ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದೇಶನದ ರಾಜಮಾರ್ಗದಲ್ಲಿ ರಾಜಪ್ಪ

Last Updated 1 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಚಿಕ್ಕಂದಿನಿಂದಲೂ ಸಿನಿಮಾ ನೋಡುವ ಹುಚ್ಚು. ಪಿಯುಸಿ ಓದುವಾಗಲೇ ಸಿನಿಮಾ ರಂಗಕ್ಕೆ ಕಾಲಿಡಬೇಕೆಂದು ಕನಸು ಕಾಣುತ್ತಿದ್ದ ಯುವಕನಲ್ಲಿ ನಿರ್ದೇಶನ ವಿಭಾಗದಲ್ಲಿ ಕಲಿಕೆ ಮಾಡಬೇಕೆಂಬ ಹಂಬಲ. ಹೆಚ್ಚಿನ ಪೋಷಕರಂತೆ ಈ ಯುವಕನ ಅಪ್ಪ ಅಮ್ಮನದೂ ಮಗ ಎಂಜಿನಿಯರಿಂಗ್‌ ಓದಲಿ ಎಂಬ ಹಟ. ಅವರ ಮಾತಿಗೆ ಕಟ್ಟುಬಿದ್ದು ಎಂಜಿನಿಯರಿಂಗ್ ಕಾಲೇಜು ಮೆಟ್ಟಿಲು ಹತ್ತಿದರೂ ಓದು ರುಚಿಸಲಿಲ್ಲ. ಅದಕ್ಕೆ ಸಿನಿಮಾದ ಸೆಳೆತವೂ ಕಾರಣ.

ಓದಿಗೆ ತಿಲಾಂಜಲಿ ಇಟ್ಟು ಗಾಂಧಿನಗರಕ್ಕೆ ಕಾಲಿಟ್ಟ ಯುವಕ ಸೇರಿಕೊಂಡಿದ್ದು ನಿರ್ದೇಶಕ ‘ಮಠ’ ಗುರುಪ್ರಸಾದ್‌ ಅವರ ತಂಡದಲ್ಲಿ. ಅಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಯುವಕ ಹೆಸರು ಮಾಡಿದ್ದು ಸಂಭಾಷಣೆಕಾರನಾಗಿ.

ಶರಣ್‌ ನಾಯಕರಾಗಿದ್ದ ‘ವಿಕ್ಟರಿ’ ಸಿನಿಮಾದಲ್ಲಿ ಕಚಗುಳಿ ಇಡುವ ಸಂಭಾಷಣೆ ಮೂಲಕ ನಗಿಸಿದವರು ಪ್ರಶಾಂತ್ ರಾಜಪ್ಪ. ‘ಅಧ್ಯಕ್ಷ’ ಚಿತ್ರದಲ್ಲಿಯೂ ತುಂಟತನ, ಹಾಸ್ಯಭರಿತ ಮಾತುಗಳನ್ನು ಪೋಣಿಸಿದರು. ‘ರನ್ನ’ದಲ್ಲಿ ಸುದೀಪ್ ಇಮೇಜ್‌ಗೆ ತಕ್ಕಂತೆ ಅಭಿಮಾನಿಗಳ ಸಿಳ್ಳೆ, ಚಪ್ಪಾಳೆ ಗಿಟ್ಟಿಸುವ ಅಬ್ಬರದ ಡೈಲಾಗುಗಳನ್ನೂ ಗೀಚಿದರು. ನಗಿಸಲಷ್ಟೇ ಅಲ್ಲ, ಗಂಭೀರ ಮತ್ತು ತೂಕದ ಮಾತುಗಳನ್ನು ಸಹ ಬರೆಯುವ ತಾಕತ್ತು ತನ್ನಲ್ಲಿದೆ ಎಂದು ಸಾಬೀತುಪಡಿಸಿದರು ಪ್ರಶಾಂತ್‌.

ಪ್ರಶಾಂತ್‌ ಸಂಭಾಷಣೆ ಬರೆದಿರುವುದು ಮೂರು ಚಿತ್ರಗಳಲ್ಲಿ ಮಾತ್ರವಾದರೂ, ಈ ಮೂರೂ ಚಿತ್ರಗಳು ದೊಡ್ಡ ಯಶಸ್ಸು ಕಂಡಿವೆ. ಈ ಗೆಲುವುಗಳಲ್ಲಿ ಸಂಭಾಷಣೆಯದ್ದೂ ಪ್ರಮುಖ ಪಾತ್ರ ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಈ ಮೂರೂ ಚಿತ್ರಗಳನ್ನು ನೋಡಿದ ಅನೇಕ ನಟ – ನಿರ್ದೇಶಕರು ಪ್ರಶಾಂತ್ ಅವರನ್ನು ಮೆಚ್ಚಿಕೊಂಡು ಬೆನ್ನುತಟ್ಟಿದ್ದಾರೆ. ಅವರ ಲೇಖನಿ ಈಗ ಸಂಭಾಷಣೆಗಳನ್ನು ಹೊಸೆಯುವ ಕೆಲಸದಿಂದ ಚಿತ್ರಕಥೆ ಗೀಚುವತ್ತ ಹೊರಳಿದೆ. ಅವರ ಮೂಲ ಗುರಿ ನಿರ್ದೇಶನ. ಆ ಗುರಿಯೊಂದಿಗೇ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು. ಅದನ್ನು ಈಡೇರಿಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ‘ಎದ್ದೇಳು ಮಂಜುನಾಥ’, ‘ಡೈರೆಕ್ಟರ್ಸ್‌ ಸ್ಪೆಷಲ್‌’, ‘ವಿಕ್ಟರಿ’, ‘ಮತ್ತೆ ಬನ್ನಿ ಪ್ರೀತ್ಸೋಣ’, ‘ಅಧ್ಯಕ್ಷ’, ‘ರೋಮಿಯೊ’, ‘ಅರ್ಜುನ’ ಮುಂತಾದ ಸಿನಿಮಾಗಳಿಗೆ ದುಡಿದ ಅನುಭವ ಅವರ ಬೆನ್ನಿಗಿದೆ.

‘ಕಥೆ ತಯಾರಾಗಿದೆ. ನಿರ್ಮಾಪಕರ ಹುಡುಕಾಟ ನಡೆಯುತ್ತಿದೆ. ಎಲ್ಲಾ ಸರಿಯಾದ ಬಳಿಕ ನಾಯಕನ ಹುಡುಕಾಟ ನಡೆಯುತ್ತದೆ. ದೊಡ್ಡ ತಾರೆಯೇ ನನ್ನ ಚಿತ್ರದ ನಾಯಕರಾಗಲಿದ್ದಾರೆ’ ಎಂದು ತಮ್ಮ ನಿರ್ದೇಶನದ ಚಿತ್ರದ ಕುರಿತು ಪೂರ್ತಿ ಮಾಹಿತಿ ಬಿಟ್ಟುಕೊಡಲು ಸಿದ್ಧರಿಲ್ಲದೆ ಚುಟುಕಾಗಿ ವಿವರಿಸುತ್ತಾರೆ.

ಇದು ಹಾಸ್ಯ ಪ್ರಧಾನವೇ ಅಥವಾ ಆ್ಯಕ್ಷನ್‌ ಚಿತ್ರವೇ ಎಂಬ ಗುಟ್ಟನ್ನೂ ಅವರು ಬಹಿರಂಗಪಡಿಸುವುದಿಲ್ಲ. ಆದರೆ ಪರಿಪೂರ್ಣ ಮನರಂಜನಾತ್ಮಕ ಚಿತ್ರ ಎನ್ನುತ್ತಾರೆ ಪ್ರಶಾಂತ್‌. ವಾಸ್ತವವಾಗಿ ಭಾವನಾತ್ಮಕ ಸಂಗತಿಗಳ ಕುರಿತು ಹೆಚ್ಚು ಒಲವುಳ್ಳವರು ಅವರು. ಮೊದಲ ಸಿನಿಮಾ ಜನರನ್ನು ರಂಜಿಸಲು. ನಂತರದ ಸಿನಿಮಾಗಳಲ್ಲಿ ಭಾವನಾತ್ಮಕ ವಸ್ತುಗಳೇ ಪ್ರಧಾನವಾಗಲಿವೆ ಎನ್ನುವ ಪ್ರಶಾಂತ್‌, ಪ್ರಯೋಗಶೀಲ ಸಿನಿಮಾಗಳತ್ತಲೂ ತುಡಿತ ವ್ಯಕ್ತಪಡಿಸುತ್ತಾರೆ.

‘ಸಂಭಾಷಣೆ ಬರೆಯಲು ನಿರ್ದೇಶಕರೊಂದಿಗೆ ಸಾಮರಸ್ಯ ಅಗತ್ಯ. ಅಷ್ಟೇ ಸ್ವಾತಂತ್ರ್ಯವೂ ಬೇಕು. ಕಥೆಗೆ ಅಗತ್ಯಕ್ಕಿಂತಲೂ ಹೆಚ್ಚೇ ಸಂಭಾಷಣೆ ಬರೆಯಬೇಕಾಗುತ್ತದೆ. ಹಾಸ್ಯ ಸನ್ನಿವೇಶಗಳಿಗೆ ಮಾತು ಹೆಣೆಯುವಾಗ ತುಂಬಾ ಎಚ್ಚರಿಕೆ ಅಗತ್ಯ. ತುಸು ಹಿಡಿತ ತಪ್ಪಿದರೂ ಅದು ಅಪಹಾಸ್ಯವಾಗಬಹುದು. ಇಲ್ಲವೇ ಅಶ್ಲೀಲ ಅರ್ಥ ಕಲ್ಪಿಸಬಹುದು. ನನ್ನ ಮನೆಯವರೂ ಸಿನಿಮಾ ನೋಡುತ್ತಾರಲ್ಲವೇ ದ್ವಂದ್ವಾರ್ಥ ನನ್ನ ಅಭಿರುಚಿಯಲ್ಲ. ಆದರೆ ಅದು ಸಿನಿಮಾಗಳಲ್ಲಿ ಕೆಲವೊಮ್ಮೆ ಅನಿವಾರ್ಯವೂ ಆಗುತ್ತದೆ. ಆಗ ಅದು ಸುಲಭಕ್ಕೆ ಅರ್ಥವಾಗುವಂತೆ ಇರಬಾರದು ಎನ್ನುವ ಜಾಗ್ರತೆಯ ಪ್ರಜ್ಞೆ ಕಾಡುತ್ತದೆ. ಸಂಭಾಷಣೆಗಳನ್ನು ಅರ್ಥ ಮಾಡಿಸಲು ಹೋದರೆ ಅದು ತನ್ನ ಸತ್ವವನ್ನೇ ಕಳೆದುಕೊಳ್ಳುತ್ತದೆ ಎನ್ನುವುದು ಅವರ ಅಭಿಪ್ರಾಯ.

ತಮ್ಮ ಬರವಣಿಗೆಯ ಆಸಕ್ತಿಗೆ ನಿರಂತರವಾಗಿ ನೋಡುತ್ತಿರುವ ಸಿನಿಮಾಗಳೇ ಪ್ರೇರಣೆ ಎನ್ನುತ್ತಾರೆ ಅವರು. ತೆಲುಗಿನ ನಿರ್ದೇಶಕ ತ್ರಿವಿಕ್ರಮ್‌ ಶ್ರೀನಿವಾಸ್‌ ಈ ವಿಚಾರದಲ್ಲಿ ಅವರಿಗೆ ಮಾನಸಿಕ ಗುರು. ಜೊತೆಗೆ ಅಲ್ಪಮಟ್ಟಿಗಿನ ಸಾಹಿತ್ಯದ ಒಲವೂ ಇದೆ. ಬೀಚಿ ಅವರ ಬರಹಗಳೆಂದರೆ ಅಚ್ಚುಮೆಚ್ಚು. ಸದ್ಯ ಅವರು ಚಿತ್ರವೊಂದರಲ್ಲಿ ಸಹ ನಿರ್ದೇಶಕನ ಹೊಣೆ ನಿಭಾಯಿಸುತ್ತಿದ್ದಾರೆ. ಆ ಸಿನಿಮಾ ಮುಗಿದ ಬಳಿಕವಷ್ಟೇ ನಿರ್ದೇಶನದ ಟೊಪ್ಪಿ ಧರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT