ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪಿಗೆ ಮುಳುಗಡೆ ಇಲ್ಲ

ಕಥೆ
Last Updated 26 ಜುಲೈ 2014, 19:30 IST
ಅಕ್ಷರ ಗಾತ್ರ

ನಡುವೆ ವಿಸ್ತಾರವಾದ ನೀರಿನ ಹರವು. ಈ ದಡದಲ್ಲಿ ಸಾಲು ಗಟ್ಟಿ ನಿಂತ ವಾಹನಗಳು. ಆ ದಡದಲ್ಲಿ ಮತ್ತೆ ವಾಹನಗಳ ಸಾಲು. ವಿವಿಧ ಬಗೆಯ, ಬಣ್ಣದ, ನಮೂನೆಯ, ಒಂದರ ಹಿಂಬದಿಯನ್ನು ಇನ್ನೊಂದು ಮೂಸುತ್ತ ನಿಂತ ವಾಹನಗಳು, ಇದರ ಬೆನ್ನಲ್ಲಿ ಅನ್ನುವ ಹಾಗೆ ನೆರೆದ ಜನವೋ ಜನ. ಈ ವಾಹನಗಳನ್ನ, ಜನರನ್ನ ಅಣಕಿಸುವ ಹಾಗೆ ನಿಂತ ನೀರಿನಲ್ಲಿ ಸದ್ದು ಮಾಡುತ್ತ ಆ ದಡಕ್ಕೆ ಹೋಗುತ್ತಲಿದ್ದ ಈ ದಡಕ್ಕೆ ಬರುತ್ತಲಿದ್ದ ಎರಡು ಲಾಂಚುಗಳು. ಈ ಲಾಂಚುಗಳ ಮೇಲೆ ಮತ್ತೆ ಬಸ್ಸುಗಳೇ, ವಾಹನಗಳೇ, ಜನರೇ.

ನಿಂತ ನೀರಿನಲ್ಲಿ ಅರೆಬರೆ ಮುಳುಗಿದ ಗುಡ್ಡಗಳು, ಈ ಗುಡ್ಡಗಳ ನೆತ್ತಿಯನ್ನುಳಿದು ಅದರ ಮೈ ಎಲ್ಲ ಕೆಂಪು ಮಣ್ಣಿನಿಂದ ಆವೃತವಾಗಿ, ನೀರು ಇಳಿದ ಹಾಗೆ ಈ ಮಣ್ಣು ಕೊಚ್ಚಿ ಹೋಗಿದ್ದರಿಂದ ಗುಡ್ಡದ ಮೈ ಮೇಲೆ ಎಳೆದ ಬರೆಗಳು, ಕಲ್ಲು ಬಂಡೆಗಳು, ನೀರಿನಲ್ಲಿ ನಿಂತ ಮೋಟು ಮರಗಳು, ಈ ಮೋಟು ಮರಗಳ ಮೇಲೆ ಕುಳಿತು ನೋಡುತ್ತಿದ್ದ ಹಕ್ಕಿಗಳು, ಮೇಲೆ ಹಾರಾಡುತ್ತಿದ್ದ ಹದ್ದು, ಗಿಡುಗ ಇತ್ಯಾದಿ. ನೀರಿನಲ್ಲಿ ಮೀನು ಹಿಡಿಯುತ್ತಿದ್ದ ಜನ.

ಅದೊಂದು ಅಪರೂಪದ ಪ್ರಪಂಚ. ಲಿಂಗನಮಕ್ಕಿಯಲ್ಲಿ ನಿರ್ಮಿಸಿದ ಬೃಹದಾಕಾರದ ಅಣೆಕಟ್ಟೆಯಿಂದಾಗಿ ಉಂಟಾದ ಹಿನ್ನೀರಿನ ಹರವು ಅದು. ಮಾನವ ನಿರ್ಮಿತ ಸಮುದ್ರ. ಸುತ್ತಲಿನ ಹಲವಾರು ಮೈಲಿ ವಿಸ್ತಾರದ ಜಾಗವನ್ನ, ಹಳ್ಳಿಗಳನ್ನ, ತೋಟ ಗದ್ದೆಗಳನ್ನ ಆಪೋಶನ ತೆಗೆದುಕೊಂಡಂತೆ ಮಡುಗಟ್ಟಿ ನಿಂತ ದಪ್ಪ ನೀಲಿ ನೀರು. ಹೃದಯ ಇದ್ದವರಿಗೆ, ಮನುಷ್ಯನ ನಿಟ್ಟುಸಿರನ್ನ ಕೇಳುವವರಿಗೆ ಇಲ್ಲಿ ಮುಳುಗಡೆಯಾಗಿ ಈ ಪ್ರದೇಶವನ್ನ  ತೊರೆದುಹೋದ ಸಾವಿರಾರು ಜನರ ಉದ್ಗಾರ ಕೇಳುವುದುಂಟು. ಇದಿಲ್ಲದವರಿಗೆ ಈ ಪ್ರದೇಶ ಸುಂದರ ವಾಯುವಿಹಾರದ ತಾಣವಾಗಿ, ನವ ದಂಪತಿಗಳು ನಲಿಯುವ ಜಾಗವಾಗಿ, ಸಿಗಂದೂರೇಶ್ವರಿಯ ಭಕ್ತರಿಗೆ ಇದೊಂದು ಪುಣ್ಯ ತಂದುಕೊಡುವ ಪವಿತ್ರ ಸ್ಥಳವಾಗಿ ಕಾಣುತ್ತ ಬಂದಿದೆ.

ನಿಜ ಹೇಳಬೇಕೆಂದರೆ ಇಲ್ಲಿ ನೆರೆದಿರುವ ಈ ಎಲ್ಲ ಜನ ಇಲ್ಲಿ ಮಲಗಿರುವ ಈ ನೀರನ್ನ ದಾಟಿಹೋಗಿ ಅಲ್ಲಿ ತುಸು ದೂರದಲ್ಲಿ ನಿಂತಿರುವ ಸಿಗಂದೂರಿನ ದೇವತೆಯ ಆರಾಧನೆಗೆ ಬಂದವರು. ಎಲ್ಲೆಲ್ಲಿಂದಲೋ ಹರಕೆ ಹೊತ್ತು, ಕಾಣಿಕೆ ಹಿಡಿದು, ತಮ್ಮ ಬಂಧು ಬಳಗವನ್ನ ಕರೆದುಕೊಂಡು, ಹೊಸದಾಗಿ ಪ್ರಾರಂಭವಾದ ರೈಲಿನಲ್ಲಿ, ಬಸ್ಸಿನಲ್ಲಿ, ಇಲ್ಲವೇ ಬಾಡಿಗೆ ವಾಹನದಲ್ಲಿ, ತಮ್ಮ ಸ್ವಂತ ಕಾರುಗಳಲ್ಲಿ ಬಂದವರು. ಆ ಮಾತೆ ಸಿಗಂದೂರೇಶ್ವರಿ ತಮ್ಮ ಬದುಕಿಗೆ ಒಳಿತನ್ನ ಮಾಡಲಿ ಅನ್ನುವ ಹಂಬಲ, ತಮ್ಮ ನೋವನ್ನ ದೂರ ಮಾಡಲಿ ಅನ್ನುವ ನಿರೀಕ್ಷೆ, ಸಂಕಟವನ್ನ ಪರಿಹರಿಸಲಿ ಅನ್ನುವ ಆಸೆ ಇರಿಸಿಕೊಂಡು ಅಗಾಧವಾದ ನಂಬಿಕೆಯಿಂದ ಬಂದವರು. ಕೆಲವರಿಗೆ ಮಕ್ಕಳು ಬೇಕು, ಕೆಲವರಿಗೆ ನೆಮ್ಮದಿ ಬೇಕು, ಕೆಲವರಿಗೆ ಸಂಸಾರದಲ್ಲಿ ತೃಪ್ತಿ ಬೇಕು, ಕೆಲವರಿಗೆ ಕಾಯಿಲೆ ವಾಸಿಯಾಗಬೇಕು, ಕೆಲವರಿಗೆ ಇನ್ನೇನೋ ಬೇಕು. ಹಾಗೆಂದೇ ಧಾವಿಸಿ ಬಂದಿದ್ದಾರೆ ಜನ.

ಲಾಂಚನ್ನು ಏರಿ ಕೇವಲ ಒಂದು ರೂಪಾಯಿ ಟಿಕೇಟು ತೆಗೆದುಕೊಂಡು ಆ ಬದಿಗೆ ಹೋಗುವವರೆಲ್ಲ ಈ ಬಗೆಯ ಜನ. ಕೈ ಬೊಗಸೆ ತೆರೆದುಕೊಂಡೇ ‘ತಾಯೀ ಕೊಡು ಕೊಡು’ ಎಂದು ಕೇಳುವವರು, ಮೊರೆ ಇಡುವವರು. ಇನ್ನು ಆ ಬದಿಯಿಂದ ಹಿಂತಿರುಗುವ ಲಾಂಚು ಕಾರುಗಳಲ್ಲಿ ಇರುವವರು ದೇವಿಗೆ ಬೇಡಿಕೆ ಸಲ್ಲಿಸಿ, ಅದು ನೆರವೇರುತ್ತದೆ ಎಂಬ ನಂಬಿಕೆಯನ್ನ ಹೊತ್ತು ಬರುತ್ತಿರುವವರು. ಆ ಯಾಂತ್ರಿಕ ಲಾಂಚು ಮಡುಗಟ್ಟಿ ನಿಂತ ನೀರನ್ನ ಸೀಳಿಕೊಂಡು ತನ್ನ ಚಾಲಕನ ಇರಾದೆಯಂತೆ ತನ್ನ ಕೆಲಸವನ್ನ ನೆರವೇರಿಸುತ್ತದೆ ಅನ್ನುವುದು ಇಲ್ಲಿ ಮುಖ್ಯ. ಒಂದು ಲಾಂಚು ಆ ದಡಕ್ಕೆ ಹೋಗುತ್ತದೆ, ಇನ್ನೊಂದು ಈ ದಡಕ್ಕೆ ಬರುತ್ತದೆ. ಹೋಗುವುದು ಬರುವುದು ಈ ಎರಡು ಕೆಲಸಗಳನ್ನ ಈ ಲಾಂಚುಗಳು ಮಾಡುತ್ತ ಬಂದಿವೆ.

ಇದರ ಜೊತೆಗೆ ಇಲ್ಲಿ ತಿರುಗಾಡುವವರಲ್ಲಿ ನೀರಿನಲ್ಲಿ ಮುಳುಗಡೆಯಾಗದೆ ಇನ್ನೂ ಮನೆ ಮಠ ಮಾಡಿಕೊಂಡು ಬದುಕಿರುವ ಸಾವಿರಾರು ಜನರೂ ಇದ್ದಾರೆ. ಇವರ ಬಗ್ಗೆ ಸರಕಾರ, ಶಾಸಕರು, ಎಂಪಿಗಳು, ಸರಕಾರೀ ನೌಕರರು ಎಂದೂ ವಿಚಾರ ಮಾಡಿದ್ದಿಲ್ಲ. ಚುನಾವಣೆ ಬಂದಾಗ ‘ಸೇತುವೆ’ ಅನ್ನುವ ಒಂದು ಕನಸನ್ನ ಇವರ ಮುಂದೆ ಬಿತ್ತರಿಸಿ ಅದೇ ಚುನಾವಣೆ ಮುಗಿದ ನಂತರ ಆ ಕನಸನ್ನ ಇವರೇ ಕಸಿದುಕೊಂಡು ಮತ್ತೆ ಇವರ ಜೊತೆಯಲ್ಲಿ ಮಷ್ಕಿರಿ ಮಾಡುತ್ತ ಬಂದಿದ್ದಾರೆ ಅಷ್ಟೆ.

ಹಾಂ ಇಲ್ಲಿ ಹೇಳ ಬೇಕಾದ ಇನ್ನೊಂದು ವಿಷಯವಿದೆ.
ಎರಡೂ ದಂಡೆಗಳ ಮೇಲೆ ಸಾಲು ಸಾಲು ಅಂಗಡಿಗಳು, ಹೋಟೆಲುಗಳು, ಗುಟ್ಕಾ ನೇತಾಡಿಸಿಕೊಂಡು ನಿಂತ ದುಕಾನುಗಳು ಇಲ್ಲಿವೆ. ಲಾಂಚಿನಿಂದ ಇಳಿದ ಜನರನ್ನ ಈ ಅಂಗಡಿ ಹೋಟೆಲಿನವರು ಕೂಗಿ ಕರೆಯುತ್ತಾರೆ. ಜನ ಇಲ್ಲಿಗೆಲ್ಲ ಹೋಗುತ್ತಾರೆ ಕೂಡ. ಹೋಗಿ ಟೀ ಕುಡಿದು, ಒಂದು ಗುಟ್ಕಾ ಹಾಕಿಕೊಂಡು ಮುಂದೆ ಬಸ್ಸನ್ನೋ ಕಾರು ಜೀಪನ್ನೋ ಏರಿಕೊಂಡು ದೇವಸ್ಥಾನಕ್ಕೆ ಹೋಗುತ್ತಾರೆ. ಜೊತೆಗೆ ಯಾವ ಜೀಪಿನಲ್ಲಿ, ಯಾರ ಕಾರಿನಲ್ಲಿ ಸಿಗಂದೂರಿಗೆ ಹೋಗಬೇಕು ಅನ್ನುವುದು ಕೂಡ ಇಲ್ಲಿಯೇ ತೀರ್ಮಾನವಾಗಿ ಜನ ಇಲ್ಲಿಯೇ ಕಾರು ಜೀಪನ್ನ ಏರುತ್ತಾರೆ. ಹೋಟೆಲಿನವರು ಬಂದ  ಪ್ರಯಾಣಿಕರು ಮತ್ತು ಕಾರು ಜೀಪಿನವರ ಜೊತೆಯಲ್ಲಿ ಚೌಕಾಶಿಗೆ ನಿಂತು ಒಂದು ದರ ನಿಗದಿ ಮಾಡಿ ಜನರನ್ನ ದೇವಸ್ಥಾನಕ್ಕೆ ಕಳುಹಿಸಿಕೊಡುತ್ತಾರೆ.

ಈ ದಡದಲ್ಲಿ ಸಾಲು ಅಂಗಡಿಗಳ ಕೊನೆಗೆ ಒಂದು ಅಂಗಡಿ ಇದೆ. ಅಲ್ಲಿ ಕಾಫಿ ಟೀ ಗುಟ್ಕಾ ಏನೂ ಸಿಗುವುದಿಲ್ಲ. ನಾಲ್ಕು ಕಂಬ ನೆಟ್ಟು, ಒಣಗಿದ ಮಡಲನ್ನ ಒರಗಿಸಿ, ಮೇಲೆ ನಾಲ್ಕು ಮಡಲುಹಾಸಿ ಆ ಅಂಗಡಿಯನ್ನ ಅಲ್ಲಿ ನಿಲ್ಲಿಸಲಾಗಿದೆ. ಒಳಗೆ ಒಂದು ಅಡ್ಡ ಬೆಂಚಿದೆ, ಒಂದು ಮುರುಕು ಕುರ್ಚಿ. ಅದರ ಮೇಲೆ ಮೇಲುಕುಣಿ ಗಣಪತಿ ಹೆಗಡೆಯವರು ಸದಾ ಕುಳಿತಿರುತ್ತಾರೆ. ಇವರಿಗೆ ಸುಮಾರು ಎಪ್ಪತ್ತರ ವಯಸ್ಸು. ಮುಖದ ಮೇಲೆ ಹಣ್ಣಾದ ಗಡ್ಡ. ನೆರಿಗೆ ಗಟ್ಟಿದ ಕೆನ್ನೆ. ಒಣಗಿ ಕಟ್ಟಿಗೆಯಾದ ಕೈ ಕಾಲು. ಗುಳಿಗೆ ಇಳಿದ ಕಣ್ಣುಗಳು. ಕೇಳಲು ಕಷ್ಟಕರವೆನಿಸುವ ಇಳಿ ದನಿಯ ಮಾತು.

ಅಂಗಡಿ ಎಂದು ಕರೆಯಬಹುದಾದ ಅ ಮಡಲಿನ ಶೆಡ್ಡಿಗೆ ಅವರು ಕೆಟ್ಟ ಅಕ್ಷರದಲ್ಲಿ ಬರೆದ ಒಂದು ಹಲಗೆಯನ್ನ ತೂಗು ಹಾಕಿದ್ದಾರೆ. ಅದರ ಮೇಲೆ ‘ಮೇಲುಕುಣಿ ಗಣೇಶ ಹೆಗಡೆ’ ಎಂಬ ಬರಹ ಕಾಣಿಸುತ್ತದೆ. ಕೆಲ ಪ್ರವಾಸಿಗರು ಇಲ್ಲಿಗೂ ಹೋಗುತ್ತಾರೆ. ಏನೋ ಕುತೂಹಲದಿಂದ ಅಡ್ಡ ಬೆಂಚನ್ನ, ಕುರ್ಚಿಯ ಮೇಲೆ ಆಸೀನರಾದ ಹೆಗಡೆಯವರನ್ನ ನೋಡುತ್ತಾರೆ. ಹಾಗೇ ಅಂಗಡಿಯೊಳಗೆ ತಮ್ಮ ಬರಿಗಣ್ಣನ್ನ ಬೀರಿ ಅಚ್ಚರಿಪಡುತ್ತಾರೆ. ಅಲ್ಲ, ಒಳಗೆ ಏನೂ ಇಲ್ಲ ನೀವು ಕುರ್ಚಿ ಹಾಕಿಕೊಂಡು ಕೂತಿರೋದು ಯಾಕೋ ಅನ್ನುವಂತೆ ಕಣ್ಣು ಹೊರಳಿಸುತ್ತಾರೆ. ಕೆಲವರಿಗೆ ಬಾಯಿ ಬಿಟ್ಟು ಕೇಳಬೇಕು ಅನಿಸುತ್ತದೆ. ಆದರೆ ಕೇಳುವುದಿಲ್ಲ. ಆದರೆ ಅವರ ಮನದಲ್ಲಿನ ಮಾತನ್ನ ಇವರು ಗ್ರಹಿಸಿದ ಹಾಗೆ ಹೆಗಡೆಯವರು, ‘ಗೊತ್ತಾತು ಬಿಡಿ ನಿಮ್ಮ ಮನಸ್ಸಿನಲ್ಲಿ ಏನಿದೆ ಅಂತ’ ಎಂದು ನಗುತ್ತಾರೆ.

‘ಅಲ್ಲ, ನಾನಿಲ್ಲಿ ಕೆಲಸ ಇಲ್ಲದೆ ಕುಳಿತವನಲ್ಲ... ಅಂಗಡಿ ಪಂಗಡಿ ಇಟ್ಟುಕೊಂಡು ನಾನಿಲ್ಲಿ ಕೂರಬಹುದಿತ್ತಪ್ಪ... ಅಕ್ಕ ಪಕ್ಕದಲ್ಲಿ ಇರೋ ಸುಬ್ಬಣ್ಣನ ಹಾಗೆ, ಮಂಜಪ್ಪನ ಹಾಗೆ, ಖಲಂದರನ ಹಾಗೆ. ನಾನು ಅದು ಇದು ಮಾರಿ ಹಣ ಮಾಡಬಹುದಿತ್ತಪ್ಪ, ಆದರೆ ಸಂಪಾದನೆ ಮಾಡೋದು ಯಾರಿಗಾಗಿ ಹೇಳಿ... ಹೆಂಡತೀನೆ ಮಕ್ಕಳೇ...’

ಅವರು ಎಲ್ಲೋ ಆಳಕ್ಕೆ ಇಳಿಯುತ್ತ ಬಿಕ್ಕುತ್ತಾರೆ. ತಟ್ಟನೆ ಮಾತು ಬದಲಾಯಿಸುತ್ತಾರೆ, ‘ಅಲ್ಲಿ ಕಾಣುತ್ತ ನಿಮಗೆ... ಒಂದು ಎತ್ತರದ ಮರ... ಆಕಾಶ ತಿವಿಯೋ ಹಾಗೆ ನಿಂತದೆ ನೋಡಿ, ಅಲ್ಲಿತ್ತು ನನ್ನ ಮನೆ... ನಾನು ಕಟ್ಟಿದ ಎರಡನೇ ಮನೆ, ಮಾಡಿದ ಎರಡನೇ ತೋಟ...’.
ಅವರು ತೋರಿದತ್ತ ನೋಡುತ್ತಾರೆ ಜನ. ಅಲ್ಲಿ ಮಡುಗಟ್ಟಿದ ನೀರಿನಲ್ಲಿ ಒಂದು ಎತ್ತರದ ಮರ ಅವರಿಗೆ ಕಾಣಿಸುತ್ತದೆ. ನೀರನ್ನ ಸೀಳಿಕೊಂಡು ಎದ್ದು ನಿಂತಿರುವ ಮರ. ಬೋಳು ಬೋಳಾದ ಅದರ ಬೊಡ್ಡೆ. ಕೊನೆಯಲ್ಲಿ ಒಡೆದ ಟೊಂಗೆಗಳು. ಒಂದು ಟೊಂಗೆ ಮತ್ತೂ ಮೇಲೆ ಚಾಚಿಕೊಂಡು ಅಲ್ಲಿ ತೇಲುವ ಮೋಡವನ್ನ ಮುಟ್ಟುವ ಯತ್ನದಲ್ಲಿ ಇರುವಂತೆ ಕಾಣುತ್ತದೆ. ಈ ಬೆತ್ತಲೆ ಟೊಂಗೆಯ ತುದಿಯಲ್ಲಿ ಒಂದು ಚಿಕ್ಕ ಹಕ್ಕಿ ಕೂತು ಅತ್ತಿತ್ತ ಕತ್ತು ಹೊರಳಿಸುತ್ತದೆ. ಇಲ್ಲಿ ಇವರು ಬಹಳ ಕಷ್ಟ ಪಟ್ಟು ನೆನಪಿನಾಳದಿಂದ ಒಂದೊಂದೇ ಶಬ್ದವನ್ನ ಹೆಕ್ಕಿ ಹೆಕ್ಕಿ ಹೇಳಲು ಪ್ರಾರಂಭಿಸುತ್ತಾರೆ.

ವಿಶ್ವೇಶ್ವರಯ್ಯನವರು ಜೋಗದಲ್ಲಿ ಕರೆಂಟ್ ತೆಗೆಯಲು ಹಿರೇ ಭಾಸ್ಕರದಲ್ಲಿ ಡೇಮು ಕಟ್ಟಿದರಲ್ಲ, ಆವಾಗ ಮಡೇನೂರಿನಲ್ಲಿ ಇವರ ಮನೆ ಜಮೀನು ಇತ್ತು... ದಿವಾನರು ಎಲ್ಲರ ಹಾಗೆ ಇವರಿಗೂ ಕೇಳಿಕೊಂಡರು– ‘ದೇಶಕ್ಕೆ ಕರೆಂಟ್ ಬೇಕು... ಕರೆಂಟ್ ಬೇಕು ಅಂದ್ರೆ ಡೇಮು ಕಟ್ಟ ಬೇಕು... ಡೇಮು ಕಟ್ಟಿದರೆ ಹಳ್ಳಿ ಊರು ಮುಳುಗುತ್ತೆ... ನೀವು ನಿಮ್ಮ ಊರು ತೋಟ ಬಿಟ್ಟು ಕೊಡ ಬೇಕು... ದೇಶಕ್ಕೆ ಒಳ್ಳೆಯದಾಗುತ್ತೆ...’ ಅಂತೆಲ್ಲ ಹೇಳಿದರು. ಇವರು, ಇವರ ಹಾಗೆ ಭಾಳ ಜನ ತಮ್ಮ ತಮ್ಮ ಮನೆ ತೋಟ ಬಿಟ್ಟು ಬಂದರು... ಆವಾಗ ಇವರಿಗೆ ಇಲ್ಲಿ ಜಮೀನು ಕೊಟ್ರು... ಹೊಳೆ ಬಾಗಿಲ ಬಳಿ ಮೇಲುಕುಣಿ ಎಂದು ಒಂದು ಸಣ್ಣ ಹಳ್ಳಿ... ಇವರು ಮಡೇನೂರು ಬಿಟ್ಟು ಇಲ್ಲಿಗೆ ಬಂದರು... ಮನೆ ಕಟ್ಟಲಿಕ್ಕೆ ಹಣ, ತೋಟ ಮಾಡಲಿಕ್ಕೆ ಜಮೀನು ಬಂದಿತು.

ಇವರು ಹುರುಪಿನಿಂದ ಹೊಸದಾಗಿ ಇಲ್ಲಿ ತೋಟ ಮಾಡಿದರು ಮನೆ ಕಟ್ಟಿದರು. ತೋಟ ಕೈಗೆ ಬಂತು. ಮನೆಗೊಂದು ಹೆಸರೂ ಬಂತು. ಮಡೇನೂರು ಸಾಗರ ಬಸ್ಸು ಇವರ ಮನೆ ಮುಂದಿನಿಂದಾನೆ ಓಡಾಡೋದು. ಮೇಲುಕುಣಿ ಸ್ಟಾಪು ಅಂದರೆ ಬಸ್ಸು ಇಲ್ಲಿ ನಿಲ್ಲೋದು. ಅದೇ ಎತ್ತರವಾಗಿರೋ ಮರ ಇದೆಯಲ್ಲ ಅದರ ಕೆಳಗೇನೆ ಇವರ ಮನೆ. ಈ ಮನೆಯಲ್ಲಿ ಅವರ ಬದುಕು ಮುಂದುವರೆಯಿತು. ಅವರಿಗೆ ಮಕ್ಕಳಾದರು, ಅವರು ಶಾಲೆ ಕಲಿತರು. ಇವರ ಬದುಕಿಗೊಂದು ಅರ್ಥ ಬಂದದ್ದು ಇಲ್ಲಿಯೇ. ಯಾವುದೇ ತೊಂದರೆ ತಾಪತ್ರಯವಿಲ್ಲದೆ ಸಾಗಿದ ಬದುಕು.

ಆಮೇಲೆ ಬಂದದ್ದು ಎರಡನೇ ಮುಳುಗಡೆ... ಲಿಂಗನ ಮಕ್ಕಿಯ ಬಳಿ ಸರಕಾರ ಎರಡನೇ ಅಣೆ ಕಟ್ಟೆ ಕಟ್ಟಲು ಹೊರಟಿತು. ಮತ್ತೆ ಪರಿಹಾರಕ್ಕೆ ಅರ್ಜಿ ಕೊಟ್ಟದ್ದು. ಕಚೇರಿಗೆ ತಿರುಗಾಡಿದ್ದು... ಶಿವಮೊಗ್ಗದ ಹತ್ತಿರ ಮನೆ ಜಾಗ, ತೋಟಕ್ಕೆ ಜಾಗ... ಯಾವ ಕರ್ಮ ಮಾಡಿದ್ದರೋ ಬಯಲು ಸೀಮೆ ಇವರಿಗೆ ಹೊಂದಿಕೆ ಆಗಲಿಲ್ಲ. ಅಲ್ಲಿಯ ಜನ ಕೂಡ ಇವರನ್ನ ಹತ್ತಿರ ಸೇರಿಸಲಿಲ್ಲ. ‘ಮುಳುಗಡೆಯೋರು’ ಎಂದು ಇವರನ್ನ ಕರೆದರು. ಸರಕಾರದಿಂದ ಭಾರೀ ಹಣ ವಸೂಲಿ ಮಾಡಿಕೊಂಡು ಬಂದಿದ್ದಾರೆ ಎಂದು ತಿಳಿದು ಇವರನ್ನ ದೂರವೇ ಇರಿಸಿದರು. ಸಾಲದ್ದಕ್ಕೆ  ಅವರ ಹೆಂಡತಿ ಮೇಲುಕುಣಿ ಬಿಡೋದು ಬೇಡ ಅಂದ್ಲು... ಮಕ್ಕಳು ಓದಿದ್ದರಿಂದ ಬೇರೆ ಕಡೆ ಕೆಲಸ ನೋಡಿಕೊಂಡ್ರು... ಮಗಳ ಮದುವೆ ಆಗಿತ್ತು... ಅವಳು ಯಡೂರಿನ ಗಂಡನ ಮನೆ ಸೇರಿದ್ಲು. ಹೆಂಡತಿಯದ್ದು ಒಂದೇ ಹಟ... ಮೇಲುಕುಣಿ ಬಿಡೂದು ಬೇಡ,  ಬಿಡೂದು ಬೇಡ... ಡೇಮ್ನಲ್ಲಿ ನೀರು ತುಂಬಿಕೊಂಡರೂ ಇವಳು ಊರು ಬಿಡಲಿಲ್ಲ... ನೀರು ಮೇಲೆ ಏರ್ತಾ ಏರ್ತಾ ಮನೆ ಮುಳುಗ್ತು... ಮನೆ ಜೋತೇಲಿ ಇವಳೂ ಕೂಡ....

ಒಂದು ರಾತ್ರಿ ಇವಳು ಎದೆ ಹಿಡಿದುಕೊಂಡು ನೋವೂ ಅಂದಳು... ಇವಳನ್ನ ಕಂಬಳಿಯಲ್ಲಿ ಹಾಕಿಕೊಂಡು ಸಾಗರಕ್ಕೆ ಕೊಂಡೊಯ್ಯುವ ಎಂದು ಇತರರ ಸಹಾಯ ಪಡೆದು ಹೊಳೆ ಬಾಗಿಲವರೆಗೆ ಹೊತ್ತು ತಂದೆವು.... ಲಾಂಚು ಆ ತುದಿಯಲ್ಲಿ... ದಂಡೆಯ ಮೇಲೆ ನಿಂತು ಎಷ್ಟೇ ಬೊಬ್ಬೆ ಹೊಡೆದರೂ ಲಾಂಚು ಬರಲಿಲ್ಲ. ಇವಳು ಕಂಬಳಿಯಲ್ಲಿಯೇ ತಣ್ಣಗಾಗಿ ಹೋದಳು...

ಈಗ ಶಿವಮೊಗ್ಗದ ಹತ್ತಿರ ಸರಕಾರ ಕೊಟ್ಟ ಜಮೀನಿನ ಮೇಲೆ ಕಟ್ಟಿದ ಮನೆ ಯಾರೂ ಇಲ್ಲದೆ ಬರಿದಾಗಿದೆ...
ಜಮೀನು ಪಾಳು ಬಿದ್ದಿದೆ... ಅಲ್ಲಿಗೆ ಹೋಗಲಿಕ್ಕೆ ಇವರಿಗೆ ಮನಸ್ಸಾಗುತ್ತಿಲ್ಲ... ಅವರು ಒಂಟಿಯಾಗಿ ಇಲ್ಲಿ ಕೂತಿದ್ದಾರೆ. ಇಲ್ಲಿಂದ ಮೇಲುಕುಣಿ ಒಂಟಿ ಮರ ನೋಡ್ತಾ... ಬೇಸಿಗೆಯಲ್ಲಿ ಡೇಮಿನ ನೀರು ಇಳಿಯುತ್ತದೆ. ಅಗ ಮೇಲುಕುಣಿಯ ಕಾಲು ದಾರಿ, ಊರ ಹಿಂದಿನ ಗುಡ್ಡ, ಇವರ ತೋಟವಿದ್ದ ಜಾಗ ಎಲ್ಲ ಕಾಣುತ್ತದೆ. ಇಲ್ಲಿ ಕುಳಿತು ಕಣ್ತುಂಬ ನೋಡುತ್ತಾರೆ. ಎದುರು ಬಂದವರಿಗೆ ಅಲ್ಲಿ ನೋಡಿ ನಾವು ಓಡಾಡುತ್ತಿದ್ದ ದಾರಿ, ಹತ್ತಿ ಇಳಿಯುತ್ತಿದ್ದ ಗುಡ್ಡ, ನಮ್ಮ ಅಡಿಕೆ ತೋಟ, ನೋಡಿ, ನೋಡಿ ಅನ್ನುತ್ತಾರೆ, ಜನ ನೋಡುತ್ತಾರೆ. ಹೌದಾ ಎಂದು ಕೇಳುತ್ತಾರೆ.

ಹಾಗೇನೆ ಇಲ್ಲಿ ಬರೋ ಜನರಿಗೆ ಇಲ್ಲಿಯ ನಿಜ ಕತೆಯನ್ನ ಹೇಳ್ತಾ ಕೂತಿರ್ತಾರೆ... ಆದರೆ ಅವರು ಯೋಚಿಸುತ್ತಾರೆ... ಈ ಕತೆ ಯಾರಿಗೆ ಬೇಕು.

‘ಹೌದಪ್ಪ, ಮೋಜು ಮಾಡಲಿಕ್ಕೆ, ಪುಣ್ಯ ಸಂಪಾದನೆಗೆ ಅಂತ ಬಂದೋರಿಗೆ ಇದೆಲ್ಲ ಬೇಕಿಲ್ಲ ಅಲ್ವಾ... ಆದರೂ ನನ್ನ ಕೆಲಸ ನಾನು ಮಾಡಿಕೊಂಡು ಹೋಗತಿದೇನೆ... ಅದಕ್ಕಾಗಿ ಇಲ್ಲೊಂದು ಶೆಡ್ಡು ಕಟ್ಟಿಕೊಂಡು ಕೂತಿದೇನೆ... ಯಾರಿಗೆ ಆಸಕ್ತಿ ಇದೆಯೋ ಅವರಿಗೆ ಹೇಳೋದು... ನನಗಂತೂ ಇಲ್ಲಿ ಕೂತು ಮೇಲುಕುಣಿ ಮರವನ್ನ ನೋಡುವುದರಲ್ಲಿ ಸುಖ ಕಾಣಿಸುತ್ತೆ. ನೆನಪನ್ನ ಯಾವ ನೀರೂ ಮುಳುಗಿಸಲಿಕ್ಕಿಲ್ಲ ಅಲ್ವಾ? ಕೆಲವರು ಈ ಹೆಗಡೆಗೆ ಮಂಡೆ ಸಮ ಇಲ್ಲ ಅಂತಾರೆ... ಅನ್ನಲಿ ಅಲ್ವಾ?’
ಗಣೇಶ ಹೆಗ್ಗಡೆಯವರು ಮಾತು ಮುಗಿಸುತ್ತಾರೆ.

ಸಂಜೆ ಆಗುವ ತನಕ ಅಲ್ಲಿ ಕುಳಿತಿದ್ದು ನಂತರ ಅವರು ಎದ್ದು ಸಸರುವಳ್ಳಿಯ ಸುಬ್ಬಮ್ಮನ ಊಟದ ಹೋಟೆಲಿಗೆ ಹೋಗುತ್ತಾರೆ. ಅವರ ಊಟ, ಸ್ನಾನ ಎಲ್ಲ ಅಲ್ಲಿಯೇ. ಬೆಳಗಾಗುತ್ತಿದ್ದಂತೆ ಅವರು ಇಲ್ಲಿಗೆ ಬರುತ್ತಾರೆ ಕತೆ ಹೇಳಲು. ದೇವರಿಗೆ ಕೈ ಮುಗಿಯಲು ಅವರು ಸಿಗಂದೂರಿಗೆ ಕೂಡ ಹೋಗುವುದಿಲ್ಲ.

ಅವರು ಹೇಳುವ ಕತೆ ಕೇಳುತ್ತ ಕುಳಿತವರು ನಿಟ್ಟುಸಿರು ಬಿಡುತ್ತಾರೆ.
ಆದರೆ ಈ ಕತೆ ಕೇಳುವವರು ಕೆಲವೇ ಜನ. ಉಳಿದವರೆಲ್ಲ ಹಿನ್ನೀರಿನ ಸೌಂದರ್ಯ, ಚೆಲುವು ನೋಡಿ, ಲಾಂಚಿನ ಪ್ರಯಾಣದ ಸೊಗಸಿಗೆ ಮರುಳಾಗಿ, ನೀರಿನ ಸರೂತಕ್ಕೆ ಹಾರುವ ಬೆಳ್ಳಕ್ಕಿಗಳನ್ನ ನೋಡಿ, ಸಿಗಂದೂರು ದೇವಿಯ ಕೃಪೆಗೆ ಪಾತ್ರರಾಗಿ, ಗುಡ್ಡದಿಂದ ಗುಡ್ಡಕ್ಕೆ ತೂಗು ಬಿದ್ದ ವಿದ್ಯುತ್ ತಂತಿಗಳ ಜಾಲ ನೋಡಿ, ಶರಾವತಿ ಎಷ್ಟೊಂದು ಮನೆಗಳನ್ನ ಬೆಳಗುತ್ತಾಳಲ್ಲ ಎಂದು ಅಚ್ಚರಿಪಡುತ್ತ ಇಲ್ಲಿಂದ ಹಿಂತಿರುಗುತ್ತಾರೆ– ಬದುಕಿನಲ್ಲಿ ತಾವು ಏನೋ ಅಪರೂಪದ್ದನ್ನ ಕಂಡೆವು, ಸಾಧಿಸಿದೆವು ಅನ್ನುವ ಭ್ರಮೆಯಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT