ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದಾಕ್ಷಿಣ್ಯ ನಿರ್ವಹಣೆ ಬೇಕು

Last Updated 21 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೀದಿನಾಯಿಗಳ ಹಾವಳಿ ಬೆಂಗಳೂರಿನಲ್ಲಿ ಮತ್ತೊಮ್ಮೆ ಸುದ್ದಿ ಮಾಡಿದೆ. ಐದರಿಂದ ಆರು ಬೀದಿ ನಾಯಿಗಳು  ಗುಂಪಾಗಿ 17 ತಿಂಗಳ ಎಳೆಮಗುವಿನ ಮೇಲೆ ದಾಳಿ ಮಾಡಿ ಎಳೆದಾಡಿ ಕಚ್ಚಿರುವುದು ಆತಂಕ­ಕಾರಿ. ಈ ಮಗುವಿನ ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಮಗುವಿನ ಪೋಷ­ಕರು ಅಲೆಯಬೇಕಾಗಿ ಬಂದದ್ದು ಮತ್ತೂ ಆತಂಕಕಾರಿ ಸಂಗತಿ.

ಮಗುವಿಗೆ ಸೂಕ್ತ ಚಿಕಿತ್ಸೆಗಾಗಿ ಮೂರು ಆಸ್ಪತ್ರೆಗಳ ಕದ ತಟ್ಟಬೇಕಾಯಿತು ಎಂಬುದು ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿರುವ ದೋಷಗಳನ್ನು ಎತ್ತಿ ಹೇಳಿದೆ.  ತಜ್ಞ ವೈದ್ಯರಿಲ್ಲ ಎಂಬಂತಹ ಸಬೂಬು ಅಥವಾ ಹಣ ಕಟ್ಟದೆ ಚಿಕಿತ್ಸೆ ಇಲ್ಲ ಎಂಬಂತಹ ಮಾತುಗಳು ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯವಿದ್ದ ಸಂದರ್ಭಗಳಲ್ಲಿ ಅಮಾನವೀಯವಾದದ್ದು. ತುರ್ತು ವೈದ್ಯಕೀಯ ಚಿಕಿತ್ಸೆಯ ಕ್ಷೇತ್ರಕ್ಕೆ ಸರ್ಕಾರ ಆದ್ಯತೆ ನೀಡಿಲ್ಲ ಎಂಬುದು ಇದರಿಂದ ವೇದ್ಯ.

ಸಾರ್ವಜನಿಕ ಆರೋಗ್ಯ ಸೇವಾ ವ್ಯವಸ್ಥೆಯನ್ನು ಬಲಪಡಿಸಬೇಕಾಗಿರುವ ಜರೂರನ್ನು ಈ ಪ್ರಕರಣ ಮತ್ತೆ ಎತ್ತಿಹಿಡಿದಿದೆ. ಅಂಜನಾಪುರ ಪ್ರದೇಶದಲ್ಲಿ ತ್ಯಾಜ್ಯ ಹೆಚ್ಚ­ಳವೂ ಬೀದಿ ನಾಯಿ ಹಾವಳಿ ಹೆಚ್ಚಾಗಲು ಕಾರಣವಾಗಿದೆ ಎನ್ನಲಾಗಿದೆ.  ಆದರೆ ಈ ಘಟನೆಗೆ ಮಗುವನ್ನು ಒಂಟಿಯಾಗಿ ಹೊರಬಿಟ್ಟ ಪೋಷಕರೇ ಕಾರಣರಾಗಿದ್ದಾರೆ ಎಂದು  ಬಿಬಿಎಂಪಿ ದೂರಿದೆ.  ಇಂತಹ ಆರೋಪಗಳನ್ನು ಮಾಡುತ್ತಾ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಯತ್ನಿಸುವ  ಬಿಬಿಎಂಪಿ  ಕಾರ್ಯವೈಖರಿ ಖಂಡನೀಯ.  ವಿಲೇವಾರಿಯಾಗದ ತ್ಯಾಜ್ಯ, ಇದರಿಂದ ಹೆಚ್ಚುವ ಬೀದಿನಾಯಿಗಳ ಕಾಟ ಹಾಗೂ ರಸ್ತೆಗಳ ಅವ್ಯವಸ್ಥೆ ಜನರ ಜೀವಗಳನ್ನೇ ಬಲಿ ಪಡೆದ ಪ್ರಕರಣಗಳು ಜನರ  ಸ್ಮೃತಿಯಿಂದ ಇನ್ನೂ ಮರೆ­ಯಾಗಿಲ್ಲ ಎಂಬುದನ್ನು ಬಿಬಿಎಂಪಿ ಮೊದಲು ಅರ್ಥಮಾಡಿ­ಕೊಳ್ಳಬೇಕು.

ಬೆಂಗಳೂರಿನಲ್ಲಿ ಒಟ್ಟು ಮೂರು ಲಕ್ಷ ಬೀದಿನಾಯಿಗಳಿವೆ. ಪ್ರತಿ ವಾರ್ಡ್ ನಲ್ಲಿ ಬೀದಿ ನಾಯಿಗಳಿಗೆ ರೇಬಿಸ್ ರೋಗ ನಿರೋಧಕ ಲಸಿಕೆ ಹಾಕುವ ಕಾರ್ಯಕ್ರಮ ಇದೆ. ಹಾಗೆಯೇ ಬೀದಿನಾಯಿಗಳ ಸಂತಾನಶಕ್ತಿ ಹರಣ ಕಾರ್ಯಕ್ರಮವೂ ಇದೆ. ಈ ಕಾರ್ಯಕ್ರಮಗಳ  ಪರಿಣಾಮಕಾರಿ ಜಾರಿ ಹಾಗೂ ಹಣ ವಿನಿಯೋಗದ ಕುರಿತು ತನಿಖೆಯಾಗಬೇಕು. ಈ ಕಾರ್ಯಕ್ರಮಗಳಿದ್ದೂ ಬೀದಿ ನಾಯಿಗಳ ಸಂಖ್ಯೆ ಏಕೆ ಕಡಿಮೆಯಾಗಿಲ್ಲ ಎಂಬುದು ಪ್ರಶ್ನೆ. 

ರಾತ್ರಿವೇಳೆ ವಸತಿಪ್ರದೇಶಗಳಲ್ಲಿ ಬೀದಿನಾಯಿಗಳ ಹಾವಳಿಯಿಂದ ದ್ವಿಚಕ್ರ ವಾಹನ ಸವಾರರು ಜೀವ ಕೈಲಿಹಿಡಿದು ವಾಹನ ಚಲಾಯಿಸಬೇಕಾದ ಸ್ಥಿತಿ ಇದೆ. ಇಂತಹ ವಾಸ್ತವಿಕ ಸಮಸ್ಯೆಗಳನ್ನು ನಿರ್ದಾಕ್ಷಿಣ್ಯವಾಗಿ ನಿರ್ವಹಿಸಬೇಕಾದ ಅಗತ್ಯವಿದೆ. ಈಗ ಶೇಕಡ 80ರಷ್ಟು ಬೀದಿನಾಯಿಗಳಿಗೆ ಲಸಿಕೆ ಹಾಕಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ. ಕಚ್ಚುವ ಬೀದಿ ನಾಯಿಗಳನ್ನು ಹಿಡಿಯುವ ಕಾರ್ಯಾಚರಣೆಯನ್ನು ತೀವ್ರಗೊಳಿ­ಸುವುದು ಅಗತ್ಯ. 

ಹಾಗೆಯೇ ರೋಗಗ್ರಸ್ತ ಹಾಗೂ ಕಚ್ಚುವ ನಾಯಿಗಳಿಗೆ   ದಯಾಮರಣ ನೀಡುವುದು ಒಳಿತು. ಜೊತೆಗೆ ಬೀದಿನಾಯಿಗಳಿಗೆ ಆಶ್ರಯಧಾಮಗಳನ್ನು ಸ್ಥಾಪಿಸುವತ್ತಲೂ  ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರಾಣಿದಯಾ ಸಂಘಗಳು ಹಾಗೂ  ಇತರ ಸ್ವಯಂಸೇವಾ ಸಂಘ­ಗಳ ನೆರವನ್ನು ಪಡೆದುಕೊಳ್ಳಬಹುದು. ಜನಜೀವನಕ್ಕೆ ಹಾವಳಿ ಎನಿಸುವ ಮಟ್ಟಿಗೆ ನಾಯಿಗಳ ಸಂಖ್ಯೆ ವೃದ್ಧಿಯಾಗದಂತೆ ಎಚ್ಚರ ವಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT