ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಸರ್ಗದ ಒಡಲ ಕೃಷಿ

ಭೂ ರಮೆ –6
Last Updated 20 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಊರಿಗಿಂತ ತೋಟವೇ ಇಷ್ಟ. ಹುಟ್ಟಿದ್ದು, ಬೆಳೆದಿದ್ದು, ಬದುಕುತ್ತಿರುವುದು ತೋಟದ ವಸತಿಯಲ್ಲೇ. ಹದಿಮೂರು ವರ್ಷದಿಂದಲೇ ಕೃಷಿಯಲ್ಲಿ ಆಸಕ್ತಿ. ಆರಂಭದಿಂದಲೂ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿಯತ್ತಲೇ ಒಲವು. ಹದಿನೈದು ವರ್ಷದ ನಿಸರ್ಗದ ಒಡಲ ಕೃಷಿ ಇವರಿಗೆ ತೃಪ್ತಿ ನೀಡಿದೆ. ನಿರಾಳ ಭಾವ ಮೂಡಿಸಿದೆ.

ಇದು ವಿಜಾಪುರ ತಾಲ್ಲೂಕು ಅಡವಿ ಸಂಗಾಪುರ ಗ್ರಾಮದಿಂದ ನಾಲ್ಕು ಕಿ.ಮೀ. ದೂರದ ಅಡವಿ ವಸತಿ (ತೋಟದ ಮನೆ)ಯಲ್ಲಿ ನೆಲೆ ಕಂಡುಕೊಂಡಿರುವ ಸುಮಂಗಲಾ ತೆರೆದಿಟ್ಟ ತಮ್ಮ ನೈಸರ್ಗಿಕ ಕೃಷಿ ಬದುಕಿನ ಚಿತ್ರಣ. ತಂದೆ, ಪ್ರಸಿದ್ಧ ನೈಸರ್ಗಿಕ ಕೃಷಿಕ ರಾಜಶೇಖರ ನಿಂಬರಗಿ ಅವರ ಹಾದಿಯಲ್ಲಿಯೇ ಸಾಗಿ ಆ ಕ್ಷೇತ್ರದಲ್ಲಿಯೇ ಯಶಸ್ಸಿನ ಹಾದಿ ಹಿಡಿದಿದ್ದಾರೆ ಸುಮಂಗಲಾ. ‘ಒಂದು ಪೈಸೆ ಬಂಡವಾಳವನ್ನೂ ಹಾಕದೇ, ಅತಿವೃಷ್ಟಿ–ಅನಾವೃಷ್ಟಿ ಯಾವುದಕ್ಕೂ ಚಿಂತಿಸದೆ ನಿರಂತರ ನಿಗದಿತ ಆದಾಯ ನೀಡುವ ನಿಸರ್ಗ ಕೃಷಿ ನಿಜಕ್ಕೂ ನನ್ನ ಬದುಕನ್ನು ಬಂಗಾರವಾಗಿಸಿದೆ.

ಚಿಕ್ಕಂದಿನಿಂದ ಶಾಲೆಯ ಕಲಿಕೆಯತ್ತ ಹೆಚ್ಚಿನ ಆಸಕ್ತಿ ನೀಡದೆ ಹೊಲ–ತೋಟದಲ್ಲೇ ಉಳಿದ ನಾನು ಇದೀಗ ನಾಲ್ಕಾರು ಮಂದಿಗೆ ಮಾರ್ಗದರ್ಶಕಳಾಗಿದ್ದೇನೆ’ ಎನ್ನುವ ಹೆಮ್ಮೆ ಅವರದ್ದು. ‘ರುಚಿ, ಸತ್ವಭರಿತ ಆಹಾರಕ್ಕೆ ಎಲ್ಲೆಡೆ ಬೇಡಿಕೆಯಿದೆ. ಆದರೆ ಅಗತ್ಯವಿರುವಷ್ಟು ಸಿಗುತ್ತಿಲ್ಲ. ಅನ್ನದಾತನೇ ವಿಷ ನೀಡುವ ಜತೆ ತಾನೂ ತಿನ್ನುತ್ತಿದ್ದಾನೆ. ನಿತ್ಯ ಅನಾರೋಗ್ಯ ಪೀಡಿತನಾಗಿ ನರಳುತ್ತಿದ್ದಾನೆ. ಚೈತನ್ಯದ ಚಿಲುಮೆಯಾಗಿ ಲವಲವಿಕೆಯಿಂದ ಬದುಕಲು ನೈಸರ್ಗಿಕ ಕೃಷಿಯಿಂದ ಮಾತ್ರ ಸಾಧ್ಯ’ ಎನ್ನುತ್ತಾರೆ ಅವರು.

ಮನೆಯಲ್ಲೂ ನೈಸರ್ಗಿಕ ತತ್ವ
ತೋಟ–ಹೊಲದಲ್ಲಷ್ಟೇ ಅಲ್ಲ. ಮನೆಯಲ್ಲೂ ನೈಸರ್ಗಿಕ ತತ್ವವನ್ನು ಅಳವಡಿಸಿಕೊಂಡಿದ್ದಾರೆ. ಅದರಂತೆ ಬದುಕು ನಡೆಸುತ್ತಿದ್ದಾರೆ. ಆರೋಗ್ಯಕ್ಕೆ ಹಾನಿಯುಂಟು ಮಾಡುವ ಚಹಾ, ಕುರುಕಲು ತಿಂಡಿ, ಇಡ್ಲಿ–ದೋಸೆ, ಅವಲಕ್ಕಿ ಸೇರಿದಂತೆ ಬೇಕರಿ ತಿನಿಸುಗಳ ಬಳಕೆ ನಿಷಿದ್ಧ. ಇದರ ಜತೆಗೆ ಮನೆಯಲ್ಲಿ ಗೃಹೋಪಯೋಗಿ ಯಂತ್ರಗಳ ಸದ್ದು ಇಲ್ಲ. ಚಹಾ ಬದಲಿಗೆ ನಿಂಬೆ ಎಲೆ, ಹಾಲು, ಸಕ್ಕರೆ ಕುದಿಸಿದ ಮಿಶ್ರಣ ನಿತ್ಯದ ಪೇಯ. ತೋಟದಲ್ಲೇ ಬೆಳೆದ ಕಾಯಿಪಲ್ಯೆ ಬಳಕೆಯೇ ಹೆಚ್ಚು. ಇದರಿಂದ ಇಡೀ ಕುಟುಂಬ ನೆಮ್ಮದಿಯ ಸದೃಢ ಆರೋಗ್ಯ ಹೊಂದಿದೆ ಎಂಬ ಹೆಮ್ಮೆ ಇವರದ್ದು. ಇವರ ನೈಸರ್ಗಿಕ ಚಿಂತನೆ, ಕೃಷಿ, ಬದುಕು ವಿವರಿಸಲು ಸಾವಿರ ಪದ ಬಳಸಿದರೂ ಸಾಲದು ಎಂಬಷ್ಟಿದೆ.

ನಿಂಬೆ ವನ
ದೂರದಿಂದಲೇ ನಿಂಬೆಯ ಘಮಲು. ಹತ್ತಿರ ಹೋಗಿ ನೋಡಿದರೆ ಅದು ನಿಂಬೆ ತೋಟವಲ್ಲ, ವನ. ಇಲ್ಲಿ ಸಕಲ ಜೀವ ರಾಶಿಗಳು ನೆಲೆ ಕಂಡುಕೊಂಡಿವೆ. ಖಗ ಸಂಕುಲದ ಕಲರವ, ನವಿಲುಗಳ ಕೂಗು, ನರ್ತನ ನಿತ್ಯ ನಿರಂತರ. ಹತ್ತು ವರ್ಷ ಪ್ರಾಯದ ಗಿಡಗಳು ನಾಲ್ಕೈದು ವರ್ಷದ ಗಿಡಗಳಂತೆ ಲವಲವಿಕೆಯಿಂದಿವೆ. ಸುತ್ತಲಿನ ನಿಂಬೆ ತೋಟದ ಮಾಲೀಕರು ಇದನ್ನು ನೋಡಿ ಹಂತ ಹಂತವಾಗಿ ತಾವೂ ನೈಸರ್ಗಿಕ ಕೃಷಿ ಅನುಸರಿಸಲು ಆರಂಭಿಸಿದ್ದಾರೆ.

ಇರುವುದು ಒಂದು ಎಕರೆಯಲ್ಲಿ 80 ಗಿಡ. ಸೂರ್ಯ ಕಿರಣ ಭೂಮಿಯನ್ನು ಸ್ಪರ್ಶಿಸುವುದೇ ಇಲ್ಲ. ಸ್ವೇಚ್ಛೆಯಾಗಿ ಬೆಳೆದಿರುವ ಇವು ಗಿಡಗಳಲ್ಲ, ಮರಗಳು. ರೋಗದ ಸೊಲ್ಲೇ ಇಲ್ಲಿಲ್ಲ. ಗೊಬ್ಬರ ಬಳಸಿ ವರ್ಷಗಳು ಉರುಳಿದವು. ನೀರಿನ ಬಳಕೆ ಮಿತ. ಅತಿವೃಷ್ಟಿ–ಅನಾವೃಷ್ಟಿಗೆ ಈ ವನದ ಒಂದು ಗಿಡವೂ ಬಲಿಯಾಗಿಲ್ಲ. ಆದರೆ ಈ ವನದ ಸುತ್ತಲಿನ ನಿಂಬೆ ತೋಟಗಳಲ್ಲಿನ ಗಿಡಗಳು ಮಾತ್ರ ಆಹುತಿಯಾಗುವುದು ನಿಂತಿಲ್ಲ.

ವರ್ಷಕ್ಕೆ ಎರಡು ಬಂಪರ್ ಬೆಳೆ ಕಟ್ಟಿಟ್ಟ ಬುತ್ತಿ. ಒಂದು ಗಿಡದಿಂದ 2–3 ಸಾವಿರ ನಿಂಬೆ ಹಣ್ಣು ಸಿಗುತ್ತವೆ. ಬೆಲೆಯ ಏರಿಳಿತ ಎಷ್ಟೇ ಆದರೂ, ₨ 2 ಲಕ್ಷಕ್ಕೆ ಮೋಸವಿಲ್ಲ. ಗೊನೆಗಳಿಂದ ಕಂಗೊಳಿಸುತ್ತಿರುವ ಬಾಳೆ ತೋಟ ಇವರ ಬಾಳು ಬೆಳಗಲು ಸಿದ್ಧವಾಗಿದೆ. 1 ಎಕರೆಯಲ್ಲಿ 300 ಗಿಡಗಳಿವೆ. ಹನಿ ನೀರಾವರಿ ಅಳವಡಿಕೆ ಇದೆ. ಒಂದೊಂದರ ಬುಡವೂ ದೊಡ್ಡದು. 10 ವರ್ಷ ಬೆಳೆ ಸಿಗುತ್ತೆ ಎಂಬ ನಂಬಿಕೆ ಸುಮಂಗಲಾ ಅವರದ್ದು.

ಮೊದಲ ವರ್ಷವೇ 10 ಕೆ.ಜಿ.ಗೂ ಅಧಿಕ ತೂಕದ ಗೊನೆ ಸಿಗುತ್ತವೆ ಎಂಬ ಲೆಕ್ಕಾಚಾರ. ಪಕ್ಕಾ ಜವಾರಿ ತಳಿ. ಈಗಲೇ ಸಾಕಷ್ಟು ಬೇಡಿಕೆ ಸಿಕ್ಕಿದೆ. ಇದರೊಳಗೆ ಮತ್ತೆ 80 ನಿಂಬೆಯ ನಾಟಿ ನಡೆದಿದೆ. ಕಬ್ಬು ಕಟಾವು ಮುಗಿಯುತ್ತಿದ್ದಂತೆ ರವುದಿ ತಂದು ಮುಚ್ಚಿಗೆ ನಡೆಸಿದರೆ ಸಾಕು, ಮುಂದಿನ ಎಲ್ಲವೂ ಸುಗಮ ಎಂಬ ಆಲೋಚನೆ ಸುಮಂಗಲಾ ಅವರಲ್ಲಿ ಮೊಳೆತಿದೆ.

ಇದುವರೆಗೂ ರಾಸಾಯನಿಕ ಗೊಬ್ಬರ, ಕೀಟನಾಶಕದ ಸಿಂಪಡಣೆ ನಡೆದಿಲ್ಲ. ಆರಂಭದಲ್ಲಿ ಕುರಿ ಗೊಬ್ಬರ ನೀಡಿರುವುದು ಬಿಟ್ಟರೆ ಇದೀಗ ನೀಡುತ್ತಿರುವ ಜೀವಾಮೃತವೇ ಬೆಳೆ ಕಾಪಾಡಿದೆ. ಹಿಂದೆ ದ್ರಾಕ್ಷಿ, ದಾಳಿಂಬೆ ಬೆಳೆದು ಕೈ ಸುಟ್ಟುಕೊಂಡಿದ್ದ ಸುಮಂಗಲಾ ಪತಿ ಸಂಜಯ್ ಇದೀಗ ಪತ್ನಿಯ ಶೂನ್ಯ ಬಂಡವಾಳದ ಕೃಷಿಯಿಂದ ನಿರಾಳರಾಗಿದ್ದಾರೆ. ಪ್ರತಿ ವರ್ಷವೂ ನಿಗದಿತ ಲಾಭ ಎಣಿಸುತ್ತಿದ್ದಾರೆ. ಇವರಿಗೆ ಕೂಲಿ ಕಾರ್ಮಿಕರ ಅಗತ್ಯವಿಲ್ಲ. ಎಲ್ಲ ಕೆಲಸ ನಿರ್ವಹಣೆ ಪತಿ–ಪತ್ನಿಯದ್ದು. ಜಮೀನಿನ ಯಾವುದೇ ಮೂಲೆಗೆ ಹೊಕ್ಕರೂ ಎರೆಹುಳುಗಳ ಆಗರವೇ ಇದೆ. ನಿಂಬೆ, ಬಾಳೆ ಜತೆ ತೆಂಗು, ಮಾವು ಸೇರಿದಂತೆ ಮನೆ ಬಳಕೆಗೆ ವಿವಿಧ ಹಣ್ಣಿನ ಗಿಡಗಳು, ಕಾಯಿಪಲ್ಯೆ ಗಿಡಗಳು ಇವರ ತೋಟದಲ್ಲಿ ಬೇರುಬಿಟ್ಟಿವೆ.

ಸಂಕಷ್ಟದಲ್ಲಿ ಕೈ ಹಿಡಿದ ಕೃಷಿ
ಮೂರ್ನಾಲ್ಕು ವರ್ಷಗಳ ಹಿಂದೆ ರೋಗ, ನೀರಿನ ಕೊರತೆಯಿಂದ 300 ದಾಳಿಂಬೆ, ಒಂದೂವರೆ ಎಕರೆ ಪ್ರದೇಶದಲ್ಲಿ ಲಕ್ಷ, ಲಕ್ಷ ರೂಪಾಯಿ ಸುರಿದು ಬೆಳೆದಿದ್ದ ದ್ರಾಕ್ಷಿ ಒಮ್ಮೆಲೇ ಕೈ ಸುಟ್ಟಿತು. ಮುಂದೇನು ಮಾಡಬೇಕು ಎಂದು ಯೋಚಿಸುವಷ್ಟರಲ್ಲಿ ಸುಮಂಗಲಾ ಒಂದು ಆಕಳಿನಿಂದ ಆರಂಭಿಸಿದ ನೈಸರ್ಗಿಕ ಕೃಷಿ ಕುಟುಂಬ ಕಾಪಾಡುವ ಜತೆ ನೆರೆ ಹೊರೆಯವರಿಗೂ ನೆರವಾಗಿದೆ.

ವಿದೇಶಕ್ಕೆ ರಫ್ತಿನ ಚಿಂತನೆ
ನೈಸರ್ಗಿಕ ಕೃಷಿಯಲ್ಲಿ ಬೆಳೆದಿರುವ ಸುವಾಸನೆಯುಕ್ತ ನಿಂಬೆ ಹಣ್ಣನ್ನು ಸ್ಥಳೀಯ ಮಾರುಕಟ್ಟೆಗಳಿಗಿಂತ ವಿದೇಶಗಳಿಗೆ ರಫ್ತು ಮಾಡುವ ಚಿಂತನೆ ಸುಮಂಗಲಾ ಅವರದ್ದು. ಇದಕ್ಕಾಗಿ ಈಗಾಗಲೇ ವಿದೇಶಗಳಲ್ಲಿ ಮಾರುಕಟ್ಟೆ ಸೃಷ್ಟಿಸಿಕೊಂಡಿರುವ ತಂದೆ, ರಾಜಶೇಖರ್‌ ಅವರ ಮಾರ್ಗದರ್ಶನ ಪಡೆದಿದ್ದಾರೆ. ಸಂಪರ್ಕ ಸಂಖ್ಯೆ–9008058416.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT