ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಟ್‌: ಗೊಂದಲ ಪರಿಹಾರ

ಸರ್ಕಾರಿ ಕಾಲೇಜುಗಳಿಗೆ ವಿನಾಯಿತಿ: ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಸಹಿ 
Last Updated 24 ಮೇ 2016, 19:30 IST
ಅಕ್ಷರ ಗಾತ್ರ

ನವದೆಹಲಿ: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಯ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಿಂದ (ನೀಟ್‌) ರಾಜ್ಯಗಳಿಗೆ ವಿನಾಯಿತಿ ನೀಡುವ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಮಂಗಳವಾರ ಸಹಿ ಹಾಕಿದ್ದಾರೆ.

ಸುಗ್ರೀವಾಜ್ಞೆಯಿಂದಾಗಿ ಸರ್ಕಾರಿ ಕಾಲೇಜುಗಳ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ ಸೀಟುಗಳನ್ನು ರಾಜ್ಯಗಳು ನಡೆಸುವ ಪ್ರವೇಶ ಪರೀಕ್ಷೆ ಮೂಲಕವೇ ಭರ್ತಿ ಮಾಡಿಕೊಳ್ಳಲು ಅವಕಾಶ ದೊರೆತಿದೆ. ಇದು ಖಾಸಗಿ ಕಾಲೇಜುಗಳಿಗೆ ಅನ್ವಯ ಆಗುವುದಿಲ್ಲ.

ಖಾಸಗಿ ವೈದ್ಯಕೀಯ ಕಾಲೇಜುಗಳ ಹೆಚ್ಚಿನ ಎಂಬಿಬಿಎಸ್‌ ಸೀಟುಗಳನ್ನು ಸುಪ್ರೀಂಕೋರ್ಟ್‌ ನಿರ್ದೇಶನದಂತೆ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (ನೀಟ್‌) ಮೂಲಕವೇ ಭರ್ತಿ ಮಾಡಬೇಕು ಎಂದು ಆರೋಗ್ಯ ಸಚಿವಾಲಯ ಮಂಗಳವಾರ ಘೋಷಿಸಿದೆ.

ಬುಧವಾರದೊಳಗೆ ಸುಗ್ರೀವಾಜ್ಞೆಯ  ಗೆಜೆಟ್‌ ಪ್ರಕಟಣೆ ಹೊರಡಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ದೇಶದಾದ್ಯಂತ ಒಂದು ಪ್ರವೇಶ ಪರೀಕ್ಷೆ ಮಾತ್ರ ಇರಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ತಿಳಿಸಿದ್ದಾರೆ. ‘ಎಲ್ಲ ಖಾಸಗಿ ಸಂಸ್ಥೆಗಳು ಮತ್ತು ವೈದ್ಯಕೀಯ ಕಾಲೇಜುಗಳು ಈ ವರ್ಷವೇ ನೀಟ್‌ ವ್ಯಾಪ್ತಿಯಲ್ಲಿ ಇರುತ್ತವೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ದೇಶದ ಖಾಸಗಿ ಕಾಲೇಜುಗಳಲ್ಲಿ ಸುಮಾರು 27 ಸಾವಿರ ಎಂಬಿಬಿಎಸ್‌ ಸೀಟುಗಳಿವೆ. ಅವುಗಳಲ್ಲಿ ಮೂರನೇ ಎರಡರಷ್ಟು ಸೀಟುಗಳು ನೀಟ್‌ ಮೂಲಕವೇ  ಭರ್ತಿಯಾಗಲಿವೆ ಎಂದು ಸಚಿವಾಲಯದ ಮೂಲಗಳು ಹೇಳಿವೆ.

ಪ್ರತಿ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿಯೂ ಒಂದಷ್ಟು ಸೀಟುಗಳು  ಸರ್ಕಾರಕ್ಕೆ ಮೀಸಲಾಗಿರುತ್ತವೆ. ಈ ಸೀಟುಗಳನ್ನು ಸರ್ಕಾರ ನಡೆಸುವ ಪ್ರವೇಶ ಪರೀಕ್ಷೆಯ ಮೂಲಕವೇ ಭರ್ತಿ ಮಾಡಿಕೊಳ್ಳಬಹುದು.

ಸಿಇಟಿ ಆಗಿದೆ: ಈತನಕ ಕರ್ನಾಟಕ, ಗುಜರಾತ್‌, ಮಹಾರಾಷ್ಟ್ರ, ಕೇರಳ ಮತ್ತು ತ್ರಿಪುರ ರಾಜ್ಯಗಳು ಎಂಬಿಬಿಎಸ್‌ ಮತ್ತು ದಂತ ವೈದ್ಯ ಕೋರ್ಸ್‌ ಪ್ರವೇಶಕ್ಕೆ ಪರೀಕ್ಷೆ ನಡೆಸಿವೆ. ಈ ರಾಜ್ಯಗಳಿಗೆ ನೀಟ್‌ನಿಂದ ವಿನಾಯಿತಿ ದೊರೆಯಲಿದೆ.

ಹರಿಯಾಣ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಮಣಿಪುರ, ರಾಜಸ್ತಾನ, ಒಡಿಶಾ ಮತ್ತು ಬಿಹಾರ ರಾಜ್ಯಗಳು ನೀಟ್‌ ಮೂಲಕವೇ ವೈದ್ಯಕೀಯ ಮತ್ತು ದಂತ ವೈದ್ಯ ಕೋರ್ಸು ಸೀಟುಗಳನ್ನು ಭರ್ತಿ ಮಾಡಲು ನಿರ್ಧರಿಸಿವೆ.

ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಅಸ್ಸಾಂ, ಆಂಧ್ರ ಪ್ರದೇಶ, ತೆಲಂಗಾಣ, ಛತ್ತೀಸಗಡ ಮತ್ತು ಪಂಜಾಬ್‌ ರಾಜ್ಯಗಳು ನೀಟ್‌ ಗೊಂದಲದ ಕಾರಣಕ್ಕೆ ಪ್ರವೇಶ ಪರೀಕ್ಷೆಯನ್ನು ಮುಂದೂಡಿದ್ದವು. ‘ನೀಟ್‌ ಪರೀಕ್ಷೆ ಮೂಲಕ ವೈದ್ಯ ಮತ್ತು ದಂತ ವೈದ್ಯ ಸೀಟುಗಳನ್ನು ಭರ್ತಿ ಮಾಡಬೇಕೇ ಅಥವಾ ತಮ್ಮದೇ ಪ್ರವೇಶ ಪರೀಕ್ಷೆ ನಡೆಸಬೇಕೇ ಎಂಬ ನಿರ್ಧಾರವನ್ನು ಈ ರಾಜ್ಯಗಳು ಕೈಗೊಳ್ಳಬಹುದು’ ಎಂದು ನಡ್ಡಾ ತಿಳಿಸಿದ್ದಾರೆ.

ರಾಷ್ಟ್ರಪತಿ ಅಂಕಿತ: ನಾಲ್ಕು ದಿನಗಳ ಚೀನಾ ಪ್ರವಾಸಕ್ಕೆ ತೆರಳುವ ಮುನ್ನ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ನೀಟ್‌ ಸುಗ್ರೀವಾಜ್ಞೆಗೆ ಸಹಿ ಮಾಡಿದ್ದಾರೆ. ಶನಿವಾರವೇ ಸುಗ್ರೀವಾಜ್ಞೆ ಶಿಫಾರಸನ್ನು ರಾಷ್ಟ್ರಪತಿಯವರಿಗೆ ಕಳುಹಿಸಿಕೊಡಲಾಗಿತ್ತು.

ರಾಷ್ಟ್ರಪತಿ ಅವರು ಕೇಳಿದ್ದ ಹಲವು ಪ್ರಶ್ನೆಗಳಿಗೆ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ಸ್ಪಷ್ಟನೆ ನೀಡಿದರು.  ಅಟಾರ್ನಿ ಜನರಲ್‌ ಮುಕುಲ್‌ ರೋಹಟಗಿ ಅವರು ಕೂಡ ರಾಷ್ಟ್ರಪತಿ ಕಾರ್ಯಾಲಯಕ್ಕೆ ಹೋಗಿ ಪ್ರಶ್ನೆಗಳಿಗೆ ಉತ್ತರಿಸಿದರು. ನಂತರವಷ್ಟೇ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಸಹಿ ಮಾಡಿದರು ಎಂದು ತಿಳಿದು ಬಂದಿದೆ.

ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿದ್ದರಿಂದಾಗಿ ರಾಷ್ಟ್ರಪತಿ ಕಾರ್ಯಾಲಯ ಈ ಬಾರಿ ಹೆಚ್ಚಿನ ಜಾಗರೂಕತೆ ವಹಿಸಿದೆ ಎಂದು ತಿಳಿದು ಬಂದಿದೆ.

ಸುಗ್ರೀವಾಜ್ಞೆಗೆ ಕಾರಣಗಳು
* ಈಗಾಗಲೇ ಕೆಲವು ರಾಜ್ಯಗಳು ಪ್ರವೇಶ ಪರೀಕ್ಷೆ ನಡೆಸಿವೆ. ಹಾಗಾಗಿ ಮತ್ತೊಂದು ಪರೀಕ್ಷೆ ಬರೆಯುವುದು ವಿದ್ಯಾರ್ಥಿಗಳಿಗೆ ಹೊರೆ

* ರಾಜ್ಯಗಳು ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ನಡೆಸಿವೆ. ಎರಡು ತಿಂಗಳೊಳಗಿನ ಅವಧಿಯಲ್ಲಿ ವಿದ್ಯಾರ್ಥಿಗಳು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮತ್ತೊಂದು ಪರೀಕ್ಷೆ ಬರೆಯುವಂತೆ ಮಾಡುವುದು ಸರಿಯಲ್ಲ

* ರಾಜ್ಯ ಮಟ್ಟದ ಪರೀಕ್ಷೆ ಮತ್ತು ಅಖಿಲ ಭಾರತ ಪೂರ್ವ ವೈದ್ಯಕೀಯ ಪರೀಕ್ಷೆಯ (ಎಐಪಿಎಂಟಿ) ಪಠ್ಯಕ್ರಮಗಳು ಭಿನ್ನವಾಗಿವೆ. ಎಐಪಿಎಂಟಿ ಪಠ್ಯಕ್ರಮದ ಆಧಾರದಲ್ಲಿ ಎರಡನೇ ನೀಟ್‌ ನಡೆಯಲಿದೆ.

ಸಿಇಟಿ ರ್ಯಾಂಕಿಂಗ್‌ ಮೂಲಕ ಸೀಟು ಭರ್ತಿ
‘ರಾಷ್ಟ್ರಪತಿಗಳು ಸುಗ್ರೀವಾಜ್ಞೆಗೆ ಸಹಿ ಹಾಕಿದ್ದರಿಂದ ರಾಜ್ಯದ ಸರ್ಕಾರಿ ಕಾಲೇಜುಗಳ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಸೀಟುಗಳನ್ನು ಸಿಇಟಿ ರ್ಯಾಂಕಿಂಗ್‌ ಮೂಲಕವೇ ಭರ್ತಿ ಮಾಡಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ್‌ ಹೇಳಿದರು.

ಖಾಸಗಿ ಕಾಲೇಜುಗಳ ಸೀಟುಗಳನ್ನು ಎನ್‌ಇಇಟಿ ಮೂಲಕವೇ ತುಂಬಬೇಕು ಎಂದು ಹೇಳಿದೆ. ಆದರೆ, ಸೀಟು ಹಂಚಿಕೆ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು. ಸಿಇಟಿ ಫಲಿತಾಂಶ ಇದೇ 28ರಂದು ಪ್ರಕಟವಾಗುವ ಸಾಧ್ಯತೆ ಇದೆ.

ಮುಂದಿನ ವರ್ಷದಿಂದ ಒಂದೇ ಪರೀಕ್ಷೆ
* ನೀಟ್‌ ಮೂಲಕವೇ ಪ್ರವೇಶ ನೀಡುವಂತೆ ಮೇ 2ರಂದು ಸುಪ್ರೀಂ ಕೋರ್ಟ್‌ ಆದೇಶ
* ಹಲವು ರಾಜ್ಯಗಳು ಮತ್ತು ಸಂಸದರಿಂದ ನೀಟ್‌ಗೆ ವಿರೋಧ
* ರಾಜ್ಯಗಳಿಗೆ ವಿನಾಯಿತಿ ನೀಡಿ ಸುಗ್ರೀವಾಜ್ಞೆ
* 2017–18ರ ಸ್ನಾತಕೋತ್ತರ ಕೋರ್ಸ್‌ ಪ್ರವೇಶಕ್ಕೆ ಡಿಸೆಂಬರ್‌ನಲ್ಲಿ ನೀಟ್‌
* ಖಾಸಗಿ ಕಾಲೇಜುಗಳಲ್ಲಿರುವ ರಾಜ್ಯಗಳ ಕೋಟಾದ ಸೀಟುಗಳಿಗೂ ನೀಟ್‌ನಿಂದ ವಿನಾಯಿತಿ

***
ಖಾಸಗಿ ಕಾಲೇಜುಗಳ ಸೀಟುಗಳನ್ನು ಎನ್‌ಇಇಟಿ ಮೂಲಕ ಭರ್ತಿ ಮಾಡುವಂತೆ ಸುಪ್ರೀಂ ಕೋರ್ಟ್‌ ಹೇಳಿರುವುದನ್ನು  ಪಾಲಿಸುತ್ತೇವೆ. ಸರ್ಕಾರ ಮತ್ತು ಖಾಸಗಿ ಕಾಲೇಜುಗಳು ಸೀಟು ಹಂಚಿಕೆ ಬಗ್ಗೆ ನಿರ್ಧರಿಸುತ್ತವೆ
-ಎ.ಎಸ್‌. ಶ್ರೀಕಾಂತ್‌, 
ಕಾಮೆಡ್‌–ಕೆ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ

ಎನ್‌ಡಿಎ ಸರ್ಕಾರದ 21ನೇ ಸುಗ್ರೀವಾಜ್ಞೆ

ವೈದ್ಯ ಮತ್ತು ದಂತ ವೈದ್ಯ ಕೋರ್ಸ್‌ಗಳ ಪ್ರವೇಶಾತಿಗೆ  ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಿಂದ (ನೀಟ್‌) ರಾಜ್ಯಗಳಿಗೆ ವಿನಾಯಿತಿ ನೀಡಿ ಹೊರಡಿಸಲಾದ ಸುಗ್ರೀವಾಜ್ಞೆ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೊರಡಿಸಲಾದ 21ನೇ ಸುಗ್ರೀವಾಜ್ಞೆ.

2014ರ ಮೇಯಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಡೆದ ಮೊದಲ ಸಂಪುಟ ಸಭೆಯಲ್ಲಿ ಎರಡು ಸುಗ್ರೀವಾಜ್ಞೆಗಳಿಗೆ ಶಿಫಾರಸು ಮಾಡಲಾಗಿತ್ತು. ಪ್ರಧಾನಿಯ ಪ್ರಧಾನ ಕಾರ್ಯದರ್ಶಿಯಾಗಿ ನೃಪೇಂದ್ರ ಮಿಶ್ರಾ ಅವರ ನೇಮಕಕ್ಕೆ ಇದ್ದ ತೊಡಕು ನಿವಾರಿಸಿ ಮೊದಲ ಸುಗ್ರೀವಾಜ್ಞೆ ಶಿಫಾರಸು ಮಾಡಲಾಗಿತ್ತು. ಪೊಲಾವರಂ ಯೋಜನೆಗೆ ಕೆಲವು ಗ್ರಾಮಗಳನ್ನು ಹಸ್ತಾಂತರಿಸಲು ಸಾಧ್ಯವಾಗುವಂತೆ ಆಂಧ್ರ ಪ್ರದೇಶ ಪುನರ್‌ರಚನೆ ಕಾಯ್ದೆಗೆ ತಿದ್ದುಪಡಿ ತರಲು ಎರಡನೇ ಸುಗ್ರೀವಾಜ್ಞೆ ಶಿಫಾರಸು ಮಾಡಲಾಗಿತ್ತು.

ಇದಲ್ಲದೆ, 2014ರಲ್ಲಿ ಇತರ ಐದು ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. ಕೈಗಾರಿಕಾ ಕಾರಿಡಾರ್‌ಗಳು, ಗ್ರಾಮೀಣ ಮೂಲಸೌಕರ್ಯ, ರಕ್ಷಣೆ ಮತ್ತು ವಸತಿ  ಯೋಜನೆಗಳಿಗೆ ಭೂ ಸ್ವಾಧೀನವನ್ನು ಸುಗಮಗೊಳಿಸಲು ಭೂ ಸ್ವಾಧೀನ ಕಾಯ್ದೆ 2013ಕ್ಕೆ ತಿದ್ದುಪಡಿ ತರಲು ಸುಗ್ರೀವಾಜ್ಞೆ ಹೊರಡಿಸಿದ್ದು ವಿವಾದ ಸೃಷ್ಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT