ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೃತ್ಯದಿಂದ ಅರಳಿದ ನಟನಾ ಬದುಕು

Last Updated 27 ಮೇ 2015, 19:30 IST
ಅಕ್ಷರ ಗಾತ್ರ

ನೃತ್ಯವೇ ಬದುಕು ಎನ್ನುತ್ತಿದ್ದ ಈಕೆಗೆ ಅಚಾನಕ್ಕಾಗಿ ದೊರೆತ ಕಿರುತೆರೆ ಅವಕಾಶವೇ ಈಗ ಆಪ್ಯಾಯಮಾನವಾಗಿದೆ. ಒಳ್ಳೆಯ ಕಥೆ, ನಿರ್ದೇಶಕರಿಂದ ಸಿನಿಮಾ ಅವಕಾಶ ದೊರೆತರೆ ಖಂಡಿತ ಹಿರಿತೆರೆಗೆ ಹೆಜ್ಜೆ ಇಡಬೇಕು ಎಂಬ ಗುರಿಯನ್ನೂ ಇರಿಸಿಕೊಂಡಿರುವ ದಿವ್ಯಶ್ರೀ ಸದ್ಯ ತೃಪ್ತಿ ನೀಡುತ್ತಿರುವ ಕಿರುತೆರೆಯಲ್ಲೇ ಬ್ಯುಸಿಯಾಗಿದ್ದಾರೆ.

ಬೆಂಗಳೂರಿನಲ್ಲೇ ಬೆಳೆದ ಈ ಹುಡುಗಿ ಓದಿದ್ದು ಬಿ.ಕಾಂ. ನೃತ್ಯದಲ್ಲಿಯೇ ಏನಾದರೂ ಸಾಧನೆ ಮಾಡಬೇಕೆಂದು ಹಂಬಲಿಸಿದ್ದ ಈಕೆಯನ್ನು ಸೆಳೆದದ್ದು ಕಿರುತೆರೆ ಜಗತ್ತು.

2012ರಲ್ಲಿ ಸುವರ್ಣ ವಾಹಿನಿಯಲ್ಲಿ ಪ್ರಾರಂಭವಾದ ‘ನಾಗಪಂಚಮಿ’ ಎಂಬ ಧಾರಾವಾಹಿಯ ನಟಿ ಪಾತ್ರಕ್ಕಾಗಿ ನೃತ್ಯಗಾರ್ತಿಯೊಬ್ಬರ ಹುಡುಕಾಟ ನಡೆಯುತ್ತಿತ್ತು. ಆಗ ಪರಿಚಿತರಿಂದ ಈ ವಿಷಯ ತಿಳಿದು ಆಡಿಷನ್‌ನಲ್ಲಿ ಭಾಗವಹಿಸಿದ ದಿವ್ಯಶ್ರೀ ತಮ್ಮ ನಟನಾ ಚಾತುರ್ಯದಿಂದ ಆ ಪಾತ್ರಕ್ಕೆ ಆಯ್ಕೆಯಾದರು. ಅಲ್ಲಿಂದ ಪ್ರಾರಂಭವಾದ ಕಿರುತೆರೆ ಬದುಕು ಚೆಲುವಿ, ಕಲ್ಯಾಣ, ಬಲು ಅಪರೂಪ ನಮ್ ಜೋಡಿ ಹೀಗೆ ಅನೇಕ ಧಾರವಾಹಿಗಳಿಗೆ ಆಯ್ಕೆಯಾಗಲು ಅಡಿಪಾಯವಾಯಿತು.

ಸದ್ಯ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ದೇವತೆ’ ಮತ್ತು  ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಮಂದಾರ’ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ.

‘ನಟಿಯಾಗಬೇಕೆಂದು ಚಿಕ್ಕಂದಿನಿಂದ ಕನಸನ್ನೇನೂ ಕಟ್ಟಿರಲಿಲ್ಲ. ಇದ್ದಕ್ಕಿದ್ದ ಹಾಗೆ ಒದಗಿಬಂದ ಅವಕಾಶವನ್ನು ಸದ್ಬಳಕೆ ಮಾಡಿಕೊಂಡೆ ಅಷ್ಟೆ. ಮೊದಲಿನಿಂದಲೂ ನನ್ನ ಆಸಕ್ತಿಯ ಕ್ಷೇತ್ರ ನೃತ್ಯ. ನಟಿಯಾಗದಿದ್ದರೆ ನೃತ್ಯದಲ್ಲೇ ಸಾಧನೆ ಮಾಡುತ್ತಿದ್ದೆ’ ಎಂದು ದೃಢವಾಗಿ ನುಡಿಯುತ್ತಾರೆ.

‘ಮನೆಯವರೆಲ್ಲರೂ ನನ್ನ ನಟನಾ ಬದುಕಿಗೆ ಬೆಂಬಲವಾಗಿದ್ದಾರೆ’ ಎಂದು ಸಂತಸದಿಂದ ಹೇಳುವ ದಿವ್ಯಶ್ರೀ ಅವರ ತಂದೆಗೆ ತಮ್ಮ ಮಗಳು ಎಂಜಿನಿಯರ್‌ ಆಗಬೇಕೆಂಬ ಕನಸಿತ್ತಂತೆ. ‘ಅಕ್ಕ, ತಂಗಿ ಇಬ್ಬರೂ ಎಂಜಿನಿಯರ್‌. ಹಾಗಾಗಿ ನಾನೂ ಎಂಜಿನಿಯರ್‌ ಆಗಬೇಕೆಂದು ಅಪ್ಪ ಬಯಸಿದ್ದರು. ನನಗೆ ನೃತ್ಯದಲ್ಲಿ ಆಸಕ್ತಿ ಇದ್ದರಿಂದ ಬಿ.ಕಾಂ ಪದವಿಗೆ ಸೇರಿದೆ’ ಎಂದು ಪ್ರಾರಂಭದ ದಿನಗಳ ಬಗ್ಗೆ ತಮ್ಮ ನೆನಪುಗಳನ್ನು ಬಿಚ್ಚಿಟ್ಟರು.

‘ನನ್ನ ಎರಡನೇ ಧಾರವಾಹಿ ‘ಚೆಲುವಿ’ ನಡೆಯುತ್ತಿದ್ದಾಗ ನನಗೆ ಮದುವೆಯಾಯಿತು. ನನ್ನ ಪತಿ ಸಾಫ್ಟ್‌ವೇರ್‌ ಉದ್ಯೋಗಿ.  ಆದರೆ ಅವರಿಗೆ ರಂಗಭೂಮಿಯಲ್ಲೂ ಆಸಕ್ತಿ ಇರುವುದರಿಂದ ನನ್ನ ನಟನಾ ಜೀವನನ್ನು ಅರ್ಥ ಮಾಡಿಕೊಳ್ಳಬಲ್ಲರು’ ಎನ್ನುತ್ತಾರೆ ದಿವ್ಯಾಶ್ರೀ.

ಏಕಕಾಲದಲ್ಲಿ ಎರಡೆರಡು ಧಾರವಾಹಿಗಳಲ್ಲಿ ಒಟ್ಟಿಗೆ ಅಭಿನಯಿಸುತ್ತಿರುವ ದಿವ್ಯಾಗೆ ಚಿತ್ರೀಕರಣದ ದಿನಗಳು ಏಕಕಾಲದಲ್ಲಿ ಬಂದು, ತೊಂದರೆ ಆದದ್ದೇ ಇಲ್ಲವಂತೆ.
‘ಆ ಧಾರವಾಹಿಗಳ ನಿರ್ದೇಶಕರಿಗೆ ಚಿತ್ರೀಕರಣದ ದಿನಗಳ ಬಗ್ಗೆ ಮಾತನಾಡಿಕೊಳ್ಳಲು ಬಿಟ್ಟಿದ್ದೇನೆ. ಹಾಗಾಗಿ ಅವರೇ ಮಾತನಾಡಿಕೊಂಡು ದಿನವನ್ನು ನಿಗದಿ ಮಾಡುತ್ತಾರೆ. ಒಟ್ಟಿನಲ್ಲಿ ಆ ಗೊಡವೆಯಿಂದ ಸದ್ಯ ದೂರವಿದ್ದೇನೆ. ಇಲ್ಲಿಯವರೆಗೂ ಯಾವುದೇ ತೊಂದರೆಯಾಗಿಲ್ಲ’ ಎಂದು ದಿವ್ಯಾ ವಿವರಿಸುತ್ತಾರೆ.

ನೃತ್ಯ ಹೊರತುಪಡಿಸಿ ರಂಗಭೂಮಿಯಲ್ಲಿ ಆಗಾಗ ತೊಡಗಿಕೊಳ್ಳುವ ಇವರು ಇತ್ತೀಚೆಗೆ ಅಭಿಷೇಕ್‌ ಮಜುಂದಾರ್‌ ಅವರ ಇಂಡಿಯನ್‌ ಎನ್ಸಂಬಲ್‌ ರಂಗ ತಂಡ ಆಯೋಜಿಸಿದ್ದ ‘ಸಕರಾಂ ಬೈಂದ್ರ್’ ನಾಟಕದಲ್ಲಿ ನಟಿಸಿದ್ದಾರೆ.

‘ನಟನೆ ಎಂದ ಮೇಲೆ ಕಿರುತೆರೆ, ಹಿರಿತೆರೆ ಎಂಬ ಭೇದವಿಲ್ಲ. ಸಿನಿಮಾ ಮಾಡಬೇಕೆಂದರೆ ಅಂತಹ ಉತ್ತಮ ಪಾತ್ರ, ಕಥೆ, ನಿರ್ದೇಶಕರು ಅವಶ್ಯಕ. ಆದರೆ ಇಲ್ಲಿಯವರೆಗೂ ಅಂತಹ ಅವಕಾಶಗಳು ಬಂದಿಲ್ಲ. ಅಲ್ಲದೇ ಧಾರವಾಹಿಯಲ್ಲೇ ತಿಂಗಳಿಡೀ ಬಿಡುವಿಲ್ಲದ ಕೆಲಸ ಇರುತ್ತದೆ. ಹಿರಿತೆರೆಗೆ ಪದಾರ್ಪಣೆ ಮಾಡುವ ಬಗ್ಗೆ ಹೆಚ್ಚು ತೆಲೆಕೆಡಿಸಿಕೊಂಡಿಲ್ಲ’ ಎಂದು ನುಡಿದರು.

‘ದೇವತೆ’ಯ ಕಿವುಡಿ ಪಾತ್ರವೂ ಸೇರಿದಂತೆ ಈವರೆಗೂ  ಸಿಕ್ಕಿರುವ ಪಾತ್ರಗಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಸವಾಲೆನಿಸಿವೆ ಎನ್ನುವ ದಿವ್ಯಾ ಅವರಿಗೆ ನೃತ್ಯಕ್ಕೆ ಆದ್ಯತೆ ಇರುವಂತಹ ವಿಭಿನ್ನವಾದ ಪಾತ್ರದಲ್ಲಿ ಅಭಿನಯಿಸಬೇಕೆಂಬ ಆಸೆ ಇದೆ.

ಹಿತಮಿತ ಊಟ
‘ತಿನ್ನುವುದಕ್ಕೆ ಯಾವುದೇ ಕಡಿವಾಣ ಹಾಕುವುದಿಲ್ಲ’ ಎನ್ನುವ ಇವರ ಆಹಾರ ಕ್ರಮ ಹೀಗಿದೆ: ‘ಶೂಟಿಂಗ್‌ ಇದ್ದಾಗ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಹೀಗೆ ಸರಿಯಾದ ಸಮಯಕ್ಕೆ ಹೊಟ್ಟೆ ಚುರುಗುಡಲು ಪ್ರಾರಂಭವಾಗುತ್ತದೆ. ಹಾಗಾಗಿ ಊಟ ನನಗೆ ನಿಲ್ಲದ ನಿರಂತರ ಪ್ರಕ್ರಿಯೆ. ಅದಕ್ಕೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುತ್ತೇನೆ. ಯಾವುದನ್ನೇ ಆದರೂ ಹಿತಮಿತವಾಗಿ ಸೇವಿಸುವುದರಿಂದ ದೇಹ ಆರೋಗ್ಯಕರವಾಗಿರುತ್ತದೆ.

‘ನಟಿಯಾಗಿ ಫಿಟ್‌ನೆಸ್‌ ಕಾಯ್ದುಕೊಳ್ಳುವುದು ಈಗಿನ ಟ್ರೆಂಡ್‌. ಆದರೆ ನಾನು ತಲೆಕೆಡಿಸಿಕೊಂಡು ಫಿಟ್‌ನೆಸ್‌ಗಾಗಿ ಶ್ರಮಿಸುವುದಿಲ್ಲ’ ಎನ್ನುವ ದಿವ್ಯಾ  ‘ಮನೆಯಲ್ಲಿಯೇ 15 ನಿಮಿಷ ಯೋಗಾಸನ, ಧ್ಯಾನ ಮಾಡುತ್ತೇನೆ. ಇನ್ನು ಚಿತ್ರೀಕರಣದ ಸ್ಥಳದಲ್ಲಿ ನಡೆದಾಡುವುದೇ ನನ್ನ ಫಿಟ್‌ನೆಸ್‌ ಮಂತ್ರ’ ಎನ್ನುತ್ತಾರೆ.

‘ನನ್ನದು ಆರೋಗ್ಯಯುತ ತ್ವಚೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಅವರು ಅವಶ್ಯಕತೆ ಇದ್ದಾಗ ಮಾತ್ರ ಬ್ಯೂಟಿ ಪಾರ್ಲರ್‌ ಮೊರೆ ಹೋಗುತ್ತಾರೆ. ಸದಾ ಬ್ಯೂಟಿ ‍ಪಾರ್ಲರ್‌ಗೆ ಹೋಗುವುದು ತ್ವಚೆಗೆ ಒಳ್ಳೆಯದಲ್ಲ ಎನ್ನುವ ಕಾರಣಕ್ಕೆ ಮನೆಯಲ್ಲೇ ಹಣ್ಣಿನ ಫೇಸ್‌ಪ್ಯಾಕ್‌ ಮಾಡಿಕೊಳ್ಳುತ್ತಾರೆ. ಹೆಚ್ಚು ನೀರು ಹಾಗೂ ತರಕಾರಿ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ದಿವ್ಯಾ ಅವರ ನಂಬಿಕೆ.

ಶಾಪಿಂಗ್‌ ಮಾಡುವುದು ಅತ್ಯಂತ ಇಷ್ಟದ ಸಂಗತಿ ಎನ್ನುವ ದಿವ್ಯಾ, ಬಿಡುವು ಸಿಕ್ಕಾಗೆಲ್ಲ ಗಾಂಧಿಬಜಾರ್‌ನಲ್ಲಿ ಹಾಜರ್‌. ಸಿಕ್ಕಾಪಟ್ಟೆ ಶಾಪಿಂಗ್‌ ಮಾಡುವ ಇವರಿಗೆ ‘ಮುಕ್ಕಾಲು ತೋಳಿನ ಚೂಡಿದಾರ’ ನೆಚ್ಚಿನ ಉಡುಗೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT