ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರೂರಿಸುವ ರಂಜಾನ್ ಖಾದ್ಯಗಳು

ರಸಸ್ವಾದ
Last Updated 26 ಜೂನ್ 2016, 19:30 IST
ಅಕ್ಷರ ಗಾತ್ರ

ರಂಜಾನ್ ಎಂದರೆ ಆತ್ಮ ಮತ್ತು ದೇಹ ಶುದ್ಧಿಯ ತಿಂಗಳು. ಉಪವಾಸ ತೊರೆಯುವಾಗ ಸೇವಿಸುವ ವಿಶೇಷ ಆಹಾರಗಳು ಬಾಯಲ್ಲಿ ನೀರೂರಿಸುತ್ತವೆ. ಇಫ್ತಾರ್‌ಗಾಗಿಯೇ ವಿಶಿಷ್ಟ ಭಕ್ಷ್ಯಗಳನ್ನು ತಯಾರಿಸುವುದು ವಾಡಿಕೆ. ಇಂಥ ಕೆಲವು ಭಕ್ಷ್ಯಗಳ ತಯಾರಿಕೆ ವಿಧಾನದ ವಿವರ ಇಲ್ಲಿದೆ.

ಚಿಕನ್ ಬಿರಿಯಾನಿ
ಬೇಕಾಗುವ ವಸ್ತುಗಳು: 
ಒಂದು ಕಿಲೋ ಕೋಳಿ ಮಾಂಸ. 200 ಗ್ರಾಂ ಅಡುಗೆ ಎಣ್ಣೆ, ಚಕ್ಕೆ – ಲವಂಗ – ಏಲಕ್ಕಿ 20 ಗ್ರಾಂ, ಖಾರದ ಪುಡಿ, ಅರಿಸಿನ ಪುಡಿ, ಕೊತ್ತಂಬರಿ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ನಿಂಬೆ 1, ಕಸ್ತೂರಿ – ಮೆಂತೆಪುಡಿ ಸ್ವಲ್ಪ, ಹೆಚ್ಚಿದ ಈರುಳ್ಳಿ 500 ಗ್ರಾಂ, – 1 ಕೆ.ಜಿ. ಟೊಮೆಟೊ, 50 ಗ್ರಾಂ ಹಸಿಮೆಣಸಿನ ಕಾಯಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌ 100 ಗ್ರಾಂ, ತುಪ್ಪ 100 ಗ್ರಾಂ, ಮೊಸರು 200 ಮಿ. ಲೀ.,  ಕೊತ್ತಂಬರಿ – ಪುದೀನ ಎರಡು ಕಟ್ಟು.

ತಯಾರಿಸುವ ವಿಧಾನ: ಒಂದು ಪಾತ್ರೆಯಲ್ಲಿ ಮೊದಲು ಎಣ್ಣೆ ಹಾಕಿ ಕಾಯಿಸಬೇಕು. ಕೆಂಬಣ್ಣ ಬರುವವರೆಗೆ ಈರುಳ್ಳಿ ಹುರಿಯಬೇಕು. ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಹಾಕಿಕೊಳ್ಳಬೇಕು. ಬಳಿಕ ಖಾರದಪುಡಿ, ಅರಶಿಣ, ಕೊತ್ತಂಬರಿ ಪುಡಿ, ಕಸ್ತೂರಿ – ಮೆಂತೆಪುಡಿ ಹಾಕಬೇಕು. ನಿಂಬೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಳ್ಳಬೇಕು.

ಬಳಿಕ ಕೋಳಿ ಮಾಂಸ ಹಾಕಿ ಚೆನ್ನಾಗಿ 20 ನಿಮಿಷ ಬೇಯಿಸಬೇಕು. ಮಾಂಸ ಬೆಂದ ಬಳಿಕ ಅದಕ್ಕೆ ಒಂದು ಲೀಟರ್ ನೀರು ಹಾಕಬೇಕು. ತುಪ್ಪ ಹಾಕಬೇಕು. ಬಳಿಕ ಬಾಸ್ಮತಿ ಅಕ್ಕಿ ಹಾಕಬೇಕು. ಈ ಮಿಶ್ರಣದಲ್ಲೇ ಅಕ್ಕಿ ಬೇಯುತ್ತದೆ. ಕತ್ತರಿಸಿದ ಕೊತ್ತಂಬರಿ ಪುದೀನ ಸೊಪ್ಪನ್ನು ಹಾಕಿದರೆ ಘಮ ಘಮ– ರುಚಿಕ ಬಿರಿಯಾನಿ  ಸವಿಯಲು ಸಿದ್ಧ.

ಫಲೂದ
ಬೇಕಾಗುವ ವಸ್ತುಗಳು:
 20 ಗ್ರಾಂ ಚೈನಾ ಗ್ರಾಸ್,  500 ಗ್ರಾಂ ಸಕ್ಕರೆ, ಅರ್ಧ ಲೀಟರ್ ಹಾಲು. 150 ಗ್ರಾಂ ಖೋವಾ. ಬೇಕಾದ ಫುಡ್‌ ಕಲರ್ ಸ್ವಲ್ಪ.
ತಯಾರಿಸುವ ವಿಧಾನ: ಮೊದಲು 20 ಗ್ರಾಂ ಚೈನಾ ಗ್ರಾಸ್‌ 30 ನಿಮಿಷಗಳ ಕಾಲ ನೀರಿನಲ್ಲಿ ನೆನೆಯಲು ಹಾಕಬೇಕು. ಅರ್ಧ ಲೀಟರ್ ಹಾಲು ಕಾಯಿಸಿ, ಆರಿಸಿಕೊಳ್ಳಬೇಕು. ಬೇರೊಂದು ಪಾತ್ರೆಯನ್ನು ಸಣ್ಣ ಉರಿಯಲ್ಲಿ ಒಲೆಯ ಮೇಲಿಡಬೇಕು.

ನೆನೆದ ಚೈನಾ ಗ್ರಾಸ್‌ಗೆ ಸಕ್ಕರೆ ಹಾಕಿ ಮಿಶ್ರಣ ಸಿದ್ಧಪಡಿಸಿಕೊಳ್ಳಬೇಕು. ಬಳಿಕ ಖೋವಾ ಹಾಕಬೇಕು. ಫುಡ್‌ ಕಲರ್‌ ಹಾಕಿದ ಹಾಲನ್ನು ಈಗ ಪಾತ್ರೆಗೆ ಮಿಶ್ರಣ ಮಾಡಬೇಕು. ಬಳಿಕ ಸಣ್ಣ ಸಣ್ಣ ಪಿಂಗಾಣಿ  ಬಟ್ಟಲುಗಳಿಗೆ ಮಿಶ್ರಣ ಸುರಿದು ತಣ್ಣಗಾಗಲು ಇಡಬೇಕು.

ಹಲೀಂ
ಬೇಕಾಗುವ ವಸ್ತುಗಳು:
 ಮಟನ್ ಒಂದು ಕೆ.ಜಿ., ಗೋಧಿ ನುಚ್ಚು 200 ಗ್ರಾಂ, ಶುಂಠಿ – ಬೆಳ್ಳುಳ್ಳಿ ಪೇಸ್ಟ್‌ 4 ಟೇಬಲ್‌ ಸ್ಪೂನ್, ಉದ್ದಿನ ಬೇಳೆ ಒಂದು ಕಪ್, ಕಡಲೆಬೇಳೆ ಒಂದು ಕಪ್, ಖಾರದ ಪುಡಿ ಒಂದು ಟೇಬಲ್‌ ಸ್ಪೂನ್, ಅರಿಶಿಣ ಎರಡು ಸ್ಪೂನ್‌, ಮೊಸರು ಒಂದೂವರೆ ಕಪ್, ಸಣ್ಣಗೆ ಹೆಚ್ಚಿದ ಈರುಳ್ಳಿ ಎರಡು ಕಪ್, ಸಣ್ಣಗೆ ಹೆಚ್ಚಿದ ಟೊಮೆಟೊ 1,

ಏಲಕ್ಕಿ 3, ಚಕ್ಕೆ 30 ಗ್ರಾಂ, ಕೊತ್ತಂಬರಿ ಪುಡಿ ಒಂದು ಟೇಬಲ್‌ ಸ್ಪೂನ್, ಗರಂ ಮಸಾಲ ತಲಾ ಕರಿಮೆಣಸಿನ ಪುಡಿ 2 ಸ್ಪೂನ್, ಜೀರಿಗೆ ಪುಡಿ 2 ಸ್ಪೂನ್, ತುಪ್ಪ ಒಂದು ಟೇಬಲ್ ಸ್ಪೂನ್, ಕೊತ್ತಂಬರಿ ಸೊಪ್ಪು, ಪುದೀನ ಸೊಪ್ಪು ತಲಾ ಅರ್ಧ ಕಪ್, ಹಸಿ ಮೆಣಸಿನಕಾಯಿ 4, ಗೋಡಂಬಿ ಅರ್ಧ ಕಪ್, ರುಚಿಗೆ ತಕ್ಕಷ್ಟು ಉಪ್ಪು, ಬೇಕಾದಷ್ಟು ಅಡುಗೆ ಎಣ್ಣೆ.

ತಯಾರಿಸುವ ವಿಧಾನ: ಮಾಂಸವನ್ನು ಚೆನ್ನಾಗಿ ತೊಳೆದು ನೀರು ಬಸಿದು ಹೋಗುವಂತೆ ಬಟ್ಟೆಯಲ್ಲಿ ಕಟ್ಟಿಡಬೇಕು. ಗೋಧಿ ನುಚ್ಚು, ಉದ್ದಿನ ಬೇಳೆ, ಕಡಲೆಬೇಳೆಯನ್ನು 4 ಗಂಟೆಗಳ ಕಾಲ ನೀರಿನಲ್ಲಿ ನೆನಹಾಕಬೇಕು. ಕುಕ್ಕರ್ ತೆಗೆದುಕೊಂಡು ನಾಲ್ಕು ಟೇಬಲ್ ಸ್ಫೂನ್ ಅಡುಗೆ ಎಣ್ಣೆ ಹಾಕಿ ಹೆಚ್ಚಿದ ಈರುಳ್ಳಿ
ಹಾಕಿ ಕೆಂಬಣ್ಣ ಬರುವವರೆಗೆ ಹುರಿಯಬೇಕು.

ಹುರಿದ ಈರುಳ್ಳಿಗೆ ಏಲಕ್ಕಿ, ಚಕ್ಕೆ ಹಾಕಿ ಎರಡು ನಿಮಿಷಗಳ ಕಾಲ ಬಿಡಬೇಕು. ಈಗ ಮಾಂಸವನ್ನು ಹಾಕಬೇಕು. ಅರಿಶಿಣ, ಖಾರದಪುಡಿ ಹಾಕಿ ಒಂದು ಕಪ್ ನೀರು ಹಾಕಬೇಕು. ಕುಕ್ಕರ್ ಮುಚ್ಚಳ ಹಾಕಿ ಹೆಚ್ಚಿನ ಉರಿಯಲ್ಲಿ 5 ಕೂಗು ಬರುವವರೆಗೆ ಬೇಯಿಸಬೇಕು.

ಬಳಿಕ ಮಾಂಸ ಮತ್ತು ಮೂಳೆಯನ್ನು ಬೇರ್ಪಡಿಸಿಕೊಂಡು, ಮೂಳೆಯನ್ನು ಬೇರೆಯೇ ಒಂದು ಪಾತ್ರೆಯಲ್ಲಿ ಹಾಕಿಕೊಳ್ಳಬೇಕು. ಬೇಯಿಸಿದ ಮಾಂಸಕ್ಕೆ ತಲಾ ಒಂದು ಟೇಬಲ್ ಸ್ಪೂನ್‌ ಉಪ್ಪು, ಕೊತ್ತಂಬರಿ ಪುಡಿ, ಜೀರಿಗೆ ಪುಡಿ ಗರಂ ಮಸಾಲ ತಲಾ 2 ಸ್ಪೂನ್, ನಾಲ್ಕು ಹಸಿ ಮೆಣಸಿನ ಕಾಯಿ, ಅರ್ಧ ಕಪ್ ಕೊತ್ತಂಬರಿ ಸೊಪ್ಪು, 5 – 6 ಪುದೀನ ಸೊಪ್ಪು ಹಾಗೂ ಹೆಚ್ಚಿದ ಟೊಮೆಟೊ, ಮೊಸರು ಮತ್ತು ಒಂದು ಕಪ್ ನೀರು ಹಾಕಬೇಕು.

ಚೆನ್ನಾಗಿ ಕಲಸಿ ಕುಕ್ಕರ್‌ ಮುಚ್ಚಳ ಹಾಕಿ 20 ನಿಮಿಷ ಹೆಚ್ಚಿನ ಉರಿಯಲ್ಲಿ ಬೇಯಿಸಬೇಕು. ಇನ್ನೊಂದು ಪಾತ್ರೆ ತೆಗೆದುಕೊಂಡು ನೆನೆದಿರುವ ಗೋಧಿ ನುಚ್ಚು, ಉದ್ದಿನ ಬೇಳೆ, ಕಡಲೆ ಬೇಳೆಯ ಮಿಶ್ರಣ ಹಾಕಬೇಕು. ಬೇರೆಯೇ ತೆಗೆದಿಟ್ಟ ಬೇಯಿಸಿದ ಮೂಳೆಯನ್ನು ಹಾಕಿ, ಎರಡು ಗ್ಲಾಸ್ ನೀರು ಹಾಕಬೇಕು. 2 ಚಮಚ ಅರಿಶಿಣ, 4 ಚಮಚ ಉಪ್ಪು ಹಾಕಿ 20 ನಿಮಿಷ ಬೇಯಿಸಬೇಕು.

ಪ್ರತೀ ನಿಮಿಷಕ್ಕೊಮ್ಮೆ ಸೌಟು ಹಾಕಿ ಕಲಸುತ್ತಿರಬೇಕು. ಹಲೀಂ ಮಿಶ್ರಣ ಚೆನ್ನಾಗಿ ತಯಾರಾಗಲು ಇದು ಸಹಕಾರಿ. 20 ನಿಮಿಷ ಬೆಂದ ಬಳಿಕ ಎರಡೂ ಪಾತ್ರೆಯಲ್ಲಿರುವ ಮಿಶ್ರಣವನ್ನು ಒಂದೇ ಪಾತ್ರೆಗೆ ಹಾಕಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಬೇಕು. ಸಣ್ಣ ಉರಿಯಲ್ಲಿ ಒಂದು ಗಂಟೆ ಬೇಯಿಸಿಕೊಳ್ಳಬೇಕು. ಪ್ರತೀ ಮೂರು ನಿಮಿಷಕ್ಕೊಮ್ಮೆ  ಸೌಟು ಹಾಕಿ ಕಲಸುತ್ತಿರಬೇಕು.

ಈ ಮಿಶ್ರಣ ಗಟ್ಟಿಯಾಗುತ್ತಾ ಕೆಂಬಣ್ಣ ಬರುತ್ತಿದ್ದಂತೆ ಉರಿಯನ್ನು ಆರಿಸಬೇಕು. ಇನ್ನೊಂದು ಪಾತ್ರೆ ತೆಗೆದುಕೊಂಡು ಒಂದು ಟೇಬಲ್‌ ಸ್ಪೂನ್ ತುಪ್ಪ ಹಾಕಿ, ಕರಿಮೆಣಸಿನ ಪುಡಿ ಹಾಕಿ ಸ್ವಲ್ಪ ಹುರಿಯಬೇಕು.

ಅದನ್ನು ಮೊದಲೇ ಸಿದ್ಧಪಡಿಸಿಕೊಂಡ ಹಲೀಂಗೆ ಹಾಕಬೇಕು. ಬಳಿಕ ಹುರಿದಿರುವ ಈರುಳ್ಳಿ, ಗೋಡಂಬಿ ಹಾಗೂ ಕೊತ್ತಂಬರಿ ಸೊಪ್ಪು ಮೇಲ್ಭಾಗಕ್ಕೆ ಹಾಕಿ ಸಿಂಗರಿಸಿದರೆ ರುಚಿಯಾದ ಹಲೀಂ ಸಿದ್ಧ. 

ಮಟನ್ ಮಸಾಲ
ಬೇಕಾಗುವ ವಸ್ತುಗಳು:
 ಮೇಕೆ / ಕುರಿ ಮಾಂಸ ಒಂದು ಕೆ.ಜಿ., ಖಾರದಪುಡಿ, ಅರಿಸಿನ, ಸ್ವಲ್ಪ ಮೆಣಸಿನ ಪುಡಿ, ಕೊತ್ತಂಬರಿ – ಪುದೀನ ಪೇಸ್ಟ್‌, ಕಸ್ತೂರಿ – ಮೆಂತೆಪುಡಿ, ಒಂದು ನಿಂಬೆಹಣ್ಣು. ಎರಡು ಟೊಮೆಟೊ. ಮೊಸರು 200 ಮಿ.ಲೀ.

ತಯಾರಿಸುವ ವಿಧಾನ: ಚೆನ್ನಾಗಿ ತೊಳೆದ ಮಟನ್‌ ಸ್ವಲ್ಪ ಉಪ್ಪು –ನೀರು ಹಾಕಿ ಬೇಯಿಸಿಕೊಳ್ಳಬೇಕು. ಬೆಂದ ಬಳಿಕ ನೀರು ಮತ್ತು ಮಾಂಸವನ್ನು ಬೇರ್ಪಡಿಸಿಕೊಳ್ಳಬೇಕು.

ರುಬ್ಬಿದ ಖಾರದಪುಡಿ, ಅರಿಶಿಣ, ಸ್ವಲ್ಪ ಮೆಣಸಿನ ಪುಡಿ, ಕೊತ್ತಂಬರಿ – ಪುದೀನ ಪೇಸ್ಟ್‌, ಟೇಸ್ಟಿಂಗ್ ಪೌಡರ್, ಕಸ್ತೂರಿ – ಮೆಂತೆಪುಡಿ, ನಿಂಬೆಹಣ್ಣು ಮಿಶ್ರಣದ ಮಸಾಲೆಯನ್ನು ಹಾಕಬೇಕು. ಹೆಚ್ಚಿದ ಟೊಮೆಟೊ ಹಾಕಿ ಬೇಯಿಸಬೇಕು. ಬಳಿಕ ಮೊಸರಿನ ಮಿಶ್ರಣ ಹಾಕಬೇಕು. ಈ ಮಸಾಲೆ ಸಿದ್ಧವಾದ ಮೇಲೆ ಒಂದು ಬಾಣಲೆಗೆ ಮೊದಲೇ ಬೇಯಸಿಟ್ಟ ಮಾಂಸ ಹಾಕಿ ಸ್ವಲ್ಪ ಬೇಯಿಸಿಕೊಂಡು ಬಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT