ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಮತ್ತು ಸ್ವಚ್ಛತೆಗೆ ಸಂಚಕಾರ

ಗ್ರಾಮ ಪಂಚಾಯಿತಿ ನೇಮಕಾತಿ ಗೊಂದಲ
Last Updated 2 ನವೆಂಬರ್ 2014, 19:30 IST
ಅಕ್ಷರ ಗಾತ್ರ

ವಿಕೇಂದ್ರೀಕರಣದ ಮಾತನಾಡುತ್ತಲೇ ಹಿಂಬಾಗಿಲಿನಿಂದ ಕೇಂದ್ರೀಕರಣವನ್ನು ಹೇರುವ ತಂತ್ರವನ್ನು ಎಲ್ಲಾ ಸರ್ಕಾರಗಳು ಆಗಿಂದಾಗ ಮಾಡುತ್ತಲೇ ಇರುತ್ತವೆ. ಇದರ ಹೊಸ ಉದಾಹರಣೆ ಗ್ರಾಮ ಪಂಚಾಯಿತಿಯ ಅಡಿಯಲ್ಲಿ ಕೆಲಸ ಮಾಡುವ ವಾಟರ್‌ಮನ್ ಮತ್ತು ಊರಿನ ಕಸ ಗುಡಿಸುವ ಕಾರ್ಮಿಕರ ನೇಮಕಾತಿ ವಿಧಾನವನ್ನು ಸರ್ಕಾರ ನಿರ್ವಚಿಸಿರುವುದು. ಪರಿಣಾಮವಾಗಿ ಕರ್ನಾಟಕಾದ್ಯಂತ ಒಂದು ದಶಕಕ್ಕೂ ಮೀರಿ ಗ್ರಾಮ ಪಂಚಾಯಿತಿಗಳಿಗಾಗಿ ದುಡಿದ ಅನೇಕ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರವೇನೋ ಇದನ್ನು ಅನಧಿಕೃತ ನೇಮಕಾತಿ ಎಂದು ಹಿಂದಿನ ಸುತ್ತೋಲೆಗಳನ್ನು ಎತ್ತಿ ತೋರಿಸುತ್ತಿದೆ. ಆದರೆ ಸ್ಥಳೀಯ ವಾಸ್ತವಗಳು ಸಂಪೂರ್ಣವಾಗಿ ಬೇರೆಯೇ ಆಗಿವೆ.

ಗ್ರಾಮ ಪಂಚಾಯಿತಿಗಳು ತಮಗೆ ಬೇಕಿರುವ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡ ಮೇಲೆ ಅವುಗಳಿಗೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅನುಮೋದನೆ ಪಡೆಯಬೇಕು. ಹೀಗೆ ಅನುಮೋದನೆ ಪಡೆಯದ ಪ್ರಕರಣಗಳ ಸಂಖ್ಯೆ ಬಹಳ ದೊಡ್ಡದಿದೆ. ಅನೇಕ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳ ಮಟ್ಟದಲ್ಲಿಯೇ ಈ ಪ್ರಸ್ತಾವನೆಗಳು ಉಳಿದುಕೊಂಡಿವೆ ಎಂಬ ಅಂಶ ಸರ್ಕಾರದ ಗಮನಕ್ಕೆ ಬಂತು. ಹೀಗಾದಾಗ ಇವುಗಳು ತ್ವರಿತಗತಿಯಲ್ಲಿ ಮತ್ತು ನ್ಯಾಯಬದ್ಧವಾಗಿ ಅನುಮೋದನೆಗಳು ದೊರೆಯುವಂತೆ ನೋಡಿಕೊಳ್ಳಬೇಕು. ಅದರ ಬದಲಿಗೆ ಸರ್ಕಾರ ಹೊಸ ನಿಯಮಗಳನ್ನೇ ರೂಪಿಸಿಬಿಟ್ಟಿದೆ. ಇದು ಕೇವಲ ಹೊಸ ನೇಮಕಾತಿಗಳಿಗೆ ಅನ್ವಯವಾಗುತ್ತಿರುವಂತೆ ಮೇಲ್ನೋಟಕ್ಕೆ ಕಾಣಿಸಿದರೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಳೆಯ ಪ್ರಕರಣಗಳಿಗೆ ಅನುಮೋದನೆ ನೀಡುವಾಗಲೂ ಇದನ್ನೇ ಅನುಸರಿಸಬೇಕಾದ ಅಗತ್ಯವೂ ಸೃಷ್ಟಿಯಾಗಿದೆ.

ಗ್ರಾಮ ಪಂಚಾಯಿತಿಗಳು ತಮ್ಮ ಮಿತಿಯಲ್ಲಿ ಲಭ್ಯವಿರುವ ಮಾನವ ಸಂಪನ್ಮೂಲವನ್ನು ನೋಡಿಕೊಂಡು ವಾಟರ್ ಮನ್ ಮತ್ತು ಗುಡಿಸುವವರನ್ನು ನೇಮಕ ಮಾಡಿಕೊಂಡಿವೆ. ಈ ಕೆಲಸಗಳಿಗೆ ಗ್ರಾಮ ಪಂಚಾಯಿತಿಗಳು ನೀಡುವ ಸಂಬಳವೂ ದೊಡ್ಡದೇನಲ್ಲ. ಹೊರಗೆ ದುಡಿದರೆ ಹೆಚ್ಚು ದೊರೆಯುತ್ತದೆ ಎಂಬ ಕಾರಣಕ್ಕೆ ಈ ಕೆಲಸಗಳನ್ನು ಒಪ್ಪಿಕೊಂಡು ಬರುವವರ ಸಂಖ್ಯೆಯೂ ಕಡಿಮೆಯೇ. ಎಲ್ಲದಕ್ಕಿಂತ ಹೆಚ್ಚಾಗಿ ಹತ್ತಾರು ವರ್ಷಗಳಿಂದ ದುಡಿಯುತ್ತಿರುವ ಇವರ ನೇಮಕಾತಿಗೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅನುಮೋದನೆಯನ್ನು ಏಕೆ ಪಡೆದುಕೊಳ್ಳಲಾಗಿಲ್ಲ ಎಂಬುದು ಕುತೂಹಲಕರ ವಿಚಾರ. ಏಕೆಂದರೆ ಸರಿ ಸುಮಾರು ಇವರ ಜೊತೆಯೇ ನೇಮಕಗೊಂಡಿರುವ ಎಲ್ಲಾ ಬಿಲ್ ಕಲೆಕ್ಟರ್‌ಗಳ ನೇಮಕಾತಿಗೆ ಅಧಿಕೃತ ಅನುಮೋದನೆಗಳು ದೊರೆತಿವೆ. ಆದರೆ ಈ ಕೆಳ ಹಂತದ ನೌಕರರಿಗೆ ಮಾತ್ರ ಈ ಭಾಗ್ಯ ದೊರೆತಿಲ್ಲ.


ಇದೇಕೆ ಹೀಗಾಗಿದೆ ಎಂಬುದನ್ನು ಶೋಧಿಸಿದರೆ ತಿಳಿದುಬರುವ ವಿಷಯಗಳು ಎರಡು. ಮೊದಲನೆಯದ್ದು ಬಿಲ್ ಕಲೆಕ್ಟರ್ ಹುದ್ದೆಗೆ ಬಂದಿರುವ ಅನೇಕರು ಗ್ರಾಮ ಪಂಚಾಯಿತಿಗಳ ಕಾರ್ಯದರ್ಶಿ ಅಥವಾ ಅಧ್ಯಕ್ಷರು ಮತ್ತಿತರ ಜನಪ್ರತಿನಿಧಿಗಳ ಸಂಬಂಧಿಕರು. ಇವರ ಹುದ್ದೆಗೆ ಕಾಲಕಾಲಕ್ಕೆ ಅನುಮೋದನೆಗಳನ್ನು ಪಡೆದುಕೊಳ್ಳಲು ಆಯಾ ಕಾರ್ಯದರ್ಶಿಗಳು ಮತ್ತು ಜನಪ್ರತಿನಿಧಿಗಳೂ ಆಸಕ್ತಿ ತೋರಿಸಿದ್ದಾರೆ. ಕೆಳ ಹಂತದ ನೌಕರಿಗೆ ಬಂದಿರುವವರಲ್ಲಿ ಹೆಚ್ಚಿನವರು ಈ ಬಗೆಯ ಅನುಮೋದನೆ ಇತ್ಯಾದಿಗಳ ಕುರಿತು ತಲೆಕೆಡಿಸಿಕೊಳ್ಳದವರು. ತಿಂಗಳ ಸಂಬಳಕ್ಕೆ ತೃಪ್ತಿ ಪಡುವವರು. ಇವರಲ್ಲಿಯೂ ಅನೇಕರ ನೇಮಕಾತಿಗಳನ್ನು ಅನುಮೋದಿಸಬೇಕೆಂಬ ಪ್ರಸ್ತಾಪಗಳು ಗ್ರಾಮ ಪಂಚಾಯಿತಿಯಿಂದ ಹೋಗಿದ್ದರೂ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳಲ್ಲಿ ಇವು ಕೊಳೆಯುತ್ತಾ ಬಿದ್ದಿವೆ. ಕಾಲಕಾಲಕ್ಕೆ ಬಿಲ್ ಕಲೆಕ್ಟರ್ ಹುದ್ದೆಗೆ ಅನುಮೋದನೆ ನೀಡುತ್ತಿದ್ದ ಜಿಲ್ಲಾ ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮ ಪಂಚಾಯಿತಿಗಳಲ್ಲಿ ಬೇರೆ ನೌಕರರಿಲ್ಲವೇ ಎಂಬ ಪ್ರಶ್ನೆಯನ್ನೇಕೆ ಕೇಳಿಲ್ಲ ಎಂಬುದು ಮತ್ತೂ ಆಶ್ಚರ್ಯಕರ ಸಂಗತಿ.

ಇವೆಲ್ಲದರ ಪರಿಣಾಮವಾಗಿ ಕೆಲಸ ಕಳೆದುಕೊಳ್ಳುವವರ ಸಂಖ್ಯೆ ಹಲವು ಸಾವಿರಗಳಷ್ಟಿದೆ. ಇಷ್ಟರ ಮೇಲೆ ಸರ್ಕಾರದ ಹೊಸ ನಿಮಯಗಳು ಇನ್ನಷ್ಟು ಗೊಂದಲವನ್ನು ಸೃಷ್ಟಿಸಿವೆ. ಹೊಸ ನಿಯಮಗಳು ಹೇಳುವಂತೆ ವಾಟರ್ ಮನ್ ಹುದ್ದೆಗೆ ನೇಮಕ ಮಾಡಿಕೊಳ್ಳುವಾತ ಎಸ್‌ಎಸ್ಎಲ್‌ಸಿ ಪಾಸಾಗಿರಬೇಕು. ಹಾಗೆಯೇ ಗುಡಿಸುವ ಕೆಲಸಕ್ಕೆ ನೇಮಕಗೊಳ್ಳಬೇಕಾದವರು ಕನಿಷ್ಠ ಏಳನೇ ತರಗತಿ ಉತ್ತೀರ್ಣರಾಗಿರಬೇಕು. ಗ್ರಾಮ ಪಂಚಾಯಿತಿಗಳ ಎದುರು ಇರುವ ದೊಡ್ಡ ಸಮಸ್ಯೆಯೆಂದರೆ ಗುಡಿಸುವ ಕೆಲಸಕ್ಕೆ ಏಳನೇ ತರಗತಿ ಉತ್ತೀರ್ಣರಾಗಿರುವವರು ಸಿಗುತ್ತಾರೆಯೇ ಎಂಬುದು. ಇದಕ್ಕಿಂತ ದೊಡ್ಡ ಸಮಸ್ಯೆ ಈಗಾಗಲೇ ಕೆಲಸಕ್ಕೆ ಸೇರಿರುವ ಅನೇಕರು ಅನಕ್ಷರಸ್ತರು. ಇವರ ನೇಮಕಾತಿಗಳನ್ನು ಅಧಿಕೃತಗೊಳಿಸ ಬೇಕಾದರೆ ಅವರು ಇನ್ನು ಎರಡು ವರ್ಷಗಳಲ್ಲಿ ಏಳನೇ ತರಗತಿಯಲ್ಲಿ ಉತ್ತೀರ್ಣರಾಗಬೇಕು.

ವಾಟರ್ ಮನ್‌ಗಳ ವಿದ್ಯಾರ್ಹತೆಯನ್ನು ಹೆಚ್ಚಿಸಿರುವುದಕ್ಕೆ ಸರ್ಕಾರ ನೀಡುತ್ತಿರುವ ಕಾರಣ ಇವರಿಗೆ ಮುಂದಿನ ದಿನಗಳಲ್ಲಿ ಬಡ್ತಿ ನೀಡಿ ಬಿಲ್ ಕಲೆಕ್ಟರ್, ವಾಟರ್ ಚಾರ್ಜ್ ಕಲೆಕ್ಟರ್ ಇತ್ಯಾದಿ ಹುದ್ದೆಗಳಿಗೆ ನೇಮಿಸಲು ಅನುಕೂಲವಾಗುತ್ತದೆ ಎಂಬುದು. ಈ ತರ್ಕವನ್ನು ಬಿಲ್ ಕಲೆಕ್ಟರ್ ಹುದ್ದೆಗೆ ಅನ್ವಯಿಸಲಾಗಿಲ್ಲ. ಅವರ ವಿದ್ಯಾರ್ಹತೆಯನ್ನು ಹಿಂದಿನಂತೆಯೇ ಪಿಯುಸಿ ಮಟ್ಟದಲ್ಲಿಯೇ ಉಳಿಸಲಾಗಿದೆ. ಆದರೆ ಇವರು ಕಾರ್ಯದರ್ಶಿ, ಪಿಡಿಓ ಹುದ್ದೆಗಳಿಗೆ ಬಡ್ತಿ ಪಡೆಯುವುದಕ್ಕೆ ಅರ್ಹರು.

ನೀರು ಪೂರೈಕೆಗೆ ಓವರ್ ಹೆಡ್ ಟ್ಯಾಂಕ್ ಇರುವ ಗ್ರಾಮ ಪಂಚಾಯಿತಿಗಳು ಒಂದು ಟ್ಯಾಂಕ್‌ಗೆ ಒಬ್ಬರಂತೆ ವಾಟರ್ ಮನ್‌ಗಳನ್ನು ನೇಮಿಸಬಹುದೆಂದು ಹೊಸ ನಿಯಮ ಹೇಳುತ್ತದೆ. ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಓವರ್ ಹೆಡ್ ಟ್ಯಾಂಕ್‌ ಮೂಲಕ ನೀರು ಪೂರೈಸುವ ವ್ಯವಸ್ಥೆ ಇಲ್ಲ. ಆದರೆ ಬೋರ್‌ವೆಲ್‌ಗಳು ಮತ್ತು ಪೈಪ್‌ಲೈನ್‌ಗಳ ನಿರ್ವಹಣೆಯೂ ಸೇರಿದಂತೆ ವಾಟರ್ ಮನ್ ಮಾಡಬೇಕಾದ ಅನೇಕ ಕೆಲಸಗಳಿವೆ. ಇವುಗಳನ್ನು ಯಾರಿಂದ ಮಾಡಿಸಬೇಕು ಎಂಬುದರ ಕುರಿತಂತೆ ನಿಯಮ ಯಾವುದೇ ಮಾತುಗಳನ್ನಾಡುವುದಿಲ್ಲ.

ಇಷ್ಟಕ್ಕೂ ಈಗಾಗಲೇ ನೇಮಕಗೊಂಡು ಒಂದು ದಶಕಕ್ಕೂ ಹೆಚ್ಚು ಕಾಲ ದುಡಿದವರನ್ನು ಈಗ ವಿದ್ಯಾರ್ಹತೆ ಅಥವಾ ಅನುಮೋದನೆಯ ಹೆಸರಿನಲ್ಲಿ ಕೆಲಸದಿಂದ ತೆಗೆಯುವುದು ಅಮಾನವೀಯ ಎಂಬ ಅಂಶದತ್ತ ಪಂಚಾಯತ್ ರಾಜ್ ಇಲಾಖೆ ಗಮನಹರಿಸಿದಂತಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ಸರ್ಕಾರವೇ ಗಮನಿಸಿರುವಂತೆ ಈ ಬಗೆಯ ಅನುಮೋದನೆಯ ಪ್ರಸ್ತಾಪಗಳು ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಯ ಮಟ್ಟದಲ್ಲೇ ಉಳಿದುಕೊಂಡಿರುವುದು ಏಕೆ ಎಂಬುದನ್ನು ಪರಿಶೀಲಿಸುವ ಗೋಜಿಗೂ ಸರ್ಕಾರ ಹೋಗುತ್ತಿಲ್ಲ. ಎಲ್ಲಾ ಜವಾಬ್ದಾರಿಗಳನ್ನು ಗ್ರಾಮ ಪಂಚಾಯಿತಿಯ ಮೇಲೆ ಹೇರಿ ಸುಮ್ಮನಾಗಿಬಿಟ್ಟಿದೆ.

ಗ್ರಾಮ ಪಂಚಾಯಿತಿ ಮಟ್ಟದಲ್ಲಿನ ಸಿಬ್ಬಂದಿ ನೇಮಕಾತಿಯ ವಿಚಾರ ಯಾವತ್ತೂ ಗೊಂದಲದ ಗೂಡೇ. ಸ್ಥಳೀಯ ಸಂಪನ್ಮೂಲವನ್ನು ಪರಿಗಣಿಸಿ ಇಂಥವುಗಳನ್ನು ಮಾಡಬೇಕು ಎಂದು ಸರ್ಕಾರವೇ ಹೇಳುತ್ತಿರುತ್ತದೆ. ಇದೇ ವೇಳೆ ಈ ನೇಮಕಾತಿಗಳನ್ನು ಜಿಲ್ಲಾ ಪಂಚಾಯಿತಿಯ ಮರ್ಜಿಗೆ ಬಿಟ್ಟುಕೊಡುವ ಕೆಲಸವನ್ನೂ ಮಾಡುತ್ತದೆ. ಈ ಬಗೆಯ ಗೊಂದಲಗಳು ಗ್ರಾಮ ಪಂಚಾಯಿತಿಯ ಮಟ್ಟದಲ್ಲಿ ನಿತ್ಯದ ಕೆಲಸಗಳಲ್ಲಿ ಹಲವು ಬಗೆಯ ತೊಂದರೆಗಳನ್ನು ಸೃಷ್ಟಿಸುತ್ತದೆ. ಸರ್ಕಾರದ ಹೊಸ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಹೊರಟರೆ ಈಗಾಗಲೇ ಕೆಲಸ ಮಾಡುತ್ತಿರುವವರನ್ನು ಕೈಬಿಡಬೇಕಾಗುತ್ತದೆ. ವಾಟರ್‌ಮನ್ ತರಹದ ಹುದ್ದೆಗಳಿಗೆ ಹೊಸಬರು ದೊರೆಯಬಹುದಾದರೂ ಗುಡಿಸುವ ಕೆಲಸ ಮಾಡುವವರನ್ನು ತರುವುದೆಲ್ಲಿಂದ ಎಂಬ ಪ್ರಶ್ನೆ ಹಾಗೆಯೇ ಉಳಿದುಕೊಳ್ಳುತ್ತದೆ.

ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ಅವರ ನೇಮಕಕ್ಕೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವ­ಹಣಾ­ಧಿಕಾರಿಗಳ ಅನುಮೋದನೆ ದೊರೆಯದೇ ಉಳಿದದ್ದು ಹೇಗೆ ಎಂಬುದಕ್ಕೆ ಸಂಬಂಧಿಸಿದಂತೆ ಒಂದು ತನಿಖೆಯ ಅಗತ್ಯ­ವಂತೂ ಇದೆ. ಇದನ್ನು ಆಧಾರವಾಗಿಟ್ಟು­ಕೊಂಡು ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವವರ ನೇಮಕಾತಿಯನ್ನು ಸಕ್ರಮ­ಗೊಳಿಸುವುದು ಮಾನವೀಯವಾದ ದಾರಿ. ಬಿಲ್ ಕಲೆಕ್ಟರ್‌­­ನಂತಹ ‘ಸಂಪಾದನೆಯ’ ಹುದ್ದೆಗಳಿಗೆ ದೊರೆತ ಅನುಮೋದನೆ ಕೆಳ ಹಂತದ ಕಾರ್ಮಿಕರಿಗೆ ದೊರೆಯದೇ ಹೋದುದೇ ಎಲ್ಲವೂ ಸರಿಯಾಗಿರಲಿಲ್ಲ ಎಂಬುದನ್ನು ಸೂಚಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT