ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀವು ಎಣಿಸಿದಂತೆ ಆಗದಿದ್ದಾಗ...

ಸ್ವಸ್ಥ ಬದುಕು
Last Updated 28 ಜೂನ್ 2016, 19:30 IST
ಅಕ್ಷರ ಗಾತ್ರ

ಕೋಪ ಆರೋಗ್ಯಕ್ಕೆ ಕೆಟ್ಟದ್ದು ಎಂಬುದು ನಮಗೆಲ್ಲ ಗೊತ್ತು. ಒತ್ತಡ ತರುವ ಹಾರ್ಮೋನ್‌ಗಳು ದೇಹದಲ್ಲಿ ಬಿಡುಗಡೆಯಾದಾಗ ರಕ್ತದೊತ್ತಡ ಹೆಚ್ಚುತ್ತದೆ. ಕಣ್ಣು ಕೆಂಪಗಾಗುತ್ತದೆ. ಉಸಿರಾಟ ವೇಗವಾಗುತ್ತದೆ.

ಹೃದಯ ಎಷ್ಟು ವೇಗವಾಗಿ ಬಡಿದುಕೊಳ್ಳುತ್ತದೆ ಅಂದರೆ ನಿಮ್ಮ ಎದೆಗೂಡಿನೊಳಗೆ ಯಾರೋ ಸುತ್ತಿಗೆಯಿಂದ ಬಡಿಯುತ್ತಿರುವಂತೆ ಭಾಸವಾಗುತ್ತದೆ. ಮಾಂಸಖಂಡಗಳು ಬಿಗಿದುಕೊಳ್ಳುತ್ತವೆ. ಜೀರ್ಣವ್ಯೂಹ ಸರಿಯಾಗಿ ಕೆಲಸ ಮಾಡುವುದಿಲ್ಲ. ಹೀಗಿರುವಾಗ ನೀವೇಕೆ ಕೋಪವೆಂಬ ವಿಷವನ್ನು ನಿಮ್ಮೊಳಗೆ ಇಳಿಸಿಕೊಳ್ಳುತ್ತೀರಿ? ನಿಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತೀರಿ? ಜಗತ್ತಿಗೂ ಕೋಪದ ವಿಷ ಉಣಿಸುತ್ತೀರಿ?

ಕೋಪ ಎಂಬುದು ಸತ್ಯ ಅಥವಾ ವಿವೇಚನಾ ಶಕ್ತಿಯನ್ನು ಆಧರಿಸಿರುವುದಿಲ್ಲ.  ಎಲ್ಲವೂ ನಮ್ಮ ಮೂಗಿನ ನೇರಕ್ಕೆ ನಡೆಯಬೇಕು ಎನ್ನುವ ಬಯಕೆಯಿಂದ ಅದು ಹುಟ್ಟುತ್ತದೆ.

ನಮ್ಮ ಬಯಕೆ, ಅಹಂಕಾರ ಹೆಚ್ಚಿದಂತೆ ಸಿಟ್ಟೂ ಹೆಚ್ಚುತ್ತದೆ. ನಮ್ಮ  ಗಮನ ಸರಿಯಾದ ದಿಕ್ಕಿನಲ್ಲಿ ಹರಿಯದೇ ಇದ್ದಾಗ ಸಿಟ್ಟು ಬರುತ್ತದೆ. ನಮ್ಮೊಳಗೆ ಹಾಗೂ ನಮ್ಮ ಸುತ್ತಲೂ ಖುಷಿಗೆ ಕಾರಣವಾಗುವ ಸಂಗತಿಗಳತ್ತ ಗಮನ ಹರಿಸಿದಾಗ ನಮ್ಮಲ್ಲಿ ಸಂತೃಪ್ತಿ ಮೂಡುತ್ತದೆ. ನಮ್ಮ ಮನಸ್ಸಿಗೆ ಸುಖ, ತರುವ, ನಾವು ಎಣಿಸಿದಂತೆ ನಡೆಯುವ ನಿತ್ಯದ ಚಿಕ್ಕ ಸಂಗತಿಗಳತ್ತ ಗಮನ ಹರಿಸಿದಾಗ ನಮ್ಮಲ್ಲಿ ಸಂತೃಪ್ತಿ ಮೂಡುತ್ತದೆ. ಇವೆಲ್ಲ ಬೆಕ್ಕನ್ನು ಬೆಚ್ಚಗೆ ಇಡುವ ಎಳೆಬಿಸಿಲಿನಂತೆ ಇರುತ್ತವೆ.

ಆದರೆ, ಜನರಲ್ಲಿ ತಪ್ಪು ಭಾವನೆಯೇ ತುಂಬಿರುತ್ತದೆ. ಸಂತೃಪ್ತಿ ಮೂಡಿದಲ್ಲಿ  ಪ್ರಯತ್ನಿಸುವ, ಹೊಸದಕ್ಕೆ ತುಡಿಯುವ ಶಕ್ತಿ ಕುಂದುತ್ತದೆ ಎಂದು ಅವರು ಅಂದುಕೊಳ್ಳುತ್ತಾರೆ. ಎಂತಹ ತಪ್ಪು ಕಲ್ಪನೆ ಇದು.

ಸಂತೃಪ್ತಿಯಿಂದ ಛಲ ಅಥವಾ ಶ್ರದ್ಧೆ ಕಡಿಮೆಯಾಗುವುದಿಲ್ಲ. ಸಂತೃಪ್ತಿಯಿದ್ದಾಗ ಮನಸ್ಸಿನಲ್ಲಿ ಏಳುವ ಸಿಟ್ಟಿನ ನಾಟಕಗಳು ಕಡಿಮೆಯಾಗುತ್ತದೆ. ಬದುಕಿನಲ್ಲಿ ಹಿನ್ನಡೆಯಾದಾಗ ಸಂತೃಪ್ತ ಮನುಷ್ಯ ಸಮಾಧಾನದಿಂದ ವರ್ತಿಸುತ್ತಾನೆ.

ಅದೇ ರೀತಿ ಯಶಸ್ಸು ದಕ್ಕಿದಾಗ ಸಂತೃಪ್ತ ಮನುಷ್ಯ ಮತ್ತೂ ಬೇಕು, ಇನ್ನೂ ಬೇಕು ಎಂದು ಕುಣಿಯುವುದಿಲ್ಲ. ಅವರಲ್ಲಿ ಕೃತಜ್ಞತಾಭಾವ ಮತ್ತಷ್ಟು ಹೆಚ್ಚುತ್ತದೆ.

ನಿಮ್ಮ ಕೆಲಸಗಳು ಹೂವೆತ್ತಿದಂತೆ ಆದಾಗ ನಿಮ್ಮೊಳಗೆ ಶಾಂತಿಯ ಸಿಹಿ ಹೆಚ್ಚುತ್ತದೆ. ಶಾಂತಿಯ ಪ್ರವಾಹ ನಿಮ್ಮೊಳಗೆ ಮಧುವಿನಂತೆ ಹರಿಯುತ್ತದೆ. ಅದು ಸಂತೃಪ್ತಿ.

ನಂಬಿಕೆಯ ಬಗೆಗೂ ಜನರಿಗೆ ತಪ್ಪು ತಿಳಿವಳಿಕೆ ಇರುತ್ತದೆ. ನಂಬಿಕೆ ಕುರುಡಾಗಿರುತ್ತದೆ. ಯಾವುದನ್ನಾದರೂ ಪೂರ್ಣವಾಗಿ ನಂಬಿದಲ್ಲಿ ನಾವು ಕುರುಡರಂತೆ ವರ್ತಿಸುತ್ತೇವೆ ಎನ್ನುವ ಪರಿಕಲ್ಪನೆ ಇಲ್ಲಿರುತ್ತದೆ.

ನನ್ನ ಅನುಭವ  ಬೇರೆಯದನ್ನೇ ಹೇಳುತ್ತದೆ. ನಂಬಿಕೆಯಿಂದ ನಾವು ಕುರುಡಾಗುವುದಿಲ್ಲ. ಅದು ನಮಗೆ ವಿಶಾಲ ದೃಷ್ಟಿಕೋನವನ್ನು ಕೊಡುತ್ತದೆ. ನಮ್ಮ ಕಣ್ಣುಗಳು ಮತ್ತಷ್ಟು ಸೂಕ್ಷ್ಮವಾಗುತ್ತ ಹೋಗುತ್ತವೆ. ಸೂರ್ಯ ಉದಯಿಸುತ್ತಾನೆ ಎಂಬ ವಿಶ್ವಾಸದಿಂದ ಅಂಧಕಾರದಲ್ಲಿ ನೆಮ್ಮದಿಯಿಂದ ಇರುವುದು ನಂಬಿಕೆ. ಪಿಯಾನೊವನ್ನು ನೋಡುತ್ತ ಇದರಿಂದ ಸುಂದರ ಸಂಗೀತ ಹೊರಹೊಮ್ಮುತ್ತದೆ ಎಂದುಕೊಳ್ಳುವುದು ನಂಬಿಕೆ. ಅಸ್ವಸ್ಥತೆಯ ನಂತರ ನಾವು ಗುಣಮುಖರಾಗುತ್ತೇವೆ ಎಂದುಕೊಳ್ಳುವುದು ನಂಬಿಕೆ.

ನಂಬಿಕೆ ನಮ್ಮನ್ನು ಕುರುಡಾಗಿಸುವುದಿಲ್ಲ. ಆದರೆ, ಸಿಟ್ಟು ಖಂಡಿತ ನಮ್ಮನ್ನು ಕುರುಡಾಗಿಸುತ್ತದೆ. ಅತಿಯಾದ ಕೋಪ ಬಂದಾಗ ಕೆಲವರಿಗೆ ಕಣ್ಣು ಕಾಣಿಸುವುದಿಲ್ಲ. ನಿಮಗೆ ಯಾವುದರ ಮೇಲೂ ಗಮನ ನೀಡಲು ಸಾಧ್ಯವಾಗುವುದಿಲ್ಲ.

ನೀವು ಬಾಗಿಲಿಗೆ ಮುಖ ಬಡಿದುಕೊಳ್ಳುತ್ತೀರಿ. ಎಡವಿ ಬೀಳುತ್ತೀರಿ. ಚಾಕುವಿನಿಂದ ಕೈಕತ್ತರಿಸಿಕೊಳ್ಳುತ್ತೀರಿ. ಲೋಟ ಕೈ ಜಾರಿ ಬೀಳುತ್ತದೆ. ಸಿಟ್ಟಿನಿಂದ ನಿಮ್ಮ ಮಿದುಳು ಸಣ್ಣಗಾಗಿರುತ್ತದೆ. ನಿಮ್ಮ ಜಗತ್ತೂ ಸಹ ಅಷ್ಟೇ ಸಣ್ಣದಾಗುತ್ತ ಹೋಗುತ್ತದೆ.

ಊಹುಂ....ಹೀಗಾಗಬಾರದು. ಮತ್ತಷ್ಟು ಉತ್ತಮವಾಗಿದ್ದನ್ನು ಪಡೆಯುವ ಅರ್ಹತೆ ನಿಮಗಿದೆ. ನಿಮ್ಮ ಸಿಟ್ಟನ್ನು ಹೇಗೆ ಕಡಿಮೆಮಾಡಿಕೊಳ್ಳಬೇಕು ಅಂದರೆ ಹೀಗಿರಬೇಕು... ಹಾಗಿರಬೇಕು ಎಂಬ ಬಯಕೆಗಳನ್ನೆಲ್ಲ ಕಡಿಮೆ ಮಾಡುತ್ತ ಹೋಗಬೇಕು. ನಿಜವಾಗಿ ನೋಡಿದಾಗ ನಮ್ಮ ಅಗತ್ಯಗಳು ಕಡಿಮೆಯಾಗೇ ಇರುತ್ತವೆ. ಆದರೆ, ನಮ್ಮ ಆಸೆ, ಬಯಕೆಗಳಿಗೆ ಮಿತಿಯೇ ಇರುವುದಿಲ್ಲ. ನಮ್ಮ ಅಗತ್ಯಗಳೆಲ್ಲ ಪೂರೈಸಿದಾಗ ನಾವು ನಿಜವಾಗಲೂ ಆರಾಮಾಗಿ ಇರುತ್ತೇವೆ.  

ಆರಾಮವಾಗಿ ಇರುವುದು ಅಂದರೆ ಕೆಲಸ ಮಾಡದೇ ಇರುವುದಲ್ಲ; ಕೆಲಸದ ವಿಧಾನವನ್ನು ಬದಲಿಸಿಕೊಳ್ಳುವುದು. ಕೆಲಸದ ನಂತರ ಯಾವುದೇ ಪ್ರತಿಫಲ ಇಲ್ಲದೇ ಇದ್ದರೂ ಆಗ ನೀವು ಶ್ರದ್ಧೆಯಿಂದ ಕೆಲಸ ಮಾಡುತ್ತೀರಿ. ದಿನದ ಕೆಲಸ ಮುಗಿದಾಗ ದಣಿದಿದ್ದರೂ ಸಂತಸ ನಿಮ್ಮಲ್ಲಿ ಇರುತ್ತದೆ.

ನಿಮ್ಮೊಳಗೆ ಸಂತೃಪ್ತಭಾವ ಇದ್ದಾಗ ಹೆಚ್ಚುವರಿ ಕೆಲಸ ಬಿದ್ದರೂ ಅದು ಹೊರೆ ಎನಿಸುವುದಿಲ್ಲ. ನೀವು ಸಂತೃಪ್ತಿಯಿಂದ ಇದ್ದಾಗ ಖುಷಿಯಿಂದ ಎಷ್ಟು ಕೆಲಸ ಮಾಡಬಹುದು ಎಂಬುದು ನಿಮಗೆ ಗೊತ್ತಿರುತ್ತದೆ. ಅಲ್ಲದೇ ಕೆಲಸ ಅತಿಯಾದಾಗ ಅದನ್ನು ಎಲ್ಲಿ ನಿಲ್ಲಿಸಬೇಕು ಎಂಬುದೂ ನಿಮಗೆ ತಿಳಿದಿರುತ್ತದೆ.

ವಿಶ್ರಾಂತಿ ಅಂದರೆ ಅದೊಂದು ಆಸನವಲ್ಲ. ಅದೊಂದು ಭಂಗಿಯೂ ಅಲ್ಲ. ವಿಶ್ರಾಂತಿ ಅಂದರೆ ನಿಮ್ಮೊಳಗಿನ ಶಕ್ತಿಯ ಪರಿವರ್ತನೆ.  ನನಗೆ ಬೇಕಾಗಿರುವುದು ಸಿಗಲಿಲ್ಲ ಎಂದಾದರೆ ಅದು ಇಲ್ಲದೆಯೂ ಬದುಕುತ್ತೇನೆ ಎಂದುಕೊಂಡಾಗ ನಿಮ್ಮೊಳಗಿನ ಶಕ್ತಿ ಸರಾಗವಾಗಿ ಹರಿಯುತ್ತದೆ.
ನಿಮ್ಮ ಕೆಲಸದಲ್ಲಿ, ಬದುಕಿನಲ್ಲಿ ಇಂತಹ ಭಾವ ಅಳವಡಿಸಿಕೊಂಡಾಗ, ನಾನು ಎಲ್ಲಿದ್ದೇನೋ ಅದು ಸರಿಯಾದ ಜಾಗ. ಹೇಗಿರಬೇಕಿತ್ತೋ ಹಾಗೆಯೇ ಎಲ್ಲವೂ ನಡೆಯುತ್ತಿದೆ, ನಡೆಯುತ್ತದೆ ಎಂದು ಅಂದುಕೊಂಡಾಗ ಶಕ್ತಿ ಪರಿವರ್ತನೆಯಾಗುತ್ತದೆ.

ನಿರಾಳವಾಗಿ. ಸಂತಸ ಹಾಗೂ ಆಹ್ಲಾದವನ್ನು ಅನುಭವಿಸಿ. ನಿತ್ಯದ ಬದುಕಿನಲ್ಲಿ ಸಂತಸಮಯ ಸಂಗತಿಗಳತ್ತ ಗಮನಹರಿಸಿ. ಸಾಮಾನ್ಯ ಮನಸ್ಸು ಬರೀ ನೋವಿನತ್ತ ಗಮನಹರಿಸುತ್ತದೆ. ನಿಮಗೆ ಹೊಟ್ಟೆನೋವು ಬಂದಾಗ ಗಮನ ಅದರತ್ತಲೇ ಹರಿಯುತ್ತದೆ. ಆದರೆ, ಹೊಟ್ಟೆ ನೋಯದೇ ಇರುವಾಗ ಯಾರೂ ಅದರತ್ತ ಗಮನ ನೀಡುವುದಿಲ್ಲ ಅಲ್ಲವೇ?

ಈಗ ಬದುಕಿನಲ್ಲಿ ಖುಷಿ ಕೊಡುವ ಸಣ್ಣ ಸಂಗತಿಗಳತ್ತ ಗಮನಹರಿಸಿ. ಸೊಂಪಾದ ನಿದ್ರೆಯ ನಂತರ ಬೆಳಿಗ್ಗೆ ಮೂಡುವ ಉಲ್ಲಾಸ, ವಾಕ್‌ ಹೋಗಿಬಂದಾಗ ಮೂಡುವ ಸಮಾಧಾನ, ಸ್ನಾನ ಮಾಡಿದಾಗ ದೊರಕುವ ತಾಜಾತನ, ಬಿಸಿ ಕಾಫಿ ಗುಟುಕರಿಸುವಾಗ ದೊರಕುವ ಆನಂದ, ಪುಟ್ಟ ಮಗುವಿನತ್ತ ನೋಡಿದಾಗ ಆರ್ದ್ರವಾಗುವ ಮನಸ್ಸು....ಹೀಗೆ ಎಲ್ಲವನ್ನೂ ಆನಂದಿಸತೊಡಗಿದಾಗ ಸಿಟ್ಟು ಕಡಿಮೆಯಾಗುತ್ತ ಬರುತ್ತದೆ.

ನೀವು ಅಂದುಕೊಂಡಂತೆ ಯಾವುದು ಆಗುತ್ತಿಲ್ಲ ಅಂದರೆ...ವಿಶ್ವಶಕ್ತಿ ನಿಮಗೆ ಬೇರೆ ಯಾವುದೋ ಹಾದಿಯನ್ನು ತೋರಿಸುತ್ತಿರುತ್ತದೆ. ಸಂತೃಪ್ತಿ, ತಾಳ್ಮೆ, ಶಾಂತಿ, ಕರುಣೆ... ಪ್ರೀತಿಯ ದಾರಿ ಅದಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT