ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗೆ ರಾಜಕೀಯ ಮಾಡಬೇಡಿ: ಜೈನ್

Last Updated 5 ಮೇ 2016, 10:27 IST
ಅಕ್ಷರ ಗಾತ್ರ

ಯಾದಗಿರಿ: ಕುಡಿಯುವ ನೀರಿಗಾಗಿ ರಾಜಕೀಯ ಮಾಡಬೇಡಿ. ಬರಗಾಲದ ಹಿನ್ನೆಲೆ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಅಧಿಕಾರಿಗಳು ವಿಳಂಬ ತೋರಿದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವದು ಎಂದು ಜಿಲ್ಲಾಧಿಕಾರಿ ಮನೋಜ ಜೈನ್ ಹೇಳಿದರು.
ತಾಲ್ಲೂಕಿನ ಹಿರೇವಡಗೇರಾದಲ್ಲಿ ಬುಧವಾರ ಆಯೋಜಿಸಿದ್ದ ಬರ ಪರಿಹಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಕೆರೆಗಳ ಹೂಳೆತ್ತುವುದು, ಕಾರ್ಮಿಕರಿಗೆ ಉದ್ಯೋಗ ಒದಗಿಸುವುದು, ನೀರಿನ ಸೌಲಭ್ಯವಿರುವ ಬಾವಿಗಳ ಸಂರಕ್ಷಣೆ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ, ಪೈಪ್‌ಲೈನ್ ಸಂಪರ್ಕ, ಬೋರವೆಲ್‌ಗಳಿಗೆ ಕೈ ಪಂಪು ಅಳವಡಿಕೆ ಸೇರಿದಂತೆ ಇನ್ನಿತರ ಬರ ಕಾಮಗಾರಿಗಳನ್ನು ತುರ್ತಾಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು. 

ಅವಶ್ಯಕತೆ ಇದ್ದಲ್ಲಿ ಖಾಸಗಿಯವರ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು ಅವುಗಳಿಂದ ಕುಡಿಯುವ ನೀರನ್ನು ಸರಬರಾಜು ಮಾಡಬೇಕು. ಇನ್ನೂ ಎಲ್ಲಿ ಕೊಳವೆಬಾವಿಗಳ ಅವಶ್ಯಕತೆ ಇದೆ ಅಂತಹ ಸ್ಥಳಗಳಲ್ಲಿ  ಹೊಸ ಕೊಳವೆಬಾವಿಗಳನ್ನು ಕೊರೆಸಬೇಕು ಎಂದು ಹೇಳಿದರು.

ಹೋಬಳಿಗೆ ನೇಮಕವಾದ ನೋಡಲ್ ಅಧಿಕಾರಿಗಳು ಇಲ್ಲಿಯವರೆಗೂ ಹಳ್ಳಿಗಳಿಗೆ ಬಂದಿಲ್ಲ. ನಮ್ಮ ಸಮಸ್ಯೆಯನ್ನು ಆಲಿಸಿಲ್ಲ ಎಂದು ಕೆಲ ಗ್ರಾಮಸ್ಥರು ಸಭೆಯಲ್ಲಿ ಆರೋಪಿಸಿದರು. ಆಗ ಸ್ಥಳದಲ್ಲೇ ಇದ್ದ ನೂಡಲ್ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡು  ಜಿಲ್ಲಾಧಿಕಾರಿ  ಮನೋಜ ಜೈನ್ ಸಾರ್ವಜನಿಕರ ಸಮಸ್ಯೆಗೆ ಸ್ಪಂಧಿಸದಿದ್ದಲ್ಲಿ ಅಮಾನತ್ತು ಮಾಡುವುದಾಗಿ ಎಚ್ಚರಿಕೆ ನೀಡಿದರು. 

ಟ್ಯಾಂಕರ್ ನೀರು: ಕೆಲ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿರುವ ದೂರು ಬಂದ ಹಿನ್ನೆಲೆಯಲ್ಲಿ ಟ್ಯಾಂಕರ ಮೂಲಕ ನೀರನ್ನು ಸರಬರಾಜು ಮಾಡುವಂತೆ ಸಭೆಯಲ್ಲಿ ಆದೇಶ ಮಾಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ವಿಕಾಸ ಕಿಶೋರ ಸುರಾಳಕರ, ವಿಶೇಷ ತಹಸೀಲ್ದಾರ ಪ್ರಕಾಶ ಹೊಸಮನಿ, ಪ್ರಭಯ್ಯಸ್ವಾಮಿ, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಪಿಡಿಓಗಳು ಸೇರಿದಂತೆ ಇನ್ನು ಅನೇಕ ಅಧಿಕಾರಿಗಳು ಇದ್ದರು.

ಜಿಲ್ಲಾಧಿಕಾರಿಗೆ ಮುತ್ತಿಗೆ
ಯಾದಗಿರಿ: ಬನದ ರಾಚೋಟೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬರ ಪರಿಹಾರ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದ್ದ ಜಿಲ್ಲಾಧಿಕಾರಿ ಮನೋಜ ಜೈನ್ ಅವರಿಗೆ ತಾಲ್ಲೂಕಿನ ಹಿರೇವಡಗೇರಾ ಗ್ರಾಮಸ್ಥರು ಮುತ್ತಿಗೆ ಹಾಕಿದರು.

ಗ್ರಾಮದಲ್ಲಿ ಕಳೆದ ಹಲವು ತಿಂಗಳುಗಳಿಂದ ಕುಡಿಯುವ ನೀರಿನ ಸಮಸ್ಯೆ ಇದೆ. ಇದನ್ನು ಯಾರು ನಿವಾರಣೆ ಮಾಡುತ್ತಿಲ್ಲ ಎಂದು ಆರೋಪಿಸಿದರು. ಸಮಸ್ಯೆಯನ್ನು ಕೂಡಲೇ ಬಗೆಹರಿಸುವುದಾಗಿ ಭರವಸೆಯನ್ನು ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT