ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೇಶನ ಸವಲತ್ತಿಗೆ ಒತ್ತಾಯಿಸಿ ಪ್ರತಿಭಟನೆ

Last Updated 3 ಸೆಪ್ಟೆಂಬರ್ 2015, 6:19 IST
ಅಕ್ಷರ ಗಾತ್ರ

ಮುಂಡರಗಿ: ಸೂಕ್ತ ನಿವೇಶನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಟ್ಟಣದ ಎಪಿಎಂಸಿಯ ಅನ್ನದಾನೀಶ್ವರ ಹಮಾಲರ ಸಂಘದ ಕಾರ್ಯಕರ್ತರು ಬುಧವಾರ ಪಟ್ಟಣದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿ ನಂತರ ತಹಶೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಎಪಿಎಂಸಿಯಿಂದ ಹೊರಟ ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತಾ ಕೇಂದ್ರ ಬಸ್‌ ನಿಲ್ದಾಣ, ಅಂಬಾ ಭವಾನಿ ನಗರ, ಮಾಬು ಸುಬಾನಿ ನಗರ, ಮಾರುಕಟ್ಟೆ, ಗಾಂಧೀ ಸರ್ಕಲ್‌, ಜಾಗೃತ್ ಸರ್ಕಲ್‌, ಕೊಪ್ಪಳ ಕ್ರಾಸ್‌ ಮಾರ್ಗವಾಗಿ ತಹಶೀಲ್ದಾರ ಕಚೇರಿಗೆ ಆಗಮಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಡಿ.ಎಸ್.ಎಸ್.ಮುಖಂಡ ಮೋಹನ ಆಲ್ಮೇಲಕರ ಮಾತನಾಡಿ, ರಾಜ್ಯಾಧ್ಯಂತ ಇರುವ ಅಸಂಘಟಿತ ಕೂಲಿ ಕಾರ್ಮಿಕರಲ್ಲಿ ಬಹುತೇಕ ಜನರು ದಲಿತ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. ಅವರೆಲ್ಲ ಕೇವಲ ಕೂಲಿಯೊಂದನ್ನೆ ನಂಬಿಕೊಂಡು ಜೀವನ ಸಾಗಿಸುತ್ತಿದ್ದು, ಅವರಿಗೆ ಈವರೆಗೂ ಸ್ವಂತ ಮನೆಗಳಿಲ್ಲದಿರುವುದು ತುಂಬಾ ದುರ್ದೈವದ ಸಂಗತಿಯಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.

ವೈ.ಎನ್‌.ಗೌಡರ ಮಾತನಾಡಿ, ಕಳೆದ ಹಲವು ದಶಕಗಳಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದರಿಂದ ಬಡ ಕೂಲಿ ಕಾರ್ಮಿಕರು ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಪಟ್ಟಣದ ಸೂಕ್ತ ಸ್ಥಳದಲ್ಲಿ ಎಲ್ಲ ಹಮಾಲರಿಗೆ ನಿವೇಶನ ಹಾಗೂ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.

ಮುಖಂಡ ಬಸವರಾಜ ದೇಸಾಯಿ ಮಾತನಾಡಿ, ಗದುಗಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲರು ಪ್ರತ್ಯೇಕ ಕಾಲೊನಿಯಲ್ಲಿ  ಅಲ್ಲಿಯ ಹಮಾಲರಿಗೆ ಉತ್ತಮ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಅದೆ ಮಾದರಿಯಲ್ಲಿ ಮುಂಡರಗಿ ಹಮಾಲರಿಗೂ ಮನೆಗಳನ್ನು ನಿರ್ಮಿಸಿ ಕೊಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪುರಸಭೆ ಸದಸ್ಯ ಶಂಕರಗೌಡ ಪಾಟೀಲ, ಬಸವರಾಜ ನವಲಗುಂದ, ಸತೀಶ ಪಾಸಿ, ಮಂಜುನಾಥ ಇಟಗಿ, ಸಂತೋಷ ಹಳೆಮನಿ, ರಾಜಾಭಕ್ಷಿ ಬೆಟಗೇರಿ ಮೊದಲಾದವರು ಮಾತನಾಡಿ, ಹಮಾಲರಿಗೆ ವಸತಿ ಯೋಜನೆ ಜಾರಿಯಾಗಬೇಕು, ಕಾಯಕ ನಿಧಿ ಅಡಿಯಲ್ಲಿ 1ಲಕ್ಷ ಆರೋಗ್ಯ ಯೋಜನೆ ಹಾಗೂ 60 ವರ್ಷ ದಾಟಿದ ಹಮಾಲರಿಗೆ ಕನಿಷ್ಟ 50,000 ಹಣವನ್ನು ಪರಿಹಾರವಾಗಿ ನೀಡಬೇಕು ಎಂದರು.

ಹಮಾಲರ ಸಂಘದ ಅಧ್ಯಕ್ಷ ಹಾಲಪ್ಪ ಮಣ್ಣವಡ್ಡರ, ಯಮುನಪ್ಪ ಪೂಜಾರ, ಗವಿಸಿದ್ದಪ್ಪ ಬಾಳಿಕಟ್ಟಿ, ಮರ್ದಾನಸಾಬ ತಪ್ಪಡಿ, ಗಣೇಶ ಹಾತಲಗೇರಿ, ಕೋಟೆಪ್ಪ ಬೇವಿನಕಟ್ಟಿ, ಆನಂದಗೌಡ ಪಾಟೀಲ, ಹಾಲಪ್ಪ ಅರಹುಣಸಿ, ಚಂದ್ರಕಾಂತ ಉಳ್ಳಾಗಡ್ಡಿ, ಅಶೋಕ ಇಳಗೇರ, ಗೂರನಗೌಡ ಪಾಟೀಲ, ಹನುಮಂತಪ್ಪ ರಾಟಿ, ಬಸವರಾಜ ಹಿರೇಮನಿ, ಹನಮವ್ವ ಹಾಲಿನವರ, ಮಲ್ಲಮ್ಮ ದೊಡ್ಡಮನಿ, ಶಾರದಾ ಹಾಲಿನವರ, ದೇವೇಂದ್ರ ಪುರದ, ಸುಬಾಷ ಬಾರಕೆರ, ಮಜ್ಜೂರಮ್ಮ ಅಬ್ಬಿಗೆರಿ, ಶರಣಪ್ಪ ಮುದಿಯಜ್ಜನವರ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT