ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಸರ್ಗದ ಚಂದ ಚಾರಣದ ಆನಂದ

ಸುತ್ತಾಣ
Last Updated 31 ಜುಲೈ 2015, 19:45 IST
ಅಕ್ಷರ ಗಾತ್ರ

ಹಕ್ಕಿಗಳ ಚಿಲಿಪಿಲಿ ಕಲರವ, ಚಿಕ್ಕ ಚಿಕ್ಕ ಜಲಪಾತಗಳ ವೈಭವ, ಪರಿಶುದ್ಧವಾದ ಗಾಳಿ, ಕಣ್ಣಿಗೆ ತಂಪು ನೀಡುವ ಹಸಿರ ವನಸಿರಿ... ಇವೆಲ್ಲಾ ಪ್ರಕೃತಿ ಪ್ರೇಮಿಗಳಿಗೆ ಹಾಗೂ ಚಾರಣ ಪ್ರಿಯರಿಗೆ ತುಂಬಾನೇ ಇಷ್ಟ. ಪ್ರಕೃತಿಯ ಇಂತಹ ಸೌಂದರ್ಯದ ಸೊಬಗನ್ನು ಸವಿಯಲು ತಡಿಯಾಂಡಮೋಳ್ ಒಳ್ಳೆಯ ಜಾಗ.

‘ತಡಿಯಾಂಡಮೋಳ್’ ಎಂದರೆ...
‘ತಡಿಯಾಂಡಮೋಳ್’ ಎಂದರೆ ವಿಶಾಲವಾದ, ಎತ್ತರದ ತುತ್ತತುದಿ ಎಂಬ ಅರ್ಥವಿದೆ. ಇದು ಕೊಡಗು ಜಿಲ್ಲೆಯಲ್ಲೇ ಅತೀ ದೊಡ್ಡ ಹಾಗೂ ಕರ್ನಾಟಕದಲ್ಲೇ ಮೂರನೆಯ ಅತೀ ದೊಡ್ಡ ಶಿಖರವಾಗಿದೆ. ಸಮುದ್ರ ಮಟ್ಟದಿಂದ 5735 ಅಡಿ ಎತ್ತರದಲ್ಲಿದಲ್ಲಿರುವ ಈ ಶಿಖರ ಕೊಡಗು ಜಿಲ್ಲೆಯ ವಿರಾಜಪೇಟೆ (ವೀರರಾಜೇಂದ್ರ ಪೇಟೆ) ತಾಲ್ಲೂಕಿನ ನಾಲ್ಕುನಾಡುವಿನಲ್ಲಿದೆ.

ವಿರಾಜಪೇಟೆಯಿಂದ ಕಕ್ಕಬೆ ಟೌನ್‌ಗೆ ಹೋಗುವ ದಾರಿಯಲ್ಲಿ ಸಿಗುವ ‘ನಲ್ನಾಡ ಅರಮನೆ’ ನಿಲ್ದಾಣದ ಮೂಲಕ ಈ ಶಿಖರಕ್ಕೆ ನಡಿಗೆಯನ್ನು ಪ್ರಾರಂಭಿಸಬೇಕು. ಬೆಂಗಳೂರಿನಿಂದ ನಲ್ನಾಡ ಅರಮನೆಗೆ 250 ಕಿ.ಮೀ. ದೂರವಿದ್ದು, ಸುಮಾರು 5ಗಂಟೆಗಳ ಪ್ರಯಾಣ. ಕೊಡಗಿನ ಪ್ರಸಿದ್ಧವಾದ ಈ ಅರಮನೆಯನ್ನು 17-18ನೇ ಶತಮಾನದಲ್ಲಿ ಕೊಡಗನ್ನು ಆಳಿದ ಮೊದಲ ದೊರೆ `ದೊಡ್ಡ ವೀರ ರಾಜೇಂದ್ರ ಕಟ್ಟಿಸಿದ್ದು. 

ತಡಿಯಾಂಡಮೋಳ್‌ಗೆ ಬೆಂಗಳೂರಿನಿಂದ ಒಂದು ದಿನದಲ್ಲಿಯೇ ಹೋಗಿ ಬರಬಹುದು. ಬೆಳಿಗ್ಗೆ 3 ಗಂಟೆಯಷ್ಟೊತ್ತಿಗೆ ಬೆಂಗಳೂರು ಬಿಟ್ಟರೆ ಎಂಟು ಗಂಟೆಗೆ ‘ನಲ್ನಾಡ ಅರಮನೆ’ಯಲ್ಲಿರಬಹುದು. ಆದರೆ ಮತ್ತೆ ಪ್ರಯಾಣದ ದಣಿವನ್ನು ಲೆಕ್ಕಿಸದೇ ಪರ್ವತಾರೋಹಣಕ್ಕೆ ಸಿದ್ಧರಾಗುವ ಉತ್ಸಾಹ ಇರಬೇಕಷ್ಟೇ. ಅದಕ್ಕೆ ಬದಲಾಗಿ ಹಿಂದಿನ ದಿನ ಸಂಜೆಯೇ ಅಲ್ಲಿ ತಲುಪಿ, ಅಲ್ಲಿನ ಹೋಂ ಸ್ಟೇಗಳಲ್ಲಿ ಉಳಿದುಕೊಂಡರೆ ಉತ್ತಮ. ಪ್ರಯಾಣದ ದಣಿವನ್ನು ಆರಿಸಿಕೊಂಡು, ಮತ್ತೆ ಉತ್ಸಾಹದಿಂದ ಶಿಖರಾರೋಹಣದ ಸಂತೋಷವನ್ನು ಅನುಭವಿಸಬಹುದು. ನಾವು ಆಯ್ದುಕೊಂಡಿದ್ದೂ ಎರಡನೇ ಆಯ್ಕೆಯನ್ನೇ. ದೇಹದ ಬೆವರಿಳಿಸುವ ಈ ಶಿಖರಕ್ಕೆ ಚಾರಣ ಹೊರಟ ನಮ್ಮ 12 ಜನರ ತಂಡ ಬೆಂಗಳೂರಿನಿಂದ ಸಂಜೆ 5 ಘಂಟೆಗೆ ಹೊರಟು ರಾತ್ರಿಯ ಊಟದ ಸಮಯಕ್ಕೆ ಮುಂಗಡವಾಗಿ ಕಾಯ್ದಿರಿಸಿದ `‘ಪ್ಯಾಲೆಸ್ ಎಸ್ಟೇಟ್’ ಹೋಂಸ್ಟೇಯನ್ನು ಸೇರಿಕೊಂಡೆವು.

ಕಾಡ ನಡುವಿನ ಜಾಡು
ಮರುದಿನ ಬೆಳಗಿನ ಜಾವ ಶಿಖರಕ್ಕೆ ನಡಿಗೆ ಪ್ರಾರಂಭಿಸಿದ ನಮಗೆ ಕಿರಿದಾದ ದಾರಿಯಲ್ಲಿ, ಬೆಟ್ಟಗುಡ್ಡಗಳ ನಡುವೆ, ದಟ್ಟ ಕಾಡಿನ ಮಧ್ಯೆ ಇದೊಂದು ಸಾಹಸದ ನಡಿಗೆಯಾಗಿತ್ತು. ಹಚ್ಚ ಹಸಿರಿನ, ಸುಂದರ ಕಾಫಿ ತೋಟಗಳ ನಡುವೆ ಸಾಗುವಾಗ ಪ್ರಾರಂಭದಲ್ಲೇ ಒಂದು ಚಿಕ್ಕ ಜಲಪಾತದ ಮೋಹಕ ಜಲಧಾರೆಯನ್ನೂ ಕಣ್ಣುತುಂಬಿಕೊಳ್ಳಬಹುದು. ಸುಂದರ ಪ್ರಕೃತಿಯ ಆ ತೋಟದಲ್ಲಿ ಕಾಫಿ, ಏಲಕ್ಕಿ, ಮೆಣಸು, ಹಲಸಿನ ಮರಗಳು ಹೀಗೆ ಹಲವಾರು ಮರ-ಗಿಡಗಳನ್ನು ಕಾಣಬಹುದು.

ಈ ಸಸ್ಯವರ್ಗದಲ್ಲಿ ಆನೆ, ಕಾಡೆಮ್ಮೆ, ಹುಲಿ, ಕಾಡು ಬೆಕ್ಕುಗಳು ಸೇರಿದಂತೆ ಅನೇಕ ಪ್ರಾಣಿ-ಪಕ್ಷಿಗಳು ವಾಸಿಸುತ್ತಿದ್ದು, ಈ ಹಿಂದೆ ವಿದೇಶಿಯರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಚಾರಣಕ್ಕೆ ಬರುತ್ತಿದ್ದರು. ಆದರೆ ಇತ್ತೀಚೆಗೆ ನಗರ ವಾಸಿಗಳ ದಂಡು ಇಲ್ಲಿ ಹೆಚ್ಚುತ್ತಿದೆ.

ದಾರಿಯಲ್ಲೊಂದು ಬಂಡೆಗಲ್ಲು
ಪ್ರಾರಂಭದಲ್ಲಿ ತೋಟದ ನಡುವೆ ಸುಮಾರು 2 ರಿಂದ 3 ಕಿ.ಮೀ. ಸಿಮೆಂಟ್ ರಸ್ತೆಯ ವ್ಯವಸ್ಥೆಯನ್ನು ಮಾಡಲಾಗಿದ್ದು, ಅದರ ಮುಂದಿನ  ಸುಮಾರು 3 ಕಿ.ಮೀ. ದಾರಿಯು ತುಂಬ ಕಿರಿದಾಗಿರುತ್ತದೆ. ಈಗ ಮುಂದೆ ಸಾಗುವಾಗ ಒಂದು ದೊಡ್ಡ ಬಂಡೆಯ ಗುರುತು ತುಂಬ ಮುಖ್ಯವಾದುದು. ಏಕೆಂದರೆ ಶಿಖರಕ್ಕೆ ಸೇರುವ ಮಧ್ಯೆ ಇದುವೇ ಮುಖ್ಯವಾದ ಗುರುತು. ಇಲ್ಲಿ ವಿಶ್ರಾಂತಿ ಪಡೆಯುತ್ತಾ, ಸುತ್ತಲೂ ಕಣ್ಣಾಡಿಸಿದರೆ ಸಾಲು ಸಾಲು ಬೆಟ್ಟಗಳ ವಿಹಂಗಮ ನೋಟವನ್ನು ನೋಡಿ ಆನಂದಿಸಬಹುದು. ಇಲ್ಲಿ ಸಮತಟ್ಟಾದ ನೆಲವಿರುವುದರಿಂದ ಕ್ಯಾಂಪ್ ನಿರ್ಮಿಸಿಕೊಳ್ಳಬಹುದು.

ತದನಂತರದ ಸುಮಾರು ಎರಡು ಕಿ.ಮೀ. ದಟ್ಟವಾದ ಕಾಡಿನಲ್ಲಿ, ಮರ-ಗಿಡಗಳ ನಡುವೆ ಸಾಗುವ ದಾರಿಯು  ಬೆವರಿಳಿಸುವ ನಡಿಗೆಯಾಗಿರುತ್ತದೆ. ಇದರ ಜೊತೆಗೆ ತುಂತುರು ಮಳೆ ಬರುತ್ತಿದ್ದರೆ ಮತ್ತಷ್ಟು ಮಜಾಬರುತ್ತದೆ. ಅಲ್ಲಿಯೇ ಅಲ್ಪ ದೂರ ಸಾಗಿದರೆ ಶಿಖರದ ತುದಿಯನ್ನು ಸೇರಬಹುದು.

ಚಾರಣದ ಸುಖ
ಚಾರಣ ಹೊರಟ ನಮ್ಮ ತಂಡ ನಿಸರ್ಗದ ಸೊಬಗನ್ನು ಸವಿಯುತ್ತಾ ಶಿಖರ ಸೇರಿದಾಗ ನಮ್ಮ ಕೈಗೆ ಮೋಡಗಳು ತಾಕುವಂತೇ ಭಾಸವಾದವು. ತುಂತುರು ಮಳೆ, ಸುತ್ತಲೂ ಬೆಟ್ಟಗುಡ್ಡಗಳು, ಅವುಗಳ ಮದ್ಯೆ ಎತ್ತರದ ಶಿಖರದ ಮೇಲೆ ನಾವು. ಒಂದು ಕ್ಷಣ ನಮ್ಮನ್ನು ನಾವು ಮರೆತು ಬಿಟ್ಟೆವು. ಅಲ್ಲಿ ನಿಂತು ಸುತ್ತಲೂ ನೋಡುತ್ತಿದ್ದರೆ ‘ಕಾಡಿನಿಂದ ನಾಡಿಗೆ’ ಎಂಬ ಮಾತು  ಮರೆತು ‘ಮರಳಿ ಕಾಡಿಗೆ’ ಎಂಬ ಧ್ವನಿಯೇ ಮನತುಂಬಿತ್ತು. ದೈವ ಸೃಷ್ಟಿಯ ಈ ನೈಸರ್ಗಿಕ ಪ್ರದೇಶವನ್ನು ನೋಡಲು ನಮ್ಮ ಎರಡು ಕಣ್ಣುಗಳು ಸಾಕಾಗಲಿಲ್ಲ. 

ಅಂದಿನ ಆ ದಿನ ಒಂದು ಮರೆಯಲಾಗದ ದಿನವಾಗಿತ್ತು. ನಿಸರ್ಗದ ಇಂತಹ ಸೌಂದರ್ಯವನ್ನು ಹೊಂದಿರುವ ತಡಿಯಾಂಡಮೋಳ್ ಪ್ರಕೃತಿ ಹಾಗೂ ಟ್ರೆಕ್ಕಿಂಗ್ ಪ್ರಿಯರ ಮನಸ್ಸಿಗೆ ತುಂಬಾನೇ ನೆಮ್ಮದಿ ನೀಡುತ್ತದೆ. ಇಲ್ಲಿಗೆ ಪ್ರಯಾಣ ಬೆಳೆಸಬೇಕಾದರೆ ಒಂದು ದಿನದ ಮಟ್ಟಿಗೆಯಾದರೂ ಕೆಳಗಿನ ಹೋಂಸ್ಟೇಗಳಲ್ಲಿ ಉಳಿದುಕೊಂಡರೇ ಪೂರ್ತಿ ಸಂತೋಷ ಅನುಭವಿಸಲು ಸಾಧ್ಯ. ಆದರೆ ಪ್ರಯಾಣಕ್ಕೆ ಮುಂಚಿತವಾಗಿಯೇ ಹೋಂಸ್ಟೇಗಳಲ್ಲಿ ಬುಕ್ಕಿಂಗ್ ಕಾಯ್ದಿರಿಸಿದರೆ ಉತ್ತಮ.
***
ಬೆಂಗಳೂರಿನಿಂದ 250 ಕಿ.ಮೀ
ಪ್ರಯಾಣದ ಸಮಯ 5 ಗಂಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT