ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂಲುತ್ತ ಕುಳಿತ ದೇವತೆ

ಸಂತ ಇಟಗಿ ಭೀಮಾಂಬಿಕೆ
Last Updated 18 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ದೇವರ ಮೂರ್ತಿಗಳನ್ನು ಗಮನಿಸಿರಬಹುದು ನೀವು. ದೇವರ ಕೈಗಳಲ್ಲಿ ಸಾಮಾನ್ಯವಾಗಿ ಉಪಕರಣವೊಂದನ್ನು ಹಿಡಿಸಿ ನಿಲ್ಲಿಸಲಾಗಿರುತ್ತದೆ. ಉಪಕರಣವು ಹೆಚ್ಚಾಗಿ ಆಯುಧವಾಗಿರುತ್ತದೆ. ತ್ರಿಶೂಲ, ಗದೆ, ಬಿಲ್ಲು, ಚಕ್ರ, ಇತ್ಯಾದಿ. ಕೆಲವು ದೇವರುಗಳು ಆಯುಧವಲ್ಲದ ಉಪಕರಣಗಳನ್ನೂ ಹಿಡಿದಿರುತ್ತವೆ. ಮಥುರಾ ಶೈಲಿಯ ಕುಬೇರನ ಮೂರ್ತಿಯು ತಕ್ಕಡಿ ಹಿಡಿದು ತೂಗುತ್ತ ಕುಳಿತಿದೆ. ಸರಸ್ವತಿ ಮೂರ್ತಿಯು ಕೈಯಲ್ಲಿ ವೀಣೆ ಹಿಡಿದಿರುತ್ತದೆ. ಲಕ್ಷ್ಮಿಯ ಕೈಯಲ್ಲಿ ದುಡ್ಡು ಉದುರುತ್ತಿರುತ್ತದೆ. ಕೆಲವು ದೇವತೆಗಳಿಗೆ ಒಂದಕ್ಕಿಂತ ಹೆಚ್ಚಿನ ಕೈಗಳನ್ನು ನೀಡಿ, ಒಂದಕ್ಕಿಂತ ಹೆಚ್ಚಿನ ಉಪಕರಣಗಳನ್ನು ನೀಡಲಾಗಿರುತ್ತದೆ. ಕೈಚೆಲ್ಲಿ ನಿಂತಿರುವ ಮೂರ್ತಿಗಳು ಇಲ್ಲವೇ ಇಲ್ಲ ಎಂದರೂ ನಡೆದೀತು.

ದೇವರುಗಳು ಹಿಡಿದಿರುವ ಉಪಕರಣಗಳಿಗೂ ಅವರ ದೈವೀಶಕ್ತಿಗೂ ನೇರವಾದ ಸಂಬಂಧವಿದೆ. ತಕ್ಕಡಿ ಹಿಡಿದ ಕುಬೇರ ಸಂಪತ್ತನ್ನು ಸಂಕೇತಿಸಿದರೆ, ಸಿಡಿಲು ಹಿಡಿದ ವರುಣ ನೀರನ್ನು ಸಂಕೇತಿಸುತ್ತಾನೆ, ಬಿಲ್ಲು ಹಿಡಿದ ದೇವರು ಬೇಟೆಯನ್ನು ಸಂಕೇತಿಸುತ್ತಾರೆ, ಇತ್ಯಾದಿ. ನಮ್ಮದೇ ಹಿತ್ತಲಿನ ಉತ್ತರಕರ್ನಾಟಕದಲ್ಲಿ ದೇವತೆಯೊಬ್ಬಳಿದ್ದಾಳೆ. ಅಪ್ಪಟ ಅಹಿಂಸಾತ್ಮಕವಾದ ಉಪಕರಣವೊಂದನ್ನು ಹಿಡಿದಿರುವ ದೇವತೆಯಿವಳು. ಈಕೆಯ ಹೆಸರು ಇಟಗಿ ಭೀಮವ್ವ ಅಥವಾ ಭೀಮಾಂಬಿಕೆ, ಅಥವಾ ಭೀಮಮ್ಮ. ಜನಪ್ರಿಯವಾದ ಹೆಣ್ಣು ದೇವತೆಯೀಕೆ. ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ಈಕೆಯ ಮೂಲ ಗದ್ದಿಗೆ ಹಾಗೂ ಮಠಗಳಿವೆ. ಸುತ್ತಲ ಮೂರುನಾಲ್ಕು ಜಿಲ್ಲೆಗಳಲ್ಲಿ ಹಲವೆಡೆ ಈಕೆಯ ಮಂದಿರಗಳಿವೆ.

ತ್ರೇತಾಯುಗ ಅಥವಾ ದ್ವಾಪರಯುಗದಲ್ಲಿ ಜನಿಸಿದ ಹಳೆಯ ದೇವತೆಯಲ್ಲ ಭೀಮವ್ವ. ಇತ್ತೀಚೆಗೆ, ಪ್ರಾಯಶಃ 1818ರಲ್ಲಿ, ಬಡ ಹಾಲುಮತಸ್ಥ ಕುಟುಂಬವೊಂದರಲ್ಲಿ ಹುಟ್ಟಿದ ಮಹಿಳೆ ಇವಳು. ಗಾಂಧೀಜಿಯವರಿಗಿಂತ ಅರ್ಧ ಶತಮಾನ ಮೊದಲೇ ಹುಟ್ಟಿರಬಹುದಾದ ಈಕೆ, ಗಾಂಧೀಜಿಯವರಿಗಿಂತ ಮೊದಲೇ ಚರಕ ಹಿಡಿದು, ಮಹಿಳೆಯರಿಗೆ ನೂಲು ತೆಗೆಯುವ ಕಾಯಕವನ್ನು ಕಲಿಸಿ ದೇವತೆಯಾದವಳು.
ಭೀಮವ್ವನಿಗೆ ನಡೆದುಕೊಳ್ಳುವವರು ಹೆಂಗಸರೇ ಹೆಚ್ಚು. ಪೂಜಾರಿಗಳೂ ಸಹ ಹೆಣ್ಣುಮಕ್ಕಳೇ. ಭೀಮವ್ವನಿಗೆ ಒಪ್ಪಿಸುವ ಮುಡಿಪು ಹತ್ತಿಯ ಸೀರೆಗಳು ಅಥವಾ ನಾಲ್ಕು ಸೇರು ಜೋಳ. ಭಕ್ತರು ಪ್ರಸಾದರೂಪದಲ್ಲಿ ಪಡೆಯುವುದು ಸಹ ನೂಲಿನ ತುಣುಕುಗಳನ್ನೇ ಸರಿ. ಈಕೆಗೆ ನಡೆದುಕೊಳ್ಳುವವರು ಮಕ್ಕಳಾಗದವರು, ಕಷ್ಟಕ್ಕೆ ಸಿಲುಕಿದವರು, ಕಾಯಿಲೆಯಿಂದ ನರಳುತ್ತಿರುವವರು, ಇತ್ಯಾದಿ.

ಈಕೆಯ ಪವಾಡಗಳೂ ಅಷ್ಟೆ: ಬಡತನದ ರಗಳೆಗಳು ಪಡೆದ ಸರಳ ಉತ್ತರಗಳು. ಒಮ್ಮೆ ಒಂದು ಕುಟುಂಬ ಭೀಮವ್ವನ ಬಳಿಗೆ ಬಂದು ತಮ್ಮ ಕಷ್ಟ ಹೇಳಿಕೊಂಡಿತಂತೆ. ಭೀಮವ್ವ ನೂಲುತ್ತ ಕುಳಿತಿದ್ದಳಂತೆ. ಕೈಯಲ್ಲಿರುವ ಕದಿರನ್ನೇ ಬೇಡುವ ಬೊಗಸೆಗೆ ಹಾಕಿ ಹಸಾದವೆಂದಳಂತೆ. ಬಂದವರು ಬಾಗಿ ನಮಿಸಿ ಮನೆಗೆ ಹಿಂದಿರುಗಿ, ಕದಿರಿನ ಕಾಯಕವನ್ನು– ಅರ್ಥಾತ್ ನೇಯ್ಗೆಯ ವೃತ್ತಿಯನ್ನು ಕೈಗೊಂಡರಂತೆ. ಅಪಾರ ಯಶಸ್ಸು ಸಾಧಿಸಿದರಂತೆ. ಗಜೇಂದ್ರಗಡದಲ್ಲಿ ಈ ಕುಟುಂಬವು ಈಗಲೂ ನೇಕಾರಿಕೆಯ ಕಾಯಕ ಮಾಡಿಕೊಂಡು ಬರುತ್ತಿದೆ.

ಇಟಗಿ ಭೀಮವ್ವನ ಜೀವನಚರಿತ್ರೆ ರಚಿಸಿರುವ ಕೆ.ಬಿ. ಕಂಬಳಿಯವರು ಈಕೆಯ ಬಗ್ಗೆ ಈ ರೀತಿ ಬರೆದಿದ್ದಾರೆ: ‘‘ಕೊಪ್ಪದಲ್ಲಿ (ಕೊಪ್ಪ ಭೀಮವ್ವನ ಗಂಡನ ಊರು) ಹೆಚ್ಚಾಗಿ ರೈತಾಪಿ ಜನರೇ ಇದ್ದರು. ಅವರಿಗೆಲ್ಲ ಮನೆಗೆಲಸ–ಹೊಲಗೆಲಸಗಳಲ್ಲಿ ಬಿಡುವೇ ಇರುತ್ತಿರಲಿಲ್ಲ. ಆದರೆ ಕೆಲವು ಸ್ತ್ರೀಯರು ಹೊಲಕ್ಕೆ ಹೋಗುತ್ತಿರಲಿಲ್ಲ. ಅವರಿಗೆ ಉಪದಂಧೆಗಳಿರಲಿಲ್ಲ, ಗೃಹಕೈಗಾರಿಕೆಗಳು ಅಲ್ಲಿರಲಿಲ್ಲ. ಅದಕ್ಕಾಗಿ ಭೀಮಾಂಬೆಯು ರಾಟೆಯಿಂದ ನೂಲು ಉತ್ಪಾದಿಸುವ ಉದ್ಯೋಗ ಕೈಕೊಂಡಳು. ಆ ಉದ್ಯೋಗ ಉತ್ಪನ್ನದಾಯಕವಾದುದರಿಂದ ಎಲ್ಲರೂ ನೂಲಹತ್ತಿದರು.

ಆ ಕಾಲಕ್ಕೆ ಹತ್ತಿಗಿರಣಿಗಳಿರಲಿಲ್ಲ. ಬಟ್ಟೆ ಕಾರ್ಖಾನೆಗಳಿರಲಿಲ್ಲ, ಕೈನೂಲಿನ ಖಾದಿ ಬಟ್ಟೆಯನ್ನೇ ಎಲ್ಲರೂ ತೊಡುತ್ತಿದ್ದರು. ಉಣ್ಣೆನೂಲಿಗೆ ಬೇಡಿಕೆಯೂ ಇತ್ತು, ರಾಟಿ-ಮೇಟಿಗಳೆರಡು ಪೂರಕ ಉದ್ಯೋಗಗಳಾಗಿದ್ದವು. ಕೆಲಸವಿಲ್ಲದಾಗ ಸುಮ್ಮನೆ ಕಾಲವನ್ನು ಕಳೆಯುವುದಕ್ಕಿಂತ ನೂಲುವುದು ಬಹಳ ಜನಕ್ಕೆ ಇಷ್ಟವಾಯಿತು. ಭೀಮಾಂಬೆ ತೋರಿಸಿದ ಈ ನೂಲ ಕಾಯಕಕ್ಕೆ ಕೊಪ್ಪದ ಅನೇಕ ಮನೆತನಗಳು ತಮ್ಮನ್ನು ತಾವು ಅರ್ಪಿಸಿಕೊಂಡವು. ನೂಲುವಾಗಲೂ ಸಹ ಮನಸ್ಸಿನ ಬೇಜಾರುಗಳೆಯಲು ದೇವರ ನಾಮಸ್ಮರಣೆ ಮಾಡುತ್ತಿರಬೇಕು, ತತ್ವಬೋಧಕ ನೀತಿದಾಯಕವಾದ ಭಕ್ತಿಪದಗಳನ್ನು ಹಾಡುತ್ತಿರಬೇಕೆಂದು ಭೀಮಾಂಬೆ ಸಲಹೆ ಕೊಡುತ್ತಿದ್ದಳು’’.

ಭೀಮವ್ವ ಶ್ರಮಜೀವಿ ದೇವತೆ, ಸರಳದೇವತೆ. ಈಕೆಯ ವೇಷಭೂಷಣಗಳಲ್ಲಿ ಬೆಳ್ಳಿ ಬಂಗಾರವಿಲ್ಲ, ಮೈಮೇಲೆ ಕಿರೀಟ ಭುಜಕೀರ್ತಿಗಳಿಲ್ಲ. ಈಕೆಯ ಮೂರ್ತಿಯು ಹಳ್ಳಿಹೆಂಗಸರಂತೆ, ಒಂದು ಕಾಲನ್ನು ಮೇಲಕ್ಕೆ ಮಡಚಿ ಮತ್ತೊಂದು ಕಾಲನ್ನು ಅಡ್ಡಲಾಗಿ ಮಡಿಚಿ, ಖಾಲಿನೆಲದ ಮೇಲೆ ಕುಳಿತಿರುತ್ತದೆ. ಮೂರ್ತಿಗೆ ಕೆಂಪಂಚು ಹಾಗೂ ಹಸಿರು ಒಡಲಿನ ಹತ್ತಿಯ ಸೀರೆಯನ್ನುಡಿಸಿರುತ್ತಾರೆ. ತಲೆಗೆ ಸೆರಗು ಹೊದ್ದಿರುತ್ತಾಳೆ. ಬೋಳು ಕುತ್ತಿಗೆಯಲ್ಲೊಂದು ಕರಿಮಣಿ ಸರ ನೇತಾಡುತ್ತಿರುತ್ತದೆ. ಈಕೆ ಕೂರಲಿಕ್ಕೆ ಕಮಲದ ಹೂವೂ ಇಲ್ಲ, ಮೋಡವೂ ಇಲ್ಲ, ಹಂಸ, ಗರುಡ, ಸಿಂಹಾಸನ ಯಾವುದೂ ಇಲ್ಲ. ನಿಜಕ್ಕೂ ತಳಮಟ್ಟದ ದೇವರೀಕೆ.

ಹದಿನೆಂಟು ಹತ್ತೊಂಬತ್ತನೆಯ ಶತಮಾನವು ಕರ್ನಾಟಕದ ಇತಿಹಾಸದಲ್ಲಿ (ಪ್ರಾಯಶಃ ಭಾರತದ ಇತಿಹಾಸದಲ್ಲಿಯೇ ಸರಿ) ಸಂಕ್ರಮಣಕಾಲ. ಆಗ ಹಳತೆಂಬುದು ಮತ್ತಷ್ಟು ಹಳತಾಗತೊಡಗಿತ್ತು, ಇತ್ತ ಹೊಸತು ಹುಟ್ಟಿನ ಬೇನೆ ಅನುಭವಿಸುತ್ತಿತ್ತು. ಬೆಳಕಾಗುವ ಮೊದಲಿನ ಭ್ರಮಾತ್ಮಕ ಕತ್ತಲು ಕರ್ನಾಟಕವನ್ನು ಆವರಿಸಿತ್ತು. ಪರಾಧೀನತೆ, ಬಡತನ, ರೋಗರುಜಿನಗಳು ಜನರನ್ನು ಕಾಡುತ್ತಿದ್ದವು. ಪ್ರತಿಭಟನೆಯೆಂಬುದು ಬೀಜರೂಪದಲ್ಲಿತ್ತು, ಅರೆ-ಆಧ್ಯಾತ್ಮಿಕ ರೂಪು ಪಡೆದಿತ್ತದು.

ಹುಬ್ಬಳ್ಳಿಯ ಶ್ರೀ ಸಿದ್ಧಾರೂಡ ಸ್ವಾಮಿಗಳು ಈ ಬಗ್ಗೆ ಹೀಗೆ ಹೇಳುತ್ತಾರೆ: ‘‘೧೮ನೆಯ ಶತಮಾನದ ಅಂತ್ಯಭಾಗದಲ್ಲಿ 19ನೆಯ ಶತಮಾನದ ಪೂರ್ವಾರ್ಧದಲ್ಲಿ ಉತ್ತರಕರ್ನಾಟಕದಲ್ಲಿ ಯುದ್ಧ, ದಾಳಿ, ಭೀಕರ ಬರಗಾಲ, ಅನ್ಯರ ಆಕ್ರಮಣಗಳಿಂದ ಧಾರ್ಮಿಕ ಜೀವನ ತತ್ತರಿಸಿತು. ಆಗ ಕವಿದ ಕತ್ತಲೆಯನ್ನು ಓಡಿಸುವುದಕ್ಕೆ ಶಿವನೇ ತನ್ನ ಗಣಾಧೀಶ್ವರರೊಡನೆ ಭೂಮಿಯಲ್ಲಿ ಅವತರಿಸಿದನು. ಈ ಭೂಮಿಯಲ್ಲಿ ಶಿವನೇ ಸಿದ್ಧಾರೂಢರ ರೂಪತಳೆದನು. ಈಶ್ವರನೇ ಬಿಜಾಪುರದ ಷಣ್ಮುಖಸ್ವಾಮಿ ಎನಿಸಿದನು. ಮಹಾವಿಷ್ಣುವು ಗೋದಾವಲಿಕರ ಮಹಾರಾಜನೆನಿಸಿದನು. ಶಿವನ ಅರ್ಧಾಂಗಿಯೆ ನವಲಗುಂದದ ಅಜಾತ ನಾಗಲಿಂಗ ಯೋಗಿಯಾದ. ವೀರಭದ್ರನೇ ಶಿಶುನಾಳ ಶರೀಫರರೂಪ ತಳೆದನು. ಇದರಂತೆ ಇನ್ನುಳಿದ ಗಣಾಧೀಶ್ವರರು ಒಂದೊಂದು ರೂಪಧಾರಣೆ ಮಾಡಿದರು’’.

ಸಿದ್ಧಾರೂಢರ ಪಟ್ಟಿಯಲ್ಲಿ ಬರುವ ‘ಇನ್ನುಳಿದ ಗಣಾಧೀಶ್ವರ’ರಲ್ಲಿ ಭೀಮಾಂಬಿಕೆಯೂ ಒಬ್ಬಳು. ಸಿದ್ಧಾರೂಢರು ಹೆಸರಿಸಿರುವ ನಾಗಲಿಂಗ ಯತಿಗಳು ಹಾಗೂ ಶಿಶುನಾಳ ಶರೀಫರು ತತ್ವಪದಕಾರರೆಂದು ಖ್ಯಾತನಾಮರಾಗಿದ್ದಾರೆ. ಭೀಮವ್ವ ತತ್ವಪದಗಳನ್ನು ರಚಿಸಲಿಲ್ಲ, ಸಾಮಾಜಿಕ ಕಾರ್ಯ ನಡೆಸಿದಳು. ಹಳೆಯ ಪರಿಭಾಷೆಯಲ್ಲಿ ಹೇಳುವುದಾದರೆ ಪವಾಡಗಳನ್ನು ಮಾಡಿದಳು. ಭೀಮವ್ವಳದ್ದು ‘ಧರ್ಮರ ಮನೆತನ’. ಧರ್ಮರ ಮನೆಯವರ ಬಾಯಲ್ಲಿ ಧರ್ಮವು ನುಡಿಯುತ್ತದೆ ಎಂದು ಜನರು ನಂಬಿದ್ದರು. ಭೀಮವ್ವ ಧರ್ಮದ ಅಣತಿಯನ್ನು ಪಾಲಿಸಿದಳು ಹಾಗೂ ಪಾಲಿಸುವಂತೆ ಇತರರನ್ನು ಪ್ರಭಾವಿಸಿದಳು.

ಧರ್ಮವು ಕೆಲವೇ ಕೆಲವರ ಬಾಯಲ್ಲಿ ನುಡಿಯುವುದು, ದೇವರು ಮೈಮೇಲೆ ಬರುವುದು, ಇತ್ಯಾದಿ ಕ್ರಿಯೆಗಳು ಮೂಢನಂಬಿಕೆಯಲ್ಲವೇ ಎಂದು ಆಧುನಿಕರು ಪ್ರಶ್ನಿಸಿಯಾರು. ಧರ್ಮವನ್ನು ವ್ಯಕ್ತಿರೂಪದಲ್ಲಿ ಸಾಕಾರಗೊಳಿಸುವುದು, ಸಮಾಜಕಾರ್ಯವನ್ನು ಪವಾಡವೆಂದು ಪರಿಗಣಿಸುವುದು, ಸಮಸ್ಯಾತ್ಮಕವಾಗಬಲ್ಲದು ನಿಜ. ಆದರೆ, ಅದಕ್ಕೆ ತದ್ವಿರುದ್ಧವಾಗಿ ನೈತಿಕನೆಲೆಯನ್ನೇ ಅಲ್ಲಗಳೆಯುತ್ತ ಲೌಕಿಕ ಲಾಭವೊಂದನ್ನೇ ಪರಿಗಣಿಸುವ, ಆಧುನಿಕ ಕೊಳ್ಳುಬಾಕತೆಯೂ ಸಮಸ್ಯಾತ್ಮಕವಾದದ್ದೇ ತಾನೆ?

ಅದೇನೇ ಇರಲಿ, ಇಷ್ಟಂತೂ ನಿಜ. ಶ್ರಮದ ಬದುಕನ್ನು ಸಂಕೇತಿಸುವ ದೈವಗಳು ಹಾಗೂ ಅವುಗಳ ಪವಾಡಗಳು ಬದುಕಿಗೆ ಹತ್ತಿರವಾದವು. ಮುಗ್ಧತೆ, ಸರಳತೆ ಹಾಗೂ ಸಜ್ಜನಿಕೆಗಳು ಅಲ್ಲಿ ಮನೆಮಾಡಿರುತ್ತವೆ. ಶ್ರೀಮಂತರ ಹಿಂದೆ ಅಂಡಲೆಯುವ, ಸ್ವಾಮೀಜಿಗಳು, ಬೃಹನ್ಮಠಗಳು, ಅವುಗಳ ಭವ್ಯತೆ, ಅವರ ಆಧ್ಯಾತ್ಮಿಕ ಅತಿಸಂಕೀರ್ಣತೆ, ಇಂದ್ರಸಭೆಯನ್ನು ನಾಚಿಸುವ ಅವರ ಮಂದಿರಗಳು, ಹೆಲಿಕಾಪ್ಟರಿನ ಅವರ ಓಡಾಟ, ಮಂತ್ರಿಮಾನ್ಯರು ಹಾಗೂ ಉದ್ದಿಮೆಪತಿಗಳ ಒಡನಾಟ, ಇವಾವುದೂ ಶ್ರಮದ ದೇವತೆಗಳಿಗಿಲ್ಲ.

ಭೀಮವ್ವ ಪ್ರಚೋದಿಸುತ್ತಿರುವುದು ಕಾಯಕ ಪ್ರಣೀತ ಬದುಕನ್ನು. ಅರ್ಥಾತ್ ಬದುಕುವ ಬದುಕನ್ನು, ಸಾವಿನ ನಂತರ ಸಿಗಬಹುದಾದ ಭ್ರಮಾತ್ಮಕ ಸ್ವರ್ಗವನ್ನಲ್ಲ. ಸ್ವಾತಂತ್ರ್ಯ ಹೋರಾಟಗಾರ ಅಂದಾನಪ್ಪ ದೊಡ್ಡಮೇಟಿಯವರು ಹೇಳುತ್ತಿದ್ದರಂತೆ, ‘‘ಭೀಮವ್ವ ಕೆಳಜಾತಿಯಿಂದ ಬಂದಳು. ಹಾಗಾಗಿ ಹೆಚ್ಚು ಪ್ರಸಿದ್ಧಿ ಪಡೆಯಲಿಲ್ಲ. ಮೇಲ್ಜಾತಿಯಿಂದ ಬಂದಿದ್ದರೆ ಪರಿಸ್ಥಿತಿ ಬೇರೆಯದೇ ಇರುತ್ತಿತ್ತು’’ ಎಂದು.

ಕೆಳಜಾತಿಯೆಂಬುದು ಭೀಮವ್ವನ ಪುಣ್ಯ ಎಂದೇ ನಾನು ತಿಳಿಯುತ್ತೇನೆ. ಚರಕ ಹಿಡಿದು ನೂಲುತ್ತ ಕುಳಿತ ದೈವವು, ಪ್ರಾಯಶಃ ವಿಶ್ವದಲ್ಲಿಯೇ ಮತ್ತೊಂದಿಲ್ಲ. ಅರ್ಧ ಶತಮಾನಗಳ ನಂತರ ಹುಟ್ಟಿ ಚರಕವನ್ನು ವಿಶ್ವಮಾನ್ಯವಾಗಿಸಿದ ಗುಜರಾತಿನ ಗಾಂಧೀಜಿಗೆ, ಕರ್ನಾಟಕದ ಭೀಮವ್ವ ಹಿರಿಯಕ್ಕನಿದ್ದಂತೆ. ಇದು ಹೆಮ್ಮೆಯ ಸಂಗತಿಯಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT