ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ತಂತ್ರದ ದ್ರಾಕ್ಷಿ

Last Updated 15 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಹತ್ತು ವರ್ಷಗಳಲ್ಲಿ ಕೋಟ್ಯಂತರ ರೂಪಾಯಿ ಸಂಪಾದನೆ. ಮೂರು ದಶಕಗಳ ಹಿಂದಿದ್ದ ಎರಡು ಎಕರೆ ಜಮೀನು ಇದೀಗ ನೂರರ ಗಡಿ ದಾಟಿದೆ. ಕೃಷಿ, ತೋಟಗಾರಿಕೆ, ಅರಣ್ಯ ಕೃಷಿ ಮೈದಾಳಿದೆ. ದ್ರಾಕ್ಷಿ, ದಾಳಿಂಬೆ, ಶ್ರೀಗಂಧ, ಸಾಗುವಾನಿ, ತಾಳೆ, ಹೆಬ್ಬೇವು, ಅಕೇಷಿಯಾ, ಸಿಲ್ವರ್ ಓಕ್, ಚಿಕ್ಕು, ನೋಣಿ, ಮಾವು, ನೆಲ್ಲಿ, ಸೀತಾಫಲ, ನುಗ್ಗೆ... ಸೇರಿದಂತೆ ಹೈನುಗಾರಿಕೆಯೂ ಇಲ್ಲಿದೆ.

ಇವೆಲ್ಲಾ ಸಾಧ್ಯವಾಗಿರುವುದು ಸಮಗ್ರ, ಸಾವಯವ ಕೃಷಿ ಪದ್ಧತಿಯಿಂದಾದರೆ, ದ್ರಾಕ್ಷಿಯಲ್ಲಿ ಅಳವಡಿಸಿಕೊಂಡಿರುವ ನೂತನ ತಂತ್ರಜ್ಞಾನ ಪ್ರತಿ ವರ್ಷ 250 ಟನ್‌ ಫಸಲಿನ ಜತೆಗೆ  50 ಲಕ್ಷ ಆಸುಪಾಸಿನ ಆದಾಯ ನೀಡುತ್ತಿದೆ. 36 ಎಕರೆಯಲ್ಲಿ ಐದು ತಳಿಯ ದ್ರಾಕ್ಷಿ ಪ್ರತಿ ವರ್ಷವೂ ಬಂಪರ್ ಲಾಭ ತಂದು ಖಜಾನೆ ತುಂಬುತ್ತಿದೆ. ಸಮಗ್ರ–ಸಾವಯವ ಕೃಷಿಯಲ್ಲಿ ಈ ವಿಶೇಷ ಸಾಧನೆಗೈದವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕು ಕೊಲ್ಹಾರದ ಸಿದ್ದಪ್ಪ ದುಂಡಪ್ಪ ಬಾಲಗೊಂಡ ಸಹೋದರರು.

ದ್ರಾಕ್ಷಿಯಲ್ಲಿ ತಂತ್ರಜ್ಞಾನ
ಸೆಪ್ಟೆಂಬರ್‌ನಿಂದ ನವೆಂಬರ್‌ ಮಧ್ಯದವರೆಗೆ ದ್ರಾಕ್ಷಿ ಬೆಳೆಗೆ ಚಾಟ್ನಿ ನಡೆಯುತ್ತದೆ. ಫಸಲು ಫೆಬ್ರುವರಿಯಿಂದ ಏಪ್ರಿಲ್‌ವರೆಗೂ ಸಿಗುತ್ತದೆ. ಆದರೆ ಬಾಲಗೊಂಡ ಸಹೋದರರು ವಿನೂತನ ತಂತ್ರಗಾರಿಕೆ ಅಳವಡಿಸಿಕೊಂಡು ಮೇ ಮಾಸಾಂತ್ಯದವರೆಗೂ ಬೆಳೆ ಪಡೆದು ಭರ್ಜರಿ ಲಾಭ ಪಡೆಯುತ್ತಾರೆ.

ತಮ್ಮ 36 ಎಕರೆ ಬೆಳೆಗೆ ಡಿಸೆಂಬರ್ ಅಂತ್ಯದವರೆಗೂ ಹಂತ ಹಂತವಾಗಿ ಚಾಟ್ನಿ ನಡೆಸುತ್ತಾರೆ. ಮೇ ಮಾಸದಲ್ಲಿ ಮಾರುಕಟ್ಟೆಗೆ ದ್ರಾಕ್ಷಿ ಫಸಲು ಒಯ್ದು ಭರ್ಜರಿ ಲಾಭ ಪಡೆಯುತ್ತಾರೆ. ಹೆಚ್ಚಿನ ಮಟ್ಟದಲ್ಲಿ ಸಾವಯವ ಪ­ದ್ಧತಿಯಲ್ಲಿ ದ್ರಾಕ್ಷಿ ಬೆಳೆಯುವುದರಿಂದ ಮಾರುಕಟ್ಟೆಯಲ್ಲಿ ಸಹಜವಾಗಿಯೇ ಇವರ ತೋಟದ ದ್ರಾಕ್ಷಿಗೆ ಬೇಡಿಕೆ ಹೆಚ್ಚಿದೆ.

ಮಲ್ಚಿಂಗ್‌ ಪದ್ಧತಿ ಅನುಸರಿಸಿರುವುದರಿಂದ ಭೂಮಿಯ ಫಲವತ್ತತೆ ಹೆಚ್ಚಿ ಇಳುವರಿಯೂ ಹೆಚ್ಚಿದೆ. ಬೆಳೆಗೆ ಅಗತ್ಯವಿರುವ ಸಾವಯವ ಗೊಬ್ಬರ ಒದಗಿಸಲು ಬಯೋ ಡೈಜೆಸ್ಟರ್‌ ಘಟಕ, ಎರೆಹುಳು ಗೊಬ್ಬರವನ್ನು ಬಾಲಗೊಂಡ ಸ್ವತಃ ತಯಾರಿಸಿ ಕೊಳ್ಳುತ್ತಾರೆ.

ಬೆಳೆಗೆ ತಂತ್ರಜ್ಞಾನ ಇಲ್ಲಿ ಸಮರ್ಪಕವಾಗಿ ಬಳಕೆಯಾಗಿದೆ. ಹನಿ ನೀರಾವರಿ ಪದ್ಧತಿ ಮೂಲಕ ನೀರಿನ ಸಮರ್ಥ ಬಳಕೆ ನಡೆದಿದೆ. ಬಯೋ ಡೈಜಸ್ಟರ್‌ ಘಟಕವಿದ್ದು, ಡ್ರಿಪ್‌ ಮೂಲಕವೇ ಸಕಲ ಪೋಷಕಾಂಶಗಳು ಬೆಳೆಗೆ ನೇರವಾಗಿ ಪೂರೈಕೆಯಾಗುತ್ತವೆ. ಔಷಧಿ ಸಿಂಪಡಣೆಗೆ ಅತ್ಯಾಧುನಿಕ ಯಂತ್ರ ಬಳಸಲಾಗುತ್ತಿದೆ. ಜೀವಸಾರ ಘಟಕದ ಜೀವಾಮೃತ ಸಿಂಪಡಣೆಯಿಂದ ಕೀಟಬಾಧೆಗೆ ಕಡಿವಾಣ ಹಾಕಲಾಗಿದೆ. ದ್ರಾಕ್ಷಿ ಜಾತಿಗೆ ಸೇರಿದ ಕಾಡು ಬಳ್ಳಿಗೆ ಕಸಿ ಮಾಡಿ ಶರದ್, ಸೋನಾರ್, ಮಾಣಿಕ್ ಚಮನ್, ಥಾಮ್ಸನ್‌, 2 ಏಕ್‌ ಲೋನ್‌ ತಳಿ ಅಭಿವೃದ್ಧಿಪಡಿಸಲಾಗಿದೆ. ಪ್ರತಿ ಗಿಡವೂ ತಲಾ 60 ಕೆ.ಜಿ. ಫಸಲು ನೀಡುವ ಸಾಮರ್ಥ್ಯ ಹೊಂದಿದೆ.

ಹೈನೋದ್ಯಮ...
ಬಾಲಗೊಂಡ ಹೊಲದಲ್ಲೇ ವಾಸವಿದ್ದಾರೆ. ಮನೆ ಬಳಿ 30ಕ್ಕೂ ಹೆಚ್ಚು ಹಸುಗಳನ್ನು ಸಾಕುವ ಮೂಲಕ ಹೈನೋದ್ಯಮದಲ್ಲೂ ಯಶಸ್ಸು ಕಂಡಿದ್ದಾರೆ. ಕೊಟ್ಟಿಗೆಯಲ್ಲಿ ಹಸುಗಳಿಗೆ ನೀರುಣಿಸುವ ಚಿಂತೆ ಯಾರಿಗೂ ಇಲ್ಲ. ಇದಕ್ಕೂ ತಂತ್ರಜ್ಞಾನ ಅಳವಡಿಸಲಾಗಿದೆ.

ಪ್ರತಿ ಹಸುವನ್ನು ಕಟ್ಟುವ ಜಾಗದಲ್ಲಿ ಎತ್ತರಕ್ಕೆ ಅನುಗುಣವಾಗಿ ಕೇಸಿಂಗ್‌ ಪೈಪ್ ಜೋಡಿಸಲಾಗಿದೆ. ಹಸು ಈ ಪೈಪ್‌ನಲ್ಲಿ ಯಾವಾಗ ಬೇಕಾದರೂ, ಎಷ್ಟು ಬೇಕಾದರೂ ನೀರು ಕುಡಿಯಬಹುದು. ಸ್ವಲ್ಪ ಖಾಲಿಯಾಗುತ್ತಿದ್ದಂತೆ ಮತ್ತೆ ನೀರು ನಿರಂತರವಾಗಿ ತುಂಬುವ ತಂತ್ರಜ್ಞಾನ ಅಳವಡಿಸಲಾಗಿದೆ. ಈ ತಂತ್ರಜ್ಞಾನವನ್ನು ನೋಡಿಕೊಂಡು ತಮ್ಮ ಕೊಟ್ಟಿಗೆಗಳಲ್ಲೂ ಅಳವಡಿಸಿಕೊಂಡವರು ಹಲವರಿದ್ದಾರೆ.
ಮೇವು ಕತ್ತರಿಸಲು ಚಾಪ್ ಕಟರ್‌ ಯಂತ್ರವಿದೆ. ರಸ ಮೇವು ತಯಾರಿಕಾ ಘಟಕವೂ ಇಲ್ಲಿದೆ. ಹಸುಗಳಿಗೆ ಬೇಕಾದ ಹಸಿ ಮೇವು ಬೆಳೆಯುತ್ತಾರೆ. ಮೇಯಲು ತಮ್ಮ ಜಮೀನಿನಲ್ಲೇ ಗೋಮಾಳವನ್ನು ನಿರ್ಮಿಸಿಕೊಂಡಿದ್ದಾರೆ.

ಜೀವಾಮೃತ ತಯಾರಿಗೆ ಬೇಕಾಗುವ ಸೆಗಣಿ, ಗೋಮೂತ್ರ, ಬೆಳೆಗೆ ಬೇಕಾಗುವ ಕೊಟ್ಟಿಗೆ ಗೊಬ್ಬರ ಸಾಕಷ್ಟು ಪ್ರಮಾಣದಲ್ಲಿ ಸಿಗುವುದರಿಂದ ಗೊಬ್ಬರಕ್ಕೆ ಬಾಲಗೊಂಡ ಅಲೆದಿದ್ದೇ ಗೊತ್ತಿಲ್ಲ. ಇನ್ನೂ ಹಾಲು ಮಾರುವ ಚಿಂತೆ ಇದುವರೆಗೂ ಕಾಡಿಲ್ಲ. ಹಾಲು ಒಕ್ಕೂಟದವರು ತೋಟದ ವಸತಿಗೆ ಬಂದು ಮುಂಜಾನೆ–ಮುಸ್ಸಂಜೆ ಹಾಲು ಕೊಂಡೊಯ್ಯುತ್ತಾರೆ.

ದ್ರಾಕ್ಷಿ ಬೆಳೆ ಬೆಳೆಯಲು ಆರಂಭಿಸಿದ ಮೊದಲ ವರ್ಷಗಳಲ್ಲಿ ಭೀತಿ ಹುಟ್ಟಿಸಿದವರೇ ಹೆಚ್ಚು. ತಾಯಿ, ಸಹೋದರರ ಶ್ರಮದಿಂದ ಒಂದೂವರೆ ದಶಕದಿಂದ ನಿರಾತಂಕವಾಗಿ ಬೆಳೆ ಬೆಳೆದು ನೆಮ್ಮದಿಯ ಜೀವನ ಕಂಡುಕೊಂಡಿದ್ದೇವೆ. ಇದರ ಜತೆಗೆ ನಮ್ಮ ಕುಟುಂಬ ನಡೆಸಿದ ಅರಣ್ಯ ಕೃಷಿ, ಇತರ ತೋಟಗಾರಿಕೆ ಬೆಳೆಗಳು, ಹೈನುಗಾರಿಕೆಯೂ ನಮ್ಮ ಕೈಹಿಡಿದು ಯಶಸ್ಸಿನ ತುತ್ತತುದಿಗೆ ಕರೆ ತಂದಿದೆ. ನಮ್ಮ ಕೃಷಿ ಸಾಧನೆಗೆ ಹಲ ಪ್ರಶಸ್ತಿಗಳು ಸಂದಿವೆ ಎನ್ನುತ್ತಾರೆ.

ಪ್ರತಿ ಬೆಳೆಗೆ  20 ಲಕ್ಷ ಖರ್ಚು ತಗುಲಿದರೆ,  50 ಲಕ್ಷ ಲಾಭ ಕಟ್ಟಿಟ್ಟ ಬುತ್ತಿಯಾಗಿದೆ ಎಂದು ಸಿದ್ದಪ್ಪ ದುಂಡಪ್ಪ ಬಾಲಗೊಂಡ ತಮ್ಮ ದ್ರಾಕ್ಷಿ ಬೆಳೆಯ ಯಶೋಗಾಥೆ ಬಿಚ್ಚಿಡುತ್ತಾರೆ. ಇವರ ಸಂಪರ್ಕಕ್ಕೆ –9448789651.

ಎಲ್ಲರಿಗೂ ಮಾಹಿತಿ...
‘ಈ ತಂತ್ರಜ್ಞಾನದ ಬಗ್ಗೆ ತೋಟಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ರೈತರಿಗೂ ಹೇಳಿಕೊಡಲು ಸಿದ್ಧನಿದ್ದೇನೆ. ಅಗತ್ಯಕ್ಕೆ ತಕ್ಕಂತೆ ಆವಿಷ್ಕಾರಗೊಳಿಸಿರುವ ಯಂತ್ರೋಪಕರಣ, ಉತ್ತಮ ಇಳುವರಿಗೆ ಅನುಸರಿಸಬೇಕಾದ ಕೃಷಿ ಬೆಳೆ ಪದ್ಧತಿಯ ಸಮಗ್ರ ಮಾಹಿತಿಯನ್ನು, ಸಲಹೆಗಳನ್ನು ಬೇಕಿದ್ದರೆ ಪಡೆಯಬಹುದು. ಈಗಾಗಲೇ ನಮ್ಮ ತೋಟ ನೋಡಲು, ಸಲಹೆಗಾಗಿ ರೈತರು ಭೇಟಿ ನೀಡುವುದು ಸಂತಸ ಹೆಚ್ಚಿಸಿದೆ’ ಎಂದು ಸಿದ್ದಪ್ಪ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಚಿತ್ರಗಳು: ಸಂಜೀವ ಅಕ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT