ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರೀಕ್ಷೆ ನಿಜವಾಗಬಹುದಾ...?

Last Updated 2 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

‘ಆಟಗಾರರ ಸಾಮರ್ಥ್ಯ ಹಾಗೂ ಪ್ರದರ್ಶನ ಮಟ್ಟ ಗಮನಿಸಿದರೆ ಭಾರತಕ್ಕೆ ಈ ಬಾರಿ ಕನಿಷ್ಠ 3 ಪದಕ ಖಚಿತ ಎಂದು ಈಗಲೇ ಹೇಳಬಹುದು. ಆದರೆ, ಎಲ್ಲರಿಗೂ ಮೊದಲ ಸುತ್ತಿನ ಪಂದ್ಯಗಳು ತುಂಬಾ ಮುಖ್ಯ. ಬಲಿಷ್ಠ ಎದುರಾಳಿ ಇರಲಿ ಅಥವಾ ಸುಲಭದ ಎದುರಾಳಿಯೇ ಸಿಗಲಿ ಉತ್ತಮ ಆರಂಭ ಪಡೆಯಬೇಕು’. ಈ ರೀತಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದು ಡಬಲ್ಸ್‌ ಆಟಗಾರ್ತಿ ಅಶ್ವಿನಿ ಪೊನ್ನಪ್ಪ.

ಮೂರು ಪದಕದ ಭವಿಷ್ಯ ನುಡಿದ ಅವರು, ‘ಈ ಬಾರಿ ಚಾಂಪಿಯನ್‌ಷಿಪ್‌ ನಡೆಯುತ್ತಿರುವುದು ಬ್ಯಾಡ್ಮಿಂಟನ್‌ ದೈತ್ಯ ಇಂಡೊನೇಷ್ಯಾದಲ್ಲಿ. ಹಾಗಾಗಿ ಪದಕದ ಹಾದಿ ಕಷ್ಟದಿಂದ ಕೂಡಿದೆ’ ಎಂದು ಹೇಳಲು ಮರೆಯಲಿಲ್ಲ ಹೌದು, ಆಗಸ್ಟ್ 10ರಂದು ಇಂಡೊನೇಷ್ಯಾದ ಜಕಾರ್ತದಲ್ಲಿ ಆರಂಭವಾಗಲಿರುವ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಭಾರತದ ಪಾಲಿಗೆ ಸವಾಲಿನದ್ದು. ಏಕೆಂದರೆ ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಇಂಡೊನೇಷ್ಯಾ ಆಟಗಾರರದ್ದೇ ಪ್ರಾಬಲ್ಯ. ಈ ದೇಶದ ಆಟಗಾರರನ್ನು ಅವರ ನೆಲದಲ್ಲಿಯೇ ಮಣಿಸಿ ಪದಕ ಜಯಿಸುವುದು ಅಷ್ಟು ಸುಲಭದ ಮಾತಲ್ಲ.

ಜೊತೆಗೆ ಚೀನಾ, ಥಾಯ್ಲೆಂಡ್‌, ಡೆನ್ಮಾರ್ಕ್‌, ಮಲೇಷ್ಯಾ, ಜಪಾನ್‌ ಕೂಡ ಬಲಿಷ್ಠ ಆಟಗಾರರನ್ನು ಒಳಗೊಂಡಿವೆ. ಹಾಗಂತ ಎದೆಗುಂದಬೇಕಿಲ್ಲ. ಏಕೆಂದರೆ ಈ ದೇಶಗಳಿಗೆ ಇತ್ತೀಚಿನ ವರ್ಷಗಳಲ್ಲಿ ಭಾರತದ ಆಟಗಾರರು ಒಂದಲ್ಲ ಒಂದು ಹಂತದಲ್ಲಿ ಬಿಸಿಮುಟ್ಟಿಸಿದ್ದಾರೆ. ಆದರೆ, ಸ್ಥಿರ ಪ್ರದರ್ಶನದ ಕೊರತೆ ಕಾಡುತ್ತಿದೆ.

ಬಲಿಷ್ಠ ತಂಡ, ಭಾರಿ ನಿರೀಕ್ಷೆ
ಅಂದಹಾಗೆ, ಹಿಂದೆಂದಿಗಿಂತಲೂ ದೊಡ್ಡ ಪಡೆ ಇಂಡೊನೇಷ್ಯಾ ವಿಮಾನ ಹತ್ತಲು ಈ ಬಾರಿ ಸಜ್ಜಾಗಿದೆ. ಭಾರತದ 18 ಆಟಗಾರರ ಬಲಿಷ್ಠ ತಂಡ ಕಣಕ್ಕಿಳಿಯುತ್ತಿದ್ದು, ಭಾರಿ ಭರವಸೆ ಇಡಲಾಗಿದೆ.

ಮಹಿಳೆಯರ ವಿಭಾಗದಲ್ಲಿ ಸೈನಾ ನೆಹ್ವಾಲ್‌ ಎರಡನೇ ಶ್ರೇಯಾಂಕ ಪಡೆದಿದ್ದಾರೆ. ಹಾಲಿ ಚಾಂಪಿಯನ್‌ ಸ್ಪೇನ್‌ನ ಕರೋಲಿನಾ ಮರೀನ್ ಅಗ್ರ ಶ್ರೇಯಾಂಕ ಹೊಂದಿದ್ದಾರೆ. ಹೈದರಾಬಾದ್‌ನ ಈ ಆಟಗಾರ್ತಿ ಈ ವರ್ಷ ಇಂಡಿಯನ್‌ ಗ್ರ್ಯಾನ್‌ ಪ್ರಿ ಗೋಲ್ಡ್‌, ಇಂಡಿಯಾ ಓಪನ್‌ ಸೂಪರ್‌ ಸರಣಿ ಜಯಿಸಿ, ಆಲ್‌ ಇಂಗ್ಲೆಂಡ್‌ ಓಪನ್‌ನಲ್ಲಿ ರನ್ನರ್‌ಅಪ್‌ ಆಗಿದ್ದರು.

ಹ್ಯಾಟ್ರಿಕ್‌ ಪದಕದ ಮೇಲೆ ಕಣ್ಣು ನೆಟ್ಟಿರುವ ಪಿ.ವಿ. ಸಿಂಧು ಅವರಿಗೆ ದೊಡ್ಡ ಸವಾಲು ಎದುರಿದೆ. ಚೀನಾದ ವಾಂಗ್‌ ಯಿಹಾನ್‌, ಲೀ ಕ್ಸುಯೆರುಯಿ, ವಾಂಗ್‌ ಶಿಕ್ಷಿಯನ್‌ ಅವರಂಥ ಆಟಗಾರ್ತಿಯರ ಪ್ರಬಲ ಸವಾಲು ಮೆಟ್ಟಿ ನಿಲ್ಲಬೇಕಿದೆ.

ಸೈನಾ ಹಾಗೂ ಸಿಂಧು ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ನೆಹ್ವಾಲ್ ಭುಜದ ನೋವಿಗೆ ಒಳಗಾಗಿದ್ದಾರೆ. ಸಿಂಧು ಕೂಡ ಗಾಯದ ಸಮಸ್ಯೆಯಿಂದ ಈ ವರ್ಷ ಪಾಲ್ಗೊಂಡ ಟೂರ್ನಿಗಳೇ ಕಡಿಮೆ.

ಪುರುಷರ ವಿಭಾಗದಲ್ಲಿ ಕೆ. ಶ್ರೀಕಾಂತ್‌ ಮೂರನೇ ಶ್ರೇಯಾಂಕ ಹೊಂದಿದ್ದಾರೆ. ಸ್ವಿಟ್ಜರ್‌ಲೆಂಡ್‌ ಓಪನ್‌ ಹಾಗೂ ಇಂಡಿಯಾ ಸೂಪರ್‌ ಸರಣಿಯಲ್ಲಿ ಪ್ರಶಸ್ತಿ ಜಯಿಸಿ ಉತ್ತಮ ಫಾರ್ಮ್‌ನಲ್ಲಿರುವ ಅವರು ಈ ಬಾರಿ ಪದಕದ ಆಕಾಂಕ್ಷಿ ಕೂಡ. ಅಷ್ಟೇ ಅಲ್ಲ, ಪಿ. ಕಶ್ಯಪ್, ಎಚ್‌.ಎಸ್‌. ಪ್ರಣಯ್‌, ಪ್ರದ್ನ್ಯಾ ಗಾದ್ರೆ,  ಎನ್‌. ಸಿಕಿ ರೆಡ್ಡಿ ಕೂಡ ಕಣಕ್ಕಿಳಿಯುತ್ತಿದ್ದಾರೆ.

ಮೋಡಿ ಮಾಡಲು ಸಿದ್ಧ
ಆರು ವರ್ಷಗಳಿಂದ ಮಹಿಳೆಯರ ಡಬಲ್ಸ್‌ನಲ್ಲಿ ಜೊತೆಗೂಡಿ ಆಡುತ್ತಿರುವ ಕರ್ನಾಟಕದ ಅಶ್ವಿನಿ ಹಾಗೂ ಹೈದರಾಬಾದ್‌ನ ಜ್ವಾಲಾ ಗುಟ್ಟಾ ಕೂಡ ಭರವಸೆ ಮೂಡಿಸಿದ್ದಾರೆ.

ಇತ್ತೀಚೆಗಷ್ಟೇ ಕೆನಡಾ ಓಪನ್‌ನಲ್ಲೂ ಪ್ರಶಸ್ತಿ ಜಯಿಸಿರುವ ಅವರು ಮತ್ತೆ ಗೆಲುವಿನ ಟ್ರ್ಯಾಕ್‌ಗೆ ಮರಳಿದ್ದಾರೆ. ‘ಪರಸ್ಪರ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ. ಅತ್ಯುತ್ತಮ ಹೊಂದಾಣಿಕೆ ಇದೆ. ಎಲ್ಲಕ್ಕಿಂತ ಮಿಗಿಲಾಗಿ ಖುಷಿಯಿಂದ ಆಡುತ್ತೇವೆ’ ಎಂದು ಹೇಳುತ್ತಾರೆ 25 ವರ್ಷ ವಯಸ್ಸಿನ ಅಶ್ವಿನಿ.ಡಬಲ್ಸ್‌ ತಂಡಕ್ಕೆ ಕೋಚ್‌ ಆಗಿ ಮಲೇಷ್ಯಾದ ಟ್ಯಾನ್‌ ಕಿಮ್‌ ಅವರನ್ನು ನೇಮಿಸಲು ಭಾರತ ಬ್ಯಾಡ್ಮಿಂಟನ್‌ ಫೆಡರೇಷನ್‌ ಇತ್ತೀಚೆಗಷ್ಟೆ ತೀರ್ಮಾನಿಸಿದೆ. 

ಭಾರತದಹೆಜ್ಜೆಗಳು...
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಸಾಧನೆ ಹೇಳಿಕೊಳ್ಳುವಂತಿಲ್ಲ. ಪುರುಷರ ಸಿಂಗಲ್ಸ್‌ನಲ್ಲಿ ಪ್ರಕಾಶ್ ಪಡುಕೋಣೆ ಕಂಚಿನ ಪದಕ ಗೆದ್ದ  28 ವರ್ಷಗಳ ಬಳಿಕ ಡಬಲ್ಸ್‌ನಲ್ಲಿ ಅಶ್ವಿನಿ ಹಾಗೂ ಜ್ವಾಲಾ ಕಂಚು ಜಯಿಸಿ ಪದಕದ ಬರ ನೀಗಿಸಿದ್ದರು.

ಸಿಂಧು ಎರಡು ಬಾರಿ ಕಂಚಿನ ಪದಕ ಗೆದ್ದಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ. ಆದರೆ, ಒಲಿಂಪಿಕ್ಸ್‌ನಲ್ಲಿ ಕಂಚಿನ ಸಾಧನೆ ಮಾಡಿರುವ ಸೈನಾ ಅವರಿಗೆ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಯಶಸ್ಸು ಲಭಿಸಿಲ್ಲ. ಐದು ಬಾರಿ ಪಾಲ್ಗೊಂಡಿರುವ ಅವರು ಕ್ವಾರ್ಟರ್‌ ಫೈನಲ್‌ ತಲುಪಿದ್ದೇ ಶ್ರೇಷ್ಠ ಸಾಧನೆ. ಈ ಬಾರಿ ಉತ್ತಮ ಅವಕಾಶವಿದೆ.  
*

ಒಡಕಿನಿಂದ ತೊಂದರೆ...
ಬ್ಯಾಡ್ಮಿಂಟನ್‌ ಜಗತ್ತಿನಲ್ಲಿ ಭಾರತ ಮಿಂಚು ಹರಿಸುತ್ತಿದ್ದರೂ ದೇಶದೊಳಗೆ ಆಡಳಿತಗಾರರು. ಆಟಗಾರರು ಹಾಗೂ ಕೋಚ್‌ಗಳ ನಡುವೆಯೇ ಭಿನ್ನಾಭಿಪ್ರಾಯವಿದೆ.

ರಾಷ್ಟ್ರೀಯ ಕೋಚ್‌ ಪಿ. ಗೋಪಿಚಂದ್‌ ಕಂಡರೆ ಜ್ವಾಲಾ ಗುಟ್ಟಾ ಅವರಿಗೆ ಆಗಿ ಬರುವುದಿಲ್ಲ. ಗುಟ್ಟಾ ಅವರು ಹಲವು ಬಾರಿ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಿದೆ. ಆರಂಭದಲ್ಲಿ ಗೋಪಿಚಂದ್‌ ಬಳಿ ತರಬೇತಿ ಪಡೆಯುತ್ತಿದ್ದ ಸೈನಾ ಈಗ ಬೆಂಗಳೂರಿನಲ್ಲಿ  ವಿಮಲ್‌ ಕುಮಾರ್‌ ಬಳಿ ಮಾರ್ಗದರ್ಶನ ಪಡೆಯುತ್ತಿದ್ದಾರೆ.

ಅಲ್ಲದೆ, ಕೇಂದ್ರ ಕ್ರೀಡಾ ಇಲಾಖೆಯ ‘ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ (ಟಾಪ್‌) ಯೋಜನೆ’ಗೆ ಅಶ್ವಿನಿ ಹಾಗೂ ಜ್ವಾಲಾ ಅವರ ಹೆಸರನ್ನು ಬ್ಯಾಡ್ಮಿಂಟನ್‌ ಸಂಸ್ಥೆಯು ಶಿಫಾರಸು ಮಾಡದ ವಿಚಾರ ದೊಡ್ಡ ವಿವಾದಕ್ಕೆ ಕಾರಣವಾಯಿತು. ಈ ಬಗ್ಗೆ ಜ್ವಾಲಾ ಹಾಗೂ ಅಶ್ವಿನಿ ಆಕ್ರೋಶ ಹೊರಹಾಕಿದ ಮೇಲೆ ಕ್ರೀಡಾ ಇಲಾಖೆಯು ಸ್ಪಂದಿಸಿದೆ.  ಭಾರತದ ಬ್ಯಾಡ್ಮಿಂಟನ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಈ ಉದಾಹರಣೆಗಳೇ ಸಾಕ್ಷಿ.

ಉತ್ತಮ ಸಿದ್ಧತೆ ನಡೆಸಿದ್ದೇವೆ...
‘ವಿಶ್ವ ಚಾಂಪಿಯನ್‌ಷಿಪ್‌ಗೆ ತಯಾರಿ ಚೆನ್ನಾಗಿಯೇ ನಡೆದಿದೆ. ನಾವಿಬ್ಬರು ಮತ್ತೆ ಹಿಂದಿನ ಲಯ  ಕಂಡುಕೊಂಡಿದ್ದೇವೆ. ಜ್ವಾಲಾ ಜೊತೆ ಬೆಂಗಳೂರಿನಲ್ಲಿ ಸ್ವಲ್ಪ ದಿನ ಅಭ್ಯಾಸ ನಡೆಸಿದ್ದೇನೆ. ಬಳಿಕ ಅವರು ಹೈದರಾಬಾದ್‌ಗೆ ತೆರಳಿ ಅಭ್ಯಾಸ ಮುಂದುವರಿಸಿದರು. ನಾನು ಉದ್ಯಾನ ನಗರಿಯಲ್ಲಿಯೇ ಅಭ್ಯಾಸ ನಡೆಸಿದೆ’ ಎಂದು ಅಶ್ವಿನಿ ಪೊನ್ನಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಡಬಲ್ಸ್‌ ತಂಡಗಳಿಗೆ ತರಬೇತಿ ನೀಡಲು ಎರಡು ವರ್ಷಗಳ ಬಳಿಕ ಹೊಸದಾಗಿ ಕೋಚ್‌ ನೇಮಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಇದುವರೆಗೆ ಯಾವುದೇ ಕೋಚ್‌ ಬಂದಿಲ್ಲ. ಮಾಧ್ಯಮಗಳ ಮೂಲಕ ನಮಗೆ ಈ ವಿಷಯ ಗೊತ್ತಾಗಿದೆ ಅಷ್ಟೆ’ ಎಂದರು.

22ನೇ ಆವೃತ್ತಿಯ ಟೂರ್ನಿ ಇದು...
ಆಗಸ್ಟ್‌ 10ರಿಂದ 16ರವರೆಗೆ ಜಕಾರ್ತದಲ್ಲಿ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ನಡೆಯಲಿದೆ. ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್‌, ಪುರುಷ ಮತ್ತು ಮಹಿಳೆಯರ ಡಬಲ್ಸ್‌ ಹಾಗೂ ಮಿಶ್ರ ಡಬಲ್ಸ್‌ ಸೇರಿದಂತೆ ಐದು ವಿಭಾಗಗಳಲ್ಲಿ ಪೈಪೋಟಿ ನಡೆಯುತ್ತದೆ.

ಈ ಚಾಂಪಿಯನ್‌ಷಿಪ್‌ ಮೊದಲು ನಡೆದಿದ್ದು 1977ರಲ್ಲಿ. ಆನಂತರ ಪ್ರತಿ ಮೂರು ವರ್ಷಗಳಿಗೊಮ್ಮೆ ಜರುಗುತಿತ್ತು. ಆದರೆ, 1983ರಿಂದ 2005ರವರೆಗೆ ಎರಡು ವರ್ಷಗಳಿಗೊಮ್ಮೆ ನಡೆಯುತಿತ್ತು. 2005ರ ಬಳಿಕ ಪ್ರತಿ ವರ್ಷ ಆಯೋಜಿಸಲಾಗುತ್ತಿದೆ. ಒಲಿಂಪಿಕ್ಸ್‌ ಇದ್ದ ವರ್ಷ ನಡೆಯುವುದಿಲ್ಲ.

ಇಂಡೊನೇಷ್ಯಾ ಆತಿಥ್ಯ ವಹಿಸುತ್ತಿರುವುದು ಮೂರನೇ ಬಾರಿ. 1980 ಹಾಗೂ 1989ರಲ್ಲಿ ಟೂರ್ನಿ ಆಯೋಜಿಸಿತ್ತು. ಈ ಚಾಂಪಿಯನ್‌ಷಿಪ್‌ನಲ್ಲಿ ಸುಮಾರು 400 ಆಟಗಾರರು ಪಾಲ್ಗೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT