ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರು ವಿಘ್ನಗಳ ದಾರಿ; ಹೈರಾಣಾಗುವ ಪಾದಚಾರಿ

Last Updated 16 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಾಲುದಾರಿಯಲ್ಲಿ ಕಸದ ರಾಶಿ ದಾರಿ ಮಧ್ಯೆ ಹಲವರ ಚೌಕಾಸಿ ಅಡಿಗಡಿಗೆ ಕಿತ್ತು ಹೋಗಿವೆ ಕಲ್ಲುಗಳು ಮೈಮರೆತು ಅಡಿಯಿಟ್ಟರೆ ಉದುರುವುದು ಖಾತ್ರಿ ಹಲ್ಲುಗಳು ಜೋರಾಗಿ ಸುರಿಯದಿದ್ದರೆ ಇಲ್ಲಿ ಮಳೆ ಮಡುಗಟ್ಟಿ ನಿಲ್ಲುವುದು ಕೊಚ್ಚೆಯ ಹೊಳೆ...

‘ರಾಜಧಾನಿಯ ಹೃದಯ’ ಎಂಬ ಅಭಿದಾನ ಪಡೆದಿರುವ ಮೆಜೆಸ್ಟಿಕ್‌ನಲ್ಲಿರುವ ಪಾದಚಾರಿ ಮಾರ್ಗಗಳ ಸ್ಥಿತಿಯನ್ನು ಅರಿಯಲು ನಡೆಸಿದ ಪಾದಯಾತ್ರೆಯ ಅಂತ್ಯದಲ್ಲಿ ಮನದ ಮೂಲೆಯಲ್ಲಿ ಮೂಡಿದ ಸಾಲುಗಳಿವು...

ಮೈಸೂರು ಬ್ಯಾಂಕ್ (ಎಸ್‌ಬಿಎಂ) ಪ್ರಧಾನ ಕಚೇರಿ ಮುಂಭಾಗದಿಂದ ಕೆ.ಜಿ.ರಸ್ತೆ ಮತ್ತು ಟ್ಯಾಂಕ್ ಬಂಡ್ ರಸ್ತೆ ಮೂಲಕ ಮೆಜೆಸ್ಟಿಕ್‌ನಲ್ಲಿರುವ ಧನ್ವಂತರಿ ರಸ್ತೆಯ ಕೊನೆತುದಿವರೆಗೆ ಹೆಜ್ಜೆ ಹಾಕಿದಾಗ ಕಂಡುಬಂದ ಚಿತ್ರಣ ಇಲ್ಲಿದೆ.

ಎಸ್‌ಬಿಎಂಗೆ ಹೊಂದಿಕೊಂಡಿರುವ ಪಾದಚಾರಿ ಮಾರ್ಗ ಸ್ವಲ್ಪ ಪರವಾಗಿಲ್ಲ. ಅತ್ತ, ಬಲಬದಿ ಮಾರ್ಗದಲ್ಲಿ ಪ್ರಾರಂಭದಲ್ಲಿಯೇ ತ್ಯಾಜ್ಯದ ರಾಶಿ ಎದುರಾಗುತ್ತದೆ.

ಭೂಮಿಕಾ ಚಿತ್ರಮಂದಿರದ ಸಮೀಪ ಚರಂಡಿ ಹೊದಿಕೆ ಕಲ್ಲುಗಳನ್ನು ಕಿತ್ತು ಪಾದಚಾರಿ ಮಾರ್ಗದ ಮೇಲೆ ಇಡಲಾಗಿತ್ತು.
ಎಫ್‌ಕೆಸಿಸಿಐ ಕಚೇರಿ ಮತ್ತು ಜನತಾ ಬಜಾರ್ ಸಂಕೀರ್ಣದ ಮುಂದೆ ವ್ಯಾಪಾರಿಗಳು ಕಾಲುದಾರಿಯಲ್ಲಿಯೇ ಜೋರಾಗಿ ವಹಿವಾಟು ನಡೆಸಿದ್ದರು. ಅತ್ತ, ಎಡಬದಿಯಲ್ಲಿ ಕೆಂಪೇಗೌಡ ವಾಣಿಜ್ಯ ಸಂಕೀರ್ಣದ ಮುಂದೆ ಕಿತ್ತು ತೆಗೆದ ವಿದ್ಯುತ್ ಉಪಕರಣದ ಪೆಟ್ಟಿಗೆಯೊಂದನ್ನು ದಾರಿಯಲ್ಲಿಯೇ ಇಡಲಾಗಿತ್ತು. ಇದರಿಂದ ಪಾದಚಾರಿಗಳಿಗೆ ತೊಂದರೆ ಉಂಟಾಗುತ್ತಿತ್ತು. ಜತೆಗೆ ಯುಕೊ ಬ್ಯಾಂಕ್, ಸಂತೋಷ್ ಚಿತ್ರಮಂದಿರ ಮತ್ತು ಮೇಲ್ಸೇತುವೆ ಬಳಿ ಪಾದಚಾರಿಗಳಿಗೆ ತೊಂದರೆ ನೀಡುವ ಮೂರು ವಿದ್ಯುತ್ ಉಪಕರಣಗಳ ಪೆಟ್ಟಿಗೆಗಳು ಗೋಚರಿಸಿದವು.

ಮುಂದೆ ಎಡತಿರುವಿನ ರಸ್ತೆಯಲ್ಲಿ ಸ್ವಲ್ಪ ಪರವಾಗಿಲ್ಲ ಎನ್ನುವ ಫುಟ್‌ಪಾತ್ ಮೇಲೆ ಸಾಗಿದಾಗ ಇದ್ದಕ್ಕಿದ್ದಂತೆ ಉಪ್ಪಾರ ಪೇಟೆ ಪೊಲೀಸ್

ಠಾಣೆ ಎದುರಿನಲ್ಲಿಯೇ ಕಾಲುದಾರಿಯಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಜತೆಗೆ ದೊಡ್ಡ ವಿದ್ಯುತ್ ಉಪಕರಣವನ್ನು ಪ್ರತಿಷ್ಠಾಪಿಸಿರುವುದು ಕಂಡುಬಂತು. ಇದರ ಬಳಿ ತ್ಯಾಜ್ಯ ಎಸೆಯುವ ಜತೆಗೆ ಮೂತ್ರ ವಿಸರ್ಜನೆ ಕೂಡ ಮಾಡಲಾಗುತ್ತದೆ. ಇಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಪಾದಚಾರಿಗಳು ನಡೆದಾಡಲು ಪರದಾಡುವಂತಿದೆ.

ಹಾಗೆಯೇ, ಮುಂದೆ ಟ್ಯಾಂಕ್ ಬಂಡ್ ರಸ್ತೆಯ ಎರಡು ಬದಿ ಪಾದಚಾರಿ ಮಾರ್ಗದ ಮೇಲೆ ಕಣ್ಣು ಹಾಯಿಸುತ್ತ ನಡೆದಾಗ ಮೆಟ್ರೊ ಸುರಂಗ ಕಾಮಗಾರಿ ಕಾರಣ ನಿರ್ಮಿಸಿರುವ ತಾತ್ಕಾಲಿಕ ಸೇತುವೆ ಬಳಿ ಎಡಬದಿಯಲ್ಲಿ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡಲಾಗಿದ್ದು, ಇದರಿಂದ ಕಾಲುದಾರಿಯಲ್ಲಿ ಮೂತ್ರದ ಕೊಚ್ಚೆ ಮಡುಗಟ್ಟಿದೆ.  ಇಲ್ಲಿ ಪಾದಚಾರಿಗಳು ಮೂಗು ಮುಚ್ಚಿಕೊಂಡು ರಸ್ತೆಯ ಪಕ್ಕದಲ್ಲಿ ವಾಹನದೊಂದಿಗೆ ಪೈಪೋಟಿ­ಯಲ್ಲಿ ಸಾಗುತ್ತಿದ್ದರು.

ಇದೇ ದಾರಿಯಲ್ಲಿ ಮುಂದೆ ತಳ್ಳುಗಾಡಿಯ ವ್ಯಾಪಾರಿಯೊಬ್ಬ ಕಾಲುದಾರಿಯ ಮೇಲೆ ಭರ್ಜರಿ ವ್ಯಾಪಾರ ಶುರುವಿಟ್ಟುಕೊಂಡಿದ್ದ. ಅಲ್ಲಿ ಇಡೀ ಫುಟ್‌ಪಾತ್ ಅನ್ನು ಗ್ರಾಹಕರು ಆವರಿಸಿಕೊಂಡಿದ್ದರು.

ಸಿಗ್ನಲ್ ದಾಟಿಕೊಂಡು ಗುಬ್ಬಿ ತೋಟದಪ್ಪ ರಸ್ತೆ ಆರಂಭದಲ್ಲಿರುವ ಸಿಟಿ ಸೆಂಟರ್ ಮುಂಭಾಗಕ್ಕೆ ತಲುಪಿದಾಗ ಅಲ್ಲಿ ಸಂಪೂರ್ಣವಾಗಿ ಕಿತ್ತುಹೋದ ಪಾದಚಾರಿ ಮಾರ್ಗದ ನರಕ ಸದೃಶ್ಯ ಚಿತ್ರಣ ಕಂಡುಬಂತು. ಜನರು ನಡೆದಾಡಲು ಸಾಧ್ಯವಿಲ್ಲದ ಸ್ಥಿತಿ ಇಲ್ಲಿದೆ. ಸಮೀಪದಲ್ಲಿಯೇ ಇರುವ ಶೌಚಾಲ­ಯದ ಸುತ್ತ ಕಟ್ಟಡ ಒಡೆದ ತ್ಯಾಜ್ಯ, ಗೂಡಂಗಡಿಗಳು, ಮೂತ್ರ ವಿಸರ್ಜನೆಯಿಂದ ಅಸಹ್ಯಕರ ವಾತಾವರಣ ನಿರ್ಮಾಣವಾಗಿದೆ.

ಗುಬ್ಬಿ ತೋಟದಪ್ಪ ಧರ್ಮಸಂಸ್ಥೆಯ ಮುಂಭಾಗದ ಪಾದಚಾರಿ ಮಾರ್ಗ ಬೀದಿ ವ್ಯಾಪಾರಿಗಳ ಅತಿಕ್ರಮಣ ಮತ್ತು ಅವರು ಸೃಷ್ಟಿಸುವ ಗಲೀಜಿನಿಂದಾಗಿ ನಲುಗಿ ಹೋಗಿದೆ.ಇಲ್ಲಿ ಅಬ್ಬರಿಸಿ ಮೆರೆಯುವ ವಿವಿಧ ಬಗೆಯ ವ್ಯಾಪಾರಿಗಳ ನಡುವೆ ಪಾದಚಾರಿಗಳು ಪರದಾಡುತ್ತ ನಡೆದಾಡುವ ಸ್ಥಿತಿ ನಿರ್ಮಾಣವಾಗಿದೆ.

ನಗರ ರೈಲು ನಿಲ್ದಾಣದ ಮುಂಭಾಗದಲ್ಲಿ ಪರ­ವಾಗಿಲ್ಲ ಎನ್ನುವಂತಿದೆ. ಬಿಎಂಟಿಸಿ ಮತ್ತು ಕೆಎಸ್ಆರ್‌ಟಿಸಿ ಬಸ್ ನಿಲ್ದಾಣಗಳಿಗೆ ಹೊಂದಿಕೊಂಡ ಫುಟ್‌ಪಾತ್ ಸ್ಥಿತಿ ಅಧೋಗತಿಗೆ ತಲುಪಿದೆ.

ಈ ಕಾಲುದಾರಿಯಲ್ಲಿ ಅಡಿಗಡಿಗೆ ಕಿತ್ತು ಹೋಗಿರುವ ಹೊದಿಕೆ ಕಲ್ಲುಗಳು, ತ್ಯಾಜ್ಯದ ರಾಶಿ, ಕೊಚ್ಚೆಯ ಗುಂಡಿ, ತಳ್ಳುಗಾಡಿಗಳ ವ್ಯಾಪಾರಿಗಳ ಅಬ್ಬರ, ಶೌಚಾಲಯ, ಆಟೊ ಚಾಲಕರ ಆಟಾಟೋಪ, ತಡೆಬೇಲಿ ಹಾಕಿಕೊಂಡು ಕುಳಿತ ಬೃಹತ್ ವಿದ್ಯುತ್ ಉಪಕರಣ… ಒಂದೆರಡಲ್ಲ ಇಲ್ಲಿ ಎದುರಾಗುವ ಅಡೆತಡೆಗಳು. ಮೈಮೇಲೆ ಏರಿ ಬರುವ ಬಿಎಂಟಿಸಿ ಬಸ್ ಮತ್ತು ಆಟೊಗಳ ಪೈಪೋಟಿ ನಡುವೆ ರಸ್ತೆಬದಿಯಲ್ಲಿ ಸಾಗಿ ಇವುಗಳನ್ನೆಲ್ಲ ದಾಟಿಕೊಂಡು ಬರುವ ಹೊತ್ತಿಗೆ ಪಾದಚಾರಿಗಳು ಹೈರಾಣಾಗಿ ಹೋಗುತ್ತಾರೆ.

ಮುಂದೆ ಕೆಂಪೇಗೌಡ ಬಸ್ ನಿಲ್ದಾಣದ ಟರ್ಮಿನಲ್ 3ರ ಮುಂಭಾಗದ ಪಾದಚಾರಿ ಮಾರ್ಗ ಕೂಡ ಅವ್ಯವಸ್ಥೆಯಿಂದ ಕೂಡಿದೆ. ಇದನ್ನು ದಾಟಿಕೊಂಡು ಟ್ಯಾಂಕ್ ಬಂಡ್ ರಸ್ತೆಯ ಎಡಬದಿ ಕಾಲುದಾರಿಯಲ್ಲಿ ಪಾದಚಾರಿಗಳು ರಸ್ತೆಯಲ್ಲಿ ನಡೆಯಬೇಕಾದ ಸ್ಥಿತಿ ಇದೆ.
ಬಲಬದಿ ರಸ್ತೆ ಮಧ್ಯದಲ್ಲಿರುವ ವರಸಿದ್ಧಿ ವಿನಾಯಕ ದೇವಸ್ಥಾನದ ಸುತ್ತಲೂ ಪಾದಚಾರಿ ಮಾರ್ಗ ಕಣ್ಮರೆಯಾಗಿದೆ.
ಧನ್ವಂತರಿ ರಸ್ತೆಯನ್ನು ಪ್ರವೇಶಿಸುತ್ತಿದ್ದಂತೆ ಎಡಬದಿಯ ಪಾದಚಾರಿ ಮಾರ್ಗದ ಹೆಜ್ಜೆ ಹಾಕದೆ ಜನರು ರಸ್ತೆಗಿಳಿದು ಮೂಗು ಮುಚ್ಚಿಕೊಂಡು ನಡೆಯುತ್ತಿದ್ದರು. ಸಮೀಪಕ್ಕೆ ಹೋದಾಗ ಮೂತ್ರದ ಗಲೀಜು ಕಂಡುಬಂತು.

ಅಲ್ಲಿ ಮಾತಿಗೆ ಸಿಕ್ಕ ಬಳೆಪೇಟೆ ಶಾಲೆಯೊಂದರ ಶಿಕ್ಷಕಿಯರು ‘ಹೆಣ್ಣು ಮಕ್ಕಳು ಇಂತಹ ಅಸಹ್ಯಗಳನ್ನು ಸಹಿಸಿಕೊಂಡು, ಮನೆವರೆಗೂ ಮೂಗುಮುಚ್ಚಿ­ಕೊಂಡು ಹೋಗಬೇಕಿದೆ. ಕಣ್ಣಿದ್ದು ಕುರುಡರಂತೆ ವರ್ತಿಸುವ ಪೊಲೀಸ್ ಇಲಾಖೆಯಿಂದಾಗಿ ಗಂಡಸರು ನಾಚಿಕೆ ಬಿಟ್ಟು ವರ್ತಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗಿದೆ’ ಎಂದು ಗೋಳು ತೋಡಿಕೊಂಡರು.

ಹಾಗೆ ಮುಂದೆ ಎಡಬಲ ಮಾರ್ಗಗಳಲ್ಲಿ ದೃಷ್ಟಿ ನೆಟ್ಟು ಧನ್ವಂತರಿ ಮಾರ್ಗದಲ್ಲಿ ಮುನ್ನಡೆದಾಗ ಎರಡು ಬದಿಗಳಲ್ಲಿ ಚಿಕ್ಕಪುಟ್ಟ ವ್ಯಾಪಾರಿಗಳು ಪಾದಚಾರಿಗಳ ಓಡಾಟಕ್ಕೆ ತಡೆಯೊಡ್ಡುತ್ತಿದ್ದುದು ಕಂಡುಬಂತು. ಬಲಬದಿಯ ಪಾದಚಾರಿ ಮಾರ್ಗದಲ್ಲಿ ಒಂದು ಡಬ್ಬಿ ಅಂಗಡಿ ಕೂಡ ಗೋಚರಿಸಿತು. ಸರ್ಕಾರಿ ಆರ್ಯುವೇದ ಆಸ್ಪತ್ರೆವರೆಗೆ ನಡೆದಾಗ ದಾರಿಯಲ್ಲಿ ಮೂರು ವಿದ್ಯುತ್ ಉಪಕರಣಗಳು ಕಂಡುಬಂದವು.

ಎಡಬದಿಯಲ್ಲಿ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಫುಟ್ ಪಾತ್ ಅನ್ನು ಗುತ್ತಿಗೆ ಪಡೆದವರಂತೆ ವರ್ತಿಸುವ ವ್ಯಾಪಾರಿಗಳು ಅತಿಕ್ರಮಿಸಿ­ಕೊಂಡಿರುವುದು ಕಂಡುಬಂತು. ಅದರಾಚೆ ದೊಡ್ಡ ತ್ಯಾಜ್ಯ ಸಂಗ್ರಹಣಾ ಪ್ರದೇಶ ನಿರ್ಮಾಣವಾಗಿದ್ದು, ಅಲ್ಲಿ ಜನರು ಸಮೀಪಕ್ಕೂ ಸುಳಿಯದ ಸ್ಥಿತಿ ಇದೆ. ಇನ್ನು ಆರ್ಯುವೇದ ಆಸ್ಪತ್ರೆಯ ಮುಂಭಾಗದ ಪಾದಚಾರಿ ಮಾರ್ಗದ ಮೇಲೆ ಎಲ್ಲೆಂದರಲ್ಲಿ ಮೂತ್ರ ವಿಸರ್ಜಿಸಲಾಗಿದೆ. ಅಲ್ಲಿ ರೋಗಿಗಳು, ಶಾಲಾ ಮಕ್ಕಳು ಸೇರಿದಂತೆ ಜನಸಾಮಾನ್ಯರು ಸಂಚರಿಸಲು ತೀವ್ರ ತೊಂದರೆ ಉಂಟಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT