ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಲ್ಲದ ನೆಲದಲಿ ಹಾಲಿನ ಹೊಳೆ

Last Updated 28 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ಮುಗಳಿ ಗ್ರಾಮದಲ್ಲಿ ಹೈನುಗಾರಿಕೆ ಯಶಸ್ವಿ ಉದ್ಯಮವಾಗಿ ಪರಿವರ್ತಿತವಾಗುತ್ತಿದೆ. ಈ ಬದಲಾವಣೆ ಹಿಂದಿರುವ ಶಕ್ತಿ ಹಳ್ಳಿಯ ಯುವಕರ ಶ್ರಮ. ಎರಡು ಗ್ರಾಮಗಳಲ್ಲಿ ಈಗ ಸಾವಿರಕ್ಕೂ ಹೆಚ್ಚು ಹಸುಗಳಿದ್ದು, ಇಲ್ಲಿನ ಹಾಲು ಮಾರಾಟ ರಾಜ್ಯದ ಗಡಿ ದಾಟಿದೆ.

ಸುಮಾರು 250–300 ಕುಟುಂಬಗಳು ವಾಸಿಸುವ ಪುಟ್ಟ ಗ್ರಾಮಗಳವು. ಬೇಸಿಗೆಯಲ್ಲಿ ಕುಡಿಯುವ ಹನಿ ನೀರಿಗೂ ತತ್ವಾರ ಪಡುವ ಮಡ್ಡಿಗಾಡು ಪ್ರದೇಶ. ಮಳೆಯಾದರೆ ಮಾತ್ರವೇ ಹಸಿರಾಗುವ ಭೂಮಿ. ಆದರೆ, ಇಂತಹ ಬರಪೀಡಿತ ಗ್ರಾಮಗಳಲ್ಲಿ ಈಗ ಹಾಲಿನ ಹೊಳೆ ಹರಿಯುತ್ತಿದೆ. ನಿತ್ಯ ಏನಿಲ್ಲವೆಂದರೂ ಎಂಟು ಸಾವಿರ ಲೀಟರ್‌ ಹಾಲು ಉತ್ಪಾದನೆಯಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧೆಡೆ ಸರಬರಾಜು ಆಗುತ್ತಿದೆ.

ಇದು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಮುಗಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುಗಳಿ ಹಾಗೂ ಕಮತೇನಟ್ಟಿ ಗ್ರಾಮದ ಚಿತ್ರಣ. ಸತತ ಅನಾವೃಷ್ಟಿಯಿಂದ ಬರಪೀಡಿತ ಪ್ರದೇಶವೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಗ್ರಾಮಗಳಿವು. ಇದೇ ಚಿತ್ರಣವನ್ನು ಮನಸ್ಸಿನಲ್ಲಿಟ್ಟುಕೊಂಡು ಗ್ರಾಮವನ್ನು ಪ್ರವೇಶಿಸಿದರೆ, ಅಚ್ಚರಿಯಾಗುತ್ತದೆ. ಗ್ರಾಮ ಪ್ರವೇಶಿಸುತ್ತಿದ್ದಂತೆಯೇ ಹಸುಗಳ ಅಂಬಾ... ಎನ್ನುವ ದನಿ ಸ್ವಾಗತಿಸಿದರೆ, ಹಸುಗಳ ಪಾಲನೆ–ಪೋಷಣೆಯಲ್ಲಿ ಕೃಷಿಕರು ತಲ್ಲೀನರಾಗಿರುವ ದೃಶ್ಯ ಎಲ್ಲೆಡೆ ಕಾಣ ಸಿಗುತ್ತದೆ. ಇದಕ್ಕೆಲ್ಲಾ ಕಾರಣ, ಕೃಷಿಗೆ ಉಪ ಕಸುಬಾಗಿರುವ ಹೈನುಗಾರಿಕೆ ಇಲ್ಲಿ ಉದ್ಯಮದ ಸ್ವರೂಪ ಪಡೆದಿರುವುದು. ಎರಡೂ ಗ್ರಾಮಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಹಸುಗಳನ್ನು ಸಾಕಲಾಗಿದೆ. 

ಅಚ್ಚರಿಯ ಕ್ಷೀರಕ್ರಾಂತಿ
ಮುಗಳಿ ಗ್ರಾಮವೊಂದರಲ್ಲಿಯೇ ಬೆಳಿಗ್ಗೆ ಮತ್ತು ಸಂಜೆ ಸೇರಿದಂತೆ ಕನಿಷ್ಠ 6 ಸಾವಿರ ಲೀಟರ್‌ ಹಾಗೂ ಕಮತೇನಟ್ಟಿಯಲ್ಲಿ 2 ಸಾವಿರ ಲೀಟರ್‌ಗೂ ಹೆಚ್ಚು ಹಾಲು ಉತ್ಪಾದನೆ ಆಗುತ್ತಿದೆ. ಇಲ್ಲಿಂದ ಕರ್ನಾಟಕ ಹಾಲು ಒಕ್ಕೂಟ, ಆದಿತ್ಯ ಮಿಲ್ಕ್‌ ಹಾಗೂ ಮಹಾರಾಷ್ಟ್ರದ ವಾರಣಾ ಮೊದಲಾದ ಕಡೆಗಳಲ್ಲಿ ಹಾಲು ಸರಬರಾಜು ಆಗುತ್ತದೆ.

ರೈತರು ಮನೆಗೆ ಒಂದೆರೆಡು ಹಸು, ಎಮ್ಮೆಗಳನ್ನು ಸಾಕಿ ಕುಟುಂಬಕ್ಕೆ ಬೇಕಾಗುವ ಹೈನುಂಡು ಉಳಿದ ಅಷ್ಟಿಷ್ಟು ಹಾಲು ಮಾರಾಟ ಮಾಡುವುದು ಸಾಮಾನ್ಯ. ಆದರೆ, ಮುಗಳಿ ಗ್ರಾಮದಲ್ಲಿ ಕೃಷಿಕರ ಉಪಕಸುಬು ಹೈನುಗಾರಿಕೆ ಇಂದು ಉದ್ಯಮವಾಗಿ ಪರಿವರ್ತಿತವಾಗಿರುವ ಹಿಂದೆ ಸುಶಿಕ್ಷಿತ ಯುವಕರ ಶ್ರಮ ಅಡಗಿದೆ. ಗ್ರಾಮದ ಪದವೀಧರರು ಮಾಡಿರುವ ಈ ಕ್ಷೀರ ಕ್ರಾಂತಿ ಇತರ ಕೃಷಿಕರಿಗೆ ಮಾದರಿಯಾಗಿದೆ.

ಪದವೀಧರರ ಪರಿಶ್ರಮ
ಹಾಸಿ ಹೊದ್ದುಕೊಳ್ಳುವಷ್ಟು ಬಡತನದಿಂದ ಬಳಲುತ್ತಿದ್ದ ಕುಟುಂಬಗಳವು. ಕಷ್ಟದಲ್ಲೇ ಪದವಿ ಶಿಕ್ಷಣ ಪಡೆದರೂ ಕೆಲಸ ದೊರಕದೇ ನಿರಾಸೆ. ಆದರೆ, ಇದರಿಂದ ಹತಾಶರಾಗದ ಯುವಕರು ಕೈ ಕಟ್ಟಿ ಕುಳಿತುಕೊಳ್ಳಲಿಲ್ಲ. ಕ್ಷೀರ ಕ್ರಾಂತಿಗೆ ಕೈ ಹಾಕಿದರು. ಸುಶಿಕ್ಷಿತರೂ ಹೈನುಗಾರಿಕೆ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಜೊತೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ನೂರಾರು ಜನರಿಗೆ ಉದ್ಯೋಗ ಸೃಷ್ಟಿ ಮಾಡಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ. ಎಲ್ಲ ಗ್ರಾಮಗಳಲ್ಲೂ ಕೃಷಿಕರು ಹಸು, ಎಮ್ಮೆಗಳನ್ನು ಸಾಕುತ್ತಾರೆ. ಆದರೆ, ಪ್ರತಿ ಗ್ರಾಮದಲ್ಲಿ ಕ್ಷೀರ ಕ್ರಾಂತಿ ಆಗುವುದಿಲ್ಲ.

 ತಮ್ಮಾಣಿ ಬಂಬಲವಾಡಿ ಎಂಬುವರು ನೌಕರಿ ಸಿಗದೇ ಇದ್ದಾಗ ಹತಾಶರಾಗದೇ 2004ರಲ್ಲಿ 15 ಹಸುಗಳನ್ನು ಸಾಕುವ ಮೂಲಕ ಮುಗಳಿ ಗ್ರಾಮದಲ್ಲಿ ಕ್ಷೀರ ಕ್ರಾಂತಿಗೆ ನಾಂದಿ ಹಾಡಿದರು. ಸದ್ಯ ಅವರ ಫಾರಂನಲ್ಲಿ 110 ಹಸುಗಳಿವೆ. ನಿತ್ಯವೂ ಒಂದು ಸಾವಿರಕ್ಕೂ ಹೆಚ್ಚು ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ. ಕಾಲ ಕ್ರಮವಾಗಿ ಬಿ.ಎ., ಡಿ.ಇಡಿ ಶಿಕ್ಷಣ ಪಡೆದಿರುವ ಮಾರುತಿ ಕಳಸಣ್ಣವರ, ಬಿ.ಎ., ಬಿ.ಇಡಿ ಪದವೀಧರ ಮಲ್ಲಪ್ಪಾ ಕೊಟಬಾಗಿ, ಆರ್ಕಿಟೆಕ್ಟ್‌ ಡಿಪ್ಲೊಮಾ ಪದವೀಧರ ಚಂದ್ರಶೇಖರ ಬಂಬಲವಾಡಿ, ಮೊದಲಾದ 20ಕ್ಕೂ ಹೆಚ್ಚು ವಿದ್ಯಾವಂತ ಯುವಕರೂ ಹೈನುಗಾರಿಕೆ ಆರಂಭಿಸಿದ್ದು, ಗ್ರಾಮದಲ್ಲಿ ಸದ್ಯ 35ಕ್ಕೂ ಹೆಚ್ಚು ಡೇರಿ ಫಾರಂಗಳಿವೆ. ಅಲ್ಲದೇ ಇನ್ನುಳಿದ ಬಹುತೇಕ ರೈತ ಕುಟುಂಬಗಳಿಗೂ ಹೈನುಗಾರಿಕೆ ಜೀವನಾಧಾರವಾಗಿದೆ. ಮನೆಗೆ ಕನಿಷ್ಠ ನಾಲ್ಕಾರು ಹಸು, ಎಮ್ಮೆಗಳನ್ನು ಸಾಕಿ ಆರ್ಥಿಕ ಸ್ವಾವಲಂಬನೆಯತ್ತ ಸಾಗುತ್ತಿದ್ದಾರೆ.

ಆರ್ಥಿಕ ಸಬಲತೆ
ಬಡತನದ ಕಣ್ಣೀರಿನಲ್ಲಿ ಕೈ ತೊಳೆದುಕೊಳ್ಳುತ್ತಿದ್ದ ಕೃಷಿಕರಿಗೆ ಈಗ ಕೈ ತುಂಬ ಕಾಸು ಸಿಗುತ್ತಿದೆ. ನಿತ್ಯವೂ ಸಾವಿರಾರು ರೂಪಾಯಿ ಆದಾಯ ಪಡೆಯುತ್ತಿದ್ದಾರೆ. ಹಸುವೊಂದು ಕರು ನೀಡಿದ ಒಂದು ವರ್ಷದ ತನಕ ನಿತ್ಯವೂ 16 ರಿಂದ 18 ಲೀಟರ್‌ ಹಾಲು ನೀಡುತ್ತದೆ. ಶೇ75 ರಷ್ಟು ಉತ್ಪಾದನಾ ವೆಚ್ಚವಾದರೆ ಶೇ 25 ರಷ್ಟು ಆದಾಯ ಲಭಿಸುತ್ತದೆ ಎಂಬುದು ಕೃಷಿಕರ ಲೆಕ್ಕಾಚಾರ. ಎಚ್‌ಎಫ್‌ ತಳಿಯ ಹಸುವೊಂದಕ್ಕೆ ಕನಿಷ್ಠ  ₹ 50 ಸಾವಿರ ಬೆಲೆಯಿದ್ದು, ಅಷ್ಟೊಂದು ಬಂಡವಾಳ ಹೂಡಲು ಗ್ರಾಮದ ಯುವಕರಲ್ಲಿ ಆರ್ಥಿಕ ಸಬಲತೆ ಇರಲಿಲ್ಲ. ಬ್ಯಾಂಕ್‌ಗಳಿಂದ ಸಾಲ ಪಡೆದು ಹಸು ಖರೀದಿಸಿ ಹೈನುಗಾರಿಕೆ ಆರಂಭಿಸಿದ ಯುವಕರು ಇಂದು ಸಾಲ ಮರುಪಾವತಿ ಮಾಡಿ ಪ್ರಗತಿಯತ್ತ ಮುನ್ನಡೆಯುತ್ತಿದ್ದಾರೆ.

ಭೂ ಫಲವತ್ತತೆ
ಹೈನುಗಾರಿಕೆ ಮುಗಳಿ ಮತ್ತು ಕಮತೇನಟ್ಟಿ ಗ್ರಾಮಸ್ಥರ ಆರ್ಥಿಕ ಸಬಲತೆ ಮಾತ್ರವಲ್ಲ, ಭೂಮಿಯ ಫಲವತ್ತತೆ ಹೆಚ್ಚಿಸಲೂ  ಸಹಕಾರಿಯಾಗಿದೆ. ಸೆಗಣಿ, ಗೊಬ್ಬರ, ಗೋಮೂತ್ರ ಮೊದಲಾದ ತ್ಯಾಜ್ಯಗಳನ್ನು ಭೂಮಿಗೆ ಗೊಬ್ಬರವಾಗಿ ನೀಡುವ ನೀರಾವರಿ ಸೌಕರ್ಯ ಹೊಂದಿರುವ ರೈತರು ಹೆಚ್ಚಿನ ಬೆಳೆ ಇಳುವರಿಯನ್ನೂ ಪಡೆದುಕೊಳ್ಳುತ್ತಿದ್ದಾರೆ. ಡೇರಿ ಫಾರಂ ಹೊಂದಿರುವ ರೈತರು ಸೆಗಣಿ ಗೊಬ್ಬರದಿಂದಲೂ ಹಣ ಗಳಿಸುತ್ತಿದ್ದಾರೆ.
***
1995ರಲ್ಲಿ ಶೈಕ್ಷಣಿಕ ಪ್ರಮಾಣ ಪತ್ರಗಳನ್ನು ಹಿಡಿದುಕೊಂಡು ಹತ್ತಾರು ಕಡೆಗಳಲ್ಲಿ ಅಲೆದಾಡಿ ದರೂ ನೌಕರಿ ಸಿಗಲಿಲ್ಲ. ಇದರಿಂದ ಹತಾಶನಾಗದೇ ಕೈಕಟ್ಟಿಯೂ ಕುಳಿತುಕೊಳ್ಳಲಿಲ್ಲ. ಕುಟುಂಬದ ಆರ್ಥಿಕ ಸ್ಥಿತಿ ಶೋಚನೀಯವಾಗಿತ್ತು.

ಹೈನುಗಾರಿಕೆ ಆರಂಭಿಸುವ ಯೋಚನೆ ಹೊಳೆದಿದ್ದೇ ತಡ ಒಂದೆರೆಡು ಹಸುಗಳೊಂದಿಗೆ ಹೈನೋದ್ಯಮ ಆರಂಭಿಸಿದ್ದೆ. 2004ರಲ್ಲಿ 15, 2008 ರಲ್ಲಿ 30 ಹಸುಗಳಾದವು. ಈಗ 110 ಹಸು, ಕರುಗಳಿವೆ. ಕುಟುಂಬ ಆರ್ಥಿಕ ಸ್ಥಿತಿ ಸುಧಾರಿಸಿದೆ. ಒಂದು ಎಕರೆ ಜಮೀನು ಹೊಂದಿದ್ದ ಕುಟುಂಬವೀಗ 15 ಎಕರೆ ಭೂಮಿ ಗಳಿಸಿದೆ. ಇದು ಸಾಧ್ಯವಾಗಿದ್ದು ಹೈನುಗಾರಿಕೆಯಿಂದಲೇ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ತಮ್ಮಣ್ಣಾ ಬಂಬಲವಾಡಿ.
***
ಮಳೆಯಾಶ್ರಿತ ಮತ್ತು ಅರೆ ನೀರಾವರಿ ಕೃಷಿ ಭೂಮಿ ಹೊಂದಿರುವ ಮುಗಳಿ ಮತ್ತು ಕಮತೇನಟ್ಟಿಯ ಕೃಷಿಕರಿಗೆ ಸಾಲ ನೀಡಿದರೆ ಮರು ಪಾವತಿ ಮಾಡಿಕೊಳ್ಳುವುದು ಕಷ್ಟ ಎಂಬ ಆರೋಪವಿತ್ತು. ಆದರೆ, ಕಳೆದೆರಡು ವರ್ಷಗಳಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಸಿಬ್ಬಂದಿ ಎರಡು ಗ್ರಾಮಗಳ ಕೃಷಿಕರ ಮನೆ ಮನೆಗೆ ಹೋಗಿ ಅಧ್ಯಯನ ನಡೆಸಿ ಸಾಲ ನೀಡಿದ್ದೇವೆ. ಎರಡೂ ಗ್ರಾಮಗಳ ಒಟ್ಟು 142 ರೈತರಿಗೆ ಹೈನುಗಾರಿಕೆಗೆ ಉತ್ತೇಜನ  ನೀಡಲು ₹78.70 ಲಕ್ಷದಷ್ಟು  ಆರ್ಥಿಕ ನೆರವು ನೀಡಿದ್ದೇವೆ. ಶೇ 100 ರಷ್ಟು ಸಾಲ ಮರು ಪಾವತಿ ಆಗುತ್ತಿದೆ.

ಹೈನುಗಾರಿಕೆಯಿಂದ ಕೃಷಿಕರ ಜೀವನಮಟ್ಟ ಸುಧಾರಣೆಯಾಗಿದೆ. ಗ್ರಾಮಗಳಲ್ಲಿ ಉದ್ಯೋಗ ಸೃಷ್ಟಿಯಾಗಿದೆ. ಹೈನುಗಾರಿಕೆಯ ಟ್ರೆಂಡ್‌ ಬೆಳೆದಿದೆ. ಯುವಕರು ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಗ್ರಾಮದಲ್ಲೇ ಹಾಲಿನ ಉತ್ಪನ್ನಗಳ ತಯಾರಿಕೆ ಘಟಕ ಸ್ಥಾಪನೆ ಮಾಡಲು ಬ್ಯಾಂಕ್‌ನಿಂದ ರೈತರಿಗೆ ಸಾಮೂಹಿಕ ಸಾಲ ನೀಡಲು ಚಿಂತನೆ ನಡೆದಿದೆ.
–ಪ್ರಕಾಶ ಎಂ.ನಡುಗೇರಿ, ಶಾಖಾಧಿಕಾರಿ ಯಾದಗೂಡ ಶಾಖೆ, ಕೆವಿಜಿ ಬ್ಯಾಂಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT