ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಸರ್ಗ ದೇವತೆಯ ರುಜು ‘ರೈನ್’

Last Updated 6 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಪ್ರಕೃತಿ ಸೌಂದರ್ಯಕ್ಕೆ ಇನ್ನೊಂದು ಹೆಸರು ಸ್ವಿಟ್ಜರ್ಲೆಂಡ್‌. ನಿಸರ್ಗ ಕಾಲು ಮುರಿದುಕೊಂಡು ಬಿದ್ದಂತೆ ಭಾಸವಾಗುವ ಸ್ವಿಟ್ಜರ್‌ರ್ಲೆಂಡ್‌ನ ಮೋಹಕ ಪ್ರವಾಸಿ ತಾಣಗಳಲ್ಲೊಂದು ರೈನ್ ನದಿ ಹಾಗೂ ಅದು ಸೃಷ್ಟಿಸಿರುವ ಜಲಪಾತ.

ಆಲ್ಫ್ಸ್‌ ಪರ್ವತದ ಸರೋವರವೊಂದರಲ್ಲಿ ಹುಟ್ಟುವ ರೈನ್‌ ನದಿ ಪಶ್ಚಿಮಾಭಿಮುಖವಾಗಿ ಹರಿಯುತ್ತದೆ. ಸ್ವಿಟ್ಜರ್ಲೆಂಡ್ ಮಾತ್ರವಲ್ಲದೆ– ಫ್ರಾನ್ಸ್, ಜರ್ಮನಿ, ಲೈಕೆನ್ಸ್ಟೈನ್, ಆಸ್ಟ್ರಿಯಾಗಳಲ್ಲೂ ಹರಿಯುವ ಈ ನದಿ ನೆದರ್ಲೆಂಡ್‌ ಸೇರಿ, ಅಲ್ಲಿನ ಉತ್ತರ ಸಮುದ್ರ ಕೂಡಿಕೊಳ್ಳುತ್ತದೆ. ಸಾವಿರಾರು ಕಿ.ಮೀ. ಹರಿಯುವ ಈ ನದಿ ತನ್ನ ಹರಿವಿನುದ್ದಕ್ಕೂ ಅನೇಕ ಚೆಲುವಿನ ತಾಣಗಳನ್ನು ಸೃಷ್ಟಿಸಿದೆ. ಯೂರೋಪಿನ ಪ್ರಮುಖ ನೌಕಾಯಾನದ ನದಿಗಳಲ್ಲಿ ಒಂದು ಎಂದು ಗುರ್ತಿಸಿಕೊಂಡಿರುವ ಇದು, ಯುರೋಪಿನಲ್ಲಿಯೇ ದೊಡ್ಡದಾದ ‘ರೈನ್‌ ಜಲಪಾತ’ಕ್ಕೂ ಕ್ಯಾನ್ವಾಸ್‌ ಆಗಿ ಪರಿಣಮಿಸಿದೆ.

ರೈನ್ ನದಿಯ ದಡದಲ್ಲಿ ಐತಿಹಾಸಿಕ ಮಹತ್ವದ ಹಲವು ಕೋಟೆಕೊತ್ತಲಗಳು, ಅರಮನೆಗಳು ಇವೆ. ಇವುಗಳಿಗೆ ಸಂಬಂಧಿಸಿದಂತೆ ರೋಚಕ ದಂತಕಥೆಗಳೂ ಪ್ರಚಲಿತದಲ್ಲಿ ಇವೆ.

ರೈನ್ ನದಿಯ ಸುಪ್ರಸಿದ್ಧ ಜಲಪಾತ ಇರುವುದು ಸ್ವಿಟ್ಜರ್‌ರ್ಲೆಂಡ್‌ನ ಉತ್ತರದ ಷೆಫ್‌ಹೌಸೆನ್ ಎಂಬ ಪ್ರಾಂತ್ಯದಲ್ಲಿ. ಇದು ಜರ್ಮನಿಯ ಗಡಿ ಭಾಗವೂ ಹೌದು. ಅಗಾಧ ಪ್ರಮಾಣದ ಜಲರಾಶಿಯು 150 ಮೀಟರ್ ವಿಸ್ತೀರ್ಣದ ಬಂಡೆಗಳನ್ನು ಆಕ್ರಮಿಸಿಕೊಂಡು, 25 ಮೀಟರ್ ಎತ್ತರದಿಂದ ಭೋರ್ಗರೆಯುತ್ತ ಧುಮ್ಮಿಕ್ಕುವ ಜಲಪಾತದ ಸೌಂದರ್ಯವು ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಜಲಪಾತದ ಅಬ್ಬರ ಹಾಗೂ ಮೊರೆತದಲ್ಲೇ ರೂಪುಗೊಳ್ಳುವ ವಿಶಿಷ್ಟ ಮೌನವನ್ನು ಅನುಭವಿಸಿಯೇ ತೀರಬೇಕು.

ಜಲಪಾತದ ಕೆಳಗೆ ತಾನು ಹರಿಯುವ ಪ್ರದೇಶಗಳನ್ನೆಲ್ಲ ರೈನ್‌ ನದಿ ಫಲವತ್ತಾಗಿಸುತ್ತದೆ, ಸಸ್ಯಶ್ಯಾಮಲೆಯಾಗಿಸುತ್ತದೆ. ದಿವ್ಯ ಗಾಂಭೀರ್ಯದಿಂದ ಹರಿಯುವ ನದಿಯ ಇಕ್ಕೆಲಗಳಲ್ಲಿ ಬೆಳೆದಿರುವ ಗಗನಚುಂಬಿ ವೃಕ್ಷಗಳು ನೋಡುಗರ ಮನಸ್ಸಿನಲ್ಲಿ ಪುಲಕದ ತರಂಗಗಳನ್ನು ಎಬ್ಬಿಸುತ್ತವೆ.

ನದಿಪಾತ್ರದಿಂದ ಜಲಪಾತದೆಡೆಗೆ ಸಾಗಲು ದೋಣಿಯಲ್ಲಿ ಇಪ್ಪತ್ತು ನಿಮಿಷಗಳ ಜಲವಿಹಾರ ಮಾಡಬೇಕು. ಈ ವಿಹಾರದಲ್ಲಿ, ಅಲ್ಲಲ್ಲಿ ಘನ ಗಾಂಭೀರ್ಯದಿಂದ ತೇಲಾಡುತ್ತಿರುವ ರಾಜಹಂಸಗಳು ಎದುರಾಗುತ್ತವೆ. ಇವು ನದಿಯ ಚೆಲುವಿಗೆ ಕುಂದಣವಿಟ್ಟಂತೆ ಕಂಡುಬರುತ್ತವೆ.
ಜಲಪಾತದ ಸಮೀಪದಲ್ಲಿ ಬೆಳ್ನೊರೆಯನ್ನು ಸೃಷ್ಟಿಸುವ ಜಲಪಾತದ ತುಂತುರು ಮಳೆಗೆ ಮೈಮನಗಳನ್ನು ಒಡ್ಡುವುದು ಒಂದು ರೋಚಕ ಅನುಭವ.

ಬೃಹತ್ ಬಂಡೆಯೊಂದರಿಂದ ನೀರರಾಶಿ ಕೆಳಗಿಳಿದು, ನದಿಯಾಗಿ ಹರಿಯುವ ಅಸದೃಶ ದೃಶ್ಯವು ಮನಸೂರೆಗೊಳ್ಳುತ್ತದೆ. ಥಳಥಳಿಸುವ ವಜ್ರದ ಮುಕುಟದಂತೆ ಬೆಳ್ಳಗೆ ಹೊಳೆಯುವ ನೀರು ಬಂಡೆಯಿಂದ ಜಾರುವಲ್ಲಿ ಕೆಲವೊಮ್ಮೆ ಬಣ್ಣದ ಬುಗ್ಗೆಯೊಡೆದಂತಹ ಕಾಮನಬಿಲ್ಲು ಮೂಡಿ, ಜಲಪಾತದ ಸೌಂದರ್ಯಕ್ಕೆ ತೊಡಿಸಿದ ಪ್ರಭಾವಳಿಯಂತೆ ಕಾಣಿಸುತ್ತದೆ. 

ಬೃಹತ್ ಬಂಡೆಯೊಂದು ಜಲಪಾತವನ್ನು ಇಬ್ಭಾಗವಾಗಿಸಿದೆ. ಈ ಬಂಡೆಯಲ್ಲಿ ಮೆಟ್ಟಿಲುಗಳನ್ನೂ ಕೆತ್ತಿದ್ದಾರೆ. ಸ್ವಲ್ಪ ಕಡಿದಾಗಿರುವ ಈ ಮೆಟ್ಟಿಲುಗಳನ್ನು ಕಬ್ಬಿಣದ ಪಟ್ಟಿಕೆಗಳನ್ನು ಹಿಡಿದು ಹತ್ತಬಹುದು. ಮೆಟ್ಟಿಲು ಹತ್ತಿ ಮೇಲಿನ ವೀಕ್ಷಣಾ ವೇದಿಕೆಯಲ್ಲಿ ನಿಂತರೆ, ನಾವು ಜಲಪಾತದ ಮಧ್ಯಭಾಗದಲ್ಲಿ ನಿಂತಂತೆ ಅನ್ನಿಸುತ್ತದೆ. ಮೇಲ್ಭಾಗದಲ್ಲಿ ಜಲಪಾತವಾಗಲು ಹರಿದು ಬರುತ್ತಿರುವ ರೈನ್‌ ನದಿ ನಮ್ಮತ್ತಲೇ ಧಾವಿಸುತ್ತಿರುವಂತೆ ಕಾಣಿಸುತ್ತದೆ. ಬಂಡೆಗಳೆಡೆಯಿಂದ ಮಲ್ಲಿಗೆ ಹೂಗಳ ಪಕಳೆಗಳು ಚಿಮ್ಮಿದಂತೆ ಬೆಳ್ನೊರೆ ನಿರಂತರವಾಗಿ ರೂಪುಗೊಳ್ಳುತ್ತದೆ.

ಜಲಪಾತವನ್ನು ನೋಡುತ್ತಾ ನಿಂತರೆ, ಆ ಪರಿಸರದಿಂದ ಕಾಲ್ತೆಗೆಯಲೇ ಮನಸ್ಸಾಗುವುದಿಲ್ಲ. ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಪಾತ, ಪಚ್ಚೆ ಹಸಿರಿನ ಹಿನ್ನೆಲೆ, ಮೈದುಂಬಿಕೊಂಡು ಗಂಭೀರವಾಗಿ ಹರಿಯುವ ನದಿ, ಘನ ಗಾಂಭೀರ್ಯದಿಂದ ತೇಲಾಡುವ ರಾಜಹಂಸಗಳು– ಇವೆಲ್ಲವೂ ಒಟ್ಟುಗೂಡಿ ಅಪೂರ್ವ ಕಲಾಕೃತಿಯೊಂದು ನಮ್ಮ ಮನಸ್ಸಿನ ಅನುಭವಕ್ಕೆ ದಕ್ಕುತ್ತದೆ.

ಈ ನದಿ ಹಾಗೂ ಜಲಪಾತವು ಕಡೆದಿಟ್ಟಿರುವ ಸೌಂದರ್ಯದ ಚಿತ್ರಣವು ಈ ಲೋಕಕ್ಕೇ ಸೇರಿದ್ದಲ್ಲವೇನೋ ಅನ್ನಿಸಿ, ಅಲೌಕಿಕ ಅನುಭೂತಿಯ ದಿವ್ಯಾನಂದ ಉಂಟಾಗುತ್ತದೆ. ಬಂಡೆಯ ಮೆಟ್ಟಿಲುಗಳನ್ನು ಇಳಿದು ಮರಳಿ ದೋಣಿ ಹತ್ತಿ ದಡ ಸೇರಿದರೆ, ಸಮೀಪದಲ್ಲೇ ಇರುವ ಭಾರತ ಮೂಲದವರು ನಡೆಸುವ ಹೋಟೆಲ್‌ನಲ್ಲಿ ಏಲಕ್ಕಿ ಘಮದ ಬಿಸಿ ಚಹಾದ ಸುವಾಸನೆ ಮೂಗಿಗೆ ಅಡರುತ್ತದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT