ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತ ಅಧಿಕಾರಿ ಪುತ್ರನ ವಿಚಾರಣೆಗೆ ಸಿದ್ಧತೆ

ಮೈಸೂರು ಅರಮನೆಯಲ್ಲಿ ವಿಡಿಯೊ ಚಿತ್ರೀಕರಣ ವಿವಾದ
Last Updated 28 ಮೇ 2016, 19:30 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಅಂಬಾವಿಲಾಸ ಅರಮನೆಯ ನಿಷೇಧಿತ ಪ್ರದೇಶದಲ್ಲಿ ವಿಡಿಯೊ ಚಿತ್ರೀಕರಣ ನಡೆಸಿರುವುದು ನಿವೃತ್ತ ಐಎಎಸ್‌ ಅಧಿಕಾರಿ ನಂದಕುಮಾರ್‌ ಪುತ್ರ ಬಿ.ಎನ್‌.ಆದಿತ್ಯ ಎಂಬ ಸುಳಿವು ದೊರೆತಿದ್ದು, ಯುವಕನನ್ನು ವಿಚಾರಣೆಗೆ ಒಳಪಡಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಆದಿತ್ಯ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ವಿದೇಶದಲ್ಲಿ ಶಿಕ್ಷಣ ಪಡೆದಿದ್ದು, ಆದಿತ್ಯ ವಿವಾಹ ಮೂರು ತಿಂಗಳ ಹಿಂದೆ ನವ್ಯತಾ ಜತೆ ನಡೆದಿತ್ತು. ವಿವಾಹಕ್ಕೂ ಮುನ್ನ ಅರಮನೆಯ ಒಳಗೆ ಚಿತ್ರೀಕರಣ ನಡೆದಿರುವ ಸಾಧ್ಯತೆ ಇದೆ.

ಛಾಯಾಚಿತ್ರ ತೆಗೆಸಿಕೊಳ್ಳುವುದರ ಜತೆಗೆ ವಿಡಿಯೊ ಚಿತ್ರೀಕರಣವನ್ನೂ ಮಾಡಲಾಗಿದೆ. ಸಾಮಾಜಿಕ ಜಾಲತಾಣ ಹಾಗೂ ‘ಪೋಟ್ರಿಯಾ’ ಕಂಪೆನಿ ವೆಬ್‌ಸೈಟ್‌ನಿಂದ ಫೋಟೊ, ವಿಡಿಯೊಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಯಾಗಿ ನಂದಕುಮಾರ್‌ ನಿವೃತ್ತಿ ಹೊಂದಿದ್ದಾರೆ. ಅರಮನೆಯ ಅಂಗಳದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ ಅನುಭವವಿದೆ.

ಹೀಗಾಗಿ, ಇಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನಂದಕುಮಾರ್‌ ಪರಿಚಿತರು. ಅರಮನೆ ಆಡಳಿತ ಮಂಡಳಿಯ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಚಿತ್ರೀಕರಣ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ.

ಉಪನಿರ್ದೇಶಕರ ವಿಚಾರಣೆ?: ಪ್ರಕ ರಣಕ್ಕೆ ಸಂಬಂಧಿಸಿದಂತೆ ಅರಮನೆ ಆಡಳಿತ ಮಂಡಳಿಯ 7 ಸಿಬ್ಬಂದಿಯನ್ನು ಅರಮನೆ ಭದ್ರತಾ ಪಡೆಯ ಎಸಿಪಿ ಶೈಲೇಂದ್ರ ವಿಚಾರಣೆ ನಡೆಸಿದ್ದಾರೆ.

ಉಪ ನಿರ್ದೇಶಕರನ್ನೇ ಹೋಲುವ ವ್ಯಕ್ತಯೊ ಬ್ಬರು ವಿಡಿಯೊ ತುಣುಕಿನಲ್ಲಿ ಕಾಣಿಸಿ ಕೊಂಡಿದ್ದಾರೆ. ಹೀಗಾಗಿ, ಉಪನಿರ್ದೇ ಶಕರೂ ಸೇರಿದಂತೆ ಇತರ ಅಧಿಕಾರಿ ಗಳನ್ನು ವಿಚಾರಣೆಗೆ ಒಳಪಡಿಸಲು ಪೊಲೀಸರು ನಿರ್ಧರಿಸಿದ್ದಾರೆ. 3 ತಿಂಗಳಿಂದ ಕಾರ್ಯನಿರ್ವಹಿಸುತ್ತಿರುವ ಪೊಲೀಸರೂ ವಿಚಾರಣೆ ಎದುರಿಸಲಿದ್ದಾರೆ.

ಅರಮನೆಯಲ್ಲಿ ಅಳವಡಿಸಿರುವ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯವನ್ನು ವಶಕ್ಕೆ ಪಡೆಯುವ ಪ್ರಯತ್ನ ನಡೆಯುತ್ತಿದೆ. ಆಡಳಿತ ಮಂಡಳಿಯ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ವಿಭಾಗದ ವಶದಲ್ಲಿರುವ ದೃಶ್ಯಗಳನ್ನು ಪೊಲೀಸರಿಗೆ ಹಸ್ತಾಂತರಿಸುವಂತೆ ಕೋರಿ ತನಿಖಾಧಿಕಾರಿ ಪತ್ರ ಬರೆದಿದ್ದಾರೆ.

ಸಂಪರ್ಕಕ್ಕೆ ಸಿಗದ ಛಾಯಾಗ್ರಾಹಕ: ಹೈದರಾಬಾದ್ ಮೂಲದ ‘ಪೋಟ್ರಿಯಾ’ ಕಂಪೆನಿಯ ವೆಂಕಟೇಶ್‌ ಈ ಚಿತ್ರಗಳನ್ನು ಸೆರೆಹಿಡಿದಿದ್ದು, ಈತನನ್ನು ವಶಕ್ಕೆ ಪಡೆದು ಪ್ರಕರಣದ ಮೂಲ ಕೆದಕಲು ಪೊಲೀಸರು ಮುಂದಾಗಿದ್ದಾರೆ.

ಆದರೆ, ವೆಂಕಟೇಶ್ ಪೊಲೀಸರ ಸಂಪರ್ಕಕ್ಕೆ ಸಿಕ್ಕಿಲ್ಲ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಈತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸ್‌ ಮೂಲಗಳು ಮಾಹಿತಿ ನೀಡಿವೆ. ಅರಮನೆಯ ಸೊಬಗಿನಲ್ಲಿ ಸೆರೆಯಾದ ಆದಿತ್ಯ ಹಾಗೂ ನವ್ಯತಾ ಜೋಡಿಯ ಆಕರ್ಷಕ ಫೋಟೊಗಳನ್ನು ‘ಪೋಟ್ರಿಯಾ’ ಕಂಪೆನಿ ತನ್ನ ವೆಬ್‌ಸೈಟ್‌ನಲ್ಲಿ ಹಾಕಿತ್ತು.

ಅರಮನೆಯ ವೈಭವೋಪೇತ ದರ್ಬಾರ್‌ ಹಾಲ್‌, ಕಲ್ಯಾಣ ಮಂಟಪ, ಗ್ಯಾಲರಿಯಲ್ಲಿ ಚಿತ್ರೀಕರಿಸಿದ 10 ನಿಮಿಷದ ವಿಡಿಯೋ ತುಣುಕನ್ನು ಹಾಕಿಕೊಂಡಿತ್ತು. ಛಾಯಾಗ್ರಾಹಕ ತನ್ನ ‘ಫೇಸ್‌ಬುಕ್‌’ ಖಾತೆಯಲ್ಲಿ ಇವುಗಳನ್ನು ಹಂಚಿಕೊಂಡಿದ್ದ.

ಇದು ಹಲವರನ್ನು ಆಕರ್ಷಿಸಿತ್ತು. ಸಾಮಾಜಿಕ ಜಾಲತಾಣದ ಈ ಛಾಯಾಚಿತ್ರಗಳನ್ನು ನೂರಾರು ಮಂದಿ ಷೇರ್‌ ಮಾಡಿಕೊಂಡಿದ್ದರು. ಕನ್ನಡ ಸಿನಿಮಾ ನಿರ್ದೇಶಕರ ಕಣ್ಣಿಗೆ ಬಿದ್ದು ಇದು ಬೆಳಕಿಗೆ ಬಂದಿತ್ತು.

ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುವ ಅಂಬಾವಿಲಾಸ ಅರಮನೆಯ ಅಂಗಳದಲ್ಲಿ ಮಾತ್ರ ಫೋಟೊ ತೆಗೆಯಲು ಅವಕಾಶವಿದೆ. ಅರಮನೆಯ ಒಳಭಾಗದಲ್ಲಿ ಛಾಯಾಚಿತ್ರಕ್ಕೆ ನಿರ್ಬಂಧ ಹೇರಿ ದಶಕಗಳೇ ಕಳೆದಿವೆ.

ಮುಖ್ಯಾಂಶಗಳು
* ಸಿ.ಸಿ ಟಿ.ವಿ ಕ್ಯಾಮೆರಾದ ದೃಶ್ಯದ ತುಣುಕು ವಶಕ್ಕೆ ಪಡೆಯಲು ಪತ್ರ
*ತಲೆಮರೆಸಿಕೊಂಡ ಛಾಯಾಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT