ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರ್ಗೋಪುರದ ಕೌತುಕ ಕಥನ...

Last Updated 22 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ವಿಜಯಪುರದಲ್ಲಿ ಆದಿಲ್‌ಶಾಹಿಗಳ ಆಳ್ವಿಕೆ ಕಾಲದಲ್ಲಿ ಇದ್ದ ಜನಸಂಖ್ಯೆ ಸುಮಾರು ಹತ್ತು ಲಕ್ಷ. ಭೂಮಿಯು ಕಪ್ಪು ಮಣ್ಣಿನಿಂದ ಸಮೃದ್ಧವಾಗಿದ್ದರೂ ಪದೇ ಪದೇ ಜಲಕ್ಷಾಮ ಉಂಟಾಗುತ್ತಿತ್ತು.

ಪರಾಕ್ರಮಿಯಾಗಿದ್ದ ಒಂದನೇ ಅಲಿ ಆದಿಲ್‌ಶಾಹ, ಸಮೀಪದ ತೊರವೆಯ ಕೆರೆಯಿಂದ ಸುರಂಗ ಮಾರ್ಗದ ಮುಖಾಂತರ ನಗರ ಪ್ರದೇಶಕ್ಕೆ ಸರದಾರ ಕಿಶ್ವರಖಾನನ ಸಹಾಯದಿಂದ ನೀರನ್ನು ತರಿಸಿದ. ಈ ಸುರಂಗಗಳಿಂದ ಬಾವಿಗಳಿಗೆ ನೀರು ಪೂರೈಕೆಯಾಗಿ ಅಲ್ಲಿಂದ ನೀರ್ಗೋಪುರಗಳಿಗೆ ಹರಿದು, ಅಲ್ಲಿ ಸಂಗ್ರಹಗೊಳ್ಳುತ್ತಿತ್ತು.

ಇದರಿಂದ ರಾಜ, ಸರದಾರ, ಅಮೀರ್ ಮತ್ತಿತರರ ಮಹಲುಗಳಿಗೆ ನೀರು ಪೂರೈಕೆಯಾಗುತ್ತಿತ್ತು. ‘ಜಗದ್ಗುರು’ ಉಪಾಧಿಯಿಂದ ಖ್ಯಾತಿ ಪಡೆದ ಎರಡನೇ ಇಬ್ರಾಹಿಂ ಆದಿಲ್‌ಶಾಹನ ಕಾಲದಲ್ಲಿ ಕೆಲ ಬೃಹತ್ ಬಾವಿಗಳ ನಿರ್ಮಾಣ ಕಾರ್ಯ ಅವಿರತವಾಗಿ ನಡೆಯಿತು.

ಭವ್ಯ ಗೋಳ ಗುಮ್ಮಟವನ್ನು ಕಟ್ಟಿಸಿದ ಮಹಮ್ಮದ ಆದಿಲ್‌ಶಾಹ ತನ್ನ ಆಡಳಿತಾವಧಿಯಲ್ಲಿ ನಗರದಿಂದ ಮೂರು ಕಿಲೋ ಮೀಟರ್ ಅಂತರದಲ್ಲಿ ಕೆರೆಯೊಂದನ್ನು ತೋಡಿ ಅದಕ್ಕೆ ‘ಬೇಗಂ ತಾಲಾಬ್’ ಎಂದು ನಾಮಕರಣ ಮಾಡಿದ. ಒಂದನೇ ಅಲಿ ಆದಿಲ್‌ಶಾಹನಿಗಿಂತ ಒಂದು ಹೆಜ್ಜೆ ಮುಂದಿದ್ದ ಈ ಅರಸನ ಕಾಲದಲ್ಲಿ ಪಕ್ಕದ ಮನಗೂಳಿಯ ಕುಂಬಾರ (ನಾಡಗೌಡ) ಮನೆತನದವರು ತಯಾರಿಸಿದ ಸುಟ್ಟ ಮಣ್ಣಿನ ಕೊಳವೆಗಳನ್ನು ಬಳಸಲಾಯಿತು.

ಈ ಕೊಳವೆಗಳು ಐಸ್‌ಕ್ಯಾಂಡಿಗಳ ಕೋನುಗಳನ್ನು ಹೋಲುತ್ತವೆ. ಅವುಗಳನ್ನು ಒಂದಕ್ಕೊಂದು ಸೇರಿಸಿ ಸೋರದಂತೆ ಗಚ್ಚನ್ನು ಲೇಪಿಸುತ್ತಿದ್ದರು. ಈ ಕೊಳವೆಗಳು ನೀರ್ಗೋಪುರಗಳನ್ನು ಕೂಡುತ್ತಿದ್ದವು. ನೀರ್ಗೋಪುರಗಳ ತಳಭಾಗದಲ್ಲಿದ್ದ ತೂಬಿನಿಂದ ನೀರು ಸಂಗ್ರಹಗೊಂಡು ಮೇಲ್ಭಾಗದಲ್ಲಿದ್ದ ತೂಬಿನ ಮುಖಾಂತರ ಪೂರೈಕೆಯಾಗುತ್ತಿತ್ತು.

ನೀರು ಹೊತ್ತು ತರುವ ಸುಟ್ಟ ಮಣ್ಣಿನ ಕೊಳವೆಗಳನ್ನು ಪೂರೈಸಿದ್ದಕ್ಕಾಗಿ ಕುಂಬಾರ ಮನೆತನದವರಿಗೆ ಮಹಮ್ಮದ ಆದಿಲ್‌ ಶಾಹನು ವತನಕಿ ಜಮೀನನ್ನು ನೀಡಿ ಔದಾರ್ಯ ಮೆರೆದ. ಸದ್ಯಕ್ಕೆ ಸುಮಾರು ಇಪ್ಪತ್ತು ನೀರ್ಗೋಪುರಗಳು ನಗರ ಮತ್ತು ಸುತ್ತಮುತ್ತಲೂ ಕಾಣಸಿಗುತ್ತವೆ. ಬೆರಳೆಣಿಕೆಯಷ್ಟು ಮಾತ್ರ ಶಿಥಿಲಗೊಂಡಿವೆ.

ಈ ನೀರ್ಗೋಪುರಗಳ ಒಂದು ವಿಶೇಷವೆಂದರೆ ಪ್ರತಿಯೊಂದರ ಮೇಲೆ ಪರ್ಶಿಯನ್ ಭಾಷೆಯ ಹಸಿರು ಬಣ್ಣದ ಗ್ರೆನೈಟ್ ಶಿಲಾಫಲಕಗಳಲ್ಲಿ ಶಾಸನಗಳನ್ನು ಕೊರೆಯಿಸಲಾಗಿದೆ. ಬಹುತೇಕ ಶಾಸನಗಳು ಇದುವರೆಗೂ ಮಾಸದೇ, ಮುರಿಯದೇ ಉಳಿದುಕೊಂಡು ಬಂದಿವೆ ಅಥವಾ ಶಾಸನಪ್ರಿಯರು ಅವುಗಳನ್ನು ರಕ್ಷಿಸಿದ್ದಾರೆ ಎನ್ನಬಹುದು.

ವಿಜಯಪುರ ನಗರದ ಹೃದಯಭಾಗದ ಅಂಡು ಮಸೀದಿ ಎದುರಿಗಿರುವ ನೀರ್ಗೋಪುರದ ಮೇಲೆ ಮೂರು ಹಸಿರು ಬಣ್ಣದ ಶಾಸನಗಳನ್ನು ಟಂಕಿಸಲಾಗಿದೆ. ಮಹ್ಮದ ಆದಿಲ್‌ಶಾಹನ ಆಜ್ಞೆಯನ್ನು ಶಿರಸಾವಹಿಸಿ ಬೇಗಂ ತಾಲಾಬಿನಿಂದ ನೀರನ್ನು ತರುವಲ್ಲಿ ಬೆವರು ಸುರಿಸಿದ ಸರದಾರ ಅಫಜಲ್‌ಖಾನನ ಗುಣಗಾನವನ್ನು ಮಾಡುತ್ತ ಈ ಶಾಸನ ಗೌರವಾರ್ಪಣೆ ಮಾಡಿದೆ.

‘ಜಲದಾಹದಿಂದ ಸಂಕಟಕ್ಕೀಡಾಗಿರುವ ತುಟಿಗಳ ತೇವವನ್ನು ರಕ್ಷಿಸುವಲ್ಲಿ ವೀರ, ಪರಾಕ್ರಮಿ, ಧೈರ್ಯಸಾಗರ ಮಹಾಮಂತ್ರಿಗಳ ಆಧಾರಸ್ತಂಭ, ಅಭ್ಯುದಯದ ಸಾಕಾರಮೂರ್ತಿ ಮಹಮ್ಮದ ಆದಿಲ್‌ಶಾಹ ತನ್ನ ನಡತೆಯಿಂದ ಪ್ರಜೆಗಳ ಹೃದಯಕ್ಕೆ ಹತ್ತಿರನಾಗಿದ್ದಾನೆ’ ಎಂದು ಇದರಲ್ಲಿ ಸ್ತುತಿಸಲಾಗಿದೆ.

ಒಟ್ಟಾರೆ ಆದಿಲ್‌ಶಾಹಿಗಳ ಕಾಲದಲ್ಲಿ ಕೆರೆ, ಬಾವಿಗಳಿಂದ ಜನಬಳಕೆಗೆ ಬಂದ ನೀರು ತದನಂತರ ಮಸೀದಿ, ದರ್ಗಾ ಮಹಲುಗಳ ಎದುರಿನ ಪುಷ್ಕರಣೆಗಳಲ್ಲಿ ಬಗೆಬಗೆಯ ಕಾರಂಜಿ ರೂಪ ತಾಳಿ ರಂಜಿಸುತ್ತ ಮುದ ನೀಡುತ್ತಿತ್ತು. ನಗರ ಪ್ರದೇಶ ಹಾಗೂ ಹೊರವಲಯಗಳಲ್ಲಿ ಜಲಮಂಟಪ ಮತ್ತು ಮಹಲುಗಳಲ್ಲಿನ ಕಾರಂಜಿಗಳು ಆ ಅರಸರ ದೂರದರ್ಶಿತ್ವ ಮತ್ತು ಜನೋಪಯೋಗಿ ಕಾರ್ಯಕ್ರಮಗಳಿಗೆ ಮೂಕಸಾಕ್ಷಿಯಾಗಿ ಒಡಲನ್ನು ಬರಿದು ಮಾಡಿಕೊಂಡು ಅನಾಥ ಪ್ರಜ್ಞೆಯಿಂದ ಬಳಲುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT