ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪಿನಲ್ಲಿ ಉಳಿಯುವ ಹಾಸ್ಯ ನಾಟಕ

ರಂಗಭೂಮಿ
Last Updated 12 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಪ್ರೇಕ್ಷಕರ ಮನದಲ್ಲಿ ಸದಾ ಚಿರಸ್ಥಾಯಿಯಾಗಿ ಉಳಿದಿರುವ ನಾಟಕಗಳಲ್ಲಿ ಹೆಚ್ಚಿನ ಪಾಲು ಹಾಸ್ಯ ನಾಟಕಗಳು. ವೃತ್ತಿ ರಂಗಭೂಮಿಯಿಂದ ಹಿಡಿದು ಹವ್ಯಾಸಿ ನಾಟಕಗಳವರೆಗೂ ಹಾಸ್ಯ ನಾಟಕಗಳು ಎಲ್ಲ ವರ್ಗದ ಪ್ರೇಕ್ಷಕರಲ್ಲಿ ಸದಾ ನೆನಪಿನಲ್ಲಿ ಉಳಿದಿವೆ. ಅಂತಹ ಹಾಸ್ಯ ನಾಟಕಗಳಲ್ಲೊಂದು ‘ಸಾಲದಲ್ಲೊಂದು ಸಂಸಾರ’.

25 ವರ್ಷಗಳ ಹಿಂದೆ ಪಾರ್ಥಸಾರಥಿ ಅವರು ಬರೆದ ‘ಸಾಲದಲ್ಲೊಂದು ಸಂಸಾರ’ ನಾಟಕ ಆ ಕಾಲಕ್ಕೆ ಅತ್ಯಂತ ಹೆಚ್ಚು ಪ್ರೇಕ್ಷಕರ ಮನ ತಣಿಸಿದ್ದ ಹಾಸ್ಯ ನಾಟಕ. ಸಂಪೂರ್ಣ ಸಂಭಾಷಣೆ ಆಧರಿತ ನಾಟಕವಾಗಿರುವ ‘ಸಾಲದಲ್ಲೊಂದು ಸಂಸಾರ’ಕ್ಕೆ ಇಂದಿಗೂ ಅದೇ ಜನಪ್ರಿಯತೆ ಇದೆ ಎಂಬುದಕ್ಕೆ ಸಾಕ್ಷಿ ಇತ್ತೀಚೆಗೆ ಹನುಮಂತನಗರದ ಕೆ.ಎಚ್.ಕಲಾಸೌಧದಲ್ಲಿ ನಡೆದ ಪ್ರದರ್ಶನ.

ಬೆಂಗಳೂರು ನಗರದಲ್ಲಿ ವಾಸ ಮಾಡುವ ಸಾಮಾನ್ಯ ಕುಟುಂಬವೊಂದರ ಹಣಕಾಸಿನ ಮುಗ್ಗಟ್ಟು, ಅದಕ್ಕಾಗಿ ಸಂಸಾರದ ಯಜಮಾನ ಇಡೀ ಊರಿನ ತುಂಬೆಲ್ಲ ಸಾಲ ಮಾಡಿಕೊಂಡು ಪಡುವ ಪಡಿಪಾಟಲನ್ನು ಹಾಸ್ಯವಾಗಿ ತೋರಿಸುವುದೇ ನಾಟಕದ ಕಥಾವಸ್ತು.

ನಾಟಕದಲ್ಲಿ ಒಟ್ಟು ಒಂಬತ್ತು ಪಾತ್ರಗಳಿದ್ದು, ಎಲ್ಲ ಪಾತ್ರಗಳು ನಾಟಕಕ್ಕೆ ಪೂರಕವಾಗಿ ಮೂಡಿಬಂದಿವೆ. ನಾಟಕದ ರಚನೆ ಮತ್ತು ನಿರ್ದೇಶನವನ್ನು ಮಾಡಿದ ಪಾರ್ಥಸಾರಥಿಯವರೇ ಪ್ರಧಾನ ಪಾತ್ರದಲ್ಲಿ ನಟಿಸಿದ್ದರು. 120 ನಿಮಿಷ ಪ್ರದರ್ಶನಗೊಂಡ ನಾಟಕದ ಕೇಂದ್ರಬಿಂದು ನಾಯಕ ವಿಜಯ್ ಪಾತ್ರ. ಈ ಪಾತ್ರವನ್ನು ನಿರ್ವಹಿಸಿದ ಪಾರ್ಥಸಾರಥಿಯವರು ನಾಟಕದ ಜೀವಾಳವಾಗಿರುವ ಡೈಲಾಗ್‌ಗಳನ್ನು ನಿರರ್ಗಳವಾಗಿ ಹೇಳುತ್ತಾ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು.

ಪ್ರತಿಯೊಂದು ಸನ್ನಿವೇಶದಲ್ಲೂ ಬರುವ ಸಂಭಾಷಣೆಗಳು ಪ್ರೇಕ್ಷಕರಿಗೆ ಕಚಗುಳಿ ಇರಿಸುವ ಹಾಗೂ ಎಲ್ಲ ಸಾಮಾನ್ಯ ವ್ಯಕ್ತಿಗಳ ಬದುಕಿಗೆ ಸಾಮ್ಯತೆ ಇರುವಂತಿದ್ದವು. ಸಾಲಗಾರರು ಬಂದು ಸಾಲ ಕೇಳುವಾಗ ಅವರಿಂದ ತಪ್ಪಿಸಿಕೊಳ್ಳಲು ಮಾಡುವ ಯತ್ನ, ಅದಕ್ಕೆ ಆತ ಹೇಳುವ ಸಂಬಂಧವಿಲ್ಲದ ಕತೆಗಳು, ನಂತರ ಸಾಲ ಕೇಳಲು ಬಂದವರಿಂದಲೇ ಮತ್ತೊಮ್ಮೆ ಹಣ ಕಿತ್ತುಕೊಳ್ಳುವ ಜಾಣ್ಮೆ ಬೇಡ ಬೇಡವೆಂದರೂ ಪ್ರೇಕ್ಷಕರಲ್ಲಿ ನಗೆ ಉಕ್ಕಿಸುವಂತಿತ್ತು.

ಪಾರ್ಥಸಾರಥಿಯವರ ನಟನೆಗೆ ಪೂರಕವಾಗಿ ವಿಜಯ್ ಹೆಂಡತಿ ಕಲ್ಯಾಣಿ ಪಾತ್ರದಲ್ಲಿ ನಟಿಸಿದ ಶಾಂತಲ ಕಾರಂತ್ ಅವರು ಕೂಡ ಪಾತ್ರಕ್ಕೆ ಜೀವ ತುಂಬಿದರು. ಅವರ ಕೋಪ, ಮೂದಲಿಕೆ, ವ್ಯಂಗ್ಯ, ಪೂಸಿ ಹೊಡೆಯುವ ವಿಧಾನ ಎಲ್ಲವೂ  ನಾಟಕಕ್ಕೆ ಮತ್ತಷ್ಟು ಮೆರಗು ತಂದಿತ್ತು. ಶಾಂತಲಾ ಅವರು ಒಬ್ಬ ಅನುಭವಿ ನಟಿಯಾಗಿದ್ದು, ಅವರ ರಂಗತುಡಿತಕ್ಕೆ ತಕ್ಕಂತೆ ಸಿಕ್ಕಿದ್ದು ಕಲ್ಯಾಣಿ ಪಾತ್ರ.

ಇನ್ನು ನಾಟಕದಲ್ಲಿ ವಿಳಾಸ ಕೇಳಿಕೊಂಡು ಬರುವ ಹಳ್ಳಿಯ ಬೋರನ ಪಾತ್ರವನ್ನು ನಿರ್ವಹಿಸಿದ ರಾಘವೇಂದ್ರ ಅವರು ತಮಗಿರುವ ಸುದೀರ್ಘ ನಟನಾ ಅನುಭವವನ್ನು ಪಾತ್ರದ ಮೇಲೆ ಪ್ರಯೋಗಿಸಿದ್ದು ಪಾತ್ರದ ಔಚಿತ್ಯವನ್ನು ಹೆಚ್ಚಿಸಿತ್ತು. ವಿಜಯ್ ಮಾವನ ಪಾತ್ರದಲ್ಲಿ ಹಿರಿಯ ಕಲಾವಿದ ಸಂಪತ್‌ಕುಮಾರ್ ಅಭಿನಯ ಯಥಾಪ್ರಕಾರ ಅವರ ಅಭಿನಯ ಕೌಶಲಕ್ಕೆ ತಕ್ಕಂತಿತ್ತು.

ಮನೆ ಮಾಲೀಕನ ಪಾತ್ರದಲ್ಲಿ ನಟಿಸಿದ ಹಿರಿಯ ಕಲಾವಿದ ಬಾಬುಕುಮಾರ್ ಅವರು ತಮ್ಮ ವಯೋಸಹಜ ನಟನೆಯ ಮೂಲಕ ಪಾತ್ರಕ್ಕೆ ನೈಜತೆಯನ್ನು ಒದಗಿಸಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು. ಕುದುರೆ ರೇಸ್ ಆಡುವವನ ಪಾತ್ರದಲ್ಲಿ ರಾಮಕೃಷ್ಣ ಅವರ ಅಭಿನಯ ಸಹ ನಾಟಕಕ್ಕೆ ಪೂರಕವಾಗಿತ್ತು.

ಬ್ಯಾಂಕ್ ಮ್ಯಾನೇಜರ್ ಪಾತ್ರದಲ್ಲಿ ಪ್ರಶಾಂತ ಅವರ ಅಭಿನಯ ಅವರ ರಂಗಾನುಭವಕ್ಕೆ ಹೇಳಿ ಮಾಡಿಸಿದಂತಿತ್ತು. ನೆರೆ ಮನೆಯವರ ಪಾತ್ರದಲ್ಲಿ ನಟಿಸಿದ ಹಿರಿಯ ಕಲಾವಿದ ರಾಮಚಂದ್ರಪ್ಪ ಅವರ ಅಭಿನಯ ಮತ್ತು ಮುಖಭಾವಗಳು ಆ ಪಾತ್ರಕ್ಕೆ ಕಳೆಕಟ್ಟುವಂತಿದ್ದವು. ನೆರೆಮನೆಯ ಹುಡುಗನ ಪಾತ್ರದಲ್ಲಿ ಬಾಲ ಕಲಾವಿದ ಕಾರ್ತಿಕ್ ಅಭಿನಯ ಮತ್ತು ಆತನ ಮುಗ್ಧ ತಪ್ಪುಗಳು ಕೂಡ ನಾಟಕದ ಪರಿಪೂರ್ಣತೆಯಲ್ಲಿ ಪಾಲು ಪಡೆದಿದ್ದವು.

ಒಟ್ಟಾರೆ ಶ್ರೀನಿವಾಸ್ ಅವರ ನಿರ್ವಹಣೆಯಲ್ಲಿ ‘ಉತ್ಸಾಹಿ ಕಲಾವಿದರು, ಬೆಂಗಳೂರು’ ಇವರಿಂದ ಮೂಡಿಬಂದ ನಾಟಕವು ನೋಡಿದ ಜನರಿಗೆ ನಗೆಯ ಭರ್ಜರಿ ಭೋಜನವನ್ನೇ ಉಣಬಡಿಸಿತು. ನಾಟಕದ ಕಾಲಾವಧಿಯನ್ನು ಕಡಿಮೆ ಮಾಡಿ ಕೊಂಡು, ದೇಹಭಾಷೆ ಮತ್ತು ರಂಗ ಚಲನೆಯ ಕಡೆಗೆ ಇನ್ನಷ್ಟು ಗಮನ ನೀಡಿದರೆ ಪ್ರದರ್ಶನ ಇನ್ನೂ ಉತ್ತಮವಾಗಿ ಮೂಡಿಬರುವುದರಲ್ಲಿ ಯಾವುದೇ ಸಂದೇಹವಿಲ್ಲ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT