ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನೆ ನೆನೆ ಗುರುವ

ಶಿಕ್ಷಕರ ದಿನ ವಿಶೇಷ
Last Updated 4 ಸೆಪ್ಟೆಂಬರ್ 2015, 19:41 IST
ಅಕ್ಷರ ಗಾತ್ರ

‘ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ, ಗುರು ಸಾಕ್ಷಾತ್‌ ಪರಬ್ರಹ್ಮ ತಸ್ಮೈ ಶ್ರೀ ಗುರುವೇನಮಃ’– ಗುರು ಎಂದಾಕ್ಷಣ ಪ್ರತಿಯೊಬ್ಬರ ಮನದಲ್ಲೂ ಈ ವಾಕ್ಯ ನೆನಪಾಗುತ್ತದೆ. ಪ್ರತಿಯೊಬ್ಬರ ಜೀವನದ ಗುರಿ, ಸಾಧನೆಯ ಹಿಂದೆ ಗುರು ಒಬ್ಬ ಇರುತ್ತಾನೆ. ‌‌
ಗುರು ಎಂದರೆ ಕೇವಲ ಶಾಲೆಯಲ್ಲಿ ಕಲಿಸಿದ ಲಲಿತಾ ಟೀಚರ್‌, ಗುಂಡಣ್ಣ ಮೇಷ್ಟ್ರು, ರಂಗಪ್ಪ ಮೇಷ್ಟ್ರು ಮಾತ್ರ ಆಗಿರಬೇಕಿಲ್ಲ. ಉತ್ತಮ ಭವಿಷ್ಯ ರೂಪಿಸಿದ ಪ್ರತಿಯೊಬ್ಬರು ಕೂಡ ನಮ್ಮ ಪಾಲಿನ ಗುರುವಾಗುತ್ತಾರೆ.

ಅಂಬೆಗಾಲಿಟ್ಟು ನಡೆದು ಎಡವಿ ಬಿದ್ದಾಗ ಹೆಜ್ಜೆಯೂರಲು ಕಲಿಸಿದ ತಾಯಿ,   ತಪ್ಪು ಮಾಡಿದಾಗ ಬೈದು ಬುದ್ಧಿ ಹೇಳಿದ ತಂದೆ, ಶಿಕ್ಷಣ, ಮಾರ್ಗದರ್ಶನ ನೀಡಿ ಉನ್ನತ ಹುದ್ದೇಗೇರಲು ಕಾರಣವಾದ ಶಿಕ್ಷಕರು, ನಾವೆಲ್ಲೋ ದಾರಿ ತಪ್ಪಿ ನಡೆದಾಗ ಬುದ್ಧಿ ಹೇಳಿ ಸರಿ ದಾರಿಯಲ್ಲಿ ನಡೆಸುವ ಸ್ನೇಹಿತರು, ಮಾಡಿದ ತಪ್ಪನ್ನು ಮನ್ನಿಸಿ ಜೀವನ ಪಾಠ ಹೇಳುವ ಅಣ್ಣ ... ಹೀಗೆ ಜೀವನದ ಹಾದಿಯಲ್ಲಿ ಹಲವರು ಶಿಕ್ಷಕನ ಪಾತ್ರವನ್ನು ನಿರ್ವಹಿಸುತ್ತಾರೆ.

ಶಾಲೆ, ಕಾಲೇಜು ದಿನಗಳಲ್ಲಿ ನಾವು ಮಾಡಿದ ಕೀಟಲೆಗಳೆಲ್ಲವನ್ನು ಸಹಿಸಿಕೊಂಡು, ನಾವೆಷ್ಟೇ ದಡ್ಡರಾಗಿದ್ದರೂ ನಿನ್ನಲ್ಲೂ ಸಾಮರ್ಥ್ಯವಿದೆ, ನೀನು ಬುದ್ಧಿವಂತ ಎಂದು ಹುರಿದುಂಬಿಸುವ ಶಿಕ್ಷಕರ ಗುಣ ಅವಿಸ್ಮರಣೀಯ.

ಹುಟ್ಟಿದ ಗಳಿಗೆಯಿಂದ ಸಾಯುವವರೆಗೂ ಪ್ರತಿ ಹಂತದಲ್ಲೂ ಗುರುವಿಲ್ಲದೆ ಬದುಕು ಅಸಾಧ್ಯ. ಕೆಲವೊಮ್ಮೆ ಬದುಕಿನ ಅನುಭವವೂ ನಮಗೆ ಗುರುವಾಗುತ್ತದೆ. ನಮ್ಮ ಭವಿಷ್ಯ ರೂಪಿಸುವ ಶಿಕ್ಷಕರನ್ನು ನೆನೆಸಿಕೊಳ್ಳುವ ಶಿಕ್ಷಕರ ದಿನ ಮತ್ತೆ ಬಂದಿದೆ. ಸರ್ವಪಲ್ಲಿ ರಾಧಾಕೃಷ್ಣ ಅವರು ತಮ್ಮ ಜನ್ಮದಿನಾಚರಣೆಯನ್ನು ಶಿಕ್ಷಕರಿಗಾಗಿ ಮೀಸಲಿರಿಸಿದ ಈ ದಿನದಂದು  ಕೆಲವರು ತಾವು ಮೆಚ್ಚಿದ ಶಿಕ್ಷಕರ ಕುರಿತು ಅನಿಸಿಕೆ ಹಂಚಿಕೊಂಡಿದ್ದಾರೆ.

***
ಶಿಕ್ಷಕರು ಎಂದರೆ ಕೇವಲ ಶಾಲೆಗೆ ಸೀಮಿತವಾಗಿರಿಸಲಾಗುವುದಿಲ್ಲ.  ಜೀವನದ ಪ್ರತಿ ಹಂತದಲ್ಲೂ ಪಾಠ ಕಲಿಸುವ ಪ್ರತಿಯೊಬ್ಬರು ಶಿಕ್ಷಕರಾಗುತ್ತಾರೆ. ಮನೆಯಲ್ಲಿ ತಂದೆ–ತಾಯಿ, ಶಾಲೆಯಲ್ಲಿ ಗುರು, ವೃತ್ತಿರಂಗದಲ್ಲಿ ನಮಗಿಂತ ಹಿರಿಯರು, ಜೊತೆಗಿದ್ದು ದಾರಿ ತೋರುವ ಸ್ನೇಹಿತರು ಹೀಗೆ ಯಾರಾದರೂ ನಮಗೆ ಮಾರ್ಗದರ್ಶನ ನೀಡಿ, ಜೀವನದಲ್ಲಿ ಏನನ್ನಾದರೂ ಸಾಧಿಸಲು ಗುರಿ ತೋರಿಸುತ್ತಾರೋ  ಅವರೇ ನಿಜವಾದ ಶಿಕ್ಷಕರು. ಜೀವನವನ್ನು ರೂಪಿಸುವ ಪ್ರತಿ ವ್ಯಕ್ತಿಯನ್ನು ಕೂಡ ನಾನು ಶಿಕ್ಷಕ ಎಂದುಕೊಳ್ಳುತ್ತೇನೆ.
-ವಿಶ್ವೇಶ್ವರ ಹೆಗಡೆ ಕಾಗೇರಿ,
ರಾಜಕಾರಣಿ

***
ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲೂ ಶಿಕ್ಷಕ ತೋರುವ ಪಾತ್ರ ಮಹತ್ವದ್ದು. ಜೀವನ ನಿರೂಪಿಸಿದ ಶಿಕ್ಷಕರು ಹಲವರಾದರೂ ಅವರಲ್ಲಿ ಕೆಲವರು ಮನಸ್ಸಿನಾಳದಲ್ಲಿ ಮರೆಯಾಗದೇ ಉಳಿದಿರುತ್ತಾರೆ. ನಾನು ತುಂಬ ಮೆಚ್ಚುವ ಶಿಕ್ಷಕ ಎಂದರೆ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಕೆ. ಜಿ.ದಾಸ್‌. ಅವರು ವಿದ್ಯಾರ್ಥಿಗಳೊಂದಿಗೆ ಬೆರೆಯುತ್ತಿದ್ದ ರೀತಿ, ವಿದ್ಯಾರ್ಥಿಗಳಿಗೆ ಅವರು ಹೇಳಿದ ಜೀವನ ಪಾಠ ಇವೆಲ್ಲವೂ ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿವೆ. ನಾನು ಅವರನ್ನು ಒಬ್ಬ ಶಿಕ್ಷಕನನ್ನಾಗಿ ನೋಡುವುದಕ್ಕಿಂತ ಒಬ್ಬ ಉತ್ತಮ ಭವಿಷ್ಯ ರೂಪಿಸುವ ವ್ಯಕ್ತಿಯಾಗಿ, ಮಾನವೀಯ ಗುಣಗಳ ಗಣಿಯೆಂದು ಕರೆಯಲು ಇಷ್ಟಪಡುತ್ತೇನೆ.
-ಡಾ. ಭುಜಂಗ ಶೆಟ್ಟಿ,
ನಾರಾಯಣ ಕಣ್ಣಿನ ಆಸ್ಪತ್ರೆ

***
ಪ್ರತಿಯೊಬ್ಬರಿಗೂ ಮನೆಯೇ ಮೊದಲ ಪಾಠಶಾಲೆ ಎಂಬಂತೆ ನನಗೂ ಮನೆಯೇ ಮೊದಲ ಪಾಠಶಾಲೆಯಾಗಿತ್ತು.  ನಮ್ಮ ಚಿಕ್ಕಮ್ಮ ವೀಣಾ ಜಯರಾಂ ಅವರೇ ನನ್ನ ನೆಚ್ಚಿನ ಶಿಕ್ಷಕಿಯಾಗಿದ್ದರು. ಅವರು ನನ್ನನ್ನು ಶಾಲೆಯಲ್ಲಿ ನನ್ನ ಮನೆ ಮಗ ಎಂದು ಪರಿಗಣಿಸದೆ ಸಾಮಾನ್ಯ ವಿದ್ಯಾರ್ಥಿಯಂತೆ ನೋಡುತ್ತಿದ್ದರು. ನನ್ನ ವಿದ್ಯಾರ್ಥಿ ಜೀವನದ ಪ್ರತಿ ಹಂತದಲ್ಲೂ  ಆಕೆ ನನಗೊಬ್ಬ ಉತ್ತಮ ಮಾರ್ಗದರ್ಶಕಿಯಾಗಿದ್ದರು.
-
ಶರತ್‌ ಎ,
ಐಟಿ ಕಂಪೆನಿ ಉದ್ಯೋಗಿ

***
ಶಿಕ್ಷಕ ಎಂದರೆ ಕೇವಲ ವಿದ್ಯಾರ್ಥಿಗಳ ಭವಿಷ್ಯ ರೂಪಕನಾಗಿರದೆ, ಸ್ನೇಹಿತರಂತೆ ತಿದ್ದಿ ಬುದ್ಧಿ ಹೇಳಬೇಕು. ನಾನು ಮೆಚ್ಚಿದ ಶಿಕ್ಷಕ ಪ್ರೈಮರಿ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿದ್ದ ಈಶ್ವರ್‌ ಭಟ್‌. ಮುಂದೆ ಮಂಗಳೂರಿನ ಎಸ್‌ಡಿಎಂ ಕಾಲೇಜಿನಲ್ಲಿ ಬಿಬಿಎಂ ಓದುತ್ತಿರುವಾಗ ನನ್ನ ಎಲ್ಲಾ ಪ್ರಾಧ್ಯಾಪಕರು ನಮ್ಮೊಂದಿಗೆ ಸ್ನೇಹಿತರಂತೆ ಇರುತ್ತಿದ್ದರು. ಆಗ ನಮ್ಮ ಮಧ್ಯೆ ಶಿಕ್ಷಕ ಹಾಗೂ ವಿದ್ಯಾರ್ಥಿ ಎಂಬ ಅಂತರವೇ ಇರಲಿಲ್ಲ. ಈಗಲೂ ನಾವು ಕಾಲೇಜಿಗೆ ಹೋದರೆ ನಮ್ಮ ಪ್ರಾಧ್ಯಾಪಕರು ಅದೇ ಪ್ರೀತಿಯಿಂದ ಮಾತನಾಡಿಸುತ್ತಾರೆ.
-ಯಜ್ಞಾ ಶೆಟ್ಟಿ,
ನಟಿ

***
ನನಗೆ ಒಬ್ಬ ಶಿಕ್ಷಕರಷ್ಟೇ ನೆನಪಾಗುವುದಿಲ್ಲ. ನನ್ನನ್ನು ರೂಪಿಸಿದ ಹಲವು ಶಿಕ್ಷಕರು ನನಗೆ ನೆನಪಾಗುತ್ತಾರೆ. ನನಗೆ ಕಲಿಸಿದ ಹಲವು ಅಧ್ಯಾಪಕರು ನನ್ನ ಮನಸ್ಸಿನಲ್ಲಿದ್ದಾರೆ. ಆದರೆ ಅವರೆಲ್ಲರಲ್ಲಿ ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿದ್ದು ಜಿ. ಎಸ್‌. ಶಿವರುದ್ರಪ್ಪ.  ಅವರು ಎಂದೂ ಪರಿಪೂರ್ಣ ಅಧ್ಯಯನದೊಂದಿಗೆ ತರಗತಿಗೆ ಕಾಲಿರಿಸುತ್ತಿದ್ದರು. ಅವರ ಬದುಕಿನಲ್ಲಿ ಅಧ್ಯಯನಯುತವಾದ ಶಿಸ್ತಿತ್ತು. ಅವರು ಕೇವಲ ಬಾಯಿಮಾತಿನಲ್ಲಿ ಹಾಗೇ ಮಾಡಿ ಹೀಗೆ ಮಾಡಿ ಎಂದು ಹೇಳದೆ ನುಡಿದಂತೆ ನಡೆದು ತೋರಿಸುತ್ತಿದ್ದರು. ನನ್ನ ಅರ್ಥದಲ್ಲಿ ನಿಜವಾದ ಶಿಕ್ಷಕನೆಂದರೆ ವಿದ್ಯಾರ್ಥಿಗಳಿಗೆ ವಿಷಯ ಜ್ಞಾನದೊಂದಿಗೆ, ಯಾರು ಜೀವನ ಸ್ಫೂರ್ತಿ ನೀಡುತ್ತಾರೋ ಅವರೇ ನಿಜವಾದ ಶಿಕ್ಷಕ.
-
ಎಸ್‌. ಜಿ. ಸಿದ್ದರಾಮಯ್ಯ,
ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT