ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ

Last Updated 3 ಮೇ 2016, 6:32 IST
ಅಕ್ಷರ ಗಾತ್ರ

ಉಡುಪಿ: ನೀರಿನ ಸಂರಕ್ಷಣೆ ಹಾಗೂ ಮರುಪೂರಣ ಪ್ರತಿಯೊಬ್ಬರ ಕರ್ತವ್ಯ ಎಂದು ಮಣಿಪಾಲ್‌ ತಾಂತ್ರಿಕ ಸಂಸ್ಥೆಯ ಪ್ರಾಧ್ಯಾಪಕ  ಡಾ. ಎಚ್‌.ಎನ್‌. ಉದಯ ಶಂಕರ್‌ ಹೇಳಿದರು.

ರಾಜ್ಯ ನಗರಾಭಿವೃದ್ಧಿ ಸಂಸ್ಥೆಯು ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಎಂಜಿನಿಯರ್‌ಗಳು ಹಾಗೂ ಹಾಗೂ ಇತರ ಸಿಬ್ಬಂದಿಗೆ ಮಣಿಪಾಲದ ಎಂಐಟಿಯಲ್ಲಿ ಶನಿವಾರ ಏರ್ಪಡಿಸಿದ್ದ ‘ಮಳೆ ನೀರು ಕೊಯ್ಲು ಹಾಗೂ ಮರುಪೂರಣ’ ವಿಷಯ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.

ಜೀವ ಜಲ ಮಾನವ ಹಾಗೂ ಎಲ್ಲ ಜೀವರಾಶಿಗೆ ಪ್ರಕೃತಿಯು ನೀಡಿರುವ ಕೊಡುಗೆಯಾಗಿದೆ. ಇದನ್ನು ಮಿತವಾಗಿ ಬಳಸುವುದು, ನೀರಿನ ಮೂಲಗಳನ್ನು ಸಂರಕ್ಷಿಸುವುದು ಹಾಗೂ ಭೂಮಿಯ ಅಂರ್ತಜಲವನ್ನು ವೃದ್ಧಿಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಅಲ್ಲದೆ ಅಗತ್ಯ ಇರುವಷ್ಟು ಪ್ರಮಾಣದಲ್ಲಿ ಮಾತ್ರ ನೀರನ್ನು ಬಳಕೆ ಮಾಡಬೇಕು. ಕೊಳವೆ ಹಾಗೂ ತೆರೆದ ಬಾವಿಗಳಿಂದ ಅಗತ್ಯಕ್ಕಿಂತ ಹೆಚ್ಚು ನೀರನ್ನು ತೆಗೆಯಬಾರದು ಎಂದು ಹೇಳಿದರು.

ಮನೆ ನಿರ್ಮಾಣಕ್ಕೆ ಅನುಮತಿ ನೀಡುವಾಗ ಮಳೆ ನೀರು ಕೊಯ್ಲು ಮಾಡುವುದನ್ನು ಸ್ಥಳೀಯ ಸಂಸ್ಥೆಗಳು ಖಚಿತಪಡಿಸಿಕೊಳ್ಳಬೇಕಾಗಿದೆ. ಪಕ್ಕದ ತಮಿಳುನಾಡಿನಲ್ಲಿ ಈಗಾಗಲೇ ಮಳೆ ನೀರು ಕೊಯ್ಲನ್ನು ಕಡ್ಡಾಯ ಮಾಡಲಾಗಿದೆ. ಹೀಗೆ ಮಾಡುವುದರಿಂದ ನೀರಿನ ಕೊರತೆಯನ್ನು ನೀಗಿಸಬಹುದಾಗಿದೆ. ಮಳೆ ಪ್ರಾರಂಭವಾದ ಒಂದು ವಾರದ ನಂತರ ಸಂಗ್ರಹಿಸುವ ನೀರು ಅತ್ಯಂತ ಪರಿಶುದ್ಧವಾಗಿರುತ್ತದೆ. ಇದನ್ನು ಕುಡಿಯಲು ಹಾಗೂ ಇನ್ನಿತರ ಉದ್ದೇಶಗಳಿಗೆ ಬಳಸಿಕೊಳ್ಳಬಹುದು.

ಬೇಸಿಗೆಯಲ್ಲೂ ಸಹ ನದಿಗಳಲ್ಲಿ ನೀರು ಹರಿಯುವಂತೆ ಮಾಡಲು ಸಾಧ್ಯವಿದ್ದು, ನದಿ ಪಾತ್ರದಲ್ಲಿ ನೀರು ಇಂಗಿಸುವಿಕೆ ಮತ್ತು ಮರಗಳನ್ನು ನೆಡುವ ಮೂಲಕ ಇದನ್ನು ಸಾಕಾರಗೊಳಿಸಬಹುದು. ಅಮೆರಿಕದ ಕ್ಯಾಲಿಪೋರ್ನಿಯಾದ ನದಿಗಳಲ್ಲಿ ಈ ಪ್ರಯೋಗವನ್ನು ಯಶಸ್ವಿಯಾಗಿ ಮಾಡಲಾಗಿದೆ. ಕೆರೆಗಳಲ್ಲಿ ನೀರು ಇಂಗಿಸುವುದರಿಂದ ಸಮೀಪದ ಎಲ್ಲಾ ಬಾವಿಗಳಲ್ಲಿ ಸಮೃದ್ದ ನೀರು ಸಿಗಲಿದೆ. ಮಣಿಪಾಲದ ಮಣ್ಣಪಳ್ಳ ಕೆರೆ ಇರುವುದರಿಂದ ಸಮೀಪದ ಎಲ್ಲಾ ಮನೆಗಳ ಬಾವಿಗಳಲ್ಲಿ ಬೇಸಿಗೆಯಲ್ಲೂ ಸಮೃದ್ಧ ನೀರು ಲಭ್ಯವಿದೆ ಎಂದು ಹೇಳಿದರು.

ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಕಾರ್ಯಾಗಾರ ಉದ್ಘಾಟಿಸಿದರು. ಎಂಐಟಿಯ ಸಿವಿಲ್ ವಿಭಾಗದ ಮುಖ್ಯಸ್ಥ ಎಂ.ಡಿ. ಚಡಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಪ್ರಸನ್ನ, ಜಿಲ್ಲಾ ವಾರ್ತಾಧಿಕಾರಿ ಕೆ. ರೋಹಿಣಿ, ಪ್ರಾಧ್ಯಾಪಕ ನಾರಾಯಣ ಶೆಣೈ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರಾಜ್ಯ ನಗರಾಭಿವೃದ್ಧಿ ಸಂಸ್ಥೆಯ  ಬೋಧಕ ಎಚ್. ರಮೇಶ್ ಸ್ವಾಗತಿಸಿದರು. ಪ್ರಾಧ್ಯಾಪಕ ಬಾಲಕೃಷ್ಣ ಮದ್ದೋಡಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT