ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀತಿ ನಿರ್ಮಾಣಕ್ಕೆ ಕೋರ್ಸ್‌

Last Updated 21 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿರುವ ಅಜೀಂ ಪ್ರೇಂಜಿ ವಿಶ್ವವಿದ್ಯಾನಿಲಯ 2015ನೇ ಶೈಕ್ಷಣಿಕ ವರ್ಷದಿಂದ ಪಬ್ಲಿಕ್‌ ಪಾಲಿಸಿ ಅಂಡ್‌ ಗೌರ್ನೆನ್ಸ್‌  ಎಂಬ ಹೊಸ ಸ್ನಾತಕೋತ್ತರ ಪದವಿ ಕೋರ್ಸ್‌ ಪ್ರಾರಂಭಿಸುತ್ತಿದೆ. ಪ್ರಜಾಪ್ರಭುತ್ವದಲ್ಲಿ ಆಳ್ವಿಕೆಗೆ ಸಂಬಂಧಿಸಿದ ನೀತಿಗಳು ಹೇಗೆ ನಿರೂಪಣೆಗೊಳ್ಳುತ್ತವೆ ಮತ್ತು ಹೇಗೆ ಅನುಷ್ಠಾನಗೊಳ್ಳುತ್ತವೆ ಎನ್ನುವುದನ್ನು ತಾತ್ವಿಕವಾಗಿ, ಆನ್ವಯಿಕವಾಗಿ ಮತ್ತು ವಿಶ್ಲೇಷಣಾತ್ಮಕವಾಗಿ ಅಭ್ಯಾಸ ನಡೆಸುವ ಕೊರ್ಸ್ ಇದಾಗಿರುತ್ತದೆ.

ಅಂದಹಾಗೆ, ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದಲ್ಲಿ ಈಗಾಗಲೇ ಇರುವ ಎರಡು ಸ್ನಾತಕೋತ್ತರ ಕೋರ್ಸುಗಳ ಜೊತೆಗೆ ಎಂ.ಎ.ಇನ್ ಪಬ್ಲಿಕ್‌ ಪಾಲಿಸಿ ಅಂಡ್‌ ಗೌರ್ನೆನ್ಸ್‌  ಕೋರ್ಸ್ ಸೇರ್ಪಡೆಯಾಗಿದೆ. ಈ ಕೋರ್ಸ್‌ 2015ರ ಜುಲೈ ತಿಂಗಳಿನಲ್ಲಿ ಪ್ರಾರಂಭಗೊಳ್ಳಲಿದೆ. ಇದು ಎರಡು ವರ್ಷಗಳ ಅವಧಿಯ ಸ್ನಾತಕೋತ್ತರ ಪದವಿ ಕೋರ್ಸ್. ಇದು ದೂರಶಿಕ್ಷಣ ಕೊರ್ಸ್ ಅಲ್ಲ.  ಈ ಕೋರ್ಸ್‌ಗೆ ಸೇರಿದವರು ಕಡ್ಡಾಯವಾಗಿ ನಾಲ್ಕು ಸೆಮಿಸ್ಟರ್‌ಗಳನ್ನು ವ್ಯಾಸಂಗ ಮಾಡಬೇಕು. ಜತೆಗೆ ಇಂಟರ್ನ್ಸ್‌ಶಿಪ್‌ ಮತ್ತು ಇತರ ಪ್ರಾಯೋಗಿಕ ಚಟುವಟಿಕೆಗಳನ್ನು ಒಳಗೊಂಡ ಆಳವಾದ ಅಧ್ಯಯನಕ್ಕೆ ಅವಕಾಶ ಕಲ್ಪಿಸುವ ಕೋರ್ಸ್ ಇದಾಗಿದೆ.

ಅರ್ಹತೆ ಮತ್ತು ಆಯ್ಕೆ: ಯಾವುದೇ ವಿಷಯದಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಈ ಕೊರ್ಸ್‌ಗೆ ಸೇರಲು ಅರ್ಹರಾಗಿರುತ್ತಾರೆ. ಪದವಿಯೊಂದಿಗೆ ಕನಿಷ್ಠ ಮೂರು ವರ್ಷ ಕೆಲಸ ಮಾಡಿ ಅನುಭವ ಇದ್ದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಪ್ರವೇಶ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಪ್ರವೇಶಕ್ಕೆ ಆಯ್ಕೆ ನಡೆಸಲಾಗುತ್ತದೆ.

ವಿವಿಧ ಕ್ಷೇತ್ರಗಳಲ್ಲಿ ಸಮಾಜ ವಿಜ್ಞಾನ ಮತ್ತು ಮಾನವಿಕಗಳ ಪ್ರಯೋಗವನ್ನು ತಾತ್ವಿಕವಾದ ಮತ್ತು ವ್ಯಾವಹಾರಿಕವಾದ ಎರಡೂ ಆಯಾಮಗಳಿಂದ ಆಳವಾಗಿ ತಿಳಿಸಿಕೊಡುವ ಅಜೀಂ ಪ್ರೇಂಜಿ ವಿಶ್ವವಿದ್ಯಾನಿಲಯದ ಆಶಯಕ್ಕೆ ಅನುಗುಣವಾಗಿ ಈ ಕೋರ್ಸ್ ಇರುತ್ತದೆ.
ಉದ್ಯೋಗಾವಕಾಶ: ‘ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗೆಳು ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕೊರ್ಸ್ ಅನ್ನು ಯಶಸ್ವಿಯಾಗಿ ಪೂರೈಸಿದವರಿಗೆ ಅನೇಕ ರೀತಿಯ ಉದ್ಯೋಗಾವಕಾಶಗಳು ಸ್ಥಳೀಯ, ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ತೆರೆದುಕೊಳ್ಳಲಿವೆ.

ಜತೆಗೆ ಯಾವುದೇ ಸ್ನಾತಕೋತ್ತರ ಪದವೀಧರರಿಗೆ ಸಾಮಾನ್ಯವಾಗಿ ಲಭ್ಯವಿರುವ ಅವಕಾಶಗಳು ಈ ಕೋರ್ಸ್ ಪಡೆದವರಿಗೂ ಸಿಗಲಿವೆ. ಯಾವುದೇ ಉದ್ಯೋಗ ಪಡೆದರೂ ಅದರಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಬೇಕಾದ ಸಿದ್ದತೆಯನ್ನು ಪದವೀಧರರಿಗೆ ಒದಗಿಸುವುದು ನಮ್ಮ ವಿಶ್ವವಿದ್ಯಾಲಯದ ಮುಖ್ಯ ಧ್ಯೇಯ. ಜತೆಗೆ ತಮ್ಮ ಪರಿಸರದ ವಿದ್ಯಮಾನಗಳನ್ನು ಸಕಾರಾತ್ಮಕವಾದ ಚಿಕಿತ್ಸಕ ದೃಷ್ಟಿಯಿಂದ ಅರ್ಥಮಾಡಿಕೊಂಡು ವಿಶ್ಲೇಷಣಾತ್ಮಕ ನಿರ್ಧಾರಗಳನ್ನು ಕೈಗೊಳ್ಳುವ ಮತ್ತು ಸಾಮಾಜಿಕ ಹಿತಕ್ಕಾಗಿ ಚಿಂತಿಸುವ ನಾಗರಿಕರನ್ನು ಸಮಾಜಕ್ಕೆ ಒದಗಿಸುವುದು ನಮ್ಮ ಉದ್ಧೇಶ.

ಇದು ಒಟ್ಟು 72 ಕ್ರೆಡಿಟ್ಗಳ ಕೋರ್ಸ್. ಮೊದಲ ಮೂರು ಸೆಮಿಸ್ಟರ್ಗಳಲ್ಲಿ ತಲಾ ಐದು ವಿಷಯ ಮತ್ತು ಕೊನೆಯ ಸೆಮಿಸ್ಟರ್ನಲ್ಲಿ ನಾಲ್ಕು ವಿಷಯಗಳನ್ನು ಕಲಿಯಬೆಕಾಗುತ್ತದೆ. ತರಗತಿಗಳಲ್ಲಿ ಕಲಿಸುವ ವಿಷಯಗಳಿಗೆ ಒಟ್ಟು 57 ಕ್ರೆಡಿಟ್ಗಳು. ತರಗತಿಯ ಹೊರಗೆ ಪಡೆದುಕೊಳ್ಳುವ ಅನುಭವದ ಮೂಲಕ  (field enagement) ಕಲಿಯಬೇಕಾದ ಪಠ್ಯಗಳಿಗೆ 11 ಕ್ರೆಡಿಟ್‌ಗಳು.

ಉಳಿದ ನಾಲ್ಕು ಕ್ರೆಡಿಟ್ಗಳಿಗಾಗಿ ಪಠ್ಯಕ್ಕೆ ಯಾವುದೇ ರೀತಿಯ ನೇರ ಸಬಂಧ ಇಲ್ಲದ ಎರಡು ವಿಷಯಗಳನ್ನು ಕಲಿಯಬೇಕಾಗುತ್ತದೆ. ಯೋಚನಾ ಕ್ರಮವನ್ನು ವಿಸ್ತೃತಗೊಳಿಸುವ ಉದ್ದೇಶ ಹೊಂದಿರುವ ಈ ವಿಷಯಗಳನ್ನು ಓಪನ್ ಕೊರ್ಸ್ ಎಂದು ಕರೆಯಲಾಗುತ್ತದೆ. ಇದು ಈ ವಿಶ್ವವಿದ್ಯಾನಿಲಯದ ಎಲ್ಲಾ ಸ್ನಾತಕೋತ್ತರ ವಿದ್ಯಾರ್ಥಿಗಳಿಗೂ ಕಡ್ಡಾಯ.

ನಿರ್ದಿಷ್ಟವಾಗಿ ಹೇಳುವುದಾದರೆ ನೀತಿ ನಿರೂಪಕರಿಗೆ ಸಲಹಾಗಾರರಾಗಿ, ನೀತಿ ವಿಶ್ಲೇಷಕರಾಗಿ (policy analyst) ಮತ್ತು ನೀತಿ ಸಂಶೋಧನೆ (policy research) ಸಂಬಂಧಿಸಿದ ವಿವಿಧ ಹುದ್ದೆಗಳಲ್ಲಿ ಕೆಲಸಮಾಡಲು ಈ ಕೊರ್ಸ್ ಅವಕಾಶ ಕಲ್ಪಿಸುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಲವು ಯೋಜನೆಗಳಲ್ಲಿ ಮತ್ತು ಸರ್ಕಾರದ ಜತೆಗೆ ಕೆಲಸ ಮಾಡುತ್ತಿರುವ ಹಲವಾರು ಸರ್ಕಾರೇತರ ಸಂಸ್ಥೆಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಿದೆ’ ಎನ್ನುತ್ತಾರೆ ಅಜೀಂ ಪ್ರೇಂಜೀ ವಿಶ್ವವಿದ್ಯಾಲಯದ ಸ್ಕೂಲ್‌ ಆಫ್‌ ಪಾಲಿಸಿ ಅಂಡ್‌ ಗೌರ್ನೆನ್ಸ್‌ ‌ ವಿಭಾಗದ ಮುಖ್ಯಸ್ಥರಾದ ಸುಧೀರ್ ಕೃಷ್ಣಸ್ವಾಮಿ.

ಶುಲ್ಕ ಮತ್ತು ವಿದ್ಯಾರ್ಥಿವೇತನ
ಟ್ಯೂಶನ್ ಫೀಸ್ ಎರಡು ವರ್ಷಕ್ಕೆ  ಒಟ್ಟು ₨1,06,000 (ಒಂದು ಲಕ್ಷ ಆರು ಸಾವಿರ) ಖರ್ಚು ಬರುತ್ತದೆ. ಹಾಸ್ಟೆಲ್ ಬೇಕಿದ್ದಲ್ಲಿ ಅದಕ್ಕೆ ಪ್ರತ್ಯೇಕ ಶುಲ್ಕ ಪಾವತಿಸಬೇಕು. ಎರಡು ವರ್ಷ ಊಟ ವಸತಿ ಸೇರಿ ₨1,52,000 (ಒಂದು ಲಕ್ಷ  ಐವತ್ತೆರಡು ಸಾವಿರ) ಆಗುತ್ತದೆ. ಇದರ ಹೊರತಾಗಿ ಬೇರೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ.

ಕೋರ್ಸ್‌ಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಆರ್ಥಿಕ ಅನಾನುಕೂಲವಿದ್ದಲ್ಲಿ ಅಂತವರಿಗೆ ಬೇರೆ ಬೇರೆ ರೀತಿಯ ಅರ್ಥಿಕ ಸಹಾಯ ಒದಗಿಸಲಾಗುವುದು. ಆರ್ಥಿಕ ಸಂಕಷ್ಟದ ಕಾರಣಕ್ಕೆ ಯಾವುದೇ ಅರ್ಹ ಅಭ್ಯರ್ಥಿ ಅವಕಾಶ ವಂಚಿತರಾಗಕೂಡದು ಎಂಬುದು ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ ಧೋರಣೆ. ಫೆಬ್ರುವರಿ 6, 2015 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಹೆಚ್ಚಿನ ಮಾಹಿತಿಗೆ: www.azimpremjiuniversity.edu.in/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT