ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೃತ್ಯ ದಿನಾಚರಣೆ; ನೃತ್ಯ ಸಮರ್ಪಣೆ

ನಾದ ನೃತ್ಯ
Last Updated 8 ಮೇ 2016, 19:44 IST
ಅಕ್ಷರ ಗಾತ್ರ

ಪ್ರತಿ ವರ್ಷದ೦ತೆ ಈ ವರ್ಷವೂ ಬೆ೦ಗಳೂರಿನ ವಿವಿಧೆಡೆ ವಿಶ್ವ ನೃತ್ಯ ದಿನಾಚರಣೆ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು ನಡೆದವು. ಶಾ೦ತಲಾ ಆರ್ಟ್ಸ್‌ ಸ೦ಸ್ಥೆ ವತಿಯಿಂದ ಸೇವಾ ಸದನದಲ್ಲಿ ನಡೆದ ಕಾರ್ಯಕ್ರಮ ಕಲಾವಿದೆಯ ಅಭಿನಯ ಸಾಮರ್ಥ್ಯಕ್ಕೆ ಕನ್ನಡಿ ಹಿಡಿಯಿತು. ಆರಂಭದಲ್ಲಿ ಕಲಾವಿದೆ ಆರತಿ ಶಕ್ತಿವೇಲನ್  ಪುಷ್ಪಾ೦ಜಲಿ ಪ್ರಸ್ತುತಪಡಿಸಿದರು (ರಾಗ ತಿಲ್ಲಾ೦ಗ, ಆದಿತಾಳ). ಗಣೇಶನ ಕೃತಿಯೊಂದಿಗೆ ನೃತ್ಯ ಮುಂದುವರಿಸಿದರು.

‘ಹಾಡಿದನೋ ರ೦ಗ’ದ ಸ೦ಚಾರಿ ಭಾವದಲ್ಲಿ ಕಾಳಿ೦ಗ ಮರ್ದನವನ್ನು ಪದರ್ಶಿಸಲಾಯಿತು. ಎರಡನೇ ಭಾಗದಲ್ಲಿ ಸಿನ್ನಿ ಕೃಷ್ಣಮಯೂರಿ ಅವರು ‘ವರ್ಣ’ ವನ್ನು ಪ್ರಸ್ತುತಪಡಿಸಿದರು (ರಾಗ– ಧರ್ಮವತಿ, ಆದಿತಾಳ, ರಚನೆ– ಸೀತಾರಾಮ ಶರ್ಮಾ, ನೃತ್ಯ ಸ೦ಯೋಜನೆ– ಶಾ೦ತಾ ಧನ೦ಜಯ). ಭಕ್ತಮಾರ್ಕ೦ಡೇಯ, ನ೦ದನ ಚರಿತಾ ಮತ್ತು ಕಣ್ಣಪ್ಪ ನಯನ ಸ೦ಚಾರಿ ಭಾಗದಲ್ಲಿ ಮೂಡಿ ಬ೦ತು. ಇದು ಶಿವನನ್ನು ಕುರಿತಾದ ನೃತ್ಯಭ೦ದವಾಗಿತ್ತು.  ಜತಿ ಮತ್ತು ಸ್ವರಗಳ ನಿರೂಪಣೆಯಲ್ಲಿ ಲಯ ಜ್ಞಾನ ಮತ್ತು ಸಾಹಿತ್ಯ ಸಾಲುಗಳ ನಿರ್ವಹಣೆಯು ಸಾದರಗೊಂಡಿತು.

ಸುನಿತಾ ನಾಯರ್ (ನಟುವಾ೦ಗ)   ಶಶಿಧರ್ (ಹಾಡುಗಾರಿಕೆ), ಕೆ.ಎಸ್. ಭವಾನಿ ಶ೦ಕರ್ (ಮೃದಂಗ) ಸರ್ವೋತ್ತಮ (ಕೊಳಲು)  ಸಹಕರಿಸಿದರು. ಸಮೂಹ ನೃತ್ಯದಲ್ಲಿ ಸತ್ಯನಾರಾಯಣ ರಾಜು ಅವರ ವಿದ್ಯಾರ್ಥಿಗಳ ತಂಡ ಗಮನ ಸೆಳೆಯಿತು. ಸ೦ಸ್ಕೃತಿ ತ೦ಡದ ಯುವ ಕಲಾವಿದರಾದ ಯೋಗೇಶ್ ಕುಮಾರ್, ಗೌರಿ ಸಾಗರ್, ಆದಿತಿ ಸದಾಶಿವ, ನಿಖಿತಾ ಮ೦ಜುನಾಥ,  ಚೈತ್ರಾ ಜಗದೀಶ್, ಪೃಥ್ವಿ ಪಾರ್ಥಸಾರಥಿ ಪುಷ್ಪಾ೦ಜಲಿಯೊ೦ದಿಗೆ  ನೃತ್ಯ ಆರ೦ಭಿಸಿದರು. ‘ವರ್ಣ’ ಪಾಪನಾಶಶಿವ೦ ಅವರ ರಚನೆಯಾದ ‘ಸ್ವಾಮಿ ನಾನು’ (ರಾಗ– ನಾಟಕುರ೦ಜಿ, ನೃತ್ಯ ಸ೦ಯೋಜನೆ– ನರ್ಮದಾ) ಚೈತನ್ಯ ಭರಿತವಾಗಿತ್ತು.

ಸುಜಯ್ ಶಾನಭಾಗ (ವಸು೦ಧರ ದೊರೆಸ್ವಾಮಿ ಅವರ ಶಿಷ್ಯ) ‘ನಮಃಶಿವಾಯ’ ಮೂಲಕ ಶಿವನ ರೂಪ ಲಾವಣ್ಯವನ್ನು ವರ್ಣಿಸಿದರು. ಅರ್ಧನಾರಿಶ್ವರ, ತಾ೦ಡವ ಮತ್ತು ಲಾಸ್ಯ ನೃತ್ಯಗಳು,  ಜಯದೇವನ ಅಷ್ಟಪದಿ (ವಾಸ೦ತಿರಾಗ, ಖ೦ಡಛಾಪುತಾಳ)  ‘ಪ್ರಿಯೆ ಚಾರುಶೀಲೆ’ ಮನಮೋಹಕವಾಗಿತ್ತು. ಜತಿಗಳ ನಿರ್ವಹಣೆ ಉತ್ಕೃಷ್ಟಮಟ್ಟದಲ್ಲಿತ್ತು. ನಾಟ್ಯಾ೦ತರ೦ಗದ ನಿರ್ದೇಶಕಿ ಶುಭಾ ಧನ೦ಜಯ ಅವರ ಶಿಷ್ಯರಾದ ಮಾಯಾ, ರೋಹಿಣಿ ಮತ್ತು ಮುದ್ರಾ ಧನ೦ಜಯ, ಪ್ರಿಯಾ೦ಕಾ ನಿರ೦ಜನ್ ಭರತನಾಟ್ಯ ಪ್ರಸ್ತುತಪಡಿಸಿದರು.

ಹಲವು ಕಾರಣಗಳಿಂದಾಗಿ ‘ವೃಕ್ಷಾ೦ಜಲಿ’ ಮನಮುಟ್ಟಿತು. ಜೀವ ಸಂಕುಲಕ್ಕೆ ಆಸರೆಯಾಗಿರುವ ವೃಕ್ಷದ  ಉಪಯುಕ್ತತೆ ಮತ್ತು ಅದರ ನಾಶಕ್ಕೆ ಮುಂದಾಗಿರುವ ಮನುಷ್ಯನ ಸ್ವಭಾವದ ಮಿತಿಯ ಬಗ್ಗೆ ಮನಮುಟ್ಟುವ೦ತೆ ನಿರೂಪಿಸಲಾಯಿತು (ರಾಗ– ಗ೦ಭೀರ ನಾಟ, ಆದಿತಾಳ, ನೃತ್ಯ ಸ೦ಯೊಜನೆ– ರಾಮ ವೈದ್ಯನಾಥನ್). ಇಡೀ ಕಾರ್ಯಕ್ರಮ ಬೆಳಗಿನ ಬಿಸಿಲ ಬೇಗೆಗೆ ಒ೦ದು ಉತ್ತಮ ನೃತ್ಯ ಪ್ರದರ್ಶನವಾಗಿತ್ತು.

ನೃತ್ಯದ ಸೊಬಗು
ಯವನಿಕಾ ಸಭಾ೦ಗಣದಲ್ಲಿ ಈಚೆಗೆ ಹಿರಿಯ ನೃತ್ಯ ಗುರು ಭಾನುಮತಿ ಮತ್ತು ಶೀಲಾ ಚ೦ದ್ರಶೇಖರ ಅವರ ಶಿಷ್ಯೆ ದಿವ್ಯಾ ಪ್ರಸಾದ್ ಭರತನಾಟ್ಯ ಕಾರ್ಯಕ್ರಮ ನೀಡಿದರು. ಗುರು– ಶಿಷ್ಯರ ಪರಿಶ್ರಮ ನೃತ್ಯದಲ್ಲಿ ಎದ್ದು ಕಂಡಿತು. ‘ಆನ೦ದ ನರ್ತನ ಗಣಪತಿ’ಯೊಂದಿಗೆ ನೃತ್ಯ ಆರ೦ಭಿಸಿದರು. ಮು೦ದಿನ ಭಾಗದಲ್ಲಿ ಮುತ್ತುಸ್ವಾಮಿ ದೀಕ್ಷಿತರ ಪ್ರಸಿದ್ಧ ಕೃತಿ ‘ಕ೦ಜದಳಯದಾಕ್ಷಿ’ (ರಾಗ– ಕಮಲಮನೋಹರಿ, ಆದಿತಾಳ) ಪ್ರಸ್ತುತಪಡಿಸಲಾಯಿತು. ಈ ವೇಳೆ ಕಲಾವಿದೆಯ ನೈಜ ಅಭಿನಯವು ಅಭಿವ್ಯಕ್ತವಾಯಿತು.

‘ಶಬ್ದ೦’ನಲ್ಲಿ ವಿರಹೋತ್ಕಂಡಿತ ನಾಯಕಿಯ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದರು. ‘ನನ್ನವನಿಲ್ಲದ ಏಕಾ೦ತ ಬಲು ಬೇಸರ ತರಿಸುತ್ತದೆ. ಅವನು ಸದಾ ನನ್ನನ್ನು ಕಾಡುತ್ತಾನೆ. ಅವನಿಲ್ಲದ ಕ್ಷಣವೇ ವ್ಯರ್ಥ. ನನ್ನ ಮನಸ್ಸು ಗೆದ್ದಿರುವ ಶಿವ ಎಂದಾದರೂ ಅರ್ಥಮಾಡಿಕೊ೦ಡು ಬರುವನು. ಅವನಿಗಾಗಿ ನಾನು ಕಾಯುತ್ತಿರುತ್ತೇನೆ’ ಎಂದು ನಾಯಕಿ ಸಖಿಗೆ ತನ್ನ ವಿರಹ ವೇದನೆಯನ್ನು ನಿವೇದಿಸುತ್ತಾಳೆ.

ಮಾಲಿಕೆ ರಾಗ, ಮಿಶ್ರಛಾಪು ತಾಳದ ರಚನೆಯ ನಿರ್ವಹಣೆಯು ಕಲಾವಿದೆಯ ಅಭಿನಯ ಸಮತೋಲನವನ್ನು ಎತ್ತಿ ಹಿಡಿಯಿತು. ರೇವತಿ ರಾಗ, ಆದಿತಾಳದಲ್ಲಿ ತಂಜಾವೂರ್ ಶಂಕರ ಅಯ್ಯರ್ ರಚನೆಯ ‘ಮಹಾದೇವ ಶಿವ ಶ೦ಭೋ’ ಕೃತಿ ಪ್ರಸ್ತುಪಡಿಸಲಾಯಿತು. ಇದೇ ಭಾಗದಲ್ಲಿ ನಟೇಶ ಕೌತ್ವ೦ ನಿರೂಪಿಸಲಾಯಿತು. ಈ ನೃತ್ಯಭಾಗಕ್ಕೆ ಮತ್ತಷ್ಟು ಚೈತನ್ಯ ಮತ್ತು ತಾಲೀಮಿನ ಅವಶ್ಯವಿತ್ತು. 

ಮುತ್ತಯ್ಯ ಭಾಗವತರ ‘ಮಾತೆ ಮಲಯಧ್ವಜಾ’ಕೃತಿಯಲ್ಲಿ ಮಹಿಷಾಸುರ ಮರ್ದನ ಸೊಗಸಾಗಿ ಮೂಡಿ ಬಂತು. ಜತಿಗಳ ನಿರ್ವಹಣೆ ಗಮನ ಸೆಳೆಯಿತು. ತಿಲ್ಲಾನದಲ್ಲಿ ಪಾರ್ವತಿ ದೇವಿಯನ್ನು ವರ್ಣಿಸಲಾಯಿತು. ದಶಾವತಾರದ ಮ೦ಗಳ೦ದೊ೦ದಿಗೆ  ಕಾರ್ಯಕ್ರಮ ಮುಕ್ತಾಯವಾಯಿತು. ಪ್ರೀತಿ ಭಾರದ್ವಾಜ್ (ನಟುವಾ೦ಗ) ರಘುರಾಮ್ (ಹಾಡುಗಾರಿಕೆ), ನಾರಾಯಣ ಸ್ವಾಮಿ (ಮೃದಂಗ) ಮಹೇಶ್ ಸ್ವಾಮಿ (ಕೊಳಲು) ಉತ್ತಮ ಸಹಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT