ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷ್ಠ ಸೇವಕ, ಕಾರ್ಯತಂತ್ರ ನಿಪುಣ

Last Updated 21 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಚಂಡೀಗಡ (ಪಿಟಿಐ/ಐಎಎನ್‌ಎಸ್‌): ಹರಿಯಾಣದ ರಾಜಕೀಯ ಅಖಾಡ­ದಲ್ಲಿ ಮನೋಹರ್‌ ಲಾಲ್‌ ಖಟ್ಟರ್‌ ಹೆಸರು ಅದೆಷ್ಟು ಜನರಿಗೆ ತಿಳಿದಿದೆಯೋ ಗೊತ್ತಿಲ್ಲ. ಯಾಕೆಂದರೆ ಅವರು ಜನಪ್ರಿಯತೆಯ ಗೀಳಿಗೆ ಬೀಳದೆ ತೆರೆಮರೆಯಲ್ಲಿ ಕೆಲಸ ಮಾಡುವ ಸಾದಾಸೀದಾ ಮನುಷ್ಯ. ಗಂಭೀರ ನಡೆನುಡಿಯ, ಎಂಥ ಕಠಿಣ ಸನ್ನಿವೇಶ­ವನ್ನೂ ನಿಭಾಯಿಸುವ ಛಾತಿಯ ವ್ಯಕ್ತಿ ಇಂದು ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯುವ ಹಂತಕ್ಕೆ ಬೆಳೆದ ಪರಿ ನಿಜಕ್ಕೂ ವಿಸ್ಮಯಕಾರಿ.

೬೦ ವರ್ಷದ ಖಟ್ಟರ್‌ ಅವರು ಒಂದು ಕಾಲದಲ್ಲಿ ವೈದ್ಯನಾಗಬೇಕು ಎಂದು ಕನಸು ಕಂಡಿದ್ದರು. ಕೊನೆಗೆ ಅವರನ್ನು ಆಕರ್ಷಿ­ಸಿದ್ದು ಆರ್‌ಎಸ್‌ಎಸ್‌. ಸುಮಾರು ನಾಲ್ಕು ದಶಕಗಳ ಕಾಲ ಆರ್‌ಎಸ್‌ಎಸ್‌ನಲ್ಲಿ ಕೆಲಸ ಮಾಡಿರುವ ಖಟ್ಟರ್‌ ತಮ್ಮ ಸಂಘಟನಾ ಚಾತುರ್ಯ­ದಿಂದ ಗುರುತಿಸಿಕೊಂಡವರು.

ಅವರದ್ದು ಕಳಂಕರಹಿತ ವ್ಯಕ್ತಿತ್ವ. ಪಕ್ಷದ ಯೋಜನೆ ಹಾಗೂ ಕಾರ್ಯ­ತಂತ್ರ ರೂಪಿಸುವಲ್ಲಿ ಸಿದ್ಧಹಸ್ತ­ರಾಗಿರುವ ಖಟ್ಟರ್‌್ ಅವರು ಮೋದಿ ಆಪ್ತನೆಂದೇ ಬಿಂಬಿಸಿಕೊಂಡಿದ್ದಾರೆ.

ಇಬ್ಬರಲ್ಲೂ ಹೋಲಿಕೆ:  ಮೋದಿ ಹಾಗೂ ಖಟ್ಟರ್‌ ಬದುಕಿನಲ್ಲಿ  ಎಲ್ಲೋ ಒಂದು ಕಡೆ ಸಾಮ್ಯತೆ ಕಾಣುತ್ತದೆ. ಮೋದಿ ಅವರು ಆರ್‌ಎಸ್‌ಎಸ್‌ಗಾಗಿ ಕುಟುಂಬ ಪರಿತ್ಯಾಗ ಮಾಡಿದರು. ಖಟ್ಟರ್‌ ಅವಿವಾಹಿತರಾಗಿಯೇ ಉಳಿದು ಆರ್‌ಎಸ್‌ಎಸ್‌ಗೆ ತಮ್ಮ ಬದುಕು ಮೀಸಲಿಟ್ಟರು.

೯೦ರ ದಶಕದ ಉತ್ತರಾರ್ಧದಲ್ಲಿ ಮೋದಿ ಅವರು ಹರಿಯಾಣ ಬಿಜೆಪಿ ಉಸ್ತುವಾರಿಯಾಗಿ ನೇಮಕ­ಗೊಂಡಿ­ದ್ದರು. ಆಗ ಖಟ್ಟರ್‌್ ಅವರಿಗೆ ಮೋದಿ ಜತೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ೨೦೦೦ರಲ್ಲಿ ಭಾರಿ ಭೂಕಂಪನ­ದಿಂದ ಗುಜರಾತ್‌ನ ಕಛ್‌  ಸಂಪೂರ್ಣ ನಲುಗಿಹೋಗಿತ್ತು. ಆ ಸಂದರ್ಭ­ದಲ್ಲಿ ಮೋದಿ ಅವರು ಕಛ್‌ನಲ್ಲಿ ಕೆಲಸ ಮಾಡುವುದಕ್ಕೆ ಖಟ್ಟರ್‌್ ಅವರನ್ನು ಕರೆಸಿಕೊಂಡಿದ್ದರು. ಛತ್ತೀಸಗಡ, ಗುಜರಾತ್‌, ರಾಜಸ್ತಾನ, ಪಂಜಾಬ್‌, ಜಮ್ಮು–ಕಾಶ್ಮೀರ, ದೆಹಲಿ...ಇತ್ಯಾದಿ ಕಡೆ ಖಟ್ಟರ್‌ ಕೆಲಸ ಮಾಡಿದ್ದಾರೆ.

ಬಿಜೆಪಿ ಸೇರ್ಪಡೆ: ೧೯೯೪ರಲ್ಲಿ ಖಟ್ಟರ್‌್ ಬಿಜೆಪಿ ಸೇರಿದರು. ನಂತರದ ದಿನಗಳಲ್ಲಿ ಪಕ್ಷದಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದರು.  ಪಕ್ಷದ ಯೋಜನೆ ಹಾಗೂ ಕಾರ್ಯತಂತ್ರ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಅನೇಕ ಬಾರಿ ಪಕ್ಷದ ಚುನಾವಣಾ ಪ್ರಚಾರ ಸಮಿತಿ ನೇತೃತ್ವ ವಹಿಸಿದ್ದರು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅವರನ್ನು ಹರಿ­ಯಾಣ­­ದಲ್ಲಿ ಪಕ್ಷದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು.

ಕೃಷಿ ಕುಟುಂಬದ ಹಿನ್ನೆಲೆ: ಖಟ್ಟರ್‌್ ಕೃಷಿ ಕುಟುಂಬದಿಂದ ಬಂದವರು. ದೇಶ ವಿಭಜನೆ ಬಳಿಕ ಅವರ ಕುಟುಂಬ ಪಾಕಿ­ಸ್ತಾನದಿಂದ ಹರಿಯಾಣದ ರೋಹತಕ್‌್ ಜಿಲ್ಲೆಯ ನಿಂದನಾ ಎಂಬ ಹಳ್ಳಿಯಲ್ಲಿ ನೆಲೆ ಕಂಡುಕೊಂಡಿತು. ತಂದೆ ಹಾಗೂ ಅಜ್ಜ ಹೊಟ್ಟೆಪಾಡಿಗಾಗಿ ಕೂಲಿ ಕೆಲಸ ಮಾಡುತ್ತಿದ್ದರು. ನಂತರದಲ್ಲಿ ಒಂದು ಸಣ್ಣ ಅಂಗಡಿ ನಡೆಸುವ ಮಟ್ಟಕ್ಕೆ ಬಂದರು. ಕೊನೆಗೆ ಅವರು ಜಮೀನು ಖರೀದಿಸಿ ಕೃಷಿ ಕೆಲಸ ಶುರುಮಾಡಿದರು.

ಖಟ್ಟರ್‌್ ಅವರು ಇದೇ ಹಳ್ಳಿಯಲ್ಲಿ ೧೯೫೪ರಲ್ಲಿ ಜನಿಸಿದರು. ತಂದೆ ತಾಯಿಗೆ ಇವರೇ ಹಿರಿಯ ಮಗ. ಓದುವುದರಲ್ಲಿ ಮುಂದಿದ್ದ ಅವರು ಉತ್ತಮ ವಾಗ್ಮಿಯೂ ಆಗಿದ್ದರು. ಕುಟುಂಬದಲ್ಲಿ ಹತ್ತನೇ ತರಗತಿ ನಂತರದ ವಿದ್ಯಾಭ್ಯಾಸ ಪೂರೈಸಿದ ಮೊದಲ ವ್ಯಕ್ತಿ ಇವರೇ ಆಗಿದ್ದರು.

ಮುಂದೆ ವೈದ್ಯಕೀಯ ವಿದ್ಯಾಭ್ಯಾಸ­ಕ್ಕಾಗಿ ದೆಹಲಿಗೆ ತೆರಳಿದರು. ಆದರೆ ಅಲ್ಲಿ ವ್ಯಾಪಾರ ವೃತ್ತಿಗೆ ಇಳಿಯುವ ಹುಕಿ ಬಂತು. ದೆಹಲಿಯ ಸದರ್‌್ ಬಜಾರ್‌ನಲ್ಲಿ ಸಣ್ಣ ಅಂಗಡಿ ಶುರುಮಾಡಿದರು. ವ್ಯಾಪಾರ ವಹಿ­ವಾಟು ನೋಡಿಕೊಳ್ಳುತ್ತಲೇ ದೆಹಲಿ ವಿಶ್ವವಿದ್ಯಾಲಯದಲ್ಲಿ ಪದವಿ ಪೂರ್ಣ­ಗೊಳಿಸಿದರು. ಅಂಗಡಿ ತೆರೆಯುವುದಕ್ಕೆ ಮನೆಯಿಂದ ಸಾಲ ತಂದಿದ್ದ ಹಣವನ್ನು ವಾಪಸ್‌್ ಕೊಟ್ಟರು. ತಂಗಿ ಮದುವೆ ಮಾಡಿದರು.

ರಾಜಕೀಯ ಸೆಳೆತ:  ೧೯೭೫ರ ತುರ್ತು ಪರಿಸ್ಥಿತಿಯ ಸಂದರ್ಭ. ಆಗಿನ್ನೂ ಖಟ್ಟರ್‌್ ಅವರಿಗೆ ೨೧ ವರ್ಷ. ಮೊಟ್ಟ ಮೊದಲ ಬಾರಿ ಅವರನ್ನು ರಾಜಕೀಯ ಸೆಳೆಯಿತು. ೧೯೭೭ರಲ್ಲಿ ಆರ್‌ಎಸ್‌ಎಸ್‌್ ಸಂಪರ್ಕಕ್ಕೆ ಬಂದರು. ೧೯೮೦ರಲ್ಲಿ ಪೂರ್ಣಾವಧಿ ಪ್ರಚಾರಕನಾದರು. 

ಬದುಕು ಬದಲಿಸಿದ ಕ್ಷಣ:೧೯೭೯ರ ಜನವರಿಯಲ್ಲಿ ಪ್ರಯಾಗದಲ್ಲಿ (ಅಲಹಾಬಾದ್‌) ನಡೆದ ವಿಶ್ವ ಹಿಂದೂ ಪರಿಷತ್‌್ ಬೃಹತ್‌್ ಸಮಾವೇಶದಲ್ಲಿ ಭಾಗವಹಿಸುವ ಅವಕಾಶ ಅವರಿಗೆ ದೊರೆಯಿತು. ಅಲ್ಲಿ ನಡೆಯುತ್ತಿದ್ದ ಕುಂಭ ಮೇಳದಲ್ಲಿ ಮೇಧಾವಿಗಳು, ಸಂತರ ಜತೆ ಒಡನಾಡಿದರು. ಅಲಹಾಬಾದ್‌ನ ತ್ರಿವೇಣಿ ಸಂಗಮ ಅವರ ಬದುಕಿನ ದಿಕ್ಕನ್ನು ಬದಲಿಸಿತು. ‘ಕೇವಲ ನಮಗಾಗಿ ಬದುಕಬಾರದು, ದೇಶ ಸೇವೆ ಮಾಡಬೇಕು’ ಎಂಬ ತುಡಿತ  ಹೆಚ್ಚಾಯಿತು.

ಖಟ್ಟರ್‌ ಎಂದೂ ಪದವಿಗೆ ಆಸೆ ಪಟ್ಟವರಲ್ಲ. ‘ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧಿಯಲ್ಲ. ಪಕ್ಷ ಕೊಡುವ ಹೊಣೆಗಾರಿಕೆಯನ್ನು ನಿಭಾಯಿಸುತ್ತೇನೆ’ ಎಂದು ಇತ್ತೀಚೆಗೆ ಟಿ.ವಿ ಸಂದರ್ಶವೊಂದರಲ್ಲಿ ಹೇಳಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT