ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರೆಂಬ ಟಾನಿಕ್

Last Updated 15 ಜನವರಿ 2016, 19:31 IST
ಅಕ್ಷರ ಗಾತ್ರ

ದಿನಪತ್ರಿಕೆಯಲ್ಲಿ ಜನಪ್ರಿಯ ನಟಿ ಪ್ರಿಯಾಮಣಿ ಅವರ ಸಂದರ್ಶನ ಓದುತ್ತಿದ್ದೆ. ನೀರೇ ನನ್ನ ಫಿಟ್ನೆಸ್ ಮೂಲ. ಚೆನ್ನಾಗಿ ನೀರು ಕುಡಿಯೋದ್ರಿಂದ ಕೊಬ್ಬು ಕರಗುತ್ತೆ. ಆರೋಗ್ಯವೂ ಚೆನ್ನಾಗಿರುತ್ತೆ ಎಂದು  ಹೇಳಿದ್ದರು. "ನೀರಿನಿಂದ ಕೊಬ್ಬು ಕರಗಿಸುವ" ಮಾತಿನಲ್ಲಿಯೇ ಕಣ್ಣು ಮನಸು ನೆಟ್ಟವು. ಹೆಚ್ಚು ನೀರು ಕುಡಿಯೋದ್ರಿಂದ ದೇಹದ ಕಷ್ಮಲಗಳ ಹೊರಹಾಕೋ ಪ್ರಕ್ರಿಯೆಗೆ ಸಹಾಯವಾಗಿ ದೇಹ ಆರೋಗ್ಯಕರವಾಗುತ್ತೆ. ಆದರೆ ಕೊಬ್ಬು ಕರಗುತ್ತದೆಯೇ?
ನೀರಿಗೂ ಕೊಬ್ಬು ಕರಗುವುದಕ್ಕೂ ಸಂಬಂಧವಿದೆಯೇ?

ಕೊಬ್ಬು ಅಂದ್ರೆ ಎಣ್ಣೆಯಂಶ ಅಥವಾ ಜಿಡ್ಡು. ಅದು ನೀರಲ್ಲಿ ಕರಗಲ್ಲ.   ಆದರೆ ಶಕ್ತಿ ಮತ್ತು ಕ್ಯಾಲೊರಿಗಳ ಬಗ್ಗೆ ಮೊದಲು ಅರಿತರೆ ಕೊಬ್ಬು ಕರಗುವ ಬಗ್ಗೆಯೂ ಅರಿಯಬಹುದು. ಕೆಲಸ ಮಾಡೋ ಸಾಮರ್ಥ್ಯವೇ ಶಕ್ತಿ ಅನ್ನೋ ಒಂದು ವಾಕ್ಯದ ಉತ್ತರವನ್ನು ಬಾಲ್ಯದಲ್ಲಿ ಬರೆದಿರುತ್ತೇವೆ. ಅದೇ ತರಹ ಶಕ್ತಿಯನ್ನು ಅಳೆಯೋ ಮಾಪಕಗಳಲ್ಲಿ ಕ್ಯಾಲರಿಯೂ ಒಂದು. ಒಂದು ಗ್ರಾಂ ನೀರಿನ ಉಷ್ಣಾಂಶವನ್ನು ಒಂದು ಡಿಗ್ರಿ ಹೆಚ್ಚಿಸುವುದಕ್ಕೆ ಬೇಕಾಗೋ ಶಕ್ತಿಯನ್ನು ಒಂದು ಕ್ಯಾಲೋರಿ ಎನ್ನುತ್ತಾರೆ. ಈ ವ್ಯಾಖ್ಯಾನ ತುಂಬಾ ಮುಖ್ಯ. ಯಾಕೆಂದರೆ ಈ ಇಡೀ ಲೇಖನಕ್ಕೆ ಇದೇ ಆಧಾರಸ್ತಂಭ ಅಂದರೂ ತಪ್ಪಾಗಲಾರದು. 

ಫ್ಯಾಟ್/ಕೊಬ್ಬು ಅಂದ್ರೆ ಏನು ?
ನಮ್ಮ ತಿನ್ನೋ ಆಹಾರದ ಮೂಲಕ ನಮಗೆ ಶಕ್ತಿ ದೊರಕುತ್ತದೆ ಅಂತ ಓದಿದೆವು. ಈಗ ನಮಗೆ ದಿನನಿತ್ಯದ ಕೆಲಸಕ್ಕೆ ಬೇಕಾದಕ್ಕಿಂತಲೂ ಹೆಚ್ಚಿನ ಶಕ್ತಿ ನಮ್ಮ ಆಹಾರದ ಮೂಲಕ ಒಳಸೇರಿದರೆ? ಆ ಶಕ್ತಿ ಕೊಬ್ಬಿನ ರೂಪಾಂತರವಾಗಿ ನಮ್ಮ ದೇಹದಲ್ಲಿ ಕೂರುತ್ತದೆ. ಈ ಕೊಬ್ಬು ದಿನ ಕಳೆದಂತೆ ನಮ್ಮ ದೇಹದ ತೂಕವನ್ನು ಹೆಚ್ಚಿಸುತ್ತಾ ಸಾಗುತ್ತದೆ. ನಾವು ತಿಂದ ಆಹಾರಕ್ಕೆ ಸರಿಯಾದ ಚಟುವಟಿಕೆಗಳಲ್ಲಿ, ವ್ಯಾಯಾಮದಲ್ಲಿ ತೊಡಗಿಸಿಕೊಂಡರೆ ಹೆಚ್ಚಾಗಿದ್ದ ಕೊಬ್ಬು ಆ ಕೆಲಸಕ್ಕೆ ಬೇಕಾದ ಶಕ್ತಿಯಾಗಿ ಕರಗಿ ನಮ್ಮ ದೇಹದ ತೂಕ ಇಳಿಯುತ್ತದೆ. ಯದ್ವಾ ತದ್ವಾ ತಿಂದ್ರೆ ದೇಹದ ತೂಕ ಹೆಚ್ಚೋದು, ಹೆಚ್ಚೆಚ್ಚು ಡಯಟ್, ವ್ಯಾಯಾಮ ಮಾಡಿದಾಗ ಅದು ಇಳಿಯೋದು ಹೇಗೆ ಅಂತ ಯೋಚನೆ ಮಾಡ್ತಿದ್ದೋರಿಗೆ ಸದ್ಯಕ್ಕೊಂದು ಸಮಾಧಾನದ ಉತ್ತರ ಸಿಕ್ಕಿರಬಹುದು. ಹಾಗಾಗಿ ನೀರಿಂದ ಕೊಬ್ಬು ಕರಗಿಸೋದು ಅನ್ನೋದನ್ನ ನೀರಿಂದ ಕ್ಯಾಲೋರಿ ಕರಗಿಸೋದು ಹೇಗೆ ಅಂತಲೂ ಅರ್ಥೈಸಬಹುದು.

ನೀರಿಂದ ಕ್ಯಾಲೋರಿ ಕರಗೋದೇಗೆ ?
ಒಂದು ಗ್ರಾಂ ನೀರಿನ ಉಷ್ಣಾಂಶವನ್ನು ಒಂದು ಡಿಗ್ರಿ ಹೆಚ್ಚಿಸೋದಕ್ಕೆ ಬೇಕಾಗೋ ಶಕ್ತಿಯನ್ನ ಒಂದು ಕ್ಯಾಲೋರಿ ಅಂತ ಹೇಳುತ್ತೇವೆ ಅಂತ ಅಂದೆವು. ಆದ್ರೆ ನಾವು ಕುಡಿಯೋ ನೀರಿಂದ ನಮ್ಮ ದೇಹದಲ್ಲಿ ಈಗಾಗಲೇ ಕ್ಯಾಲೋರಿ ರೂಪದಲ್ಲಿ ಅಡಗಿರೋ ಶಕ್ತಿ ಖರ್ಚಾಗೋದು ಹೇಗೆ? ಅದಕ್ಕೆ ಉತ್ತರ ಒಂದಲ್ಲ, ಎರಡಲ್ಲ, ಬದಲಿಗೆ ಹಲವು. ಅವುಗಳಲ್ಲೊಂದೊಂದನ್ನೇ ನೋಡೋಣ.

ದೇಹದ ಚಟುವಟಿಕೆ ಹೆಚ್ಚಳ
The Journal of Clinical Endocrinology & Metabolism) ಎಂಬಲ್ಲಿ ಪ್ರಕಟವಾದ ವರದಿಯ ಪ್ರಕಾರ 2003ರಲ್ಲಿ ವಿಜ್ಞಾನಿಗಳು ಒಂದು ಗುಂಪು ಜನರ ಮೇಲೆ ಪ್ರಯೋಗ ಮಾಡುತ್ತಿದ್ದರಂತೆ. ಆ ಗುಂಪಿನ ಜನರಿಗೆ 500ಮಿ.ಲೀ ನೀರನ್ನು ಕುಡಿಯಗೊಟ್ಟು (ಅಂದಾಜು ಎರಡು ಕಪ್ಪು) ಅದರಿಂದ ಅವರ ದೈಹಿಕ ವ್ಯವಸ್ಥೆಯಲ್ಲಾಗೋ ಬದಲಾವಣೆಗಳನ್ನು ಗಮನಿಸೋದೇ ಅವರ ಪ್ರಯೋಗ.

500ಮಿ.ಲೀ ನೀರು ಅವರ ದೈಹಿಕ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ  ಹೆಚ್ಚಿಸುತ್ತಿತ್ತಂತೆ. ಈ ಹೆಚ್ಚಿದ ಚಟುವಟಿಕೆಗಳಿಂದ ಸರಿ ಸುಮಾರು 24 ಕ್ಯಾಲೋರಿಗಳು ಹೆಚ್ಚು ಖಾಲಿಯಾಗುತ್ತಿತ್ತಂತೆ. ಅಂದರೆ ದಿನಕ್ಕೆ 2 ಲೀಟರ್ ನೀರು ಕುಡಿಯೋದರಿಂದ ಸುಮಾರು 100 ಕ್ಯಾಲೋರಿಗಳು ಖರ್ಚಾದಂತೆ ! ಈ ನೂರು ಕ್ಯಾಲೋರಿ ಅಂದ್ರೆ ಎಷ್ಟು ಅಂದ್ರಾ? ಒಂದು ಕಿ.ಮೀ ನಡೆದರೆ ಸುಮಾರು 50 ಕ್ಯಾಲೋರಿಗಳು ಖರ್ಚಾಗುತ್ತವೆ. 100 ಕ್ಯಾಲೋರಿ ಅಂದ್ರೆ 2 ಕಿ.ಮೀ ನಡೆದಂತೆ. ಇನ್ನೂ ಸುಲಭವಾಗಿ ಹೇಳೊದಾದ್ರೆ 2 ಲೀಟರ್ ನೀರು ಕುಡಿದ್ರೆ ಎರಡು ಕಿ.ಮೀ ನಡೆದಷ್ಟು ಕ್ಯಾಲೋರಿ ಕರಗುತ್ತದೆ! ತೂಕ ಹೆಚ್ಚಿದೆ ಅಂತ ಬೇಜಾರುಪಟ್ಟುಕೊಳ್ಳುವವರು ಇನ್ನು ತೂಕ ಇಳಿಸೋದು ನೀರು ಕುಡಿದಷ್ಟು ಸುಲಭ ಅಂತ ನಿಜಾರ್ಥದಲ್ಲೇ ಹೇಳಬಹುದು!

ನಾವು ವ್ಯಾಯಾಮ ಮಾಡುವಾಗ ಅಥವಾ ಬೇರಾವುದೇ ದೈಹಿಕ ಚಟುವಟಿಕೆಗಳಲ್ಲಿ ತೊಡಗಿರುವಾಗ ಅದಕ್ಕೆ ಕ್ಯಾಲೋರಿಗಳು ಖರ್ಚಾಗುತ್ತವೆ. ಆ ಸಂದರ್ಭದಲ್ಲಿ ನಿರ್ಜಲೀಕರಣ ವಾಗದಂತೆ ತಡೀಬೇಕು ಅಂದ್ರೆ ಅಗತ್ಯ ಪ್ರಮಾಣದಲ್ಲಿ ನೀರಿನಂಶ ಇರಲೇಬೇಕು.  ಇಲ್ಲದಿದ್ದರೆ ಬೇಗ ನಿರ್ಜಲೀ ಕರಣವಾಗಿ ಚಟುವಟಿಕೆಗಳಲ್ಲಿ ಮುಂದುವರಿಯೋಕೆ ಸಾಧ್ಯವಾಗೋಲ್ಲ. ಹೆಚ್ಚು ನೀರಿನಂಶ ಇದ್ರೆ ಹೆಚ್ಚು ಹೊತ್ತು ಚಟುವಟಿಕೆಗಳಲ್ಲಿ ತೊಡಗಿ ಆ ಮೂಲಕ ಹೆಚ್ಚೆಚ್ಚು ಕ್ಯಾಲೋರಿಗಳನ್ನ ಕರಗಿಸೋಕೆ ಸಾಧ್ಯವೆಂಬ ಮತ್ತೊಂದು ಕಾರಣವೂ ಇದರಲ್ಲಡಗಿದೆ.

ಅನಗತ್ಯ ಕ್ಯಾಲೋರಿ ಗಳಿಕೆಯ ತಡೆಗಟ್ಟುವಿಕೆ: ಈಗ ಬಾಯಾರಿತು ಅಂದ್ರೆ ಏನು ಮಾಡ್ತೀವಿ ?  ತಕ್ಷಣಕ್ಕೆ ಸಿಕ್ಕಿದ್ದೇನಾದ್ರೂ ಕುಡಿತೀವಿ. ಆದರೆ ಏನು ಕುಡೀತೀವಿ ಅನ್ನೋದು  ಪ್ರಶ್ನೆ. ನೀವು ಕೋಲಾ, ಪೆಪ್ಸಿಯೋ ಮತ್ಯಾವುದೋ ಪಾನೀಯ ಗುಟುಕರಿಸಿದರೆ ಅವು ಜೀವದಾಯಿನಿ ಅಲ್ಲ. ಅಂದ್ರೆ ಆ ಪೇಯಗಳು ನಿಧಾನವಾಗಿ ನಿಮ್ಮ ಆರೋಗ್ಯ ಹಾಳು ಮಾಡುವುದರ ಜೊತೆಗೆ ತಕ್ಷಣಕ್ಕೊಂದಿಷ್ಟು ಕ್ಯಾಲೋರಿಗಳನ್ನಂತೂ ದೇಹಕ್ಕೆ ಸೇರ್ಪಡೆಗೊಳಿಸುತ್ತದೆ. ಇದೇ ತರಹ ಕಾಫಿ, ಚಹಾಗಳು ಸಹಾ. ಇವುಗಳ ಬದಲು ನೀವು ನೀರು ಕುಡೀತೀರ ಅಂದ್ರೆ ಅಷ್ಟು ಅನಗತ್ಯ ಕ್ಯಾಲೋರಿಗಳು ನಿಮ್ಮ ದೇಹದ ಭಾರ ಹೆಚ್ಚಿಸೋದನ್ನ ತಪ್ಪಿಸಿಕೊಳ್ಳಬಹುದು!

ನೀರಿನ ತಾಪವನ್ನು ದೇಹದ ತಾಪಕ್ಕೆ ತರುವಲ್ಲಿನ ಕ್ಯಾಲೋರಿ ಬಳಕೆ: ಯಾವುದೇ ವಸ್ತು ನಮ್ಮ ದೇಹವನ್ನು ಸೇರಿದರೆ ತಾಪವನ್ನು ನಮ್ಮ ದೇಹದ ತಾಪಮಾನಕ್ಕೆ ತರುವಲ್ಲಿ ಒಂದಿಷ್ಟು ಕ್ಯಾಲೋರಿಗಳ ಶಕ್ತಿ ಖರ್ಚಾಗುತ್ತದೆ.

ನಮ್ಮ ದೇಹದ ಸಾಮಾನ್ಯ ಉಷ್ಣಾಂಶ 37ಡಿಗ್ರಿ ಎಂದು, ನಾವಿರೋ ನಗರದ ಈಗಿನ ತಾಪಮಾನ 26 ಡಿಗ್ರಿ ಅಂತಲೂ ಇಟ್ಟುಕೊಳ್ಳೋಣ. ಹೊರಗೆಲ್ಲೋ ಸುಮಾರು ಹೊತ್ತಿಂದ ಇಟ್ಟಿರುವ ನೀರಿನ ತಾಪವೂ ಈಗ 26 ಆಗಿದೆ ಎಂದಿಟ್ಟುಕೊಂಡು ಅಂತಹ ಒಂದು ಲೀಟರ್ ನೀರನ್ನು ನಾವು ಕುಡಿಯುತ್ತೇವೆ ಅಂದಿಟ್ಟುಕೊಳ್ಳೋಣ. ಆ ನೀರನ್ನು ನಮ್ಮ ದೇಹದ ತಾಪಮಾನಕ್ಕೆ ತರೋಕೆ ಒಂದು ಡಿಗ್ರಿಗೆ ಒಂದು ಗ್ರಾಂಗೆ 1 ಕ್ಯಾಲೋರಿ  ಖರ್ಚಾಗುತ್ತದೆ. 11 ಡಿಗ್ರಿ ಹೆಚ್ಚಳಕ್ಕೆ 11 ಕ್ಯಾಲೋರಿ. ಒಂದು ಲೀಟರಿಗೆ 1100 ಕ್ಯಾಲೋರಿ ಖರ್ಚಾಗುತ್ತೆ ಅಂದುಕೊಂಡ್ರೆ ನಿಮ್ ಅಂದಾಜು ತಪ್ಪು.

ಐಸಿನ ನೀರನ್ನು ಕುಡಿದ್ರೆ ಹೆಚ್ಚು ಕ್ಯಾಲೋರಿ ಬರ್ನಾಗುತ್ತೆ ಅನ್ನೋದು ಪ್ರಮಾಣೀಕರಿಸಿದ ಸತ್ಯವೇ ಆಗಿದ್ರೂ ಅದರಿಂದ ಯದ್ವಾತದ್ವಾ ಕ್ಯಾಲೋರಿಗಳೇನು ಖರ್ಚಾಗೊಲ್ಲ ಅನ್ನುತ್ತೆ ಮತ್ತೊಂದು ವರದಿ. ಅದರಲ್ಲಿನ ವರದಿಯ ಪ್ರಕಾರ 10 ಗ್ಲಾಸು ಐಸ್ ನೀರು ಕುಡಿಯೋದ್ರಿಂದ ಅಬ್ಬಬ್ಬಾ ಅಂದ್ರೆ 80 ಹೆಚ್ಚು ಕ್ಯಾಲೋರಿಗಳು ಖರ್ಚಾಗಬಹುದು(ಮೊದಲಿನ ಲೆಕ್ಕಾಚಾರಕ್ಕಿಂತ ಹೆಚ್ಚು) ಅಷ್ಟೇ.

ಬಿಸಿನೀರು ಕುಡಿದ್ರೆ ಕ್ಯಾಲೋರಿ ಕರಗಲ್ವಾ?
ಈಗ ನನಗೆ ತಣ್ಣನೆಯ ನೀರು ಕುಡಿಯೋಕೆ ಇಷ್ಟವಾಗೋಲ್ಲ. ಉಗುರುಬೆಚ್ಚಗಿನ ನೀರು ಕುಡಿದರೆ ಕ್ಯಾಲೋರಿ ಕರಗುವುದಿಲ್ಲವೇ? ಹಾಗೇನೋ ಇಲ್ಲ. ಬೆಚ್ಚನೆಯ ನೀರು ಕುಡಿಯೋದ್ರಿಂದಲೂ ಕ್ಯಾಲೋರಿಗಳು ಕರಗುತ್ತೆ. ಇನ್ನೂರೈವತ್ತು ಮಿ.ಲೀ ನೀರು ಕುಡಿಯೋದ್ರಿಂದ ಸುಮಾರು 8 ಕ್ಯಾಲೋರಿ ಕರಗುತ್ತೆ ಅನ್ನುತ್ತೆ ಈ ಅಧ್ಯಯನ. ಇದು ತಣ್ಣನೆಯ, ಐಸಿನ ನೀರಿಗೆ ಹೋಲಿಸಿದ್ರೆ ಕಮ್ಮಿಯೇ ಆದ್ರೂ ತೂಕ ಇಳಿಸಬೇಕು ಅಂತ ಕನಸಿಲ್ಲದ ಸಾಮಾನ್ಯ ವ್ಯಕ್ತಿಯ ಆರೋಗ್ಯದ ದೃಷ್ಟಿಯಿಂದ ಖುಷಿಯ ವಿಷಯವೇ.

ಹೊಟ್ಟೆಬಾಕತನಕ್ಕೆ ಪರಿಹಾರ: ಕೆಲವರಿಗೆ ಯಾವಾಗಲೂ ಏನಾದ್ರೂ ತಿನ್ನುತ್ತಿರಬೇಕು ಅನ್ನೋ ಹಂಬಲ. ಜಂಕ್ ಫುಡ್‌ಗಳನ್ನ ತಿಂದು ತಿಂದೇ ದೇಹದ ಬೊಜ್ಜು ವಿಪರೀತವಾಗಿ ಬೆಳೆಯೋಕೆ ಶುರುವಾಗುತ್ತೆ. ಏನಾದರೂ ತಿನ್ನಬೇಕೆಂಬ ಬಯಕೆಯಾದಾಗಲೆಲ್ಲಾ ನೀರು ಕುಡಿಯಿರಿ ಅನ್ನುತ್ತಾರೆ ವಿಜ್ಞಾನಿಗಳು!

ಜಂಕ್ ಫುಡ್ಡಿನಿಂದ ಬರೋ  ಕ್ಯಾಲೋರಿಗಳನ್ನ ತಪ್ಪಿಸುವುದರ ಜೊತೆಗೆ ಹಾಳಾಗೋ ಆರೋಗ್ಯವನ್ನೂ ಉಳಿಸಿಕೊಂಡಂತೆ ಆಗುತ್ತದೆ. ನೀರಿನಿಂದಾಗೋ ಲಾಭವನ್ನು ಪಡೆದಂತೂ ಆಗುತ್ತದೆ.  ಒಂದೇ ಏಟಿಗೆ ಮೂರು ಹಕ್ಕಿ ಹೇಗೆ? ಇನ್ನೂ ಮುಂದುವರಿದು ಊಟಕ್ಕಿಂತ ಸ್ವಲ್ಪ ಮುಂಚೆ ನೀರು ಕುಡಿದ್ರೆ ತಿನ್ನೋ ಆಹಾರದ ಪ್ರಮಾಣ ಕಡಿಮೆಯಾಗುತ್ತೆ ಅಂತಾರೆ ಆಹಾರ ತಜ್ಞರಾದ ಮೆಲಿನಾ ಜಂಪೋಲಿಸ್ ಮುಂತಾದವರು. ಅಮೆರಿಕಾ ಆಹಾರ ಒಕ್ಕೂಟ ನಡೆಸಿದ ಅಧ್ಯಯನದ ಪ್ರಕಾರ ಊಟಕ್ಕಿಂತ ಮುಂಚೆ ನೀರು ಕುಡಿಯೋ ಜನ ಸುಮಾರು 75 ಕ್ಯಾಲೋರಿಯಷ್ಟು ಕಡಿಮೆ ಆಹಾರ ಸೇವಿಸುತ್ತಾರಂತೆ.

ಮತ್ತೇನು ಲಾಭಗಳಿವೆ?
ನೀರಿನಿಂದ ಇನ್ನೂ ಹಲವು ಪ್ರಯೋಜನಗಳಿವೆ. ನೀರಿನಿಂದ ದೇಹದಲ್ಲಿನ ಕಲ್ಮಷಗಳ ಹೊರತಳ್ಳುವಿಕೆ ಹೆಚ್ಚಾಗುವುದಲ್ಲದೇ ಮೂತ್ರಪಿಂಡದ ಕಲ್ಲುಗಳು, ಮೂತ್ರಕೋಶದ ಕ್ಯಾನ್ಸರ್ ಆಗುವ ಅಪಾಯಗಳನ್ನು ತಡೆಗಟ್ಟಬಹುದು ಎನ್ನುತ್ತದೆ ಇನ್ನೊಂದು ಅಧ್ಯಯನ. ಇದರಿಂದ ಚರ್ಮದ ಆರೋಗ್ಯ, ಮಾನಸಿಕ ಸಂತುಲನ, ಕೀಲುಗಳ, ದೇಹ ಕೋಶಗಳ ಆರೋಗ್ಯವನ್ನು ಕಾಪಾಡಲೂ ಸಹಕಾರಿಯಾಗಿದೆ.

ಅಂದ ಹಾಗೆ ಬರೀ ನೀರು ಕುಡಿದರಷ್ಟೇ ಆರೋಗ್ಯವಲ್ಲ. ಈಜು, ದೋಣಿ ನಡೆಸೋದು, ಮೊದಲಾದ ನೀರಲ್ಲಿನ ವ್ಯಾಯಾಮಗಳಿಂದ ದೇಹಕ್ಕಾಗುವ ಒಟ್ಟಾರೆ ಪ್ರಯೋಜನಗಳ ಬಗ್ಗೆಯೂ ಅಧ್ಯಯನ ನಡೆದಿದೆ. ಇದರಲ್ಲಿನ ಕೆಲವು ವ್ಯಾಯಾಮಗಳು ಗಂಟೆಗೆ 700 ಕ್ಯಾಲೋರಿಯಷ್ಟು ಕರಗಿಸುತ್ತದೆ ಎನ್ನುವುದು ಈ ಅಧ್ಯಯನದ ಮುಖ್ಯಾಂಶವಾಗಿದೆ.

ಸುಲಭವಾಗಿ ಹೇಳಬೇಕಂದ್ರೆ ಗಂಟೆಗೆ ಸುಮಾರು 6 ಕಿ.ಮೀ ವೇಗದಲ್ಲಿ ಒಂದು ಕಿ.ಮೀ ಓಡಿದರೆ ಕರಗುವ ಕ್ಯಾಲೋರಿಗಳು ಸುಮಾರು 76. ಅಂದ್ರೆ ಗಂಟೆಗೆ 760. ನೀರಿನಲ್ಲಿನ ಒಂದು ಗಂಟೆ ವ್ಯಾಯಾಮ ಗಂಟೆಗೆ ಸುಮಾರು ಹತ್ತು ಕಿ.ಮೀ ಓಡಿದಷ್ಟು ಅಂದಂತೆ !

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT