ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪಾಗುವ ಅಪ್ಪನ ಸುಳ್ಳು

Last Updated 3 ಜುಲೈ 2015, 19:30 IST
ಅಕ್ಷರ ಗಾತ್ರ

ನಾವು ಬಡತನ ಬೇಗೆಯಲ್ಲಿ ಬೆಳೆದವರು. ಹೀಗಿದ್ದರು ನಮ್ಮ ಅಪ್ಪ-–-ಅಮ್ಮ ಇಂಗ್ಲಿಷ್ ಮಾಧ್ಯಮದ ಮೂಲಕ ನಮಗೆ ಶಿಕ್ಷಣ ಕೊಡಿಸಿದ್ದರು. ಶಾಲೆಗೆ ಶುಲ್ಕ ಪಾವತಿಸುವಾಗ ತುಂಬಾನೆ ಹೆಣಗಾಡು ತಿದ್ದರು. ಒಂದೆರೆಡು ತಿಂಗಳು ಶುಲ್ಕ ಪಾವಾತಿಸಿಲ್ಲ ಎಂದರೆ ಶಾಲೆಯಿಂದ ಹೊರಗಡೆ ನಿಲ್ಲಿಸುತ್ತಿದ್ದರು. ನನ್ನ ಮತ್ತು ನನ್ನ ತಂಗಿಗೂ ಇದೆ ಪಡಿಪಾಟಲಾಗಿತ್ತು.

ಮನೆಗೆ ಹೋದ ತಕ್ಷಣ ಅಪ್ಪನಿಗೆ ಶಾಲಾ ಶುಲ್ಕ ಕಟ್ಟುವಂತೆ ಹೇಳುತಿದ್ದೆವು. ‘ನಿಮ್ಮಮ್ಮನ ಕೈಗೆ ಹಣ ಕೊಟ್ಟಿರುತ್ತೇನೆ, ನಾಳೆ ನೀವೆ ಪಾವತಿಸಿ’ ಎಂದು ಅಪ್ಪ ನಮ್ಮನ್ನು ಸಮಾಧಾನಗೊಳಿಸಿ ಮರು ದಿನ ಅಮ್ಮನನ್ನು ಹಣ ಕೇಳಿದರೆ ‘ಇಲ್ಲ’ ಎನ್ನುತ್ತಿದ್ದಳು, ಅಷ್ಟರಲ್ಲಾಗಲೇ ಅಪ್ಪ ಮನೆಯಲ್ಲಿರುತಿರಲಿಲ್ಲ.

ಶಾಲೆಯಲ್ಲಿ ಮತ್ತೆ ಹೆಡ್ ಮೇಡಂನಿಂದ ಬೈಸಿಕೊಂಡು ಮನೆಗೆ ಬಂದು ಅಪ್ಪನನ್ನು ಹಣಕ್ಕಾಗಿ ಒತ್ತಾಯಿಸಿದಾಗ ‘ನಿಮ್ಮ ಹೆಡ್ ಮೇಡಂ ಚೂಟಿ ಮೇಡಂ (ಅಸಲಿಗೆ ಅವರ ಹೆಸರ ಜೂಡಿ ಮೇಡಂ) ಹತ್ತಿರ ಮಾತಾಡಿದ್ದೀನಿ ನೀವು ಸುಮ್ಮನೆ ಶಾಲೆಗೆ ಹೋಗಿ’ ಎನ್ನುತಿದ್ದರು. ನಾಳೆ ಮೇಡಂ ಮತ್ತೆ ಶುಲ್ಕದ ಬಗ್ಗೆ ಒತ್ತಾಯಿಸಿದಾಗ ನಮ್ಮಪ್ಪ ನಿಮ್ಮನ್ನು ಭೇಟಿ ಮಾಡಿದ್ದಾರಂತೆ ಎಂದಾಗ ‘ಸುಳ್ಳು ಹೇಳಬೇಡಿ ಮಕ್ಕಳೆ, ನಾಳೆ ನೀವು ಹಣ ಕಟ್ಟದಿದ್ದರೆ ಶಾಲೆಗೆ ಬರಬೇಡಿ’ ಎಂದು ಸಿಟ್ಟಾಗುತ್ತಿದ್ದರು.

ಸಂಜೆ ಅಪ್ಪನನ್ನು ಒತ್ತಾಯಿಸಿದಾಗ ‘ನಾಳೆ ನಾನೇ ನಿಮ್ಮೊಂದಿಗೆ ಬರ್ತಿನಿ’ ಎಂದ ಆಸಾಮಿ ಮರುದಿನ ನಾವು ಏಳುವುದಕ್ಕೆ ಮುಂಚೆಯೇ ಜಾಗ ಕಾಲಿಮಾಡಿರುತ್ತಿದ್ದರು. ಅಷ್ಟರಲ್ಲಿ ನಮ್ಮನ್ನಾಗಲೆ ಶಾಲೆಯಿಂದ ಹೊರ ಹಾಕಿರುತ್ತಿದ್ದರು. ಸಾಲ ಮಾಡಿ, ಅವರಿವರನ್ನು ಕೇಳಿ ಹಣ ಕೂಡಿಸಲು ಹೆಣಗಾಡುತಿದ್ದರು. ಕೊನೆಗೆ ನಮ್ಮಪ್ಪನ ವಾಚ್ ಅಥವಾ ಅಮ್ಮನ ಚಿನ್ನದ ಓಲೆ ಅಥವಾ ನಮ್ಮನೆ ಕಂಚಿನ ಪಾತ್ರೆಗಳು ಗಿರುವೆ ಅಂಗಡಿಗೆ ಒತ್ತೆಯಾಗಿ ಹಣ ತಂದು ಶಾಲೆಗೆ ಪಾವತಿಸುತ್ತಿದ್ದರು.

ಇದ್ಯಾವುದನ್ನು ಯೋಚಿಸದ ವಯಸ್ಸಿನ ಮಕ್ಕಳಾದ ನಮಗೆ ಶಾಲೆಗೆ ಹೋಗುವ ಅನುಮತಿ ಸಿಕ್ಕೊಡನೆ ಕುಣಿದು ಕುಪ್ಪಳಿಸುತಿದ್ದೆವು. ಇಂತಹ ಕಷ್ಟಗಳ ನಡುವೆಯು ಸರ್ಕಾರಿ ಶಾಲೆಗೆ ನಮ್ಮನ್ನು ಸೇರಿಸುವ ಯೋಚನೆಯನ್ನು ಅವರೆಂದು ಮಾಡಿರಲಿಲ್ಲ.

ಹೀಗೆ ಬಡತನದಲ್ಲಿ ಬೆಳೆದು ಬಂದ ನಾನು ಬಿ.ಎಸ್ಸಿ(ಕೃಷಿ), ಎಂ.ಎಸ್ಸಿ (ಕೃಷಿ), ಪಿಎಚ್.ಡಿ ಮುಗಿಸಿದ ಸಂದರ್ಭಗಳಲ್ಲಿ ಕಾಲೇಜಿಗೆ ಶುಲ್ಕ ಕಟ್ಟುವಾಗ ಅಪ್ಪನ ಸುಳ್ಳಿನ ಕಂತೆಗಳು ಹಾಗೆ ನೆನಪಾಗಿ, ಅಪ್ಪನಿಗೊ, ಅಮ್ಮನಿಗೊ ಫೋನ್ ಮಾಡಿ ಮನಸಾರೆ ನಗುತಿದ್ದೆ. ಅಪ್ಪ ಎನ್ನುವುದು ತುಂಬಾನೆ ಜವಾಬ್ದಾರಿಯ ಪದವಿ. ಅದನ್ನು ನಮ್ಮಪ್ಪ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆಂದು ಹೆಮ್ಮೆಯಿಂದ ಹೇಳ ಬಲ್ಲೆ. ಅವರ ಶ್ರಮದಿಂದಲೇ ನಾನಿಂದು ಅತ್ಯುನ್ನತ ಪದವಿಗಳಿಸಲು ಸಾಧ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT