ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಲ್ಲದ ಅಟ್ಟಹಾಸ

Last Updated 11 ಜೂನ್ 2014, 19:30 IST
ಅಕ್ಷರ ಗಾತ್ರ

ತೆ‌ಹ್ರಿಕ್–ಎ– ತಾಲಿಬಾನ್ ಪಾಕಿಸ್ತಾನ್‌ಗೆ (ಟಿಟಿಪಿ) ಸೇರಿದ ಉಗ್ರರು ‌ಎರಡು ದಿನಗಳಲ್ಲಿ ಎರಡು ದಾಳಿಗಳನ್ನು ಪಾಕಿಸ್ತಾನದಲ್ಲಿ ನಡೆಸಿ­ದ್ದಾರೆ. ಕರಾಚಿಯ ಜಿನ್ನಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ  ವಿಮಾನ ನಿಲ್ದಾಣ ಭದ್ರತಾ ಪಡೆ ಅಕಾಡೆಮಿಯ ತರಬೇತಿ ಶಿಬಿರದ ಮೇಲೆ ಉಗ್ರರು ಈ ದಾಳಿಗಳನ್ನು ನಡೆಸಿದ್ದಾರೆ.

ಟಿಟಿಪಿ ಇಲ್ಲಿಯವರೆಗೆ ತನ್ನ ಚಟು­ವಟಿಕೆಗಳನ್ನು ಬುಡಕಟ್ಟು ಜನರು ಅಧಿಕ ಸಂಖ್ಯೆಯಲ್ಲಿರುವ ಪ್ರದೇಶಗಳಿಗೆ ಸೀಮಿತ­ಗೊಳಿಸಿತ್ತು. ಆದರೆ ಕಳೆದ ಎರಡು ದಿನಗಳಲ್ಲಿ ವಾಣಿಜ್ಯ ನಗರಿ ಕರಾಚಿಯಲ್ಲಿ ದಾಳಿ ನಡೆಸಿ ಭೀತಿ ಹುಟ್ಟಿಸಿದೆ. ಕರಾಚಿ ವಿಮಾನ ನಿಲ್ದಾಣ ಭಾರಿ ಭದ್ರತೆಯನ್ನು ಒಳಗೊಂಡ ನಿಲ್ದಾಣ. ಹೀಗಾಗಿ ಈ ದಾಳಿಗಳಿಗೆ ನಿಲ್ದಾಣದ ಒಳಗಿನವರ ನೆರವು ದೊರೆತಿದೆ ಎನ್ನುವುದು ಸ್ಪಷ್ಟ.

ಉಗ್ರರಿಗೆ ಪೊಲೀಸ್ ಮತ್ತು ಸೇನೆ­ಯಲ್ಲಿರುವವರ ಜತೆ ಸಂಪರ್ಕ ಇದೆ ಎನ್ನುವುದನ್ನು ಈ ದುಷ್ಕೃತ್ಯ ಸಾಬೀತುಪಡಿಸಿದೆ. ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿದಾಗ ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಮತ್ತು ಹಲವು ದಿನಗಳಿಗೆ ಆಗುವಷ್ಟು ಜೀವನಾವಶ್ಯ ವಸ್ತುಗಳು ಅವರಲ್ಲಿದ್ದವು. ಉಗ್ರರ ಸಿದ್ಧತೆ ಗಮನಿ­ಸಿದರೆ  ದೊಡ್ಡ ಯೋಜನೆಯನ್ನೇ ಹಾಕಿಕೊಂಡಿದ್ದರು; ಬಹುಶಃ ವಿಮಾನವನ್ನು ಅಪಹರಿಸುವ ಸಂಚು ಹೊಂದಿದ್ದರು ಎಂದು ಊಹಿಸಬಹುದು.

ಉಗ್ರರ ವಿಧ್ವಂಸಕ ಸಾಮರ್ಥ್ಯ ಕುಗ್ಗಿಲ್ಲ ಎನ್ನುವುದನ್ನು ಈ ದಾಳಿ ಸ್ಪಷ್ಟಪಡಿಸುತ್ತದೆ. ಈ ಕೃತ್ಯ ತನ್ನದು ಎಂದು ಟಿಟಿಪಿ ಹೇಳಿಕೊಂಡಿದ್ದರೂ ಉಜ್ಬೆಕ್, ಚೆಚನ್ಯಾ ಮತ್ತು ಅರಬ್ ಹೋರಾಟಗಾರರು ಇದರಲ್ಲಿ ಭಾಗಿ­ಯಾಗಿದ್ದರಿಂದ ಟಿಟಿಪಿ–ಅಲ್ ಖೈದಾ ಉಗ್ರರ ಸಂಘಟನೆಗಳ ಜಂಟಿ ಕಾರ್ಯಾ­ಚರಣೆ ಇದಾಗಿರುವ ಸಾಧ್ಯತೆ ಇದೆ. 

2011ರಲ್ಲಿ ಮೆಹ್ರಾನ್ ನೌಕಾ ನೆಲೆ, 2012ರಲ್ಲಿ ಮಿನ್ಹಾಸ್ ವೈಮಾನಿಕ ನೆಲೆ ಮತ್ತು ಪೆಶಾವರ ವಿಮಾನ ನಿಲ್ದಾಣದ ಮೇಲೂ ಟಿಟಿಪಿ ದಾಳಿ ನಡೆಸಿತ್ತು. ಪಾಕ್ ಪರಮಾಣು ನೆಲೆಗಳ ಮೇಲೂ ಟಿಟಿಪಿ ಕಣ್ಣಿರಿಸಿರಬಹುದು. ಆದರೆ ಅಂತಹ  ದಾಳಿ ನಡೆದಿದ್ದೇ ಆದರೆ ಆಗುವ ದುರಂತ ಊಹೆಗೆ ನಿಲುಕದು. ಅಂತಹ ದಾಳಿ ವಿನಾಶವಲ್ಲದೆ ಮತ್ತೇನಲ್ಲ. ಜಾಗತಿಕವಾಗಿ ಪರಿಣಾಮ ಬೀರುವಂತಹದ್ದು.

ಇದನ್ನು ಭಾರತ ಸೇರಿದಂತೆ ಅಂತರರಾಷ್ಟ್ರೀಯ ಸಮುದಾಯ ನಿರ್ಲಕ್ಷಿಸ­ಲಾಗದು.    ಭಯೋ­ತ್ಪಾದನೆ ನಿರ್ಮೂಲನೆ ವಿಷಯದಲ್ಲಿ ಪಾಕ್ ಸರ್ಕಾರದ ಅರೆಮನಸ್ಸು  ಭಯೋತ್ಪಾದನೆ ಬೆಳೆಯಲು ಸಹಕಾರಿಯಾಗಿದೆ. ಉಗ್ರರ ವಿರುದ್ಧದ ಕಾರ್ಯಾಚರಣೆ ಪ್ರಹಸನದಂತೆ ಕಂಡು ಬರುತ್ತಿದೆ. ಟಿಟಿಪಿ ವಿರುದ್ಧ ಮಾತ್ರ ಕಾರ್ಯಾಚರಣೆ ನಡೆಸುವುದರಿಂದ ಭಯೋತ್ಪಾದನೆ ನಿರ್ಮೂಲನೆ ಆಗದು. 

ತನ್ನ ಪರ ಇರುವ ಭಯೋತ್ಪಾದಕ ಸಂಘಟನೆಗಳ ವಿರುದ್ಧವೂ ಪಾಕ್‌ ಕ್ರಮ ಕೈಗೊಂಡರೆ ಮಾತ್ರ ಈ ಪಿಡುಗು ನಾಶವಾಗುತ್ತದೆ. ಸೇನೆ ಮತ್ತು ಬೇಹುಗಾರಿಕಾ ಸಂಸ್ಥೆ ಐಎಸ್ಐ ಒಳಗೇ ಭಯೋತ್ಪಾದಕರ ಪರ ಸಹಾನುಭೂತಿ ಉಳ್ಳವರು ಇದ್ದಾರೆ. ಗಡಿಯಾಚೆಗಿನ ಭಯೋತ್ಪಾದನೆಗಾಗಿ   ತನ್ನ ನೆಲದಲ್ಲೇ ಬೆಳೆಯಲು ಬಿಟ್ಟಿರುವ ಈ ಉಗ್ರರನ್ನು ಸಂಹರಿಸದಿದ್ದಲ್ಲಿ ಸ್ವತಃ ತಾನೇ ಬಲಿಪಶುವಾಗಬಹುದಾದ ಸಾಧ್ಯತೆಗಳನ್ನು ಪಾಕಿಸ್ತಾನ ಗಂಭೀರವಾಗಿ ಪರಿಗಣಿಸಬೇಕು. ಇದಕ್ಕೆ ಬೇಕಾಗಿರುವುದು ರಾಜಕೀಯ ಇಚ್ಛಾಶಕ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT