ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪಿಗಷ್ಟೆ ನಿಲುಕುವ ನನ್ನ ಚಾಮರಾಜಪೇಟೆ

ನಾ ಕಂಡ ಬೆಂಗಳೂರು
Last Updated 26 ಜೂನ್ 2016, 19:30 IST
ಅಕ್ಷರ ಗಾತ್ರ

ದಶಕಗಟ್ಟಲೆ ಬೆಂಗಳೂರನ್ನು ಕಂಡವರಿಗೆ ಈ ನಗರವು ಆಪ್ತವಾದ ಯಾವುದೋ ಜಾಗವನ್ನು ಕೊಡುಗೆಯಾಗಿ ಕೊಟ್ಟಿರುತ್ತದೆ. ಆ ಜಾಗದೊಟ್ಟಿಗೆ ಬೆಸೆದುಕೊಂಡ ನೆನಪುಗಳ ಮಾತು ಮಧುರವೂ ಹೌದು, ಮರೆಯಲಾಗದವೂ ಹೌದು. ವಿವಿಧ ಕ್ಷೇತ್ರಗಳ ದಿಗ್ಗಜರು ವಾರಕ್ಕೊಮ್ಮೆ ಅಂಥ ನೆನಪುಗಳ ಮೆಲುಕು ಹಾಕುವ ಜಗಲಿ ಇದು. ಈ ವಾರ ಜಗಲಿಯ ಮೇಲೆ ಎಂ. ಶ್ರೀಧರಮೂರ್ತಿ

ನಾನು ಹುಟ್ಟಿದ್ದು ಬೆಳೆದಿದ್ದು ಚಾಮರಾಜಪೇಟೆಯಲ್ಲಿಯೇ. ನನ್ನ ಬಾಲ್ಯದ ಚಾಮರಾಜಪೇಟೆಯ ಬಗ್ಗೆ ನಾನು ಹೇಳಿದರೆ ಬಾಣಭಟ್ಟನ ಕಾದಂಬರಿಯ ಜಾಬಾಲಿ ಆಶ್ರಮದ ವರ್ಣನೆ ಮಾಡುತ್ತಿದ್ದೇನೇನೋ ಎಂದು ನೀವು ಅಂದುಕೊಂಡುಬಿಡಬಹುದು.

ಚಾಮರಾಜಪೇಟೆ ಮೊದಲನೇ ಮುಖ್ಯರಸ್ತೆಯಲ್ಲಿ ಒಂದು ಛತ್ರ ಇತ್ತು. ಆ ಛತ್ರದಲ್ಲಿ ನಾವು  ಬಾಡಿಗೆಗಿದ್ವಿ. ನನ್ನ ತಂದೆ ಮಟ್ಟಮರಿ ಸೇತುಮಾಧವಾಚಾರ್ಯ ಛತ್ರದ ಎದುರಿನ ರಾಯರ  ಮಠದಲ್ಲಿ ಪ್ರಧಾನ ಅರ್ಚಕರಾಗಿದ್ದರು.

ಮೊದಲನೇ ಮುಖ್ಯರಸ್ತೆಯಲ್ಲಿ ಮಿಂಟೋ ಆಸ್ಪತ್ರೆ ಇತ್ತು. ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಬಂದ ಜನಕ್ಕೆ ಛತ್ರದಲ್ಲಿ ಉಚಿತ ರೂಮು ಕೊಡುತ್ತಿದ್ದರು.
ನಾವು ಐದು ಜನ ಮಕ್ಕಳು. ಸುಮಾರು ಹತ್ತನೇ ತರಗತಿಯವರೆಗೂ ರಾಯರ ಮಠವೇ ನನಗೆ ಪಠ್ಯ–ಉಪಪಠ್ಯ ಎಲ್ಲವೂ ಆಗಿತ್ತು.

ನನಗೆ ಭಕ್ತಿ ಇತ್ತು ಅಂತಲ್ಲ, ರಾಯರ ಮಠದಲ್ಲಿ ಒಳ್ಳೆಯ ಊಟ ಸಿಗ್ತಿತ್ತು. ನಮ್ಮಮ್ಮನೂ ತುಂಬ ಅದ್ಭುತವಾಗಿ ಅಡುಗೆ ಮಾಡುತ್ತಿದ್ದರು. ಅಲ್ಲಿ ಪಕ್ಕದಲ್ಲಿ ಒಂದೆರಡು ಬೋಂಡಾ ಅಂಗಡಿಗಳಿದ್ದವು. ನಮ್ಮ ಮನೆಯಲ್ಲಿ ಈರುಳ್ಳಿಯೆಲ್ಲಾ ಬಳಸುತ್ತಿರಲಿಲ್ಲ. ವರ್ಜ್ಯ ಅದು.

ರಾಯರ ಮಠದಲ್ಲಿ ಪ್ರತಿ ಗುರುವಾರ ಗರ್ಭಗುಡಿಯ ಸುತ್ತಲಿನ ಪ್ರಾಕಾರದಲ್ಲಿ ಉತ್ಸವ ಆಗುತ್ತಿತ್ತು. ಅಲ್ಲಿ ಪಂಜು ಹಿಡಿದರೆ ಇಪ್ಪತೈದು ಪೈಸೆ ಕೊಡುತ್ತಿದ್ದರು. ಬೆಳ್ಳಿ ದಂಡ ಹಿಡಿದರೆ ಮೂವತ್ತು ಪೈಸೆ ಕೊಡುತ್ತಿದ್ದರು. ಚಾಮರ ಬೀಸಿದರೆ ಹದಿನೈದು ಪೈಸೆ ಕೊಡುತ್ತಿದ್ದರು.

ಚಾಮರದ ಗಾಳಿ ರಾಯರಿಗೆ ಮುಟ್ಟುತ್ತಿತ್ತೋ ಇಲ್ವೋ ಗೊತ್ತಿಲ್ಲ. ಆದರೆ ಆ ದುಡ್ಡನ್ನು ತೆಗೆದುಕೊಂಡು ಸೀದಾ ಬೋಂಡಾ ಅಂಗಡಿಗೆ ಓಡುತ್ತಿದ್ದೆವು. ಅಲ್ಲಿ ಹದಿನೈದು ಪೈಸೆಗೆ ಐದು ಈರುಳ್ಳಿ ಪಕೋಡಾ ಸಿಗುತ್ತಿತ್ತು. ಅದನ್ನು ತಿಂದು ಅಲ್ಲಿಯೇ ಇದ್ದ ನಲ್ಲಿಯಲ್ಲಿ ಬಾಯಿ ತೊಳೆದುಕೊಂಡು ಮನೆಗೆ ಹೊರಟು ಹೋಗ್ತಿದ್ವಿ.

ಅಣ್ಣ ಮತ್ತು ನನ್ನನ್ನು ಅಪ್ಪ ಫೋರ್ಟ್‌ ಮಿಡಲ್ ಸ್ಕೂಲಿಗೆ ಸೇರಿಸಿದ್ರು. ಸಾಹಿತ್ಯ ಪರಿಷತ್‌ ಎದುರಿಗಿದೆ ಅದು. ಅಲ್ಲಿ ಎಲ್ಲ ಜಾತಿಯ, ಎಲ್ಲ ಧರ್ಮದ ಮಕ್ಕಳೂ ಇದ್ದರು.

ಮನೆಯಲ್ಲಿ ಒಂದು ರೀತಿಯ ಕ್ಲೋಸ್ಡ್‌ ಗ್ರೂಪ್‌. ಶಾಲೆಯಲ್ಲಿ ಒಂದು ರೀತಿಯ ಮುಕ್ತ ವಾತಾವರಣ. ನಾನು ಅದಕ್ಕೆ ತೆರೆದುಕೊಂಡೆ. ಬೀದಿ ಗುಡಿಸುವವರ ಮಕ್ಕಳು, ತರಕಾರಿ ಮಾರುವವರ ಮಕ್ಕಳು, ಮಾಂಸದ ವ್ಯಾಪಾರಿಗಳ ಮಕ್ಕಳೆಲ್ಲ ನನ್ನ ಸಹಪಾಠಿಗಳು.

ಇವರೆಲ್ಲರ ಸಂಗದಿಂದ ನಾನು ಕಾಸ್ಮೊಪಾಲಿಟಿನ್‌ ಆಗಿ ಬೆಳೆಯಲು ಸಾಧ್ಯವಾಯಿತು. ಈ ವಿಷಯದಲ್ಲಿ ನಾನು ನನ್ನ ತಂದೆಗೆ ಕೃತಜ್ಞನಾಗಿದ್ದೇನೆ. ಚಾಮರಾಜಪೇಟೆಯ ಮುಖ್ಯ ಲಕ್ಷಣ ಅಗಲವಾದ ರಸ್ತೆಗಳು. ಜನದಟ್ಟಣೆ ಇರಲೇ ಇಲ್ಲ. ಎರಡು ಬಸ್‌ಸ್ಟ್ಯಾಂಡ್‌ಗಳಿದ್ದವು.

ದೇವರ ಸತ್ಯ ಗೊತ್ತಾಗುವುದು...
ನಮ್ಮ ತಂದೆ ಅರ್ಚಕರಾಗಿದ್ದ ರಾಘವೇಂದ್ರರಾಯರ ಮಠ ಇಡೀ ಬೆಂಗಳೂರಿಗೆ ಜನಪ್ರಿಯವಾದದ್ದು. ಎಲ್ಲ ಕಡೆಗಳಿಂದ ಜನರು ಬರುತ್ತಿದ್ದರು. ಅಲ್ಲಿನ ಗುರುವಾರದ ರಾಯರ ಉತ್ಸವ, ಮಂತ್ರ– ಸ್ತೋತ್ರ ಆರಾಧನೆಗಳು ಜನಪ್ರಿಯ. ಮಠದ ವಾತಾವರಣದಿಂದ ಎಷ್ಟೇ ಪ್ರಭಾವಿತವಾಗಿದ್ದರೂ ಅಲ್ಲಿನ ತಾರತಮ್ಯಗಳನ್ನೆಲ್ಲ ನೋಡಿ ನನಗೆ ಗೊಂದಲವಾಗುತ್ತಿತ್ತು. ಅವು ನನ್ನಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟಿಸುತ್ತಿದ್ದವು.

ನಾನೊಮ್ಮೆ ನನ್ನಪ್ಪನನ್ನು ಒಂದು ಪ್ರಶ್ನೆ ಕೇಳಿದ್ದೆ. ‘ದೇವರು ಇಲ್ಲದೇ ಇರುವ ಸತ್ಯ ಮೊದಲು ಗೊತ್ತಾಗುವುದು ಅರ್ಚಕರಿಗೇ ಅಲ್ವಾ ಅಪ್ಪಾ?’ ಅಪ್ಪ ಮೌನಿಯಾಗಿಬಿಟ್ಟರು. ಎರಡು ಮೂರು ದಿನ ಹಾಗೆಯೇ ಇದ್ದು ನಂತರ ‘ಒಳ್ಳೆಯ ಪ್ರಶ್ನೆ ಕೇಳಿದೆ ಕಣಯ್ಯಾ ನೀನು’ ಎಂದರು.

ನನ್ನ ತಂದೆ ತುಂಬಾ ಕಾಸ್ಮೋಪಾಲಿಟಿನ್‌ ಆಗಿದ್ದವರು. ಸಂಪ್ರದಾಯದ ಚೌಕಟ್ಟಿನಲ್ಲಿಯೇ ಇದ್ದೂ, ಉದಾರಿಗಳಾಗಿದ್ದರು. ಅದು ನನಗೆ ತುಂಬ ಮಹತ್ವದ್ದಾಗಿ ಕಾಣುತ್ತದೆ.  ಮನೆಯಲ್ಲಿನ ಸ್ನಾನ ಸಂಧ್ಯಾವಂದನೆ ಜಪ ತಪ ಸಂಪ್ರದಾಯಗಳ ಚೌಕಟ್ಟಿನಿಂದ ಆಚೆ ಬಂದು ಕಾಸ್ಮೊಪಾಲಿಟಿನ್‌ ಆಗಿ ರೂಪುಗೊಳ್ಳುವುದಕ್ಕೆ ಕಾರಣವಾದದ್ದು ನನ್ನ ತಂದೆ.

ರಾಮೋತ್ಸವಗಳು
ಚಾಮರಾಜಪೇಟೆಯಲ್ಲಿ ಬಹಳ ಒಳ್ಳೆಯ ರಾಮೋತ್ಸವಗಳಾಗುತ್ತಿದ್ದವು. ಎಂ.ಡಿ. ರಾಮನಾಥನ್‌, ವಸಂತಕುಮಾರಿ, ಸುಬ್ಬುಲಕ್ಷ್ಮಿ ಹೀಗೆ ಎಂಥೆಂಥವರ ಸಂಗೀತ ಕೇಳಿದ್ದೀನಿ ಗೊತ್ತಾ? ಅದೂ ಬೀದಿಯ ಮೇಲೆ, ಚಪ್ಪರದ ಅಡೀಲಿ. ಬೆಳಿಗ್ಗೆ ಹೊತ್ತು ಪುರಾಣ, ಸಂಜೆ ಅದ್ಭುತ ಸಂಗೀತ ಕಾರ್ಯಕ್ರಮಗಳು.

ಹಲವು ಸಮುದಾಯಗಳು
ಚಾಮರಾಜಪೇಟೆಯಲ್ಲಿ ಮೊಹರಂ ಉತ್ಸವಗಳನ್ನೂ ಚೆನ್ನಾಗಿ ಆಚರಿಸಲಾಗುತ್ತಿತ್ತು. ಅವರು ಒಂದು ಮಣ್ಣಿನ ಮಡಕೆ ಹಿಡಿದುಕೊಂಡು ಕುಣಿಯುತ್ತಿದ್ದರು. ನಮಗೂ ಅದೇ ವ್ಯಾಮೋಹ. ನಾವೂ ಹಾಗೆಯೇ ಮಾಡುತ್ತಿದ್ದೆವು. ಯಾರೂ ಅದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿರಲಿಲ್ಲ.

ಮರಾಠಿ ಸಮುದಾಯದವರೂ ಇದ್ದರು. ಹನುಮಂತರಾವ್‌ ಅನ್ನುವವರದು ಟೈಲರಿಂಗ್‌ ಶಾಪ್‌ ಇತ್ತು. ನಾವು ನಾಲ್ಕು ಜನ ಅಣ್ಣತಮ್ಮಂದಿರು ಅಲ್ಲಿ ಹೋಗಿ ನಿಂತುಕೊಂಡರೆ ಎಲ್ಲರನ್ನೂ ಒಮ್ಮೆ ನೋಡಿ ‘ಹೋಗ್ರೋ ಮನೆಗೆ’ ಅಂದು ಬಿಡುತ್ತಿದ್ದರು. ಅಳತೆಗಳನ್ನೇ ತೆಗೆದುಕೊಳ್ಳುತ್ತಿರಲಿಲ್ಲ.

ನಂತರ ಎಲ್ಲರಿಗೂ ಒಂದೇ ಅಳತೆಯ ಚೆಡ್ಡಿ ಹೊಲಿಯುತ್ತಿದ್ದರು. ಹೊಲಿದ ಬಟ್ಟೆಗೆ ಇಸ್ತ್ರಿ ಮಾಡುವ ಅಭ್ಯಾಸ ಅವರಿಗಿರಲಿಲ್ಲ. ತುಂಬಾ ದಡೂತಿ ಮನುಷ್ಯ. ಹೊಲಿದ ಬಟ್ಟೆಯ ಮೇಲೆ ಅವರು ಕೂತುಬಿಟ್ಟರೆ ಇಸ್ತ್ರಿಯಾದಂತೆ ಆಗುತ್ತಿತ್ತು.

ಗಜೇಂದ್ರ ವಿಲಾಸ
ಪ್ರಕಾಶ ಕೆಫೆ ಮತ್ತು ಶಾಂತಿ ಭವನ ಹೋಟೆಲ್‌ಗಳು ತುಂಬ ಪ್ರಸಿದ್ಧವಾಗಿದ್ದವು. ಗಜೇಂದ್ರ ವಿಲಾಸ್‌ ಅಂತೊಂದು ಹೋಟೆಲ್‌ ಮಸಾಲೆ ದೋಸೆಗೆ ಫೇಮಸ್ಸಾಗಿತ್ತು. ನಲ್ವತ್ತು ಪೈಸೆಗೆ ಅದ್ಭುತವಾದ ಮಸಾಲೆ ದೋಸೆ ತಿಂದಿದ್ದೇನೆ ನಾನು. ಹಿತ್ತಾಳೆ ಲೋಟದಲ್ಲಿ ನೀರು ಕೊಡುತ್ತಿದ್ದರು.

ಅಲ್ಲಿ ಕಾಫಿಯೂ ಅಷ್ಟೇ ಚೆನ್ನಾಗಿರುತ್ತಿತ್ತು. ‘ಮೆಜೆಸ್ಟಿಕ್‌’ ಅಂತೊಂದು ಹೋಟೆಲ್‌ ಖಾಲಿದೋಸೆಗೆ ಫೇಮಸ್ಸಾಗಿತ್ತು. ಅಡಿಗಾಸ್‌ ಹೋಟೆಲ್‌ ಮೊದಲು ಶುರುವಾಗಿದ್ದು ಚಾಮರಾಜಪೇಟೆಯಲ್ಲಿ ತಾತಪ್ಪನ ಅಂಗಡಿ ಅಂತೊಂದು ಅಂಗಡಿ ಇತ್ತು. ಅವರ ಅಂಗಡಿಗೆ ಹೆಸರಿರಲಿಲ್ಲ. ಅಲ್ಲಿ ಅವರು ಬುಗುರಿ ಮತ್ತು ಗಾಳಿಪಟಗಳನ್ನು ಮಾರುತ್ತಿದ್ದರು.

ಮಲಬಾರ್‌ ಲಾಡ್ಜ್‌ ಕೂಡ ತುಂಬ ಪ್ರಸಿದ್ಧವಾಗಿತ್ತು. ಅಲ್ಲಿ ಉಳಿದುಕೊಳ್ಳದ ಸಂಗೀತಗಾರರೇ ಇಲ್ಲ. ಚೌಡಯ್ಯ ಯಾವಾಗಲೂ ಅದರಲ್ಲಿಯೇ ಇಳಿದುಕೊಳ್ಳುತ್ತಿದ್ದವು. ಅವರೊಂದಿಗೆ ಸುಮಾರು ಸಲ ಅಂಬರೀಶ ಅವರನ್ನು ನೋಡಿದ ನೆನಪಿದೆ.

ಮರೆಯಾಗಿದೆ ಚಾಮರಾಜಪೇಟೆ
ನಾನು ಚಾಮರಾಜಪೇಟೆಯನ್ನು ಬಿಟ್ಟಿದ್ದು 1976ರ ಸುಮಾರಿಗೆ. ಆಮೇಲೆ ಜೆ.ಪಿ.ನಗರಕ್ಕೆ ಹೋದೆ. ಈಗ ಮತ್ತೆ ಚಾಮರಾಜಪೇಟೆ ಅಂಚಿನಲ್ಲಿದ್ದೇನೆ. ಮೊದಲು ನಾನು ಚಾಮರಾಜಪೇಟೆಯಲ್ಲಿ ನಡೆದು ಹೋಗುತ್ತಿದ್ದರೆ ಎಲ್ಲರೂ ನನ್ನ ಮಾತನಾಡಿಸುವವರೇ. ಆದರೆ ಈಗ  ನನ್ನ ಬಾಲ್ಯದ ಚಾಮರಾಜಪೇಟೆ ಮರೆಯಾಗಿಬಿಟ್ಟಿದೆ. ಅನಾಥನಾಗಿಬಿಟ್ಟಿದೀನಿ. ಯಾರೂ ಮಾತನಾಡಿಸುವವರಿಲ್ಲ.

ತೆರವಿದ್ದ ಎಲ್ಲ ಜಾಗಗಳಲ್ಲಿಯೂ ಕಟ್ಟಡ ಕಟ್ಟಲಾಗಿದೆ. ಸಿಟಿ ಮಾರ್ಕೆಟ್‌ ಚಾಮರಾಜಪೇಟೆಯನ್ನು ಮುಟ್ಟಿದೆ. ನನ್ನ ಬಾಲ್ಯದಲ್ಲಿ ಕಾಣಿಸುತ್ತಿದ್ದ ಸ್ಥಳೀಯರು ತಮ್ಮನ್ನು ತಾವು ಮಾರಿಕೊಂಡುಬಿಟ್ಟಿದಾರೆ. ಆಸ್ತಿಗಳನ್ನು ಭಾಗ ಮಾಡಿ, ಮಾರಿಕೊಂಡು ಹೈರಾಣಾಗಿಬಿಟ್ಟಿದಾರೆ.

ಹಳೆಯ ಕಟ್ಟಡಗಳನ್ನೂ ಕೆಡವಲಾಗಿದೆ.  ಕಮರ್ಷಿಯಲ್‌ ಸೆಂಟರ್‌ ಆಗಿದೆ. ಒಂದೊಂದು ಕಟ್ಟಡಗಳನ್ನು ಕೆಡವಿದಾಗಲೂ ನನ್ನ ಬದುಕಿನ ಒಂದೊಂದು ವಿನ್ಯಾಸ ನಾಶವಾದಂತೇ ಭಾಸವಾಗಿದೆ. ಈಗ ಆ ನನ್ನ ಚಾಮರಾಜಪೇಟೆ ಉಳಿದಿರುವುದು ನೆನಪುಗಳಲ್ಲಿ ಮಾತ್ರ. 

ನವರಾತ್ರಿ, ಗಣೇಶೋತ್ಸವ
ತೂಬಗೆರೆ ನಂಜಪ್ಪ ಅಂತೊಬ್ಬರು ಚಾಮರಾಜಪೇಟೆಯಲ್ಲಿದ್ದರು. ಅವರ ಮನೆಯಲ್ಲಿ ನವರಾತ್ರಿಯಲ್ಲಿ ಬೊಂಬೆಗಳನ್ನು ಕೂಡಿಸುತ್ತಿದ್ದರು. ಪ್ರತಿದಿನ ಬೊಂಬೆ ಬದಲಾಯಿಸುತ್ತಿದ್ದರು. ಕಿಲೋಮೀಟರ್‌ಗಳಷ್ಟು ದೂರ ಸರತಿ ನಿಂತು ಜನರು ಆ ಬೊಂಬೆಗಳನ್ನು ನೋಡುತ್ತಿದ್ದರು.

ಪ್ರತಿಯೊಬ್ಬರಿಗೂ ಅವರು ಚೆರ್ಪು (ಪ್ರಸಾದ) ಕೊಡೋರು.  ಪ್ರಮೀಳಾ ನೇಸರ್ಗಿ ಅವರ ಮನೆ ಚಾಮರಾಜಪೇಟೆ ನಾಲ್ಕನೇ ಮುಖ್ಯರಸ್ತೆಯಲ್ಲಿತ್ತು. ಅವರ ಮನೆಯಲ್ಲಿಯೂ ಬೊಂಬೆ ಇಡುತ್ತಿದ್ದರು.  ನಾವೆಲ್ಲ ನವರಾತ್ರಿಗಾಗಿ ಕಾಯುತ್ತಿದ್ದೆವು.

ಗಣಪತಿ ಉತ್ಸವದಲ್ಲಿಯೂ ಅಷ್ಟೇ, ಒಳ್ಳೊಳ್ಳೆ ಸಂಗೀತ ಕಾರ್ಯಕ್ರಮಗಳಾಗುತ್ತಿದ್ದವು. ಪಿ. ಕಾಳಿಂಗರಾವ್‌, ನಾರಾಯಣ ರಾವ್‌ ಮಾನೆ ಅವರೆಲ್ಲರ ಸಂಗೀತ ಕೇಳಿದ್ದು ಅಲ್ಲಿಯೇ.  ಆವಾಗ ಬೆಂಗಳೂರಿನಲ್ಲಿ ಚಾಲ್ತಿಯಲ್ಲಿದ್ದಿದ್ದು ಎರಡೋ ಮೂರೋ ಆರ್ಕೆಸ್ಟ್ರಾ ಅಷ್ಟೆ.

ಅವುಗಳಲ್ಲಿ ‘ಸರಸವಾಣಿ’ ಎಂಬ ಒಂದು ಆರ್ಕೆಸ್ಟ್ರಾ ಚಾಮರಾಜಪೇಟೆಯಲ್ಲಿಯೇ ಇತ್ತು. ಆ ಸರಸವಾಣಿಯ ಕೆಳ ಅಂತಸ್ತಿನಲ್ಲಿಯೇ ಹಿಂದಿಯ ಖ್ಯಾತ ನಟ ಕೆ. ಗುರುದತ್‌ ಇದ್ದರು. ಶಾಂತಿ ಕರ್ನಾಟಕ ಅಂತ ಇನ್ನೊಂದು ಆರ್ಕೆಸ್ಟ್ರಾ ಇತ್ತು.

ಆಮೇಲೆ ಕೊಲಂಬಸ್‌ ಅಂತ ಇನ್ನೊಂದು ಆರ್ಕೆಸ್ಟ್ರಾ ಬಂತು. ಎರಡು ಮುಖ್ಯ ಕ್ರಿಶ್ಚಿಯನ್‌ ಕುಟುಂಬಗಳು ಇದ್ದವು. ಹೂವರ್‌ ಫ್ಯಾಮಿಲಿ ಅಂತೊಂದಿತ್ತು. ಇನ್ನೊಂದು ಅರಲಪ್ಪ ಚೆಟ್ಟಿ ಅಂತ. ನಮ್ಮನೆಯಿಂದ ಮೂರನೇ ಮನೆ ಅವರದು. ಹನುಮಜಯಂತಿಯೂ ತುಂಬ ಚೆನ್ನಾಗಿ ನಡೆಯುತ್ತಿತ್ತು.

ಆ ಉತ್ಸವದಲ್ಲಿ ಒಂದು ಲಾರಿ, ಲಾರಿ ಮೇಲೆ ಒಂದು ವೇದಿಕೆ. ಅದರ ಮೇಲೆ ಬಹಳ ದೊಡ್ಡ ನಾದಸ್ವರದ ವಿದ್ವಾಂಸರು ಇಡೀ ರಾತ್ರಿ ಸಂಗೀತ ನುಡಿಸುತ್ತಿದ್ದರು. ಒಳ್ಳೆಯ ಭಜನಾ ಮಂಡಳಿಗಳಿದ್ದವು. ಚಾಮರಾಜ ಪೇಟೆಯ ಮಿತ್ರಾ ಸ್ಟೋರ್ಸ್‌ನಲ್ಲಿ ಬಹಳ ಅದ್ಭುತವಾದ ಬಾದಾಮಿ ಹಾಲು ಸಿಗುತ್ತಿತ್ತು.

ಶಾರದಾ ಸ್ತ್ರೀ ಸಮಾಜ ಅಂತೊಂದು ಶಾಲೆಯಿತ್ತು. ನಾನು ಹತ್ತನೇ ತರಗತಿಯವರೆಗೂ ಓದಿದ್ದು ಅಲ್ಲಿಯೇ. ಅಲ್ಲಿ ಎರಡು ತುಂಬ ದೊಡ್ಡ ಮಾವಿನ ಮರಗಳಿದ್ದವು.

ಅದರ ಹಿಂಭಾಗದಲ್ಲಿ ಮರಿಯಪ್ಪ ಹಾಸ್ಟೆಲ್‌, ಪಕ್ಕದಲ್ಲಿ ಬಲಿಜ ಹಾಸ್ಟೆಲ್‌ ಇತ್ತು. ಸಮೀಪದ ರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಒಂದು ಹೂವಿನ ಮರ ಇತ್ತು. ಅದರಿಂದ ಉದುರಿದ ಹೂವನ್ನು ನೆಲಕ್ಕೆ ಬೀಳುವ ಮೊದಲೇ ಹಿಡಿದರೆ ಪರೀಕ್ಷೆಯಲ್ಲಿ ಪಾಸಾಗುತ್ತಾರೆ ಎಂಬ ನಂಬಿಕೆ ನಮ್ಮಲ್ಲಿತ್ತು.

ಸಾಹಿತಿಗಳ ಸಾಮೀಪ್ಯ
ವಿ.ಸೀತಾರಾಮಯ್ಯ ಅವರ ಮನೆ ಎದುರು ಸಾಲಿನಲ್ಲಿ ನಾವಿದ್ದೆವು. ಅವರ ಮನೆ ಮುಂದೆ ಒಳ್ಳೆಯ ಹಲಸಿನ ಮರ ಇತ್ತು. ನಮಗೆ ಹೇಳಿ ಮರ ಹತ್ತಿಸಿ ಹಲಸಿನಕಾಯಿ ಕೊಯ್ಯಿಸುತ್ತಿದ್ದರು.

ಅವರು ಅಷ್ಟು ದೊಡ್ಡ ಮನುಷ್ಯರು ಎಂದು ನಮಗೆ ಆಗ ಗೊತ್ತಿರಲೇ ಇಲ್ಲ. ಅವರ ಮನೆಗೆ ಶಿವರಾಮ ಕಾರಂತರು, ಆದ್ಯ ರಂಗಾಚಾರ್ಯರು, ಬೇಂದ್ರೆ ಅವರು ಎಲ್ಲರೂ ಬರುತ್ತಿದ್ದರು. ಅವರನ್ನೆಲ್ಲ ತುಂಬ ಹತ್ತಿರದಿಂದ ನೋಡುತ್ತಿದ್ದೆ.

ದೇವುಡು ನರಸಿಂಹಶಾಸ್ತ್ರಿಗಳು, ಸಿನಿಮಾ ನಟಿ ಸುಧಾರಾಣಿ, ನಟ ಉಪೇಂದ್ರ ಇವರೆಲ್ಲ ಚಾಮರಾಜಪೇಟೆಯಲ್ಲಿಯೇ ಇದ್ದವರು.   ಗಣಿತಜ್ಞೆ ಶಕುಂತಲಾ ದೇವಿ ಚಾಮರಾಜಪೇಟೆಯಲ್ಲಿದ್ದರು.

ಜಯಶ್ರೀ ಅಂತ ಒಂದು ಥಿಯೇಟರ್‌ ಇತ್ತು. ಹನುಮದಾಸ ಅಂತ ಅದರ ಮಾಲೀಕರು. ಆ ಚಿಕ್ಕ ಥಿಯೇಟರನ್ನು ಕಡಲೆಕಾಯಿ ಥಿಯೇಟರ್‌ ಎಂದೇ ಕರೆಯುತ್ತಿದ್ದೆವು. ನಾವು ಸುಮಾರು ರಾಜಕುಮಾರ್‌ ಸಿನಿಮಾಗಳನ್ನು ನೋಡಿದ್ದೇ ಅಲ್ಲಿ.

ಲಿಂಗಾಚಾರಿಯ ಕ್ಯಾಮೆರಾ ರಿಪೇರಿ ಅಂಗಡಿ
ಆರ್ಕಾ ವಾಚ್‌ ಕಂಪೆನಿ ಅಂತೊಂದು ವಾಚ್‌ ರಿಪೇರಿ ಅಂಗಡಿಯಿತ್ತು. ಅದರಲ್ಲಿ ಲಿಂಗಾಚಾರಿ ಅಂತ ಒಬ್ಬ ವಾಚ್‌ ಮತ್ತು ಕ್ಯಾಮೆರಾ ರಿಪೇರಿ ಮಾಡುವವರು ಇದ್ದರು. ಅವರು ತುಂಬಾ ನಿಧಾನವಾಗಿ ಕೆಲಸ ಮಾಡುತ್ತಿದ್ದ. ಆದರೆ ಕೆಲಸ ಮಾತ್ರ ತುಂಬ ಅಚ್ಚುಕಟ್ಟು.

‘ಪ್ರಜಾವಾಣಿ’ಯ ಕೆ.ಎನ್‌ ನೆಟ್ಟಕಲ್ಲಪ್ಪ ಅವರು ಒಮ್ಮೆ ಸ್ವಿಟ್ಜರ್‌ಲೆಂಡ್‌ಗೆ ಹೋದಾಗ ಅಲ್ಲಿಂದ ಒಂದು ಕ್ಯಾಮೆರಾ ತಂದಿದ್ದರು. ಅದು ಕೆಟ್ಟು ಹೋಯಿತು. ಅದನ್ನು ರೀಪೇರಿ ಮಾಡಬೇಕು ಎಂದು ಎಷ್ಟು ಪ್ರಯತ್ನಿಸಿದರೂ ಆಗಲಿಲ್ಲ.

ಮತ್ತೊಮ್ಮೆ ಸ್ವಿಟ್ಜರ್‌ಲೆಂಡ್‌ಗೆ ಹೋಗಿದ್ದಾಗ ಆ ಕಂಪೆನಿಗೇ ತೆಗೆದುಕೊಂಡು ಹೋದರು. ಅವರೂ ರಿಪೇರಿ ಮಾಡಲು ಸಾಧ್ಯವಾಗಲಿಲ್ಲ. ಅದನ್ನು ಕೊನೆಗೆ ಲಿಂಗಾಚಾರಿ ಸರಿಮಾಡಿಕೊಟ್ಟಿದ್ದರು.

ಹರಿಕಥೆಯ ಮೊಗಸಾಲೆ
ಚಾಮರಾಜಪೇಟೆ ಮೂರನೇ ರಸ್ತೆಯಲ್ಲಿ ಕಾಶಿ ವಿಶ್ವೇಶ್ವರನ ದೇವಸ್ಥಾನವಿದೆ. ಈಗ ಅದೇನೇನೋ ಹೈಟೆಕ್‌ ಮಾಡಿದ್ದಾರೆ. ಅಲ್ಲಿ ವರ್ಷದಲ್ಲಿ ಮೂರು ತಿಂಗಳು ಪ್ರತಿದಿನ ಏಳು ಗಂಟೆಯಿಂದ ಹನ್ನೊಂದು ಗಂಟೆಯವರೆಗೆ ಹರಿಕಥೆಗಳಾಗುತ್ತಿದ್ದವು.

ಎಂತೆಂಥವರು... ಗುರುರಾಜಲು ನಾಯ್ಡು, ಸೋಸಲೇ ನಾರಾಯಣದಾಸ, ಮುನಿರತ್ನಂ, ವಸಂತಲಕ್ಷ್ಮಿ ಅವರೆಲ್ಲ ಹರಿಕಥೆ ಮಾಡುತ್ತಿದ್ದರು. ಎಲ್ಲರೂ ಅಬ್ರಾಹ್ಮಣರೇ. ಅದರಲ್ಲಿಯೂ ಗುರುರಾಜಲು ನಾಯ್ಡು ಹೇಳಿದ ಹರಿಕಥೆಗಳನ್ನು ಕೇಳಿದ ಅನುಭವನ್ನಂತೂ ಮರೆಯಲು ಸಾಧ್ಯವಿಲ್ಲ.

ನನ್ನ ಅಣ್ಣನ ಗುರುಗಳೊಬ್ಬರಿಗೆ ನಾನು ಬ್ರಾಹ್ಮಣೇತರರ ಬಾಯಲ್ಲಿ ಹರಿಕಥೆಗಳನ್ನು ಕೇಳುತ್ತಿದ್ದೇನೆಂದು ಸಿಟ್ಟಿತ್ತು. ಆದರೆ ಆ ಮೂರು ತಿಂಗಳು ನನ್ನ ಪಾಲಿಗೆ ಹಬ್ಬವಾಗಿತ್ತು.

ಶಾಲೆಯಿಂದ ಮನೆಗೆ ಬಂದು ಕೈಕಾಲು ತೊಳೆದುಕೊಂಡು ಸಂಧ್ಯಾವಂದನೆ ಮಾಡಿ ಹರಿಕಥೆ ಕೇಳಲು ಓಡಿಹೋಗುತ್ತಿದ್ದೆ. ಮುನಿರತ್ನಂ ಅವರು ಹರಿಕಥೆ ಮಾಡುವಾಗ ಮ್ಯಾಜಿಕ್‌ ಮಾಡಿ ನಮಗೆಲ್ಲ ಲಾಡುಗಳನ್ನು ಹಂಚುತ್ತಿದ್ದರು. ಎಂಥಾ ಅನುಭವ ಅದು!

** *** **
ಪ್ರಶಾಂತವಾದ ಜಾಗ. ಎಲ್ಲರ ಮನೆ ಮುಂದೂ ಅಂಗಳ ಇರುತ್ತಿತ್ತು. ಆಗ ಸೀಬೆ ಕಾಯಿ, ಹಲಸಿನ ಕಾಯಿಗಳನ್ನೆಲ್ಲ ಯಾರೂ ಮಾರುತ್ತಿರಲೇ ಇಲ್ಲ. ಸುಮ್ಮನೇ ಕೊಟ್ಟು ಬಿಡುತ್ತಿದ್ದರು ಅಷ್ಟೆ. .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT