ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪಿನ ಬುತ್ತಿ ಬಿಚ್ಚಿಟ್ಟ ಯರೇಗೌಡ

ಕರ್ನಾಟಕ-ರೈಲ್ವೇಸ್‌ ಎರಡೂ ತಂಡಗಳಲ್ಲಿ ಆಡಿದ್ದ ರಾಯಚೂರಿನ ಪ್ರತಿಭೆ
Last Updated 21 ಡಿಸೆಂಬರ್ 2014, 19:54 IST
ಅಕ್ಷರ ಗಾತ್ರ

ನವದೆಹಲಿ: ‘ನನಗೆ ಕ್ರಿಕೆಟ್‌ ಕಲಿಸಿಕೊಟ್ಟಿದ್ದು ಕರ್ನಾಟಕದ ನೆಲ. ಉದ್ಯೋಗ ನೀಡಿ ಬದುಕು ಕಟ್ಟಿಕೊಳ್ಳಲು ನೆರವಾಗಿದ್ದು ರೈಲ್ವೇಸ್‌. ಆದ್ದರಿಂದ ಯಾವ ತಂಡಕ್ಕೆ ಗೆಲುವು, ಯಾರಿಗೆ ಸೋಲು ಎನ್ನುವುದು ಮುಖ್ಯವಲ್ಲ. ಒಟ್ಟಿನಲ್ಲಿ ಕ್ರಿಕೆಟ್‌ ಪ್ರೀತಿ ಗೆಲ್ಲಬೇಕು...’

ರಾಯಚೂರಿನಲ್ಲಿ ಹುಟ್ಟಿ ಕರ್ನಾಟಕ ಮತ್ತು ರೈಲ್ವೇಸ್‌ ಎರಡೂ ತಂಡಗಳ ಪರ ಆಡಿದ್ದ ಕೆ.ಟಿ. ಯರೇಗೌಡ ಅವರ ಮನದ ಮಾತು­ಗಳಿವು. 1994-95ರಲ್ಲಿ ಕರ್ನಾಟಕ ತಂಡದಿಂದ ರಣಜಿಗೆ ಪದಾರ್ಪಣೆ ಮಾಡಿದ್ದ ಯರೇಗೌಡ ಅವರು ನಂತರದ ವರ್ಷಗಳಲ್ಲಿ ರೈಲ್ವೇಸ್ ಸೇರಿಕೊಂಡರು. 2006-07ರಲ್ಲಿ ರಾಜ್ಯ ತಂಡಕ್ಕೆ ಮರಳಿ ಎರಡು ರಣಜಿ ಋತುಗಳಲ್ಲಿ ಆಡಿದ್ದರು. ಕರ್ನಾಟಕದ ಪರ 17 ಮತ್ತು ರೈಲ್ವೇಸ್ ಪರ 102 ಪಂದ್ಯಗಳನ್ನು ಆಡಿದ್ದಾರೆ.

ಇಲ್ಲಿನ ಕರ್ನೈಲ್‌ ಸಿಂಗ್‌ ಕ್ರೀಡಾಂ­ಗಣ­ದಲ್ಲಿ ರೈಲ್ವೇಸ್ ತಂಡ ಬರೋಡ­ವನ್ನು ಮಣಿಸಿ 2001-02ರಲ್ಲಿ ಮೊದಲ ಬಾರಿಗೆ ರಣಜಿ ಟ್ರೋಫಿ

ಎತ್ತಿ ಹಿಡಿದಿತ್ತು. ಆಗ ಯರೇಗೌಡ ತಂಡ­ದಲ್ಲಿ­ದ್ದರು. ಯರೇಗೌಡ ಅವರಷ್ಟೇ ಅಲ್ಲದೆ ಕರ್ನಾಟಕದ ಎ.ಆರ್‌. ಕೃಷ್ಣಸ್ವಾಮಿ (3 ಪಂದ್ಯಗಳು), ಬಿ.ಕೆ. ಕುಂದರನ್ (21), ಸೈಯದ್‌ ಕಿರ್ಮಾನಿ (3) ಮತ್ತು ಆರ್‌.ಕೆ. ಕನ್ವೀಲ್‌ಕರ್‌ (6) ರೈಲ್ವೇಸ್‌ ತಂಡ­ವನ್ನು ಪ್ರತಿನಿಧಿಸಿದ್ದರು. ಈಗ ಕರ್ನಾಟಕ ಮತ್ತು ರೈಲ್ವೇಸ್‌ ನಡುವೆ ರಣಜಿ ಪಂದ್ಯ ನಡೆಯುತ್ತಿ­ರುವ ಕಾರಣ ಯರೇಗೌಡ ‘ಪ್ರಜಾವಾಣಿ’ ಜತೆ ಹಿಂದಿನ ನೆನಪುಗಳನ್ನು ಹಂಚಿ­ಕೊಂಡಿದ್ದಾರೆ.

*ಈ ಸಲದ ರಣಜಿಯಲ್ಲಿ ಕರ್ನಾಟಕ ತಂಡದ ಪ್ರದರ್ಶನದ ಬಗ್ಗೆ ಹೇಳಿ?
ಕರ್ನಾಟಕ ಮೊದಲ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆದು ತನ್ನ ಸಾಮರ್ಥ್ಯ ಏನೆಂಬುದನ್ನು ಸಾಬೀತು ಪಡಿಸಿದೆ. ಈ ತಂಡ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗಗಳಲ್ಲಿ ಸಮರ್ಥ­ವಾಗಿದೆ. ಎಂಥದ್ದೇ ಕಠಿಣ ಪರಿಸ್ಥಿತಿ­ಯನ್ನು ನಿಭಾಯಿಸಬಲ್ಲ ಶಕ್ತಿ ಹೊಂದಿದೆ. ಮುಂದಿನ ಪಂದ್ಯಗಳಲ್ಲಿ­ಯೂ ಇದೇ ರೀತಿಯ ಪ್ರದರ್ಶನ ಮುಂದುವರಿಸಿದರೆ ರಣಜಿ ಟ್ರೋಫಿ ಉಳಿಸಿಕೊಳ್ಳುವಲ್ಲಿ ಅನುಮಾನವಿಲ್ಲ.

*ರೈಲ್ವೇಸ್‌ ತಂಡದ ಪ್ರದರ್ಶನ ಹೇಗಿದೆ?
ರೈಲ್ವೇಸ್ ತಂಡ ಆರಂಭದ ಪಂದ್ಯಗಳಲ್ಲಿ ಮಧ್ಯಪ್ರದೇಶ ಮತ್ತು ಮುಂಬೈ ಎದುರು ಡ್ರಾ ಮಾಡಿಕೊಂಡರೂ ಇನಿಂಗ್ಸ್ ಮುನ್ನಡೆ ಪಡೆದು ಪಾಯಿಂಟ್‌ ಹಂಚಿಕೊಂಡಿದ್ದು ಒಳ್ಳೆಯ ಹೆಜ್ಜೆ. ಯಾವುದೇ ತಂಡಕ್ಕಾಗಲಿ ಉತ್ತಮ ಆರಂಭ ಲಭಿಸಬೇಕು. ರೈಲ್ವೇಸ್ ಬೌ­ಲಿಂ­ಗ್‌­ನಲ್ಲಿ ಬಲಿಷ್ಠವಾಗಿದೆ. ಆದರೆ, ಬ್ಯಾಟಿಂಗ್‌ ವಿಭಾಗ ಸುಧಾರಿಸಬೇಕು.

*ನಿಮ್ಮ ಬೆಂಬಲ ಯಾವ ತಂಡಕ್ಕೆ?
ರಣಜಿ ಚಾಂಪಿಯನ್‌ ಕರ್ನಾಟಕ ಬಲಿಷ್ಠವಾಗಿದೆ. ಋತುವಿನಲ್ಲಿ ಒಂದೂ ಸೋಲು ಕಾಣದ ರೈಲ್ವೇಸ್‌ ಕೂಡಾ ಕಠಿಣ ಹೋರಾಟ ತೋರುತ್ತಿದೆ. ಯಾವ ತಂಡ ಗೆದ್ದರೂ ನನಗೆ ಬೇಸರವಿಲ್ಲ. ಒಟ್ಟಿನಲ್ಲಿ ಕ್ರಿಕೆಟ್‌ ಪ್ರೀತಿ ಗೆಲ್ಲಬೇಕು.

*ರೈಲ್ವೇಸ್‌ ತಂಡದಲ್ಲಿ ನಿಮಗಿರುವ ಅತ್ಯಂತ ಖುಷಿಯ ಕ್ಷಣ?
ರಣಜಿ ಟ್ರೋಫಿ ಗೆಲ್ಲಬೇಕೆನ್ನುವುದು ಪ್ರತಿ ತಂಡದ ಕನಸಾಗಿರುತ್ತದೆ. ರೈಲ್ವೇಸ್‌ ಮೊದಲ ಬಾರಿಗೆ ಈ ಸಾಧನೆ ಮಾಡಿದಾಗ ನಾನೂ ತಂಡದಲ್ಲಿದ್ದೆ ಎನ್ನುವುದೇ ಹೆಮ್ಮೆ. ಇದು ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದ ಸಂದರ್ಭ.

*ಕರ್ನಾಟಕ ತಂಡದಲ್ಲಿ ಸ್ಮರಣೀಯ ನೆನಪು ಯಾವುದು?
ತವರಿನ ತಂಡದಲ್ಲಿ ಆಡಿದ ಪ್ರತಿ ಪಂದ್ಯವೂ ಸ್ಮರಣೀಯ. ಕರ್ನಾಟಕ­ವನ್ನು ಪ್ರತಿನಿಧಿಸಿದ್ದ ಮೊದಲ ರಣಜಿ ಋತುವಿನ ಪ್ರತಿಪಂದ್ಯವೂ ನನಗೆ ಖುಷಿ ನೀಡಿದೆ. ಏಕೆಂದರೆ ಹುಟ್ಟೂರಿನ ತಂಡದಲ್ಲಿ ಆಡುವುದೇ ಹೆಮ್ಮೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT