ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೃತ್ಯ ಕಲೆಗೆ ವರ್ಚಸ್ಸು ತುಂಬಿದ ಮಾಯಾ

Last Updated 1 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಡಾ. ಮಾಯಾ ರಾವ್ ಅವರು ನೃತ್ಯ ಕ್ಷೇತ್ರದ ಧ್ರುವತಾರೆಯಂತೆ ಇದ್ದವರು. ದೇಶದ ಅದರಲ್ಲೂ ವಿಶೇಷವಾಗಿ ಕರ್ನಾಟಕದ ನೃತ್ಯರಂಗವನ್ನು ಶ್ರೀಮಂತ­ಗೊಳಿಸಿದವರು, ವೈವಿಧ್ಯಗೊಳಿಸಿದವರು. ಹಾಗೆ ನೋಡಿದರೆ ಮಾಯಾರಾವ್ ಚಿಕ್ಕ ವಯಸ್ಸಿನಿಂದಲೇ ನೃತ್ಯದ ಗೀಳನ್ನು ಹಚ್ಚಿಕೊಂಡವರು. ಬೆಂಗಳೂರಿನಲ್ಲಿ ಸೋಹನ್‌ಲಾಲ್‌ ಅವರಿಂದ ಕಥಕ್ ಹಾಗೂ ಮಣಿಪುರಿ ಕಲಿಯಲು ಪ್ರಾರಂಭಿ­ಸಿದರು. ಜೊತೆಗೆ ಇಂಗ್ಲಿಷ್ ಸಾಹಿತ್ಯದಲ್ಲಿ ಬಿ.ಎ. ಆನರ್ಸ್‌ನ ಓದು.

ಸಹಪಾಠಿಗಳನ್ನು ಜೊತೆಗೂಡಿಸಿಕೊಂಡು ನೃತ್ಯ ಕಲಿಸುವುದು ಹಾಗೂ ಪ್ರದರ್ಶನ ನೀಡುವುದು  ಆಗಲೇ ಪ್ರಾರಂಭ (ಅವರಿಗೆ ಆ ಸಮಯದಲ್ಲಿಯೇ ಎಂ.ಎಸ್. ನಟರಾಜನ್ ಅವರ ಪರಿಚಯ­ವಾದುದು. ಗೆಳೆತನ ಗಾಢವಾಗಿ ಮುಂದೆ ನಟರಾಜನ್ ಜೀವನ ಸಂಗಾತಿಯೂ ಆದುದು  ಇನ್ನೊಂದು ವಿಷಯ). ಕೇಂದ್ರ ಸರ್ಕಾರದ ವಿದ್ಯಾರ್ಥಿ ವೇತನ ಪಡೆದು ಮಹಾನ್ ಗುರು ಶಂಭು ಮಹಾರಾಜ್ ಮತ್ತು ಸುಂದರ ಪ್ರಸಾದ್ ಅವರಲ್ಲಿ ಕಥಕ್ ಕಲಿಯುವ ಭಾಗ್ಯವೂ ಅವರಿಗೆ ದೊರೆಯಿತು.

ದೀರ್ಘ, ದಕ್ಷ ಶಿಕ್ಷಣ-ದಿಂದ ಲಖನೌ ಮತ್ತು ಜೈಪುರ್ ಘರಾಣಗಳ ಅತ್ಯುತ್ತಮ ಅಂಶಗಳ ಆಗರವಾದರು. ರಷ್ಯಾದಲ್ಲಿ ೧೯೫೮ರಲ್ಲಿ ಬ್ಯಾಲೆ ಅಧ್ಯಯನ ಮಾಡಲು ಇಬ್ಬರು ಆಯ್ಕೆ­ಯಾಗಬೇಕಿತ್ತು. ಈ ಆಯ್ಕೆ ಅಪೇಕ್ಷಿಸಿದ್ದ ೧,೮೦೦ ಜನರಲ್ಲಿ ಪ್ರಥಮ ಸ್ಥಾನ ಗಳಿಸಿ ಆಯ್ಕೆ-ಯಾದ ಮಾಯಾರಾವ್, ಮಾಸ್ಕೊದ ಇನ್‌ಸ್ಟಿ-ಟ್ಯೂಟ್ ಆಫ್ ಥಿಯೇಟರ್ ಆರ್ಟ್ಸ್‌ನಲ್ಲಿ ಬ್ಯಾಲೆ ಸಂಯೋಜನೆಯಲ್ಲಿ ವಿಶೇಷ ಶಿಕ್ಷಣ ಪಡೆದರು. ಈ ತರಬೇತಿಯು ಮಾಯಾ­ರಾವ್ ಅವರಿಗೆ ಒಂದು ಹೊಸ ಲೋಕವನ್ನೇ ತೆರೆದಂತಾಯಿತು. ರಷ್ಯಾದವರು ತಮ್ಮ ದೇಶಕ್ಕೆ ಅನೇಕ ಸಲ ಬರಮಾಡಿಕೊಂಡರು. ಶಾಕುಂತಲ, ರಾಮಾಯಣ ನೃತ್ಯ ನಾಟಕಗಳನ್ನು ಮಾಯಾರಾವ್ ರಷ್ಯನ್ನರಿಗಾಗಿ ನಿರ್ದೇಶಿಸಿ, ಖ್ಯಾತಿ ಗಳಿಸಿದರು.

ನೃತ್ಯ ದೇಗುಲ: ಮಾಯಾರಾವ್ ೧೯೬೪ರಲ್ಲಿ ದೆಹಲಿಯಲ್ಲಿ ನಾಟ್ಯ ಇನ್‌ಸ್ಟಿಟ್ಯೂಟ್ ಆಫ್ ಕಥಕ್ ಅಂಡ್ ಕೊರಿಯೊಗ್ರಫಿ ಸ್ಥಾಪಿಸಿ ೨೩ ವರ್ಷ ನಡೆಸಿದರೂ, ಸಾಂಸ್ಕೃತಿಕ - ಕ್ಷೇತ್ರದ ರಾಜಕೀಯ­ಗಳಿಂದ ನೊಂದು, ಕರ್ನಾಟಕಕ್ಕೆ ಹಿಂತಿರುಗಿದರು. ಅದೇ ಸಂಸ್ಥೆಯನ್ನು ಬೆಂಗಳೂರಿನಲ್ಲಿ ೧೯೮೭ರಲ್ಲಿ ಸ್ಥಾಪಿಸಿ, ಈವರೆಗೆ ೩,೦೦೦ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ-ದ್ದಾರೆ! ಇದು ಕೊರಿಯಗ್ರಫಿಯಲ್ಲಿ ರಾಷ್ಟ್ರದ ಏಕ-ಮೇವ ಸಂಸ್ಥೆ ಎಂಬ ಹೆಗ್ಗಳಿಕೆಗೆ ಗುರಿಯಾಗಿ-ರುವುದು, ರಾಜ್ಯದ ಹೆಮ್ಮೆ!

ದೇಶದ ಭಿನ್ನ ರಾಜ್ಯಗಳಿಂದಲ್ಲದೆ ಆಸಕ್ತರು ವಿಶ್ವದ ಅನೇಕ ಭಾಗಗ­ಳಿಂದಲೂ ಇಲ್ಲಿ ಕಲಿಯಲು ಬರು-ತ್ತಾರೆ. ಮಾಯಾ ಅವರಿಗೆ ಅಪಾರ ಶಿಷ್ಯ ವಾತ್ಸಲ್ಯ. ಶಿಷ್ಯರಿಗೆ ದೀದಿ ಅವರಲ್ಲಿ ನೈಜ ನಿಷ್ಠೆ. ಇಂದು ಅವರ ಶಿಷ್ಯರು ರಾಷ್ಟ್ರದ ಎಲ್ಲ ಕಡೆಯಲ್ಲದೆ ಪ್ರಪಂಚದ ಅನೇಕ ದೇಶಗಳಲ್ಲಿ ಗೆಜ್ಜೆ ನಿರಂತರವಾಗಿ ನಿನದಿಸುವಂತೆ ಮಾಡಿದ್ದಾರೆ.

ವರ್ಣರಂಜಿತ ನೃತ್ಯ ಸಂಯೋಜನೆ: ಮಾಯಾರಾವ್ ಅವರ ನೃತ್ಯ ಸಂಯೋಜನೆ ನೃತ್ಯ ಲೋಕದಲ್ಲಿ ಒಂದು ಹೊಸ ಅಲೆಯನ್ನೇ ಸೃಷ್ಟಿಸಿತು. ಐತಿಹಾಸಿಕ, ಸಾಮಾ-ಜಿಕ ವಿಷಯಗಳೂ ರಂಗವನ್ನೇರಿದವು. ಅವುಗಳಲ್ಲಿ ಅಮೀರ್ ಖುಸ್ರು ಒಂದು ಅದ್ಭುತ ಪ್ರಯೋಗ. ಕಥಕ್‌ನ ಹೆಜ್ಜೆ, ಮಧುರ ಸಂಗೀತ ಅರ್ಥಪೂರ್ಣ ಬೆಳಕು ಸಂಯೋಜನೆ­ಗಳಿಂದ ಅಮೀರ್ ಖುಸ್ರು ಒಂದು ಗಾಢ ಅನುಭವ ನೀಡುತ್ತದೆ.

ಕುವೆಂಪು ಅವರ ರಾಮಾಯಣ ದರ್ಶನಂ, ಹೊಯ್ಸಳ ವೈಭವ, ಭಾಸನ ಊರುಭಂಗ, ವಿಜಯನಗರ ವೈಭವ, ಸೂರದಾಸ್  ಎಲ್ಲವೂ ಭಿನ್ನ ಕಾರಣಗಳಿಂದ ವಿಶಿಷ್ಟವಾದವು. ಕಳೆದ ತಿಂಗಳು ಅವರು ನಿರ್ದೇಶಿಸಿದ ‘ಕಥಕ್ ಥ್ರೂ ದಿ ಏಜಸ್’ - ನೃತ್ಯ ಸಂಯೋಜನೆಯಲ್ಲೇ ಒಂದು ಮೈಲಿಗಲ್ಲು! ಆಳವಾದ ಅಧ್ಯಯನ, ವರ್ಣರಂಜಿತ ವೇಷಭೂಷಣ, ಹೊಮ್ಮುವ ಬೆಳಕು, ಮಧುರ ಸಂಗೀತ­ಗಳಿಂದ ಅವರ ನೃತ್ಯ ಸಂಯೋಜನೆ ಕಿರಿಯರಿಗೆ ಕೈ ದೀವಿಗೆ.

ಡಾ. ಮಾಯಾರಾವ್ ಅವರು ದೇಶ ವಿದೇಶ-ಗಳಲ್ಲಿ ನರ್ತಿಸಿ, ಗಣ್ಯ ನರ್ತಕಿ­ಯಾಗಿ ಗೌರವಾನ್ವಿತ-ರಾಗಿದ್ದಾರೆ. ಲಯಕಾರಿಯಾದ ಕಥಕ್‌ನಲ್ಲಿ ಸುಂದರ ಅಭಿನಯವನ್ನೂ ಬೆರೆಸಿ ಮೆರುಗು ನೀಡುತ್ತಿದ್ದರು. ಅವರು ನಿರ್ದೇಶಿಸಿದ ನೃತ್ಯ ರೂಪಕಗಳು ಪ್ರಪಂಚದ ೩೩ ದೇಶಗಳಲ್ಲಿ ಪ್ರದರ್ಶನಗೊಂಡು ಭಾರತಕ್ಕೆ ಕೀರ್ತಿ ತಂದಿವೆ!

ಕರ್ನಾಟಕ ಸಂಗೀತ ನೃತ್ಯ ಅಕಾ-­ಡೆಮಿಯ ಅಧ್ಯಕ್ಷ-ರೂ ಆಗಿದ್ದ ಮಾಯಾ­ರಾವ್ ಅವರಿಗೆ ರಾಜ್ಯದ ಉನ್ನತ ಪ್ರಶಸ್ತಿ ಶಾಂತಲಾ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳೂ ಸಂದಿರುವುದು ಸಹಜವೇ. ಇವುಗಳಿಗೆ ಕಳಶಪ್ರಾಯವಾಗಿ ಕೇಂದ್ರ ಸಂಗೀತ ನಾಟಕ ಅಕಾ-ಡೆಮಿ ಪ್ರಶಸ್ತಿಯನ್ನು ರಾಷ್ಟ್ರಪತಿ-ಗಳಿಂದ ಸ್ವೀಕರಿಸಿ-ದ್ದಾರೆ (ಪದ್ಮಶ್ರೀ ಪ್ರಶಸ್ತಿಯನ್ನು ತಿರಸ್ಕರಿಸಿದ್ದು ಅವರ ಸ್ವಾಭಿಮಾನಕ್ಕೆ ಸಾಕ್ಷಿಯೇ?!) ಬೆಂಗಳೂರು ವಿಶ್ವವಿದ್ಯಾ-ನಿ­ಲಯದಿಂದ ಡಾಕ್ಟರೇಟ್ ಹಾಗೂ ಗಾಯನ ಸಮಾಜದಿಂದ ನೃತ್ಯ ಕಲಾರತ್ನ ಬಿರುದುಗಳೂ ಅವರನ್ನು ಅಲಂಕರಿಸಿವೆ. ಒಟ್ಟಿನಲ್ಲಿ ನೃತ್ಯ ಕಲೆಗೆ ವರ್ಚಸ್ಸು ನೀಡಿ, ಚೈತನ್ಯ ನೀಡಿದ ಡಾ. ಮಾಯಾರಾವ್ ಸಾಧಕರಿಗೆ ಎಂದೂ ದಾರಿದೀಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT