ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಮಹತ್ವವನ್ನರಿಯೋ...

ಇರುವ ನೀರನ್ನು ಬೇಕಾಬಿಟ್ಟಿ ಬಳಸಿದಲ್ಲಿ ತಾಪತ್ರಯ ಕಟ್ಟಿಟ್ಟ ಬುತ್ತಿ
Last Updated 5 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಅದೊಂದು ಸಾರ್ವಜನಿಕ ನಲ್ಲಿ. ಬಾಯಾರಿದ ಮನುಷ್ಯನೊಬ್ಬ ಬಂದು ನಲ್ಲಿ ತೆರೆದು ಬೊಗಸೆ ಬೊಗಸೆ ನೀರು ಕುಡಿಯುತ್ತಾನೆ. ತನ್ನ ದಾಹ ತಣಿದ ನಂತರ ನಲ್ಲಿ ಮುಚ್ಚದೇ ನಡೆದು ಬಿಡುತ್ತಾನೆ, ನೀರು ಸುರಿಯುತ್ತಲೇ ಇರುತ್ತದೆ. ಅದನ್ನೇ ನೋಡುತ್ತಿದ್ದ ಕೋತಿಯೊಂದು ಓಡೋಡಿ ಬಂದು ನಲ್ಲಿ ಮುಚ್ಚಿ ನೀರು ಪೋಲಾಗುವುದನ್ನು ತಡೆಯುತ್ತದೆ!

ಮೊನ್ನೆ ಯಾರೋ ವಾಟ್ಸ್‌ಆ್ಯಪ್‌ನಲ್ಲಿ ಕಳಿಸಿದ್ದ ವಿಡಿಯೊ ಒಂದರಲ್ಲಿ ಕಂಡ ನೋಟ ಇದು. ವಾನರನಿಂದ ನರ ವಿಕಾಸ ಹೊಂದುವುದು ಮತ್ತೊಮ್ಮೆ ಅಗತ್ಯವಾಗಿ ಆಗಬೇಕಾಗಿದೆ ಎನಿಸಿ ಆ ಬಗ್ಗೆ ಕಣ್ಣುಮುಚ್ಚಿ ಯೋಚನೆಗೀಡಾದಾಗ ದಿನವೂ ಬೆಳ್ಳಂಬೆಳಿಗ್ಗೆ ಕಾಣುತ್ತಿದ್ದ ನೋಟ ರೆಪ್ಪೆಗಳ ಹಿಂದೆ ಬಿಚ್ಚಿಕೊಂಡಿತು.

ಗ್ರಾಮ ಪಂಚಾಯಿತಿಯವರು ಅಲ್ಲಲ್ಲಿ ಅಳವಡಿಸಿದ ನಲ್ಲಿಗಳಲ್ಲಿ ಮನೆಯ ಪಕ್ಕದ ನಲ್ಲಿಯೂ ಒಂದು. ದಿನವೂ ಸೂರ್ಯೋದಯಕ್ಕೆ ಮೊದಲು ನಾನು ಬಾಗಿಲಿಗೆ ರಂಗವಲ್ಲಿ ಇಡುವಾಗಲೇ ಓಣಿಯುದ್ದಕ್ಕೂ ಹಳ್ಳದಂತೆ ಹರಿದುಬರುತ್ತದೆ ಆ ನಲ್ಲಿಯ ನೀರು. ಅದರ ಹರಿವು ಸ್ಥಗಿತಗೊಳ್ಳುತ್ತಿದ್ದುದು ಸೂರ್ಯಾಸ್ತವಾಗಿ ಅದೆಷ್ಟೋ ಹೊತ್ತಾದ ನಂತರ. ಬಿಂದಿಗೆ ತುಂಬಿದರೂ ಜನ ನಲ್ಲಿಯನ್ನು ಬಂದ್ ಮಾಡುತ್ತಿರಲಿಲ್ಲವಾದ ಕಾರಣ, ನೀರು ವೃಥಾ ಹರಿದು ಹೋಗುವ ದೃಶ್ಯ ಸರ್ವೆಸಾಮಾನ್ಯವಾಗಿತ್ತು.

ಹೀಗೆ ಸತತವಾಗಿ ಹರಿಯುತ್ತಿದ್ದ ನಲ್ಲಿ ನೀರು ಒಂದು ತಿಂಗಳಿಂದ ನಿಂತು ಹೋಯಿತು. ಆ ನಲ್ಲಿಯ ಸುತ್ತಲಿನ ಜಾಗವೀಗ ಬರಡು ಭೂಮಿಯಂತೆ ಕಾಣುತ್ತಿದೆ. ಊರಿನ ಅನೇಕ ಸಾರ್ವಜನಿಕ ನಲ್ಲಿಗಳ ಜಾಗದ್ದೂ ಇದೇ ಕಥೆ. ಅಂತರ್ಜಲ ಕುಸಿತದಿಂದ ಕೊಳವೆ ಬಾವಿಗಳಿಗೆ ಅಳವಡಿಸಿದ ಮೋಟರ್ ಸುಟ್ಟು ನಲ್ಲಿಗಳೂ ಸ್ಥಗಿತಗೊಂಡಿದ್ದರ ಪರಿಣಾಮ ಇದು. ಇದು ನಮ್ಮೂರಿನದಷ್ಟೇ ಕಥೆಯಲ್ಲ. ನಿಮ್ಮೂರಲ್ಲೂ ಇಂಥದ್ದೊಂದು ವಿದ್ಯಮಾನವನ್ನು ಕಂಡಿರಬಹುದು.

ಈ ವರ್ಷ ಮಳೆ ಸರಿಯಾಗಿ ಬೀಳದೆ ಅಂತರ್ಜಲ ಮಟ್ಟ ಕುಸಿಯುತ್ತಾ ಸಾಗಿದೆ. ಕಡು ಬೇಸಿಗೆಗಿನ್ನೂ ಎರಡು ತಿಂಗಳಿರುವಾಗ ರಾಜ್ಯದಾದ್ಯಂತ ನದಿ, ಕೆರೆ, ಹಳ್ಳಕೊಳ್ಳಗಳು ಬರಿದಾಗತೊಡಗಿವೆ. ದಕ್ಷಿಣ ಭಾರತದ ಏಕೈಕ ಬಿಸಿನೀರಿನ ಕೊಳ ಎಂಬ ಹೆಗ್ಗಳಿಕೆಗೆ ಪಾತ್ರವಾದ ಪುತ್ತೂರು ತಾಲ್ಲೂಕಿನ ಇರ್ದೆ ಗ್ರಾಮದ ಬೇಂದ್ರತೀರ್ಥ ಕೂಡ ಬತ್ತಿ ಬರಿದಾಗಿದೆಯಂತೆ! ಇಂತಹ ಹೊತ್ತಿನಲ್ಲಿ ಇರುವ ನೀರನ್ನು ಬೇಕಾಬಿಟ್ಟಿ ಬಳಸಿದಲ್ಲಿ ತಾಪತ್ರಯ ಖಂಡಿತವಾಗಿಯೂ ತಪ್ಪಿದ್ದಲ್ಲ.

ಬರಗಾಲ ಈಗಾಗಲೇ ತೀವ್ರವಾಗಿದೆ. ಹೀಗಿರುವಾಗ, ಏಪ್ರಿಲ್–ಮೇ ತಿಂಗಳಲ್ಲಿ ಇನ್ನೆಂತಹ ಪರಿಸ್ಥಿತಿ ತಲೆದೋರುವುದೋ ಗೊತ್ತಿಲ್ಲ. ಇದನ್ನು ಅರಿತು, ಇರುವ ನೀರನ್ನು ಜಾಣತನದಿಂದ ಬಳಸಿದರೆ ಲೇಸು. ಇಲ್ಲದಿದ್ದರೆ ತ್ರಾಸ. ಬರ ಎದುರಿಸಲು ಸಮರ್ಥವಾದ ಮಾರ್ಗವೊಂದನ್ನು ನಾವೀಗ ಕಂಡುಕೊಳ್ಳಬೇಕಿದೆ. ಇದನ್ನು ಎರಡು ಹಂತಗಳಲ್ಲಿ ಮಾಡಬೇಕಿದೆ. ಮೊದಲಿಗೆ, ಈಗಿರುವ ಅಲ್ಪಸ್ವಲ್ಪ ನೀರನ್ನು ಜತನದಿಂದ ಕಾಯ್ದಿಟ್ಟುಕೊಳ್ಳಬೇಕು.

ಈ ನಿಟ್ಟಿನಲ್ಲಿ ಸಾರ್ವಜನಿಕ ನಲ್ಲಿಗಳಿಗೆ ಮಿತವಾಗಿ ನೀರು ಪೂರೈಕೆ ಮಾಡಬೇಕು. ಅಷ್ಟೇ ಅಲ್ಲ, ಜನ ಕೂಡ ಒಂದೇ ಒಂದು ಹನಿ ವ್ಯರ್ಥವಾಗದಂತೆ, ಆ ನೀರು ತಮ್ಮ ಮನೆ ಬಾವಿಯಿಂದ ದೊರೆತದ್ದು ಎಂಬಂತೆ ಬಳಸಬೇಕು. ಸಾರ್ವಜನಿಕ ನಲ್ಲಿಗಳು ಸೋರುತ್ತಿದ್ದರೆ ತಾವೇ ಮುಂದಾಗಿ ಸೋರಿಕೆ ತಪ್ಪಿಸಬೇಕು. ಇದನ್ನು ಮಾಡಲು, ತಮ್ಮಿಂದ ಆಗದಿದ್ದಲ್ಲಿ ಸಂಬಂಧಪಟ್ಟವರಿಗೆ ತಕ್ಷಣವೇ ತಿಳಿಸಬೇಕು. ನಲ್ಲಿಗಳ ನಿರ್ವಹಣೆ ಜವಾಬ್ದಾರಿ ಹೊತ್ತವರು ಒಡೆದುಹೋದವನ್ನು ತಡಮಾಡದೆ ಸರಿಪಡಿಸಬೇಕು.

ನೀರು ಬಿಡುವವರು ಸಮಯ, ವಿದ್ಯುತ್ ಹಾಗೂ ನೀರು ಸ್ವಲ್ಪವೂ ವ್ಯರ್ಥವಾಗದಂತೆ ಜಾಗೃತರಾಗಿರಬೇಕು.  ಹೀಗೆ ನೀರನ್ನು ಕಾಯ್ದುಕೊಳ್ಳದಿದ್ದಲ್ಲಿ ಮುಂದೊಂದು ದಿನ ಕುಡಿಯಲೂ ನೀರು ಸಿಗದೇ ಹೋಗಬಹುದು! ಈ ಸತ್ಯದ ಅರಿವು ಎಲ್ಲರಲ್ಲೂ ಮೂಡಬೇಕು. ಎರಡನೆಯದಾಗಿ, ಅಂತರ್ಜಲದ ಮಟ್ಟವನ್ನು ಹೆಚ್ಚಿಸುವ ಕಾರ್ಯವನ್ನು ಈಗಿನಿಂದಲೇ ಕೈಗೊಳ್ಳಬೇಕು. ಕೊಳವೆ ಬಾವಿಗಳ ಮುಖಾಂತರ ಎಷ್ಟು ನೀರನ್ನು ಭೂಮಿಯಿಂದ ಮೇಲೆತ್ತಿರುತ್ತೇವೆಯೋ ಅದರ ಎರಡರಷ್ಟು ಹೆಚ್ಚು ನೀರನ್ನು ಭೂಮಿಗಿಳಿಸುವ ಕಾರ್ಯವನ್ನು ಕೂಡ ನಾವು ಕೈಗೊಳ್ಳಬೇಕಿದೆ.

ಇದಕ್ಕೆ ಹಲವಾರು ಮಾರ್ಗಗಳಿವೆ. ಮನೆ ಚಾವಣಿಯಿಂದ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಹತ್ತಿರದ ಬಾವಿಗೋ ಟ್ಯಾಂಕ್‌ಗೋ ಹೋಗುವಂತೆ ಮಾಡುವುದರಿಂದ ಅಂತರ್ಜಲದ ಮರುಪೂರಣ ಆಗುತ್ತದೆ. ತೆರೆದ ಕೊಳವೆ ಬಾವಿಗಳನ್ನು ಮೇಲಿನಿಂದಷ್ಟೇ ಮುಚ್ಚಿ ನಂತರ ಅಲ್ಲಿಯೇ ಇಂಗು ಗುಂಡಿಯನ್ನೋ, ನೀರು ಮರುಪೂರಣ ಘಟಕವನ್ನೋ ಮಾಡಿದಲ್ಲಿ ಎಳೆ ಮಕ್ಕಳು ಅಲ್ಲಿ ಬಿದ್ದು ದುರ್ಮರಣ ಹೊಂದುವುದನ್ನು ತಪ್ಪಿಸುವುದಷ್ಟೇ ಅಲ್ಲ, ನಿರುಪಯುಕ್ತವೆಂದು ಕೈಬಿಡುವ ಅಂಥ ಕೊಳವೆ ಬಾವಿಗಳಲ್ಲಿ ಒಂದೆರಡು ವರ್ಷಗಳಲ್ಲಿ ನೀರು ಒಸರುವಂತೆ  ಮಾಡಬಹುದು.

ಬಯಲು ಪ್ರದೇಶ, ಖಾಲಿ ಜಮೀನಿನಂತಹ ಸ್ಥಳಗಳಲ್ಲಿ ಇಳಿಜಾರಿಗೆ ಅಡ್ಡಲಾಗಿ ಒಡ್ಡು ಕಟ್ಟುವ ಮೂಲಕ, ಕಂದಕಗಳನ್ನು ತೋಡುವ ಮೂಲಕ, ಇಂಗು ಗುಂಡಿಗಳನ್ನು ನಿರ್ಮಿಸುವುದರ ಮೂಲಕ ಮಳೆ ನೀರನ್ನು ಸಂಗ್ರಹಿಸಬಹುದು. ಹೀಗೆ ಮಳೆ ನೀರನ್ನು ತಡೆಹಿಡಿದು, ಅಂತರ್ಜಲವನ್ನು ಹೆಚ್ಚಿಸುವ ಕಾರ್ಯ ಸಮರೋಪಾದಿಯಲ್ಲಿ ನಡೆಯಬೇಕು. ಇದೊಂದು ಜನಾಂದೋಲನವಾಗಬೇಕು. ಅಂತರ್ಜಲವೆಂದರೆ ಬ್ಯಾಂಕ್ ಠೇವಣಿ ಇದ್ದಂತೆ. ಅದನ್ನು ಬೇಕಾದಾಗ ಬಳಸಿಕೊಳ್ಳಬಹುದು.

ರಾಜ್ಯದಲ್ಲಿ ಬರಗಾಲ ಎದುರಾದ ಕಾರಣದಿಂದಲೇ ಅಂತರ್ಜಲವನ್ನು ಹೆಚ್ಚಿಸುವ ಸಲುವಾಗಿ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ, ನೀರಿನ ಮರುಪೂರಣ ಘಟಕಗಳಿಗೆ (ರಿಚಾರ್ಜ್‌ ಸ್ಟ್ರಕ್ಚರ್) ಹಾಗೂ ಕಸಕಡ್ಡಿಗಳಿಂದ ಹೂತುಹೋಗಿ ಬತ್ತಿದ ಕೆರೆಗಳಲ್ಲಿ ಹೂಳೆತ್ತುವ ಕೆಲಸಗಳಿಗೆ ಮಹತ್ವ ನೀಡಿ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ.

ಈಗಾಗಲೇ ಇರುವ ಕೊಳವೆ ಬಾವಿಗಳಿಗೆ ಕೇಸಿಂಗ್ ಪೈಪಿನ ಸುತ್ತ 9 ಮೀಟರ್‌ ಉದ್ದ 9 ಮೀಟರ್  ಅಗಲ ಹಾಗೂ 9 ಮೀಟರ್ ಆಳದ ಹೊಂಡವನ್ನು ತೆಗೆಯುವುದು, ಹೊಂಡದ ತಳದಲ್ಲಿ ಅಥವಾ ಆಳದಲ್ಲಿ ದೊಡ್ಡಗಾತ್ರದ ಕಲ್ಲುಗಳನ್ನು ಹಾಕಿ ಅದರ ಮೇಲೆ 40 ಮೀ.ಮೀ. ಗಾತ್ರದ ಜಲ್ಲಿ ಕಲ್ಲುಗಳನ್ನು ಹಾಕಿ ಹೊಂಡವನ್ನು ಮುಚ್ಚಲಾಗುತ್ತದೆ. ಪರಿಣಾಮ ನೀರು ಹೆಚ್ಚುತ್ತದೆ. ಈ ತರಹದ ಘಟಕಗಳನ್ನು ತಯಾರಿಸಲು ಪ್ರತಿ ಫಲಾನುಭವಿಗೂ ಸರ್ಕಾರ  ಉದ್ಯೋಗ ಖಾತರಿ ಯೋಜನೆಯಲ್ಲಿ ಅಕುಶಲ ಕೂಲಿಗಾಗಿ ₹ 40 ಸಾವಿರ ಹಾಗೂ ಸಾಮಗ್ರಿಗಾಗಿ ₹ 28 ಸಾವಿರ (ಒಟ್ಟು ₹ 68 ಸಾವಿರ) ನೀಡುತ್ತಿದೆ. 

ಇದರಿಂದ ಬರಗಾಲದಲ್ಲಿ ರೈತರಿಗೆ ಕೆಲಸ ದೊರೆಯುತ್ತದೆ. ಜೊತೆಗೆ ಮುಂದಿನ ದಿನಗಳಲ್ಲಿ ಈ ಕೊಳವೆ ಬಾವಿಗಳು ಹೆಚ್ಚಿನ ಪ್ರಮಾಣದ ನೀರನ್ನು ಪಡೆಯುವಂತಾಗುತ್ತದೆ. ಅಷ್ಟೇ ಅಲ್ಲ ಬರಡಾದ ಕೊಳವೆ ಬಾವಿಗಳೂ ಈ ಕಾರ್ಯದಿಂದ ಮಳೆಗಾಲದಲ್ಲಿ ನೀರನ್ನು ಪಡೆದುಕೊಳ್ಳುವುದರಲ್ಲಿ ಸಂಶಯವಿಲ್ಲ. ಸರ್ಕಾರ ಒದಗಿಸುತ್ತಿರುವ ಇಂತಹ ಒಂದು ಸಹಾಯವನ್ನು ಗ್ರಾಮಸ್ಥರು ಬಳಸಿಕೊಂಡು ಊರು ಹಾಗೂ ಹೊಲಗಳಲ್ಲಿರುವ ಕೊಳವೆ ಬಾವಿಗಳ ಅಂತರ್ಜಲವನ್ನು ಹೆಚ್ಚಿಸುವ ಸದವಕಾಶವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿದೆ. ಒಟ್ಟಿನಲ್ಲಿ ಸರ್ಕಾರ ಮತ್ತು ಜನರು ಒಟ್ಟಿಗೆ ಸೇರಿ ನೀರಿನ ಮಹತ್ವವನ್ನರಿತು, ಅದರ ಬಳಕೆ ಮತ್ತು ಮರುಪೂರಣದಲ್ಲಿ ಅಗತ್ಯ ಆಸಕ್ತಿ ವಹಿಸಿ ಯೋಜನಾಬದ್ಧವಾಗಿ ದುಡಿದಲ್ಲಿ ಬರ ಎದುರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT