ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪ ವೀಣೆ ಮೀಟುವ ಚಿಕ್ಕ ಲಾಲ್‌ಬಾಗ್

Last Updated 24 ಜುಲೈ 2016, 19:30 IST
ಅಕ್ಷರ ಗಾತ್ರ

ಅವಾಗ ಬರೀ ಬೆಂಗಳೂರು. ಈಗ ಭಾರೀ ಬೆಂಗಳೂರು. ಬೆಂಗಳೂರು ಸ್ಥಾಪಿಸಿದ ಕೆಂಪೇಗೌಡ ಬೆಂಗಳೂರು ಸುತ್ತ ನಾಲ್ಕು ಗೋಪುರಗಳನ್ನು ಕಟ್ಟಿಸಿದ್ದರು. ಅಷ್ಟರೊಳಗೆ ಬೆಂಗಳೂರು ಅಂತ ಅವರ ಕಲ್ಪನೆಯಾಗಿತ್ತು. ಆದರೆ, ಈಗ ಕೆಂಪೇಗೌಡರ ಕಲ್ಪನೆಗೂ ಮೀರಿ ನಗರ ಬೆಳೆದಿದೆ.

ಆ ದಿನಗಳಲ್ಲಿ...
ನಾನು ಕಂಡ ಅಂದಿನ ಬೆಂಗಳೂರಿನಲ್ಲಿ 25–30 ಲಕ್ಷ ಜನಸಂಖ್ಯೆ ಇತ್ತು. ಇಲ್ಲಿನ ಹವಾಗುಣ ಬಹಳ ಚೆನ್ನಾಗಿತ್ತು. ಎಲ್ಲೆಲ್ಲೂ ಶಾಂತ ವಾತಾವರಣ. ಸುಂದರವಾದ ನಿಸರ್ಗವಿತ್ತು. ಕಾಲಕಾಲಕ್ಕೆ ಸರಿಯಾಗಿ ಮಳೆಯಾಗುತ್ತಿತ್ತು. ಒಟ್ಟಿನಲ್ಲಿ ಅದ್ಭುತವಾದ ವ್ಯವಸ್ಥೆ ಇದ್ದಂತಹ ದಿನಗಳವು. ಅಂದಿಗೂ ಇಂದಿಗೂ ನೋಡಿದಾಗ ಆ ಬೆಂಗಳೂರೇ ಬೇರೆ, ಈ ಬೆಂಗಳೂರೇ ಬೇರೆ. ಈಗ ಬಹಳ ಬದಲಾವಣೆಗಳಾಗಿ ಬಿಟ್ಟಿವೆ.

ಕನ್ನಡ ಚಳವಳಿಗೆ ನಾಂದಿ
ಅವಾಗಲೇ ಕನ್ನಡದಲ್ಲಿ ಮಾತನಾಡುವುದು ಕಷ್ಟವಿತ್ತು. ಅಂದಿನಿಂದಲೇ, ಅಂದರೆ  1961–62ರಲ್ಲೇ ಕನ್ನಡ ಚಳವಳಿ ಹೋರಾಟ ಶುರುವಾಯಿತು. ಸಾಹಿತಿ ಅ.ನ.ಕೃಷ್ಣರಾಯರು, ರಾಮಮೂರ್ತಿ ಒಂದೆಡೆಯಾದರೆ, ನನ್ನದು ಮತ್ತೊಂದು ಬಗೆಯ ಚಳವಳಿ. 1961ರಿಂದ 72ರವರೆಗೆ ಬೆಂಗಳೂರಿನಲ್ಲಿ ನಡೆದ ಕನ್ನಡ ಚಳವಳಿ ಐತಿಹಾಸಿಕ ಹೋರಾಟವಾಗಿತ್ತು. ಆಗ ರಸ್ತೆರಸ್ತೆಗಳಲ್ಲೂ ಕನ್ನಡ ಹೋರಾಟ ನಡೆಯುತ್ತಿತ್ತು. ಅಂದಿನ ಹೋರಾಟವಷ್ಟೇ ಅಲ್ಲ, ಹೋರಾಟಗಾರರೂ ಪ್ರಾಮಾಣಿಕರಾಗಿದ್ದರು.
ಬೆಂಗಳೂರಿನಲ್ಲಿ ಸುಮಾರು 50 ವರ್ಷಗಳ ಹಿಂದೆಯೇ ಕನ್ನಡ ಚಿತ್ರಗಳಿಗೆ  ಥಿಯೇಟರ್ ಇರಲಿಲ್ಲ.

ರಾಜಕುಮಾರ್, ನರಸಿಂಹರಾಜು, ಬಾಲಕೃಷ್ಣ, ಜಿ.ವಿ. ಅಯ್ಯರ್ ಸೇರಿ ‘ರಣಧೀರ ಕಂಠೀರವ’  ಚಿತ್ರ ನಿರ್ಮಿಸಿದರು. ಆಗ ಆ ಚಿತ್ರಕ್ಕೆ ಥಿಯೇಟರ್ ಸಿಗಲಿಲ್ಲ. ಆಗ ನಾನು ಗಲಾಟೆ ಮಾಡಿ ಮೆಜೆಸ್ಟಿಕ್‌ ವೃತ್ತದ ‘ಹಿಮಾಲಯ’ ಟಾಕೀಸ್‌ನಲ್ಲಿ ಸಿನಿಮಾ ಓಡುವಂತೆ ಮಾಡಿದ್ದೆ.

ಹುಲ್ಲುಛತ್ರ
ಮೆಜೆಸ್ಟಿಕ್‌ನಲ್ಲಿ ಹುಲ್ಲುಛತ್ರ ಇತ್ತು. ಇವತ್ತು ಅದೂ ಇಲ್ಲ. ಹಸುಗಳು–ದನಗಳಿಗೆ ಅಲ್ಲಿ ಮೇವು ದೊರೆಯುತ್ತಿತ್ತು. ಹುಲ್ಲುಛತ್ರದ ಸುತ್ತ ಸರ್ಪಭೂಷಣ, ತಿಪ್ಪಶೆಟ್ಟಿ ಸೇರಿದಂತೆ ಐದು ಮಠಗಳಿದ್ದವು. ಈ ಮಠಗಳ ಪಕ್ಕದಲ್ಲೇ ಅಣ್ಣಮ್ಮ ದೇವಿಯ ದೇವಸ್ಥಾನವಿದೆ. ಅಣ್ಣಮ್ಮದೇವಿ ಬೆಂಗಳೂರಿನ ದೇವತೆ. ಅಣ್ಣಮ್ಮದೇವಿಯನ್ನು 1961ರಿಂದ ಕನ್ನಡದ ತಾಯಿ ಭುವನೇಶ್ವರಿ  ಎಂದು ನಾವು ಮೆರವಣಿಗೆ ಮಾಡುತ್ತಿದ್ದೇವೆ. ಈಗ ಆ ದೇವಸ್ಥಾನವೇ ಕಾಣದಂತಾಗಿದೆ. ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳೆಲ್ಲಾ ವ್ಯಾಪಾರ ಕೇಂದ್ರಗಳಾಗಿವೆ. ಎಲ್ಲೆಡೆಯೂ ದೊಡ್ಡ ಕಟ್ಟಡಗಳೇ ಕಾಣುತ್ತಿವೆ.

ಚಿಕ್ಕ ಲಾಲ್‌ಬಾಗ್‌
ಬೆಂಗಳೂರಿನಲ್ಲಿ ಎರಡು ಲಾಲ್‌ಬಾಗ್‌ಗಳಿವೆ. ಒಂದು ದೊಡ್ಡ ಲಾಲ್‌ಬಾಗ್‌, ಮತ್ತೊಂದು ಚಿಕ್ಕ ಲಾಲ್‌ಬಾಗ್. ದೊಡ್ಡ ಲಾಲ್‌ಬಾಗ್‌ ಎಲ್ಲರಿಗೂ ಗೊತ್ತು ಆದರೆ, ಚಿಕ್ಕ ಲಾಲ್‌ಬಾಗ್‌ ಎಷ್ಟು ಜನರಿಗೆ ಗೊತ್ತು? ಈ ಚಿಕ್ಕ ಲಾಲ್‌ಬಾಗ್‌ಗೆ  ದೊಡ್ಡ ಇತಿಹಾಸವೇ ಇದೆ. ಇದನ್ನು ಮೊದಲು  ‘ತುಳಸಿ ತೋಟ’ ಅಂತ ಕರೆಯುತ್ತಿದ್ದರು. ತುಳಸಿ ಎನ್ನುವ ಹೆಣ್ಣುಮಗಳು ಅದನ್ನು ರೂಪಿಸಿದ್ದು. ಈಗಲೂ ಅಲ್ಲಿ ‘ತುಳಸಿ ತೋಟಕ್ಕೆ ದಾರಿ’ ಅಂತ ಫಲಕ ಇದೆ. ಅಂದಿನ ಬೆಂಗಳೂರು ನಗರಸಭೆ ತೋಟವನ್ನು ತನ್ನ ವಶಕ್ಕೆ ಪಡೆದು, ‘ಚಿಕ್ಕ ಲಾಲ್‌ಬಾಗ್‌’ ಅಂತ ನಾಮಕರಣ ಮಾಡಿತು.

ಚಿಕ್ಕಲಾಲ್‌ಬಾಗ್ ಹೋರಾಟಗಾರರ ನೆಚ್ಚಿನ ತಾಣ. ಇಲ್ಲಿ ಎಲ್ಲ ಪಕ್ಷದ ಪ್ರಮುಖ ನಾಯಕರು ಸಭೆ ನಡೆಸಿದ್ದಾರೆ.  ಅನೇಕ ಐತಿಹಾಸಿಕ ಸಭೆ ಮತ್ತು ಹೋರಾಟಗಳಿಗೆ ಸಾಕ್ಷಿಯಾಗಿದೆ.

ಕೇರಳದ ಕಮ್ಯುನಿಸ್ಟ್‌ ಪಕ್ಷದ ನಾಯಕ  ಇ.ಎಸ್‌.ನಂಬೂದರಿ ಪಾಡ್‌,   ತಮಿಳುನಾಡಿನ ಹೋರಾಟಗಾರರಾದ ಡಿ.ಕೆ.ನಾಯ್ಕರ್, ಅಣ್ಣಾದೊರೆ, ರಾಮಮೂರ್ತಿ, ಕಾಂಗ್ರೆಸ್‌ ಅಧ್ಯಕ್ಷ ಯು.ಎನ್.ದೇಬರ್‌,  ರಾಷ್ಟ್ರಕವಿ ಕುವೆಂಪು ಸೇರಿದಂತೆ ಅನೇಕರು ಇಲ್ಲಿ ಭಾಷಣ ಮಾಡಿದ್ದಾರೆ. ಮೂರು ದಶಕಗಳ ಕಾಲ ನಾವೂ ಇಲ್ಲಿಯೇ ಚಳವಳಿ ಮಾಡಿದ್ದೇವೆ.

ಉದ್ಯಾನದ ಪಕ್ಕದಲ್ಲೇ ಮಸ್ತಾನ್‌ ಸಾಹೇಬರ ದರ್ಗಾ ಇದೆ. ಇದು ಹಿಂದೂ ಮುಸ್ಲಿಮರಿಗೆ ಬೇಕಾದಂಥ ದರ್ಗಾ. ಈಗಲೂ ನಾನು ಅಲ್ಲಿಗೆ ಹೋಗುತ್ತಿರುತ್ತೇನೆ. ಅಂದು ಅಷ್ಟು ಪ್ರಸಿದ್ಧವಾಗಿದ್ದ ಚಿಕ್ಕ ಲಾಲ್‌ಬಾಗ್ ಇಂದು ಹೇಳ ಹೆಸರಿಲ್ಲದಾಗಿದೆ. ವಿನಾಶದ ಅಂಚಿನಲ್ಲಿದೆ. ಇಲ್ಲಿನ ಸುತ್ತಮುತ್ತಲಿನ ಪ್ರದೇಶ ಆಧುನೀಕರಣವಾಗಿ ಇಂದು ಚಿಕ್ಕ ಲಾಲ್‌ಬಾಗ್ ಗೋಚರಿಸದಂತಾಗಿದೆ.

ದರ್ಗಾದ ಹತ್ತಿರವೇ ಅರಳೆಪೇಟೆ ಅಂತ ಇತ್ತು. ಅಲ್ಲಿಯೇ ಸ್ವಾತಂತ್ರ್ಯ ಹೋರಾಟಗಾರ ಕೆ.ಟಿ.ಭಾಷ್ಯಂ ಅವರ ಮನೆ ಇತ್ತು. ಅಲ್ಲಿಯೇ ಗುಬ್ಬಿ ತೋಟದಪ್ಪನ ಛತ್ರ ಇತ್ತು. ತೋಟದಪ್ಪ ದೊಡ್ಡ ಧರ್ಮ ಪ್ರವರ್ತಕ ಆಗಿದ್ದರು. ಈ ಛತ್ರದಲ್ಲಿ  ಊಟ ವಸತಿ ಉಚಿತ.  ಬಡಬಗ್ಗರು ಯಾರೇ ಬರಲಿ ಅಲ್ಲಿ ಉಳಿಯಬಹುದಿತ್ತು.

ಧರ್ಮಾಂಬುಧಿ ಕೆರೆ ಮೈದಾನ
ಸಿಟಿ ರೈಲ್ವೆ ನಿಲ್ದಾಣದ ಎದುರು ಧರ್ಮಾಂಬುಧಿ ಕೆರೆ ಇತ್ತು. ಆಗ ಅದು ಬರಿಯ ಕೆರೆಯ ಮೈದಾನ. ಸ್ವಾತಂತ್ರ್ಯ ಹೋರಾಟಗಾರ ನಾರಿಮನ್‌ ಅವರು ಅದನ್ನು ಸುಭಾಷ್ ನಗರ ಕೆರೆ ಎಂದು ಕರೆದರು. ಈಗ ಅಲ್ಲಿ ಕೆರೆ ಇಲ್ಲ. ಅದು ‘ಕೆಂಪೇಗೌಡ ಬಸ್‌ ನಿಲ್ದಾಣ’ ಆಗಿಬಿಟ್ಟಿದೆ.

ಈ ಸ್ಥಳ ನಮ್ಮ ಚಳವಳಿಗಳಿಗೆ ಹೇಳಿ ಮಾಡಿಸಿದ ಮೈದಾನವಾಗಿತ್ತು. ಅಲ್ಲಿ ನೂರಾರು ಚಳವಳಿಗಳು, ಮೆರವಣಿಗೆಗಳು, ಸಭೆಗಳು ನಡೆದಿವೆ. ಮೆಜೆಸ್ಟಿಕ್‌ ಬಸ್‌ನಿಲ್ದಾಣದಲ್ಲಿರುವ ಕಟ್ಟೆ ‘ವಾಟಾಳ್ ಕಟ್ಟೆ’ ಎಂತಲೇ ಪ್ರಸಿದ್ಧಿ ಪಡೆದಿದೆ.

ಬೂಟಿನೇಟು ತಿಂದದ್ದು
1962ರಲ್ಲಿ ‘ಅಲಂಕಾರ್’ ಟಾಕೀಸ್‌ನಲ್ಲಿ ಹಿಂದಿ ಚಿತ್ರ ಪ್ರದರ್ಶನವಾಗುತ್ತಿತ್ತು. ಕನ್ನಡ ಚಿತ್ರ ಪ್ರದರ್ಶಿಸಬೇಕೆಂದು ಗಲಾಟೆ ಮಾಡಿ, ಟಾಕೀಸ್‌ಗೆ ನುಗ್ಗಿ ನಾವು ಕೆಲ ಹೋರಾಟಗಾರರು ಬೆಂಕಿ ಹಚ್ಚಿದ್ದೆವು.  1962 ಸೆಪ್ಟೆಂಬರ್ 7ರಂದು ಕೆಂಪೇಗೌಡ ರಸ್ತೆಯಲ್ಲಿ ಕನ್ನಡಕ್ಕಾಗಿ ಭಾರೀ ಹೋರಾಟ ನಡೆದಿತ್ತು. ಆ ಹೋರಾಟದಲ್ಲಿ ನನ್ನನ್ನು ಬಂಧಿಸಿದರು.

ಆಗ ಉಪ್ಪಾರಪೇಟೆಯ ಪೊಲೀಸ್‌ ಠಾಣೆಯಲ್ಲಿ ಲೂಯಿಸ್ ಎನ್ನುವ ಖಡಕ್ ಪೊಲೀಸ್ ಅಧಿಕಾರಿಯೊಬ್ಬರಿದ್ದರು. ಅವರು ನನಗೆ ಬೂಟಿನಲ್ಲಿ ಹೊಡೆದರು. ಆಗ ನಾನು ‘ಬೂಟಿನೇಟಲ್ಲ. ಬಂದೂಕಿನೇಟು ಕೊಟ್ಟರೂ ನನ್ನ ರಕ್ತ ಕನ್ನಡ’ ಎಂದು ಹೇಳಿದ್ದೆ.

ಸದನದಲ್ಲಿ ಚರ್ಚೆ
ಬೂಟಿನೇಟಿನ ಬಗ್ಗೆ ಆಗ ಸದನದಲ್ಲಿ ಕಾವೇರಿದ ಚರ್ಚೆಯಾಗಿತ್ತು. ಎಸ್. ನಿಜಲಿಂಗಪ್ಪ ಅವರು ಮುಖ್ಯಮಂತ್ರಿ ಆಗಿದ್ದರು. ಸದನದಲ್ಲಿ ಶಾಂತವೇರಿ ಗೋಪಾಲಗೌಡರು ಸರ್ಕಾರದ ವಿರುದ್ಧ ಕಿಡಿಕಾರಿ ಮಾತನಾಡಿದರು. ‘ಕನ್ನಡ ಪರ ಹೋರಾಡುವವರಿಗೆ ನಿಮ್ಮ ಸರ್ಕಾರ ಬೂಟಿನೇಟು ನೀಡುತ್ತಿದೆ’ ಎಂದು ಟೀಕಿಸಿದರು. ಬಹಳ ಅದ್ಭುತವಾದ  ಚರ್ಚೆ ನಡೆಯಿತು. ಸದನದಲ್ಲಿ ಅದಕ್ಕೆ ಒಕ್ಕೊರಲಿನಿಂದ ಬೆಂಬಲ ದೊರೆಯಿತು.

ಆಗ ಮುಖ್ಯಮಂತ್ರಿ ನಿಜಲಿಂಗಪ್ಪ ಅವರು ಗೋಪಾಲಗೌಡರ ವಾದವನ್ನು ಸಮರ್ಥಿಸಿಕೊಂಡು, ‘ನನಗೂ ನೋವಾಗಿದೆ. ನಿಮ್ಮ ನೋವಿನಲ್ಲಿ ನಾನೂ ಇದ್ದೇನೆ’ ಎಂದು ಹೇಳಿ, ಆ ಪೊಲೀಸ್‌ ಅಧಿಕಾರಿಯನ್ನು ದಿಲ್ಲಿಗೆ ವರ್ಗಾವಣೆ ಮಾಡಿದರು.

ಸೀರೆ ಉಟ್ಟ ಪ್ರಸಂಗ
ಕನ್ನಡಿಗರ ಸಮಗ್ರ ಬೇಡಿಕೆಗೆ ಒತ್ತಾಯಿಸಿ 1962ರಲ್ಲಿ ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿತ್ತು. ವಾಟಾಳ್ ಎಲ್ಲೇ ಇದ್ದರೂ ಬಂಧಿಸಬೇಕೆಂದು ಆದೇಶ ಹೊರಡಿಸಲಾಗಿತ್ತು.ಆಗ ನಾನು ಪೊಲೀಸರಿಂದ ತಪ್ಪಿಸಿಕೊಂಡಿದ್ದೆ. ನಾನು ಧರ್ಮಾಂಬುಧಿ ಕೆರೆ ಮೈದಾನಕ್ಕೆ ಬಂದು ‘144 ಸೆಕ್ಷನ್ ಬ್ರೇಕ್ ಮಾಡ್ತೀನಿ’ ಅಂತ ಚಳವಳಿಗಾರರಿಗೆ ತಿಳಿಸಿದ್ದೆ.

ಹನುಮಂತನಗರದಲ್ಲಿ ಜಾಗೀರ್‌ದಾರ್ ಅಂತ ಹಿರಿಯ ಪತ್ರಕರ್ತರೊಬ್ಬರು ಇದ್ದರು. ಅವರು ಶೇಷಪ್ಪನವರ ‘ಕಿಡಿ’ ಪತ್ರಿಕೆ ಮತ್ತು ‘ಜನವಾಣಿ’ ಪತ್ರಿಕೆಗೆ ಬರೆಯುತ್ತಿದ್ದರು.ಅವರ ಮನೆಗೆ ಹೋಗಿ, ಸೀರೆ ಬೇಕೆಂದು ಕೇಳಿದೆ. ಯಾತಕ್ಕೆ ಎಂದೂ ಕೂಡಾ ಕೇಳದೇ ಅವರ ಹೆಂಡತಿ ಬಳಿ ಇದ್ದ ಒಳ್ಳೆಯ ಸೀರೆಯನ್ನೇ ನನಗೆ ಕೊಟ್ಟರು. ಅಲ್ಲಿಂದ ವೀರಭದ್ರಾಚಾರ್ ಎನ್ನುವ ಮೇಕಪ್‌ ಕಲಾವಿದರ ಬಳಿಗೆ ಹೋದೆ.  ನನ್ನನ್ನು ಹೆಣ್ಣಿನಂತೆ ರೆಡಿ ಮಾಡಬೇಕೆಂದು ಕೋರಿದೆ.

ನನ್ನ ಕಾರಿನ ಚಾಲಕನಿಗೆ ಮೊದಲು ನನ್ನನ್ನು ಗುರುತು ಹಿಡಿಯಲು ಆಗಲಿಲ್ಲ. ಆಮೇಲೆ ನಾನೇ  ವಾಟಾಳ್‌ ನಾಗರಾಜ್ ಎಂದು ಮನವರಿಕೆ ಮಾಡಿಕೊಟ್ಟು, ಧೈರ್ಯ ತುಂಬಿ ಆನಂದ ರಾವ್ ವೃತ್ತಕ್ಕೆ ಹೊರಟೆವು.

ಅಲ್ಲಿ ಪೊಲೀಸರು ನನ್ನನ್ನು ಗುರುತಿಸಿಬಿಟ್ಟರು. ಇನ್ನೇನು ಪೊಲೀಸರು ಬಂಧಿಸಬೇಕು ಅನ್ನುವಷ್ಟರಲ್ಲಿ,  ಆಗ ರಾಜ್‌ಮಹಲ್ ಹೋಟೆಲ್ ಪಕ್ಕದ ರಸ್ತೆಯಲ್ಲಿದ್ದ ಆರ್ಯುವೇದಿಕ್ ಆಸ್ಪತ್ರೆ ಗೋಡೆ ಹಾರಲು ಯತ್ನಿಸಿದೆ. ಪೊಲೀಸರು ಬೆನ್ನಟ್ಟಿ ಬಂಧಿಸಿಬಿಟ್ಟರು. ಅಲ್ಲಿಯ ತನಕ ಪೈಪಿನ ಒಳಗೆ ಮಲಗಿದ್ದ ಚಳವಳಿಗಾರರು ನನ್ನ ಬಂಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಪೈಪಿನಿಂದ ಹೊರಗೆ ಬಂದುಬಿಟ್ಟರು. ‘ಪೈಪ್‌ನಿಂದ ಚಳವಳಿಗಾರರು ಹೊರಗೆ: ಸ್ತ್ರೀ ಬಂಧನ’ ಅಂತ ಅಂದಿನ ಪತ್ರಿಕೆಗಳಲ್ಲಿ ವರದಿಯಾಗಿತ್ತು. 

ಹಿರಣ್ಣಯ್ಯ ‘ಲಂಚಾವತಾರ’
ಧರ್ಮಾಂಬುಧಿ ಕೆರೆಯ  ಮೈದಾನದಲ್ಲಿ ಕೆ.ಹಿರಣ್ಣಯ್ಯ ಅವರ ನಾಟಕದ  ಕಂಪನಿ ಬೀಡುಬಿಟ್ಟಿತ್ತು. ಅವರ ‘ಲಂಚಾವತಾರ’ ನಾಟಕ ಅನೇಕ ವರ್ಷಗಳ ತನಕ ನಡೆದದದ್ದು ನನಗೆ ಚೆನ್ನಾಗಿ ನೆನಪಿದೆ. ಇವತ್ತು ಆ ಮೈದಾನ ಎಲ್ಲಿದೆ? ಅಲ್ಲಿ ಮೈದಾನವಿತ್ತು ಎನ್ನುವುದಕ್ಕೆ ಒಂದು ಗುಂಡುಸೂಜಿಯಷ್ಟು ಕುರುಹು ಕಾಣುವುದಿಲ್ಲ.

ಧರ್ಮಾಂಬುಧಿ ಕೆರೆಯ ಖಾಲಿ ಮೈದಾನದಲ್ಲಿ ಪ್ರತಿವರ್ಷ ಕಾಂಗ್ರೆಸ್ ವಸ್ತುಪ್ರದರ್ಶನ ನಡೆಯುತ್ತಿತ್ತು. ಅದರ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದವರು ವಿ.ಎಸ್.ಕೃಷ್ಣ ಅಯ್ಯರ್.
ಮೈಸೂರು ಬ್ಯಾಂಕ್ ವೃತ್ತ ಇತಿಹಾಸ ಪ್ರಸಿದ್ಧವಾದ ಸ್ಥಳ. ಅಲ್ಲಿ ಮೈಸೂರು ಬ್ಯಾಂಕ್‌ ಇದ್ದುದರಿಂದ ಅದು ಮೈಸೂರು ಬ್ಯಾಂಕ್ ಸರ್ಕಲ್ ಎಂದೇ ಪ್ರಸಿದ್ಧಿಯಾಗಿದೆ. ಇಲ್ಲಿಯೂ ನಾನು ಅನೇಕ ಹೋರಾಟಗಳನ್ನು ಮಾಡಿದ್ದೇನೆ. ಹಾಗೆಯೇ ವಿಧಾನಸೌಧದ ಎದುರೂ ಅನೇಕ ಹೋರಾಟಗಳನ್ನು ಮಾಡಿದ್ದೇನೆ.

ಕರ್ನಾಟಕ ರಾಜ್ಯೋತ್ಸವ
ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಅದರಲ್ಲೂ ಬೆಂಗಳೂರು ನಗರದಲ್ಲಿ 1963ರಲ್ಲಿ ಕರ್ನಾಟಕ ರಾಜ್ಯೋತ್ಸವ ಆರಂಭವಾಯಿತು. ಸುಭಾಷ್ ನಗರ ಕೆರೆಯ ಖಾಲಿ ಜಾಗದಲ್ಲಿ ಅನಕೃ, ರಾಮಮೂರ್ತಿ ಅವರು ನಾವು ಮಾಡುವುದಕ್ಕಿಂತ ಎರಡ್ಮೂರು ವರ್ಷ ಮುಂಚೆಯೇ ರಾಜ್ಯೋತ್ಸವ ಆಚರಿಸಿದ್ದರು. ಸರ್ಕಾರ ‘ಕರ್ನಾಟಕ’ ಎಂದು ಹೆಸರಿಡುವುದಕ್ಕಿಂತ ಮುಂಚಿನಿಂದಲೂ ನಾವು ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಿದ್ದೇವೆ.

1973ರ ನವೆಂಬರ್‌ 1ರಂದು ಅಂದಿನ ಮುಖ್ಯಮಂತ್ರಿ ದೇವರಾಜು ಅರಸು ಅವರು ಮೈಸೂರು ರಾಜ್ಯವನ್ನು ‘ಕರ್ನಾಟಕ’ ಎಂದು ನಾಮಕರಣ  ಮಾಡಿದರು. ಆಗ ಅಸೆಂಬ್ಲಿಯಲ್ಲಿ ಅರಸು ಅವರ ಮೇಲೆ ಮಲ್ಲಿಗೆ, ಸಂಪಿಗೆ ಹೂವು ಚೆಲ್ಲಿ ಅಭಿನಂದಿಸಿದ್ದೆ. ಅದನ್ನು ಈಚೆಗೆ ನಿಧನರಾದ ಹಿರಿಯ ಪತ್ರಕರ್ತ ಜಯಶೀಲ ರಾವ್ ಅವರು ತಮ್ಮ ‘ಸದನ ಸಮೀಕ್ಷೆ’ಯಲ್ಲಿ ಬರೆದಿದ್ದರು. ಅವೆಲ್ಲಾ ನಾನೂ ಎಂದಿಗೂ ಮರೆಯಲಾಗದ ಐತಿಹಾಸಿಕ ಕ್ಷಣಗಳು. 

ಸೆಂಟ್ರಲ್ ಕಾಲೇಜು ಮೈದಾನ
ನವೆಂಬರ್ 1, 1956ರಂದು ಇದೇ ಮೈದಾನದಲ್ಲಿಯೇ ಕರ್ನಾಟಕದ ಏಕೀಕರಣ ಘೋಷಣೆಯಾಗಿದ್ದು. ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಸಮಾರಂಭವನ್ನು ಉದ್ಘಾಟಿಸಿದರು. ಮೈಸೂರಿನ ರಾಜ ಪ್ರಮುಖರಾಗಿದ್ದ  ಜಯಚಾಮರಾಜೇಂದ್ರ ಒಡೆಯರ್, ಮುಖ್ಯಮಂತ್ರಿಯಾಗಿದ್ದ ಎಸ್‌.ನಿಜಲಿಂಗಪ್ಪ, ಹಿರಿಯರಾದ ಕೆಂಗಲ್ ಹನುಮಂತಯ್ಯ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಸಮಾರಂಭದಲ್ಲಿ ಪಿ.ಕಾಳಿಂಗರಾಯರು ಹುಯಿಲಗೋಳ ನಾರಾಯಣರಾಯರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆಯನ್ನು ‘ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು’ ಎಂದು ಹಾಡಿದರು. ಅವರ ಹಾಡಿಗೆ ಮೆಚ್ಚಿ ಸರ್ಕಾರದಿಂದ ಒಂದು ಸಾವಿರ ರೂಪಾಯಿ ಸಂಭಾವನೆ ನೀಡಲಾಗಿತ್ತು. ಆ ಮೈದಾನ ಮಾತ್ರ ಇಂದಿಗೂ ಹಾಗೇ ಉಳಿದಿದೆ ಅದು ನಮ್ಮ ಸುದೈವ. ಆ ಮೈದಾನವನ್ನು ಬದಲಾಯಿಸಲು ಅನೇಕರು ಪ್ರಯತ್ನಿಸಿದರು. ಆದರೆ, ನಾವು ಬಿಡಲಿಲ್ಲ.

ಚಳವಳಿಯ ಆಕರ್ಷಣೆ
ಕನ್ನಡ ಚಳವಳಿ ಎಂದಾಗ ಥಟ್ಟನೆ ನೆನಪಾಗುವವರು ವಾಟಾಳ್ ನಾಗರಾಜ್‌.  ವಿಭಿನ್ನ ರೀತಿಯ ಚಳವಳಿಗಳಿಂದಲೇ ಜನಪ್ರಿಯರಾದರು. ಜನ್ಮದಿನಾಂಕ ಹೇಳಿಕೊಳ್ಳಲು ಮುಜುಗರ ಪಡುವ ಅವರ 51ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಸೆ.7, 2012ರಂದು ಆಚರಸಿದ್ದರು. ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷರಾಗಿರುವ ಅವರು ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾಗಿಯೂ ಕ್ರಿಯಾಶೀಲರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT