಿ ಕಳುಹಿಸಿದ್ದು ನಾಲ್ಕು ಜನರನ್ನು ದಾಖಲು ಮಾಡಲಾಗಿದೆ. ಅವರ ಪೈಕಿ ಒಬ್ಬರಿಗೆ ಗಂಭೀರ ಗಾಯವಾಗಿದೆ’ ಎಂದು ಹೆಬಸೂರ ಹೇಳಿದರು.

ಕಡತಗಳಿಗೆ ಬೆಂಕಿ
ಪ್ರತಿಭಟನಾಕಾರರ ಆಕ್ರೋಶ ತೀವ್ರ ಸ್ವರೂಪದಲ್ಲಿ ಕಂಡದ್ದು ನೀರಾವರಿ ನಿಗಮದ ಕಚೇರಿಯಲ್ಲಿ. ತೀರ್ಪು ಪ್ರಕಟಗೊಂಡ ಕೂಡಲೇ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸೂಚನೆ ಲಭಿಸಿದ ಕಾರಣ ಇಲ್ಲಿನ ಸಿಬ್ಬಂದಿ ಬಾಗಿಲು ಮುಚ್ಚಿದ್ದರು. ಪ್ರತಿಭಟನಾಕಾರರು ಬಾಗಿಲು ಒಡೆದು ಒಳಗೆ ನುಗ್ಗಿದರು. ಪೀಠೋಪಕರಣಗಳನ್ನು ದ್ವಂಸ ಮಾಡಿದ ನಂತರ ಕಡತಗಳನ್ನು ಇರಿಸಿದ್ದ ಕೊಠಡಿಗೆ ತೆರಳಿ ಬೆಂಕಿ ಇಟ್ಟರು. ಸಿಬ್ಬಂದಿ ನೀರು ಹಾಕಿ ಬೆಂಕಿ ನಂದಿಸುವಷ್ಟರಲ್ಲಿ ಅನೇಕ ಕಡತಗಳು ಸುಟ್ಟು ಕರಕಲಾದವು.

ಪೆಟ್ರೋಲ್ ಬಂಕ್‌ನಲ್ಲೇ ಜಿಲ್ಲಾಧಿಕಾರಿ ಸಭೆ
ಲಾಠಿ ಪ್ರಹಾರ ನಡೆಸಲು ಆದೇಶ ನೀಡಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದ ರೈತರ ಮನವೊಲಿಸಲು ಪ್ರಯತ್ನಿಸಿದ ಜಿಲ್ಲಾಧಿಕಾರಿ ಮಾತಿಗೆ ರೈತರು ಒಪ್ಪದ ಕಾರಣ ಅವರು ಸಭೆ ನಡೆಸಲು ನಿರ್ಧರಿಸಿದರು. ಪಟ್ಟಣದ ಹೊರವಲಯದಲ್ಲಿ ಸಭೆ ನಡೆಸಲು ಸೂಕ್ತ ಜಾಗ ಇರಲಿಲ್ಲ. ಕೊನೆಗೆ ಸಮೀಪದಲ್ಲೇ ಇದ್ದ ಪೆಟ್ರೋಲ್‌ ಬಂಕ್‌ನಲ್ಲಿ ಕುಳಿತು ಉಪವಿಭಾಗಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಮಾತುಕತೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT