ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಗ್ಗೇಹಳ್ಳಿಯ ಐತಿಹಾಸಿಕ ದೇವಾಲಯ

Last Updated 19 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಐತಿಹಾಸಿಕ ದೇಗುಲ ಮತ್ತು ಅದರ ಶಿಲ್ಪಕಲೆಯ ಬಗ್ಗೆ ಕುತೂಹಲ ಮತ್ತು ಆಸಕ್ತಿ ಇದ್ದಲ್ಲಿ ಇಲ್ಲೊಂದು ನೋಡಲೇಬೇಕಾದ ದೇವಾಲಯವಿದೆ. ಅದುವೇ ನುಗ್ಗೇಹಳ್ಳಿ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯ.  ಬೆಂಗಳೂರಿನಿಂದ ನುಗ್ಗೇಹಳ್ಳಿ 139 ಕಿ.ಮೀ. ದೂರದಲ್ಲಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಿಂದ 18 ಕಿ.ಮೀ ದೂರದಲ್ಲಿದೆ ನುಗ್ಗೇಹಳ್ಳಿ.

ಈ ಗ್ರಾಮದಲ್ಲಿ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯವಿದೆ.  ಸುಮಾರು 14-15ನೇ ಶತಮಾನದಲ್ಲಿ ಅಂದರೆ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಈ ಸ್ಥಳಕ್ಕೆ ನುಗ್ಗೇಹಳ್ಳಿ ಎಂಬ ಹೆಸರು ಮೊದಲ ಬಾರಿಗೆ ಬಂದಿದ್ದು ಎನ್ನುತ್ತವೆ ದಾಖಲೆಗಳು. ಅಂದಿನ ಪಾಳೇಗಾರರು ತಮ್ಮ ಸೈನ್ಯವನ್ನು ಶತ್ರುಗಳ ಮೇಲೆ ಎರಗಲು ನುಗ್ಗು ಎಂದು ಬಳಸುತ್ತಿದ್ದ ಪದದಿಂದಲೇ ಈ ಗ್ರಾಮಕ್ಕೆ ನುಗ್ಗೇಹಳ್ಳಿ ಎಂದು ಹೆಸರು ಬಂದಿದೆ ಎನ್ನಲಾಗುತ್ತಿದೆ.

ದೇವಸ್ಥಾನದ ಫಲಕದಲ್ಲಿರುವ ದಾಖಲೆಯಂತೆ ಸೋಮೇಶ್ವರ ಹೊಯ್ಸಳರ ಆಡಳಿತದಲ್ಲಿ ಅವನ ಸಹಾಯಕನಾಗಿದ್ದ ಬೊಮ್ಮಣ್ಣ ದಂಡ ನಾಯಕ (ರಾಮಚಂದ್ರ ವೀರೇಂದ್ರ) ತನ್ನ ಗುರುಗಳಾದ ಪುಂಡರೀಕ ಸೋಮಯ್ಯಾಜಿ ಅವರೊಂದಿಗೆ  ಈ ಸ್ಥಳಕ್ಕೆ ಭೇಟಿ ನೀಡಿದ ಎನ್ನಲಾಗಿದೆ.

ಈ ಪವಿತ್ರ ಸ್ಥಳದಲ್ಲಿ ದೇವಸ್ಥಾನವನ್ನು ಕಟ್ಟಬೇಕೆಂಬ  ಪುಂಡರೀಕ ಸೋಮಯ್ಯಾಜಿ ಅವರ ಕನಸಿನಂತೆ ಬೊಮ್ಮಣ್ಣ ದಂಡ ನಾಯಕ ನುಗ್ಗೇಹಳ್ಳಿಯನ್ನು ವಿಜಯ ಸೋಮನಾಥಪುರ ಎಂಬ ಹೆಸರಿನೊಂದಿಗೆ ಇದನ್ನು ಅಗ್ರಹಾರವನ್ನಾಗಿಸಿದ. 1168 ಶಕ ಪ್ರಭವ ಸಂವತ್ಸರದ ಬುಧವಾರ, ಚೈತ್ರ ಮಾಸದ ಐದನೇ ದಿನದಂದು (ಶುಕ್ಲ ಪಂಚಮಿ) ಕೇಶವ, ನರಸಿಂಹ ಮತ್ತು ಗೋಪಾಲ ಹೀಗೆ ಮೂರು ದೇವರಿಗೆ  ಈ ದೇವಸ್ಥಾನವನ್ನು ಕಟ್ಟಿಸಿದನಂತೆ. 

ಈ ದೇವಸ್ಥಾನದಲ್ಲಿ ಮುಖ್ಯ ದೇವರು ಕೇಶವನಾಗಿದ್ದರೂ ಸಹ ಇಲ್ಲಿ ಲಕ್ಷ್ಮಿನರಸಿಂಹಸ್ವಾಮಿ ಹೆಚ್ಚು ಶಕ್ತಿಯಳ್ಳವನೆಂದು ನಂಬಿರುವ ಸ್ಥಳೀಯರ ಪ್ರಕಾರ ಈ ದೇವಾಲಯ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯವೆಂದೇ ಪ್ರತೀತಿ. ಮಹಾದ್ವಾರದ ಮೇಲೆ ಮಧ್ಯದಲ್ಲಿ ಕೇಶವ ಇದ್ದು ಅದರ ಎಡಗಡೆಗೆ ಗೋಪಾಲ(ಕೃಷ್ಣ) ಮತ್ತು ಬಲಗಡೆಗೆ ನರಸಿಂಹ ಹೀಗೆ ಮೂರು ದೇವರ ವಿಗ್ರಹಗಳನ್ನು ನಿರ್ಮಿಸಲಾಗಿರುತ್ತದೆ.

ಹೊಯ್ಸಳರ ಕಾಲದ ದೇವಾಲಯಗಳ ಶಿಲ್ಪಕಲೆಯಂತೆ ಈ ದೇವಸ್ಥಾನವನ್ನು ಸಹ ಕಟ್ಟಲಾಗಿದೆ. ಈ ದೇವಸ್ಥಾನ ಟಿ. ನರಸಿಪುರ ತಾಲ್ಲೂಕಿನ ಸೋಮನಾಥಪುರದಲ್ಲಿರುವ ಚನ್ನಕೇಶವ ದೇವಸ್ಥಾನಕ್ಕಿಂತ ಸುಮಾರು 20 ವರ್ಷ ಮುಂಚಿನದಾಗಿದೆ ಎನ್ನಲಾಗಿದೆ.

ದೇವಸ್ಥಾನದ ಸುತ್ತಲೂ ದೊಡ್ಡ ಕಲ್ಲುಗಳಿಂದ ನಿರ್ಮಿಸಿರುವ ಆಯತಾಕಾರದ ಪ್ರಾಕಾರ ಇದೆ. ಮೂಲತಃ ಮುಖ್ಯ ದೇಗುಲದ ಮೇಲೆ ಕಲ್ಲಿನಿಂದ ಕೆತ್ತಿದ ಗೋಪುರವಿದ್ದು, ಪಾಳೇಗಾರರ ಆಳ್ವಿಕೆಯ ಕಾಲದಲ್ಲಿ ತ್ರಿಕುಟಾಚಲವನ್ನಾಗಿಸಲು ದಕ್ಷಿಣ ಮತ್ತು ಉತ್ತರ ಭಾಗದಲ್ಲಿ ಇನ್ನೆರಡು ಗೋಪುರಗಳನ್ನು ಇಟ್ಟಿಗೆ ಮತ್ತು ಗಾರೆಯನ್ನು ಉಪಯೋಗಿಸಿ ನಿರ್ಮಿಸಲಾಗಿರುತ್ತದೆ. ಈ ದೇಗುಲದ ಶಿಲ್ಪಕಲೆಯ ಕೆತ್ತನೆಯ ಕಾರ್ಯ ಹೊಯ್ಸಳ  ಶಿಲ್ಪಕಲೆಯ ಹೊಸಹೊಳಲು ಮತ್ತು ಸೋಮನಾಥಪುರ ದೇವಾಲಯಗಳ ಮಟ್ಟದ್ದಾಗಿರುತ್ತದೆ.

ದೇಗುಲವನ್ನು ನಕ್ಷತ್ರಾಕಾರದ ನಾಲ್ಕು ಅಡಿ ಎತ್ತರದ ವೇದಿಕೆಯ ಮೇಲೆ ನಿರ್ಮಿಸಲಾಗಿರುತ್ತದೆ. ದೇಗುಲದ ಹೊರಭಾಗ 19 ತಿರುವುಗಳನ್ನೊಳಗೊಂಡಿರುತ್ತದೆ. ಹೊಯ್ಸಳ ಕಾಲದ ದೇಗುಲಗಳಂತೆ ಈ ದೇಗುಲದ ಕೆಳಭಾಗದಲ್ಲಿ ಆನೆಗಳ, ಕುದುರೆಗಳ ಇತ್ಯಾದಿಗಳ ಸಾಲುಗಳಿವೆ.  ಈ ದೇವಾಲಯ ನೋಡುಗರಿಗೆ ಬೇಲೂರು, ಹಳೇಬೀಡು, ಸೋಮನಾಥಪುರ ದೇಗುಲಗಳನ್ನು ನೆನಪಿಸುತ್ತದೆ.

ಒಂದೇ ದಿನದಲ್ಲಿ ಈ ಸ್ಥಳದೊಂದಿಗೆ ಸಮೀಪದಲ್ಲೇ ಇರುವ ಹೊಸಹೊಳಲು ಸೌಮ್ಯಕೇಶವ, ಕಲ್ಲಹಳ್ಳಿಯಲ್ಲಿರುವ ವರಹಾಸ್ವಾಮಿ ದೇಗುಲಗಳನ್ನು ಸಹ ಭೇಟಿ ನೀಡುವಂತೆ ಪ್ರವಾಸವನ್ನು ಯೋಜಿಸಿಕೊಳ್ಳಬಹುದು.  ಪ್ರವಾಸಕ್ಕೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸರಿಯಾಗಿ ಇಲ್ಲದಿರುವುದರಿಂದ ಸ್ವಂತ ವಾಹನ ವ್ಯವಸ್ಥೆ ಮಾಡಿಕೊಂಡು ಹೋಗಬೇಕಾಗುತ್ತದೆ. ಅಲ್ಲದೆ ಜೊತೆಯಲ್ಲಿ ತಿಂಡಿ ತಿನಿಸುಗಳನ್ನು  ತಪ್ಪದೇ ತೆಗೆದು ಕೊಂಡು ಹೋಗುವುದನ್ನು ಮರೆಯಬಾರದು.

ಹೀಗೆ ತಲುಪಬಹುದು...
ಬೆಂಗಳೂರಿನಿಂದ ನುಗ್ಗೇಹಳ್ಳಿ 139ಕಿ.ಮೀ ದೂರದಲ್ಲಿದೆ. ನುಗ್ಗೇಹಳ್ಳಿ ತಲುಪಲು ಬೆಂಗಳೂರಿನಿಂದ ತುಮಕೂರು ಹೆದ್ದಾರಿಯಲ್ಲಿ ಹೊರಟು ನೆಲಮಂಗಲ ಬೈಪಾಸ್‌ನಲ್ಲಿ ಎಡಕ್ಕೆ ತಿರುಗಿ ಹಾಸನಕ್ಕೆ ಹೊರಡುವ ರಾಷ್ಟ್ರೀಯ ಹೆದ್ದಾರಿ(ಎನ್‌ಹೆಚ್) 75ರಲ್ಲಿ ಕುಣಿಗಲ್, ಯಡಿಯೂರು ಮಾರ್ಗದಲ್ಲಿ ಚಲಿಸಿ ಹಿರಿಸಾವೆಯ ಹತ್ತಿರ ರಾಜ್ಯ ಹೆದ್ದಾರಿ 47ರಲ್ಲಿ ಪ್ರಯಾಣ ಮುಂದುವರೆಸಿ ನುಗ್ಗೇಹಳ್ಳಿ ತಲುಪಬಹುದು. ಹೊಸಹೊಳಲುನಲ್ಲಿರುವ ಸೌಮ್ಯಕೇಶವ, ಕಲ್ಲಹಳ್ಳಿಯಲ್ಲಿರುವ ವರಹಾಸ್ವಾಮಿ ದೇಗುಲಗಳನ್ನು ನೋಡಬಯಸುವವರು ನುಗ್ಗೇಹಳ್ಳಿಯಿಂದ ಚನ್ನರಾಯಪಟ್ಟಣ, ಕಿಕ್ಕೇರಿ ಮಾರ್ಗವಾಗಿ ಸುಮಾರು 52 ಕಿ. ಮೀ. ಚಲಿಸಿ ಹೊಸಹೊಳಲು ತಲುಪಬಹುದು.

ಹೊಸಹೊಳಲುನಿಂದ  ಕಲ್ಲಹಳ್ಳಿಗೆ ಸುಮಾರು 7 ಕಿ.ಮೀ ದೂರ. ಕಲ್ಲಹಳ್ಳಿಯಿಂದ ನಾಗಮಂಗಲ, ಯಡಿಯೂರು ಮಾರ್ಗವಾಗಿ ಅಥವಾ ಪಾಂಡವಪುರ, ಶ್ರೀರಂಗಪಟ್ಟಣ, ಮಂಡ್ಯ ಮಾರ್ಗವಾಗಿ ಬೆಂಗಳೂರಿಗೆ ಹಿಂತಿರುಗಬಹುದು. ಈ ಎರಡೂ ಮಾರ್ಗಗಳ ದೂರ ಸುಮಾರು 160 ಕಿ.ಮೀ. ಆಗಿರುತ್ತದೆ.

ಬೆಂಗಳೂರಿನಿಂದ ಮೈಸೂರು ರಸ್ತೆಯಲ್ಲಿ ಹೊರಡುವವರು ಮೊದಲಿಗೆ ಕಲ್ಲಹಳ್ಳಿಯಲ್ಲಿರುವ ವರಹಾಸ್ವಾಮಿ ದೇವಸ್ಥಾನ ನೋಡಿಕೊಂಡು ಅಲ್ಲಿಂದ ಹೊಸಹೊಳಲುನಲ್ಲಿರುವ ಸೌಮ್ಯಕೇಶವ ದೇಗುಲ ನೋಡಿಕೊಂಡು ನುಗ್ಗೇಹಳ್ಳಿಯನ್ನು ಸಹ ತಲುಪಬಹುದು.
-ಕೆ. ಪ್ರಭಾಕರ, ವಿ. ಆನಂದ ರಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT