ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರಡಿ ಬಣ್ಣದ ನಡೆ, ಅಣು ಸಮರಕ್ಕೆ ತಡೆ...

Last Updated 19 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

1945ರ ಆಗಸ್ಟ್ 6 ಮತ್ತು 9. ಮನುಕುಲ ಇತಿಹಾಸದ ಕರಾಳ ದಿನಗಳು. ಜಪಾನೀಯರ ಪಾಲಿಗಂತೂ ಎಂದಿಗೂ ಮರೆಯಲಾಗದ ದುರ್ದಿನಗಳು.

ಹೌದು, ಈ ದಿನಗಳಂದೇ ಜಪಾನಿನ ಹಿರೋಷಿಮಾ, ನಾಗಸಾಕಿ ನಗರಗಳ ಮೇಲೆ ಅಮೆರಿಕ ಅಣುಬಾಂಬ್ ಸಿಡಿಸಿದ್ದು. ‘ಲಿಟ್ಲ್‌ ಬಾಯ್‌’, ‘ಫ್ಯಾಟ್ ಮ್ಯಾನ್‌’ ಎಂಬ ನಾಲ್ಕಕ್ಷರಗಳ ಹೆಸರಿನ ಸಣ್ಣ ಬಾಂಬುಗಳು ಮಾಡಿದ ಅನಾಹುತ ದೊಡ್ಡದು. ಅದಕ್ಕೆ ಇಂದಿಗೂ ಜಪಾನ್ ತೆರುತ್ತಿರುವ ಬೆಲೆ ಅಪಾರ.

ಅಂದು ಜಪಾನ್‌ಗೆ ಆದ ಆತಂಕ, ಭಯ ಇಂದಿಗೂ ನಿವಾರಣೆಯಾಗಿಲ್ಲ. ಜಪಾನ್‌ ದುರಂತದ ಪರಿಣಾಮಗಳನ್ನು ಕಣ್ಣಾರೆ ಕಂಡ ಜಗತ್ತು ಶಾಂತಿಯ ಮಹತ್ವವನ್ನು ಮತ್ತೆ ಮತ್ತೆ ಸಾರುತಿದೆ. ಆ ನೆನಪಲ್ಲಿ ವಿಶ್ವಸಂಸ್ಥೆ 1982ರಿಂದ ಸೆ. 21ರಂದು ವಿಶ್ವಶಾಂತಿ ದಿನಾಚರಣೆಗೆ ಕರೆ ನೀಡಿದೆ. ವಿಶ್ವಸಂಸ್ಥೆಯ ಈ ಕರೆಗೆ ಕರ್ನಾಟಕ ಸ್ಪಂದಿಸಿದ್ದು ವಿಶಿಷ್ಟ ಚಿತ್ರಕಾವ್ಯದ ಮೂಲಕ. ಅದು 1986ರ ‘ಅಣು ಸಮರ ತಡೆಗೆ ಬಣ್ಣದ ನಡಿಗೆ’ ಸಮುದಾಯ ಶಾಂತಿ ಜಾಥಾದ ಮೂಲಕ.

ಅಣುಬಾಂಬಿನ ಭೀಕರತೆ, ಅದರ ಪರಿಣಾಮಗಳು ಖ್ಯಾತ ಕಲಾವಿದ ಟಿ.ಬಿ. ಸೊಲಬಕ್ಕನವರ ಅವರನ್ನು ಅನುದಿನವೂ ಕಾಡಿತ್ತು. ಆಗ ಮೂಡಿದ್ದೇ 120x4 ಅಡಿ ಉದ್ದದ ವಿಶಾಲ ಕ್ಯಾನ್‌ವ್ಯಾಸಿನ ಮೇಲೆ ಸರಣಿ ಚಿತ್ರಗಳ ರಚನೆ. 1986ರ ಸೆಪ್ಟೆಂಬರ್ 7ರಿಂದ ನವೆಂಬರ್ 5ರವರೆಗೆ ಸತತ ಎರಡು ತಿಂಗಳ ಕಾಲ ದಾವಣಗೆರೆಯಲ್ಲಿ ಈ ಚಿತ್ರ ಮಹಾ­ಕಾವ್ಯವನ್ನು ಸಂಗಡಿಗರೊಂದಿಗೆ ಸೊಲಬಕ್ಕನವರ ಚಿತ್ರಿಸಿದರು.

ಶಾಂತಿ ಸಂದೇಶವನ್ನು ಮಾನವೀಯ ದೃಶ್ಯಕಾವ್ಯದ ಮೂಲಕ ಸಾರುವ ಹಂಬಲವಿದ್ದ ಸೊಲಬಕ್ಕನವರ ಅವರಿಗೆ ಆರಂಭದಲ್ಲಿ ಹಣಕಾಸಿನ ತೊಂದರೆ ಉಂಟಾಗಿತ್ತು. ಆಗ ತಮ್ಮದೇ 18 ಕಲಾಕೃತಿಗಳನ್ನು ಮಾರಿ ಬಂದ ಹಣದಲ್ಲೇ ಚಿತ್ರ ರಚನೆ ಮುಂದುವರಿಸಿದರು. ನಂತರ ‘ಸಮುದಾಯ’ ತಂಡದ ನೆರವಿನಿಂದ ಅದಕ್ಕೆ ಪೂರ್ಣ ರೂಪ ನೀಡಲಾಯಿತು. ಅಂದು, 104 ಅಡಿಗಳ ವಿಶಾಲ ಕ್ಯಾನ್‌ವ್ಯಾಸ್‌ ಅನ್ನು ರಾಜ್ಯದ 60 ಸ್ಥಳಗಳಲ್ಲಿ ಪ್ರದರ್ಶಿಸಲಾಗಿತ್ತು. ಈ ಚಿತ್ರ ಕಾವ್ಯಕ್ಕೆ ಅಂದು ಕಲಾವಿದರು, ಸಾಹಿತಿಗಳಷ್ಟೇ ಅಲ್ಲ, ಜನಸಾಮಾನ್ಯರೂ ಅದ್ಭುತವಾಗಿ ಸ್ಪಂದಿಸಿದ್ದರು ಎಂದು ನೆನಪಿಸಿ­ಕೊಳ್ಳುತ್ತಾರೆ ಸೊಲಬಕ್ಕನವರ.

ಭೂಮಿ ಹುಟ್ಟಿದ ಬಗೆಯಿಂದ ಆರಂಭವಾಗುವ ಈ ಚಿತ್ರಕಾವ್ಯ, ದೊಡ್ಡರಾಷ್ಟ್ರಗಳ ಸ್ವಾರ್ಥ, ವಿಶ್ವವನ್ನು ತಮ್ಮ ಹಿಡಿತದಲ್ಲಿಟ್ಟು­ಕೊಳ್ಳಬೇಕೆಂಬ ಹವಣಿಕೆ, ಕೊನೆಗೆ ಅದು ಅಣುಬಾಂಬ್ ಸ್ಫೋಟದ ಮೂಲಕ ಸಾವಿರಾರು ಜನರ ಮಾರಣ ಹೋಮ ನಡೆಸಿದ ಬಗೆಯನ್ನು ಹಂತ­ಹಂತವಾಗಿ ಚಿತ್ರಿಸಿದೆ. ವಿಜ್ಞಾನ, ಸಾಮಾಜಿಕ ವಿಜ್ಞಾನದ ಜತೆಗೆ ಕಲಾವಿದನ ಮಾನವೀಯ ಮುಖ ಈ ಸರಣಿ ಚಿತ್ರದಲ್ಲಿ ಅನಾವರಣಗೊಂಡಿದೆ.

1986ರ ಶಾಂತಿ ಜಾಥಾ ದಾಖಲೆಯನ್ನೇ ಸೃಷ್ಟಿಸಿತ್ತು. ಈ ಸರಣಿ ಚಿತ್ರಕಾವ್ಯದಿಂದ ಪ್ರೇರಿತರಾಗಿ ಕವಿಗಳು ಕಾವ್ಯ, ನಾಟಕಕಾರರು ನಾಟಕ ರಚಿಸಿ, ಪ್ರದರ್ಶಿಸಿದ್ದರು. ದೇಶದ ವಿವಿಧ ವಿ.ವಿ.ಗಳಲ್ಲಿ ಈ ಚಿತ್ರಕಾವ್ಯ ಪ್ರದರ್ಶನಗೊಂಡಿತ್ತು. ಸರಣಿ ಚಿತ್ರಕಲೆ ಮೂಲಕ ಶಾಂತಿ ಸಂದೇಶ ಸಾರಿದ ವಿಶ್ವದ ಮೊದಲ ಜಾಥಾ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಈಚೆಗೆ ಜಪಾನ್‌ನ ಹಿರೋಷಿಮಾದಲ್ಲಿ ನಡೆದ ‘ಅಣು (ಅಟಾಮಿಕ್‌) ಮತ್ತು ಜಲಜನಕ ಬಾಂಬ್‌ಗಳ ವಿರುದ್ಧದ ವಿಶ್ವಶಾಂತಿ ಸಮ್ಮೇಳನ’ದಲ್ಲಿ ಈ ಚಿತ್ರಕಾವ್ಯ ಕುರಿತ ವಿಡಿಯೊ  ಪ್ರದರ್ಶಿತವಾಯಿತು.

ಅಂದು ಜಪಾನ್‌ನಲ್ಲಿ ಪ್ರದರ್ಶನವಾಗಿದ್ದ ಈ ವಿಡಿಯೊವನ್ನು ಇಂದು (ಸೆ. 20, ಶನಿವಾರ) ಕಲಾವಿದ ಕೃಷ್ಣ ರಾಯಚೂರು  ಬಿಡುಗಡೆ ಮಾಡಲಿದ್ದಾರೆ. ರಾಜ್ಯ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ಆಶಯ ನುಡಿಗಳನ್ನಾಡಲಿದ್ದಾರೆ. ಈಚೆಗಷ್ಟೇ ಜಪಾನ್‌ನ ಹಿರೋಷಿಮಾ ಸಮಾವೇಶದಲ್ಲಿ ಸಿಐಟಿಯು ಪ್ರತಿನಿಧಿಯಾಗಿ ಪಾಲ್ಗೊಂಡಿದ್ದ ಯಮುನಾ ಗಾಂವ್ಕರ್ ತಮ್ಮ ಅನುಭನ ಕಥನ ಬಿಚ್ಚಿಡಲಿದ್ದಾರೆ.

ಕವಿಗಳಾದ ಡಾ.ಹುಲಿಕುಂಟೆ ಮೂರ್ತಿ, ಡಾ.ರವಿಕುಮಾರ್ ಬಾಗಿ, ಎಸ್. ಮಂಜುನಾಥ್ ಯುದ್ಧ ವಿರೋಧಿ ಕುರಿತ ಕವನಗಳನ್ನು ವಾಚಿಸಲಿದ್ದಾರೆ. ಅಷ್ಟೇ ಅಲ್ಲ, ಗಾಜಾ ನರಮೇಧದ ಪೋಸ್ಟರುಗಳ ಪ್ರದರ್ಶನ, ಮೊದಲ ಮಹಾಯುದ್ಧದ ಕುರಿತ ವಿಡಿಯೊ ಪ್ರದರ್ಶವನ್ನೂ ‘ಸಮುದಾಯ’ ಆಯೋಜಿಸಿದೆ. ಸ್ಥಳ: ಜೈಭೀಮ್‌ ಭವನ, (ಕನ್ನಡ ಭವನ ಪಕ್ಕದ ರಸ್ತೆ, ಪೂರ್ಣಿಮಾ ಚಿತ್ರಮಂದಿರ ಎದುರು). ಸಮಯ: ಮಧ್ಯಾಹ್ನ 3.30ಕ್ಕೆ.

ಜಪಾನ್‌ನಲ್ಲಿ ಯಮುನಾ...
ಜಪಾನ್‌ನಲ್ಲಿ ಆಗಸ್ಟ್‌ ತಿಂಗಳಲ್ಲಿ ನಡೆದ ‘ಯುದ್ಧ ವಿರೋಧಿ, ಅಣ್ವಸ್ತ್ರ ನಿಶ್ಯಸ್ತ್ರೀಕರಣ ಕುರಿತ ಜಾಗತಿಕ ಸಮ್ಮೇಳನ’ದಲ್ಲಿ ಭಾರತದ ಸಿಐಟಿಯು ಪ್ರತಿನಿಧಿಯಾಗಿ ಪಾಲ್ಗೊಂಡ ಹೋರಾಟಗಾರ್ತಿ ಯಮುನಾ ಗಾಂವ್ಕರ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದು ಹೀಗೆ...
‘ಅಣುಬಾಂಬಿನ ಭೀಕರತೆಯಿಂದ ತತ್ತರಿಸಿರುವ ಜಪಾನ್‌ 1955ರಿಂದ ‘ಯುದ್ಧ ವಿರೋಧಿ, ಅಣ್ವಸ್ತ್ರ ನಿಶ್ಶಸ್ತ್ರೀಕರಣ ಕುರಿತ ಜಾಗತಿಕ ಸಮ್ಮೇಳನ’ ನಡೆಸಿಕೊಂಡು ಬರುತ್ತಿದೆ.

ಅಲ್ಲಿನ ಸಮುದಾಯದ ಉತ್ತಮ ಬದುಕಿ­ಗಾಗಿ, ಯುದ್ಧಾಸ್ತ್ರಗಳಿಗೆ ಹಣ ಮೀಸಲಿಡುವುದು, ಯುದ್ಧ ವಿರೋಧಿ­ಸುವ ಶಾಂತಿ ಬಯಸುವ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟವಾಗಿ ‘ಜಪಾನ್‌ ಕೌನ್ಸಿಲ್‌ ಎಗೆನೆಸ್ಟ್‌ ಎ ಅಂಡ್‌್‌ ಎಚ್‌ ಬಾಂಬ್ಸ್’ ಈ ಕೆಲಸ ಮಾಡುತ್ತಿದೆ. ಸರ್ಕಾರದಿಂದಾಗಲೀ, ಸರ್ಕಾರೇ­ತರ ಕಾರ್ಪೊರೇಟ್‌ ಸಂಸ್ಥೆಗಳಿಂದಾಗಲೀ ಈ ಒಕ್ಕೂಟ ಹಣ ಪಡೆಯುವುದಿಲ್ಲ. ಈ ಬಾರಿ ಪ್ಯಾಲಿಸ್ಟೈನ್‌ ಮೇಲಿನ ಯುದ್ಧ ನಿಲ್ಲಿಸಲು ಒತ್ತಾಯಿಸಿ ವಿಶ್ವಸಂಸ್ಥೆ ಪ್ರತಿನಿಧಿಗಳಿಗೆ ಮನವಿ ನೀಡಲಾಯಿತು.

ಅಣ್ವಸ್ತ್ರ ಮತ್ತು ಮನುಷ್ಯರು ಎಂದಿಗೂ ಸಹಬಾಳ್ವೆ ಮಾಡಲಾಗದು. ಇನ್ನೆಂದಿಗೂ ಅಣ್ವಸ್ತ್ರ ಬೇಡ. ಮತ್ತೊಂದು ನರಕ ನೋಡುವುದು ಬೇಡ. ತಮ್ಮ ಜೀವಿತಾವಧಿಯಲ್ಲೇ ಅಣ್ವಸ್ತ್ರಮುಕ್ತ ವಿಶ್ವ ನಮ್ಮದಾಗಲಿ ಎಂದು ಅಣುಬಾಂಬ್ ವಿಕಿರಣದ ಸಂತ್ರಸ್ತರು (ಹಿಬಾಕುಶಾಗಳು) ಕರೆ ನೀಡಿದ್ದು ಮನಕಲಕುವಂಥದ್ದು.

ಶಾಂತಿ ಸಂದೇಶಕ್ಕಾಗಿ ಕರ್ನಾಟಕದ ಕಲಾವಿದ ಸೊಲಬಕ್ಕನವರ ಅವರು ರೂಪಿಸಿದ್ದ ‘ನೂರಡಿ ಬಣ್ಣದ ನಡೆ, ಅಣು ಸಮರಕ್ಕೆ ತಡೆ’ ಚಿತ್ರಕಾವ್ಯ ಹಾಗೂ ಡಾ.ಶ್ರೀಪಾದ್ ಭಟ್‌ ನಿರ್ದೇಶನದ ‘ರೆಕ್ಕೆ ಕಟ್ಟುವಿರಾ?’ (ಹಿರೋಷಿಮಾ–ನಾಗಸಾಕಿ ಬಾಂಬ್ ದುಷ್ಪರಿಣಾಮ ಬಿಂಬಿಸುವ ನಾಟಕ)ದ ಡಿವಿಡಿ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿತು. ಸಮ್ಮೇಳನದ ಕೊನೆಗೆ ಹಿರೋಷಿಮಾ ನದಿಯಲ್ಲಿ ಶಾಂತಿ ಸಂದೇಶ ಹೊತ್ತ ದೀಪದ ಗೂಡುಗಳನ್ನು ತೇಲಿಬಿಟ್ಟ ಅನುಭವ ಹೃದಯಸ್ಪರ್ಶಿಯಾಗಿತ್ತು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT