ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಶ್ಶಬ್ದ ಸಂಗೀತ ಹುಡುಕಿ ಹೊರಟರು ನಂಜುಂಡಸ್ವಾಮಿ...

Last Updated 13 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಐವತ್ತು ವರ್ಷಕ್ಕೂ ಹೆಚ್ಚು ಕಾಲ ಅಮೆರಿಕದಲ್ಲಿದ್ದರೂ ಅಂತರಂಗದಲ್ಲಿ ಹದಿನಾರಾಣೆ ಕನ್ನಡಿಗರಾಗಿದ್ದ ಎಚ್‌.ಕೆ. ನಂಜುಂಡಸ್ವಾಮಿ ವೈದ್ಯರಾಗಿ ಅಮೆರಿಕದಲ್ಲಿ ದೊಡ್ಡ ಹೆಸರು ಗಳಿಸಿದ್ದವರು. ಅವರ ನಿಧನದಿಂದಾಗಿ ಅಮೆರಿಕ ಕನ್ನಡ ವಲಯದಲ್ಲಿ ಹಿರಿಯರೊಬ್ಬರ ಗೈರುಹಾಜರಿಯ ಶೂನ್ಯ ಕವಿದಿದೆ.

ಅಮೇರಿಕದಲ್ಲಿ ಬಹು ಕಾಲದಿಂದ ನೆಲಸಿದ್ದ ಅಚ್ಚಕನ್ನಡಿಗ, ಖ್ಯಾತ ಶಸ್ತ್ರಚಿಕಿತ್ಸಕ ಡಾ. ಎಚ್.ಕೆ. ನಂಜುಂಡಸ್ವಾಮಿ ಅವರು ಕಳೆದ ನವೆಂಬರ್ 30ರಂದು ಫ್ಲಾರಿಡಾದಲ್ಲಿ ತೀರಿಕೊಂಡರು. ತೀಕ್ಷ್ಣ ಬುದ್ಧಿ, ಚುರುಕು ಮಾತು, ವಿನೋದ ಪ್ರವೃತ್ತಿಯಿಂದ ಗೆಳೆಯರನ್ನು ಮಾತ್ರವೇ ಅಲ್ಲ, ಯಾವ ಸಭೆಯಲ್ಲಿ ಮಾತಾಡಿದರೂ ಸಭಿಕರೆಲ್ಲರ ಮೇಲೆ ತನ್ನ ಛಾಪು ಒತ್ತುತ್ತಿದ್ದ ಈ ಗೆಳೆಯ ಕಣ್ಮರೆಯಾಗಿರುವುದನ್ನು ಅವರ ಸಮೀಪವರ್ತಿಗಳು ಅರಗಿಸಿಕೊಳ್ಳುವುದು ಕಷ್ಟ.

ನಂಜುಂಡಸ್ವಾಮಿ ಅವರನ್ನು ನೆನಪಿಸಿಕೊಳ್ಳಲಿಕ್ಕೆ ಅವರ ವ್ಯಕ್ತಿತ್ವವೊಂದೇ ಕಾರಣವಲ್ಲ; ವ್ಯಕ್ತಿತ್ವದ ಸೊಗಸಿನಷ್ಟೇ ಅವರ ಸಾಹಿತ್ಯದ ಸಾಧನೆಯೂ ದೊಡ್ಡದು. ಐದು ದಶಕಕ್ಕೂ ಹೆಚ್ಚು ಕಾಲ ವಿದೇಶದಲ್ಲಿದ್ದರೂ ಅಂತರಂಗದಲ್ಲಿ ಕನ್ನಡವನ್ನು ಜೀವಜಲದಂತೆ ಉಳಿಸಿಕೊಂಡಿದ್ದುದು ನಂಜುಂಡಸ್ವಾಮಿ ಅವರ ವಿಶೇಷತೆ. 65ನೇ ವಯಸ್ಸಿನಲ್ಲಿ ವೈದ್ಯವೃತ್ತಿಯಿಂದ ನಿವೃತ್ತರಾದ ಮೇಲೆ ನಂಜುಂಡಸ್ವಾಮಿ ಅವರ ಸಾಹಿತ್ಯ ಪ್ರೇಮ ಹಾಗೂ ಬರವಣಿಗೆಗೆ ಸಾಕಷ್ಟು ಕಾಲ ದೊರೆಯಿತು. ಅದರ ಪರಿಣಾಮವಾಗಿ ‘ನಿಶ್ಶಬ್ದ ಸಂಗೀತ, (2000), ‘ಕಾನನದ ಮಲ್ಲಿಗೆ’ (2001), ‘ಕಲಸುಮೇಲೋಗರ’ (2002), ‘ಸುಶ್ರುತ ನಡೆದ ಹಾದಿಯಲ್ಲಿ’ (2006)– ಹೀಗೆ ಒಂದರ ಹಿಂದೊಂದು ಕೃತಿಗಳು ಪ್ರಕಟವಾದವೂ. ಇವೆಲ್ಲವೂ ಸಹೃದಯರು ಮೆಚ್ಚಿದ ಉತ್ತಮ ಅನುಭವ ಕಥನಗಳು, ಉತ್ತಮ ಪ್ರಬಂಧಗಳು.

‘ನಿಶ್ಶಬ್ದ ಸಂಗೀತ’ ಕೃತಿಯನ್ನು ನಂಜುಂಡಸ್ವಾಮಿ ಅವರು Silent Music ಹೆಸರಿನಲ್ಲಿ ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಅಂದಹಾಗೆ, ಅವರ ಕನ್ನಡ ಎಂಥವರಿಗೂ ರುಚಿಸುವಂತಹುದು. ಶ್ರೀಮದ್ಗಾಂಭೀರ್ಯ ಇಲ್ಲದ, ತೋರಿಕೆಯ ಥಳಕುಪಳಕು ಇಲ್ಲದ, ಲಲಿತವಾದ ಸರಸ ಕನ್ನಡ ಅವರದು. ನಂಜುಂಡಸ್ವಾಮಿ ಕಡೆಯ ಪುಸ್ತಕ ‘ಸುಶ್ರುತ ನಡೆದ ಹಾದಿಯಲ್ಲಿ’ ಅವರ ಶಸ್ತ್ರಚಿಕಿತ್ಸಕ ವೃತ್ತಿಯ ಕಹಿ-ಸಿಹಿ ಅನುಭವಗಳ ಕಥನ. ಇಂಥ ಅನುಭವಗಳ ದಾಖಲೆ ಬಹಳ ಮುಖ್ಯವಾದದ್ದು. ಕನ್ನಡಕ್ಕೆ ಇದೊಂದು ಉತ್ತಮ ಕೊಡುಗೆ.

ನನಗೆ ವೈಯಕ್ತಿಕವಾಗಿ ತುಂಬ ಸಂತೋಷ ಕೊಡುವ ವಿಚಾರ ಅವರೂ ನಾನೂ ಜೊತೆ ಸೇರಿ ಅಮೆರಿಕದ ಏಕೈಕ ಕನ್ನಡ ಸಾಹಿತ್ಯ ಸಂಸ್ಥೆಯಾದ ‘ಕನ್ನಡ ಸಾಹಿತ್ಯ ರಂಗ’ದ ಪರವಾಗಿ ‘ನಗೆಗನ್ನಡಂ ಗೆಲ್ಗೆ!’ ಎನ್ನುವ ಕೃತಿಯನ್ನು ಸಂಪಾದಿಸಿದ್ದು. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹಾಸ್ಯದ ಬೆಳವಣಿಗೆಯನ್ನು ಸಮಗ್ರವಾಗಿ ಗುರುತಿಸುವ ಕೃತಿಯಿದು. ಕನ್ನಡದಲ್ಲಿ ಹಾಸ್ಯ ಸಾಹಿತ್ಯ ಬೆಳೆಯುತ್ತಿದ್ದ ಕಾಲದಲ್ಲೇ ನಾವೂ ಬೆಳೆದವರು ಎಂಬ ಒಂದು ಸ್ವಯಂಕಲ್ಪಿತ ಅಧಿಕಾರದಿಂದ ನಾವು ಈ ಕೆಲಸ ಕೈಗೊಂಡೆವು. ಪರಿಣಾಮ ನಾವು ನಿರೀಕ್ಷಿಸಿದ್ದಕ್ಕಿಂತ ಒಳ್ಳೆಯದೇ ಆಯಿತು. ಅನೇಕ ಓದುಗರು ಅದನ್ನು ಇಷ್ಟಪಟ್ಟರು.
***
ನಂಜುಂಡಸ್ವಾಮಿ ಅವರು ಹುಟ್ಟಿದ್ದು ಮಾರ್ಚ್ 10, 1935ರಲ್ಲಿ, ಮೈಸೂರಿನಲ್ಲಿ. ಹಾಸನ ಕೃಷ್ಣಸ್ವಾಮಿ ಮತ್ತು ಚಿನ್ನಮ್ಮ ಅವರ ತಂದೆತಾಯಿ. ಅವರದ್ದು ದೊಡ್ಡ ಕುಟುಂಬ. ಅಣ್ಣ ಡಾ. ಎಚ್.ಕೆ. ರಂಗನಾಥ್ ರಂಗಭೂಮಿ, ಜಾನಪದ ಕಲೆಗಳ ಕ್ಷೇತ್ರದಲ್ಲಿ, ರೇಡಿಯೋ ಮಾಧ್ಯಮದಲ್ಲಿ  ಹೆಸರು ಗಳಿಸಿದವರು. ಅವರ ಭಾವ ಸುಪ್ರಸಿದ್ಧ ಕನ್ನಡ ಕವಿ, ವಿದ್ವಾಂಸರಾದ ಎಸ್.ವಿ. ಪರಮೇಶ್ವರ ಭಟ್ಟರು. ಹೀಗಾಗಿ ಚಿಕ್ಕಂದಿನಿಂದ ನಂಜುಂಡಸ್ವಾಮಿ ಸಾಹಿತ್ಯ ಕಲಾಕ್ಷೇತ್ರಗಳ ಸಖ್ಯದಲ್ಲೇ ಬೆಳೆದರು. ವಿದ್ಯಾಭ್ಯಾಸ ನಡೆದುದು ಮೈಸೂರಲ್ಲೇ– ಮನೆ ಹತ್ತಿರದ ಕೃಷ್ಣಮೂರ್ತಿಪುರಂ ಪ್ರೈಮರಿ ಶಾಲೆ, ಲಕ್ಷ್ಮೀಪುರಂ ಬಾಯ್ಸ್ ಮಿಡಲ್ ಸ್ಕೂಲು, ಶಾರದಾವಿಲಾಸ ಹೈಸ್ಕೂಲು, ಯುವರಾಜಾ ಕಾಲೇಜು ಮತ್ತು ಕಡೆಗೆ ಮೈಸೂರು ಮೆಡಿಕಲ್ ಕಾಲೇಜುಗಳಲ್ಲಿ.

1961ರ ಸುಮಾರಿಗೆ ಅಮೆರಿಕಕ್ಕೆ ಬಂದ ನಂಜುಂಡಸ್ವಾಮಿ ಬಫೆಲೋ, ನ್ಯೂಯಾರ್ಕ್, ಪಿಟ್ಸ್‌ಬರ್ಗ್, ಟೊರಾಂಟೋ ಮುಂತಾದ ಕಡೆ ತನ್ನ ವಿದ್ಯಾಭ್ಯಾಸ-ವೃತ್ತಿಶಿಕ್ಷಣ ಮುಂದುವರೆಸಿ ಕಡೆಗೆ ಫ್ಲಾರಿಡಾದ ಒಕಾಲಾದಲ್ಲಿ ನೆಲಸಿದರು. ಅವರಿಗೆ ಪ್ರಪಂಚ ಪರ್ಯಟನೆ ನೆಚ್ಚಿನ ಹವ್ಯಾಸ. ಹಲವಾರು  ದೇಶ ಸುತ್ತಿಬಂದರು. ಮೂರು ವರ್ಷಗಳ ಹಿಂದಷ್ಟೇ ದಕ್ಷಿಣ ಅಮೆರಿಕಾ ಪ್ರವಾಸ ಹೋಗಿದ್ದಾಗ ಅಲ್ಲಿನ ಆಹಾರದಲ್ಲಿ ಏನೋ ಪ್ರಮಾದವಾಗಿ ಅಲ್ಲಿಂದ ಬಂದ ಹತ್ತುದಿನಕ್ಕೆ ಜ್ಞಾನತಪ್ಪಿ ಬಿದ್ದಿದ್ದರು, ಹತ್ತು ದಿನ ಕೋಮಾದಲ್ಲಿದ್ದು ಚೇತರಿಸಿಕೊಂಡಿದ್ದರು. ಮೆನಿನ್ಜೈಟಿಸ್ ಆಗಿತ್ತು. ಅದರ ಪರಿಣಾಮವಾಗಿ ಮಾತು, ಓಡಾಟ, ಓದು, ಬರಹ ಎಲ್ಲವನ್ನೂ ಅವರು ಹೊಸದಾಗಿ ಕಲಿಯಬೇಕಾಯಿತು. ಅವರ ಪತ್ನಿ ಲೀಲಾ (ಆಕೆಯೂ ವೈದ್ಯರೇ, ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಓದಿದ ಸಹಪಾಠಿ) ತಮ್ಮ ಗಂಡನನ್ನು ತುಂಬಾ ಚೆನ್ನಾಗಿ ನೋಡಿಕೊಂಡರು. ಆದರೆ ನಂಜುಂಡಸ್ವಾಮಿ ಗುಣವಾಗುತ್ತಿದ್ದಂತೆ ಆಕೆ ನ್ಯೂಮೋನಿಯಾಕ್ಕೆ ತುತ್ತಾಗಿ ಎರಡು ವರ್ಷದ ಹಿಂದೆ ತೀರಿಹೋದರು. ಆಗಿನಿಂದ ನಂಜುಂಡಸ್ವಾಮಿ ಆರ್ಲ್ಯಾಂಡೊ ಬಳಿ ಇರುವ ತಮ್ಮ ಮಗಳು ಸೀತಾ ಅವರ ಮನೆಯಲ್ಲಿ ಇರುತ್ತಿದ್ದುದೇ ಹೆಚ್ಚು. ಅವರ ಮಗ ಗೋಪಾಲ್ ಅಟ್ಲಾಂಟದಲ್ಲಿದ್ದಾರೆ.

ರಂಗಭೂಮಿ ನಂಜುಂಡಸ್ವಾಮಿ ಅವರ ಆಸಕ್ತಿಯ ಮತ್ತೊಂದು ಕ್ಷೇತ್ರ. ಪ್ರೈಮರಿ, ಮಿಡಲ್ ಸ್ಕೂಲುಗಳಲ್ಲಿದ್ದಾಗಲೇ ನಾಟಕಗಳಲ್ಲಿ ಅಭಿನಯಿಸುತ್ತಿದ್ದರಂತೆ. ಮುಂದೆ ಮೆಡಿಕಲ್ ಕಾಲೇಜಿನಲ್ಲಿ ಖ್ಯಾತ ನಟ ಸಂಪತ್ ನಿರ್ದೇಶನದಲ್ಲಿ ಹಲವಾರು ನಾಟಕಗಳಲ್ಲಿ ಪಾತ್ರವಹಿಸಿದ್ದರು. ಅವುಗಳಲ್ಲಿ ‘ಉಂಡಾಡಿ ಗುಂಡ’ ಬಹಳ ಯಶಸ್ವಿಯಾಗಿತ್ತು ಎಂದು ಕೇಳಿದ್ದೇನೆ. ರೇಡಿಯೋ ನಾಟಕಗಳಲ್ಲೂ ತೊಡಗಿಕೊಂಡದ್ದಿದೆ. 1954ರಲ್ಲಿ ದೆಹಲಿಯಲ್ಲಿ ಮೊದಲ ‘ಯುವಜನೋತ್ಸವ’ ನಡೆದಾಗ ಮೈಸೂರು ವಿಶ್ವವಿದ್ಯಾನಿಲಯದ ತಂಡದಲ್ಲಿ ರೇಡಿಯೋ ನಾಟಕ ವಿಭಾಗದಲ್ಲಿ ನಂಜುಂಡಸ್ವಾಮಿ ಮತ್ತು ನಾನು ಇದ್ದೆವು. ಕೈಲಾಸಂ ಅವರ ‘ಕೀಚಕ’ ನಾಟಕವನ್ನು ಪ್ರದರ್ಶಿಸಿದ್ದವು.
***
ನಂಜುಂಡಸ್ವಾಮಿ ಅವರ ನಿಧನದೊಂದಿಗೆ ಒಬ್ಬ ಅಮೆರಿಕನ್ನಡ ಸಮುದಾಯದಲ್ಲಿ ಒಬ್ಬ ಸಹೃದಯಿ ಹಿರಿಯರು ಗೈರುಹಾಜರಾದಂತಿದೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೂಡ ಅವರಿಂದ ಸಲ್ಲಬೇಕಾದ ಕೆಲಸ ಸಾಕಷ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT