ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಸ್ತೇಜವಾಗಿದ್ದ ಕಣ್ಣಾಲಿಗಳು...

Last Updated 27 ಜುಲೈ 2015, 20:42 IST
ಅಕ್ಷರ ಗಾತ್ರ

ಶಿಲ್ಲಾಂಗ್‌ (ಪಿಟಿಐ):  ಆಸ್ಪತ್ರೆಗೆ ಕರೆ ತರುವಷ್ಟರಲ್ಲಿ ಅವರು ಕೊನೆ ಉಸಿರೆಳೆದಿದ್ದರೇ ಎಂಬ ಪ್ರಶ್ನೆಗೆ, ‘ಕರೆತರುವಾಗ ಕಲಾಂ  ಜೀವಂತವಾಗಿದ್ದರು ಎಂಬುದಕ್ಕೆ ಅವರಿಂದ ಯಾವುದೇ ಸ್ಪಂದನವಿರಲಿಲ್ಲ. ಆದರೆ ಸತ್ತಿದ್ದರು ಎಂದು ಘೋಷಿಸಲೂ ಸಾಧ್ಯವಿರಲಿಲ್ಲ. ಸರಾಗ ಉಸಿರಾಟವಾಗಲಿ, ನಾಡಿ ಮಿಡಿತವಾಗಲಿ ಇರಲಿಲ್ಲ. ರಕ್ತದೊತ್ತಡವೂ ಸ್ಥಗಿತವಾಗಿತ್ತು. ಅಲ್ಲದೆ ಕಣ್ಣಾಲಿಗಳೂ ನಿಸ್ತೇಜವಾಗಿದ್ದವು’ ಎಂದು ಡಾ. ಖರ್ಬಾಮನ್‌ ಅವರು ವಿವರಿಸಿದರು.

‘ಕಲಾಂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ರಾತ್ರಿ 7.45ಕ್ಕೆ ಅವರ ಮರಣವನ್ನು ಘೋಷಿಸಲಾಯಿತು. ತೀವ್ರ ಹೃದಯಾಘಾತ ಅವರ ಸಾವಿಗೆ ಕಾರಣ ಎಂದೂ ತಿಳಿಸಲಾಯಿತು’ ಎಂದು ಡಾ. ಖರ್ಬಾಮನ್‌ ಮಾಹಿತಿ ನೀಡಿದರು.

ದೆಹಲಿಗೆ ಪಾರ್ಥಿವ ಶರೀರ:  ಮಂಗಳವಾರ ಮುಂಜಾನೆ 5.30ಕ್ಕೆ ಅಬ್ದುಲ್‌ ಕಲಾಂ ಅವರ ‍ಪಾರ್ಥಿವ ಶರೀರವನ್ನು ವಾಯುಪಡೆಯ ವಿಶೇಷ ವಿಮಾನದಲ್ಲಿ ಗುವಾಹಟಿಗೆ ಕೊಂಡೊಯ್ದು ನಂತರ ಅಲ್ಲಿಂದ ದೆಹಲಿಗೆ ವಿಶೇಷ ವಿಮಾನದಲ್ಲಿ ಒಯ್ಯಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

‘ಗುವಾಹಟಿಯಿಂದ ನವದೆಹಲಿಗೆ ಪಾರ್ಥಿವ ಶರೀರವನ್ನು ಸಾಗಿಸಲು  ಬೇಕಾದ ಅಗತ್ಯ ಕ್ರಮಗಳ ಬಗ್ಗೆ ಕೇಂದ್ರ ಗೃಹ ಕಾರ್ಯದರ್ಶಿ ಎಲ್‌. ಸಿ. ಗೋಯಲ್‌ ಅವರೊಂದಿಗೆ ಮಾತುಕತೆ ನಡೆಸಿರುವುದಾಗಿ ಮುಖ್ಯ ಕಾರ್ಯದರ್ಶಿ ಪಿ.ಬಿ. ವಾರ್ಜಿರಿ ತಿಳಿಸಿದರು.

‘ಗ್ರಹಗಳ ಕುರಿತ ಉಪನ್ಯಾಸ ನೀಡಲು ಕಲಾಂ ಬಂದಿದ್ದರು. ಉಪನ್ಯಾಸ ನೀಡು ತ್ತಿದ್ದಾಗಲೇ ಕುಸಿದು ಬಿದ್ದರು’ ಎಂದು ಶಿಲ್ಲಾಂಗ್ ಐಐಎಂನ ಅಧಿಕಾರಿ ಮಾರ್ಲಿವಿನ್‌ ಮುಖಿಂ ತಿಳಿಸಿದ್ದಾರೆ.

ವಿಶೇಷ ಸಂಪುಟ ಸಭೆ: ಎ.ಪಿ.ಜೆ. ಅಬ್ದುಲ್‌ ಕಲಾಂ ಅವರ ನಿಧನಕ್ಕೆ ಸಭೆಯಲ್ಲಿ ಸಂತಾಪ ಸೂಚಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತಮ್ಮ ಸಚಿವ ಸಂಪುಟದ ವಿಶೇಷ ಸಭೆ ಕರೆದಿದ್ದಾರೆ.   ಬೆಳಿಗ್ಗೆ 10ಕ್ಕೆ ಸಭೆ ನಡೆಯಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸಂತಾಪ: ಮಾಜಿ ರಾಷ್ಟ್ರಪತಿಎ.ಪಿ.ಜೆ. ಅಬ್ದುಲ್‌ ಕಲಾಂ ಅವರ ನಿಧನಕ್ಕೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಕಲಾಪ ಮುಂದೂಡಿಕೆ: ರಾಷ್ಟ್ರದಾದ್ಯಂತ ಏಳು ದಿನಗಳ  ಶೋಕಾಚರಣೆ ಪ್ರಕಟಿಸಲಾಗಿದ್ದು, ಸಂಸತ್‌ ಹಾಗೂ ರಾಜ್ಯಸಭೆಗಳು ಮಂಗಳವಾರ  ಬೆಳಿಗ್ಗೆ ಸಮಾವೇಶಗೊಂಡು ಕಲಾಂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಉಭಯ ಸದನಗಳ ಕಲಾಪಗಳನ್ನು ಮುಂದೂಡಲಾಗುವುದು.

ಜನರ ರಾಷ್ಟ್ರಪತಿ
ಅಬ್ದುಲ್‌ ಕಲಾಂ ಎಂದೇ ಪ್ರಸಿದ್ಧ ರಾಗಿದ್ದ ಅವುಲ್‌ ಫಕೀರ್‌ ಜೈನುಲಾಬ್ದಿನ್‌ ಅಬ್ದುಲ್‌ ಕಲಾಂ 25ನೇ ಜುಲೈ 2002 ರಿಂದ 25 ಜುಲೈ 2007 ರವರೆಗೆ ದೇಶದ  11ನೇ ರಾಷ್ಟ್ರಪತಿಯಾಗಿದ್ದರು. ಕಲಾಂ ಅವರಿಗೆ 1981ರಲ್ಲಿ ಪದ್ಮ ಭೂಷಣ, 1990ರಲ್ಲಿ ಪದ್ಮ ವಿಭೂಷಣ ಹಾಗೂ 1997ರಲ್ಲಿ ಭಾರತ ರತ್ನ ನೀಡಲಾಗಿತ್ತು.

1931ರ ಅಕ್ಟೋಬರ್‌ 15ರಂದು ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿ ಸಿದ ಕಲಾಂ ಅವಿವಾಹಿತರಾಗಿದ್ದರು.  ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ  ನಡೆದ ಅಣು ಪರೀಕ್ಷೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT