ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂಡಲ್ಸ್‌ ಎಳೆಯ ಸುತ್ತ...

Last Updated 24 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಧಾವಂತದ ಬದುಕಿನಲ್ಲಿ ಅತಿ ಸರಳ ಮತ್ತು ಸುಲಭ ಅಡುಗೆ ಎಂದರೆ ನೂಡಲ್ಸ್‌. ಮಾಡಿದಷ್ಟೇ ಸುಲಭವಾಗಿ ನೂಡಲ್ಸ್‌ ಜೀರ್ಣವಾಗುತ್ತದೆಯೇ? ಇದೆಷ್ಟು ಸುರಕ್ಷಿತ? ಸೇವನೆಗೆ ಸೂಕ್ತ? ಮಕ್ಕಳ ವೈದ್ಯರು ಸಾಧ್ಯವಿದ್ದಷ್ಟೂ ಮನೆಯ ಆಹಾರವನ್ನೇ ನೀಡಿ ಎನ್ನುವ ಸಲಹೆ ನೀಡುತ್ತಾರೆ. ಆದರೆ ಮಕ್ಕಳು ಇಷ್ಟಪಟ್ಟು, ಸೊರಕ್‌ ಸೊರಕ್‌ ಎಂದು ಸುರಿದುಣ್ಣುವ ಆಹಾರ ಇದೊಂದೇ ಎನ್ನುವುದು ಸಾಮಾನ್ಯ ಅಭಿಪ್ರಾಯ. ಮಕ್ಕಳ ಹೊಟ್ಟೆಗೆ ಹಿತವೇ ನೂಡಲ್ಸ್‌? ಇಲ್ಲಿದೆ ಮಾಹಿತಿ...

ಈಗಿನ ಮಕ್ಕಳಿಗೂ, ಹೆಣ್ಣುಮಕ್ಕಳಿಗೂ ತಿಂಡಿಯ ಆಯ್ಕೆಯಲ್ಲಿ ನೂಡಲ್ಸ್‌ ಆದ್ಯತೆ ಪಡೆಯುತ್ತಿದೆ. ಎರಡೇ ನಿಮಿಷದಲ್ಲಿ ಫಟ್ ಅಂತ ಮಾಡಿ ಮುಗಿಸಬಹುದು ಎನ್ನುವುದು ಮೊದಲ ಕಾರಣ. ಮಕ್ಕಳೂ ತಕರಾರಿಲ್ಲದೆ ಕಬಳಿಸುತ್ತಾರೆ ಎನ್ನುವುದು ಇನ್ನೊಂದು ಮುಖ್ಯ ಕಾರಣ.

ಹಸಿದಾಗ, ಹಾಸ್ಟೆಲ್‌ನಲ್ಲಿರುವವರಿಗೆ ಪೀಜಿ ವಾಸಿಗಳಿಗೆ, ಬ್ಯಾಚುಲರ್ಸ್‌ಗಳಿಗೆ ಎಲ್ಲರಿಗೂ ನೂಡಲ್ಸ್‌ ಆಪದ್ಬಾಂಧವ. ಉಪವಾಸ-ವಿದ್ದವರಿಗೂ ಇದೇ ತಿಂಡಿ ಈಗ. ಮಕ್ಕಳ ಡಬ್ಬಿಗೂ, ದೊಡ್ಡವರ ಹೊಟ್ಟೆಗೂ ನೂಡಲ್ಸ್‌ ಎಳೆ ಸೊರಕ್ಕೆಂದು ಹೊಟ್ಟೆಗೆ ಸೇರುತ್ತದೆ. ಆದರೆ ನಿಜಕ್ಕೂ ಇದು ಆರೋಗ್ಯಕ್ಕೆ ಸಲ್ಲುತ್ತದಾ?

ಈ ವಿಷಯದ ಬಗ್ಗೆ ಹಲವಾರು ಹೌದು ಇಲ್ಲಗಳ ವಾದಗಳಿವೆ. ಆದರೆ ಸೂಕ್ತ ಮಾಹಿತಿಯ ಕೊರತೆ ಈಗಲೂ ಇದೆ. ಮೇಲಿಂದ ಮೇಲೆ ತಿನ್ನಬಾರದು ಅಥವಾ ಆಹಾರ ಪದ್ಧತಿಯಲ್ಲಿ ಕಾಯಂ ಜಾಗ ಪಡೆದಿರುವ ನೂಡಲ್ಸ್‌ನ್ನು ಎಷ್ಟು, ಯಾವಾಗ ತಿನ್ನಬೇಕು? ಯಾವುದು ಒಳಿತು, ಯಾವುದು ಕೆಡುಕು ಇವುಗಳ ಬಗ್ಗೆಯಂತೂ ಒಮ್ಮತದ ಉತ್ತರ ಕಂಡು ಕೊಳ್ಳುವುದು ಕಷ್ಟ. ಆದರೆ ನೂಡಲ್ಸ್‌ನ ಎಳೆಎಳೆಯಲ್ಲೇನಿದೆ? ಅದರಿಂದ ದೇಹದ ಮೇಲೆ ಆಗುವ ಪರಿಣಾಮಗಳೇನು ಎನ್ನುವ ಬಗ್ಗೆ ಹದಿನೈದು ವರ್ಷದಿಂದ ಫಿಟ್‌ನೆಸ್ ಕ್ಷೇತ್ರದಲ್ಲಿ ನ್ಯೂಟ್ರಿಷನ್ ತಜ್ಞೆಯಾಗಿರುವ ಡಾ. ಆರ್ವಾ ಹುಸೇನ್ ಮಾತನಾಡಿದ್ದಾರೆ. ಕ್ರೀಡಾ ವಿಜ್ಞಾನ ಹಾಗೂ ಫಿಟ್‌ನೆಸ್ ನ್ಯೂಟ್ರಿಷನ್‌ನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ರೂಪದರ್ಶಿಯೂ ಆಗಿರುವ ಅವರು ನೂಡಲ್ಸ್ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಮೊದಲು ಮಲ್ಟಿಕ್ಯುಸಿನ್‌ ರೆಸ್ಟೊರೆಂಟ್‌ಗಳಲ್ಲಿ ಊಟಕ್ಕೆಂದು ಹೋದಾಗ ಮಾತ್ರ ನೂಡಲ್ಸ್‌ ಎಳೆಗಳನ್ನು ಸೇವಿಸುತ್ತಿದ್ದರು. ನಂತರ ಎಲ್ಲ ಹೋಟೆಲ್‌ಗಳಲ್ಲಿಯೂ ಜಾಗ ಕಬಳಿಸಿದವು. ಇದೀಗ ಬೀದಿಬದಿಗೂ, ಚಹಾ ಅಂಗಡಿಗೂ ನೂಡಲ್ಸ್‌ ಲಗ್ಗೆ ಇಟ್ಟಿದೆ. ದೋಸೆಗೂ ಜೊತೆಯಾಗುವಷ್ಟು ನೂಡಲ್ಸ್‌ ನಮ್ಮ ಆಹಾರ ಪದ್ಧತಿಯನ್ನು ಹಾಸು ಹೊಕ್ಕಿದೆ. ತಯಾರಿಸಲು ಸುಲಭ, ತಿನ್ನಲು ರುಚಿಕರ ಎನ್ನುವುದು ಮೊದಲ ಕಾರಣ. ಕೆಲ ಜಾಹೀರಾತುಗಳು ನೂಡಲ್ಸ್‌ ಆರೋಗ್ಯಕರ ಹಾಗೂ ರುಚಿಕರ ಎಂಬಂತೆ ಬಿಂಬಿಸುತ್ತಿರುವುದೂ ಮತ್ತೊಂದು ಕಾರಣ. 

ಮೊದಲನೆಯದಾಗಿ ನೂಡಲ್ಸ್‌ ಅನ್ನು ಮೈದಾದಿಂದ ತಯಾರಿಸುತ್ತಾರೆ. ಗೋಧಿಯ ಮೇಲ್ಪದರವನ್ನು ತೆಗೆದು ಬೀಸಿದ ಹಿಟ್ಟನ್ನೇ ಸಂಸ್ಕರಿಸಿ ಮೈದಾ ತಯಾರಿಸಲಾಗುತ್ತದೆ. ಇಲ್ಲಿ ಪೌಷ್ಟಿಕಾಂಶದ ಆಗರವಾಗಿರುವ ಗೋಧಿಯ ತವಡು ತೆಗೆಯುವುದರಿಂದ ಮೈದಾದಲ್ಲಿ ಯಾವುದೇ ಪೋಷಕಾಂಶ ಉಳಿದುಕೊಳ್ಳುವುದಿಲ್ಲ. ಅದೂ ಅಲ್ಲದೆ ಮೈದಾದ ಕಣಗಳು ಅತಿ ಸೂಕ್ಷ್ಮವಾಗಿರುತ್ತವೆ. ಕರುಳಿನ ಬದಿಗಳಲ್ಲಿ ಸೇರಿಕೊಳ್ಳುತ್ತವೆ. ಇತರ ಆಹಾರದಿಂದ ಪೌಷ್ಟಿಕಾಂಶ ಹೀರಿಕೊಳ್ಳುವುದನ್ನೂ ತಡೆಯುತ್ತದೆ. ಇದರಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಕಾಣಿಸಿಕೊಳ್ಳುತ್ತದೆ.

ನೂಡಲ್ಸ್‌ನಲ್ಲಿ ನಾರಿನಂಶ ಕಡಿಮೆಯಿದೆ. ಕೊಬ್ಬಿನಂಶ ಹೆಚ್ಚಿದೆ. ರುಚಿಗೆಂದು ಬಳಸುವ ಇನ್ನಿತರ ವಸ್ತುಗಳೂ ಆರೋಗ್ಯಕ್ಕೆ ಅಷ್ಟೇನೂ ಒಳ್ಳೆಯದಲ್ಲ. ನೂಡಲ್ಸ್ ಸಣ್ಣಗೆ ಮತ್ತು ಅಂಟದಂತಿರಲು ಅದರಲ್ಲಿರುವ ಮೇಣದ ಅಂಶವೇ ಕಾರಣ. ಮೇಣದ ಮೇಲು ಹೊದಿಕೆ ಅವು ಒಂದಕ್ಕೊಂದು ಅಂಟಿಕೊಳ್ಳದಂತೆ ತಡೆಯುತ್ತವೆ. ಬಾಯಿಯಿಂದ ಸುರಕ್ಕೆಂದು ಹೊಟ್ಟೆಗೆ ಜಾರುವ ಈ ಹೊದಿಕೆ, ದೇಹದಿಂದ ಹೊರ ಹೋಗಲು ಕನಿಷ್ಠ ಎರಡು ದಿನಗಳ ಸಮಯವನ್ನು ತೆಗೆದುಕೊಳ್ಳುತ್ತದೆ.

ಮನೆ ಆಹಾರವೇ ಉತ್ತಮ ಆಯ್ಕೆ

*ಮನೆಯಲ್ಲಿಯೇ ತಯಾರಿಸುವ ಗೋಧಿ ಶ್ಯಾವಿಗೆ, ಅಕ್ಕಿಯ ಒತ್ತು ಶ್ಯಾವಿಗೆ ಭಾತು ಇವಕ್ಕೆ ಪರ್ಯಾಯ ಆಗಬಲ್ಲವು.
*ಸಾಂಬಾರ ಪದಾರ್ಥಗಳ ಬಳಕೆ ಕಡಿಮೆಯಿರಲಿ.
*ಸ್ವಲ್ಪ ಪ್ರಮಾಣದ ನೂಡಲ್ಸ್ ಜೊತೆ ಹೆಚ್ಚು ತರಕಾರಿ ಸೇರಿಸಿ ಮಕ್ಕಳಿಗೆ ಕೊಡಿ.­
*ಮಕ್ಕಳಿಗೆ ಇದು ಆರೋಗ್ಯಕರವಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಿ.
*ಮಕ್ಕಳು ನಿಮ್ಮ ಕನ್ನಡಿಯಿದ್ದಂತೆ. ನೀವು ಏನು ಮಾಡುತ್ತೀರೋ, ಅದನ್ನೇ ಅವರೂ ಕಲಿಯುತ್ತಾರೆ. ಆದ್ದರಿಂದ ನೀವೂ ಒಳ್ಳೆ ಆಹಾರ ಪದ್ಧತಿ ರೂಢಿಸಿಕೊಳ್ಳಿ.
*ಎಷ್ಟೇ ಧಾವಂತದಲ್ಲಿದ್ದರೂ ಆರೋಗ್ಯವೇ ಮುಖ್ಯ ಎಂಬುದನ್ನು ಅರಿಯಿರಿ.
*ಆದಷ್ಟು ಸಲಾಡ್‌ ಕೊಡಿ. ಸೌತೆಕಾಯಿ, ಬೀಟ್‌ರೂಟ್‌, ಗಜ್ಜರಿಗಳನ್ನು ಹಸಿಹಸಿಯಾಗಿಯೇ ತಿನ್ನುವ ಅಭ್ಯಾಸ ಮಾಡಿಕೊಳ್ಳಿ.
*ತಾಜಾ ಹಣ್ಣು ಮತ್ತು ತರಕಾರಿಗಳ ಸೇವನೆಯೂ ಧಿಡೀರ್‌ ಎಂದು ಹಸಿವನ್ನು ನೀಗಿಸಬಲ್ಲುದು.
*ಅದಕ್ಕೆಂದು ಸಮಯ ಕೊಡಿ. ಹೆಚ್ಚೆಚ್ಚು ಹಣ್ಣು, ತರಕಾರಿ, ಧಾನ್ಯ ಹಾಗೂ ಡ್ರೈಫ್ರೂಟ್ಸ್ ಆಹಾರದಲ್ಲಿರಲಿ. ಸಿದ್ಧ ಆಹಾರಗಳನ್ನು ಬಳಸಬೇಡಿ.

ಇನ್‌ಸ್ಟಂಟ್ ನೂಡಲ್ಸ್‌ ಎನ್ನುವ ಕೆಲ ಬ್ರ್ಯಾಂಡ್‌ಗಳಲ್ಲಿ ಬಿಸ್‌ಫೆನಾಲ್ ಎ (ಬಿಪಿಎ) ರಾಸಾಯನಿಕ ಬಳಸಲಾಗಿರುತ್ತದೆ. ಈ ರಾಸಾಯನಿಕ ದೇಹದ ಹಾರ್ಮೋನುಗಳ ಬಿಡುಗಡೆಯನ್ನೇ ಅಸಮತೋಲನ ಮಾಡಬಹುದು. ಅದರಲ್ಲೂ ಈಸ್ಟ್ರೋಜನ್‌ ಬಿಡುಗಡೆಯ ಮೇಲೆ ಪರಿಣಾಮ ಬೀರುತ್ತದೆ. ನೂಡಲ್ಸ್‌ ಜೊತೆ ಕೊಡುವ ಮಸಾಲಾ ಮೇಕರ್‌ನಲ್ಲಿ ಹೆಚ್ಚು ಉಪ್ಪಿನ ಅಂಶ ಬಳಸಿರುತ್ತಾರೆ. ಇದೇ ಮಕ್ಕಳನ್ನು ಸೆಳೆಯುವುದು. ­ಈ ಉಪ್ಪಿನಂಶ ನೀರು ಹಿಡಿದಿಟ್ಟುಕೊಳ್ಳುತ್ತದೆ. ಪರಿಣಾಮ ಬೇಗ ಹಸಿವಾಗುವುದಿಲ್ಲ. ಅಧಿಕ ರಕ್ತದೊತ್ತಡ, ಹೃದಯ ಸಮಸ್ಯೆ, ಲಕ್ವ, ಕಿಡ್ನಿ ಸಮಸ್ಯೆ, ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ಎಡೆ ಮಾಡಿಕೊಡುವ ಸಾಧ್ಯತೆಯೂ ಇದೆ.

ನೂಡಲ್ಸ್‌ನಲ್ಲಿ ‘ಪ್ರಾಫಿಲಿನ್ ಗ್ಲೈಕೋಲ್’ ಎಂಬ ರಾಸಾಯನಿಕವನ್ನೂ ಸೇರಿಸಿರುತ್ತಾರೆ. ನೂಡಲ್ಸ್ ಅತಿ ಬೇಗನೆ ಒಣಗುವುದನ್ನು ತಡೆಯಲು ಇದನ್ನು ಬಳಸಿರುತ್ತಾರೆ. ಇದು ದೇಹಕ್ಕೆ ಸೇರಿ ಲಿವರ್, ಕಿಡ್ನಿ ಮತ್ತು ಹೃದಯದಲ್ಲೂ ಶೇಖರಣೆ ಆಗುತ್ತದೆ. ಇದರಿಂದ ಸಹಜವಾಗಿ ರೋಗನಿರೋಧಕ ಶಕ್ತಿ ಕುಂದುತ್ತದೆ. ಇನ್ನೊಂದು ಮುಖ್ಯ ಅಂಶ, ನೂಡಲ್ಸ್‌ನಲ್ಲಿ ಬಳಸುವ ಮೋನೊಸೋಡಿಯಂ ಗ್ಲುಟಮೇಟ್ (ಎಂಎಸ್‌ಜಿ) ಇದು ಆರೋಗ್ಯವನ್ನು ಬುಡಮೇಲು ಮಾಡಬಹುದು. ಇದು ಮೆದುಳಿನಲ್ಲಿನ ಹಸಿವು ನಿಯಂತ್ರಕ ಕೇಂದ್ರದ ಮೇಲೆ ಪ್ರಭಾವ ಬೀರುತ್ತದೆ. ಸ್ಥೂಲಕಾಯಕ್ಕೆ ಕಾರಣವಾಗುವುದಲ್ಲದೆ ಕೆಲವು ಅಲರ್ಜಿ ಸಮಸ್ಯೆಗಳೂ ಬೇಗ ತಗಲುವಂತೆ ಮಾಡುತ್ತದೆ.

2007–2009ರಲ್ಲಿನ ‘ದಿ ಜರ್ನಲ್ ಆಫ್ ನ್ಯೂಟ್ರೀಷನ್’ ಸಮೀಕ್ಷೆ ಪ್ರಕಾರ, ವಾರದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಇನ್‌ಸ್ಟಂಟ್ ನೂಡಲ್ಸ್‌ ತಿಂದರೆ ಮಹಿಳೆಯರಲ್ಲಿ ಮೆಟಬಾಲಿಕ್ ಸಿಂಡ್ರೋಮ್ (ಅತಿ ರಕ್ತದೊತ್ತಡ, ಹೆಚ್ಚು ಸಕ್ಕರೆ ಅಂಶ ಹಾಗೂ ಹೊಟ್ಟೆಯ ಬೊಜ್ಜು, ಕೊಲೆಸ್ಟ್ರಾಲ್ ಹೆಚ್ಚಾಗುವ ಸ್ಥಿತಿಯನ್ನು ಮೆಟಬಾಲಿಕ್ ಸಿಂಡ್ರೋಮ್ ಎನ್ನುತ್ತಾರೆ) ಹೆಚ್ಚಾಗುತ್ತದೆ ಎಂಬ ಅಂಶ ತಿಳಿದುಬಂದಿದೆ. ಇದು ಮೇದೋಜೀರಕ ಗ್ರಂಥಿಯನ್ನೂ ತೊಂದರೆಗೀಡು ಮಾಡುತ್ತದೆ.

ನೂಡಲ್ಸ್‌ ತಿನ್ನುವ ಮುನ್ನ ಅಥವಾ ಮಕ್ಕಳಿಗೆ ಅದನ್ನು ಕೊಡುವ ಮುನ್ನ ನೀವು ನಿಮಗಾಗಿ ಹಾಗೂ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಏನನ್ನು ಆಯ್ಕೆ ಮಾಡಿಕೊಂಡಿದ್ದೀರಿ ಎಂಬುದರ ಕುರಿತು ಎರಡು ಬಾರಿ ಯೋಚಿಸಿ. ಆರೋಗ್ಯಕರವಾದುದು ನಿಮ್ಮ ಆಯ್ಕೆಯಾಗಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT